Monday, June 6, 2016

ಮೀರಿದ ಗುರುವು ದೊರೆತಾನೋ



ಮೀರಿದ ಗುರುವು ದೊರೆತಾನೋ

ಹುಡುಕುವ ಬಳ್ಳಿಯು ತೊಡಕಿತು ಕಾಲಿಗೆ 

ಖಡಕಾದ ಗುರುವು ಗೋವಿಂದ | ಭಟ್ಟರಿಗೆ
ಕಡುನಿಷ್ಠೆ ಶಿಷ್ಯ ದೊರೆತಾನ 

ಪಾರಿವಾವಳದ ಹಿಂದೆ ಹಾರುವ ಹುಡುಗನ್ನ 

ಮೀರಿದ ದೃಷ್ಟಿ ಶರಿಫನ್ನ | ಗೋವಿಂದ
ವಾರಿಗಣ್ಣಿಲೆ ನೋಡಿದ |

ಇದ್ದರ ಇರಬೇಕು ಸಿದ್ಧಿ ಲಕ್ಷ್ಯದ ಮನಸು

ಮುದ್ದು ಶರಿಫನ ತೆರದಲ್ಲಿ | ಎನ್ನುತ 
ಖುದ್ದು ಶಿಷ್ಯನ್ನ ಮಾಡಿಕೊಂಡ |

ಗೋವಿಂದ ಗುರುವಿನ ಭಾವದಲಿ ಒಂದಾಗಿ 

ಜೀವದಲಿ ಬೆರೆತು ಹೋಗ್ಯಾನೊ | ಶಿಶುನಾಳ 
ದೇವನ ಭಕುತ ಶರಿಫನು |

ಕಳಸದ ಗುರುವಿನ ಸೆಳೆತಕ್ಕೆ ಸಿಲುಕ್ಯಾನ

ಜಳಕ ಮಾಡ್ಯಾನ ನೀರಿಲ್ದ | ಶರಿಫನ 
ಬಳಕೆಯ ಬಗೆಯೇ ಬೆಡಗಿನದು |

ಗುರುವಿನ ಬೆನ್ನತ್ತಿ ತಿರುಗ್ಯಾನ ನಾಡೆಲ್ಲ 

ವರವಿದ್ಯೇ ವೇದ ಆಗಮವ | ಅರಿಯುತ್ತ 
ಹರಿಹರನ ಒಲುಮೆ ಗಳಿಸ್ಯಾನ |

ಹರಿಮತದ ಸಿದ್ಧಾಂತ ಹರಮತದ ತತ್ವದಲಿ 

ಬೇರೆಯುತ್ತ್ತ ಮೀರಿ ಧರ್ಮವನೆ | ನಲಿದಾಡೋ
ಶರಿಫನ  ನಿಲುಮೆ ಸೋಜಿಗ |

ನಡೆನುಡಿಗ ಶರಿಫನ ಬೆಡಗೇನು ಹೇಳುವುದು

ಗಡಿ ಮೀರಿ ನಿಂತ ಭಕುತಿಯು | ಗುರುಗಳಲಿ
ಮಡುವು ಗಟ್ಟಿತ್ತು ಅನುಗಾಲ |

ದೊರಕಿದ ಗೋವಿಂದ ಗುರುವಿನ ಕಾರುಣ್ಯ 

ಚಿರವಾಗಿ ಪಡೆದ ವರಕವಿ | ಶಿಶುನಾಳ 
ಶರಿಫನೆ ಧನ್ಯ ಭಾಗ್ಯದಲಿ |

ಗುಡಗೇರಿ ಕಲ್ಮಠದ ಪಡಸಾಲೆಯಲಿ ಕುಳಿತು

ಬೆಡಗಿನ ವಿದ್ಯೆ ಕಳಿಸಿದ | ಶರಿಫನಿಗೆ 
ಒಡೆಯ ಕಳಸದ ಗೋವಿಂದ  |

ಉಳಿಮುಟ್ದ ಲಿಂಗವನು ಸೆಳೆತಂದ  ಗೋವಿಂದ

ಬಳಸಿ ಬೀಜವನು ಬಿತ್ತಿದ | ಭಾವದಲಿ 
ಬೆಳೆದ ಅನುಭಾವದ ಸಿರಿಯನ್ನು |

ನಿನ್ನಪ್ಪ ಯಾರಂದ್ರ ನಿನ್ನಪ್ಪನವನೆ

ನನ್ನಪ್ಪ ಎಂದ ಬಾದ್ದೂರ | ಶರಿಫನು
ಬೆನ್ನತ್ತಿ ನಡೆದ ಗುರುಹಿಂದೆ |

ಹರಗಣೆ ಹೊತ್ತಿನಲಿ ವರಗುರು ನೆನೆಪಾಗಿ 

ಹರಗುವ ಗಳೆಯ ಬಿಟ್ಟೋಡಿ | ಕಳಸದಲಿ
ಗುರುವನು ಕಂಡ ಶರಿಫನು |

ಬರಗಾಲಲಿ ಅವಸರಿಸಿ ವರಗುರುವ ಕಾಣಲು 

ನೆರೆಜೋಡು ಕೈಲೆ ಹಿಡಕೊಂಡು | ಕಳಸದ 
ಪುರಕೆ  ಹೊರಟೋದ ಓಡುತ್ತ |

ಅಪ್ಪ ಶರಿಫನೆ ನೀನು ಚಪ್ಪಲಿಯ ಕೈಲಿಡಿದು 

ಗಪ್ಪ ಗಡದೋಡಿ ಹೊರಟೀದಿ | ಎಲ್ಲಿಗೆ
ಗೆಪ್ತಿ ಇಲ್ಲೇನೊ ಮೈಮೇಲೆ |

ಗುರುವಿನ ತಾಣವು ಹರಗುಡಿಗೆ ಮಿಗಿಲಾದ್ದು 

ಬರಿಗಾಲಲೋಡಿ ಬಂದೇನಿ | ಕಳಸವು 
ವರಮುಕ್ತಿ ಕ್ಷೇತ್ರ ತನಗೆಂದ |

ದೇವರ ಗುಡಿಯಂದೆ ಭಾವಿಸುವೆ ಕಳಸವನು

ಧಾವಿಸಿ ಬರುವೆ ನನ್ನಪ್ಪ | ಗೋವಿಂದ
ಸಾವಿರದೂರ ಸರದಾರ |

ಕಳಸದ ಗೋವಿಂದ  ಬೆಳೆಸಿದ ಗುರುವೆನಗೆ 

 ಹಳಸಲು ಮಾತು ಹರಿದಾಕಿ | ನನ್ನಪ್ಪ
ಗಳಿಸಿದ ವಿದ್ಯೆ ಉಣಿಸ್ಯಾನೊ |


No comments: