Tuesday, September 8, 2009

ನೆನಪಿನ ಬುತ್ತಿ ೨

ಇನ್ನೊಂದು ಸ್ವಾರಸ್ಯಕರವಾದ ಸಂಗತಿಯನ್ನು ಇಲ್ಲಿಯೇ ಹೇಳುವುದು ಸೂಕ್ತ.ಅಮ್ಮಬೇರೆ ಯಾರದೋ ಮುಂದೆ ಹೇಳುವಾಗ ಕೇಳಿಸಿಕೊಂಡದ್ದು.ಅವ್ವ ಸಾಯುವಾಗ ಬಾಯಲ್ಲಿ ಎಷ್ಟು ನೀರು ಹಾಕಿದರೂ ಜೀವ ಹೋಗಲಿಲ್ಲವಂತೆ. ಬರಿ ಅಮ್ಮನ ಮುಖವನ್ನೇ ನೋಡುತ್ತಿದ್ದಳಂತೆ. ಯಾರು ಬಾಯಲ್ಲಿ ನೀರು ಹಾಕಿದರೂ ಜೀವ ಹೋಗಲೇ ಇಲ್ಲವಂತೆ. ಕೊನೆಗೆ ಅವ್ವನ ಮುಖವನ್ನು ನೋಡಿ ಅಮ್ಮನೇ ಅರ್ಥ ಮಾಡಿಕೊಂಡಳಂತೆ . `ನನ್ನವು ಸುಳ್ಳು ನಿನ್ನವು ಖರೆ' ಎಂದು ಕೈ ಮೇಲೆ ಕೈ ಹಾಕಿ ಮಾತು ಕೊಟ್ಟಳಂತೆ.(ನನ್ನ ಮಕ್ಕಳು ಸುಳ್ಳು ನಿನ್ನ ಮಕ್ಕಳು ಖರೆ ಎಂದು ಅರ್ಥ) ಆಗ ಜೀವ ತಕ್ಷನ ಹೋಯಿತಂತೆ. ನನ್ನ ಅವ್ವ ನನ್ನ ತಮ್ಮನ ಹೆರಿಗೆಯ ಅನಂತರ ತನ್ನ ಅಣ್ಣ ಸೋಮನಗೌಡನ (ನನ್ನ ಸೋದರಮಾವ )ಜೊತೆಗೆ ಬೇರೆಯಾಗಿ ಹೋಗುವವಳಿದ್ದಳಂತೆ. ಆದರೆ ಅಷ್ಟರಲ್ಲಿಯೇ ಈ ಸಾವು ಬಂದೆರಗಿದೆ! ಮಲತಾಯಿತೊಬ್ಬಳು ತನ್ನ ಮಕ್ಕಳು ಸುಳ್ಳು ನಿನ್ನ ಮಕ್ಕಳು ಖರೆ ಎಂದು ಮಾತು ಕೊಡುವುದು ಸಾಮಾನ್ಯವೆ? ಅಂದು ಅವ್ವನ ಸಾವಿನ ಸಂದರ್ಭದಲ್ಲಿ ಮಾತು ಕೊಟ್ಟಂತೆ ಅಮ್ಮ ಕೊನೆಗಾಲದವರೆಗೂ ಹಾಗೆಯೇ ನಡೆದುಕೊಂಡಳು.ನನ್ನ ಅವ್ವ ಮತ್ತು ಅಮ್ಮನ ಸಂಬಂಧ ಹೇಗಿತ್ತು ಗೊತ್ತಿಲ್ಲ. ಗಂಗವ್ವ ಚಿಗವ್ವನಿಗೆ ಗೊತ್ತಿರಬೇಕು.ಅವಳನ್ನು ಕೇಳಿ ತಿಳಿಯಬೇಕು.

ಅವ್ವನಿಲ್ಲದ ಕೊರತೆ ಅನುಭವಿಸಿದ್ದು ಇತ್ತೀಚೆಗೆ,ನನ್ನ ಅಮ್ಮ ನ ಸಾವಿನ (೧೯೭೯) ಅನಂತರ. ಗೆಳೆಯ ಬಿ. ಎಸ್.ಹಿರೇಗೌಡರ ಮೇಲಿಂದ ಮೇಲೆ ಕೇಳುತ್ತಿದ್ದ, ನಿನಗೆ ನಿಮ್ಮ ಅವ್ವನಿಲ್ಲದ್ದು ಕೊರತೆಯನಿಸುವದಿಲ್ಲವೆ ? ಎಂದು. ನಾನು ಇಲ್ಲವೆಂದೇ ಉತ್ತರ ಕೊಡುತ್ತಿದ್ದೆ. ನನ್ನ ಅಮ್ಮನೇ ಅವ್ವನ ಕೊರತೆ ತುಂಬಿದ್ದಾಳೆ ಎಂದು ಹೇಳುತ್ತಿದ್ದೆ. ನನ್ನ ಅಮ್ಮ ನನ್ನನ್ನು ಬೆಳೆಸಿದ್ದನ್ನು ಕೇಳಿ , ಮನೆಗೆ ಬಂದಾಗ ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದ. ಅವ್ವನ ಅವ್ವ ತಾಯಿಯ ತಾಯಿ ಅಮ್ಮಹೆಣೆದ ಹಣದ ಚೀಲ ಮೊನ್ನೆ ಸಿಕ್ಕದ್ದು ಇಷ್ಟಕ್ಕೆಲ್ಲ ಕಾರಣ ! ಎರಡೂ ಕಡೆ ಹಣವಿಟ್ಟು ದಾರ ಎಳೆದರೆ ಸಾಕು ಗೊತ್ತಿಲ್ಲದವರಿಗೆ ಮತ್ತೆ ಬಾಯಿ ತೆಗೆಯಲು ಬರುವುದೇ ಇಲ್ಲ .ಅಂತಹ ತಾಂತ್ರಿಕ ಕೌಶಲ್ಯ ಆ ಚೀಲದಲ್ಲಿದೆ. ಅವ್ವನ ನೆನಪನ್ನು ತರುವ ಮತ್ತೆರಡು ವಸ್ತುಗಳೆಂದರೆ ಕಸೂತಿ ಹಾಕಿದ ಒಂದು ವಸ್ತ್ರ ,ಚೀಣಿ ಮಣ್ಣಿನ ಗೊಂಬೆಗಾಗಿ ಹೆಣೆದ ಮುತ್ತಿನ ಪೋಷಾಕು ಮತ್ತು ಮುತ್ತಿನ ಶಿವನ ಪುಟ್ಟಿ.ಕಸೂತಿ ಹಾಕಿದ ವಸ್ತ್ರ ಇದೆ. ಚೀನಿ ಮಣ್ಣಿನ ಗೊಂಬೆ ಎಲ್ಲಿದೆ ಗೊತ್ತಿಲ್ಲ , ಪೋಷಾಕು ಮಾತ್ರ ನನ್ನಲ್ಲಿದೆ. ಮುತ್ತಿನ ಶಿವನ ಪುಟ್ಟಿ ದಾರ ಮತ್ತು ಬಿದಿರು ಕೊಳೆತು ಇಟ್ಟ ಡಬ್ಬಿಯಲ್ಲಿಯೇ ನಾಶವಾಗಿತ್ತು.ನಾನು ಹತ್ತು ಹನ್ನೆರಡು ವರ್ಷ ಅದೇ ಶಿವನ ಪುಟ್ಟಿಯನ್ನು ದೀಪಾವಳಿ ಸಂದರ್ಭದಲ್ಲಿ ಏರಿಸುತ್ತಿದ್ದೆ. ಮುತ್ತಿನ ಶಿವನ ಪುಟ್ಟಿ ಹಾಳಾದದ್ದು ಕಂಡು ಬಹಳ ಯಾತನೆಪಟ್ಟೆ.ಶಿವನ ಪುಟ್ಟಿಯ ಅಳಿದುಳಿದ ಮುತ್ತು ಎಲ್ಲಿವೆಯೋ ಈಗ!ಆದರೆ ಊರಿಂದ ಅವ್ವನ ನೆನಪಿಗಾಗಿ ತಂದ ಒಂದು ಕೆಂಪು ಹವಳದ ಸರ ಈಗಲೂ ನನ್ನಲ್ಲಿವೆ. ಅವ್ವನ ನೆನಪಿಗೆ ಇಷ್ಟಾದರೂ ಬೇಡವೇ?

Sunday, September 6, 2009

ನೆನಪಿನ ಬುತ್ತಿ ೧

ಎಂದಿನಿಂದಲೋ ಬರೆಯಬೇಕೆಂದುಕೊಂಡಿದ್ದ ಬಾಲ್ಯದ ನೆನಪುಗಳನ್ನು ಇಂದು ಎಕೋ ಕೆದಕಿ ಬರೆಯ ಬೇಕೆನಿಸಿದೆ.
ಆದರೆ ಎಲ್ಲಿಂದ ಪ್ರಾರಂಭಿಸುವುದು , ಹೇಗೆ ಪ್ರಾರಂಭಿಸುವುದು ಎಂಬುದೇ ಸಮಸ್ಯೆ.ಹಿಂದೆಯೂ ಈ ಸಮಸ್ಯೆ ಎದುರಾದದ್ದರಿಂದಲೇ ಬರೆಯುವುದನ್ನು ಮುಂದೂಡುತ್ತ ಬಂದಿದ್ದೆ. ಈಗಲೂ ಎಷ್ಟರಮಟ್ಟಿಗೆ ಆ ನೆನಪುಗಳನ್ನು ಇಲ್ಲಿ ದಾಖಲಿಸುವುದು ಸಾಧ್ಯವೋ..... ಗೊತ್ತಿಲ್ಲ !
ಬಹುಶಃ ಬಾಲ್ಯದೊಂದಿಗೆ ಮುಖಾಮುಖಿಯಾಗುವುದು ಕಷ್ಟದ ಕೆಲಸ !


ಮೊದಲು ಅವ್ವನ ಕುರಿತು , ಹಡದವ್ವನ ಕುರಿತು ಬರೆಯಬೇಕು. ಅವ್ವ ಎನ್ನುವ ಶಬ್ದದ ಬಗ್ಗೆಯೇ ನನಗೆ ತೀವ್ರ ಕುತೂಹಲ ! ನನ್ನ ಓರಿಗೆಯವರೆಲ್ಲ ಅವ್ವ ಅವ್ವ ಎಂದು ತಮ್ಮ ಅವ್ವಂದಿರನ್ನು ಕರೆಯುವಾಗ ನನಗೆ ಹಾಗನ್ನಿಸಿರಬೇಕು. ಏಕೆಂದರೆ ನಾನು ಮನೆಗೆ ಹೋದಾಗ ಕರೆಯುವುದು ಅಮ್ಮ ಎಂದೇ ಹೊರತು ಅವ್ವ ಎಂದಲ್ಲ. ಅಮ್ಮ ಎಂದರೆ ನನ್ನನ್ನು ಜೋಪಾನಮಾಡಿದ ನನ್ನ ತಾಯಿಯ ಮಲತಾಯಿ. ನಾನು ಅವ್ವ ಎಂದು ಕರೆಯುತ್ತಿದ್ದದ್ದು ಒಂದಿಬ್ಬರಿಗೆ ಮಾತ್ರ , ಅದೂ ಅವರ ಹೆಸರಿನೊಂದಿಗೆ ಅವ್ವ ಪದ ಸೇರಿಸುತ್ತಿದ್ದೆ.


ಸಂಗವ್ವವ್ವ,ಕಲ್ಲವ್ವವ್ವ ಎಂದು. ಅವರು ನನ್ನ ತಂದೆಯ ಮೊದಲ ಹೆಂಡತಿಯ ಅಕ್ಕ ತಂಗಿಯರು. ನನ್ನ ಅಪ್ಪ ನನ್ನ ಅವ್ವನಿಗಿಂತ ಮೊದಲು ಮತ್ತೊಬ್ಬಳನ್ನು ಮದುವೆಯಾಗಿದ್ದ ಎಂಬುದು ಗೊತ್ತಾದದ್ದು ತೀರ ಇತ್ತೀಚೆಗೆ-ಅಂದರೆ ನಾನು ಪದವಿ ಹಂತಕ್ಕೆ ಬಂದಾಗ. ಅವರನ್ನು ಹಾಗೆ ಸಂಗವ್ವವ್ವ ... ಎಂದು ಕರೆಯುವುದು ನನಗೆ ಮುದ ನೀಡುತ್ತಿತ್ತು. ಅವರೂ ಸಹ ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಹೇಗೂ ನಾನು ಅವರ ತಂಗಿಯ ಗಂಡನ ಚಿಕ್ಕ ಮಗನಾದ್ದರಿಂದ, ಅದೂ ತಾಯಿಯನ್ನು ಕಳೆದುಕೊಂಡ ಪರದೇಶಿ ಮಗನಾದ್ದರಿಂದ.


ನನ್ನ ಅಣ್ಣ ಈ ತಾಯಿಯಿಲ್ಲದ ಕೊರತೆಯನ್ನು ತುಂಬಿಕೊಳ್ಳುವದಕ್ಕೊ ಅಥವಾ ನಮ್ಮ ಚಿಗವ್ವ ಮತ್ತು ಮಾವನನ್ನು ಅನುಸರಿಸಿಯೊ ನಮ್ಮ ತಾಯಿಯ ತಾಯಿಗೆ (ಬಾಯಮ್ಮನಿಗೆ)ಅವ್ವ ಎಂದೇ ಕರೆಯುತ್ತಿದ್ದನು.ನಾವು ನಾಲ್ಕೂಜನ ( ಅಣ್ಣ ,ಆಕ್ಕಂದಿರು ಮತ್ತು ನಾನು) ನಮ್ಮ ಅಪ್ಪನನ್ನು ದೊಡ್ಡಮಾವ ಎಂದೇ ಕರೆಯುತ್ತಿದ್ದೆವು-ಚಿಗವ್ವ ಮತ್ತು ಮಾವನ್ಅನ್ನು ಅನುಸರಿಸಿ.

`

ಅವ್ವ' `ಅಪ್ಪ' ಎಂದು ಕರೆಯುವ ಅವಕಾಶದಿಂದ ನಾವೆಲ್ಲರೂವಂಚಿತರಾಗಿದ್ದೆವು. ನಾನು ಅಪ್ಪ ಎಂದು ಕರೆಯಲು ಪ್ರಾರಂಭಿಸಿದ್ದು ಪದವಿ ತರಗತಿಗೆ ಬಂದಮೇಲೆ ಅದೂ ಗೆಳೆಯರ ಮುಂದೆ ಏನಾದರೂ ತಂದೆಯ ಬಗೆಗೆ ಹೇಳುವುದು ಬಂದಾಗ.ನಾನು ನನ್ನ ಅವ್ವನನ್ನು ಅವ್ವ ಎಂದು ಕರೆದದ್ದು ಇಲ್ಲವೇ ಇಲ್ಲ. ಏಕೆಂದರೆ ನನ್ನ ಅವ್ವ ತೀರಿಕೊಂಡದ್ದು ನನಗಿನ್ನೂ ಎರಡು ವರ್ಷ ತುಂಬುವ ಮುಂಚೆ, ನನ್ನ ತಮ್ಮನನ್ನು ಹಡೆದ ಎಂಟು ಹತ್ತು ದಿನಗಳಲ್ಲಿಯೇ.ಹೀಗೆಂದು ನಮ್ಮ ಅಮ್ಮ ಯಾರದಾದರೂ ಮುಂದೆ ಹೇಳುವಾಗ ಕೇಳಿಸಿಕೊಂಡದ್ದು. ಆದರೂ ಅವ್ವ ನನ್ನ ನೆನೆಪಿನಿಂದ ಮಾಸಿಲ್ಲ.
ಅವ್ವನ ಕುರಿತು ನನಗೆ ನೆನಪಿದ್ದ ಸಂಗತಿಗಳು ಎರಡೇ ಎರಡು ಮಾತ್ರ.


ಒಂದು : ಅಮ್ಮ ,ಗಂಗಕ್ಕ , ಕಲ್ಲಕ್ಕ (ನಮ್ಮ ಚಿಕ್ಕಮ್ಮರನ್ನು ಕರೆಯುತ್ತಿದ್ದದ್ದು ಹೀಗೆ) ಮತ್ತು ಅವ್ವ ಎಲ್ಲರೂ ಸೇರಿ ದನದ ಮನೆಯ ತಲಬಾಗಿಲ ಹೊಸ್ತಿಲ ಹತ್ತಿರ ಕೂತು ಸಂಡಿಗೆ ಮಾಡುತ್ತಿದ್ದರು. ಬಾಗಿಲ ಹೊರಗೆ ನಿಗಿ ನಿಗಿ ಕೆಂಡದಂತಹ ಬಿಸಿಲು. ಬಿಸಿಲಲ್ಲಿ ಹಾಕಿದ ಹೊರಸಿನ ಮೇಲೆ ಸಂಡಿಗೆಯನ್ನು ಒಣಗಿಸಲು ಇಟ್ಟಿದ್ದರು. ಮಕ್ಕಳಾದ ನಾವೆಲ್ಲ ಸಂಡಿಗೆ ಹಿಟ್ಟನ್ನು ತಿನ್ನುತ್ತಲೇ ಇದ್ದೆವು. ನಾನಂತೂ ಹಿಟ್ಟಿನ ಡಬರಿಯ ಹತ್ತಿರ ಕೂತು ಹಿರೇತನ ಮಾಡುತ್ತಿದ್ದೆ. ಅಷ್ಟೊತ್ತಿಗೆ ಅವ್ವ ವಾಂತಿಮಾಡಿಕೊಂಡಳು. ಎಲ್ಲರಿಗೂ ಗಡಿಬಿಡಿಯಾಯಿತು. ಅವಳೂ ಹೆಚ್ಚು ಸಂಡಿಗೆ ಹಿಟ್ಟು ತಿಂದು ಹೊಟ್ಟಿ ಕೆಟ್ಟಿರಬೇಕೆಂದು ನಾನು ತಿಳಿದಿದ್ದೆ. ಆದರೆ ಮುಂದೇನಾಯಿತೊ ಗೊತ್ತಿಲ್ಲ ಅವ್ವ ಸತ್ತದ್ದದ್ದಷ್ಟೆ ನೆನಪು. ಅವಳು ಸತ್ತದ್ದು ಹೊಸಮನೆಯಲ್ಲಿ ಎಂಬುದು ಮಾತ್ರ ಸ್ಪಷ್ಟ ನೆನಪಿದೆ. ಹನಮಂತ ದೇವರ ಗುಡಿಯ ಹತ್ತಿರವಿರುವ ಈ ಮನೆಯಲ್ಲಿ ದನ ಕಟ್ಟಲು ಜಾಗವಿಲ್ಲ . ಈ ಮನೆಯ ಆವಾರದಲ್ಲಿ ಅಜ್ಜ ಕುಳಿತಿದ್ದ. ಪಟಗ ಸುತ್ತಿದ ಅಜ್ಜನ ಹತ್ತಿರ ನಾನು ಹೋಗಿ ಕುಳಿತದ್ದು ನೆನಪಿದೆ.


ಅವ್ವ ಸತ್ತ ಕೆಲವೇ ದಿನಗಳಲ್ಲಿ ತಮ್ಮ ಸತ್ತ .ಅವನು ಎಂಟಹತ್ತು ದಿನದವ. ನನ್ನ ಮೇಲೆ ಅವನನ್ನು ಹಡೆದಾಗಲೇ ನನ್ನ ಅವ್ವ ಸತ್ತದ್ದು. ಅವನ ಹೆಣವನ್ನು ಹಿತ್ತಲಲ್ಲಿ ಹುಗಿಯಲು ಒಯ್ಯುತ್ತಿದ್ದಾಗ ನೋಡಿದ ಚಿತ್ರ ಇಂದಿಗೂ ಸ್ಪಷ್ಟವಾಗಿದೆ. ಕೈಯಲ್ಲಿ ಹಿಡಿದಿದ್ದರೊ ಮರದಲ್ಲಿ ಹಿಡಿದಿದ್ದರೊ ಗೊತ್ತಿಲ್ಲ. ಅಂತೂ ಅವನ ಹೆಣವನ್ನು ಒಯ್ಯುವಾಗ ನಾಲ್ಕಾರು ಮಕ್ಕಳ ಜೊತೆ ಸಣ್ಣ ರುದ್ರಗೌಡನ ಅಂಗಡಿ ಖೋಲಿಯ ಕಿಡಕಿಯಲ್ಲಿ ಇಣುಕಿ ಹಾಕಿ ನೋಡಿದೆ. ಅಜ್ಜನ ಜೊತೆಗೆ ಯಾರೊ ಇಬ್ಬರಿದ್ದರು. ಒಬ್ಬ ಸಿದ್ಧನಗೌಡ ಮಾವ ಇರಬಹುದು. ಸಣ್ಣ ರುದ್ರಗೌಡ ಎಂದರೆ ನಮ್ಮಪ್ಪನ ಮೊದಲ ಹೆಂಡತಿಯ ಅಣ್ಣ. (ಅವನ ಬಗ್ಗೆಯೂ ಬರೆಯುವದಿದೆ. ನನ್ನ ಜೀವನ ವಿಕಾಸದಲ್ಲಿ ಅವನ ಪಾತ್ರವೂ ಬಹಳ ಮುಖ್ಯವಾದದ್ದು. ನನ್ನ ಬಾಲ್ಯದಲ್ಲಿ ಗಾಢ ಪ್ರಭಾವ ಬೀರಿದವರಲ್ಲಿ ಇವನೂ ಒಬ್ಬ.)``ಸಣ್ಣ ಹುಡುಗರು ಒಳಗೆ ಹೋಗ್ರಿ. ಒಳಗ ಹೋಗ್ರಿ''ಎಂದು ನೆರಳು ಬೀಳಬಾರದು ಎಂದು ಹೆದರಿಸಿದರು. ನನ್ನ ತಮ್ಮನಿಗೆ ಕಟ್ಟಿದ ಕುಂಚಿಗೆಯನ್ನು ನೋಡಿದ್ದೆ. ಸಣ್ಣ ರುದ್ರಗೌಡನ ಹೆಂಡತಿ ಶಾಂತವ್ವತ್ತಿ ನನಗೆ ಏನೋ ತಿನಿಸು ಕೊಟ್ಟಂತೆ ನೆನಪು. ಹಿತ್ತಲಲ್ಲಿ ಗ್ವಾಯಿನ ಮರದ ಹತ್ತಿರ ಹುಗಿದಿದ್ದನ್ನು ನೋಡಿದ ನೆನಪು ಇದೆ.



ಹಿತ್ತಲಲ್ಲಿ ನನ್ನ ತಮ್ಮನನ್ನು ಹುಗಿದ ಜಾಗದ ಸಮೀಪವೇ ನನ್ನ ಚಿಗವ್ವನ ಮಗನನ್ನು ಮತ್ತು ನನ್ನ ಅಕ್ಕ ಶಾಂತಕ್ಕನ ಮಗನನ್ನು( ೫-೬ ದಿನದ ಕೂಸು)ಹುಗಿದಿದ್ದರಿಂದ ಆ ಜಾಗ ಈಗಲೂ ಸ್ಮರಣೆಯ ಕೇಂದ್ರವಾಗಿದೆ. ನನ್ನ ತಮ್ಮನಿಗೆ ಕಟ್ಟಿದ ಕುಂಚಿಗೆ ನೆನಪುಳಿಯಲು ಕಾರಣ ಹಿತ್ತಲ ಹತ್ತಿರ ಹಾಕಿರುತ್ತಿದ್ದ ಅರಿವೆಗಳು.ಮಕ್ಕಳಿಗೆ ಮುಟ್ಟದೋಷವಾದಾಗ ಸಮೀಪದ ಸೊಟಾಕನಾಳಕ್ಕೆ ಮುರುವು ಹಾಕಿಸಲು ಹೋಗುವಾಗ ಮಕ್ಕಳ ಮೈಮೇಲಿನ ಬಟ್ಟೆಗಳನ್ನು ದಾರಿ ಬದಿಯ ಕಂಟಿಗೆ ಈಗಲೂ ಹಾಕಿರುತ್ತಾರೆ. ಅದನ್ನು ಬಾಲ್ಯದಿಂದಲೂ ನೋಡುತ್ತ ಬಂದಿರುವೆ. ಹೀಗಾಗಿ ತಮ್ಮನ ಕುಂಚಿಗೆಯ ನೆನಪು ಸ್ಪಷ್ಟವಾಗಿದೆ.



ಎರಡನೆಯ ಸಂಗತಿ :

ಈ ಘಟನೆ ತೀರ ಚುಟುಕಾದುದು. ನಾನು ಯಾವುದೊ ಕಾರಣಕ್ಕೆ ಹಟ ಮಾಡುತ್ತಿದ್ದಾಗ ಅವ್ವ ನನ್ನನ್ನು ಹೊಡೆಯಲು ಬಂದಿದ್ದಳು. ಆಗ ಅವ್ವನ ಮುಖ ನೋಡಿದ ನೆನಪೇ ಇಲ್ಲ. ಈ ಸಂಗತಿಗೆ ಇನ್ನೊಂದು ಸಂಗತಿಯೂ ತಳಕು ಹಾಕಿಕೊಂಡಿದೆ. ಇನ್ನೊಮ್ಮೆ ನಾನು ಮತ್ತು ಬಸನಗೌಡ (ನಮ್ಮ ಸೋದರ ಮಾವನ ಮಗ) ಕೂಡಿ ಆಡುವಾಗ ಹಟಮಾಡಿದ್ದಕ್ಕೆ ಅತ್ತೆಯೂ ಇದೇ ರೀತಿ ಬಯ್ದಿದ್ದಳು. ಅದೂ ಅದೇ ಪಡಸಾಲೆಯಲ್ಲಿ ನಿಂತು. ಅವ್ವ ಬಯ್ದ ಪ್ರಸಂಗ ನೆನಪಿಸಿಕೊಂಡಾಗ ಅತ್ತೆಯ ಪ್ರಸಂಗವೂ ನೆನಪಿಗೆ ಬರುತ್ತದೆ.

ಈ ಎರಡು ಸಂಗತಿಗಳನ್ನು ಬಿಟ್ಟರೆ ಅವ್ವನ ಬಗೆಗೆ ಹೆಚ್ಚೇನೂ ಗೊತ್ತಿಲ್ಲ. ಅಮ್ಮ , ಚಿಗವ್ವ, ಶಂಕರಮ್ಮ , ಚೆನ್ನಮ್ಮ ಇವರೆಲ್ಲರೂ ಹೇಳಿದ ಸಂಗತಿಗಳ ಆಧಾರದ ಮೇಲೆಯೇ ಅವ್ವನ ವ್ಯಕ್ತಿತ್ವವನ್ನು ಕಲ್ಪಿಸಿಕೊಂಡಿರುವೆ. (ಅಮ್ಮ ನನ್ನನ್ನು (ನಮ್ಮೆಲ್ಲರನ್ನು) ಜೋಪಾನ ಮಾಡಿದ ಸಂಗತಿಯನ್ನು ನಮ್ಮೂರವರು (ಕಡದಳ್ಳಿ)ಮತ್ತು ಬನಹಟ್ಟಿ ,ಅಮರಗೋಳದವರು ಬಣ್ಣಿಸಿ ಹೇಳುವಾಗ ಅಮ್ಮನ ಬಗೆಗೆ ಗೌರವ ಹುಟ್ಟುತ್ತಿತ್ತು.) ಅವ್ವ ಸಾಧಾರಣ ಗೌರವರ್ಣದ , ದುಂಡು ಮೊಗದ ಎತ್ತರವೂ ಅಲ್ಲದ ತೀರ ಗಿಡ್ಡವೂ ಅಲ್ಲದ ಸಾಮಾನ್ಯ ಎತ್ತರದ ದೇಹದವಳು. ಹೆಚ್ಚೂ ಕಡಿಮೆ ನನ್ನ ದೊಡ್ಡ ಅಕ್ಕ ಶಾಂತಕ್ಕಅವ್ವನನ್ನೇ ಹೋಲುವಳಂತೆ. ಆಶ್ಚರ್ಯದ ಸಂಗತಿ ಯೆಂದರೆ ಅವ್ವನ ಒಂದೂ ಭಾವಚಿತ್ರ ಇಲ್ಲ. (ನನ್ನ ಅಪ್ಪನದೂ ಇಲ್ಲ. ಅಪ್ಪ ಇತ್ತೀಚೆಗೆ ತೀರಿಕೊಂಡರೂ ೧೯೭೬ರಲ್ಲಿ ಅವರ ಭಾವಚಿತ್ರವೂ ಇಲ್ಲ . ಒಂದೇ ಒಂದು ಇತ್ತು. ಎತ್ತುಗಳನ್ನು ಹಿಡಿದುಕೊಂಡು ನಿಂತದ್ದು. ಈಗ ಅದೂ ಇಲ್ಲ. )

ಈವರೆಗೆ ಅವ್ವನ ಬಗೆಗೆ ಹೇಳಿದೆನೇ ಹೊರತು ಅವ್ವನ ಹೆಸರನ್ನು ಹೇಳಿಲ್ಲ. ಅವ್ವನ ಹೆಸರು `ಅಮೃತವ್ವ'ಅವ್ವನ ಹೆಸರಿನಲ್ಲಿ ಸಂಜೀವಿನಿ ಶಕ್ತಿ ಇದೆ. ಅಮೃತತ್ವವೂ ಇದೆ. ಅಮೃತವ್ವ ಮೃತಳಾಗಿದ್ದಾಳೆ. ನನಗೆ ತಾಯಿಯ ಯಾವ ಭಾಗ್ಯವನ್ನೂ ಕೊಡದೆ! ಪ್ರೌಢ ಶಾಲೆಯಲ್ಲಿ ಓದುವಾಗ ಹಿಂದಿ ಪಾಠದಲ್ಲಿ ಪಾಪಕ್ ಎಂಬ ಪಾತ್ರ ಇತ್ತು. ಹೆಸರಿನಲ್ಲಿ ಏನಿಲ್ಲ ಎಂಬ ಸಂದೇಶ ಸಾರುತ್ತಿತ್ತು. ಅದರಂತೆ ನನ್ನ ಅವ್ವನ ಹೆಸರನ್ನು ಅರ್ಥೈಸಲು ಸಾಧ್ಯವೇ ಆಗುವುದಿಲ್ಲ, ನನಗೆ.