Friday, December 26, 2014

ಅಬ್ಬಿಗೇರಿ ಬಸನಗೌಡರು ಪಾಟೀಲ

ಅಬ್ಬಿಗೇರಿ ಬಸನಗೌಡರು ಪಾಟೀಲ

ಕನ್ನಡ ನಾಡಿನ ಚಾರಿತ್ರಿಕ ಪರಂಪರೆಯನ್ನು ಅವಲೋಕಿಸಿದಾಗ , ಕೆಲವು ವ್ಯಕ್ತಿಗಳಿಂದ ಊರುಗಳಿಗೆ ಮಾನ್ಯತೆ, ಪ್ರಸಿದ್ಧಿ ದೊರೆತುದನ್ನು ಕಾಣಬಹುದಾಗಿದೆ. ಹಾಗೆಯೆ ಬಸನಗೌಡ ಪಾಟೀಲರಿಂದ , ವಿಶೇಷವಾಗಿ ಸಹೋದರರೊಂದಿಗೆ ಕನ್ನಡ ಸಾಹಿತ್ಯ ಸಂಗೀತ ಸೇವಾ ನಾಟಕ ಮಂಡಳಿ ಕಟ್ಟಿ ರಂಗ ಸೇವೆ, ದೇಶ ಸೇವೆ ಮಾಡಿದ್ದರಿಂದ - ಅಬ್ಬಿಗೇರಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಸಾಂಸ್ಕೃತಿಕ ಸಮೃದ್ಧಿ ಪಡೆದ ಊರು. ಊರಲ್ಲಿಯೇ ದೊಡ್ಡ ಮನೆತನ ಪರ್ವತಗೌಡ ಪಾಟೀಲರದು. ಹಾಲಕೆರೆ ಅನ್ನದಾನ ಮಹಾಸ್ವಾಮಿಗಳ ಆರಾಧ್ಯಭಕ್ತರಾದ ಪರ್ವತಗೌಡ ಮತ್ತು ಗಂಗಮ್ಮ ಅವರಿಗೆ ಒಟ್ಟು ನಾಲ್ಕು ಜನ ಗಂಡು ಮಕ್ಕಳು. ಚನ್ನಪ್ಪಗೌಡ, ಸಕ್ಕರಗೌಡ, ಬಸನಗೌಡ ಮತ್ತು ವಿರೂಪಾಕ್ಷಗೌಡ.
ಅಕ್ಟೋಬರ್, ೧೮೭೧ ರಂದು ಜನಿಸಿದ ಬಸನಗೌಡರದು ಸಮೃದ್ಧ ಬಾಲ್ಯ. ದೊಡ್ಡ ಮನೆತನ, ಹಿರಿಕಿರಿ ವಯಸ್ಸಿನ ಸಹೋದರರು, ಮನೆತುಂಬ ಬಂಧು ಬಳಗ. ಕೃಷಿ ಜೀವನದ ನಿಕಟ ಒಡನಾಟದ ಜೊತೆಗೆ ಹತ್ತಿ ಗಿರಣಿ, ಆಧುನಿಕ ಶಿಕ್ಷಣ, ಪ್ರತಿಷ್ಠಿತ ಹೆಸರು ಇವು ಅವರ ಜೀವನವನ್ನು ರೂಪಿಸಿವೆ.

ಚುರುಕು ಬುದ್ಧಿಯ ಬಸನಗೌಡರು ಬಾಲ್ಯ ಯೌವನದ ಹಂತದಲ್ಲಿ ಉತ್ಸಾಹ ಹುರುಪು ಹುಮ್ಮಸ್ಸುಗಳ ಹುಚ್ಚು ಹೊಳೆಯಲ್ಲಿ ಸಿಕ್ಕು ದುಶ್ಚಟಗಳಿಗೆ ಬಲಿಯಾದರು. ಚುರುಕು - ಮುಂದಾಲೋಚನೆಗಳು, ಉಢಾಳತನ - ಮುಂಗಾಲುಪುಟಿಗೆಗೆ ವರ್ಗಾವಣೆಯಾದವು. ಪ್ರತಿಷ್ಟೆ ಹಮ್ಮು- ಬಿಮ್ಮು ಅಹಂಕಾರದ ರೂಪ ತಾಳಿದವು. ಪಡೆದ ಶಿಕ್ಷಣ ಉದ್ದಟತನಕ್ಕೆ ಬದಲಾಯಿತು. ರೀತಿ ಬೆಳೆಯುವ ಮಗನನ್ನು ಕಂಡು ತಂದೆ ಪರ್ವತಗೌಡರು ಮನದಲ್ಲಿಯೇ ನೊಂದುಕೊಂಡರು. ಅಡ್ಡ ದಾರಿಹಿಡಿದ ಮಗನನ್ನು ಹಾಲಕೆರೆ ಅನ್ನದಾನ ಮಹಾಸ್ವಾಮಿಗಳಲ್ಲಿಗೆ ಕರೆದೊಯ್ದರು. ಅಂದಿನ ಮಠದೊಡೆಯರಾದ (ಗಡ್ಡದ) ಅಜ್ಜನವರು ಬಸನಗೌಡರ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡರು. ಅಷ್ಟೇ ಅಲ್ಲ ಕೆಲವು ದಿನ  ಹಾಲಕೆರೆಯ ಮಠದಲ್ಲಿಯೇ ಇರಿಸಿಕೊಂಡರು. ಪೂಜ್ಯ ಅಜ್ಜನವರ ಸಾಮಿಪ್ಯ ಮತ್ತು ಅನುಗ್ರಹದಿಂದ ಒಂದೆರಡು ತಿಂಗಳಲ್ಲಿಯೇ ಹೊಸ ವ್ಯಕ್ತಿತ್ವ ಪಡೆದ ಬಸನಗೌಡರು ಸಾತ್ವಿಕರಾಗಿಬಿಟ್ಟರು. ತ್ರಿಕಾಲ ಲಿಂಗಪೂಜೆಯನ್ನು ತಪ್ಪದೇ ಪಾಲಿಸತೊಡಗಿದರು. ಮನೆಯಹಿರಿಯರಿಗೆ ಗೌರ ಕೊಡುತ್ತ ಮನೆತನದ ಜವಬ್ದಾರಿಯನ್ನು ಅರಿತುಕೊಂಡರು. ಮನೆಯಿಂದ ಅವರ ದೃಷ್ಟಿ ಸಮಾಜದ ಕಡೆಗೂ ಹರಿಯತೊಡಗಿತು. ಹೀಗೆ ಪರಿವರ್ತನೆ ಹೊಂದಿ ಸಾತ್ವಿಕ ವ್ಯಕ್ತಿತ್ವ ಪಡೆದ ಬಸನಗೌಡರಿಗೆ ಬಂಧು ಬಳಗದಿಂದ ಮತ್ತು ಊರ ಜನರಿಂದ ಸಹಕಾರ ಅಷ್ಟೆ ಅಲ್ಲ ಗೌರವವೂ ಸಿಗತೊಡಗಿತು. ಆಗಾಗ ಅನ್ನದಾನ ಮಹಾಸ್ವಾಮಿಗಳ ಸಂಪರ್ಕದೊರೆಯುತ್ತಿದ್ದುದರಿಂದ ಅವರೊಂದಿಗೆ ಒಡನಾಟವೂ ಬೆಳೆಯಿತು. ಊರವರಲ್ಲಿ ಬಸನಗೌಡರ ಬಗೆಗಿನ ಗೌರವ  ಭಾವ ಇನ್ನಷ್ಟು ಹೆಚ್ಚಾಯಿತು. ಇವರ ವ್ಯಕ್ತಿತ್ವಕ್ಕೆ ಮಾರುಹೋದ ಅಬ್ಬಿಗೇರಿಯ ಸಂಗಪ್ಪ ಶೆಟ್ಟರು ಇವರೊಂದಿಗೆ ಎಲ್ಲ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗತೊಡಗಿದರು.

ಧಾರ್ಮಿಕ ಸಂಸ್ಕಾರ ಹೊಂದಿದ ಬಸನಗೌಡರು ಮೇಲಿಂದ ಮೇಲೆ ರುದ್ರಾಭಿಷೇಕ, ಬಂಧು ಬಳಗ ಸಮೂಹ ಲಿಂಗಪೂಜೆ ಮುಂತಾದ ಕಾರ್ಯಕ್ರಮಗಳನ್ನು ಮನೆಯಲ್ಲಿ ಏರ್ಪಡಿಸತೊಡಗಿದರು. ನರೇಗಲ್ಲಿನ ಆಯುರ್ವೇದ ತಜ್ಞರೂ, ಸಂಸ್ಕೃತ ಪಂಡಿತರೂ, ವೇದಾಂತ ಪರಿಣತರೂ ಆದ ಶ್ರೀ ಕಾಶೀನಾಥ ಶಾಸ್ತ್ರೀಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸತೊಡಗಿದರು. ಹೀಗಾಗಿ ಮನೆಯವರಿಗೆ, ಊರವರಿಗೆ ಧಾರ್ಮಿಕ ಸಂಸ್ಕಾರಗಳು ಅನಾಯಾಸ ಲಭ್ಯವಾದವು. ಬಸನಗೌಡರ ಚಟುವಟಿಕೆಗಳು ಅನ್ನದಾನ ಮಹಾಸ್ವಾಮಿಗಳಿಗೆ ಸಂತಸವುಂಟುಮಾಡುತ್ತಿದ್ದವು. ಹೀಗಾಗಿ ಅವರ ಪ್ರೇರಣೆಯೂ ದೊರೆಯುತ್ತಿತ್ತು.

ಹಾನಗಲ್ಲ ಕುಮಾರ ಸ್ವಾಮಿಗಳ ಬಗೆಗೆ ಗೌರವಹೊಂದಿದ ಇವರು ಶಿವಯೋಗ ಮಂದಿರದ ಆರಾಧಕರಾದರು. ಕುಮಾರ ಸ್ವಾಮಿಗಳಷ್ಟೆ ಕಾಳಜಿಯಿಂದ ಶಿವಯೋಗಮಂದಿರವನ್ನು ಬೆಳೆಸಿದವರಲ್ಲಿ ಅನ್ನದಾನಿಗಳ ಪಾತ್ರವೂ ಹಿರಿದಾದುದು. ಹೀಗಾಗಿ ಅನ್ನದಾನ ಸ್ವಾಮಿಗಳ ಒಡನಾಟದಲ್ಲಿದ್ದ ಬಸನಗೌಡರು ಶಿವಯೋಗಮಂದಿರವನ್ನು ತಮ್ಮ ಮುಕ್ತಿಧಾಮವೆಂದೆ ಭಾವಿಸಿದರು. ಶಿವರಾತ್ರಿ ದಿನದ ಲಿಂಗಪೂಜೆಯನ್ನು ಪ್ರಕೃತಿ ಮಡಿಲಲ್ಲಿಯೇ ಮಾಡತೊಡಗಿದರು. ತಮ್ಮ ಕೊನೆಯ ಉಸಿರುರುವವರೆಗೂ ಶಿವರಾತ್ರಿಯ ಪೂಜೆಯನ್ನು ಅಲ್ಲಿಯೇ ನೆರವೇರಿಸಿದರು. ಅಷ್ಟೇ ಅಲ್ಲ ತಮ್ಮ ಜೀವಿತ ಕಾಲದ ಕೊನೆಯ ಶಿವರಾತ್ರಿ ಪೂಜೆಯನ್ನು ಮುಗಿಸಿದ ಅನಂತರವೇ ಅನ್ನದಾನ ಮಹಾಸ್ವಾಮಿಗಳ ( ಬೆತ್ತದ ಅಜ್ಜನವರು, ಬಸನಗೌಡರ ಸಮಕಾಲೀನರು) ಅಪ್ಪಣೆ ಪಡೆದು ಅಬ್ಬಿಗೇರಿಗೆ ಮರಳಿದರು. ಬಸನಗೌಡರ ತಮ್ಮನ  ವಿರೂಪಾಕ್ಷಗೌಡರ ಮಗಳೂ, ಬಸನಗೌಡರ ಧಾರ್ಮಿಕ ಸಂಸ್ಕಾರದ ಮಾನಸ ಪುತ್ರಿಯೂ ಆದ ಹಲಗೇರಿಯ ಬಸಮ್ಮ ತಾಯಿಯವರೂ ಇಂದಿಗೂ ಶಿವರಾತ್ರಿಯನ್ನು ಶಿವಯೋಗಮಂದಿರದಲ್ಲಿಯೇ ಆಚರಿಸುತ್ತಾರೆ. ಐವತ್ತು ವರ್ಷಗಳಿಂದಲೂ ತಮ್ಮ ದೊಡ್ಡಪ್ಪನವರ ವ್ರತವನ್ನು ಪಾಲಿಸುತ್ತಿದ್ದಾರೆ.

ಹಾಲಕೆರೆ ಮಠದ ಅಜ್ಜನವರು ಹೆಚ್ಚು ಓದದ ಬೆತ್ತದ ಅಜ್ಜನವರನ್ನು ಶಿಷ್ಯರನ್ನಾಗಿ ಮಠಕ್ಕೆ ಪಟ್ಟಗಟ್ಟಿದಾಗ ಹಾಲಕೆರೆ ಮತ್ತು ಸುತ್ತಮುತ್ತಲ ಗ್ರಾಮಗಳ ಕೆಲವು ಜನರು ಅದನ್ನು ಬಲವಾಗಿ ವಿರೋಧಿಸುತ್ತಾರೆ. ಇದೇ ಸಂದರ್ಭದಲ್ಲಿ ಅಬ್ಬಿಗೇರಿಯಲ್ಲಿ ಅನ್ನದಾನೇಶ್ವರಮಠವನ್ನು ಕಟ್ಟಲು ಗೊತ್ತುಪಡಿಸಿದ ಭೂಮಿಯನ್ನು ಹಿಂದಕ್ಕೆ ಪಡೆಯುತ್ತಾರೆ. ಇದೆಲ್ಲವನ್ನೂ ಗಮನಿಸಿದ ಬಸನಗೌಡರು ಅಜ್ಜನವರನ್ನು ಬೆಂಬಲಿಸಿ ಮುಂದುವರೆಯುತ್ತಾರೆ. ಅಬ್ಬಿಗೇರಿಯಲ್ಲಿ ಮಠವನ್ನು ಕಟ್ಟಲು ತಮ್ಮ ಸ್ವಂತ ಜಾಗೆಯನ್ನು ನೀಡುತ್ತಾರೆ. ತಾವೇ ಮುಂದೆ ನಿಂತು ಮಠವನ್ನು ಕಟ್ಟಿಸುತ್ತಾರೆ. ಊರ ಜನರ ಮನಸನ್ನು ಒಲಿಸಿ ಧಾರ್ಮಿಕ ಕಾರ್ಯಕ್ಕೆ ಅವರ ಸಹಕಾರ ಪಡೆಯುತ್ತಾರೆ. ಅನ್ನದಾನೇಶ್ವರ ಮಠದ ಹತ್ತಿರವಿರುವ ವೀರಭದೇಶ್ವರ ಗುಡಿಯನ್ನೂ ನವೀಕರಣಗೊಳಿಸುತ್ತಾರೆ. ಅಬ್ಬಿಗೇರಿಯ ಪ್ರಸಿದ್ಧ ಕಂಠೀ ಬಸವೇಶ್ವರ ದೇವಸ್ಥಾನಕ್ಕೆ ಟ್ರಸ್ಟ ಮಾಡಲು ಪ್ರಯತ್ನಿಸುತ್ತಾರೆ. ಅದೇ ರೀತಿ ಕೋಡಿಕೊಪ್ಪದ ಹುಚ್ಚೀರಪ್ಪಜ್ಜನ ಮಠಕ್ಕೂ ಟ್ರಸ್ಟ ಮಾಡುತ್ತಾರೆ, ಮಠವನ್ನು ನವೀಕರಣಗೊಳಿಸುತ್ತಾರೆ.
ಅನ್ನದಾನೇಶ್ವರ ಮಠದ ಧಾರ್ಮಿಕ ಸಾಂಸ್ಕೃತಿಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಅಬ್ಬಿಗೇರಿಯ ಸಾಮಾಜಿಕ ಜೀವನದಲ್ಲಿ ಬೆರೆತುಹೋಗುತ್ತಾರೆ. ತಾಯಂದಿರಿಗೆ ಶಿಕ್ಷಣ ಮತ್ತು ಸಂಘಟನೆ ಮುಖ್ಯವೆಂಬುದನ್ನು ಅರಿತು ಅಬ್ಬಿಗೇರಿಯಲ್ಲಿ ಅಕ್ಕನ ಬಳಗವನ್ನು ಸ್ಥಾಪನೆ ಮಾಡುತ್ತಾರೆ. ಬಳಗದ ಸ್ಥಾಪನೆ ಮತ್ತು ಚಟುವಟಿಕೆಗಳಿಗೆ ಡಾ. ಸರೋಜಿನಿ ಮಹಿಷಿಯವರ ಸಹಾಯ ಪಡೆಯುತ್ತಾರೆ. ಡಾ. ಸರೋಜಿನಿ ಮಹಿಷಿಯವರು ಇಂದಿರಾ ಗಂಧಿಯವರಿಗೆ ನಿಕಟವರ್ತಿಗಳಾಗಿ ರಾಷ್ಟ್ರರಾಜಕಾರಣದಲ್ಲಿದ್ದಾಗಲೂ ತಪ್ಪದೇ ಬಸನಗೌಡರ ಮನಿಗೆ ಬಂದು ಹೋಗುತ್ತಿದ್ದರು. ಕುಟುಂಬ ಸದಸ್ಯರಷ್ಟು ಸಲುಗೆಯಿಂದ ನಡೆದುಕೊಳ್ಳುತ್ತಿದ್ದರು.

ರೋಣ ತಾಲೂಕಿನ ಮುತ್ಸದ್ದಿ ರಾಜಕಾರಣಿ , ದೇಶಭಕ್ತ ದೊಡ್ಡಮೇಟಿ ಅಂದಾನಪ್ಪನವರೊಂದಿಗೆ ನಿಕಟ ಸಂಬಂಧವಿತ್ತು ಬಸನಗೌಡರಿಗೆ. ಹೀಗಾಗಿ ಎಸ್. ನಿಜಲಿಂಗಪ್ಪ , ಡಾ. ಸರೊಜಿನಿ ಮಹಿಷಿ ಅವರಂತಹ ರಾಜಕೀಯ ವ್ಯಕ್ತಿಗಳ ಸಂಪರ್ಕ ಇತ್ತು. ಅಬ್ಬಿಗೇರಿಯ ಕಂಠೀ ಬಸವೇಶ್ವರ ದೇವಸ್ಥಾನದ ಹೊಲಕ್ಕೆ ಪಂಪಸೆಟ್ ಕೂಡಿಸಿದಾಗ ಅವರ  ಉದ್ಘಾಟನೆಗೆ ಮಾನ್ಯ ಎಸ್. ನಿಜಲಿಂಗಪ್ಪನವರನ್ನು ಕರೆಸಿದ್ದರು. ಮೌಲ್ಯಯುತ ರಾಜಕಾರಣದಲ್ಲಿ ತೊಡಗಿದ್ದ ಶ್ರೀ ಎಸ್. ನಿಜಲಿಂಗಪ್ಪನವರು ಇಂತಹ ಚಿಕ್ಕ ಕಾರ್ಯಕ್ರಮಕ್ಕೆ ಆಗಮಿಸಿದ್ದನ್ನು ಗಮನಿಸಿದರೆ, ಬಸನಗೌದರ ಮೇಲಿನ ಅವರ ವಿಶ್ವಾಸ ಎಂಥದಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಅಕ್ಕನ ಬಳಗದ ಚಟುವಟಿಕೆ ನಡೆಸಲು ಊರಲ್ಲಿ ಅಕ್ಕಮಹಾದೇವಿಯ ಗುಡಿಯನ್ನೇ ಕಟ್ಟಿಸುತ್ತಾರೆ. ತಾಯಂದಿರ ವ್ಯಕ್ತಿತ್ವ ವಿಕಸನಕ್ಕೆ ಸಂಘಟನೆ ಮುಖ್ಯ ಎಂಬುದನ್ನು ಅರಿತು ಅಕ್ಕನ ಬಳಗ ಸ್ಥಾಪಿಸಿದ ಬಸನಗೌಡರ ಮಹಿಳೆಯರ ಬಗೆಗಿನ ಕಾಳಜಿಯನ್ನು ಮೆಚ್ಚಲೇಬೇಕಾಗುತ್ತದೆ.

ಸ್ವಾತಂತ್ರ್ಯ ಹೋರಾಟ, ಸ್ವದೇಶ ಪ್ರ್ರೀತಿ, ಗಾಂಧೀಜಿಯ ಆರಾಧನೆಯ ಕಾಲದಲ್ಲಿ ಬದುಕಿದ ಬಸನಗೌಡರು ಅಬ್ಬಿಗೇರಿಯ ಅಗಸಿಯಲ್ಲಿ ಗಾಂಧೀಜಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಾರೆ. ಮೂಲಕ ದೇಶಭಕ್ತಿಯ ಸಂದೇಶವನ್ನು ಸಾಮಾನ್ಯ ಜನರಿಗೂ ತಲುಪಿಸುತ್ತಾರೆ.

ಅನ್ನದಾನ ಮಹಾಸ್ವಾಮಿಗಳ ನಿಕಟವರ್ತಿಳಾಗಿದ್ದರೂ ಬಸನಗೌಡರು ತಮ್ಮ ವೈಯಕ್ತಿಕ ಜೀವನದ ತೊಂದರೆಗಳನ್ನು ಅವರಲ್ಲಿ ಹೇಳಿಕೊಂಡವರಲ್ಲ. ಅಬ್ಬಿಗೇರಿಯ ಗೆಳೆಯ ಸಂಗಪ್ಪಶೆಟ್ತರಂಥವರು ಪೂಜ್ಯ ಅನ್ನದಾನ ಮಹಾಸ್ವಾಮಿಗಳಲ್ಲಿ ಪ್ರಸ್ತಾಪಿಸುತ್ತಾರೆ. ಅದನ್ನು ಕೇಳಿದ ಅಜ್ಜನವರು ಸಂತಾನ ಪ್ರಾಪ್ತಿಯಾಗುವದರ ಬಗೆಗೆ ತಿಳಿಸುತ್ತಾರೆ. ಬಹಳ ವರ್ಷಗಳ ಬಳಿಕ ಹುಟ್ಟಿದ ಮಗಳಿಗೆ ಶರಣರ ಅನುಗ್ರಹವೆಂದು ಭಾವಿಸಿ ಬಸಮ್ಮನೆಂದು ಹೆಸರಿಡುತ್ತಾರೆ.

ಸಮಾಜಮುಖಿಯಾದ ಬಸನಗೌಡರು ಅನುಭಾವದ ನೆಲೆಯಲ್ಲಿಯೂ ಉನ್ನತ ಹಂತಕ್ಕೇರುತ್ತಾರೆ. ತಮ್ಮ ಊರು ಅಬ್ಬಿಗೇರಿಯಲ್ಲಿ ತಾವೇ ಮುಂದೆ ನಿಂತು ಕಟ್ಟಿಸಿದ ಅನ್ನದಾನೇಶ್ವರ ಮಠದಲ್ಲಿ ತಮ್ಮ ಗದ್ದುಗೆ ಕಟ್ಟಿಸಿಕೊಳ್ಳಲು ಪೂಜ್ಯ ಅನ್ನದಾನೇಶ್ವರ ಶ್ರೀಗಳಿಂದ ಒಪ್ಪಿಗೆ ಪಡೆದು, ಸರಕಾರದಿಂದಲೂ ಪರವಾಣಿಗೆ ತರುತ್ತಾರೆ. ಬೆತ್ತದ ಅಜ್ಜನವರ  ಹದಿನಾರುಪಾದಗಳ ಅಳತೆಯಲ್ಲಿ ಚೌಕಾಕಾರವಾಗಿ ಸಮಾಧಿಕಟ್ಟಿಸಲು ಪ್ರಾರಂಭಿಸುತ್ತಾರೆ. ಶಿವರಾತ್ರಿ ಸಮಯದಲ್ಲಿ ಶಿವಯೋಗಮಂದಿರದಲ್ಲಿದ್ದು ತಮ್ಮ ಪೂಜೆ ಅನುಷ್ಠಾನ ಜಪಗಳನ್ನು ಮುಂದುವರೆಸುತ್ತಾರೆ. ಅಲ್ಲಿದ್ದಾಗಲೇ ಬೆತ್ತದ ಅಜ್ಜನವರ ಜೊತೆ ಸತತ ಸಂಪರ್ಕದಲ್ಲಿದ್ದು ಸಮಾಧಿಯನ್ನು ಬೇಗ ಪೂರ್ಣಗೊಳಿಸಲು ಕೇಳಿಕೊಳ್ಳುತ್ತಾರೆ. ಬಸನಗೌಡರು ಏಕೋ ಅವಸರ ಮಾಡುತ್ತಾರೆ ಎಂದು ಸಮಾಧಿ ಪೂರ್ಣಗೊಳಿಸುತ್ತಾರೆ. ಸಮಾಧಿ ಕೆಲಸ ಪೂರ್ಣಗೊಂಡದ್ದನ್ನು ಕೇಳಿ ತಿಳಿದು ಶಿವಯೋಗ ಮಂದಿರದಿಂದ ಅಬ್ಬಿಗೇರಿಗೆ ಆಗಮಿಸುತ್ತಾರೆ. ನೂರಾ ಐದು ವಯಸ್ಸಿನ ಬಸನಗೌಡರು ಪಂಚಾಕ್ಷರಿ ಮಂತ್ರ ಜಪಿಸಲು ತೊಡಗುತ್ತಾರೆ. ಜಪ ಮಾಡುವುದು ಅಸಾಧ್ಯವೆನ್ನಿಸಿದಾಗ ತಮ್ಮ ತಮ್ಮನ ಮಗಳು ಹಲಗೇರಿಯ ಬಸಮ್ಮನವರಿಗೆ ಜಪಮಾಡಲು ಸೂಚಿಸುತ್ತಾರೆ.  ಬಸನಗೌಡರ ಮಾನಸ ಪುತ್ರಿಯಾದ ಬಸಮ್ಮನವರು ಸದಾ ಅವರ ಮಗ್ಗುಲಲ್ಲಿದ್ದು ಪಂಚಾಕ್ಷರಿ ಮಂತ್ರ ಜಪಮಾಡುತ್ತಾರೆ. ತಮ್ಮ ತಂದೆಯವರು ಲಿಂಗೈಕ್ಯರಾಗುವಾಗ ಮಲಗಿದ ನಡುಮನೆಯಲ್ಲಿಯೇ ಮಲಗಿದ ಬಸನಗೌಡರು ಪಂಚಾಕ್ಷರಿ ಮಂತ್ರಗಳನ್ನು ಕೇಳುತ್ತಲೇ ಲಿಂಗೈಕ್ಯರಾಗುವ ಸಮಯವನ್ನು ಎದುರು ನೋಡುತ್ತಾರೆ. ಇವರು ಮುಂಚಿತವಾಗಿ ಹೇಳಿದ ಸಮಯಕ್ಕೆ ಲಿಂಗೈಕ್ಯರಾಗುತ್ತಾರೆ, ಮಾರ್ಚ್ ೧೧, ೧೯೭೬ ರಂದು ಬೆಳಗಿನ ಜಾವ .೦೦ ಗಂಟೆಗೆ.
ಅಬ್ಬಿಗೇರಿಯ ಶ್ರೀ ಅನ್ನದಾನೇಶ್ವರ ಮಠದಲ್ಲಿ ಬೆತ್ತದ ಅಜ್ಜನವರ ನೇತೃತ್ವದಲ್ಲಿ ವಿಧಿವತ್ತಾಗಿ ಸಂಸ್ಕಾರ ಕ್ರಿಯೆ ನಡೆಯಿತು. ಬಸನಗೌಡರ ಮಾನಸ ಪುತ್ರಿ ಹಲಗೇರಿ ಬಸಮ್ಮನವರು ಸಿದ್ಧ ಪಡಿಸಿದ ೩ಲಕ್ಷ  ಪಂಚಾಕ್ಷರಿ ಮಂತ್ರಗಳ ಪುಸ್ತಕವನ್ನು ಇವರ ತೊಡೆಯ ಮೇಲಿಟ್ಟು ಇವರ ಸಂಸ್ಕಾರ ಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ. ( ಶ್ರೀ ಅನ್ನ ದಾನಸ್ವಾಮಿಗಳು ಲಿಂಗೈಕ್ಯ(೧೯೭೭)ರಾದಾಗ ಇದೇ ಬಸಮ್ಮನವರು ೬ಲಕ್ಷ ಪಂಚಾಕ್ಷರಿ ಮಂತ್ರಗಳನ್ನು ಬರೆದು ಅರ್ಪಿಸಿ ಕೃತಾರ್ಥರಾಗಿದ್ದಾರೆ.) ಹರ ಗುರು ಚರಮೂರ್ತಿಗಳು ಬಂಧು ಬಾಂಧವರು, ಊರು ಮತ್ತು ನಾಡಿನ ಅಭಿಮಾನಿಗಳು ಗೌರವದಿಂದ ಭಾಗವಹಿಸುತ್ತಾರೆ.  ಸ್ವಾಮಿಗಳಲ್ಲದವರೊಬ್ಬರ ಸಮಾಧಿ ಮಠದ ಆವರಣದಲ್ಲಿ ನಡೆಯುವುದು ಬಹಳ ವಿಶೇಷ !
೧೮೭೧ ರಲ್ಲಿ ಜನಿಸಿದ ಬಸನಗೌಡರು ೧೯೭೬ ರವರೆಗೂ ಅವಿರತವಾಗಿ ಸಮಾಜ ಕಾರ್ಯ ಮಾಡುತ್ತಲೇ ಕಾಲ ಕಳೆದವರು.  ಗೋದಿ ಬಣ್ಣದ, ಚುರುಕು ಕಣ್ಣಿನ, ನೇರಮೂಗಿನ, ಐದು ಕಾಲುಅಡಿ ಎತ್ತರದ ಬಸನಗೌಡರು ಧರಿಸುತ್ತಿದ್ದುದು ಬಿಳಿಅಂಗಿ, ಬಿಳಿಧೋತರ ಮತ್ತು ಅಚ್ಚಬಿಳಿ ಪಟಗ. ಮೇಲೆ ಕರಿ ಬಣ್ಣದ ಕೋಟು. ಅಚ್ಚುಕಟ್ಟಾದ ಉಡುಪು, ಹಣೆ ಮೇಲಿನ ವಿಭೂತಿ, ಪುಟಿವ ನಡಿಗೆ ಬಸನಗೌಡರ ವ್ಯಕ್ತಿತ್ವಕ್ಕೆ ವಿಶಿಷ್ಟ ಮೆರುಗು ಕೊಡುತ್ತಿದ್ದವು. ತ್ರಿಕಾಲ ಲಿಂಗಪೂಜೆ, ಸಾಮಾಜಿಕ ಕಳಕಳಿ, ದೇಶಪ್ರೇಮ, ನಾಡಪ್ರೀತಿ ಇವುಗಳಿಂದ ರೂಪಿತವಾದ ಬಸನಗೌಡರ ವ್ಯಕ್ತಿತ್ವ ಅನನ್ಯವಾದುದಾಗಿತ್ತು.
ಬಸನಗೌಡರು ಸ್ಥಾಪಿಸಿದ ನಾಟಕ ಮಂಡಳಿ:

ಕಂಪನಿ ನಾಟಕಗಳು ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಕರ್ನಾಟಕದಲ್ಲಿ ಅನೇಕ ನಾಟಕ ಕಂಪನಿಗಳು ರಂಗಭೂಮಿಗೆ ಸೇವೆಸಲ್ಲಿಸಿವೆ. ಅಂತಹ ಕಂಪನಿಗಳಲ್ಲಿ ಅಬ್ಬಿಗೇರಿ ಬಸನಗೌಡರು ಮತ್ತು ಸಹೋದರರು ಸ್ಥಾಪಿಸಿದ `` ಕನ್ನಡ ಸಾಹಿತ್ಯ ಸೇವಾ ನಾಟಕ ಮಂಡಳಿ '' ವಿಶಿಷ್ಟವಾದುದು.

ಕಲಾರಾಧನೆ, ಕಲಾಭಿರುಚಿಯ ಜೊತೆಗೆ ದೇಶ ಪ್ರೇಮವನ್ನು ಉದ್ದೀಪನಗೊಳಿಸಲು, ಸ್ವಾತಂತ್ರ್ಯ ಹೋರಾಟ ಪ್ರಜ್ಞೆಯನ್ನು ಬಿತ್ತಲು ನಾಟಕ ಮಂಡಳಿಯನ್ನು ಸ್ಥಾಪಿಸಿರುವುದೇ ವಿಶೇಷ !

ಸಹೋದರರಾದ ಸಂಗನಗೌಡ . ಪಾಟೀಲ, ಸಕ್ಕರಗೌಡ . ಪಾಟೀಲ, ವಿರೂಪಾಕ್ಷಗೌಡ . ಪಾಟೀಲ ಅವರ ಜೊತೆ ನಾಟಕ ಮಂಡಳಿ ಹುಟ್ಟುಹಾಕಿದ ಬಸನಗೌಡರು ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.
ನಾಟಕ ಮಂಡಳಿಯ ಸಂಪೂರ್ಣ ಜವಾಬ್ದುದಾರಿಯನ್ನು ಹೊತ್ತವರು ಬಸನಗೌಡರು. ಅಭಿನಯಿಸಲು ಬೇಕಾದ ನಾಟಕಗಳನ್ನು ಕವಿಗಳಿಂದ ಬರೆಸುವುದು, ಉತ್ತಮ ನಟರನ್ನು ಕಲೆಹಾಕುವುದು, ರಂಗಪರಿಕರಗಳನ್ನು ಸಿದ್ಧಪಡಿಸಿಕೊಳ್ಳುವುದು, ಮುಂಬೈಯಿಂದ ಪರದೆ ಇತರ ಪರಿಕರಗಳನ್ನು ತರಿಸುವುದು, ನಾಟಕ ಪ್ರಯೋಗದ ಊರನ್ನು ನಿರ್ಧರಿಸುವುದು, ಪ್ರಯೋಗಕ್ಕೆ ಸರಕಾರದಿಂದ ಅನುಮತಿ ಪಡೆಯುವುದು ಮುಂತಾದ ಎಲ್ಲ ಕಾರ್ಯಗಳನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಿದ್ದಾರೆ. ಬಸನಗೌಡರ ಕಿರಿಯ ಸಹೋದರ ವಿರೂಪಾಕ್ಷಗೌಡರು ತಮ್ಮ ಕೃಷಿ ಕಾಯಕ, ಹತ್ತಿ ಗಿರಣಿ ನೋಡಿಕೊಳ್ಳುತ್ತಲೆ ನಾಟಕ  ಮಡಳಿಯ ಕೆಲಸದಲ್ಲಿ ಸಹಾಯಕರಾಗಿದ್ದರು. ಇನ್ನೊಬ್ಬ ಸಹೋದರ  ಸಕ್ಕರಗೌಡರು ಸಹಾಯಕರಾಗಿ ದುಡಿಯುತ್ತ ಪಾತ ನಿರ್ವಣೆಯ ಜವಾಬ್ದಾರಿಯನ್ನೂ ಪೂರೈಸುತ್ತಿದ್ದರು. ಕಿತ್ತೂರ ಚನ್ನಮ್ಮ ನಾಟ್ಕದಲ್ಲಿ ಕಲೆಕ್ಟರ ಪಾತ್ರವನ್ನು ಅಭಿನಯಿಸಿ ಸೈಯೆನಿಸಿಕೊಂಡವರು.

ಕೇವಲ ಮುಲ್ಕಿ ಪರೀಕ್ಷೆವರೆಗೆ  ಓದಿದ ಬಸನಗೌಡರು ಸಹೋದರರ ಶೈಕ್ಷಣಿಕ ಪ್ರಭಾವದಿಂದ ಹೊಸ ಆಲೋಚನೆಯ ಹರಿಕಾರರಾಗಿದ್ದರು. ನಾಯಕತ್ವದ ಗುಣಗಳನ್ನು ಪಡೆದ ವ್ಯವಹಾರ ಚತುರರಾಗಿದ್ದರು. ಅವರು ಬರೆದಿಟ್ಟ ದಿನವಹಿಗಳು ವ್ಯಕ್ತಿಗತ ಸಂಗತಿ, ರಂಗ ಚಟುವಟಿಕೆಯ ವಿವರ ಮತ್ತು ಅಂದಂದಿನ ಪ್ರಮುಖ ಘಟನೆಗಳನ್ನು ಬಿಚ್ಚಿಡುತ್ತವೆ. ದಿನವಹಿಗಳನ್ನೆ ಮುಖ್ಯ ಆಕರವಾಗಿಸಿಕೊಂಡು ನಾಟಕ ಮಂಡಳಿಯ ವಿವರ ಮತ್ತು ವಿಶೇಷಗಳನ್ನು ಸಂಗ್ರಹಿಸಲಾಗಿದೆ. ಮನೆ ಹಿರಿಯರು ಮತ್ತು ಕಾಲದ ಕಲಾಭಿಮಾನಿಗಳ ವಿಚಾರಗಳನ್ನು ಸಹ ಇಲ್ಲಿ ಅಳವಡಿಸಲಾಗಿದೆ. ( ಬಸನಗೌಡರ ತಮ್ಮ ವಿರೂಪಾಕ್ಷಗೌಡರು, ಅವರ ಮಕ್ಕಳಾದ ಬಸನಗೌಡ, ಪರ್ವತಗೌಡ ಮತ್ತು ಬಸಮ್ಮ ತಾಯಿಯವರು ಹೇಳಿದ ವಿಷಯಗಳನ್ನು ಸಂಗ್ರಹಿಸಲಾಗಿದೆ.
ನಾಟಕ ಮಂಡಳಿ ೨೯-೦೩ ೧೯೨೬ ರಂದು ಅಬ್ಬಿಗೇರಿಯಲ್ಲಿಯೇ ಮೊದಲ ನಾಟಕ ಪ್ರಯೋಗಿಸಿತು. ಅನಂತರ ರೋಣ, ಸವಡಿ, ಹಿರೇಹಾಳ, ನಿಡಾಗುಂದಿ, ಉಮಚಗಿ ಮುಂತಾದ ಊರುಗಳಲ್ಲಿ ಕ್ಯಾಂಪ ಮಾಡುತ್ತ ಮುಂದುವರೆಯಿತು. ಸಂದರ್ಭದಲ್ಲಿ ಪ್ರಯೋಗಗೊಂಡ ನಾಟಕಗಳು : ಲಿಖಿತ ಲೀಲಾ, ಕಬೀರದಾಸ, ಪಾದುಕಾಪಟ್ಟಾಭಿಷೇಕ, ಶಾಪವಿಮೋಚನ ಮೊದಲಾದವು.

ಕಾಲದ ಪ್ರಸಿದ್ಧ ನಾಟಕಕಾರರಾದ ಚಿಕ್ಕೋಡಿ ಶಿವಲಿಂಗಶಾಸ್ತ್ರೀಗಳನ್ನು ಕರೆತಂದು ಅವರಿಂದ ಕಿತ್ತೂರ ಚನ್ನಮ್ಮ ನಾಟಕವನ್ನು ಬರೆಯಿಸಿದ ಬಸನಗೌಡರು ಉತ್ತಮ  ನಟರನ್ನು ಕಲೆಹಾಕಿ , ಮುಂಬೈಯಿಂದ ಅದ್ದೂರಿ ರಂಗಸಜ್ಜಿಕೆ ಖರೀದಿಸಿ ಉತ್ತಮ ರೀತಿಯಲ್ಲಿ ರಂಗತಾಲೀಮು ನಡೆಸಿ ಪ್ರಯೋಗಕ್ಕೆ ಸನ್ನದ್ಧಗೊಳಿಸಿದರು. ಅಗಸ್ಟ ೨೮, ೧೯೨೯ ರಂದು ಕಿತ್ತೂರ ಚನ್ನಮ್ಮ ನಾಟಕ ಪ್ರಯೋಗಗೊಂಡಿತು. ಅತ್ಯಂತ ಜನಪ್ರಿಯತೆ ಗಳಿಸಿತು.  

ಗದಗ, ಹುಬ್ಬಳ್ಳಿ, ಧಾರವಾಡ, ಅಣ್ಣಿಗೇರಿ, ಸವದತ್ತಿ, ವಿಜಾಪುರ, ಹೊಸಪೇಟೆ, ಕೊಪ್ಪಳ, ಕೊಟ್ಟೂರುಗಳಲ್ಲದೆ ಚನ್ನಮ್ಮನ ಕಿತ್ತೂರು, ಬೈಲಹೊಂಗಲ ಕ್ಯಾಂಪಗಳಲ್ಲಿ ಭರದಿಂದ ಪ್ರಯೋಗಗೊಂಡಿತು. ಬರುಬರುತ್ತ ಮಂಡಳಿ ದಕ್ಷಿಣ ಕರ್ನಾಟಕದ  ಹಾಸನ, ಬೆಂಗಳೂರ, ಮೈಸೂರು ಕಡೆಗೂ ಸಂಚರಿಸಿ ಕಿತ್ತೂರ ಚನ್ನಮ್ಮ ನಾಟಕವನ್ನು ಪ್ರಯೋಗಿಸಿತು.
ಆನಪ್ರಿಯತೆಯ ತುತ್ತ ತುದಿಗೇರಿದ್ದ ನಾಟಕಕ್ಕೆ ಅನೇಕ ಬಹುಮಾನ, ಪ್ರಶಸ್ತಿಗಳು ದೊರಕಿದವು. ನಾಟಕವಾಡಲು ಅನುಮತಿ ಸಿಗದೇ  ಪರದಾಡಿದ ಸಂದರ್ಭಗಳೂ ಉಂಟು. ಅಷ್ಟೇ ಅಲ್ಲ ನ್ಯಾಯಾಲಯದ ಕಟ್ಟೆ ಏರಿ ಅನೇಕ ಸಾರೆ ಅತಂಕದ ಕ್ಷಣಗಳನ್ನು ಎದುರಿಸಿತು.

ಒಂದು ಸಂಸ್ಥಾನದ ಒಡತಿ ಚನ್ನಮ್ಮ ಬ್ರಿಟಿಶರ ವಿರುದ್ಧ ಬಂಡೆದ್ದ ಕಥಾವಸ್ತುವುಳ್ಳ ನಾಟಕಕ್ಕೆ ಯಾವ ಬ್ರಿಟಿಶ ಅಧಿಕಾರಿಗಳೂ ಸುಲಭವಾಗಿ ಅನುಮತಿ ನೀಡುತ್ತಿರಲಿಲ್ಲ. ಅಲ್ಲದೆ ಮಹಾಯುದ್ಧದ ಅನಂತರ ಭಾರತದಲ್ಲಿ ಸ್ವಾತಂತ್ರ ಹೋರಾಟದ ಚಟುವಟಿಕೆಗಳು ತೀವ್ರವಾಗಿದ್ದವು. ಇಂಥ ಸಂದರ್ಭದಲ್ಲಿಯೂ ಪಟ್ಟು ಬಿಡದೆ ನಾಟಕವಾಡಲು ಅನುಮತಿ ಪಡೆದು ನಾಟಕ ಪ್ರಯೋಗಿಸಿದ್ದಲ್ಲದೆ ಬ್ರಿಟಿಶ ಅಧಿಕಾರಿಗಳಿಂದಲೇ ಮೆಚ್ಚುಗೆ, ಮೆಡಲ್ಗಳನ್ನು ಪಡೆದುಕೊಂಡರು.
ಕಿತ್ತೂರ ಚನ್ನಮ್ಮ ನಾಟಕವನ್ನು ಮೈಸೂರಿನ ಜಗನ್ಮೋಹನ ಪ್ಯಾಲೇಸಿನ ಥೇಟರಿನಲ್ಲಿ ಆಡಲು ಮಹಾರಾಣಿಯವರು ೨೬-೦೨- ೧೯೩೧ ರಂದು ಅನುಮತಿಸಿದರು. ಮಾರ್ಚ , ೧೯೩೧ ರಂದು ಪ್ರಯೊಗಗೊಂಡ ನಾಟಕ ಮೆಚ್ಚುಗೆ ಗಳಿಸಿತು. ದಿವಾನ್ ಮಿರ್ಜಾ ಸಾಹೇಬರು ಅಧ್ಯಕ್ಷತೆ ವಹಿಸಿದ್ದಲ್ಲದೆ ನಾಟಕವನ್ನು ವೀಕ್ಷಿಸಿದರು. ಕೆ. ಎಚ್. ರಾಮಯ್ಯ  ಮುಂತಾದವರು ಹಲವಾರು ಸಾರೆ ಅಧ್ಯಕ್ಷತೆ ವಹಿಸಿದರು. ಬ್ರಿಟಿಶ ಸರಕಾರದ  ಪ್ರತಿನಿಧಿಗಳಾದ ಕಲೆಕ್ಟರ್, ಮಾಮಲೇದಾರ್ ಮುಂತಾದವರು ಚನ್ನಮ್ಮನ ಪಾತ್ರಧಾರಿ ರತ್ನವ್ವ ಸವದತ್ತಿ ಅವರಿಗೆ ಪ್ರಶಸ್ತಿಪತ್ರ ನೀಡಿ , ಸೀರೆ ಕುಪ್ಪಸ ಬಹುಮಾನ ನೀಡಿದ ಪ್ರಸಂಗವೂ ಇದೆ.
ಕನ್ನಡ ಸಾಹಿತ್ಯ ಸೇವಾ ನಾಟಕ ಮಡಳಿಯ ಮಾಲಿಕರಾದ ಬಸನಗೌಡರು ತಮ್ಮ ಮಂಡಳಿಯ ಅಳಿವು ಉಳಿವಿನ, ಸಂಕಟದ ಸನ್ನಿವೇಶಗಳಲ್ಲೂ  ಅನೇಕ ಸಂಘ ಸಂಸ್ಥೆಗಳಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ, ಶಿಕ್ಷಣಪ್ರೇಮ, ದೇಶಪ್ರೇಮ, ಸದ್ಧರ್ಮಭಕ್ತಿ ಮೆರೆದಿದ್ದಾರೆ.

ನಾಟಕ ಕರ್ತೃ ಚಕ್ಕೋಡಿ ಶಿವಲಿಂಗ ಶಾಸ್ತ್ರೀಗಳ ಸಹಾಯಾರ್ಥ ಪ್ರಯೋಗ ನಡೆಸಿದ್ದು ಸಹಜವಾದದ್ದು. ಜಿಲ್ಲಾ ಕಾಂಗ್ರೆಸ್ ಕಮೀಟಿ, ಬೆಂಗಳೂರ ಖಾದಿ ಸಂಸ್ಥೆ, ಬೆಂಗಳೂರ ನೃಸಿಂಹ ದೇವಸ್ಥಾನ, ಬೆಟ್ಟದ ಪುರ ಸ್ವಾಮಿಗಳು, ಕೊಟ್ಟೂರ ಮಠ, ಕುಕನೂರ ಶಾಲೆ, ರೆಡ್ ಕ್ರಾಸ್ ಸಂಸ್ಥೆ, ಮಲ್ಲೇಶ್ವರಂ ಮಹಿಳಾ ಸಂಸ್ಥೆ, ಹೀಗೆ ಧಾರ್ಮಿಕ, ರಾಜಕೀಯ, ವೈದ್ಯಕೀಯ , ಶೈಕ್ಷಣಿಕ ವಲಯದ ಸಂಸ್ಥೆಗಳ ಸಹಾಯಾರ್ಥವಾಗಿ ಪ್ರಯೊಗ ನಡೆಸಿದ್ದು ವಿಶೇಷ !
ವಿವಿಧ ಊರುಗಳಲ್ಲಿ ಕ್ಯಾಂಪ ಮಾಡಿದ ಮಂಡಳಿ ಮೈಸೂರಿನ ಜಗನ್ಮೋಹನ ಪ್ಯಾಲೇಸ್, ಬೆಂಗಳೂರಿನ ತುಲಸಿ ಥೇಟರ್, ಶಿವಾನಂದ ಥೇಟರ್, ಗದಗ ಮಹಲಕ್ಷ್ಮೀ ಥೇಟರ್ ಗಳಲ್ಲಿ ನಾಟಕವಾಡಿದ ಕೀರ್ತಿಗೆ ಪಾತ್ರವಾಗಿದೆ. ಬಸನಗೌಡರ ದಿನವಹಿಯಲ್ಲಿ- ಪ್ರಯೋಗಗೊಂಡ ಸಂದರ್ಭದಲ್ಲಿ ಅತಿ ಕಡಿಮೆ ಸಂಪಾದನೆಯಾದ ( ರೂ. ೫೦/) ಅತಿ ಹೆಚ್ಚು ಸಂಪಾದನೆಯಾದ  ( ರೂ.೫೦೩/ ) ದಾಖಲೆಗಳೂ ಇವೆ.

ರತ್ನವ್ವ  ಸವದತ್ತಿ ನಾಟಕಮಂಡಳಿಯ ಜನಪ್ರಿಯ ನಟಿಯಾಗಿ, ಚನ್ನಮ್ಮನ ಪಾತ್ರದಿಂದ ಹೆಚ್ಚು ಪ್ರಸಿದ್ಧಿ ಪಡೆದಳು. ಸಕ್ಕರಗೌಡ . ಪಾಟೀಲರು, ಸದಾಶಿವಪ್ಪ ಹಳ್ಳಿಗುಡಿ, ಲಕ್ಷ್ಮಣರಾವ ಸೊಂಡೂರ , ಫಕೀರಪ್ಪ ಕುಂದಗೋಳ, ಗಂಗಾಧರಪ್ಪ ಮುರಗೋಡ, ಶಿವಾಜಿ ಮಲ್ಲೂರ ಮುಂತಾದವರು ಸಮರ್ಥ ರೀತಿಯಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ರಂಗಭೂಮಿಯ ಶ್ರೇಷ್ಠ ಕಲಾವಿದರಾದ ಏಣಗಿ ಬಾಳಪ್ಪನವರು ಮಂಡಳಿಯ  ಸಕ್ರಿಯ ಸದಸ್ಯರಾಗಿದ್ದರು ಮತ್ತು ಬಾಲನಟನ ಪಾತ್ರವಹಿಸುತ್ತಿದ್ದುದನ್ನು ಅವರೆ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಶಿವರುದ್ರಪ್ಪ ರುದ್ರಪ್ಪ ಕಂಠಿ ಅವರು ಕೆಲವುಕಾಲ ಮಂಡಳಿಯ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದಾರೆ.

ಅಂದಿನ ಪ್ರಸಿದ್ಧ ಹಾರ್ಮೋನಿಯಂ ವಾದಕರಾದ ಬಾಬಯ್ಯನವರು ನಾಟಕ ಕಲಿಸುವ ಮಾಸ್ತರರಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿ ಕಲಾವಿದರಾಗಿದ್ದ ಗದಿಗೆಯ್ಯ ಹಿರೇಮಠ ಅವರು ತಬಲಾವಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ನಾಟಕ ಮಂಡಳಿಯ ಅತ್ಯಂತ ಜನಪ್ರಿಯವಾದ ಕಾಲದಲ್ಲಿಯೆ ಅನೇಕ ಏರುಪೇರುಗಳನ್ನು ಕಂಡಿದೆ. ಚನ್ನಮ್ಮನ ಪಾತ್ರಧಾರಿ ಮತ್ತು ಮಂಡಳಿಯ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ  ರತ್ನವ್ವ ಸವದತ್ತಿ ಮಂಡಳಿಯಿಂದ ದೂರವಾಗಿ ಸಾಂಸಾರಿಕ ಜೀವನಕ್ಕೆ ಅಂಟಿಕೊಂಡಾಗ ಬಸನಗೌಡರು ಅವಳನ್ನು ಗೌವರದಿಂದಲೇ ಬೀಳ್ಕೊಟ್ಟು ಶುಭಹಾರೈಸಿದರು. ಜಕ್ಕಲಿಯ ದೊಡ್ಡಮೇಟಿ  ಅಂದಾನಪ್ಪನವರ  ಮನೆ ಸೇರಿದ್ದು ಎಲ್ಲರಿಗೂ ಸಂತಸವನ್ನುಂಟು ಮಾಡಿತು. ಬೇರೆಯವರು ಅದೇ ಕಾಲದಲ್ಲಿ ಸ್ತ್ರೀ ರತ್ನ ಎಂಬ ಹೆಸರಿನಲ್ಲಿ ಇದೇ ನಾಟಕವನ್ನು ಪ್ರಯೋಗಿಸತೊಡಗಿದರು. ಅನಿವಾರ್ಯವಾಗಿ ನ್ಯಾಯಾಲಯ ಕಟ್ಟೆ ಏರಿ ಹೋರಾಡಬೇಕಾಯಿತು. ಮೊದಲೇ ಬ್ರಿಟಿಶರಿಗೆ ಬೇಡವಾಗಿದ್ದ ಕಿತ್ತೂರ ಚನ್ನಮ್ಮ ನಾಟಕಕ್ಕೆ ಅನುಮತಿ ನೀಡುವದನ್ನು ನಿಲ್ಲಿಸಿ ಬಿಟ್ಟರು. ನಾಟಕ ಮಂಡಲಿ ಆಡುವ ಬೇರೆ ನಾಟಕಗಳಿಗೆ ಅಷ್ಟೊಂಡು ಪ್ರೋತ್ಸಾಹ ಸಿಗಲಿಲ್ಲ. ಹೀಗಾಗಿ ಮಂಡಳಿಯ ಜನಪ್ರಿಯತೆ ಕುಗ್ಗತೊಡಗಿತು. ಆರ್ಥಿಕ ಸ್ಥಿತಿಯೂ ಹದಗೆಟ್ಟಿತು. ನಾಟಕ ಕರ್ತೃ ಶಿವಲಿಂಗಶಾಸ್ತ್ರೀ ಮಂಡಳಿಯ ಜೊತೆ ಭಿನಾಭಿಪ್ರಾಯ ಹೊಂದಿ ದೂರವಾದರು.

೧೯೨೬ ರಲ್ಲಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಮಂಡಳಿ ೧೯೩೧ ರವರೆಗೆ ಒಟ್ಟು  ೨೨೩ ಪ್ರಯೋಗಗಳನ್ನು ಆಡಿದೆ. ಆಡಿದ ನಾಟಕಗಳು : ಕಿತ್ತೂರ ಚನ್ನಮ್ಮ, ಲಕ್ಷ್ಮೀ ಬಾಯಿ, ಶಿವಜಗದೇವ ಸಖ್ಯ, ಚಂದ್ರಗ್ರಹಣ, ಪಾರ್ವರಿ ಸತ್ಯ ಪರೀಕ್ಷೆ, ಬಸವೇಶ್ವರ, ಬೆಳವಡಿ ಮಲ್ಲಮ್ಮ, ಕೃಷ್ಣ ಲೀಲಾ, ಲಿಖಿತಲೀಲಾ, ಕಬೀರದಾಸ, ಪಾದುಕಾ ಪಟ್ಟಾಭಿಷೇಕ, ಶಾಪವಿಮೋಚನ ಮೊದಲಾದವು. ಬ್ರಿಟಿಶ ಸರಕಾರದ ವಿರೋಧ, ಆಕ್ಷೇಪಣೆ, ನಿರಾಕರಣೆಯ ಮಧ್ಯದಲ್ಲಿಯೂ ಕಿತ್ತೂರ ಚನ್ನಮ್ಮ ಒಟ್ಟು ೧೨೨ ಪ್ರಯೋಗ ಕಂಡು ಜನಮನ ಗೆದ್ದಿದೆ. ಆನರಲ್ಲಿ ಹೋರಾಟದ ಕೆಚ್ಚನ್ನು ತುಂಬಿದೆ.

-೦೫-೧೯೩೧ ರಂದು ಬೆಂಗಳೂರಲ್ಲಿ ಕಿತ್ತೂರ ಚನ್ನಮ್ಮ ನಾಟಕದ ಕೊನೆಯ ಪ್ರಯೋಗದ ಅನಂತರ  ಕಂಪನಿ ನಿಂತು ಹೋಗಿದ್ದು ಅತ್ಯಂತ ದುರ್ದೈವದ ಸಂಗತಿ. ಬಸನಗೌಡರು ಮನೆಯಲ್ಲಿಯ ಆಭರಣಗಳನ್ನು ಮಾರಿ , ಅಲ್ಲಲ್ಲಿ ಹಣ ಸಂಗ್ರಹಿಸಿ ಮುನ್ನಡೆಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಕೇವಲ - ವರ್ಷಗಳ ಸೀಮಿತ ಅವಧಿಯಲ್ಲಿ ಕನ್ನಡ ಸಾಹಿತ್ಯಕ್ಕೆ , ರಂಗಭೂಮಿಗೆ ಮತ್ತು ಮುಖ್ಯವಾಗಿ ದೇಶ ಸೇವೆಗೆ ಅಪರೂಪದ ಕೊಡುಗೆ ನೀಡಿದ ಅಬ್ಬಿಗೇರಿಯ ಮಡಳಿಯ ಅದ್ಭುತ ಕಾರ್ಯವನ್ನು ಕನ್ನಡ ನಾಡು ಎಂದೆಂದಿಗೂ ಮರೆಯಲಾರದು. 
                                                                                *****