Thursday, June 9, 2016

ನಡೆಯಲ್ಲಿ ಏಕವಾದರೋ



ನಡೆಯಲ್ಲಿ ಏಕವಾದರೋ 

ನಡೆಗೆಟ್ಟ ಗುರುವಿಗೆ ನುಡಿಗೆಟ್ಟ ಶಿಷ್ಯನು 

ಮಡಿಹುಡಿ ಮೀರಿ ನಿಂತಾರ । ತಿರುಗಾಡ್ತ
ದಡಸೇರೊ ದಾರಿ ತೋರ್ಯಾರ ।

ತತ್ವದ ಬೀಜಗಳ ಬಿತ್ತುತ್ತ ನಾಡಲ್ಲಿ 

ಮುತ್ತಿನ ರಾಶಿ ಮಾಡಿದರು । ಗುರು ಶಿಷ್ಯ 
ಬುತ್ತಿ ಹಂಚಿದರು ಲೋಕದಲಿ ।

ಹಾಕ್ಯಾಡೊ ಕುಲಮತ ಯಾಕೆಂದು ಕೇಳುತ 

ತೂಕದ ಮಾತು ಸಾರಿದರು । ಗುರುಶಿಷ್ಯ 
ಏಕವಾದರು ನಡೆಯಲ್ಲಿ ।

ಶರಿಫನು ಬೇಕಾದ್ರೆ ಮರಿಬೇಕು ನಮನೆಲ್ಲ 

ತೊರಿಬೇಕು ನಮ್ಮ ಮನೆಯನ್ನು । ಎನ್ನುತಲೇ 
ಗುರುವು ಗೋವಿಂದ ಹೊರಬಂದ ।

ಆರಿಯುವ ಶಿಷ್ಯನ್ನ ತೊರೆಯುವ ಮಾತಿಲ್ಲ 

ಎರವಾಯ್ತು ಇಂದು ಮನೆಎನಗೆ । ಎನ್ನುತ್ತಾ 
ಹೊರನಡೆದನಂದು  ಗೋವಿಂದ । 

ತನುವಿನ ಮಡಿಗಿಂತ ಮನಸಿನ ಮಡಿಮುಖ್ಯ 

ವಿನಯದ ನಡೆಯು ಅತಿಮುಖ್ಯ । ನಮ್ಮದು 
ಘನತೆಯ ಮಾರ್ಗ ಅರಿಯಿರೋ ।

ಮಿಂಚಿನ ವೇಗದಿ ಸಂಚಾರ ಮಾಡುತ್ತ 

ಹಂಚಿದರು ಲೋಕ ಅನುಭಾವ । ಗುರುಶಿಷ್ಯ 
ಸಂಚು ತಿಳಿಲಿಲ್ಲ  ಲೋಕಕ್ಕ ।

ಮೂಗ ನತ್ತನು  ಮಾರಿ ಬೇಗ ಶಂಕರಿ ತಂದು 

ಯೋಗಿ ಗೋವಿಂದ ಗುರುವಿಗೆ । ನೀಡಿದ 
ಬಾಗುತ್ತ ಶಿಷ್ಯ ಶರಿಫನು ।    

ಅಕ್ಕ ದ್ಯಾಮವ್ವನ ಚಿಕ್ಕ ಮೂರುತಿ ಸುಟ್ಟು  

ನಕ್ಕೋತ ಚಳಿಯ ಕಾಸಿದರು । ಗುರುಶಿಷ್ಯ 
ಮಕ್ಕಳಾಟವನೆ ಆಡಿದರು ।

ಸಿದ್ಧ  ಪತ್ತರಿ ಶಂಕರಿ ಶುದ್ಧ ಮನದಲಿ ಸೇವ್ಸಿ 

ಬದ್ಧ ಜೀವನವ  ಮೀರಿದರೂ । ಇಬ್ಬರು 
ಚೋದ್ಯ ಉಣಿಸಿದರು ಲೋಕಕ್ಕೆ ।

ಹೆಂಡಕುಡುಕರು ಎಂದು  ಪುಂಡ ಪೋಕರಿ ಎಂದು 

ಕಂದಂಗ   ಬೈದು ಇಬ್ಬರನು । ಕೊನೆತನಕ 
ಕಂಡರಿಯಲಿಲ್ಲ  ನಿಜರೂಪ

ಲೋಕ ನಿಂದಿಸಿದಾಗ ಹಾಕಿದ ಜನಿವಾರ
ನೂಕಿ ಕುಲಜಾತಿ ದೂರಕ್ಕೆ । ಗೋವಿಂದ
ನ  ಕವನೆ ಕೊಟ್ಟ ಶರಿಫನಿಗೆ ।



















No comments: