Friday, June 3, 2016

ತ್ರಿಪದಿ ಛಂದದಲಿ ಹಾಡಿರುವೆ



ತ್ರಿಪದಿ   ಛಂದದಲಿ ಹಾಡಿರುವೆ 

ಕನ್ನಡದ ಪವಿತ್ರ ಮಣ್ಣಲ್ಲಿ ಜನಿಸಿದ 
ಮನ್ನಣೆಯ ಸಂತ ಶರಿಫನ | ಚರಿತೆಯು 
ಹೊನ್ನಿನಕ್ಷರದಿ ಮೂಡಿಹುದು |

ಹಾಡಿದ ಶರಿಫನ ಮೋಡಿಗೆ ಸಿಕ್ಕಾಗ 
ಮೂಡಿ ಬಂದಂಥ ನೂರೆಂಟು | ತ್ರಿಪದಿಗಳ 
ಕೋಡಿ ಹರಿದಿಹುದು ನೋಡಿಲ್ಲಿ |

ಲಕ್ಷ ಪದಕೊಲಿಯದ ನಕ್ಷೆಗೂ ನಿಲುಕದ 
ಅಕ್ಷಯ ಮೂರ್ತಿ ಶರಿಫನು | ಕಾವ್ಯದ 
ಕಕ್ಷೆಗೆ ಸಿಗದ ಬಯಲಿಗನು |

ಬಯಲ ಬಸವನ ನಂಬಿ ಜಯದ ಹಾಡನು ಕಟ್ಟಿ 
ಸ್ವಯದ ಅನುಭಾವ ಹಂಚಿದ | ಶರಿಫನ
ದಯದಿಂದ ಕಾವ್ಯ ಕಟ್ಟಿರುವೆ |

ಶರಿಫ ಶಿವಯೋಗಿಯ ಚರಿತೆಯ ಮಜಕೂರ 
ಅರಿವಿನ ಸೆಲೆಯ ತೇಜದಲಿ | ಮೂಡುತ್ತ 
ಹರಿದು ಬಂದಿಹುದು ತ್ರಿಪದಿಯಲಿ |

ಅಂದದ ಲಯದಲ್ಲಿ  ಹೊಂದಿದ ಪದಗಳು 
ಸುಂದರ ಕಥನ ಕಟ್ಟ್ಯಾವು | ತ್ರಿಪದಿಯ 
ಛಂದ ಸ್ವಚ್ಚಂದ ಬೆಡಗಿನಲಿ |

ಅಕ್ಷರಕೆ ನಿಲುಕದ ಪದಗಳಿಗೆ ಸಿಲುಕದ 
ಅರ್ಥ ಭಾವಗಳ ಮೀರಿದ | ಬಯಲಿಗನ 
ಕೆತ್ತಿ ನಿಲಿಸುವುದು ಬಹುಕಷ್ಟ |

ಕಾಡುವ ಶರಿಫನು ಹಾಡಿನ ರೂಪದಲಿ 
ಮೂಡಿ ಬಂದಾನೊ ಅವತರಿಸಿ | ಭಾವದಲಿ 
ಬೀಡು ಬಿಟ್ಟಾನೊ ತ್ರಿಪದಿಯಲಿ |

ಹತ್ತಾರು ಕವಿಗಳು ಹೊತ್ತಿಗೆಯಲಿ ಬರೆದಿರುವ 
ಮತ್ತೆ ಹಿರಿಯರು ಹೇಳಿದ | ಶರಿಫನ
ಮುಕ್ತ ಚರಿತೆಯನು ಹಾಡಿರುವೆ |

ಶರಿಫನ ನುಡಿಚಿತ್ರ ಚಿರವಾದ ಪದಗಳಲಿ 
ವರರೂಪ ಪಡೆದು ನಿಂತಿಹುದು | ತ್ರಿಪದಿಯಲಿ
ಒರೆ ಹಚ್ಚಿ ನೋಡೊ ಸವಿಗಾರ |

ಪದಗಳ ಒಡಲಲ್ಲಿ ಹುದುಗಿಸಿ ಅರ್ಥವನು 
ಹದವಾದ ಕಾವ್ಯ ಕಟ್ಟಿರುವೆ | ಶರಿಫನ
ಸುಧೆಯಲ್ಲಿ ಸುಗ್ಗಿ ಮಾಡಿರುವೆ |

ನುಡಿರತುನ ಕನ್ನಡದಿ ನಡೆರತುನ ಶರಿಫನ
ಬೆಡಗಿನ ಚರಿತೆ ಕಟ್ಟಲು | ತ್ರಿಪದಿಯೇ 
ಒಡಲಲ್ಲಿ ತುಂಬಿ ತುಳುಕಿಹುದು |

ತಿಳಿಗನ್ನಡುಡುಗೆಯಲಿ ನಳಿನಳಿಸಿ ಹಬ್ಬಿಹುದು
ಬಳುಕುತ್ತ ಕುಡಿಯ ಚಾಚಿಹುದು | ಈ ಕಾವ್ಯ
ಸೆಳೆದು ಪರಿಮಳವ ನೀಡುವುದು |

ಪ್ರಾಸ ಗಣ ಮಾತ್ರೆಗಳು ಭಾಷೆ ನುಡಿಕಟ್ಟುಗಳು 
ಆಶಯದ ರುಚಿಯಲ್ಲಿ ಅರಳ್ಯಾವು | ಓದುಗನೇ 
ದೋಷಗಳ ಮರೆತು ಸವಿದುಣ್ಣೊ |

ಕಪ್ಪೆ ಚಿಪ್ಪನ್ನಾಯ್ದು ಒಪ್ಪಗೊಳಿಸಿದ್ದಲ್ಲ 
ಉಪ್ಪು ಸಾಗರದ ಆಳ್ಕಿಳಿದು | ರತುನವ 
ಅಪ್ಪಿತರು ಯತ್ನ ಮಾಡಿರುವೆ |

ಸಾಗರಾಳಕೆ ಇಳಿದು ಯೋಗ ರತುನವ ಬಗೆದು 
ಜಾಗರದಿ ಹಿಡಿದು ತಂದಿರುವೆ | ಎನ್ನುತ್ತಾ
ಬೀಗುವ ದಾರ್ಷ್ಟ್ಯ ನನಗಿಲ್ಲ |

ಹಿರಿಘನತೆ ಶರಿಫನು ಕಿರಿಪದಕೆ ಸಿಲುಕಿಲ್ಲ 
ಬರೆದ ಸಾಲ್ಗಳಿಗು ನಿಲುಕಿಲ್ಲ | ಕಾಡುತ್ತ 
ಬರಿಲಾರ್ದೆ ಇರಲು ಬಿಡಲಿಲ್ಲ |

ಸವಿಯಾದ ಹಾಡುಗಳು ಕಿವಿಮ್ಯಾಲ ಬಿದ್ದಾಗ 
ಕವಿಯು ಯಾರೆಂದು ಕೇಳಿತ್ತು | ಎಳೆಮನಸು 
ರವಿರತುನ ಶರಿಫನಲಿ ಬೆರೆತಿತ್ತು |

ಇಳೆಯಸಿರಿ ಶಿಶುನಾಳ ಸೆಳೆದಿತ್ತು ಮನಸನ್ನು 
ಎಳೆವಯದ ಮುಗ್ಧ ಕಾಲದಲಿ | ಶರಿಫನ
ಗೆಳೆತನದ ಬಳ್ಳಿ ಹಬ್ಬ್ಸಿತ್ತು |

ನಾನು ಮಾಡೆನೆಂಬುದೇನೇನು ಇಲ್ಲಿಲ್ಲ 
ಸ್ವಾನುಭವವಂತು ಮೊದಲಿಲ್ಲ | ಶರಿಫನು 
ತಾನೇ ಒಳಗಿದ್ದು ನುಡಿಸ್ಯಾನೊ |

ಕಲ್ಮೇಶ ಖಾಸ್ಗತನ ಬಲ್ಮೆಯ ಈಕವಿಯು
ಒಲ್ಮೆಯಲಿ ಕಾವ್ಯ ಕಟ್ಟ್ಯಾನ | ಬೆರಗಿನ 
ನಿಲ್ಮೆಯಲಿ ಓದಿ ಸವಿಯಿರಿ |

ಒಳ್ಳೆಯ ಮನಸಿಂದ ಕಳ್ಳಿನ ಮಾತಿಂದ 
ಬಳ್ಳಿಯ ಬಳುಕು ಲಯದಿಂದ | ಕಾವ್ಯದ 
ಬಳ್ಳ ತುಂಬಿಹುದು ಸವಿನೋಡು |

ನಂಬಿಕೆಯ ಮಾಂತನು ಅಂಬರಕೆ ನಕ್ಷತ್ರ 
ಸಾಂಬಹರ ಭಕ್ತ ಶರಿಫನ | ಕಥನದ 
ಅಂಬಲಿಯ ಉಣ್ಣೊ ಸವಿಗಾರ |

ಶರಿಫ ಶಿವಯೋಗಿಯ ಚರಿತೆ ಅಮೃತವಿಲ್ಲಿ 
ಚಿರವಾದ ತ್ರಿಪದಿ ರೂಪದಲಿ | ಮೂಡಿಹುದು
ಕೊರತೆ ಮನ್ನಿಸುತ ಸವಿದುಣ್ಣೊ |

ಜನಪದರ ನಾಲಿಗೆಯ ಘನತೆಯ ನುಡಿಯಲ್ಲಿ 
ತನಿರಸ ತುಂಬಿ ಹಾಡಿರುವೆ | ಸವಿಗಾರ
ಮನತುಂಬಿಕೊಳ್ಳೊ ರುಚಿನೋಡಿ |

ಸದ್ದಿಲದೊಳಗಡಗಿ ಮುದ್ದ್ಯಾಗಿ ಕುಳಿತಿದ್ದ 
ಪದ್ಯಗಳು ಚಿಗುರಿ ಪಲ್ಲವಿಸಿ | ಶರಿಫನ
ಶುದ್ಧ ಚರಿತೆಯನು ಹಾಡ್ಯಾವು |

ಸಲ್ಲಲಿತ ಪದ್ಯಗಳು ಮೆಲ್ಲಗೆ ಕುಡಿಚಾಚಿ 
ಮಲ್ಲಿಗೆಯ ಕಂಪು ಸೂಸ್ಯಾವು | ಶರಿಫನ
ಪಲ್ಲಕ್ಕಿ ಮ್ಯಾಲ ಮೆರೆದಾವು |

ಪುರಾಣದ ಪುಟದಲ್ಲಿ ಚರಿತೆ ಸಂಪುಟದಲ್ಲಿ 
ಬೆರೆತೋದ ಸಂತ ಬಯಲಿಗನ | ವಿಸ್ಮಯದ 
ಶರಿಫನ ಚಿತ್ರ ಕೆಟ್ಟಿರುವೆ |

ವಸುಧೆಯಲಿ ಮೆರೆದಂತ ಹಸನಾದ ಹಾಡುಗ 
ಶಿಶುನಾಳ ಶರಿಫ ಸಾಹೇಬನ | ನೆನೆಯುತ್ತ 
ಉಸಿರಲ್ಲಿ ಉಸಿರು ತುಂಬಿರುವೆ |

No comments: