Friday, May 27, 2016

ಉಸಿರಿಗೊಮ್ಮೊಮ್ಮೆ ನೆನೆಯುವೆ

ಉಸಿರಿಗೊಮ್ಮೊಮ್ಮೆ ನೆನೆಯುವೆ

ನುಡಿಮುತ್ತಿನ ಹಾರಕ್ಕೆ ನಡೆರತ್ನ ಪವಣಿಸಿ 
ಮುಡಿ ಹವಳ ತಿಲಕ ಕಟ್ಟಿದ | ಶರಿಫನ 
ಅಡಿಗೆರಗಿ ನಮನ ಸಲ್ಲಿಸುವೆ |

ಕನ್ನಡದ ಕಬೀರ ನನ್ನಿಯ ನುಡಿಗಾರ 
ಚಿನ್ಮಯ ಪದದ ಮಾಯ್ಕಾರ | ಶರಿಫನ
ಮನ್ನಣೆಗೆ ಮಣಿದು ವಂದಿಸುವೆ |

ಉಸಿರಾಡೋ ಉಸಿರಲ್ಲಿ ಪಿಸುಗುಡುವ ಮನಸಲ್ಲಿ
ಹಸನಾದ ಹಾಡು ತುಂಬಿದ | ಶರಿಫನ್ನ 
ಉಸಿರಿಗೊಮ್ಮೊಮ್ಮೆ ನೆನೆಯುವೆ |

ಪರಿಸರದ ಕೂಸಾಗಿ ಸರಿಗಮದ ಹಾಡಾಗಿ 
ವರಕವಿ ಪಟ್ಟ ಪಡೆದಂತ | ಯೋಗಿಗೆ 
ಕರಮುಗಿದು ಕೃಪೆಯ ಬೇಡುವೆ |

ಜನರಾಡೊ ಮಾತಿಗೆ ಮನದಾಳ ಬೇತಿಗೆ
ಘನತೆಯನು ಕೊಟ್ಟ ವರಕವಿ | ಶರಿಫನಿಗೆ
ಹಣೆಹಚ್ಚಿ ಶರಣು ಸಲ್ಲಿಸುವೆ |

ಸಂತರ ಸಂಗದಲಿ ಸಂತೆ ಬಾಜಾರದಲ್ಲಿ 
ನಿಂತು ಕುಂತಲ್ಲೆ ಪದಕಟ್ಟಿ | ಹಾಡಿದ 
ಮಾಂತ ಶರಿಫನಿಗೆ ವಂದಿಸುವೆ |

ಶರಿಫನ ಹಾಡಲ್ಲಿ ಬಿರಿದಂತ ಹೂಪದವ 
ಸರಣಿಯಲಿ ಕಟ್ಟಿ ಕೊಟ್ಟಿರುವ | ತೇಜಕ್ಕೆ 
ಬೆರಗಿನ ನಮನ ಸಲ್ಲಿಸುವೆ |

ಶಿವನಾಗ ಅಬ್ಬಿಗೇರಿ ಶರಿಫರ ಹಾಡನ್ನು 
ಪವಣಿಸಿ ಅಚ್ಚು ಮಾಡಿದ | ಸಾಹಸಿಯ
ಸವಿರುಚಿ ಮನಕೆ ವಂದಿಸುವೆ |

ನನ್ನಲ್ಲಿ ಅಡಗಿರುವ ಮನ್ನಣೆಯ ಕವಿಯೊಬ್ಬ 
ನನ್ನಿಯಲಿ ಕಾವ್ಯ ಕಟ್ಟುತ್ತ | ಶರಿಫನ
ಬಣ್ಣಿಸಿದ ತೇಜಕ್ಕೆ ವಂದಿಸುವೆ |

ಮೊತ್ತ ಮೊದಲಿಗೆ ವಂದಿಸುವೆ



ಮೊತ್ತ ಮೊದಲಿಗೆ ವಂದಿಸುವೆ 

ಒಂದೆರಡು ಪದ್ಯಗಳ ಚಂದಾಗಿ ನುಡಿವಾಗ 
ಕುಂದು ಬರದಂತೆ ಮುನ್ನಡೆಸು | ಗಣಪತಿಯೆ 
ವಂದಿಸುವೆ ನಿನಗೆ ಮೊದಲಿಗೆ |

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಗೆ ಒಲಿದು 
ಮಾಟದ ಸಾರಿ ತೋರಿಸಿದ | ಬೆನಕನಿಗೆ 
ಕೋಟಿ ವಂದನೆಯ ಸಲ್ಲಿಸುವೆ |

ಆದಿ ಮೂರುತಿ ದೇವ ಮೇದಿನಿಯಲ್ಲುದಯಿಸಿ
ಬೋಧಿಸಿದ ಮಣ್ಣ ಕಾಯಕವ | ಗಣಪನಿಗೆ 
ಪಾದಕ್ಕೆ ಹಣೆಯ ಹಚ್ಚುವೆ |

ನಾಲಿಗೆಯ ತುದಿ ಮೇಲೆ ಓಲಾಡು ಅಧಿದೇವಿ 
ಜೋಲಿ ಹೊಡಿದಂಗ ಕಾಪಾಡು | ಸರಸತಿಯೆ
ಬಾಲ ಕವಿಗೀಗ ವರನೀಡು |

ಭಾವದವೊಳಹೊಕ್ಕು ಜೀವಜೀವವ ಮಿಡಿಸಿ
ಹೂವಿನ ನುಡಿಯಲ್ಲಡಗಿದ | ಸರಸತಿಗೆ
ಸಾವಿರದ ನಮನ ಸಲ್ಲಿಸುವೆ |

ಕಡದಳ್ಳಿ  ಊರೊಡೆಯ ದೃಢವಾಗಿ ನೆಲೆನಿಂತು 
ದಡ ಹಾಯ್ಸು ಕಾವ್ಯ ಕಥನದಲಿ | ಕಲ್ಮೇಶ 
ಒಡಲಲ್ಲಿ ಜೀವ ಹಾರಿಸುತ್ತ |

ನಾಡೊಡೆಯ ಖಾಸಗತ ಜೋಡಾಗಿ ನೆಲೆನಿಂತು
ತೀಡು ಬರಹದ ದೋಷಗಳ | ಕೈಹಿಡಿದು 
ಹಾಡು ಹಾಡಿಸೊ ರಸದುಂಬಿ |

ಹೊತ್ತಿನ ಅರಸನಿಗೆ ಮುತ್ತು ಚಂದ್ರಾಮನಿಗೆ 
ತುತ್ತಿನ  ಚೀಲ ತುಂಬಿಸುವ | ಭೂತಾಯ್ಗೆ 
ಮೊತ್ತ  ಮೊದಲಿಗೆ ವಂದಿಸುವೆ |

ಹರಿಯುವ ಹಳ್ಳಕ್ಕೆ ತೊರೆಯ ಝರಿಕೊಳ್ಳಕ್ಕೆ
ನೆರಳಿತ್ತು ಕಾವ ಗಿಡಮರದ  | ಹೊಳ್ಳಕ್ಕೆ 
ವರವ ಕೇಳುವೆನು ಕೈಮುಗಿದು |

ಘನವಾದ ಗಿರಿಗಳನು ವನದೇವಿ ಮರಗಳನು 
ತೆನೆ ತುಂಬೊ ಗಾಳಿ ಮಳೆಗಳನು | ಹೊಳೆಗಳನು
ನೆನೆಯುವೆನು ಕಾವ್ಯ ಕಟ್ಟುತ್ತ |

ಹುದುಗಿದ ಭಾವವನು ಪದಗಳಲಿ ಸೆರೆ ಹಿಡಿದು 
ಹದಮಾಡಿ ಕಾವ್ಯ ಕಟ್ಟುವ | ತೇಜಕ್ಕೆ 
ಮೊದಲಿಗೆ ನಮನ ಸಲ್ಲಿಸುವೆ |

ಮನದಾಳದಾಡಿಗೆ ಕೆನೆಹಾಲ ರುಚಿನೀಡಿ
ತಣಿದುಂಬೊ ರಸಿಕ ಭಾವದ | ದೈವಕ್ಕೆ 
ಹಣೆಮಣಿದು ಶರಣ ಮಾಡುವೆನು |

ದೇಸಿಯ ನುಡಿಯಲ್ಲಿ ಮಾಸದ ಅನುಭಾವದ 
ಬೇಸಾಯ ಮಾಡಿ ಕೊಟ್ಟಂತ | ಶರಿಫನಿಗೆ 
ಸಾಸಿರ ಬಾರಿ ಬಾಗುವೆನು |

Wednesday, May 25, 2016

ಶರಿಫ








ಶರಣು ಶರಣಾರ್ಥಿ 


ಗಣಪ ದೇವಗೆ ಮೊದಲು ವಂದಿಸಿ 

ಮಣಿದು ಸರಸತಿ ದಿವ್ಯವಾಣಿಗೆ 
ಹೆಣೆವೆ ಪದ್ಯವ ಶರಿಫ ಯೋಗಿಯೆ ಶರಣು ಶರಣಾರ್ಥಿ !
ಮನದ ಮೂಲೆಗೆ ಹಬ್ಬಿ ಅನುದಿನ 
ನೆನೆದು ಭಾವದಿ ಒಲಿದು ಮೂಡುವ 
ಘನತೆ ಪಡದಾ ಸುಧೆಯ ಸಾರವೆ  ಶರಣು ಶರಣಾರ್ಥಿ !

ನುಡಿವ ನಾಲಗೆಯಲ್ಲಿ ಸರಸತಿ 

ಒಡನೆ ನಲಿಯುತ ಬಂದು ನೆಲಸಲಿ 
ನುಡಿದ ಭಾವಕೆ ಜೀವ ತುಂಬಲಿ ಶರಣು ಶರಣಾರ್ಥಿ ।
ಬೆಡಗು ಮಾತನು ಹಾಡು ಹಾಡಲಿ
ಬಿಡದೆ ಸೇರಿಸಿ ಪದವ ಕಟ್ಟಿದ 
ಪೊಡವಿ ಶಿಶುನಾಳ ಯೋಗಿಗೆ ಶರಣು ಶರಣಾರ್ಥಿ ।

ವಾಸ ಶಿಶುವಿನಾಳ ಪುರದಲಿ 

ಈಶ ಬಸವನ ಹೆಸರಿನಿಂದಲಿ 
ರಾಸಿ ಪದಗಳ ಬರೆದ ಶರಿಫಗೆ ಶರಣು ಶರಣಾರ್ಥಿ ।
ಖಾಸ  ಶರಣರು ಹಜರತಾಜ್ಮಾ 
ದೇಶ ಹುಲಗುರ ಖಾದರೊಲವನು 
ಜೈಸಿ ಹುಟ್ಟಿದ ಬಾಲ ಶರಿಫಗೆ ಶರಣು ಶರಣಾರ್ಥಿ ।

ಕೂಲಿಮಠದಾ ಸಿದ್ಧರಾಮನ 

ಸಾಲಿಯಲ್ಲಿಯೇ ವಿದ್ಯೆ ಕಲಿಯುತ 
ಬೇಲಿದಾಟಿದ ಶರಿಫ ಯೋಗಿಗೆ ಶರಣು ಶರಣಾರ್ಥಿ ।
ಮೇಲು ನೋಟವ ಹಿಂದಕಿಕ್ಕಿವಿ 
ಶಾಲ ತತ್ವವನರಿತು ನಡೆದಾ 
ಕಾಲ ಜ್ಞಾನಿಗೆ ಯೋಗಿ ಶರಿಫಗೆ ಶರಣು ಶರಣಾರ್ಥಿ ।

ಪಾರಿವಾಳದ ಆಟನೋಡುತ 

ಸಾರ ಬದುಕಿನ ಬೇತನರಿಯುತ 
ಸಾರಿ ಹಾಡಿದ ಪದದ ಅಬುಧಿಗೆ ಶರಣು ಶರಣಾರ್ಥಿ |
ಕೇರಿ ಜೊಳ್ಳನು ಹಸನು ಮಾಡುತ
ಮೀರಿ ಜಗದಲಿ ಗಸ್ತು ತಿರುಗಿದ 
ದಾರಿ ಬೆಳಕಿನ ಶರಿಫ ಜ್ಯೋತಿಗೆ ಶರಣು ಶರಣಾರ್ಥಿ |

ಕಳಸ ಗುರುಗೋವಿಂದ ಶಿಷ್ಯನು 

ಎಳವೆಯಲ್ಲಿಯೇ ಭಕ್ತಿಗೊಲಿಯುತ 
ಬೆಳೆದ ನಿಷ್ಠೆಯ ವಿಮಲ ಯೋಗಿಗೆ ಶರಣು ಶರಣಾರ್ಥಿ |
ಇಳೆಯ ಬದುಕಿನ ಗುಟ್ಟನರಿಯುತ
ಸೆಳೆವ ತತ್ವದ ಬೆನ್ನು ಹತ್ತುತ 
ಕಳೆದ ಕರ್ಮವ ಗೆಲಿದ ಯೋಗಿಗೆ ಶರಣು ಶರಣಾರ್ಥಿ |

ನಾಗಲಿಂಗನ ಸಂಗ ಮಾಡುತ

ಭೋಗ ಜೀವನ ತೊರೆದು ನಲಿಯುತ 
ಯೋಗಿಯಾದಾ ಸಂತ ಮಾಂತಗೆ ಶರಣು ಶರಣಾರ್ಥಿ |
ಹೋಗುವಂತಹ ವ್ಯರ್ಥ ಕಾಯವ 
ಸಾಗುಮಾಡುತ ಗುಡಿಯ ರೂಪಕೆ 
ತ್ಯಾಗಿ ಪರಮಾನಂದ ಸಂತಗೆ ಶರಣು ಶರಣಾರ್ಥಿ |

ಹೂವು ಬಳ್ಳಿಯ ಸಿದ್ಧ ಪುರುಷನ 

ಜಾವ ಜಾವದಿ ನೆನೆದು ಹಾಡಿಗೆ 
ಜೀವ ತುಂಬಿದ ತತ್ವವೇತ್ತಗೆ ಶರಣು ಶರಣಾರ್ಥಿ |
ಯಾವ ಮತವನ್ನು ಲೆಕ್ಕಕಿಡಿಯದೆ 
ದೇವ ಮತವನು ಮಿಕ್ಕಿ ಹೊಗಳಿದ 
ಕಾವ ಸಾವಿಗೆ ಅಂಜದೊಡೆಯಗೆ  ಶರಣು ಶರಣಾರ್ಥಿ |

ಜಾತಿಮತಗಳ ಹಂಗು ತೊರೆಯುತ 

ನೀತಿ ತತ್ವದ ನಡೆಯ ನಡೆಯುತ 
ಪ್ರೀತಿ ಹಂಚಿದ ಶರಿಫ ಅಜ್ಜಗೆ ಶರಣು ಶರಣಾರ್ಥಿ |
ಭೀತಿ ಮರೆಯುವ ದಾರಿ ಹುಡುಕುತ 
ಕೋತಿ ಮನಸನು ತಿದ್ದಿ ತೀಡುತ
ರೀತಿ ತೋರಿದ ಸಮತೆ ಗುರುವಿಗೆ ಶರಣು ಶರಣಾರ್ಥಿ |

ಗುಡಿಯ ಪುರದಾ ದೇವಿಯೊಲಿಸಿದ 

ಬಿಡದೆ ಲೋಕದ ಡೊಂಕು ತಿದ್ದಿದ
ಬೆಡಗು ಮಾತಿನವೊಡೆಯ ಶರಿಫಗೆ ಶರಣು ಶರಣಾರ್ಥಿ |
ನಡೆಗೆ ಬಸವನು ನುಡಿಗೆ ಅಲ್ಲಮ 
ಪಡೆಯ ಶರಣರ ಕೃಪೆಯ ಪಡೆಯುತ 
ನುಡಿವ ನಾಲಿಗೆ ದಿಟದ ಯೋಗಿಗೆ ಶರಣು ಶರಣಾರ್ಥಿ |

ಬಲ್ಲ ವೇದಾಗಮವ ಓದುತ 

ಎಲ್ಲರಮ್ಮನ ನುತಿಸಿ ಹಾಡುತ 
ಅಲ್ಲ ಅಲ್ಲಮನೊಂದೆ ಎಂದಗೆ ಶರಣು ಶರಣಾರ್ಥಿ |
ಅಲ್ಲಿಕೇರಿಗೆ ಜನರ ಕರೆಯುತ 
ಸೊಲ್ಲು ಸೊಲ್ಲಿಗೆ ದೈವ ಸ್ಮರಿಸುತ
ಮಲ್ಲನನುಭವ ಯೋಗಿ ಶರಿಫಗೆ ಶರಣು ಶರಣಾರ್ಥಿ |

ನುಡಿಯ ಕನ್ನಡದೊಲುಮೆ ಪ್ರೀತಿಯ 

ಒಡವೆ ತೊಟ್ಟಾ ಹಾಡು ಹಾಡಲಿ 
ಬೆಡಗು ತುಂಬಿದ ಜಗದ ಜಾಣಗೆ ಶರಣು ಶರಣಾರ್ಥಿ |
ಹಡಗು ಮುಳುಗದು ತೇಲುತಲೆವುದು 
ಒಡೆಯ ರಕ್ಷಿಪನೆಂಬ ಭಾಷೆಯ 
ದೃಢದಿ ಸಾರಿದ ಯೋಗಿ ಶರಿಫಗೆ ಶರಣು ಶರಣಾರ್ಥಿ |

ದಾಸ ಶರಣರ ನಡೆಯ ನಡೆಯುತ

ಈಶನನುಮತ ನುಡಿಯ ನುಡಿಯುತ 
ದೇಶ ಸುತ್ತಿದ ನಾಡ ಪಥಿಕಗೆ ಶರಣು ಶರಣಾರ್ಥಿ|
ಕೋಶದೊಳಗಿನ ಸುಧೆಯ ಸವಿಯುತ 
ದೇಸಿನುಡಿಯಲಿ ಕಾವ್ಯ ರಚಿಸುತ 
ಮಾಸದನುಭವ ರಾಸಿ ಪುರುಷಗೆ ಶರಣು ಶರಣಾರ್ಥಿ |

ಸಾಧು ಸಂತರ ಬಳಗ ಸೇರುತ 

ಸೇದಿ ಗುಡು ಗುಡಿ ತಾರಕೇರುತ 
ಮೋದ  ನೀಡಿದ ಯೋಗಿ ಶರಿಫಗೆ ಶರಣು ಶರಣಾರ್ಥಿ |
ಮೇದು ಕಬ್ಬನು ಸಿಹಿಯ ನೀಡುತ 
ಸ್ವಾದದನುಭವ ಸವಿಯ ಹಂಚುತ 
ಜಾದು ಮಾಡಿದ ಕರ್ಮ ಯೋಗಿಗೆ ಶರಣು ಶರಣಾರ್ಥಿ |

ಮೋಹದೆಂಡತಿ ಭ್ರಮೆಯ ಕಳಚುತ 

ಸೋಹ ಭಾವವ ಹರಿದು ಚಲ್ಲುತ 
ನೇಹ ಪ್ರೀತಿಯ ಕೊಟ್ಟ ಯೋಗಿಗೆ ಶರಣು ಶರಣಾರ್ಥಿ |
ದೇಹ ಬಿಡುವಾ ಮಾತ ಹೇಳುತ 
ಲೋಹ ಚುಂಬಕ ಪರುಷವಾಗುತ 
ಸಾಹಚರ್ಯದ ಪರಮ ಯೋಗಿಗೆ ಶರಣು ಶರಣಾರ್ಥಿ |

ಲೋಕವಿದ್ಯೆಯ ಅರಿತನಲೆಯುತ 

ಪಾಕಗೊಂಡನು ಕುಳಿತು ಓದುತ 
ನಾಕ ಕಲ್ಪನೆ ತೊರೆದ ವೀರಗೆ ಶರಣು ಶರಣಾರ್ಥಿ |
ಜೀಕಿ ತೂಗಿದ ಪಾರಮಾರ್ಥವ 
ಶೋಕ ಜೀವನ ದೂರದೂಡುತ 
ಮೂಕನಾಗುವ ಮಾಟಕೊಲಿದಗೆ ಶರಣು ಶರಣಾರ್ಥಿ |

ಸೋರುತಿದ್ದಾ ಮನೆಯ ಮಾಳಿಗೆ 

ಏರಿ ತಾರಸಿ ಗಟ್ಟಿ ಮಾಡಿದ
ಧೀರ ಸಾಧಕ ಶರಿಫ ಯೋಗಿಗೆ ಶರಣು ಶರಣಾರ್ಥಿ |
ಮಾರಿ ಮಸಣಿಯ ಗಾಳಿ ಭೂತವ 
ದೂರ ಮಾಡುತ ಜಾಣ್ಮೆಯಿಂದಲಿ 
ಧಾರೆಯೇರೆದಾ ಸಂತ ವೀರಗೆ ಶರಣು ಶರಣಾರ್ಥಿ |

ಕೋಳಿ ಕೊಡಗ ಸುಗ್ಗಿ ಗುಗ್ಗಳ 

ಚೇಳುಹಾವಿನ ಹೆಗ್ಗಣಂಗಿಯ 
ಗೋಳದೆಲ್ಲವ ಕಟ್ಟಿದರಸಗೆ ಶರಣು ಶರಣಾರ್ಥಿ |
ಏಳುವೂರಿನ ನೀರು ಕುಡಿಯುತ 
ಕಾಳಿದೇವಿಯ ಗುಡಿಯಲೊರಗುತ 
ಬಾಳು ಸವೆಸಿದ ಯೋಗಿ ಶರಿಫಗೆ ಶರಣು ಶರಣಾರ್ಥಿ |

ದೇಸಿ ಮಾತಿನ ಸೊಗಡ ಹೀರುತ 

ಸೋಸಿ ಪದಗಳ ರಾಸಿ ಮಾಡಿದ
ವಾಸ ಶಿಶುವಿನಾಳ ಶರಿಫಗೆ ಶರಣು ಶರಣಾರ್ಥಿ |
ಭಾಷೆ ಬಂಧನ ಹರಿದು ಹಾಕುತ 
ವೇಷ ಡಂಬಕ ಹುಸಿಯ ತೊರೆಯುತ
ಲೇಸ ಬದುಕನು ಕೊಟ್ಟ ಸಂತಗೆ ಶರಣು ಶರಣಾರ್ಥಿ |

ಸಪ್ಪಳಿಲ್ಲದೆ ಸೇವೆ ಮಾಡುತ

ಕಪ್ಪು ಕಾಕೆ ಸಿಗದ ಗುರುವಿನ 
ನೆಪ್ಪಿನಲ್ಲಿಯೇ ಮುಳುಗಿದರಸಗೆ ಶರಣು ಶರಣಾರ್ಥಿ |
ಅಪ್ಪ ಶರಿಫನು ರಚಿಸಿದಂತಹ 
ಒಪ್ಪು ಪಫ಼ಗಳ ಹಾಡಿ ನಲಿಯಲು
ಸುಪ್ತ ಪ್ರಜ್ಞೆಯ ಕೊಟ್ಟ ದೇವಗೆ ಶರಣು ಶರಣಾರ್ಥಿ |

Tuesday, May 17, 2016





ನುಡಿ ಚಂದನ 

ತಾಯ ಒಡಲೊಳಗಿಂದ ಕೇಳಿದ ತಿಳಿನುಡಿ ಕನ್ನಡ 
ಮಾಯದಲಿ ಒಳಹೊಕ್ಕು ಆಳಕಿಳಿದ ನುಡಿ ಕನ್ನಡ 

ಉಸಿರಿನ ಉಸಿರಾಗಿ ಹಸಿರು ಹಾಸಿನಲಿ ಮಿಂದು 
ಹೊಸ ಭಾವಗಳ ಬೆಸುಗೆ ಮಾಡಿದ  ನುಡಿ ಕನ್ನಡ

ಕರಡು ಕಸ ಕೆಸರುಗಳೆದು  ಪರಿಮಳಗೊಂಡು  
ಹರಳು ಹರಳಾದ  ಅನುಭವ   ನುಡಿ ಕನ್ನಡ

ಕನಸು ಕಲ್ಪನೆಗಳ  ಚಿತ್ರ ಚಿತ್ತಾರದಲ್ಲಿ  
ಇನಿದು ಸಂವೆದನೆಗಳೊಸಗೆ  ನುಡಿ ಕನ್ನಡ

ಭೂಮವ್ಯೋಮಗಳಾಚೆ ಗೂಢಗೂಢಗಳಾಚೆ
ಶಬ್ದ ನಿಶ್ಶಬ್ದ ಬೆಡಗಿನ  ಚಂದನ ನುಡಿ ಕನ್ನಡ


ಬೆಳಕಿನ ದಾರಿ
ಬೆಳಕು ದಾರಿಯ ತೋರಿದೆ
ಒಳಗಿನೊಳಗನು ಮೀರಿದೆ
ಬುವಿಯ ಗಂಧಕೆ ಚಂದ್ರ ಚಂದನ
ಬೆರೆತು ಪರಿಮಳ ತೀಡಿದೆ
ಮನದ ಅಳಸಿಕೆ ಜಡದ ಜೀವಕೆ
ಹಸಿರು ಚೇತನ ಮೂಡಿದೆ
ಕಳೆದು ತಮವನು ತಳೆದು ಬೆಳಕನು
ಇಳೆಯ ಹಾಡನು ಹಾಡಿದೆ
ಮಳೆಯ ಸುರಿಸುತ ಕಳೆಯ ಸೂಸುತ
ಬೆಳೆಯು ರಾಶಿಯ ಕೂಡಿದೆ
ಬಾನ ಚುಕ್ಕೆಗೆ ಏಣಿ ಹಾಕುತ
ವರ್ಣ ಪ್ರಭೆಯನು ಹರಡಿದೆ
ಊರು ಕೇರಿಗೆ ಶಿವನ ಪುಟ್ಟಿಯ
ಸಾಲು ದೀಪದ ಹುರುಡಿದೆ
ಒಲವಿನೊಲವಿಗೆ ಪ್ರೀತಿ ಸಲುಗೆಗೆ
ಜನವು ತಲೆಯನು ತೂಗಿದೆ
ಪ್ರಣತಿ ಪ್ರಣತಿಗೆ ದೀಪ ಉರಿಸುತ
​ಪ್ರಾಣವ ರೂಪವ ತಾಳಿದೆ

​chandragouda kulkarni

ವಚನಗಳು



ವಚನಗಳು

ಜಾಲವನ್ನು ಕಂಡಲ್ಲಿ ಮುಳುಗುವರಯ್ಯ 
ಮಾಲಗಳನು ಕಂಡಲ್ಲಿ ಸುತ್ತುವರಯ್ಯ 
ಮೋಹದ ಜಾಲವನು
ಮಾಯದ ಮಾಲಗಳನು
ನಂಬಿದವರು ಕಾಲಕರ್ಮದ ಕಲಿಗಳೆನೊ 
ಸಿಲಿಕಾನ ಶಿವದೇವ |

ಪೇಸಬುಕ್ಕ ಕಂಡಾಗ ಬರೆಯವರಯ್ಯ 
ವಾಟ್ಸ್ಯಾಪ ಕಂಡಾಗ ಕೊರೆಯುವರಯ್ಯ 
ಟ್ವೀಟರ ಕಂಡಾಗ ಒರೆಯುವರಯ್ಯ 
ಫೇಸಬುಕ್ಕ ವಾಟ್ಸ್ಯಾಪ ಟ್ವೀಟರ
ನಚ್ಚಿದವರು ಬರಹದ 
ನಿಜದುದಯವನೆತ್ತ ಬಲ್ಲರೆ  
ಸಿಲಿಕಾನ ಶಿವದೇವ |

ಮೊಬಲೇಶನ ತ್ರಿಪದಿಗಳು


ಮೊಬಲೇಶನ ತ್ರಿಪದಿಗಳು 




ಫೇಸಬುಕ್ ಪುಟದಲ್ಲಿ ವೇಷಗಳು ನೂರಾರು 
ಖಾಸಾ ನುಡಿಚಿತ್ರ ಸಾವಿರ | ಸಿಗುವವು
ಸೋಸಿ ನೋಡಿದರೆ ಮೊಬಲೇಶ |

ಲೈಕಿಸುವ ಜನರುಂಟು ಟೀಕಿಸುವ ಜನರುಂಟು
ಸಾಕು ಗುಂಪುಗಳ ಸಹವಾಸ | ಎನ್ನುತ್ತಾ 
ಆಕಳಿಸುವವರುಂಟು ಮೊಬಲೇಶ |

ಟ್ವೀಟರು ಲೋಕದಲಿ ನೋಟವನಿರಿಸುತ್ತ 
ಕೋಟಿ ಜನರಾಡೊ ಮಾತರಿತು | ಹೊಸಬಾಳ 
ಪಾಠ ಕಲಿಬೇಕೊ ಮೊಬಲೇಶ |

ಚಣ ಚಣದ ವಾಟ್ಸ್ಯಾಪು ದಿನದಿನದ ಫೇಸಬುಕ್ಕು
ಜನಮನದ ಬಿಂಬ ಟ್ವೀಟರು | ಇಂದಿನ 
ಗುಣಧರ್ಮ ತಿಳಿಯೋ ಮೊಬಲೇಶ |

ಫೇಸಬುಕ್ಕು ವಾಟ್ಸ್ಯಾಪು ಬೀಸುವ ಗಾಳಿಯಲಿ 
ಖಾಸಗಿಯ ಮಾತು ನುಡಿಚಿತ್ರ | ಹರಿದಾಡಿ 
ಕೋಶ ಕಟ್ಟಿಹವು ಮೊಬಲೇಶ |

ಜಾಲಜಾಲವ ಹೊಕ್ಕು ನೂಲಿನೆಳೆಯಳೆ  ಬಿಡಿಸಿ 
ಮೂಲದರಿವನ್ನೆ ಹೊರತಗೆದು | ಹೊಸದೊಂದು 
ಲೀಲೆ ತೋರುವರು ಮೊಬಲೇಶ |

ಬಗೆಜಾಲ ಹಿರಿದಾಗಿ ಜಗವೆಲ್ಲ ಕಿರಿದಾಯ್ತು 
ಝಗಮಗ ಸರುಕು ಸೂರಾಯ್ತು | ಜನರಿಗೆ 
ದಿಗಿಲಾಯ್ತು ನೋಡೊ ಮೊಬಲೇಶ |

ಹೊಸಬಗೆಯ ಸರದಾರ ಕಿಸೆಯಲ್ಲಿ ಅಡಗುವನು 
ಕುಶಲದ ಹತ್ತು ಕೆಲಸಿಗನು | ಜಾಲದ 
ನಷೆಯಲ್ಲಿರಿಸುವನು ಮೊಬಲೇಶ |

ಬಾಲಮಕ್ಕಳು ಈಗ ಜಾಲದ ಮೊರೆಹೊಕ್ಕು 
ಮೂಲ ಗುರುವಿನ ಮರೆತಾರೋ | ತಂತ್ರಕ್ಕೆ 
ಜೋಲು ಬಿದ್ದಾರೋ ಮೊಬಲೇಶ |

ಸಣ್ಣ ಬಾಲಕರಾದಿ ಬೆನ್ನು ಬಾಗಿದರೆಲ್ಲ 
ಕಣ್ಣಿಟ್ಟು ನೋಡ್ತ ಹಗಲೆಲ್ಲ | ಜಾಲದ
ಬೆನ್ನ ಹತ್ತ್ಯಾರೋ ಮೊಬಲೇಶ |

ತೆರೆದ ಗೋಡೆಯ ಮೇಲೆ ಬರೆದು ಅಕ್ಷರ ಮಾಲೆ
ಹೊರಗಾಕ್ತ ಸುಪ್ತ ಭಾವಗಳ | ಜಾಲದಲಿ 
ಬೆರೆತೋಗುತಿಹರು ಮೊಬಲೇಶ |

ಮಿಂಚಿನ ವೇಗದಲಿ ಸಂಚರಿಸಿ ಗೂಗಲ್ಲು
ಸಂಚಿತ ವಿಷಯ ಹಿಡಿದಿಟ್ಟು | ತಡಮಾಡದ 
ಹಂಚುವುದು ನೋಡೊ ಮೊಬಲೇಶ |

ಬೇಡಿದ ವರಗಳನು ಜೋಡಿಸಿ ಕಲೆಹಾಕಿ 
ನೀಡುವ ಗೆಳೆಯ ಗೂಗಲ್ಲು | ಜಾಲದ 
ಗೂಢಚಾರನೊ ಮೊಬಲೇಶ |

ಫೇಸಬುಕ್ ಗೆಳೆತನದಿ ಹಾಸುಹೊಕ್ಕಾಗಿರುವ 
ಏಸೊಂದು ಮಂದಿ ಸಿಗತಾರ | ಬೆಳೆಸುತ್ತ
ಖಾಸಾ ಸಂಬಂಧ ಮೊಬಲೇಶ |

ಬೆರಳತುದಿ ಈಜಾಲ ಮರುಳಮಾಡುತ ಜನಕ 
ಬೆರಗಿನ ಲೋಕ ತೋರಿದ್ದು | ಸುಳ್ಳಲ್ಲ 
ಅರಿವಿನ ಮನೆಯೋ ಮೊಬಲೇಶ |

ಜಗದೆಲ್ಲ ಜನರನ್ನು ಮಿಗೆಸೆಳೆದು ಹತ್ತಿರಕೆ 
ಸಿಗಲಾರದ ಜ್ಞಾನ ನೀಡುವ | ಜಾಲಕ್ಕೆ 
ಮುಗಿಬೇಕು ಕೈಯ ಕಲ್ಮೇಶ |

ಗೂಗಲ್ಲ ಶೋಧದಲಿ ಜಾಗತಿಕ ಮಾಹಿತಿಯು 
ಸಾಗಿಬರುವುದು ಚಣದಾಗ | ಜಾಲಕ್ಕೆ
ಬಾಗಿ ವಂದಿಸುವೆ ಮೊಬಲೇಶ |





ವಚನಗಳು

ಜಾಲವನ್ನು ಕಂಡಲ್ಲಿ ಮುಳುಗುವರಯ್ಯ 
ಮಾಲಗಳನು ಕಂಡಲ್ಲಿ ಸುತ್ತುವರಯ್ಯ 
ಮೋಹದ ಜಾಲವನು
ಮಾಯದ ಮಾಲಗಳನು
ನಂಬಿದವರು ಕಾಲಕರ್ಮದ ಕಲಿಗಳೆನೊ 
ಸಿಲಿಕಾನ ಶಿವದೇವ |

ಪೇಸಬುಕ್ಕ ಕಂಡಾಗ ಬರೆಯವರಯ್ಯ 
ವಾಟ್ಸ್ಯಾಪ ಕಂಡಾಗ ಕೊರೆಯುವರಯ್ಯ 
ಟ್ವೀಟರ ಕಂಡಾಗ ಒರೆಯುವರಯ್ಯ 
ಫೇಸಬುಕ್ಕ ವಾಟ್ಸ್ಯಾಪ ಟ್ವೀಟರ
ನಚ್ಚಿದವರು ಬರಹದ 
ನಿಜದುದಯವನೆತ್ತ ಬಲ್ಲರು 
ಸಿಲಿಕಾನ ಶಿವದೇವ |


ಕಣ್ಣಿಟ್ಟು ನೋಡ್ತ ಹಗಲೆಲ್ಲ | ಜಾಲದ
ಬೆನ್ನ ಹತ್ತ್ಯಾರೋ ಮೊಬಲೇಶ |

Monday, May 16, 2016

ಪುಲಿಗೆರೆ




ಕಲ್ಲುತಾ ಕರಗುತ್ತ. ಮಲ್ಲಿಗೆಯ ಹೂವಾಗಿ
ಚಲ್ಲುವರೆದಿಹುದು ಶಿಲ್ಪದಲಿ!  ಪುಲಿಗೆರೆಯ
ನಲ್ಮೆಯ ಸೋಮನಾಥನಲಿ!

ಶಿಲೆಯಲ್ಲಿ  ಅಡಗಿರುವ ಕಲೆಯನ್ನು ಅರಳಿಸುವ.                  
ಒಲುಮೆಯ ವಿದ್ಯೆ ಪಡೆದಂತೆ!  ಸ್ಥಪತಿಗಳ
ನಿಲಯ ಫುಲಿಗೆರೆಯ ಮಂದಿರ ವು !

ಶರಣ ಆದಯ್ಯನ ವರಸೋಮದೇವನು
ಕರುಣೆಯ ತೋರಿ ಪುಲಿಗೆರೆಗೆ!  ಬಂದುತಾ
ಚಿರವಾಗಿ ನೆಲೆಸಿ ನಿಂತಾನ!

ಶಾಸನ ಶಿಲ್ಪಗಳ ಕೋಶವು ಪುಲಿಗೆರೆ
ಲೇಸು ಆದಯ್ಯನ ನೆಲೆವೀಡು!  ಸೋಮನಾಥ
ವಾಸ ಹೂಡಿದ ಚಲುನಾಡು!

Haddu

ಬಲರೆಕ್ಕೆಗೆ ಗಾಯವಾಗಿ ಎರಡು ದಿನಗಳಿಂದ ಬುದ್ಧ ಪಾರ್ಕ (ನಾಗಪುರ ಪೊಲೀಸ್ ಸ್ಟೇಶನ್ ಹತ್ತಿರ) ನಲ್ಲಿ ಯಾತನೆ ಪಡುತ್ತಿರುವ ಮರಿ ಹದ್ದು.......ಚಿಕಿತ್ಸೆನೀಡುವ ಪರಿಣತರ ನಿರೀಕ್ಷೆಯಲ್ಲಿ..

ಗಾಯಗೊಂಡ ಹದ್ದು ಮರಿಯು
ಮಾಯಮಾಡೊಮದ್ದಿಗಾಗಿ
ಕಾಯುತಿಹುದುಯೆರಡುದಿನಗಳಿಂದ ಪಾರ್ಕಲಿ!
ಆಯತಪ್ಪಿ ಹೆಜ್ಜೆಯಿಡುತ
ನೋಯುತಿಹುದು ಗಳಿಗೆಗಳಿಗೆ
ತಾಯಮಮತೆ ತೋರಿ ರಕ್ಷೆನೀಡಬೇಕಿದೆ  !

ಶಬ್ದ ಯೋಗ |




ಶಬ್ದ ಯೋಗ |

ಮಣ್ಣು ನೀರು ಸಂಗದಲ್ಲಿ 

ಪಲ್ಲವಿಸಿವುದು ಬೀಜ |
ಪದದೆದೆ ಸೀಳಿ ಹೊರ ಸೂಸುವುದು 
ಬೆಡಗಿನ ಕತೆಯ ತೇಜ |

ಬಣ್ಣ ಕುಂಚ ಲಲಿತ ಗೆರೆಯಲಿ 

ಚಿತ್ರ ಮೂಡುವಂತೆ | 
ಉಕ್ಕಿ ಹರಿವ ಹೊನಲಿನಲ್ಲಿ 
ಅಕ್ಷರ ಪದಗಳ ಸಂತೆ |

ಶಿಲ್ಪಿ ಚಳಕದ ಉಳಿ ಕೊಡತಿಗೆ

ಕರಗಿದ ಹಾಗೆ ಕಲ್ಲು |
ಮೂರ್ತ ರೂಪ ತಾಳ್ವುದು ಕವಿತೆ 
ಮಾಡಲಾರದೆ ಗುಲ್ಲು |

ಸರಿಗಮ ಸ್ವರದ ಮಧುರ ನಾದದಿ 

ಮೂಡಿ ಬರುವುದು ರಾಗ |
ಸಾವಿರ ಸಾವಿರ ಅರ್ಥದಲೆಗಳ 
ಮೌನ ಶಬ್ದ ಯೋಗ |

ಎದೆ ಎದೆ ಮಿಡಿಯುವ  ಭಾವ ಲಹರಿಗೆ 

ಬರದು ಎಂದು ಸೋಲು |
ಎಲ್ಲರ ಮನಸನು ಗೆಲ್ಲುವ ಸೊಲ್ಲಿಗೆ 
ಇಲ್ಲ ಯಾವುದು ಮೇಲು |

ಗಣತಂತ್ರ

ಮನುಜನ ಜೀವನಕೆ ಘನತೆಯನು ತುಂಬಿದ
ಗಣತಂತ್ರದ ನಾಡು ನಮ್ಮದು!   ಅದನರಿತು
ಗುಣವಂತನಾಗೊ ಕಲ್ಮೇಶ. !

ನುಡಿಮತವ ಮೀರಿಸಿ ಗಡಿರೇಖೆ ದಾಟಿಸಿ
ನಡೆತನದ ಬೆಳಕು ತೋರಿದ. ! ಗಣತಂತ್ರ. 
ಪಡೆದ ಸೌಭಾಗ್ಯ ಕಲ್ಮೇಶ. !

ಹನುಮಂತನೆಂಬುದು ಘನತೆಯ ಬಿರುದಾಯ್






ಚಿತ್ರದಲಿ ಮೂಡ್ಯಾನ ಚಿತ್ತದಲಿ ನೆಲಿಸ್ಯಾನ
ಉತ್ತಮ ವೀರ ಹನುಮಂತ! ಜನರಲ್ಲಿ
ಬಿತ್ಯಾನ ನಾಡ ಪ್ರೀತಿಯನು!


ಹನುಮಂತನೆಂಬುದು ಘನತೆಯ ಬಿರುದಾಯ್ತು
ಚಣಚಣಕೆ ಉಲಿವ ಮಂತ್ರದ!  ನುಡಿಯಾಯ್ತು
ಜನತೆಯ ಎದೆಯ ದನಿಯಾಯ್ತು!


ಕೊಪ್ಪದನ ಸಾವನ್ನು
ಒಪ್ಪದು ನಿಜಮನಸು
ನೆಪ್ಪಿನ ಕೋಶ ತುಂಬಿಹುದು!  ಅನುಗಾಲ
ತುಪ್ಪದ ದೀಪ ಬೆಳಗುವುದು  !

ಹಿಮದ ಚಳಿಯಲಿ ನಡುಗಲಾರದೆ
ಕ್ಷಮತೆಯಿಂದಲಿ ಗಡಿಯ ಕಾಯುತ
ಅಮರ ಸೇವೆಯಗೈದ ವೀರಗೆ ಕೋಟಿ ವಂದನೆಯು
ತಿಮಿರ ಕೊಬ್ಬಿನ ವೈರಿ ಪಡೆಯನು
ದಮನಗೈಯಲು ಪಣವತೊಟ್ಟಾ
ಸಮರಶೂರನ ದಿವ್ಯ ತೇಜಕೆ ಕೋಟಿ ವಂದನೆಯು

ಬೆಟ್ಟದೂರಲಿ ಜನಿಸಿ ದೇಶದ
ಗಟ್ಟಿ ಸೈನಿಕ ದಳವ ಸೇರಿದ
ಜಟ್ಟಿ ವೀರನ ಪಾದಪದ್ಮಕೆ ಕೋಟಿ ವಂದನೆಯು
ಘಟ್ಟ ಹಿಮ ಚಳಿ ರಾತ್ರಿಹಗಲಲಿ
ಬಿಟ್ಟುಬಿಡದಲೆ ಗಸ್ತು ತಿರುಗಿದ
ದಿಟ್ಟ ಕೊಪ್ಪದ ಹನುಮ ನಾಯ್ಕಗೆ ಕೋಟಿ ವಂದನೆಯು
ಬೆಟದೂರ ಸಾಹಸಿ ದಿಟದ ಪರಾಕ್ರಮಿ
ಕೊಪ್ಪದ ಹನುಮಂತ !
ಸಿಯಾಚಿನ್ ಭೀಕರ ಹಿಮದಲಿ ಸಿಕ್ಕರೂ
ಉಳಿದಿದ್ದ ಜೀವಂತ!

ದೇಶಕೆ ದೇಶವೇ ಪ್ರಾರ್ಥನೆ ಮಾಡಿತು
ಹನುಮಂತನಿಗಂತ !
ಯಾಕೊ ದೇವರ ಮನಸಿಗೆ ಬರಲಿಲ್ಲ
ಮರೆಯಾದ ಧೀಮಂತ!

ಮೆಚ್ಚುಗೆ ಗೌರವ ಶ್ರದ್ಧಾಂಜಲಿಯನು
ನೀಡ್ಯಾರೊ ಎದ್ದುನಿಂತ !
ಕಣ್ಣೀರ ಮುತ್ತಿನ ಹನಿಗಳ ಪೋಣಿಸಿ
ಸಲಿಸ್ಯಾರೊ ಜನ ಶಾಂತ! 

ಹೇಳುವುದೆಂಗ ಬಂಧು ಬಳಗದ
ದುಃಖವು ಎಷ್ಟಂತ !
ಜೈ ಜವಾನ ಅಮರ ಸೈನಿಕ
ವಿರಮಿಸೊ ಚಿರಶಾಂತ!








ಚಂಡಾಡಿ ಬಿಟ್ರು  ಮಕ್ಕಳನು


(ಪಿ ಯು ಪ್ರಶ್ನೆ ಪತ್ರಿಕೆ ಮತ್ತೆ ಮತ್ತೆ ಬಯಲಾದ ದುರಂತ.....)


ಹಗಲಿರುಳು ಓದಿದ ಮಿಗಿಲಾದ ಮಕ್ಕಳು

ದಿಗಿಲು ಬಿದ್ದಾರೊ ಮಂಡಳಿಯ!  ಆಟಕ್ಕೆ
ಮಿಗವಾದ್ರು ಬಲಿಗೆ ಮತ್ತೊಮ್ಮೆ!

ಮಲ್ಲಿಗೆಮಕ್ಳಕೂಡ ಚಲ್ಲಾಟ ವಾಡುವ

ಖುಲ್ಲ ಮಂತ್ರಿಯಧಿಕಾರಿ ! ಜನಗಳ
ಹಲ್ಲು ಮುರಿಬೇಕು ಎಣಿಸೆಣಿಸಿ!

ಜಡಮತಿಯಮಂತ್ರಿಗಳು ಕಡುಭ್ರಷ್ಟ ಅಧಿಕಾರಿ

ಅಡವಿಗಟ್ಟಿದರೊ ಮಕ್ಕಳನು!  ಶಿಕ್ಷಣವು
ಸುಡುಗಾಡಿಗಿಂತ ಕಡೆಯಾಯ್ತೊ!

ಎಂಜಲದಾಸೆಗೆ ಗಂಜಲವ ನೆಕ್ಕುವ

ಕಾಂಜಿಪಿಂಜಿಗಳ ದರ್ಬಾರೊ! ಶಿಕ್ಷಣಕೆ
ಗುಂಜಿ ಮರ್ಯಾದಿ ಇಲ್ಲಲ್ಲೊ!

ಮಂಡಳಿ ನೌಕರರ ಪುಂಡಾಟ್ಕ ಕೊನೆಯಿಲ್ಲ

ಕೆಂಡಮಂಡ್ಲಾದ ವಿದ್ಯಾರ್ಥಿ!  ಬಳಗವು
ಬಂಡು ಎದ್ದಾರೊ ನಾಡಾಗ!

ಭಂಡನೀಚರಹೊಲಸು ಅಂಡುನೆಕ್ಕುವ ಇವರು

ಚಂಡಾಡಿ ಬಿಟ್ರು  ಮಕ್ಕಳನು!  ಮತ್ತೊಮ್ಮೆ
ಮಂಡೆ ಮಲಗಿಸಿ ಕೂಪದಲಿ!

ಒಮ್ಮೆಲ್ಲ ಸೋರಿದ್ದು ಕಿಮ್ಮನೆ ಮಂತ್ರಿಗಳೆ

ಸುಮ್ಮನೆ ಎದ್ದು ಮನೆಗೋಗಿ! ನಾವೆಲ್ಲ
ಸಮ್ಮಾನ ಮಾಡಿ ಕಳಿಸುವೆವು!

Sunday, May 15, 2016

ಚೈತ್ರ

ಸುಡುಬಿಸಿಲ ಧಗೆಯುಂಡು
ಕಡುಗಂಪು ಹರಡುತ್ತ
ಸಡಗರದಿ ಓಡಿ ಬಂದಂತ. ! ಚೈತ್ರಕ್ಕೆ
ಹೆಡೆಮಣಿದು ನಮನ ಸಲ್ಲಿಸುವೆ!

ಚಿಗುರಿದ ಎಲೆಗಳಲಿ 
ಹೊಗರಿನ ಹೂಗಳಲಿ
ಹಗುರಾದ ಚಿಟ್ಟೆ ಗರಿಗಳಲಿ!  ಚೈತ್ರದ
ಸೊಗಸಾದ ರೂಪ ಕಾಣುವುದು!


ಬೆಲ್ಲಬೇವಿನ ಸವಿಯು
ಸೊಲ್ಲು   ಸೊಲ್ಲಲಿ     ಬೆರೆತು
ಮಲ್ಲಿಗೆಯ ಭಾವ ಅರಳಿಸಿ  ! ಹೊಸವರುಷ
ಮೆಲ್ಲನಡಿಯಿಟ್ತು ಲೋಕಕ್ಕೆ   !

ಬೇವಿಗೆ ಹೇಗೆ ಗೊತ್ತಾಗುವುದು
ಚೈತ್ರ ಬಂದ ಅಂತ!
ಹೂಹೂಗೊಂಚಲ ಕಟ್ಟಿ ಕುಣಿವುದು

ಥೈ ತಕ ಥೈ ಅಂತ!

ನಿನ್ನ ನೆನಪು ಬರಿ ನೆನಪಲ್



ನಿನ್ನ ನೆನಪು ಬರಿ ನೆನಪಲ್ಲ
ಸಾವಿರದ ಸಂಸ್ಕೃತಿಯ ಚಿತ್ರ ಶಾಲೆ

ಸಾಗರಾಳಕಿಳಿದು ಮುತ್ತು ಹೆಕ್ಕಿ ತಂದವ ನೀ
ಆಗಸದೆತ್ತರಕೇರಿ ಚುಕ್ಕೆಗಳು ಮುಕ್ಕಿ ಬಂದವ ನೀ
ನವಿಲಿಗೆ ನಾಟ್ಯ ಅರಗಿಳಿಗೆ ಮಾತು ಕಲಿಸಿದವ
ಹಂಸೆಗೆ ನಡೆ,ಲತೆಗೆ ಬಳುಕು ಬಂದದ್ದೆ  ನಿನ್ನಿಂದ...

ಮಾತಿಗೆ ಮಾತಿನ ಮತಿ ನೀಡಿದವ,
ಅಭಿನಯಕೆ ಅನುನಯದ ಗತಿಯ ಕಲಿಸಿದವ
ಭಾವ ಅನುಭಾವಕೆ ಜೀವವಾದವ......

ನೀನು ಕನ್ನಡದೊಳಗೊ
ಕನ್ನಡ ನಿನ್ನೊಳಗೊ
ಕಲೆ ಕನ್ನಡಗಳೆರಡೂ ಸಹೃದಯನೊಳಗೊ..

ಅಭಿಮಾನಿ ದೇವರೆ,
ಎನ್ನುತ್ತ ಬಾಗಿದವ, ಸಾಗಿದವ ನೀ

ನಿನ್ನ ನೆನಪು
ಬರಿ ನೆನಪಲ್ಲ...

ಹಕ್ಕಿಯ ಬಳಗ ಬಿಕ್ಕುತಲಿತ್

ಹಕ್ಕಿಯ ಬಳಗ ಬಿಕ್ಕುತಲಿತ್ತೊ
ಮುಕ್ಕ ನೀರಿಗೆ ಬಾಯಿ ಬಿಡುತಲಿತ್ತೊ

ಸುಡುಬಿಸಿಲ ತಾಪದ
ಬಡಬಾನಲದಲ್ಲಿ
ಗಡಬಡಿಸಿ ನೀರ ಹುಡುಕುತಲಿತ್ತೊ
ಅಡವಿ ಆರ್ಯಾಣ
ಗಿಡಗಂಟಿ ಮರಗಳಲಿ
ಕಡುನೊಂದು ಬಾಳು ನೂಕುತಲಿತ್ತೊ

ಮನೆಮಾರು ಸುತ್ತಾಡಿ
ದಣಿವತ್ತಿ ಒದ್ದಾಡಿ
ಹನಿನೀರ ಹುಡುಕಿ ನರಳುತಲಿತ್ತೊ
ನಲ್ಲಿನಳ ಪೈಪಿನಲಿ
ಕಲ್ಲುಪಡೆ ಸಂದಿಯಲಿ
ಎಲ್ಲೆಂದರಲ್ಲಿ ತಿರುಗುತಲಿತ್ತೊ

ಬಿಸಿಗಾಳಿ ತಾಪಕ್ಕ
ದಸದಸ ತೇಕುತ್ತ
ಉಸಿರುಸಿರಿಗೆ ತಿಣುಕುತಲಿತ್ತೊ
ಪರಿಸರ ನಾಶಕ್ಕ
ಮರಮರ ಮರಗುತ್ತ
ಕೊರಗುತ ಕಾಲ ನೂಕುತಲಿತ್ತೊ!

ಸೋರಿಕೆಯಾಗಿತ್

ಸೋರಿಕೆಯಾಗಿತ್ತ

ಕೆಮಿಸ್ಟ್ರಿ ಪೇಪರ ಸೋರಿಕೆಯಾಗಿತ್ತ
ನೋಡವ್ವ ತಂಗಿ
ಪಿ.ಯು. ಮಕ್ಕಳ ಜೀವ ಹಿಂಡಿತ್ತ!

ಕಾಯೊ ಬೇಲಿಯೆ ಹೊಲವ ಮೆಯ್ದು
ಗಾಯ ಮಾಡಿ ಮಕ್ಕಳಿಗೆಲ್ಲ
ಸಾಯ ಹೊಡೆದಿತ್ತ

ಮೂರು ಬಾರಿ ಪರೀಕ್ಷೆ ನಡೆಸಿ
ನೂರು ಬಾರಿ ಹಳ್ಳ ಹಿಡಿಸಿ
ಗೋರಿ ತೋಡಿತ್ತ

ಕೋಚಿಂಗನವರ ಬಾಲ ಬಡಿದು
ನಾಚಿಗೆ ಇಲ್ದೆ ಹೊಲಸು ತಿಂದು
ಪೇಚಿಗೆ ಸಿಗಿಸಿತ್ತ..

ಉಳ್ಳವರ ಹೆಸರು ಬೆಚ್ಚಗೆ ಇರಿಸಿ
ಮಳ್ಳ ಕ್ರಿಮಿಗಳ ತನಿಖೆ ನಡೆಸಿ
ಹಳ್ಳ ತೋಡಿತ್ತ

ಮೂಲ ಕಳ್ಳರ ರಕ್ಷಣೆ ಮಾಡಿ
ಬಾಲ ಹಿಡಿದು ಸುದ್ದಿ ಮಾಡಿ
ಜೋಲಿ ತಪ್ಪಿತ್ತ

ಅಧ್ಯಾಪಕರಿಗೆ ನ್ಯಾಯ ಕೊಡದೆ
ಗುದ್ದಾಟದಲಿ ಕಾಲ ಕಳೆದು
ನಿದ್ದೆ ಕೆಡಿಸಿತ್ತ

ಸಂಧಾನೆಂಬೊ ನಾಟಕ ನಡೆಸಿ
ಗೊಂದಲವನ್ನೆ ಹುಟ್ಟು ಹಾಕಿ
ಚಿಂದಿ ಮಾಡಿತ್ತ

ದಪ್ಪ ಚರ್ಮದ ನಾಯಕ ಬಳಗ
ಸೊಪ್ಪು ಹಾಕದೆ ಪ್ರಜೆಗಳ ಮಾತಿಗೆ
ತಿಪ್ಪಿ ಸಾರಿಸಿತ್ತ.

ಮನ್ನಿಸು ಮನುಜರ ತಪ್ಪನ್ನು..

ಮನ್ನಿಸು ಮನುಜರ ತಪ್ಪನ್ನು...

ಬೆಂಕಿಯ ಕಾರುತ್ತ ಸಂಕಟ ತಂದಿರುವ
ಬಿಂಕದ ರಾಯ ನೇಸರನೆ!  ಮನ್ನಿಸು
ಮಂಕು ಮನುಜರ ತಪ್ಪನ್ನು!

ನೀರಿಗೆ ನೀರಡಿಕೆ ಗಾಳಿಗೆ ಘನಬೆವರು
ತಂಪೆಲ್ಲ ಕಾದು ಸುಡುವುದು!  ಜಗದಾಟ
ವಿಪರೀತವಾಯ್ತು ನಿನ್ನಿಂದ!

ಮುಂಜಾನೆಂಬುದೆ ಇಲ್ಲ ಸಂಜೆಸವಿ ಸೊಬಗಿಲ್ಲ
ಪಂಜಿನ ಬಿಸಿಲ ಆರ್ಭಟವೆ!  ಹಗಲೆಲ್ಲ
ನಂಜಾಗಿ ನಾಡ ಸುಡುತಿಹುದು!

ಕೋಪಗೊಳ್ಳುವದ್ಯಾಕೊ ಶಾಪ ಹಾಕುವದ್ಯಾಕೊ
ತಾಪ ಸಂಕಟವ ನೀಡುವ!   ನೇಸರನೆ
ಲೋಪಿ ಮನುಜಗೆ ಕರುಣಿಸು!  

ಗೋಳಾಡ್ತ ಹಗಲೆಲ್ಲ ಗಾಳಿಯೇ ಬೆವರುವುದು
ತಾಳಿಗೆಯ ದಾಹ ಹೆಚ್ಚುವುದು!  ನೀರಿಗೆ
ತಾಳಲಾರದ ನೀರಡಿಕೆ  !

ದಂಡೆತ್ತಿ ಮೇಲ್ಬಿದ್ದು ಕೆಂಡವನು ಕಾರುತ್ತ
ಮಂಡಲಕ ಬೆಂಕಿ ಹಚ್ಚುತ್ತ ! ಜೀವಿಗಳ
ದಂಡಿಸುವುದ್ಯಾಕೊ ನೇಸರನೆ!

ಮರದ ಅಳಲು.....

ಇತ್ತೀಚೆಗೆ ತಾಳಿಕೋಟೆ ಖಾಸ್ಗತನಗರ ಉದ್ಯಾನವನದಲ್ಲಿ ಇರಿಸಿದ ರಬ್ಬರ ಪೈಪುಗಳು ಉರಿದು ಪಕ್ಕದ ಮರಗಳನ್ನೂ ಸುಟ್ಟು ಕರಕಲು ಮಾಡಿದವು.

ಮರದ ಅಳಲು.....

ಬಿರುಬಿಸಿಲ ತಾಪವನು ಮರೆದುನಾ ಹಸಿರಿನ
ನೆರಳನ್ನೆ ಹಾಸಿ ನಲಿತಿದ್ದೆ! ಕಿಡಗೇಡಿ
ಉರಿಹಚ್ಚಿ  ಘಾತ ಮಾಡಿದ!

ರಬ್ಬರಿನ ಪೈಪುಗಳು ಹಬ್ಬಿಸಿ ಹೊಗೆಯನ್ನು
ಮಬ್ಬು ಕವಿಸಿದವು ನಡುಹಗಲು! ಜೀವನವು
ಗಬ್ಬೆದ್ದು ಹೋತು   ಚಣದಲ್ಲಿ   !

ಸುಡುಬೆಂಕಿ ಜ್ವಾಲೆಯು ಹೆಡೆಯೆತ್ತಿ ತೂರಾಡಿ
ನಡುಹಗಲು ಹೊತ್ತು   ಉರಿಯಿತು  ! ನನಜೀವ
ಮಿಡುಕುತ್ತ ಬೆಂದುಹೋಯಿತು  !

ಚಿಣ್ಣರ ಚಿಲಿಪಿಲಿ



ಚಿಣ್ಣರ ಚಿಲಿಪಿಲಿಯ ಬಿನ್ನಣದ ಲೀಲೆಯು
ಕಣ್ಣಿನೊಳಗಣ್ಣು ತೆರೆಸುವುದು!  ಒಲವಿನ 
ಬಣ್ಣದೋಕಳಿಯ ಹರಡುವುದು!

ಚಿಲಿಪಿಲಿ ಗಾನದ ಅಲೆಗಳನು ಹಬ್ಬಿಸುತ
ಒಲವಿನ ಹಾಡು ಹಾಡುವ!  ಚಿಣ್ಣರ
ಕಲರವಕೆ ಸಾಟಿ ಏನಿಹುದು!

ತಾಯಿ

ಹೆತ್ತು ಸಾಕಿದ ತಾಯಿ ಹೊತ್ತು ತಿರುಗಿದ ತಾಯಿ
ತುತ್ತಿಗಮೃತದ ರುಚಿಕೊಟ್ಟ!  ಮಾತಾಯ್ಗೆ
ಮುತ್ತಿನಭಿಷೇಕ ಮಾಡುವೆ!

ತುಳಿತವನು ಸಹಿಸ್ಯಾಳು ಇಳೆಯಾಗಿ ನಿಂತಾಳು
ಮಳೆಗಾಳಿ ಬಿಸಿಲು ಉಂಡಾಳು! ನಗುನಗ್ತ
ಅಳಿಯದ ಪ್ರೀತಿ ಕೊಟ್ಟಾಳು!

ದುಮುಗುಡತೈತೊ

ಬರಗಾಲ ಬೇಸಿಗೆ ದುಮುಗುಡತೈತೊ
ರೈತ ಬಡವರನು
ಕಾಡುತಲೈತೊ
ಹಸುಗೂಸು ಕಂದಮ್ಮ
ಬಿಸಿಲಿನ ತಾಪಕ್ಕೆ
ಉಸಿರಾಡೊ ಕಸುವಿಲ್ದೆ ಸಾಯುತಲೈತೊ
ಹಸಗೆಟ್ಟ ಹುಸಿಬಳಗ
ತುಸುವಾದರು ಕರುಣಿಲ್ದೆ
ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ
ಹನಿಹನಿ ನೀರಿಗೂ
ದನಕರು ಬಳಿದರೂ
ದಣಿಬಳಗ ಮೂಗು ಮುರಿಯುತಲೈತೊ
ಬತ್ತಿದರು ಕಟ್ಟೆಗಳು
ಗುತ್ತಿಗೆ ಕಂಪನಿಗೆ
ತುರ‍್ತಾಗಿ ನೀರು ಹರಿಯುತಲೈತೊ
ಸರಕಾರ ಜನತೆಯ
ದರಕಾರ ಮಾಡದೆ
ಹರಮುರುಕು ಬಾಗ್ಯ ಹಂಚುತಲೈತೊ
ಪುಂಡಪೋಕರಿ ಬಳಗ
ಉಂಡು ತೇಗುತ ಹೊಲಸು
ಕಂಡಲ್ಲಿ ನಾಲಿಗೆ ಚಾಚುತಲೈತೊ
ಕಾರಬಾರಿ ಕಲಿಬಳಗ
ಹಾರತುರಾಯಿ ಹಾಕಿ
ತೋರಿಕೆ ನಾಟಕ. ಆಡುತಲೈತೊ
ನೀರಿನ ಸಂಕಟಕೆ
ದಾರಿಯ ತೋರದೆ
ಮೀರಿದ ಲಂಚ ಪಡೆಯುತಲೈತೊ
ಬಿಸಿಲುಬರ ರಾಜಕೀಯ
ಹಸಿಹಸಿ ಪದಗಳಲಿ
ಉಸಿರು ಉಸಿರಾಗಿ ಹೊಮ್ಮುತಲೈತೊ
ಕಡದಳ್ಳಿ ಕಲ್ಮೇಶ
ಬೆಡಗಿನ ಮಾತಲ್ಲಿ
ಎಡಬಿಡದೆ ಜೀವ ತುಂಬುತಲೈತೊ
(ಚಿತ್ರ ಸೆಲೆ:  creative.sulekha.com )

ಪ್ರೇರಕ ಶಕ್ತಿಯಾಗಿರುವ ಅಜ್

ಅಮ್ಮ, ಗಾಡ ನಿದ್ದೆಯಲ್ಲಿದ್ದ ನನ್ನನ್ನು ಎಬ್ಬಿಸಿ ಕಯ್ಹಿಡಿದು ಜಗ್ಗಿ ಎಳೆದುಕೊಂಡು ತಲಬಾಗಿಲತ್ತ ಅವಸರವಸರ ಹೆಜ್ಜೆ ಇಟ್ಟಳು. ಗಡಿಬಿಡಿಯಿಂದ ಅಗಳಿ ತೆಗೆದು ಕತ್ತಲಲ್ಲಿ ಮುಂದುವರೆದಳು. “ ಏ, ಸಿದ್ದನಗವ್ಡ .. ಏ ಸಿದ್ದನಗವ್ಡ.. ಲಗೂ ಏಳು, ಬಾಗಿಲ ತಗಿ..” ಕೂಗನ್ನು ಕೇಳಿ ಅಡಬರಿಸಿ ಬಂದು ಬಾಗಿಲ ತೆಗೆದ ಸಿದ್ದನಗವ್ಡ ಮಾವನಿಗೆ “ನಿಮ್ಮ ಕಾಕಾ ರಕ್ತ ವಾಂತಿ ಮಾಡಿಕೊಂಡಾನ..ಬಾಳ ತ್ರಾಸ ಮಾಡಿಕೊಳ್ಳಾಕ ಹತ್ಯಾನ “ ಎಂದವಳೇ ಮನೆಯತ್ತ ಹೆಜ್ಜೆ ಹಾಕಿದಳು. ಮಾವ ಅಮ್ಮನಿಗಿಂತ ಮುಂದೆಯೇ ನಡೆದ ಹಿಂದೆ ಅಮ್ಮ ನಾನು ಕತ್ತಲಲ್ಲಿ ಮನೆ ಸೇರಿದೆವು. ನಡುರಾತ್ರಿಯಲ್ಲಿ  ಅಜ್ಜನ ಸ್ತಿತಿಯನ್ನು ಕಂಡು ಸಿದ್ದನಗವ್ಡ ಮಾವನಿಗೂ ಗಾಬರಿಯಾಯಿತು. ವಾಂತಿ ಮಾಡಿಕೊಂಡು ಸುಸ್ತಾಗಿದ್ದ ಅಜ್ಜ ಹಾಸಿಗೆಯಲ್ಲಿ ಅಸ್ತವ್ಯಸ್ತವಾಗಿ ಮಲಗಿದ್ದ. ಉಸಿರಾಟ ಬಿಟ್ಟರೆ ಯಾವ ಚಲನವಲನವೂ ಇರಲಿಲ್ಲ. ಅಮ್ಮ , ವಾಂತಿ   ಮಾಡಿಕೊಂಡದ್ದನ್ನು ತೋರಿಸಿದಳು. ಪುಟ್ಟಿಯಲ್ಲಿದ್ದ ಆ ಹೊಲಸನ್ನು ತಿಪ್ಪಿಗೆ ಚಲ್ಲಲು ಹೊರಟಳು. ಮಾವ ತಾನೇ ಚಲ್ಲಿ ಬಂದ.
ದೀಪದ ಬೆಳಕಿನಲ್ಲಿ ಅಜ್ಜ, ವಾಂತಿ, ಹಾಸಿಗೆ ಅಸ್ಪಶ್ಟವಾಗಿ ಕಂಡವು. ರಾತ್ರಿ ಎರಡು ಗಂಟೆ ಮೀರಿರಬಹುದು. ಬರಪೂರ ನಿದ್ದೆ ಸಮಯ, ಮಾವ ವಾಂತಿ ಚಲ್ಲಿ ಬರುವಶ್ಟರಲ್ಲಿ  ನನಗೆ ಮಂಪರು ಕವಿದಿತ್ತು. ಅಜ್ಜನ ದೋತರ ಹೊಲಸಾಗಿತ್ತು. ಅಜ್ಜನೆ ದೋತರ ಬದಲಾಯಿಸಲು ಹೇಳಿದನೊ ಅಮ್ಮ – ಮಾವ ಬದಲಾಯಿಸಬೇಕೆಂದು ನಿರ್‍ದರಿಸಿದರೊ ಗೊತ್ತಿಲ್ಲ. ಅಜ್ಜ ದನದ ಮನೆಯ  ಪಡಸಾಲೆಯಲ್ಲಿ, ಹಾಸಿದ ಹಾಸಿಗೆಯ ಮೇಲೆ ಅಮ್ಮನ ಆಸರೆ ಹಿಡಿದು  ಎದ್ದು ನಿಂತಿದ್ದ. ಮಾವ ಅಜ್ಜನಿಗೆ ದೋತರ ಉಡಿಸುತ್ತಿದ್ದ. ಸೊರಗಿ ಹೋದ ಅಜ್ಜನ ಶರೀರ ಅಲ್ಪ ಸ್ವಲ್ಪ ಕಂಡತಾಯ್ತು. ಮುಂದೇನಾಯ್ತು ಗೊತ್ತಿಲ್ಲ.
ಮರುದಿನ ಮುಂಜಾನೆ ಬನಹಟ್ಟಿಯ ತಮ್ಮನಗವ್ಡ ಡಾಕ್ಟರ್ ಮನೆಗೆ ಬಂದಂತೆ, ಹೊಯ್ದಾಡೊ  ಬಿಸಿನೀರಲ್ಲಿ ಸಿರೀಂಜ ಅದ್ದಿ, ಬಾಟಲಿಯಲ್ಲಿಯ ಅವ್ಶದ ಹೀರಿ ಅಜ್ಜನಿಗೆ ಇಂಜಕ್ಶನ್ ಮಾಡಿದಂತೆ ನೆನಪು. ಅದೇ ದಿನವೋ ಮತ್ತೊಂದು ದಿನವೋ ನಾಟಿ ವಯ್ದ್ಯ ಮಾಡುತ್ತಿದ್ದ, ಮೂರ್‍ತಿ ಶಿಲ್ಪಿಯೂ ಆಗಿದ್ದ ಬನಹಟ್ಟಿಯ ದ್ಯಾವನಗವ್ಡ ಅಜ್ಜನೂ ಬಂದಂತೆ ಅಸ್ಪಶ್ಟ ನೆನಪು.
ಅವ್ವ ಸತ್ತ ಮೇಲೆ ಪ್ರತಿದಿನ ಅಮ್ಮನ ಹತ್ತಿರವೇ ಮಲಗುತ್ತಿದ್ದ ನಾನು ಅಜ್ಜ ರಕ್ತ ವಾಂತಿ ಮಾಡಿಕೊಂಡ ದಿನದ ಅನಂತರ ಅಮ್ಮನ ಹತ್ತಿರ ಮಲಗಿದೆನೋ ಇಲ್ಲವೋ ಗೊತ್ತಿಲ್ಲ. ಅಜ್ಜನಿಗೆ ಮತ್ಯಾವ ರೀತಿಯಲ್ಲಿ ಉಪಚರಿಸಿದರೆಂಬುದೂ ನೆನಪಿಲ್ಲ.
“ಅಜ್ಜಾ, ಇನ್ನ ನಮ್ಮನ್ಯಾರ ಜ್ವಾಪಾನ ಮಾಡಾವ್ರು.. ನೀ  ಬಿಟ್ಟ ಹ್ವಾದೆಲ್ಲಾ..” ಎಂದು ಶಾಂತಕ್ಕ ಅತ್ತದ್ದು, ಅಮ್ಮ ಅಳುವ ಅಕ್ಕನಿಗೆ ತೆಕ್ಕೆ ಬಿದ್ದು – “ನಾನು ಜ್ವಾಪಾನ ಮಾಡತೀನಿ ” ..ಅಂದದ್ದು,  ಸೋದರ ಮಾವ ಶಂಕರಗವ್ಡ ಗೋಳಾಡಿ ಅಳುತ್ತ ಅಜ್ಜನ ಹೆಣದ ಮೇಲೆ ಬೀಳಲು ಬರುತ್ತಿದ್ದದ್ದು, ಕಲ್ಲಕ್ಕ- ಗಂಗಕ್ಕ ಇಬ್ಬರೂ ಅಳಲು ದ್ವನಿ ಬರದೆ  ಪರಿತಪಿಸುತ್ತಿದ್ದದ್ದು, ಒಳಗಿನಿಂದ ಅಜ್ಜನ ಹೆಣವನ್ನು ಎತ್ತಿಕೊಂಡು ಬಂದು ವಿಮಾನದಲ್ಲಿಟ್ಟದ್ದು…ಈ ಎಲ್ಲ ದ್ರುಶ್ಯ ಮಾತು ಗದ್ದಲ ಇದೇ ಈಗ ನಡೆದಶ್ಟು ಸ್ಪುಟವಾಗಿ ಚಿತ್ರಿತವಾಗಿದೆ.
“ಹುಲ್ಲೂರ ಮಂದಿ ಬಂದ್ರು”, “ಗದಗದವ್ರು ಬಂದ್ರು” “ಎಲ್ಲಾರೂ ಬಂದಂಗಾತು ಊರ ದಯ್ವದ ಪೂಜೆ ಮಾಡರಿ”… ಎಂದು ಊರವರು ಆಡುತ್ತಿದ್ದ ಮಾತುಗಳು ಬಾರಿಸುತ್ತಿದ್ದ ಹಲಗೆ, ಕಣಿ, ಬಜನಾ ಪದ ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತವೆ. ಕಣ್ಮುಂದೆ ಅಂದಿನ ಜೀವಂತ ದ್ರುಶ್ಯವನ್ನು ತಂದು ನಿಲ್ಲಿಸುತ್ತವೆ. ಕಯ್ಯಲ್ಲಿ ಹತಿಯಾರ ಹಿಡಿದು ಬರುತ್ತಿರುವ ಹಳಬರು, ಹೂಹಾರ  ಕಾಯಿ ಬಜನಾ ಮೇಳ ಸಹಿತ ಬಂದ ಬಂದುಬಾಂದವರು, ಒತ್ತರಿಸಿ ಬಂದ ದುಕ್ಕವನ್ನು ತಡೆ ಹಿಡಿದು ಅವಸರದ ಹೆಜ್ಜೆ ಹಾಕುವ ಹೆಣ್ಣು ಮಕ್ಕಳು, ಕಲ್ಮೇಶ್ವರ ಗುಡಿಮುಂದಿನಿಂದ ಮನೆವರೆಗಿನ ಈ ಚಿತ್ರಗಳು ಮತ್ತೆ ಮತ್ತೆ ಮೂಡಿಬಂದು  ಮನದಲ್ಲಿ ಅಜ್ಜನ ನೆನಪನ್ನು ಚಿರಸ್ತಾಯಿಗೊಳಿಸಿವೆ.  ನಾನು ಮೂರ್‍ನಾಲ್ಕು ವರ್‍ಶದವನಿದ್ದಾಗ ಮೂಡಿದ ಈ ದ್ರುಶ್ಯಾವಳಿ ಇಂದಿಗೂ ಮಾಸಿಲ್ಲ.
ನನ್ನ ನೆನಪಿನ ಕೋಶದಲ್ಲಿರುವ ಅಜ್ಜನ ಚಿತ್ರಗಳು ಕೆಲವೇ ಕೆಲವು. ಆದರೆ ಅವು ನನ್ನ ಬದುಕಿನುದ್ದಕ್ಕೂ ನನ್ನೊಂದಿಗಿರುವ ನಿದಿಗಳಾಗಿವೆ. ಅವ್ವ ಸತ್ತಾಗ ನಾನು ಈ ಅಜ್ಜನ ತೊಡೆಯ ಮೇಲೆ ಕುಳಿತು ಸುರಕ್ಶಿತ ಬಾವವನ್ನು ಅನುಬವಿಸಿದ್ದೆ. ಪಡಸಾಲೆಯಲ್ಲಿ ಕೂಡ್ರಿಸಿದ ಅವ್ವನ ಶವದ ಮುಂದೆ ಅಮ್ಮ, ಕಲ್ಲಕ್ಕ, ಗಂಗಕ್ಕ ಅಳುತ್ತಿದ್ದುದನ್ನು ನೋಡಿ ಕಂಗಾಲಾದ ನಾನು ಈ ಅಜ್ಜನ ತೊಡೆಯ ಮೇಲೆ ಕುಳಿತು ಬೆಚ್ಚಗಾಗಿದ್ದೆ.
ಹನಮಂತ ದೇವರ ಗುಡಿಯಲ್ಲಿ ಪಗಡಿಯಾಡುತ್ತಿದ್ದಾಗ, ಅಜ್ಜನಿಗೆ ಕವಡಿಹಾಕುವ ಸರತಿ ಬಂದಾಗ ಅವನ ಬದಲಾಗಿ ಹಟ ಮಾಡಿ ನಾನೆ ಕವಡಿ ಹಾಕಿದ್ದು ನೆನೆಪಿದೆ. ಆಟದ ಕವಡಿಯನ್ನು ಬಿಟ್ಟು ಬೇರೆ ಕವಡಿಯನ್ನು ನನಗೆ ಆಡಲು ಕೊಟ್ಟಿದ್ದರೂ ಅವುಗಳನ್ನು ತೆಗೆದುಕೊಂಡು ಆಡದೆ ಅಜ್ಜನನ್ನು ಕಾಡುತ್ತ ಕವಡಿಯನ್ನು ನಾನೇ ಹಾಕುತ್ತಿದ್ದೆ. ನಾನು ಕವಡಿ ಹಾಕಿದ್ದನ್ನು ಆಟಕ್ಕೆ ಪರಿಗಣಿಸುತ್ತಿದ್ದರೊ ಇಲ್ಲವೊ ಗೊತ್ತಾಗುತ್ತಿರಲಿಲ್ಲ. ನಾನಂತೂ ಕವಡಿ ಹಾಕಿ ಸಂತೋಶಪಡುತ್ತಿದ್ದೆ.
ಗುಡಿ ಮದ್ಯದ ಅಂಕಣದಲ್ಲಿ ಹಾಸಂಗಿ ಹಾಸಿ  ನಡುವೆ ಬೆಳಕಿಗಾಗಿ ಲ್ಯಾಂಪಿಟ್ಟು- ಎರಡು ಕಡೆ ಕಾಯಿಗಳನ್ನು ಹಚ್ಚಿ , ದಸ್ಯಾ, ಪಂಸವೀಸ್, ದೋನಿ ,ಚಾರಿ… ಎಂದು  ಎಣಿಸುತ್ತ- ದೋ ದಸ್ಯಾನ ಕಟ್ಟಿ,..ಹಣಗಟ್ಟಿಗಳಿಗೆ ಕಾಯಿ ನಡೆಸುತ್ತಿದ್ದುದನ್ನು ನೋಡ ನೋಡುತ್ತಿದ್ದಂತೆಯೆ ನಿದ್ದೆಗೆ ಜಾರುತ್ತಿದ್ದೆ. ದೀಪಾವಳಿ ಸಮಯದ ಆ ಚಳಿಯಲ್ಲಿ ಕೆಳಗೆ ಹಾಸಿದ ಕಂಬಳಿ ಕಾವು, ಅಜ್ಜನ ಬೆಚ್ಚನೆಯ ತೊಡೆ ಆಶ್ರಯ ಗೊತ್ತಿಲ್ಲದೆಯೆ ನಿದ್ದೆ ತರಿಸುತ್ತಿದ್ದವು. ಪಗಡಿ ಆಡಿದ ಗುಂಗಿನಲ್ಲಿಯೇ ಮಲಗುತ್ತಿದ್ದರಿಂದ ನಿದ್ದೆ ತುಂಬ ಪಗಡೆಕಾಯಿ, ಹಣತ,ಕಡತ … ಇವೆ ಓಡಾಡುತ್ತಿದ್ದವು.
ಗಂಡಗಚ್ಚಿ ಹಾಕಿ ಮಯ್ಮೇಲಿನ ಬೆವರನ್ನು ಲೆಕ್ಕಿಸದೇ ಹುರುಪಿನಿಂದ ಕಡಿದು ಹಾಕಿದ ಮಣ್ಣನ್ನು ಬುಟ್ಟಿಯಲ್ಲಿ  ತುಂಬುವ ಇಪ್ಪತ್ತು ಮೊವತ್ತು ಜನರ ಗುಂಪು, ತುಂಬಿದ ಬುಟ್ಟಿಯನ್ನು ಹೊತ್ತು ಏರಿ ಹತ್ತಿ  ಇನ್ನೊಬ್ಬರ ತಲೆಗೆ ಚಕ್ಕನೆ ವರ್‍ಗಾಯಿಸಿ ಮುಂದಿನ ಬುಟ್ಟಿಗಾಗಿ ಕಾಯುವ ಹೆಣ್ಣುಮಕ್ಕಳು, ತಾಸು ತಾಸಿಗೆ ಗುಡ್ಡದಂತೆ ಎತ್ತರವಾಗುತ್ತಿದ್ದ  ಕೆರೆಯ ಒಡ್ಡು, ತಿರುಗಾಡುತ್ತ “ಈ ಪಡ ಮುಗಸ್ರಿ”, “ಮಣ್ಣ ಇನ್ನೊಂದ ಸ್ವಲ್ಪ ಒತ್ತಿ ತುಂಬರಿ”…ಎಂದು ಸಲಹೆ ನೀಡುತ್ತಿದ್ದ ಅಜ್ಜ , ಅವನ ಜೊತೆಗೆ ಇರುತ್ತಿದ್ದ ಸಂಗಪ್ಪಜ್ಜ…. ಎಲ್ಲ ಚಿತ್ರಗಳೂ ಮಾಸದೆ ಉಳಿದಿವೆ- ಚಿತ್ತಪಟದಲ್ಲಿ. ಕೆರೆ ಒಂಡಿ ಏರಿ , ಅಜ್ಜನ ಜೊತೆ  ತಿರುಗಾಡುತ್ತ ಬಿಸಿಲು ಹೆಚ್ಚಾದಾಗ ಮರದ ನೆರಳಿಗೆ ಕೂತು ಕೊಡ ಬಾಗಿಸಿ ಯಾರೊ ತುಂಬಿಕೊಟ್ಟ ನೀರು ಕುಡಿದು ಅಜ್ಜನ ಹಿಂದೆಯೆ ಮನೆಗೆ  ಬಂದದ್ದು ನೆನೆಪಿದೆ.
ನಮ್ಮೂರ ಕೆರೆ ಕಡಿಸುವ ಸಂದರ್‍ಬದಲ್ಲಿ ಈಗಿನಂತೆ, ಟ್ರ್ಯಾಕ್ಟರ್, ಜೆಸಿಬಿ ಇಲ್ಲದ ಕಾಲದಲ್ಲಿ , ಬರಗಾಲ ಕಾಮಗಿರಿಯೆಂದು ನಡೆದ ಅಂದಿನ ಕೆಲಸವನ್ನು ಬೇರೆ ಬೇರೆ ಊರುಗಳಿಂದ ಬಂದು ಹುರುಪಿನಿಂದ ಕೆರೆ ಕಡಿದ ಕೆಲಸಗಾರರನ್ನು, ನಮ್ಮೂರಿನ ಕೆಲ ಪರಿಚಿತ ಗಂಡಸರು ಮತ್ತು ಹೆಣ್ಣುಮಕ್ಕಳ ಮುಕವನ್ನು ಇಂದಿಗೂ ಮರೆಯಲಾಗಿಲ್ಲ.
ಬಾಲ್ಯದಲ್ಲಿ ಬಹಳ ಹಟಮಾರಿಯಾಗಿದ್ದ ನಾನು ದಿನಕ್ಕೊಮ್ಮೆಯಾದರೂ ಸೆಟಗೊಂಡು ಅಮ್ಮನನ್ನು ಕಾಡುತ್ತಿದ್ದೆ. ಒಮ್ಮೆ ಸೆಟಗೊಂಡ ಸಂದರ್‍ಬದಲ್ಲಿ ಅಜ್ಜ ಕೊಟ್ಟ ಅಯ್ದರ ನೋಟನ್ನೆ ಹರಿದು ಹಾಕಿದ್ದೆ. ಅಜ್ಜ ಬಯ್ಯಲಿಲ್ಲ. ಹೊಡಿಯಲಿಲ್ಲ, ಸುಮ್ಮನೆ ನಕ್ಕುಬಿಟ್ಟ. ಅಮ್ಮ ಈ ಗಟನೆಯನ್ನು ಆಗಾಗ ನೆನೆಪಿಸುತ್ತಿದ್ದಳು. “ಅಯ್ದರ ನೋಟ ಹರಿದು ಹಾಕಿದ ಬಾಳ ಶ್ಯಾಣ್ಯಾ ಹುಡುಗ ಇವ” ಎಂದು  ಅಕ್ಕ ರುದ್ರಕ್ಕ ನನ್ನ ಅಜ್ನಾನದ ಕೆಲಸವನ್ನು ಹಾಸ್ಯಮಾಡಿ ನಗುತ್ತಿದ್ದಳು. ಗೆಳೆಯರ ಎದುರಿಗೆ ಅಪಮಾನ ಮಾಡುತ್ತಿದ್ದಳು.
ಇಂತಹದೇ ಇನ್ನೊಂದು ಸಂದರ್‍ಬ: ಸಾಯಂಕಾಲದ ಸಮಯ, ಯತಾರೀತಿ ಊಟಕ್ಕೊ ತಿನಿಸಿಗೊ ತಕರಾರು ತೆಗೆದು ಹೊರಗೆ ಬಂದೆ. ಕಯ್ಯಲ್ಲಿ ಬ್ಲೇಡ್ ಇತ್ತು. ಅಜ್ಜ ಕೆಲವೇ ದಿನದ ಹಿಂದೆ ಹೆಣೆಸಿದ ಹೊರಸದು. ಮನೆ ಗೋಡೆಗೆ ಹೊಂದಿಸಿ ನಿಲ್ಲಿಸಿದ್ದರು. ನಿಲ್ಲಿಸಿದ ಹೊರಸನ್ನು  ದಿನವೂ ಹಾಕಿಕೊಂಡು ಕೂಡ್ರುವಂತೆ ಕೂತೆ. ಕುತೂಹಲದಿಂದ ಮೂಲೆಯಿಂದ ಮೂಲೆಗೆ ಇರುವ ಹುರಿಗಳನ್ನು (ದಾರ) ಎಣಿಸಿದೆ, ಒಂದು ಕಡೆ ಹನ್ನೊಂದು ಇನ್ನೊಂದು ಕಡೆ ಏಳು ದಾರಗಳಿದ್ದವು. (ಈ ರೀತಿ ಏಳು ಹತ್ತು ಹೆಣಿಗೆಯ ಅಗತ್ಯಕ್ಕೆ ಬರುತ್ತವೆಯೊ ಇಲ್ಲವೆ ಯಾವುದಾದರೂ ಆಚರಣೆಯ ಸಂಕೇತವಾಗಿ ಬರುತ್ತವೆಯೊ ಗೊತ್ತಿಲ್ಲ. ಪಾಂಡವ ಕವ್ರವರ ಅಕ್ಶೋಹಿಣಿ ಸಯ್ನ್ಯದ ಪ್ರತೀಕವಿರಬಹುದೆ ಎಂಬುದು ನನ್ನ ಈಗಿನ ಅನುಮಾನ ) ಹೊರಸಿನ ಉಳಿದ ಬಾಗದಲ್ಲಿ ಮೂರು ಮೂರು ಎಳೆಯ ಚಿಕ್ಕ ಚಿಕ್ಕ ವಜ್ರಾಕ್ರುತಿಗಳಿದ್ದವು.ಎಣಿಸುವ ಆಟ ಆಡುತ್ತ ಆಡುತ್ತ ಆ ದಾರದ ಎಳೆಗಳ ಮೇಲೆ ಕಯ್ ಎಳೆದೆ. ಕಯ್ಯಲ್ಲಿಯ ಬ್ಲೇಡ್ ನಾಲ್ಕು ಎಳೆಗಳನ್ನು ಕತ್ತರಿಸಿಬಿಟ್ಟಿತ್ತು. ಒಮ್ಮೆಲೆ ಗಾಬರಿಯಾದೆ. ಹೆದರಿಕೆ ಬಂತು. ಅದೇ ಹೊತ್ತಿಗೆ ನನ್ನ ನ್ಯಾಯಕ್ಕೆ ಕಾರಣವಾಗಿದ್ದ ರುದ್ರಕ್ಕ ಹೂರಗೆ ಬಂದು ಹೊರಸಿನ ತುದಿಗೆ ಕೂತಳು.ಹರಿದ ಎಳೆಗಳ ಮೇಲೆ ಕೂತು ಮುಚ್ಚಲು ಪ್ರಯತ್ನಿಸಿದೆ. ಅಶ್ಟೊತ್ತಿಗೆ ಮಾವನೂ ಹೊರಗೆ ಬಂದ. ಎಳೆ ತುಂಡಾಗಿ ಜೋತು ಬಿದ್ದದ್ದನ್ನು ನೋಡಿ ಒಳಗೆ ಹೊಗಿ ಅಜ್ಜನಿಗೆ ಹೇಳಿದ. ಅಮ್ಮನೂ ಬಂದು ನೋಡಿದಳು. ಅಜ್ಜನೂ ನೋಡಿದ. ಮತ್ತೆ ನಕ್ಕು ಒಳಗೆ ಹೋದ.
ನಾ ಮಾಡಿದ ತಪ್ಪಿನಿಂದಾಗಿ ಅಪಮಾನವೆನಿಸಿತು.  ಮಾವ ಅಕ್ಕಂದಿರ ಎದುರು ಹೀಗೆ ಮಾಡಿದ್ದಕ್ಕೆ ನಾಚಿಕೆಯಾಯಿತು. ಹಟವನ್ನು ಮುಂದುವರೆಸಿ ಅಳುತ್ತ ಕುಳಿತೆ. ಚಿಗವ್ವ ಗಂಗಕ್ಕ ಬಂದು ರಮಿಸಿದರೂ ಹಟ ಬಿಡದೆ ಅಲ್ಲಿಯೇ ಕೂತೆ. ಅಮ್ಮನೇ ಬಂದು ರಮಿಸಿ ಎತಗೊಂಡು ಒಳಗೆ ನಡೆದಳು. ಅಶ್ಟೊತ್ತಿಗೆ ಅಪ್ಪನೂ ಮನೆಗೆ ಬಂದ. ಅಜ್ಜ ಅಪ್ಪ ಹೊರಗೆ ಏನೇನೊ ಮಾತಾಡುತ್ತಿದ್ದರು. ನಾನು ಹಟ ಬಿಟ್ಟು ಅಮ್ಮ ಹಿಡಿದಿದ್ದ ಗಂಗಾಳದಲ್ಲಿಯ ಬಿಸಿ ಬಿಸಿ ಚಹಾನ ಊದಿ ಊದಿ ಕುಡಿಯುವುದರಲ್ಲಿ ಮಗ್ನನಾಗಿದ್ದೆ.
ಹೀಗೆ ಹರಿದು ಹಾಳು ಮಾಡಬೇಕೆನ್ನುವ ಉದ್ದೇಶಕ್ಕಿಂತ ಪ್ರಯೋಗ ಮಾಡುವ ಕುತೂಹಲ ನನ್ನಲ್ಲಿದ್ದುದರಿಂದ ಮತ್ತೂ ಒಮ್ಮೆ ಇಂತಹ ತಪ್ಪು ನಡೆದುಹೋಯಿತು. ಆಟ ಆಡುತ್ತ ಹೊಸ ತೆಕ್ಕೆ (ಲೋಡು) ಗಳ ಮೇಲೆ ಬ್ಲೇಡ್ ಆಡಿಸಿಬಿಟ್ಟೆ. ಹರಿದ ಬಾಗವನ್ನು ಕೆಳಕ್ಕೆ ಮುಕಮಾಡಿಟ್ಟು ಅಲ್ಲಿಂದ ಕಾಲ್ಕಿತ್ತೆ.
ಆಟ ಆಡಿ ಮನೆಗೆ ಬರುವ ಹೊತ್ತಿಗೆ ತೆಕ್ಕೆ ಹರಿದದ್ದು ಗೊತ್ತಾಗಿತ್ತು. ನಾ ಬ್ಲೇಡ ಹಿಡಿದಿದ್ದನ್ನು ಮಾವ ನೋಡಿದ್ದ. ಅದು ನನ್ನದೆ ಕ್ರುತ್ಯ ಎಂದು ಗೊತ್ತಾಗಿತ್ತು. ಅಜ್ಜ ಈ ಸಾರೆಯೂ ಬಯ್ಯಲಿಲ್ಲ. ಹೀಗೆ ಮಾಡಬಾರದೆಂದರೂ ಕಯ್ಮೀರಿ ಈ ತಪ್ಪು ನಡೀತಲ್ಲ ಅಂತ ನನ್ನ ಮೇಲೆ ನನಗೆ ಸಿಟ್ಟು ಬಂತು.ಅಪರಾದದ ಬಾವನೆ ಹಾಗೆಯೇ ಉಳಿಯಿತು. ಈಗಲೂ ಉಳಿದಿದೆ. ಗಟನೆ ನೆನಪಾದ ತಕ್ಶಣ ಮನಸ್ಸು ಮುದುಡುತ್ತದೆ.ಇಂತಹ ಸಂದರ್‍ಬದಲ್ಲಿ ಅಜ್ಜ ನನ್ನ ಮನಸ್ಸನ್ನು ಅರ್‍ತ ಮಾಡಿಕೊಂಡ ರೀತಿ ಅಚ್ಚರಿಯುಂಟು ಮಾಡುತ್ತದೆ.
ಅವ್ವ ಸತ್ತ ಎರಡು ಮೂರು ದಿನಕ್ಕೆ ಸತ್ತ ತಮ್ಮನ ಶವವನ್ನು ಹಿತ್ತಲಕ್ಕೆ ಒಯ್ಯುವ ಮುಂದ ಅಜ್ಜನೂ ಇದ್ದ. ಸಣ್ಣ ಹುಡುಗರು ನೋಡಬಾರದು ಅಂತನಮ್ಮನ್ನ ಚಾವನಿ ಮಗ್ಗಲಿದ್ದ ಕೋಣ್ಯಾಗ ಕೂಡಿಸಿದ್ರು. ಅರ್‍ದ ಕುತೂಹಲ ಅರ್‍ದ ಹೆದರಿಕೆ ಇದ್ದ ನಾನು ಕಿಡಕ್ಯಾಗಿಂದ ನೋಡಿಬಿಟ್ಟೆ. ಅಂದಿನ ಆ ದ್ರುಶ್ಯ ಇನ್ನೂ ಮಾಸಿಲ್ಲ.
ಒಂದಿನ ಹೊರಗಿಂದ ಮನೆಗೆ ಬಂದು “ಯಮ್ಮಾ, ಅಜ್ಜ ಎಲ್ಲಿ ಹೋಗ್ಯಾಣ ” ಎಂದು ಕೇಳಿದೆ.”ಗವ್ರಿ ಸರುವಿಗೆ ಗುಂಡ ತಗಸಲಿಕ್ಕೆ ಹೋಗ್ಯಾಣ” ಎಂದು ಹೇಳುವುದಶ್ಟೇ ತಡ ಹಳ್ಳದ ದಾರಿ ಹಿಡಿದ ಗವ್ರಿ ಸರುವಿಗೆ ಒಂದೇ ನೆಗೆತಕ್ಕೆ ಓಡಿ ಬಂದಿದ್ದೆ. ಗುಂಡ ತೋಡುವುದನ್ನು ನೋಡ್ತ ನಿಂತುಬಿಟ್ಟಿದ್ದೆ- ಕೆಲಸ ಮುಗಿಯುವವರೆಗೆ, ಹಸಿವಿನ ಪರಿವೆ ಇಲ್ಲದೆ.
ಗವ್ರಿ ಸರುವಿನಲ್ಲಿ ಒಂದಾಳ ಕೆಳಗ ಇಬ್ರು, ನಡುವೆ ಮೆಟಗಟ್ಟಿ ಮಾಡುವಲ್ಲಿ ಇಬ್ರು ,ಉಸಗ ಮಣ್ಣ ಎತ್ತಿಕೊಡಾವ್ರು ಇಬ್ರು ದೂರತ ಚೆಲ್ಲಿ ಬರಾವ್ರು ಇಬ್ರು- ಹೀಂಗ ಓಡಾಡಿ ಕೆಲಸ ಮಾಡಿ ಮದ್ಯಾಹ್ನಕ್ಕ ಗುಂಡ ತಾಯಾರ ಮಾಡಿಬಿಟ್ರು. ಅಜ್ಜ, ಸಂಗಪ್ಪಜ್ಜ, ಸಣ್ಣ ರುದ್ರಗವ್ಡ ಮಾವ ಮತ್ತ ಇನ್ನ್ಯಾರೊ ಇದ್ದರು. ನೋಡ್ ನೋಡ್ತ ನೀರು ತುಂಬಿತು. ರಾಡಿ ಇದ್ದದ್ದಕ್ಕ ಒಂದ ಸಲ ಎತ್ತಿ ಚೆಲ್ಲಿದರು. ತಿಳಿ ಬಂದ ಕೂಡಲೇ ಕುಡದ ನೋಡಿದರು. ಬೇಸಿ ಅದಾವು ಅಂದರು. ಅಯ್ದ ಕೊಡ ತುಂಬಿ ದೇವರ ಗುಡಿಗೆ ಕಳಿಸಿದರು. ಹಿರಿಯಾರೆಲ್ಲ ಮಾತಾಡತ ಜಾಲಿಗಿಡದ ನೆಳ್ಳಿಗೆ ಕೂತರು. ಅಶ್ಟೊತ್ತಿಗೆ ಊರನ್ನ ಮಂದಿ ಹಳ್ಳಕ್ಕ ಮನಿಗೆ ಇರುವಿ ಸಾಲಿನಂಗ ಹರಿದಾಡತೊಡಗಿದರು. ನೀರಿಲ್ಲದ ಕಂಗಾಲಾದ ಮಂದಿಗೆ ನಿದಿ ಸಿಕ್ಕಂಗಾತು.
ಮುಂಗಾರಿನ ಹಂಗಾಮು ಮುಗಿಯಾಕ ಬಂದ್ರೂ ಇನ್ನೂ ಮಳೆ ಸುಳಿವೇ ಇರಲಿಲ್ಲ. ಕೆರೆ ಬತ್ತಿ ಹೋಗಿತ್ತು. ಹಳ್ಳದಾಗುನೂ ಬಸಿ ಬಸಿ ನೀರಿದ್ವು. ಆದರ ಬಳಸಾಕ ಕುಡಿಯಾಕ ನೀರಿಗೆ ಬರ ಬಂದಿತ್ತು. ಆವಾಗ ಬೆಣ್ಣಿಹಳ್ಳದ ಮಗ್ಗುಲಲ್ಲಿ ನಮ್ಮ ಹೊಲದಲ್ಲಿ ಹರಿದಿರುವ ಗವ್ರಿ ಸರುವಿನಲ್ಲಿ ನೀರಿನ ಗುಂಡ ತೋಡಿಸಿದ್ದ ಅಜ್ಜ. ಅರು ಆರು ಅಡಿ ಅಗಲ ಎಂಟಹತ್ತಡಿ ಆಳದ ದೊಡ್ಡ ವರತಿಗೆ ಗುಂಡ ಎಂದು ಕರೆಯುತ್ತಾರೆ, ಹಳ್ಳಿಯಲ್ಲಿ. ಅಜ್ಜ ಕೆರೆ ಕಡಿಸುವಾಗ ಎಶ್ಟು ಮುತುವರ್‍ಜಿ ವಹಿಸಿದ್ದನೊ ಈಗಲೂ ಮುಂದ ನಿಂತು ತನ್ನ ಹೊಲದಾಗ ಗುಂಡ ತೆಗೆಸಿದ.
ಬಾಲ್ಯದ ನನ್ನ ತಿಳುವಳಿಕೆಗೆ ನಿಲುಕಿದ ಅಜ್ಜನ ಚಿತ್ರ ಇಶ್ಟು ಮಾತ್ರ. ಆದರೆ ಅದರ ಪರಿಣಾಮ ಮಾತ್ರ ಅನನ್ಯ.
ತಂದೆ ತಾಯಿ ಕಳೆದು ಕೊಂಡು ಅನಾತನಾದ  ಅಪ್ಪನ ಬಗೆಗೆ ಕೇಳಿ ಅವನನ್ನು ಚಿಕ್ಕತಡಸಿಯಿಂದ ಕಡದಳ್ಳಿಗೆ ಕರೆದು ಕೊಂಡು ಬರುವ ಸಾಹಸಕ್ಕೆ ಕಯ್ಹಾಕಿದ ಅಜ್ಜನ ಬಗ್ಗೆ ಹೆಮ್ಮೆ ಅನಿಸುತ್ತದೆ. ಸಿಟ್ಟಿನ ಸ್ವಬಾವದ ಮುಗ್ದ-ಯತಾರ್‍ತ ಅಪ್ಪನನ್ನು ಬೆಳೆಸಿದ್ದು ನಿಜಕ್ಕೂ ದೊಡ್ಡ ಸವಾಲು. ಅಪ್ಪನ ಮೊದಲ ಹೆಂಡತಿ ದೊಡ್ಡವ್ವ ಅಕಾಲಿಕ ಮರಣವನ್ನಪ್ಪಿದಾಗ ತನ್ನ ಮಗಳನ್ನೇ (ಅವ್ವ) ಕೊಟ್ಟು ಮದುವೆ ಮಾಡಿ  ಅಮಾಯಕ ಅಪ್ಪನಿಗೆ ಹೊಸ ಬದುಕು ಕಟ್ಟಿಕೊಟ್ಟ ಅಜ್ಜನ ವ್ಯಕ್ತಿತ್ವಕ್ಕೆ ಏನೆನ್ನಬೇಕು ತಿಳಿಯದು! ಅವ್ವನ ದಾಂಪತ್ಯ ನಾಲ್ಕು ಮಕ್ಕಳನ್ನು ಪಡೆದು ಇನ್ನೇನು ಸಂತ್ರುಪ್ತ ವಾಗಿದೆ ಎನ್ನುವಶ್ಟರಲ್ಲಿ ಗಟಿಸಿದ ಅವ್ವನ ಸಾವು ಅಜ್ಜನ ಮೇಲೆ ಎಂತಹ ಪರಿಣಾಮ ಬೀರಿರಬಹುದು? ಹಸುಳೆಗಳಾದ ನಾಲ್ಕು ಮೊಮ್ಮಕ್ಕಳನ್ನು ಬೆಳೆಸುವ, ಯತಾರ್‍ತ ಕಾಯಕ ಜೀವಿ ಆಪ್ಪನನ್ನು ಸಂಬಾಳಿಸುವ  ಹೊಣೆಗಾರಿಕೆ ಮತ್ತೆ ಸವಾಲಾಗಿ ಕಾಡಿರಬಹುದು! ಎಲ್ಲವನ್ನೂ ಮಯ್ಮೇಲೆ ಹೊತ್ತುಕೊಂಡು ನಮ್ಮನ್ನೆಲ್ಲ ದಡಸೇರಿಸುವ ಉತ್ಸಾಹದಲ್ಲಿದ್ದ ಅಜ್ಜ ಅವ್ವ ಸತ್ತ ಎರಡೇ ವರ್‍ಶಗಳಲ್ಲಿ ನಮ್ಮನ್ನಗಲಿದ್ದು ನನ್ನ ಜೀವನದ ದೊಡ್ಡ ದುರಂತ.
ನನ್ನ ಬದುಕಿನ ಪವಿತ್ರ ನೆನಪಾಗಿ, ಪ್ರತಿ ಕ್ಶಣದಲ್ಲೂ ನನ್ನ ಕಯ್ಹಿಡಿದು ನಡೆಸುವ ಪ್ರೇರಕ ಶಕ್ತಿಯಾಗಿರುವ ಅಜ್ಜ ಅಪಾರ ಗವ್ರವದ ಮೂರ್‍ತಿಯಾಗಿದ್ದಾನೆ, ನನ್ನೊಳಗೆ ಲೀನವಾಗಿದ್ದಾನೆ, ನನ್ನ ಪ್ರತಿ ನಡೆನುಡಿಯ ಅಬಿವ್ಯಕ್ತಿಯಾಗಿದ್ದಾನೆ.
(ಚಿತ್ರ: http://kanaja.in )