Saturday, June 4, 2016

ಕಾರಣಿಕ ಜನಿಸಿ ಬಂದಾನೊ




ಕಾರಣಿಕ ಜನಿಸಿ ಬಂದಾನೊ


ಹಜರತ ಇಮಾಮ ಹಜೂಮಾ ದಂಪತಿಯ

ನಿಜದುದರದಲ್ಲಿ ಜನಿಸಿದ | ಶರಿಫನ 
ಮಜಕೂರ ಕೇಳೊ ಸವಿಗಾರ |

ಒಕ್ಕಲು ಮನೆತನದ ಲೆಕ್ಕಿಗನು ಹಜರತ

ಚೊಕ್ಕ ಚಿನ್ನದಂತ ಗುಣದವನು | ಸತಿಮಣಿ
ಅಕ್ಕ ಸ್ವರೂಪಿ ಹಜೂಮಾ |

ಮನೆತನದಿ ಬಡವರು ಘನತೆಯಲಿ ಹಿರಿಯರು 

ಗುಣವಂತರಿಬ್ರು ಬಾಳಿನಲಿ | ದಂಪತಿ 
ಅನುಭಾವದಲ್ಲಿ ಪರಿಣತರು |

ಸಲ್ಲಲಿತ ನಡೆಯಲ್ಲಿ ಬಲ್ಲಿದರ ಸಂಗದಲಿ 

ಎಲ್ಲರ ಮನವ ಗೆದ್ದಿದ್ದ | ಹಜರತ
 ಬೆಲ್ಲದ ಸವಿಯ ಮಾತಲ್ಲಿ |

ಗಿಡಮೂಲ್ಕಿ ವಿದ್ಯೆಯಲಿ ಗುಣವಂತ ಹಜರತ

ಜನಸೇವೆ ಮಾಡಿ ನಲಿತಿದ್ದ | ದೈವದಲಿ 
ಘನವಾದ ಶ್ರದ್ಧೆ ತೋರುತ್ತ |

ತಂದೆ ಖಾದರ ವಲಿಯೇ ಇಂದುನೀನೆಮಗೊಂದು 

ಕಂದ ರತುನವನು ಕರುಣಿಸ | ಬೇಕೆಂದು 
ವಂದಿಸುತ ಹರಕೆ ಹೊತ್ತರು |

ಸಂತಾನ ಭಾಗ್ಯಕ್ಕ ಚಿಂತೇಯ ಮಾಡುತ್ತ 

ಸಂತ ಹುಲಗೂರ ಖಾದರನ | ಬೇಡ್ಯಾರ 
ಕಂತುಹರನಂತ ಮಗಬೇಕೊ |

ಹಜ್ಜೂಮಾ ದಂಪತಿಯ ಹೆಜ್ಜೆಯೂ ಕುಂದಿದವು 

ಗೆಜ್ಜೆ ಕಾಲ್ಗಳ ಮಗರಾಮ | ಹೊಟ್ಟೆಯಲಿ
ಗಜ್ಜುಗದಾಟ ಆಡ್ವಾಗ |

ಒಂಬತ್ತು ತಿಂಗಳು ತುಂಬಿ ಬಂದವು ದಿನ 

ಚಂಬೆಳಕ ಚಂದ್ರ ಶರಿಫ | ಉದಿಸಿದ 
ಬಿಂಬದ ಛಾಯೆ ಬೀರುತ್ತ |

ಹುಲಗೂರ ಖಾದರನ ಒಲವಿನ ಕೂಸಾಗಿ 

ನಲಿವಿಂದ ಜನಿಸಿ ಬಂದಂತ | ಶರಿಫನಿಗೆ 
ಬೆಲೆ ಕಟ್ಟುದೆಂಗೊ ಲೋಕದಲಿ |

ಹಂಬಲದ ಭಾವಕ್ಕೆ ಇಂಬುಕೊಡು ನೀನೆಂದು 

ಸಾಂಬ ಖಾದರನ ಬೇಡಿದ | ಕಾಲಕ್ಕೆ 
ನಂಬಿಕೆಯ ಶರಿಫ ಹುಟ್ಟ್ಯಾನೊ |

ಹುಟ್ಟಿದ ಕೂಸಿನ ದಿಟ್ಟ ರೂಪವ ಕಂಡು 

ಒಟ್ಟು ಗೂಡುತ್ತ ಬಂಧುಗಳು | ಶರಿಫ  ನೀ 
ಗಟ್ಟಿ ಬಾಳೆಂದು ಹರಸಿದರು |

ಬಾಲ ಶರಿಫನ ತುಂಟ ಲೀಲೆಗೆ ಕೊನೆಯಿಲ್ಲ 

ಲಾಲಿ ಹಾಡೆಂದು ಹಲುಬ್ಯಾನ | ತೊಟ್ಟಿಲದಿ 
ಜೋಲಿ ತೂಗುತ್ತ ನಲಿದಾನ |

ಗೋಳಾಟ ಮಾಡದಲೆ ಜೋಳಿಗೆ ತೊಟ್ಟಿಲಲಿ

ಮೇಳ ಸಂಗೀತ ಹಾಡುವ | ಶರಿಫನು 
ಕೋಳಿ ನಿದ್ದೆಯ ಸರದಾರ |

ಬಟ್ಟಲ ಕಣ್ತೆರೆದು ತೊಟ್ಟಿಲಲಿ ಮಲಗಿಹನು 

ಪುಟ್ಟ ಕೈಕಾಲು ಆಡಿಸುತ | ಆಗಸವ 
ಮುಟ್ಟಲೆಳಸುವನು ಜಿಗಿದಾಡಿ |

ಚಟ್ಟನೆ ಪುಟಿಪುಟಿದು ಹೊಟ್ಟೆಯ ಹೊಸೆಯುವನು 

ಗಟ್ಯಾಗಿ ಕೈಯ ಊರುತ್ತ | ನೆಲವನ್ನೇ 
ಕುಟ್ಟುವನು ತುಂಟ ಶರಿಫನು |

ಚಂದ್ರನ ಸಂಭ್ರಮ ಇಂದ್ರನ ವೈಭೋಗ 

ಮಂದಾರ ನಗೆಯ ಚಲ್ವಿಕೆ | ಶರಿಫನು
ಸುಂದರ  ರತುನ ಮನೆಯಲ್ಲಿ |

ಹೂಂಕಾರ ನಾದದಲಿ ಝೇಂಕಾರ ರಾಗದಲಿ 

ಓಂಕಾರ ಮಂತ್ರ ನುಡಿವಂತೆ | ಶರಿಫನು
ಶಂಕರನ ನೆನೆವ ದಿನರಾತ್ರಿ |

ಬಾಗಿದ ಮುಗಿಲಿಗೆ ತಾಗಿಸಿ ಕೈಗಳನು 

ಕೂಗಿ ಚಂದಿರನ ಕರೆಯುತ್ತ | ಶರಿಫನು
ತೂಗುತ್ತ ಕೇಕೆ ಹಾಕುವನು |

ನವಿಲುಗರಿ ನಾಜೂಕು ಸವಿಜೇನ ಮಾಧುರ್ಯ 

ಕವಿನುಡಿಯ ಜಾಣ್ಮೆ ಮಾತಲ್ಲಿ | ಶರಿಫನ
ನವಿರು ನಗೆ ಬೆಳಕು ಎಲ್ಲೆಲ್ಲು |

ಮೀನುಗಣ್ಣಿನ ಚಪಲ ಜೇನು ಜೊಲ್ಲಿನ ಚತುರ 

ಜಾಣ ಗಿಳಿಮರಿಯ ಸವಿಮಾತು | ಶರಿಫನ
ಗಾನವಮೃತವು ಲೋಕಕ್ಕೆ |

ಹದಿನೆಂಟು ನೂರರ ಹತ್ತೊಂಬತ್ತರಲಿ

ಜುಲೈ ತಿಂಗಳು ಮೂರನೆಯ | ದಿನದಂದು 
ಉದಿಸಿ ಬಂದಾನೊ ಶರಿಫನು |




No comments: