Thursday, May 28, 2020

ಸಲ್ಲಾಪ ೨೦

ಸಲ್ಲಾಪ

ನಂದಳಿಕೆಯ ನಾರಣಪ್ಪನು
ಹೊಸಗನ್ನಡದ ಮುಂಗೋಳಿ !
ರಾಮಾಶ್ವಮೇಧ ಪಟ್ಟಾಭಿಷೇಕ
ಸುಂದರ ಕಾವ್ಯದ ಕತೆಕೇಳಿ !

ನೀರು ಇಳಿಯದ ಗಂಟಲಿನಲ್ಲಿ
ಕಡಬು ತುರುಕುವುದೇಕಂತೆ !
ಹೃದಯ ಮನೋರಮೆ ರೂಪವ ತಾಳಿ
ಪ್ರಶ್ನೆ ಮಾಡಿದಳೀ ಕಾಂತೆ !

ದೈಹಿಕ ಶಿಕ್ಷಕ ಮಾಡಿಸಿಬಿಟ್ಟನು
ಪದಪದಗಳಿಗೂ ವ್ಯಾಯಾಮ !
ಗದ್ಯ ಹೃದ್ಯದ ಸವಿರುಚಿ ಸೃಷ್ಟಿಯು
ಭಾಷೆಗೆ ನವೀನ ಆಯಾಮ !

ಪರಂಪರೆಯನು ಮುರಿದು ಕಟ್ಟಲು
ತೆರೆಯಿತು ವಾಙ್ಮಯ ರಹದಾರಿ !
ಮುದ್ದಣ ನಾಮವು ಅಮರವಾಯಿತು
ಓದುಗರೆಲ್ಲರ ಮನಸೇರಿ !

ಕಾವ್ಯಕೆ ಹೊಸತು ವ್ಯಾಖ್ಯೆಯ ನೀಡಿತು
ಗಂಡ ಹೆಂಡತಿ ಸಲ್ಲಾಪ !
ಕವಿ ಓದುಗರ ಸಹಜ ಬಂಧದ
ಜೀವ ಸಂವೇದನೆ ಪ್ರತಿರೂಪ !

ಚಂದ್ರಗೌಡ ಕುಲಕರ್ಣಿ
೨೦-೦೫-೨೦

ರಾಮನ ಹಂಗು - ೧೯

ಬನರಾಮನ ಹಂಗು

ವ್ಯಾಸಗುರುಗಳೆ ಹೊಗಳಿದರಲ್ಲ
ದಾಸರು ಎಂದರೆ ಇವರೆಂದು !
ಶಿನಪ್ಪನಲ್ಲದೆ ಯಾರಿಗೂ ಸಿಗದು
ಇಂತಹ ಭಾಗ್ಯವು ಎಂದೆಂದು !

ಪೂರ್ವಾಶ್ರಮದಿ ಲೋಭಿತನದಲಿ
ಸಂಪತ್ತಿನಾಸೆಗೆ ಬಿದ್ದವರು !
ಬಲು ಅಪರೂಪ ಭವಸಾಗರವನು
ಈಜುತ ಈಜುತ ಗೆದ್ದವರು !

ಗೋಪಾಳ ಪುಟ್ಟಿ ಹಿಡಿಸಿದಳೆಂದು
ಕೊಂಡಾಡಿದರು ಹೆಂಡತಿಗೆ !
ಕೀರ್ತನ ರಚಿಸಿ ಗೌರವ ಕೊಟ್ಟರು
ಸಾವಿರದಂತಹ ಸಂತತಿಗೆ !

ನೀನ್ಯಾಕೆನ್ನುತ ನಾಮದ ಬಲದಿ
ರಾಮನ ಹಂಗನೆ ತೊರೆದವರು !
ಹಾಳು ಮಾಡಲಿ ಬೇಡಿರಿ ಎನ್ನುತ
ಮಾನವ ಜನ್ಮವ ಪೊರೆದವರು !

ಶರಣರ ವಚನದ ಸತ್ವವ ಸೇರಿಸಿ
ಉಗಾಭೋಗವ ಬರೆದವರು !
ಒಂಬತ್ ಕೋಟಿಗೆ ಒಡೆಯರಾದರೂ
ತಿರುಪೆ ಭಿಕ್ಷೆಗೆ ಅಲೆದವರು !

೨೭-೦೫-೨೦೨೦

ಕಲಿಯದವರ ಸುರಧೇನು - ೧೮

ಕಲಿಯದವರ ಸುರಧೇನು !

ಕನ್ನಡ ನಾಡಿನ ದೇಸಿ ನುಡಿಯಲಿ
ಮೂಡಿ ಬಂದಿದೆ ಈಕಥನ !
ಒಂದೇ ಉಸಿರಲಿ ಕಟ್ಟಿ ಕೊಟ್ಟವ
ಕೋಳಿವಾಡದ ನಾರಯಣ !

ಹಲಗೆ ಬಳಪವ ಹಿಡಿಯಲಾರದೆ
ಹುಟ್ಟು ಪಡೆಯಿತು ಭಾರತವು !
ಓದಿ ವಾಚಿಸಿ ಖುಷಿಪಡುತಿಹರು
ಅಖಂಡ ಮಂಡಲ ಈಜಗವು ! 

ಇಟ್ಟ ಪದವನು ಅಳಿಸಲಾರದ
ಶ್ರೇಷ್ಠ ಪ್ರತಿಭೆಯೆ ಸೋಜಿಗವು !
ಉಲಿಹು ಕೆಡಿಸದ ಬರಹ ಬಗೆಯನು
ಹೊಗಳುವುದಲ್ಲ ಮೂಜಗವು !

ಕೃಷ್ಣ ಕತೆಯನು ತಿಳಿಯ ಹೇಳಿದೆ
ಕುವರ ವ್ಯಾಸನ ಭಾಮಿನಿಯು !
ಕಾವ್ಯದೊಡಲಲಿ ತುಂಬಿ ತುಳುಕಿದೆ
ದ್ವಾಪರದುನ್ನತ ಸಂಸ್ಕೃತಿಯು !

ಕಲಿತ ಜನರಿಗೆ ಕಲ್ಪವೃಕ್ಷವು
ಕಲಿಯದವರಿಗೆ ಸುರಧೇನು !
ನುಡಿಯ ಕನ್ನಡ ಬೆಡಗಿನ ರೂಪವು
ಬೆರಸಿದಂತಿದೆ ಹಾಲ್ಜೇನು !

೧೭-೦೫-೨೦೨೦

ಹಿಟ್ಟಿನ ಕೋಳಿಯ ಕೂಗು - ೧೭

ಹಿಟ್ಟಿನ ಕೋಳಿಯ ಕೂಗು !

ನೆನಪಲ್ಲುಳಿದಿದೆ ಎಲ್ಲರ ಮನದಲಿ
ಅಮೃತಮತಿಯ ಪಾತ್ರ !
ಜನ್ನ ಕವಿಯು ಕೆತ್ತಿ ನಿಲಿಸಿದ
ಅದ್ಭುತ ಜೀವಿತ ಚಿತ್ರ !

ವಿಮಲ ಜಲದ ಹೊನಲನು ತೊರೆದು
ತಿಪ್ಪೆಯಲಾಡಿತು ಹಂಸ !
ಅಷ್ಟಾವಕ್ರನ ಗಾನಕೆ ಸೋತು
ರಾಜಗೆ ಮಾಡಿತು ಮೋಸ‌ !

ತಾಯಿ ಮಗನ ಸಂಕಲ್ಪ ಹಿಂಸೆಗೆ
ಕೂಗಿತು ಹಿಟ್ಟಿನ ಕೋಳಿ !
ನಾಯಿ ನವಿಲು ಏಳು ಜನುಮವ
ಸುತ್ತಿ ಬರುವ ಪಾಳಿ‌ !

ಜನ್ನಯಶೋಧರ ಚರಿತೆ ತಿಳಿಪುದು
ಹಿಂಸೆಯ ಸೂಕ್ಷ್ಮ ರೂಪ !
ಕಣ್ಣಿನ ಮುಂದೆ ಕಟ್ಟಿಬಿಡುವುದು
ಉಣುವ ಜೀವಿಯ ತಾಪ !

ಅದ್ಭುತ ಕಂದ ಛಂದದ ಬಳಕೆಯು
ನಾಲ್ಕು ಸಾಲಿನ ಪದ್ಯ !
ವಾಙ್ಮಯ ಪ್ರೇಮಿ ರಸಿಕರೆಲ್ಲರೂ
ಸವಿಯಲೇ ಬೇಕು ಚೋದ್ಯ !

ಚಂದ್ರಗೌಡ ಕುಲಕರ್ಣಿ
೨೩-೦೫-೨೦೨೦

ಮಾಡಿದೆನೆನ್ನದ ಬಸವ - ೧೨

ಮಾಡಿದೆನೆನ್ನದ ಬಸವ

ಕೂಡಲ ಸಂಗನ ಮುಟ್ಟಿ ಪೂಜಿಸಿ
ಹುಟ್ಟನುಗೆಟ್ಟ ಬಸವ !
ಗುರುಲಿಂಗೆರಡಕು ವಂಚನೆಗೈಯದೆ
ತನುಮನ ಕೊಟ್ಟನು ಬಸವ !

ಮಹಾಮನೆಯಲ್ಲಿ ಓಗರವಿಕ್ಕುತ
ಮಾಡಿದೆನೆನ್ನದ ಬಸವ !
ಲಿಂಗದ ಸ್ಮರಣೆ ಘನಘನವಾದರು
ಮನಕಿರಿದೆನ್ನದ ಬಸವ !

ಮಂತ್ರಿ ಮಹೋದಯ ಭಕ್ತಿಭಂಡಾರಿ
ವಿನಯವ ಮೆರೆದ ಬಸವ !
ಕಕ್ಕಯ ಚನ್ನಯ ದಾಸನ ಮನೆಯಲು
ಭಿಕ್ಷೆಯ ಬೇಡಿದ ಬಸವ !

ವೇದವೇದಾಂಗದ ನಾದವ ತೊರೆದು
ಸೂಳ್ನುಡಿ ನುಡಿದನು ಬಸವ !
ಪರಧನ ಬಯಸದ ಪರಸತಿಗೆಳಸದ
ಛಲವನು ಮರೆದ ಬಸವ !

ಚಂದ್ರಗೌಡ ಕುಲಕರ್ಣಿ
೯೪೪೮೭೯೦೭೮೭

ರಾಮನಾಥನ ಮೆರೆದವ - ೯

ರಾಮನಾಥನ ಮೆರೆದವ

ಮೊದಲ ವಚನಕಾರನೆಂಬ
ಬಿರುದು ಪಡೆದನು ದಾಸಯ್ಯ !
ಬಿಸಿಲು ನಾಡು ಮುದ್ದನೂರಿನ
ಹಿರಿಯ ಭಕುತನು ದಾಸಯ್ಯ !

ಸಿರಿಯನಿತ್ತರೂ ಕರಿಯನಿತ್ತರೂ
ಒಪ್ಪಿಕೊಳ್ಳದ ದಾಸಯ್ಯ !
ಶರಣ ಸೂಳ್ನುಡಿ ಗಳಿಗೆ ಇತ್ತರೂ
ಅಪ್ಪಿಕೊಳ್ಳುವ ದಾಸಯ್ಯ !

ಹಸಿವ ಒಡಲಿಗ ಹುಸಿವ ಒಡಲಿಗ
ಎಂಬ ದಿಟವನು ನುಡಿದವನು !
ಹರಿದ ಗೋಣಿಗೆ ಕಳವೆ ತುಂಬುವ
ಅಳಿಯ ಮನವನು ತಡೆದವನು !

ಇಳೆಯು ನಿಮ್ಮದು ಬೆಳೆಯು ನಿಮ್ಮದು
ವಾಯು ನಿಮ್ಮದು ಎಂದವನು !
ಹಸಿವೆ ಹಾವು ಬಸಿರು ಹೊಕ್ಕರೆ
ವಿಷದ ನೋವಿಗೆ ಬೆಂದವನು !

ಇಲಿಯ ಕಂಡಡೆ ಪುಟಿದು ನೆಗೆಯುವ
ಮಠದ ಬೆಕ್ಕನು ಜರೆದವನು !
ಸಟೆಯ ಭಕುತಿಗೆ ದಿಟವ ಸ್ಪರ್ಶಿಸಿ
ರಾಮನಾಥನ ಮೆರೆದವನು !

ಚಂದ್ರಗೌಡ ಕುಲಕರ್ಣಿ
೨೫-೦೫-೨೦೨೦

ಸಂಜೀವಿನಿ - ೭

ಸಂಜೀವಿನಿ

ದುರ್ಗಸಿಂಹನು ಪಂಚತಂತ್ರವ
ಕನ್ನಡಕಿಳಿಸಿದ ಧೀಮಂತ !
ಎಲ್ಲ ಪಾತ್ರದ ಗುಣದೋಷಗಳು
ನಮ್ಮೊಳು ಈಗಲೂ ಜೀವಂತ !

ವ್ಯಸನಿ ಕುವರರು ಚತುರರಾದರು
ಅಮರ ಕತೆಗಳ ಕೇಳುತ್ತ !
ಕರಟಕ ದಮನಕ ಬುದ್ಧಿಯ ತೊರೆದರು
ಅರಿಯುತ ಬಾಳಿನ ನಿಜಸತ್ವ !

ಸಿಂಹ ಎತ್ತು ಮಂಗ ಹಾವು
ಮನುಜ ಸ್ವಭಾವದ ಪ್ರತಿರೂಪ !
ಪ್ರತಿ ಉತ್ಪನ್ನ ಮತಿಯು ಇರದಿರೆ
ಬದುಕೆ ಒಂದು ಜಡಕೂಪ !

ಕಾಶ್ಮೀರ ರಾಜ ಇರಾನ ದೊರೆಗೆ
ಕೊಟ್ಟು ಕಳಿಸಿದ ಕೃತಿರತುನ !
ಚಂಪು ಕಾವ್ಯದಿ ಅಡಗಿದೆ ವಿಶ್ವದ
ಸಂಜೀವಿನಿಯ ಮಹಾಕಥನ !

ಕತೆಯನು ಹೇಳುವ ಕೇಳುವ ಯಾನಕೆ
ಕೊನೆಯೆ ಇಲ್ಲವು ಎಂದೆಂದು !
ತುಂಟ ಮಕ್ಕಳ ಭಾವಕೆ ಹಿಡಿಸುವ
ಬಿಂದು ರೂಪದ ಮಾಸಿಂಧು !

ಚಂದ್ರಗೌಡ ಕುಲಕರ್ಣಿ
೨೦-೦೫-೨೦

ಸುಂದರ ಕತೆಗಳ ಸಂಗಮ - ೪

ಜಂಬೂ ದ್ವೀಪದ ಭರತ ಕ್ಷೇತ್ರವು
ಪರಮ ಧರ್ಮ ಸಂಗಮವು !
ಜಿನಮುನಿ ಸದ್ಗತಿ ಪಡೆದ ಸಾರವು
ಸುಂದರ ಕತೆಗಳ ಸಂಭ್ರಮವು !

ಬ್ರಾಜಿಷ್ಣು ರಚಿಸಿದ ವಡ್ಡಾರಾಧನೆ
ಹಳಹನ್ನಡದ ಮಾತಿಂಗೆ !
ತಲೆದೂಗುವನು ರಸಿಕ ಓದುಗ
ತಂತ್ರ ನಿರೂಪಣೆ ಸೊಗಸಿಂಗೆ !

ಕತೆಯುಪಕತೆಗೆ ಸಾವಯವದ
ಕರಳ ಬಳ್ಳಿಯ ಬಂಧನವು !
ಜೀವ ತಳೆದ ಪಾತ್ರ ಪಾತ್ರಕೂ
ಸೂಸು ಪರಿಮಳ ಚಂದನವು !

ಬೆನ್ನು ಹತ್ತಿದ ಉಪಸರ್ಗಗಳು
ಒಡ್ಡುವ ಸಂಕಟ ನೂರಾರು !
ಆರಾಧಣೆಯಲಿ ಸಾವನು ಗೆಲುವ
ಕೇವಲಿ ಮುನಿಗಳ ತವರೂರು !

ಕೇಳಿದ ಕತೆಗಳು ಅಳಿಯದೆ ಉಳಿದು
ಮನುಜನ ತಿದ್ದದೆ ಬಿಟ್ಟಿಲ್ಲ !
ಧರ್ಮ ವಾಙ್ಮಯ ಸಮಸಮ ಬೆಸೆದ
ಉನ್ನತ ಕೃತಿಗೆ ಸಾವಿಲ್ಲ !

೨೫-೦೫-೨೦೨೦



ಬೆರೆಸಲು ತಣ್ಣೀರ್ ಎಲ್ಲಿ - ೮

ಬೆರೆಸಲು ತಣ್ಣೀರ್ ಎಲ್ಲಿ !

ಅಭಿನವ ಪಂಪ ಕವಿಯು ಬರೆದ
ರಾಮಚಂದ್ರ ಚರಿತ !
ಹೃದಯ ತೆರೆದು ಓದಲು ಸಾಕು
ಅರಿವೆವು ಕಾವ್ಯದದ್ಭುತ !

ಚಳನಯನದ ಸೀತೆಯ ಚಲುವಿಗೆ 
ಲಂಕೆಯ ರಾವಣ ಸೋತ !
ಕಮಲ ದಳದ ನೀರ್ ಹನಿಯಂತೆ
ಚಂಚಲವಾಯಿತು ಚಿತ್ತ !

ಸಾಗರ ಜಲವೆ ಬಿಸಿಬಿಸಿಯಾದರೆ
ಬೆರೆಸಲು ತಣ್ಣೀರ್ ಎಲ್ಲಿ !
ದಾರಿ ತಪ್ಪಿದ ರಾಜಗೆ ಬುದ್ಧಿಯ
ಹೇಳುವರಾರು ಅಲ್ಲಿ !

ಕದಡಿದ ನೀರು ತಿಳಿಯಾಗುವುದು
ಪ್ರಕೃತಿ ಸಹಜ ಲೀಲೆ !
ರಾವಣ ಮನಸು ನಿರ್ಮಲವಾಯಿತು
ಕಾಲ ಮುಗಿದ ಮೇಲೆ !

ರಾಮನ ಗೆದ್ದು ಸೀತಾ ದೇವಿಯ
ಕಾಣಿಕೆ ಕೊಡಬೇಕೆಂದ !
ದೈವ ಲೀಲೆ ಸಮರದಿ ಸೋತು
ಮರಣದ ಗತಿಗೆ ಸಂದ !

***
೨೩-೦೫-೨೦೨೦

ಅಪ್ಪಟ ದೇಸಿಗ - ೧೬

ಅಪ್ಪಟ ದೇಸಿಗ

ಅಚ್ಚಗನ್ನಡ ದೇಸಿ ನುಡಿಯಲಿ
ಮೂಡಿಬಂದಿದೆ ಈ ಕಬ್ಬ !
ಅಪ್ಪಟ ದೇಸಿಗ ಆಂಡಯ್ಯನಿಗೆ
ಹೋಲಿಕೆಯಾಗರು ಮತ್ತೊಬ್ಬ !

ಕನ್ನಡ ರತ್ನದ ಕನ್ನಡಿಯಲ್ಲಿ
ನೋಡಿದರೇನು ಕುಂದುಂಟು !
ಏತಕೆ ಬೇಕು ತಾಯ್ನುಡಿ ಕಬ್ಬಕೆ
ಸಕ್ಕದ ನುಡಿಯ ಹುಸಿನಂಟು !

ಹಲವು ನಾಲಗೆ ಉಳ್ಳ ಶೇಷನು
ಬಣ್ಣಿಸಲಾರನು ಕರುನಾಡು !
ನಾಲಗೆ ಒಂದಿದೆ ವರ್ಣಿಸಲೆಂತು
ಪ್ರಕೃತಿ ರಮ್ಯ ಸಿರಿಬೀಡು !

ಪೂವಿನ ಪೊಳಲಿನ ನನೆಯೆಂಬರಸನು
ಯುದ್ಧಕೆ ನಡೆದ ಪಣಕಟ್ಟಿ !
ಚಂದ್ರನ ಜಟೆಯಲಿ ಧರಿಸಿದ ಶಿವನಿಗೆ
ಸೋಲಿಸಿಬಿಟ್ಟ ಜಗಜಟ್ಟಿ !

ಸೊಬಗಿನ ಸುಗ್ಗಿಯ ಅದ್ಭುತ ಕಬ್ಬದ
ಶ್ವಾಸದ ಉಸಿರೆ ಕನ್ನಡವು !
ಹೊಸಯುಗದಲ್ಲು ಪಸರಿಸಲೆಲ್ಲೆಡೆ
ಕಸುವಿನ ಉಲಿಯ ಕನ್ನಡವು !

ಚಂದ್ರಗೌಡ ಕುಲಕರ್ಣಿ

ದೇಸಿ ನುಡಿಯ ಷಟ್ಪದಿ - ೧೫

ದೇಸಿ ನುಡಿಯ ಷಟ್ಪದಿ

ಸತ್ಯನುಡಿವ ಹರಿಶ್ಚಂದ್ರನ
ಕಾವ್ಯ ಕಟ್ಟಿದ ರಾಘವ !
ವಿಶ್ವಾಮಿತ್ರನ ಮನವ ಗೆದ್ದು
ಪಡೆದ ಉನ್ನತ ಗೌರವ !

ಹಿರಿಯ ಕಥನಕೆ ಮೊದಲು ಬಳಸಿದ
ದೇಸಿ ನುಡಿಯ ಷಟ್ಪದಿ !
ಕೇಳಿ ನಲಿವರ ಹಾಡಿ ಕುಣಿವರ
ಹೃದಯ ತಟ್ಟಿತು ತವನಿಧಿ !

ಕತೆಯ ಒಡಲಿಗೆ ಬೆಸುಗೆ ಹಾಕಿದ
ಮಾತು ಮಾತನು ಸೇರಿಸಿ !
ಹರುಷ ಪಟ್ಟನು ಹಂಪೆಯರಸಗೆ
ಕಾವ್ಯ ಕನ್ನಿಕೆ ಒಪ್ಪಿಸಿ !

ಶರಣ ಚರಿತೆಯ ರಚಿಸು ಎನ್ನುತ
ಕಟ್ಟು ಹಾಕಿದ ಹರಿಹರ !
ಸೋಮನಾಥ ಶರಭ ಚರಿತೆಯ
ಹೊನಲು ಹರಿಯಿತು ಸರಸರ !

ಸೊನ್ನಲಾಪುರ ಯೋಗಿವರ್ಯ
ಸಿದ್ಧರಾಮನ ಕಥನದಿ !
ಶರಣ ತತ್ವವು ಹರಳು ಗಟ್ಟಿದೆ
ವಚನ ಸೌರಭ ಮಥನದಿ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦
ಸಂಜೆ ೮-೩೮

ಹರಿಹರ - ೧೪

ಹರಿಹರ

ಮನುಜರ ಮೇಲೆ ಸಾವರ ಮೇಲೆ
ಕಾವ್ಯ ಬರೆಯದ ಧೀಮಂತ !
ಚಂದ್ರಧರನಿಗೆ ನಾಲಿಗೆ ಮಾರಿದ
ಭಕ್ತಾಗ್ರೇಸರ ಗುಣವಂತ !

ಬಡವರ ಮನೆಯ ತೊತ್ತಾಗಿದ್ದ
ರಗಳೆಗೆ ಕಟ್ಟಿದ ಹಿರಿಪಟ್ಟ !
ಶರಣ ಚರಿತೆಯ ಸುಂದರ ಕಥನವ
ದೇಸಿ ನುಡಿಯಲಿ ಹರಿಬಿಟ್ಟ !

ದುಂಬಿ ಎರಗದ ಗಾಳಿ ಅಲುಗದ
ಮೀಸಲು ಹೂಗಳು ದಿನನಿತ್ಯ !
ಹಂಪೆ ಅರಸಗೆ ಏರಿಸುತಿದ್ದ
ಮೌನದಿ ಮಾತನು ಆಡುತ್ತ !

ಬೇಡ ಕಣ್ಣಪ್ಪ ಅಕ್ಕ ನಂಬಿಗೆ
ಬಸವರಾಜನೆ ಮಾಣಿಕ್ಯ !
ಪ್ರೌಢ ಕಾವ್ಯ ಚಂಪು ಕೃತಿಯಲಿ
ಗಿರಿಜೆಯ ಪಾತ್ರದ ಸಾರ್ಥಕ್ಯ !

ರಗಳೆ ಚಂಪು ಶತಕವ ರಚಿಸಿದ
ಶರಣ ಸಂಸ್ಕೃತಿ ಹರಿಕಾರ !
ಷಟ್ಪದಿ ಜನಕ ರಾಘವಾಂಕಗೆ
ನೀಡಿದ ವಾಙ್ಮಯ ಸಂಸ್ಕಾರ !

ಚಂದ್ರಗೌಡ ಕುಲಕರ್ಣಿ
೧೯-೦೫-೨೦೨೦


Wednesday, May 27, 2020

ಅನುಭಾವಿ ಅಕ್ಕ - ೧೩

ಅನುಭಾವಿ ಅಕ್ಕ

ಗೊರವನ ಕನಸನು ಕಂಡ ಯೋಗಿನಿ
ವಚನಕೆ ಹಸಿರು ತೋರಣವು !
ಸಾವು ಇಲ್ಲದ ಕೇಡು ಇಲ್ಲದ
ಅಮೃತ ಸುಧೆಯ ಹೂರಣವು !

ಬೆಟ್ಟದ ಮೃಗಕೂ ಸಮುದ್ರ ನೊರೆತೆರೆ-
ಗಂಜಲಾರದ ಸಾಧಕಿಯು !
ಪ್ರಭುವಿನ ಒಲುಮೆಯ ಗಳಿಸಿಕೊಂಡ
ಕದಳಿ ಬನದ ಶೋಧಕಿಯು !

ರಾಜ ಧರ್ಮಕೆ ಲೋಕ ನೀತಿಗೆ
ಶರಣ ದೀಕ್ಷೆಯ ಕೊಟ್ಟವಳು !
ವಿಷಯ ವಾಸನೆ ಹರಿದು ಹಾಕುತ
ಬಯಲ ಬಟ್ಟೆಯ ತೊಟ್ಟವಳು !

ಹಸಿವೆಗಾಗಿ ಭಿಕ್ಷೆಯ ಬೇಡುತ
ತೃಷೆಗೆ ಕೆರೆಜಲ ಕುಡಿದವಳು !
ಶಯನ ವಸತಿಗೆ ಹಾಳು ದೇಗುಲ
ಎನುತ ಆಶ್ರಯ ಪಡೆದವಳು !

ಹಂಸ ಗಿಳಿಗಳ ವನವನು ಸುತ್ತುತ
ಲೋಕವ ಅರಿತಳು ಮಾದೇವಿ !
ಬಸವ ಶರಣರ ಸಂಗದಿ ಬೆರೆಯುತ
ಎತ್ತರಕೇರಿದ ಅನುಭಾವಿ !

ಚಂದ್ರಗೌಡ ಕುಲಕರ್ಣಿ
೨೭-೦೫-೨೦೨೦

ಅಂತರಂಗದ ರತುನ - ೧೧

ಅಂತರಂಗದ ರತುನ

ಕಳುವನು ಮಾಡದ ಹುಸಿಯನು ನುಡಿಯದ
ಅಂತರಂಗದ ರತುನ !
ಕೇಡಿಲ್ಲದಂತೆ ಒಲಿದು ಹಾಡಿದ
ಲಿಂಗ ಮೆಚ್ಚುವ ವಚನ !

ಸದುವಿನಯದಲಿ ಸವಿನುಡಿಗಳಲಿ
ಕೂಡಲ ಸಂಗನ ಸ್ಮರಣ !
ನಡೆದು ನುಡಿದ ನುಡಿನುಡಿಗಳಲಿ
ಜಂಗಮ ತತ್ವದ ಸ್ಫುರಣ !

ವಚನ ನಾಮಕೆ ಅಮೃತ ತುಂಬಲು
ಪಾವನ ಕಮಲಚರಣ !
ನುಡಿಯ ಮುತ್ತಿನ ಹಾರವೆ ಆದುದು
ಮಾಣಿಕ ದೀಪ್ತಿಯ ರಚನ !

ಜಗಮುಗಿಲಗಲವು ಮಿಗೆಯುಗದಾಳವು
ಕರಸ್ಥಲ ಲಿಂಗದಿ ಲೀನ !
ದೇಹವೆ ದೇಗುಲ ಶರವೆ ಕಳಸವು
ಪಡೆಯಲು ದೇವನ ಕರುಣ !

ಶರಣರ ಸಂಗದಿ ಶಿವಪಥ ಗುರುಪಥ
ಮಾಮನೆ ಅಂತಃಕರುಣ !
ಅನುಭವ ಮಂಟಪ ಸೂಳ್ನುಡಿ ತೇಜವು
ಲೋಕಕೆ ಅಮೃತ ಪಾನ !

ಚಂದ್ರಗೌಡ ಕುಲಕರ್ಣಿ
೯೪೪೮೭೯೦೭೮೭

ಮಾತು ಜ್ಯೋತಿರ್ಲಿಂಗ - ೧೦

ಮಾತು ಜ್ಯೋತಿರ್ಲಿಂಗ

ಕೊಟ್ಟ ಕುದುರೆಯನೇರಿ ಪಳಗಿಸಿ
ಬಟ್ಟ ಬಯಲನೆ ಗಳಿಸಿದ !
ಮಾತು ಜ್ಯೋತಿರ್ಲಿಂಗವಾಗಿಸಿ
ಮನದ ಮೈಲಿಗೆ ಅಳಿಸಿದ !

ಕೋಗಿಲೆ ಹಾಡಿಗೆ ಬೆರಗನು ನೀಡಿತು 
ತಳಿತ ಚಿಗುರಿನ ಮಾಮರ !
ಬೆಟ್ಟ ನೆಲ್ಲಿಗೆ ಉಪ್ಪು ಬೆರೆಯಿತು
ಅಮಿತ ಸವಿರುಚಿ ಸಾಗರ !

ತನುವ ಏರಿಗೆ ಮನವ ಕಟ್ಟುತ
ಪರಮ ಜಲವನು ತುಂಬಿದ !
ಕಂಬ ಕರಗುವ ಹಂಸ ಹಾರುವ
ಜೀವದೊಗಟನು ಬಿಡಿಸಿದ !

 ತೋಟದಾಳದ ಬೇರು ಅಗಿಯಲು
ಮನವ ಗುದ್ದಲಿ ಮಾಡಿದ !
ಬೆಳಕು ಕತ್ತಲೆ ಆನೆ ಸಿಂಹದ
ಬೆಡಗು ಬಿಡಿಸಿ ತೋರಿದ !

ಶರಣ ಸಂಗನ ಬಸವ ಕಟ್ಟಿದ
ಶೂನ್ಯ ಪೀಠವ ಏರಿದ !
ಶಬ್ದ ಸೀಮೆಯ ದಾಟಿ ನಡೆಯುತ
ಗುಹೆಯ ಈಶನ  ಸೇರಿದ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦ 

ಕವಿರತ್ನ - ೬

ಕವಿರತ್ನ

ಮುದ್ರೆಯ ಒಡೆದು ಬಳಸಿಬಿಟ್ಟನು
ಸರಸ್ವತಿ ಶಬ್ದ ಭಂಡಾರ !
ಸಿಡಿಲ ಶಕ್ತಿಯ ಸತ್ವವ ತುಂಬುತ
ಕಾವ್ಯ ಕಟ್ಟಿದ ಭರಪೂರ !

ಆದಿಶೇಷನ ಹೆಡೆಯ ರತ್ನವು
ಗದಾಯುದ್ಧ ಕೃತಿಯನ್ನ !
ಪರಿಕಿಪರಾರು ಎಂಟೆದೆ ಬಂಟರು
ಸವಾಲು ಹಾಕಿದ ಕವಿರನ್ನ !

ಜಲಮಂತ್ರವನು ಉಪದೇಶಿಸಿದ
ಇಚ್ಛಾಮರಣಿ ಕಲಿಭೀಷ್ಮ !
ಹಿಂದಡಿಯಿಟ್ಟು ಕೊಳದಲಿ ಅಡಗಿದ
ಬರಲಿ ಎಂದು ಬಲರಾಮ !

ಸಿಂಹ ಗರ್ಜನೆ ಮಾಡುತ ಗುಡುಗಿದ
ಭೀಕರ ಕಾಲ ಭೈರವನು !
ನೀರಲ್ಲಿದ್ದರೂ ಬೆವೆತು ಹೋದನು
ಕುರುಯುವರಾಜ ಕೌರವನು !

ದುಶ್ಶಾಸನನೆದೆ ರಕ್ತವ ಲೇಪಿಸಿ
ಸಿರಿಮುಡಿ ಕಟ್ಟಿದ ಕಲಿಭೀಮ !
ದ್ರೌಪದಿ ಸೇಡಿಗೆ ದುರ್ಯೋಧನನ
ತೊಡೆಗಳ ಮುರಿದ ಉದ್ದಾಮ !

೯-೨-೨೦೨೦

ಬನವಸೆ ಕೋಗಿಲೆ - ೫

ಬನವಸೆ ಕೋಗಿಲೆ

ಮೊದಲ ಮಾಕವಿ ಪಂಪ ರಚಿಸಿದ
ವಿಕ್ರಮಾರ್ಜುನ ವಿಜಯವು !
ದೇಸಿ ಮಾರ್ಗದ ಕಂಪು ಹರಡಿದೆ
ಕನ್ನಡಾಂಬೆಯ ತೇಜವು !

ವ್ಯಾಸ ಭಾರತ ಶರಧಿ ಈಜುತ
ವರದ ಕಾವ್ಯವ ಕಟ್ಡಿದ !
ಮಧುರ ವಚನದಿ ಕತೆಯ ಹೇಳುತ
ರಸಿಕ ಮನವನು ತಟ್ಟಿದ !

ಮಲೆಯ ಬನವಸೆ ನಾಡ ಕೋಗಿಲೆ
ಉಲಿಯೆ ಮಾಮರ ನಂದನ !
ತ್ಯಾಗ ಭೋಗದ ಜೀವ ಜಾಲವೆ
ದುಂಬಿ ಪರಿಮಳ ಚಂದನ !

ಚಲದ ನನ್ನಿಯ ಧರ್ಮ ಸಾಹಸ
ಅಮರ ಪಾತ್ರವ ಕೆತ್ತಿದ !
ಗತದ ದ್ವಾಪರ ಯುಗದ ಕಥನಕೆ
ಚಲನ ಮುದ್ರೆಯ ಒತ್ತಿದ !

ಮನುಜ ಕುಲದ ಮಹತಿ ಸಾರಿದ
ಭೇದ ಭಾವವ ಅಳಿಸುತ !
ಅಣ್ಣ ತಮ್ಮರ ಕದನ ಹೇಳಿದ
ತಿರುಳ ಕನ್ನಡ ಬಳಸುತ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦

ವಸುಧಾವಲಯ - ೩

ವಸುಧಾವಲಯ ಕನ್ನಡ

ಪದವನು ಅರಿತು ನುಡಿವ ಜನರನು
ಹೊಗಳಿ ಹಾಡಿದ ಶ್ರೀವಿಜಯ !
ಕುರಿತು ಓದದೆ ಕಾವ್ಯ ಕಟ್ಟುವ
ಪ್ರತಿಭೆಗೆ ಕೊಟ್ಟ ಮನ್ನಣೆಯ !

ಮೊತ್ತಮೊದಲಿಗೆ ಶೋಧಿಸಿಕೊಟ್ಟ
ವಸುಧಾವಲಯ ಕನ್ನಡವ !
ಗೋದಾವರಿಯ ತಟದ ಅಂಚಿಗೆ
ಹಬ್ಬಿದ ನಾಡಿನ ವಿಸ್ತರವ !

ಕಿಸುವೊಳಲಿಂದ್ ಒಕ್ಕುಂದ್ ವರೆಗಿನ
ಕೊಪಣ ಫುಲಿಗೆರೆ ತಿರುಳನ್ನು !
ಕವಿಗೆ ತೋರಿದ ಕಾವ್ಯ ರಚಿಸುವ
ಅನನ್ಯ ಪ್ರತಿಭೆಯ ಕಲೆಯನ್ನು !

ತಿಳಿಸಿಕೊಟ್ಟನು ಕನ್ನಡ ಸಂಸ್ಕೃತ
ಸಹಜ ಬಂಧದ ರೂಪವನು !
ಕಾಲವು ಮರೆತ ಗದ್ಯ ಪದ್ಯದ
ಶ್ರೇಷ್ಠ ಕವಿಗಳ ಕೃತಿಗಳನು !

ಕಾವ್ಯ ಚಿಂತನ ಅಲಂಕಾರಕೆ
ಹಾಕಿದ ರಾಜ ಮಾರ್ಗವನು !
ನಿಜನಾಡವರಿಗೆ ಕವಿ ಓದುಗರಿಗೆ
ಹಂಚಿದ ವಾಙ್ಮಯ ಸಾರವನು !

***
೨೩-೦೫-೨೦೨೦