Saturday, June 4, 2016



ವಿದ್ಯೆ ಸಾಗರವ ಈಜ್ಯಾನೊ 

ಹಜರತ ಇಮಾಮ ನಿಜಶರಣ ತಾನಾಗಿ 
ತಜವಿಜಿ ಮಾಡಿ ಕಲಿಸಿದ । ಮಗನಿಗೆ 
ರುಜುಮಾರ್ಗ ವಿದ್ಯೆ ಬಿಡಲಾರದೆ ।

ಇದ್ದೂರ ಮಠದಲ್ಲಿ ಸಿದ್ಧರಾಮ ಗುರುವಲ್ಲಿ 
ಉದ್ದಕ ಬಿದ್ದು ಕಲಿತಾನ । ಸಾಲಿಯ 
ವಿದ್ಯೆಯಲಿ ಮುಂದೋ ನಾಕೆಜ್ಜೆ ।

ಕೂಲಿಯ ಮಠದಾಗ ಸಾಲಿಯ ಕಲಿಯುತ್ತ 
ಗೋಲಿಯ ಆಡಿ ಬಯಲಲ್ಲಿ । ಬೆಳೆದಾನ 
ಬಾಲಕ ಶರಿಫ ನಲಿದಾಡ್ತ ।

ಕೂಲಿಯ ಮಠದಲ್ಲಿ ಸಾಲಿಯ ಕಲಿವಂಥ 
ಬಾಲಕ ನಮ್ಮ ಶರಿಫನು । ಗುರುವಿನಲ್ಲಿ 
ಮೇಲಾದ ಭಕ್ತಿ ಇಟ್ಟವನು ।

ಆಟ ಬಯಲಾಟಗಳು ಚೂಟಿಯ ಮನಸಿನಲಿ 
ನಾಟಿಬಿಟ್ಟವ ಶಾಶ್ವತ । ಶರಿಫನಿಗೆ 
ಸಾಟಿಯಾರಿಲ್ಲ ನಾಡಿನಲ್ಲಿ । 

ಭಜನೆಯ ಪದಗಳನು   ಮಜಲಿನ ಹೆಜ್ಜೆಯನು 
ನಜರಿಟ್ಟು ಕಲಿವ ಬಾಲಕನ ।ಜಾಣ್ಮೆಯ 
ನಿಜಶಕ್ತಿ ತುಂಬಿ ಹರಿಯಿತು ।

ಸಾಲಿಯ ಕಲಿಯುತ್ತ ಕಾಲಕ್ಕೆ ಒಲಿಯುತ್ತ 
ಮೇಲಾದ ವಿದ್ಯೆ ಓದಿದ । ಶರಿಫನು 
ಕೂಲಿಮಠದಲ್ಲಿ  ನಲಿಯುತ್ತ 


ಆಲಾಯಿ ಹಾಡುಗಳು ಕೋಲಾಟ ಕುಣಿತಗಳು 
ಮೇಲಾದ ಆಟ ಬಯಲಾಟ | ಮಜಲುಗಳು 
ಸಾಲು ಹಚ್ಚಿದವು ಶರಿಫನಲಿ |

ಗಜ್ಜುಗ ಗೋಲಿಯಲಿ ಗೆಜ್ಜೆ ಕುಣಿದಾಟದಲಿ 
ಸಜ್ಜಾಗಿ ನಿಂತ ಬಾಲಕ | ಶರಿಫನ 
ಬಿಜ್ಜೆಗೆ ಯಾರು ಸಮನಿಲ್ಲ |

ಲಾವನೀಯ ಪದಗಳನು ಹ್ಯಾವದ ಮೇಲ್ಕಟ್ಟಿ
ಸಾವಿರದ ಅರ್ಥ ಹೇಳಿದ | ಶರಿಫನ
ದೈವವೇ ಮೆಚ್ಚಿ ಹೊಗಳುವದು |

ಕೋಲಾಟ ಬಯಲಾಟಕ ಮೇಲಾದ ಹಿರಿಯನು 
ಕಾಲಲ್ಲಿ ಗೆಜ್ಜೆ ಕಟ್ಟುತ್ತ | ಶರಿಫನು 
ಸೋಲದೆ ಗೆಲ್ಲುವನಾಟದಲಿ |

No comments: