Friday, June 10, 2016

ಅಲ್ಲಮನ ಹಾದಿ ತುಳಿದಾನೊ



ಅಲ್ಲಮನ ಹಾದಿ ತುಳಿದಾನೊ 

ಶರಣರ ನಡೆನುಡಿಗೆ ಶರಣಾದ ಸಂತನು 
ಅರಿವಿನ ಹಾಡು ಕಟ್ಟುತ್ತ | ನಾಡಲ್ಲಿ 
ಸಿರವಾದ ತತ್ವ ಬಿತ್ತ್ಯಾನೋ |

ಅಲ್ಲಾ ಅಲ್ಲಮರಿಗೂ ಸಲ್ಲುವ ಹಿರಿಮಾರ್ಗ 
ಬಲ್ಲಿದ ನಾದ ಶರಿಫನು | ಹಾಡಿದ 
ಸಲ್ಲುವ ಪದವ ನಾಡಲ್ಲಿ |

ಅಲ್ಲಮನ ಹಾದಿಯ ಬಲ್ಲಂತ ಶರಿಫನು
ಗುಲ್ಲು ಮಾಡದಲೆ ಓಡಾಡಿ | ಲೋಕದಲಿ
ಸಲ್ಲಲಿತ ತತ್ವ ಬಿತ್ಯಾನೋ |

ಪ್ರಭುವಿನ ಬೆಡಗಿನ ಪ್ರಭೆಯಲ್ಲಿ ಈಜಾಡಿ
ಸೊಬಗಿನ ಬಾಳು ಕಟ್ಟಿದ | ಶರಿಫನು
ಸಭೆಯಲ್ಲಿ ಹಾಡಿ ಮನಗೆದ್ದ |

ಅಲ್ಲಮನ ಹಾದಿಯಲಿ ಸಲ್ಲಾಪವಾಡುತ್ತ 
ಅಲ್ಲಾನ ಧ್ಯಾನ ಮಾಡುವ | ಶರಿಫನು
ಮಲ್ಲನು ಧರ್ಮ ಮಾರ್ಗದಲಿ |

ಎಲ್ಲರ ಒಡನಾಡಿ ಅಲ್ಲಮನ ಅನುಯಾಯಿ
ಬಲ್ಲಿದರ ಕೋಡಿ ಶರಿಫನು | ಅಲ್ಲಮಗೆ
ಪಲ್ಲವಿ ಪದವ ಹಾಡಿದನೊ |

ಅಲ್ಲಮನ ಮಾತಿಗೆ ಕಲ್ಲ್ಯಾಣ ಬೆರಗಾಯ್ತು 
ಸಲ್ಲಲಿತ ಶರಣ ಶರಿಫನು | ಹಾಡಿದ
ಸಲ್ಲುವ ಪದವು ನಾಡಲ್ಲಿ |

ಪ್ರಭುಲಿಂಗ ಲೀಲೆಯ ಪ್ರಭೆಯಲ್ಲಿ ತೇಲಾಡ್ತ 
ನಭದ ಎತ್ತರಕೆ ಬೆಳೆದಂತ | ಶರಿಫನು
ಬಯಲ ನುಡಿ ಕಟ್ಟಿ ಹಾಡಿದ |

ಬಯಲಿಗನ ಚರಿತೆಯಲಿ ಬಯಲಾಗಿ ಬೆರೆಯುತ್ತ
ಬಯಲಿನ ಬೆಡಗ ಅರಿತಂತ | ಶರಿಫನು 
ಬಯಲ ನುಡಿ ಕಟ್ಟಿ ಹಾಡಿದ |

ಚಾಮರಸ ಕವಿಬರೆದ ವ್ಯೋಮ ಚರಿತೆಯನೋದಿ 
ಪ್ರೇಮ ಭಕ್ತಿಯಲಿ ಮೀಯುವ | ಶರಿಫನು
ಸೀಮೆ ದಾಟುವನು ಅಲ್ಲಮನ |

ಮಿಗಿಲಾದ ಕಾವ್ಯವನ್ನು ದಿಗಿಲಾಗಿ ಓದುತ್ತ 
ಹೆಗಲಲ್ಲಿ ಹೊತ್ತು ತಿರುಗುವ |ಶರಿಫನು
ಜಗಕೆ ಅಲ್ಲಮನ ತೋರಿದನು |

ಬೈಲಿಗನ ಚರಿತೆಯನು ಕೈಲಿಡಿದು ಯಾವತ್ತು 
ಲೀಲೆಯಲಿ ಮೈಯ ಮರೆಯುವ | ಶರಿಫನು
ಸೋಲಿಸಿ ಗೆಲುವ ಮಾಯೆಯನು |

ಬಲ್ಲ ಶರಣರನೆಲ್ಲ ಅಲ್ಲಿಕೇರಿಗೆ ಕರೆದು 
ಸಲ್ಲುವ ಬದುಕು ಕಟ್ಟಿದ | ಶರಿಫನು
ಬಲ್ಲಿದನುಭಾವಿ ನಾಡಲ್ಲಿ |






No comments: