Wednesday, June 8, 2016

ಬಂಧನದ ಬಾಳು ಮೀರಿದನೋ




ಬಂಧನದ ಬಾಳು ಮೀರಿದನೋ 

ಎದೆಯುದ್ದ ಬೆಳೆದವಗೆ ಮದುವೆಯ ಮಾಡಲು 
ಚದುರ ಶರಿಫನ ಒಪ್ಪಿಸಲು | ಪಾಲಕರು
ಅಧಿಕ ಉತ್ಸ್ಶ ತೋರಿದರು |

ಹೇಳಿಸಿ ಗುರುವಿಂದ ಮೇಳೈಸಿ ಕನ್ಯೆಯನು 
ತಾಳಿ ಕಟ್ಟಿಸಿ ಮದುವೆಯ | ಮಾಡಿದರು
ಬಾಳಿಗೆ ಶುಭವ ಕೋರಿದರು |

ಚಂದಾದ ಫಾತಿಮಾ ಕುಂದಿರದ ಕನ್ಯೆಯನು
ತಂದು ಮದುವೆಯ ಮಾಡಿದರು | ಹಾರೈಸಿ
ಗಂಧ ಪರಿಮಳ ಸೂಸೋದರು |

ಕುಂದಗೋಳ ನಾಯಕರ ಅಂದದ ಕುವರಿಯನು
ಚಂದದಿ ಕೋಡಿ ಬಾಳುವ | ಕಾಲದಲೆ
ಬಂಧನದ ಬದುಕು ಬೇಡಾಯ್ತು |

ಚಿತ್ತವನು ಗುರುವಿನಲಿ ಒತ್ತೆಯ ಇಡುತಿದ್ದ 
ಎತ್ತು ಗಳೆಗಳನು ಮರೆತಂತೆ | ಹೆಂಡತಿಯ 
ಸುತ್ತ ಸುಳಿಲಿಲ್ಲ ಶರಿಫನು |

ಹತ್ತಾರು ತಿಂಗಳಲಿ ಮುತ್ತಿನಾ ಮಗಳೊಬ್ಳ 
ಹೆತ್ತಳು ತಾಯಿ ಫಾತಿಮಾ | ಮನೆತುಂಬ 
ಎತ್ತಿ ಆಡಿಸುತ ನಲಿದಳು |

ಹುಟ್ಟಿದ ಮಗಳಿಗೆ ಗಟ್ಟಿ ಆಯುಷ್ಯ ವಿಲ್ಲದೆ
ಪಟ್ಟನೆ ಶಿವನ ಪಾದವ | ಸೇರಿದಳು 
ಮೆಟ್ಟೊ  ಊರ್ಗೋಲು ಕಳಚಿತು |

ಕರುಳಿನ ಹಸುಮಗಳು ಹರಪಾದ ಸೇರಿದರ 
ಮರೆತು ಗುರುವಿಗೆ ನಿಜಭಕ್ತಿ | ತೋರುತ್ತ
ಬೆರೆತೋದ ದಿಟದ ಭಾವದಲಿ |

ಮಗಳ ಸಾವಿನ ದುಃಖ ಹಗಲೆಲ್ಲ ಕಾಡಿತು
ಸೋಗವಿಲ್ದೆ ತಾಯಿ ಬಳಲಿದಳು | ತವರಲ್ಲಿ
ಜಗದ ಯಾತ್ರೆಯ ಮುಗಿಸಿದಳು |

ಮೋಹದ ಹೆಂಡತಿಯ ಸಾವಿನ ಪರಸಂಗ 
ಮಾವನ ಮನೆಯ ಹಂಗನು | ಹರಿಯುತ 
ದೇವನಲಿ ಶ್ರದ್ಧೆ ಹೆಚ್ಚಿಸಿತು |

No comments: