ಶರಿಫ ಗಿರಿಯಲ್ಲಿ ನೆಲಿಸ್ಯಾನೋ
ಗೊಂದಲಕ ಬಿದ್ದಂತ ಹಿಂದು ಮುಸ್ಲಿಮರೆಲ್ಲ
ಒಂದಾಗಿ ಸಂತ ಶರಿಫನ | ಯಾತ್ರೆಯಲಿ
ಮಿಂದೆದ್ರು ಭಕ್ತಿ ಭಾವದಲಿ |
ಓಡಾಕಿ ಸಕ್ಕರೆಯ ಓದಿಸುವರೊಂದೆಡೆಗೆ
ಸಾಧಕಗೆ ತಮಗೂ ಒಡೆಸುವರು | ಭಕುತರು
ನಾದದಲಿ ಬೆರೆತು ಹೋಗುವರು |
ಕಾಯಿ ಕರ್ಪೂರ ತಂದು ಮಾಯದಕ್ಕರತೆಯಲಿ
ಛಾಯೆ ಬೀರುವ ಶರಿಫನಿಗೆ | ನಮಿಸುತ್ತಾ
ತೋಯುವರು ಭಕ್ತಿ ರಸದಲ್ಲಿ |
ಶರಿಫಗಿರಿಯಲಿವರು ಗುರುಶಿಷ್ಯರೋಂದಾಗಿ
ಸ್ವರ ಮ್ಯಾಳದಲ್ಲಿ ನೆಲಿಸ್ಯಾರ | ಭಕ್ತರನ
ಹರಸುವರು ವರದ ಹಸ್ತದಲಿ |
ಶರಿಫ ಗದ್ದುಗೆ ಮ್ಯಾಲೆ ಹಿರಿಯ ಬೇವಿನ ಮರವು
ಅರಿವಿನ ನೆರಳು ನೀಡುವುದು | ಅನುಗಾಲ
ಕರುಣೆ ಪ್ರಸಾದ ಹಂಚುವುದು |
ಶರಿಫ ಗಿರಿ ಎಂಬುದು ಪರುಷಮಣಿ ಭಕುತರಿಗೆ
ದುರಿತವನು ದೂರ ಸರಿಸುತ್ತ | ಅನುಭಾವದ
ವರದ ಪ್ರಸಾದ ನೀಡುವುದು |
ಪರುಷಮಣಿ ಕಾವ್ಯವನ್ನು ಹರುಷದಲಿ ಕೇಳಿದರೆ
ಶರಿಫ ಶಿವಯೋಗಿ ಒಲಿಯುವನು | ನೂರ್ಕಾಲ
ಹರಸಿ ಹಾರೈಕೆ ನೀಡುವನು |
No comments:
Post a Comment