Tuesday, June 21, 2016

ಗಣಪಗೆ ಒಂದು ಪ್ರಶ್ನೆ

ಗಣಪಗೆ ಒಂದು ಪ್ರಶ್ನೆ  |

ಗಣಪ ಗೆಳೆಯನೆ  ಉತ್ತರ ಹೇಳು 
ನಾನು ಕೇಳುವ ಪ್ರಶ್ನೆಗೆ |
ಮಣ ಮಣ ಭಾರದ  ಪುಸ್ತಕ ಹೊತ್ತು 
ಹೋಗ್ತಿದ್ದೆ ಏನು ಸಾಲಿಗೆ |

ಹೇಳಿದ್ದ ಹೇಳಿ ಕಾಡತಿದ್ದರೇನು 
ಬಯಲಿಗೆ ಬಿಡದೆ ಆಟಕ್ಕೆ |
ತಂದೆ ತಾಯಿ ಓದು ಬರಿಯಂತ 
ಕಟ್ಟತಿದ್ದರೇನು ಗೂಟಕ್ಕೆ |

ನೂರಕೆ ನೂರು ಅಂಕ ಗಳಿಸಲು 
ಹೇಳತಿದ್ದರೇನು  ನಿಮ್ಮ ಮಾಸ್ತರು |   
ಒಂದೆರಡು ಅಂಕ ಕಮ್ಮ ಬಂದ್ರುನು 
ಮಾಡಕೋತಿದ್ರಾ ಬೇಜಾರು |

ನಾಲ್ಕಾರು ತಾಸಿನ ಹೋಮವರ್ಕ ಕೊಟ್ಟು
ಹಿಂಡತಿದ್ದರೇನು ಜೀವಾನ |
ಬಾಯಿಪಾಠ ಮಾಡಿ ಉತ್ತರ ಹೇಳದಿದ್ರ 
ಆಗತ್ತಿತ್ತೇನು ಅವಮಾನ | 

ವಿದ್ಯೆಗೆ ನೀನೇ ದೇವ್ರು  ಅಂತೆ 
ಹೆಂಗ ಕಲಿತಿದ್ದಿ ಸಾಲಿನ |
ನಮಗೊಂದಿಷ್ಟು ಹೇಳಿಕೊಟ್ಟಬಿಡು 
ಹಿಡಿತೀವಿ ನಿನ್ನ ದಾರ್ರಿನ | 


Sunday, June 19, 2016

ಗಣಪ ಗಣಕ ೨

ಗಣಪ ಗಣಕ ೨

ಗೌರಿ ಶಿವನ ಎದುರಲಿ ಕುಳಿತು 
ಬಿಚ್ಚುತ ತನ್ನ ಲ್ಯಾಪ ಟಾಪ್ |
ಕೋಟಿ ಕೋಟಿ ಗ್ರಹ ತಾರೆಗಳ 
ತೋರಿಸಿ ಹೇಳಿದನಾ ಗಣಪ |

ಚುರುಕು ಚುಳುಕಿನ ಮಾನವ ನಡೆವನು
ನನ್ನ ವಿದ್ಯೆಯ ಮೀರುತ್ತ |
ಹೊಸತನ ಶೋಧಿಸಿ ಬಳಕೆಗೆ ತಂದು
ತಾ ಮೇಲೆಂಬುದ ಸಾರುತ್ತಾ |

ಬ್ರಹ್ಮಾಂಡವನೆ ಹಿಡಿದಿಟ್ಟಿಹನು
ಡಿಜಿಟಲ್ ತಂತ್ರವ ಬಳಸುತ್ತ |
ಬಾನಿಗೆ ಕಳಿಸಿದ ಉಪಗ್ರಹ ಕಳಿಸುವ 
ಚಿತ್ರ ಮಾಹಿತಿ ಪಡೆಯುತ್ತಾ |

ಅಲೆ ಅಲೆ ಜಾಲವ ಬಳಸುತ ಮಾನವ
ರಚಿಸಿದ ಮಾಯಾ ಕನ್ನಡಿಯ |
ವಿಶ್ವದ ಮೂಲೆ ಮೂಲೆ ತಿಳಿವಿಗೆ 
ಬರೆದಿಟ್ಟಿಹನು ಮುನ್ನುಡಿಯ |

ಅಳಿಯದ ಹಾಗೆ ಕೂಡಿಟ್ಟಿಹನು 
ಎಲ್ಲ ಬಗೆಯ ದಾಖಲೆಯ |
ಬಹು ಮಾಧ್ಯಮದ ಕೌಶಲ ಬಳಸಿ 
ಕಿರಿದಾಗಿಸುತ ಮೇಖಲೆಯ |

ಸುಮ್ಮನೆ ಕೂತರೆ ಹೇಗಪ್ಪ |



ಸುಮ್ಮನೆ ಕೂತರೆ ಹೇಗಪ್ಪ |

ವಿದ್ಯಾ ಗಣಪನೆ ಚವತಿಗಿಂತ 
ಮೊದಲೇ ಬಂದ್ ಬಿಡು ಒಂದಿಟು |
ಜೂನ್ ತಿಂಗಳಲ್ಲಿ ಶಾಲೆಗೇ ಸೇರ್ಸಿ 
ಮರಳಿ ತೆಗೆಸು ತಿಕಿಟು |

ಬಡವರ ಮಕ್ಕಳು ಕಲಿಬೇಕಂದ್ರ 
ಬಾಳ ಬಾಳ   ಗೋಳಾಟ |
ಖಾಸಗಿ ಶಾಲೆ ಡೊನೇಶನ್ ತಿಂದು 
ನಡೆಸಿವೆ ಭಾರಿ ಆರ್ಭಟ |

ಸರಕಾರೀ ಶಾಲೆಗೆ ಬರೋದೆ ಇಲ್ಲ 
ದೊಡ್ಡ ದೊಡ್ಡವರ ಮಕ್ಕಳು |
ನಮ್ಮ ಟೇಚರ್ ಮಕ್ಕಳು ಕೂಡ 
ಖಾಸಗಿ ಶಾಲೆ ಒಕ್ಕಲು |

ಗುಡಿಸಲು ಗೆಳೆಯರು ಒಂದಿನ ಬಂದರೆ 
ನಾಲ್ಕು ದಿನ ಅಬ್ಸೆಂಟು |
ಆದರು ಕೂಡ ಪಾಸಾಗಿರ್ತಾರ
ನೂರಕ್ಕ ನೂರು ಪರ್ಸೆಂಟು |

ಕಡಿಮೆ ಮಕ್ಕಳಂತ ಬೇಜಾರ ಪಡ್ತಾ
ಇರ್ತಾರ ಟೀಚರ್ ಯಾವತ್ತು |
ಮಧ್ಯಾಹ್ನ ಊಟ ಹಾಲು ಕೊಡುದ್ರಾಗ 
ದಣಕೊಂಡ ಬಿಡ್ತಾರ ಸಾಕಷ್ಟು |

ಇಂಥಾದನ್ನೆಲ್ಲ ನೋಡಿ ನೋಡಿ
ಸುಮ್ಮನೆ ಕೂತರೆ ಹೇಗಪ್ಪ |
ನಿನ್ನನೆ ನಂಬಿದ ಮಕ್ಕಳ ಗೋಳನು 
ಪರಿಹಾರ ಮಾಡಿ ಹೋಗಪ್ಪ |

ಚಂದ್ರಗೌಡ ಕುಲಕರ್ಣಿ

Thursday, June 16, 2016

ಅಪ್ಪ ಮಗಳು ಸ್ಮಾರ್ಟ್ ಫೋನ್



ಅಪ್ಪ- ಮಗಳು- ಸ್ಮಾರ್ಟ್  ಫೋನ್ 

ಅಕ್ಕರೆ ತುಂಬಿದ ಅಪ್ಪನ ಪ್ರೀತಿ
ಎಳ್ಳಷ್ಟಾದರು ಸಿಕ್ಕಿಲ್ಲ |
ಎರಡು ವರ್ಷದಿ ಒಂದಿನವಾದ್ರು 
ಜೊತೆಯಲಿ ಊಟಕೆ ಕುಳಿತಿಲ್ಲ |

ಹೋಂ ವರ್ಕ್ ಮುಗಿಸಿ ಆಟಕೆ ಕರೆದರೆ 
ಕತ್ತು  ಹೊರಳಿಸಿ ನೋಡಲ್ಲ |
ಮಲಗೋ ಮುಂಚೆ ಕತೆ ಹೇಳಂದ್ರು 
ನನ್ನಯ ಮಾತಿಗೆ ಬೆಲೆಯಿಲ್ಲ |

ಮಾಸ್ತರ ಮೆಚ್ಚಿ ಪದಕ ನೀಡಿದ 
ಚಿತ್ರದ ಬಗ್ಗೆ ಕೇಳಲ್ಲ |
ಪ್ರಗತಿ ಪತ್ರ ನೋಡಿ ಹೊಗಳಿ 
ಸಹಿಯ ಹಾಕಲು ಟೈಮಿಲ್ಲ |

ಫೇಸ್ ಬುಕ್ ಟ್ವೇಟರ್ ವಾಟ್ಸಾಪ್ ತೆರೆದು 
ಮುಳುಗಿ ಬಿಡುವನು ಹಗಲೆಲ್ಲ|
ತುದಿ ಬೆರಳಿಟ್ಟು ಚಾಟ್ ಮಾಡ್ತಿದ್ರೆ 
ಯಾವುದು ಏನೆಂದ್ ನೆನೆಪಿಲ್ಲ |

ಆಡುವಾಗ್ ಬಿದ್ದು ಅತ್ತು ಕರದ್ರು 
ಕೈಯನ್ನಿಡಿದು ಎಬಿಸಲ್ಲ |
ರಿಂಗಾದ್ಕೂಡ್ಲೆ ಎತ್ತಿಕೊಂಡ ಬಿಟ್ರೆ 
ಬೇಗನೆ ಮಾತನು ಮುಗಿಸಲ್ಲ  |

ಎಷ್ಟೊತ್ತಾದ್ರು ಸ್ಮಾರ್ಟ್ ಪೋನಿಂದ 
ಕಣ್ಣು ಮಾತ್ರ ಕೀಳಲ್ಲ |
ಅಪ್ಪನ ಕೈಯೊಳು ಪೋನಾಗಿ ಬಿಟ್ರೆ
ನನ್ನಯ ಭಾಗ್ಯಕೆ ಬೆಲೆಯಿಲ್ಲ |

Saturday, June 11, 2016

ಕನಸುಗಳೆ ಕರಗಿ ಹೋಗ್ಯಾವು

ಕನಸುಗಳೆ ಕರಗಿ ಹೋಗ್ಯಾವು 

ನಿಜನಿಷ್ಠೆ ಸೇವೆಯನು ಸಜೆಯೆಂದು ಭಾವಿಸದೆ 
ನಜರಿಟ್ಟು ಕೆಲಸ ಮಾಡಿದರು | ಕಷ್ಟಕ್ಕೆ 
ರಜೆ ಭಾಗ್ಯವಿಲ್ಲ ಬಂಧುವಿಗೆ |

ಆಳುವ ಅರಸರ ಆಳಾಗಿ ದುಡಿತಾರ 
ಕೀಳು ಮಟ್ಟದ ಬೈಗುಳಕೆ | ತುತ್ತಾಗಿ 
ಗೋಳಾಡತಾರ ದಿನನಿತ್ಯ | 

ಒತ್ತೆಯಾಳುಗಳಂತೆ ಒತ್ತಡಕೆ ಸಿಲುಕ್ಯಾರ
ಮುತ್ತು  ಮಾಣಿಕದ ಬೈಗುಳವ | ಸಹಿಸುತ್ತ
ತೊಟ್ಟು ಸೇವೆಯಲಿ ಬಳಲ್ಯಾರ |

ಕಷ್ಟದ ಕೆಲಸವನು ನಿಷ್ಠೆಯಲಿ ಮಾಡಿದರು
ಎಷ್ಟು ಮಾತ್ರಕ್ಕೆ ಬೆಲೆ ಕೊಡದೆ | ಬೈಗುಳದ 
ಗಷ್ಟ ಹಾಕುವರು ಹಗಲೆಲ್ಲ |

ಹೆಗ್ಗಣ ತಿಂಬವರ ಮಗ್ಗುಲದಲ್ಲಿದ್ದು 
ಬಗ್ಗಿ  ಸೇವೆಯನು ಮಾಡುವರು | ಪೊಲೀಸರು 
ನೆಗ್ಗಿ ಹೋಗುವರು ಹೊಡೆತಕ್ಕೆ |

ಅತ್ತ ಮೇಲಧಿಕಾರಿ ಇತ್ತ ಜನರಂಪಾಟ
ಎತ್ತ ವಾಲಿದರೂ ಸಂಕಷ್ಟ | ಬಂಧುವಿಗೆ
ಕಷ್ಟ ತಪ್ಪದು ಏನಾದ್ರೂ |

ಕಾನೂನು ಪಾಲಕರು ಓಣೋಣಿ ತಿರುಗಾಡಿ
ಬಾನಗಡಿ ಕಳ್ರ ಹಿಡಿದರೆ | ಉಳ್ಳವರು 
ಪ್ರಾಣದಂಜಿಕೆಯ ಹಾಕುವರು |

ಸಲ್ಲದ ಕೆಲಸಕ್ಕೂ ಒಲ್ಲೆನುವ ಮಾತಿಲ್ಲ 
ಕಲ್ಲು ಮನಸಿಂದ ಮಾಡಿದರು | ಸಂಶಯದ 
ಗುಲ್ಲು ಹಬ್ಬಿಸಿ ಕಾಡುವರು |

ಮ್ಯಾಲಿನ ಆದೇಶ ಪಾಲನೆ ಗೈವಾಗ 
ಕೀಲು  ಮುರಿಯುವರು ದೊಡ್ಡವರು | ಪೋಲೀಸರ 
ಮೂಲಕ್ಕೆ ಉಪ್ಪು ಕಟ್ಟುವರು |

ಸ್ವಂತದ ಬದುಕಿಗೆ ಚಿಂತೆಯ ಮಾಡದೆ 
ಸಂತೆ ಹರತಾಳ ಚಳುವಳಿ | ಕಾಲಕ್ಕೆ 
ನಿಂತು ಬಳಲುವರು ದಿನರಾತ್ರಿ |

ಮನೆ ಮಂದಿ ಮಕ್ಕಳ ಹಣೆಬರಹ ಕೇಳಾಕ 
ಚಣಹೊತ್ತು ಸಮಯ ಸಿಗಲಾರದು | ಬಂಧುವಿನ 
ಕನಸುಗಳೇ ಕರಗಿ ಹೋಗ್ಯಾವು |

ಅನುಮಾನ ಸಂಶಯದಿ ಗೊಣಗುವ ಮಾತುಗಳು 
ಕಣೆಯಂತೆ ಚುಚ್ಚಿ ಕುಲ್ಲುವವು | ಪೋಲೀಸರ
ಮನಸಿಗೆ ಘಾಸಿ ಮಾಡುವವು |

ಸಾಯಲು ಒಲ್ಲದೆ ಜೀವಿಸಲಾರದೆ 
ನೋವಲ್ಲಿ ಸಿಕ್ಕು ನರಳುವರು | ಪೋಲೀಸರ
ಕಾವರು ಯಾರಿಲ್ಲ ಲೋಕದಲಿ |

ಕರುಳ ಬಳ್ಳಿ ಸೋಜಿಗ

ಕರುಳ ಬಳ್ಳಿ ಸೋಜಿಗ |

ಅಮ್ಮನ ಮೊಳೆಯಲಿ ಹಾಲಿದೆಯೆಂದು 
ಹೇಗೆ ಗೊತ್ತು ಪಾಪುಗೆ |
ಚೀಪಿ ಚೀಪಿ ಸವಿಯುವದಲ್ಲ
ಉದ್ದಕೆ ಚಾಚಿ ನಾಲಿಗೆ |

ಅಮ್ಮನ ಸನಿಹಕೆ ಬಂದರೆ ಸಾಕು 
ನಿಲಿಸುವದೇಕೆ ಅಳುವನ್ನು |
ತಟ್ಟಿ ತಬ್ಬಿ ಮುದ್ದಾಡುತ್ತ 
ಮರೆತೆಬಿಡುವುದು ಹಟವನ್ನು |

ಅಮ್ಮನ ದನಿಯನು ಕೇಳಲು ಸಾಕು
ನಗುವುದು ಏಕೆ ಕಿಲಕಿಲನೆ |
ಕಣ್ಣನ್ನರಳಿಸಿ ಸುತ್ತಲು ನೋಡುತ 
ಚಿಲಿಪಿಲಿಗೈವನು ತಂತಾನೆ |

ಅಮ್ಮನ ಮಡಿಲನು ಸೇರಿದ ಕೂಡಲೇ 
ಮರೆತೇ ಬಿಡುವನು ಜಗವನ್ನು |
ಅಮ್ಮನ ಪ್ರೀತಿಗೆ ಸೀಮೆಗಳಿಲ್ಲ
ಜಿಗಿದು ಹಿಡಿವುದು ಮುಗಿಲನ್ನು |

ತಾಯಿ ಮಗುವಿನ ಚಂದದ ಬಂಧಕೆ
ಕರುಳು ಬಳ್ಳಿಯ ಸೋಜಿಗ  |
ಈ ಜಗದಾಟಕೆ ಬೆಡಗಿನ ಮಾಟಕೆ 
ಇರುವನೇ ಒಬ್ಬ ಗಾರುಡಿಗ |

ಶರಿಫ ಗಿರಿಯಲ್ಲಿ ನೆಲಿಸ್ಯಾನೋ


ಶರಿಫ ಗಿರಿಯಲ್ಲಿ ನೆಲಿಸ್ಯಾನೋ

ಗೊಂದಲಕ ಬಿದ್ದಂತ ಹಿಂದು ಮುಸ್ಲಿಮರೆಲ್ಲ 
ಒಂದಾಗಿ ಸಂತ ಶರಿಫನ | ಯಾತ್ರೆಯಲಿ 
ಮಿಂದೆದ್ರು   ಭಕ್ತಿ ಭಾವದಲಿ |

ಓಡಾಕಿ ಸಕ್ಕರೆಯ ಓದಿಸುವರೊಂದೆಡೆಗೆ 
ಸಾಧಕಗೆ ತಮಗೂ ಒಡೆಸುವರು | ಭಕುತರು 
ನಾದದಲಿ ಬೆರೆತು ಹೋಗುವರು |

ಕಾಯಿ ಕರ್ಪೂರ ತಂದು  ಮಾಯದಕ್ಕರತೆಯಲಿ
ಛಾಯೆ ಬೀರುವ ಶರಿಫನಿಗೆ | ನಮಿಸುತ್ತಾ 
ತೋಯುವರು ಭಕ್ತಿ ರಸದಲ್ಲಿ |

ಶರಿಫಗಿರಿಯಲಿವರು ಗುರುಶಿಷ್ಯರೋಂದಾಗಿ 
ಸ್ವರ ಮ್ಯಾಳದಲ್ಲಿ ನೆಲಿಸ್ಯಾರ | ಭಕ್ತರನ 
ಹರಸುವರು ವರದ ಹಸ್ತದಲಿ |

ಶರಿಫ  ಗದ್ದುಗೆ ಮ್ಯಾಲೆ ಹಿರಿಯ ಬೇವಿನ ಮರವು 
ಅರಿವಿನ ನೆರಳು ನೀಡುವುದು | ಅನುಗಾಲ
ಕರುಣೆ ಪ್ರಸಾದ ಹಂಚುವುದು |

ಶರಿಫ ಗಿರಿ ಎಂಬುದು ಪರುಷಮಣಿ ಭಕುತರಿಗೆ 
ದುರಿತವನು ದೂರ ಸರಿಸುತ್ತ  | ಅನುಭಾವದ 
ವರದ ಪ್ರಸಾದ ನೀಡುವುದು |

ಪರುಷಮಣಿ ಕಾವ್ಯವನ್ನು ಹರುಷದಲಿ ಕೇಳಿದರೆ 
ಶರಿಫ ಶಿವಯೋಗಿ ಒಲಿಯುವನು | ನೂರ್ಕಾಲ
ಹರಸಿ ಹಾರೈಕೆ ನೀಡುವನು | 

ಬೆಳಕು ಬೆಳಕಿನಲಿ ಬೇರೆತಾನೋ

ಬೆಳಕು ಬೆಳಕಿನಲಿ ಬೇರೆತಾನೋ

ಉಡುಗುತ್ತ ದೇಹವು ಅಡಿಗಡಿಗೆ ಕಾಡಿತು
ನಡೆಗೆಡಸಿ ಬೆನ್ನ ಬಾಗಿಸಿತು | ಕಾಲವು
ಅಡಗಿಸಿತು ದೇಹ ಶಕ್ತಿಯನು |

ಜೀವಭಾವವ ಮೀರಿ ದೇವವನನುಭವಕೇರಿ 
ನೋವಿನಮೃತ ಕುಡಿದಂತ | ಶರಿಫನು
ಸಾವ ಕೈಮಾಡಿ ಕರೆದನು |

ಬಿಡತೇನಿ ದೇಹವನು ಬಿಡತೇನಿ  ಎನ್ನುತ್ತ
ಬೆಡಗೇನ ಕೀಲ ಕಳಚಿದ | ಶರಿಫನು
ಮೃಡನ ಪಾದವನ್ನು ಸೇರಿದ |

ಪಡೇದುದೆಲ್ಲವತಾ ಬಿಡಲಾರದನುಭವಿಸಿ
ಕಡೆಗಾದ ಸಂತ ಶರಿಫನು | ಶಿವಯೋಗಿ
ನಡೆಗೆ ಹೆಸರಾದ ಲೋಕದಲಿ |

ಶರಣರ ಬಾಳಿಅನಲಿ ಮರಣವೇ ಮಾನೋಮಿ
ಸಿರಿತನವೇ ನಡೆನುಡಿ ಐಕ್ಯವು | ಶರಿಫನ
ಹರಣ ಬೆರೆತೋಯ್ತು ಶಿವನಲ್ಲಿ |

ಬಿಟ್ಟೋದ ಕಾಯ್ಮಣಿ ಮುಟ್ಟಿದ ದೇವ್ಮನಿ
ಕಟ್ಟಿದನನುಭಾವ ಅರಮನಿ | ಶರಿಫನು
ನೆಟ್ಟೋದ ಭಕ್ತಿ ಬೀಜವನ್ನು |

ಸಾಂಬಹರ ಶಿವನಲ್ಲಿ ತಂಬೂರಿ ಸ್ವರದಲ್ಲಿ
ತುಂಬಿ ತುಳುಕಾಡೊ ನಾದವೇ | ತಾನಾಗಿ 
ಇಂಬುಗೊಂಡನೊ ಶರಿಫನು |

ಶಿಶುನಾಳ ಶರಿಫನು ಹಸನಾದ ಮ್ಯಾಳದಲಿ
ಕುಶಲ ತಂಬೂರಿ ಸ್ವರವಾಗಿ | ಗೋವಿಂದನ 
ಉಸಿರಲ್ಲಿ ಬೆರೆತ ಏಕಾಗಿ |

ಬೆಡಗಿನ ಅಲ್ಲಮನ ನಡೆನುಡಿ ಅನುಸರಸಿ
ಬೆಡಗು ಮೂಡಿಸುತ ಜಗಕೆಲ್ಲ | ಶರಿಫನು
ಅಡಗಿದ ಮೃಡನ ಪ್ಪಾದದಲಿ |

ಬಿಂದುವಿನಲ್ಲುದಯಿಸಿ ಸಿಂಧುವೆ ತಾನಾಗಿ
ಮಿಂದೆದ್ದ  ಭಕ್ತಿ ರಸದಲ್ಲಿ | ಶರಿಫನು 
ಸಂದನು ತಾನೇ ತಾನಾಗಿ |

ಹಾಡುವ ಹಾಡಿನ ಜೋಡಿಯ ನಾದದಲಿ
ಕೂಡಿ ಬೆರೆತೋದ ಶರಿಫ | ಶಿವಯೋಗಿ
ಮೂಡಿ ತೋರುವನು ಅನುಗಾಲ |

ಪದಗಳ ಒಡಲಲ್ಲಿ ಚದುರ ಸ್ವರ ನಾದದಲಿ
ಹದವಾಗಿ ಬೆರೆತು ಹೋದಂತ | ಶರಿಫನು
ಸುಧೆಯಾಗಿ ಬೆಳಕ ಬೀರುವನು |

ಬಯಲನೆ ಉತ್ತಿದನು ಬಯಲನೆ ಬಿತ್ತಿದನು
ಬಯಲಲ್ಲಿ ರಾಸಿ ಮಾಡಿದ | ಶರಿಫನು
ಬಯಲಾದ ನಿಜದ ಬಯಲಲ್ಲಿ |

ಬೆಳಕಿನಿಂದಾಚೆಯ ದ್ಬೇಳಕಿನ ಲೋಕಕ್ಕೆ
ಬೆಳಕಿನ ಛಾಯೆ ಬೀರಿದ | ಶರಿಫನು
ಬೆಳಕಾಗಿ ಬೆರೆತ  ಬೆಅಕಿನಲಿ |

ಹದಿನೆಂಟು ನೂರಾ ಎಂಬತ್ತರೊಅಂಬತ್ತು 
ಜುಲೈ ತಿಂಗಳ ಮೂರನೆಯ | ದಿನದಂದೆ 
ದೇಹವ ಬಿಟ್ಟು ನಡೆದಾನೊ |





ಮುದುಕಪ್ಪ ಬರೆದು ಇಟ್ಟಾನೊ



ಮುದುಕಪ್ಪ ಬರೆದು ಇಟ್ಟಾನೊ

ಗುಡಗೇರಿ ಮುದುಕಪ್ಪ ಬಿಡಲಾರದ ಬರೆದಿಟ್ಟ 
ಬೆಡಗಿನ ಐನೂರ ಹಾಡುಗಳ | ಶರಿಫನ 
ಒಡನಾಟ ಪಡೆದ ನಿಜಭಕ್ತ |

ಮುದುಕಪ್ಪ  ಕುಂಬಾರ ಮುದದಿಂದ ಬರೆದಿಟ್ಟ
ಬದುಕಿಸಿದ ನಮ್ಮ ಶರಿಫನ | ಹಾಡುಗಳ
ಚದುರ ರೂಪದಲಿ ಅನುಗಾಲ |

ನಂಬಿಕೆ ನಿಷ್ಠೆಯಲಿ ಅಂಬರಕೆ ಮುಖವಿಟ್ಟು
ಚಂಬೆಳಕ ಚೆಲ್ಲಿ ಹಾಡಿದ | ಶರಿಫನ
ಬಿಂಬ ಕಟೆದವನು ಮುದುಕಪ್ಪ |

ಹಸುಗೂಸು ಬಸಮ್ಮ ಉಸಿರೆತ್ತಿ ಹಾಡಿದರ 
ಖುಷಿಯ ಪಡತಿದ್ದ ಶರಿಫನು | ಗುಂಡಮ್ಮ
ಹೆಸರಿಂದ ಕರಿದು ನಲಿತಿದ್ದ |

ಶಾಂತರಸ ಭಾಂಡಾರಿ ಕ್ರಾಂತಿ ಶರಣರ ವಚನ 
ಕಂತು ಕಂತಲ್ಲಿ ಬರೆದಂಗ | ಶರಿಫನ
ಕ್ರಾಂತಿ ಪದಗಳನು ಬರೆದಿಟ್ಟ |

ಜೋಡಿ ಸಂತರು ಎಲ್ಲ ಕೂಡಿಕುಂತಿರುವಾಗ 
ಹಾಡಿದ ಪದವ ಬಿಡಲಾರದ | ಬರೆದಿಟ್ಟು
ಮಾಡಿದುಪಕಾರ ಮುದುಕಪ್ಪ |

ಸಾಧು ಸಂತರ ಸಂಗ ವೇದ ಆಗಮ ಸಂಗ
ಬೋಧದಮೃತ ಸಂಗದಲಿ | ಹಾಡಿದ 
ನಾದ ಬ್ರಹ್ಮವನೆ ಹಿಡಿದಿಟ್ಟ |

ಕಲಿತ ನಾಕ ಅಕ್ಷರಕೆ ಬೆಲೆತಂದ ಮುದುಕಪ್ಪ
ಅಲೆಅಲೆಯಾಗಿ ತೇಲಾಡ್ದ | ಪದಗಳನು
ಒಲಿದು ಬರೆರಿಟ್ಟ ಹೊತ್ತಿಗೇಲಿ |

ಗಾಳಿಯಲಿ ತೇಲಾಡಿ ಧೂಳು ಸೇರುತಲಿದ್ದ 
ಮ್ಯಾಳದ ಪದವ ಬರೆದಿಟ್ಟು | ಮುತ್ತಿನ
ಕಾಲಿಂದ ಹಗೇವ ತುಂಬಿಸಿದ |

ಹಾಡುವ ಪದಗಳನು ಆಡಾಡ್ತ ಕಲಿತಂತ 
ಗಾಢ ಸಿರಿಕಂಠ ಚಲ್ವಿಕೆಯ | ಬಸಮ್ಮ
ತೀಡಿ ತಿದ್ದೀದ ಹಾಡ್ಗಾರ್ತಿ |

ಮ್ಯಾಳದ ಪದಗಳನು ಕೇಳಿದ ಕ್ಷಣದಲ್ಲೆ 
ತಾಳ ಹಾಕುತ್ತ ಹಾಡುವ | ಜಾಣ್ಮೆಯು 
ಕಾಳುಗಟ್ಟಿತ್ತು ಮನದಲ್ಲಿ |

ಎಳೆಕಂಠದೊಳಗಿಂದ ಕಳೆಗಟ್ಟಿ ಮೂಡಿದ 
ಬೆಳಕಿನ ಹೊಳೆಯ ಹರಿಸುವ | ಬಸಮ್ಮ
ಸೆಳೆದು ಬಿಡುತಿದ್ಳು ಮನಸನ್ನು |

ಹಸುಳೆಯ ಕಂಠದಲಿ ಹಸನಾದ ಪದಗಳು 
ದೆಸೆದೆಸೆಗೆ ನಾದ ಸಿಮ್ಮುವವು | ಕಂಪನ್ನು 
ದಶದಿಕ್ಕಿನಾಚೆ ಸೆಲ್ಲುವವು |

ಶಿಷ್ಯ ಬಳಗದ ಪಡೆ ನೋಡು



ಶಿಷ್ಯ ಬಳಗದ ಪಡೆ ನೋಡು 

ಮಂಡಿಗನಾಳ ಪ್ರಚಂಡ ಗುರುಪಾದನು 
ಉಂಡುಟ್ಟ ಶರಿಫ ಪದಗಳನು | ಶಿಷ್ಯರ 
ದಂಡು ಕಟ್ಟಿದ ನಾಡಾಗ |

ಜಾತಿಗಾರ ದೇವೇಂದ್ರ ಜಾತ ಗುರುಪಾದನಲಿ 
ಓಟು ಹಾಡುಗಳ ಕಲಿತಾನ | ಶರಿಫ
ಜ್ಯೋತಿಯ ಬೆಳಕು ಹರಡ್ಯಾನ |

ಹರಕೂನಿ ಯಲ್ಲಪ್ಪಗ ಸರದಾರ ದೇವೇಂದ್ರ
ಗುರುವಾಗಿ ದೊರೆತ ಸ್ನುಗಾಲ | ಶರಿಫನ 
ಅರಿವಿನ ಪದವ ಹಾಡಿಸಿದ | 

ಗುರುಪಾದ ದೇವೇಂದ್ರ ಹರಕೂನಿ ಎಲ್ಲಪ್ಪ 
ಅರ್ಜುನ ಸೇರಿ ಶರಿಫರ | ಪದಗಳನು 
ಹರವಿ ಬಿಟ್ಟಾರೊ ನಾಡಾಗ |

ಕಡದಳ್ಳಿ  ಅರ್ಜುನಗ ನುಡಿರೂಪದಾಡನ್ನು 
ಇಡಿಯಾಗಿ ಕಲಿಸಿ ಹರಕೂಣಿ | ಯಲ್ಲಪ್ಪ 
ಮುಡಿಗೆ ಏರಿಸಿದ ಕರುಣೆಯಲಿ |

ಶರಿಫನ ಪದಗಳನು ಉರದಲ್ಲಿ ಬಚ್ಚಿಡದೆ 
ಒರೆಹಚ್ಚಿ ಹಾಡಿ ಲೋಕದಲಿ | ಹಬ್ಬಿಸಿದ 
ಅರಜುನ ಮಡಿವಾಳ ನಲಿವಿಂದ |

ನೆನಪಿನ ಸಾಗರದ ಮಣಿಮುತ್ತು  ರತುನಗಳ
ದಣಿವಿರದೆ ಜತನ ಮಾಡಿದ | ಅರಜುನ
ಘನವಾದ ಕಾಯಕ ನಡೆಸಿದ |

ಹಜಾರೆ ಸಾಹೇಬರು ನಜರಿಟ್ಟು ಕಲಕೊಂಡು
ವಜನಾದ ಪದವ ಹಾಡುತ್ತ | ಶರಿಫನ
ನಿಜದ ಧಾಟಿಯನು ಉಳಿಸ್ಯಾರ |

ಏಕತಾರಿ ತಂಬೂರಿ ಜೋಕಿಲಿ ಪೂಜಿಸುತ 
ಚಾಕರಿ ಮಾಡೊ ಹಜರೇ | ಸಾಹೆಬರು
ಪಾಕ ಉಣಿಸುವರು ಲೋಕಕ್ಕ |

ಕಡೆಯ ಕಡದಳ್ಳಿ ಯ ಕಡಿಚುಂಗು ಅರ್ಜುನ 
ಬಿಡಲಾರದ ಪದವ ಹಾಡುತ್ತ | ಶರಿಫನ
ಅಡಿಯ ಹಿಡದಾನೊ ಕಡಿತನಕ |

ಶರಿಫನ ಅನುಭಾವದ ಅರಿವಿನ ಕೂಸಾಗಿ
ಬೆರೆತು ಬಿಟ್ಟಾನೊ ತತ್ವದಲಿ | ಅರ್ಜುನ
ಶರಣ ಜೀವನವ ನಡಿಸ್ಯಾನೊ |

ಮಡಿವಾಳ ಅರ್ಜುನ ಕಡದಳ್ಳಿ ವರಪುತ್ರ 
ಕಡು ಪ್ರೀತಿಯಿಂದ ಶರಿಫನ | ಹಾಡನ್ನು
ಮುಡಿಗೇರಿಸಿಕೊಂಡ ಅನುಗಾಲ |


ಮುಂಡಿಗೆ ಪದವ ಹಾಡ್ಯಾನೊ



ಮುಂಡಿಗೆ ಪದವ ಹಾಡ್ಯಾನೊ

ಮೊಲದ ತಲಿಯಮ್ಯಾಲ ಇಲಿಹೋಗಿ ಕುಳಿತಿತ್ತ 
ಸಲಿಗಿ ಹತ್ತಿದ ನರಿಯೊಂದು | ಹಾರ್ಹಾರಿ 
ಹುಲಿಯ ಕೊಂಡಿದ್ದ ಸಾರಿದನೋ |

ಕಲ್ಲುಪಡಿಯ ಹಕ್ಕಿ ಸೋಲ್ಲುಸೋಲ್ಲಿಗೆ ಒಮ್ಮೆ 
ಅಲ್ಲಾನ ಹೆಸರ ನೆನೆಯುವ | ಕೌತುಕದ 
ಬಲ್ಲಿದನು ಒಬ್ನೆ ಶರಿಫನು |

ಅಡವಿ ಪಲ್ಲೆ ತಿಂದು ಮಡಿಯ ನೀರನು ಕುಡಿದು 
ಒಡಲು ಹೊರೆವಂತ ಪಕ್ಷಿಯನು | ಬಣ್ಣಿಸಿದ 
ಸಡಗರದ ಕವಿಯೋ ಶರಿಫನು |

ಸಾಯಲಾರದ ಹೆಣವ ಗಾಯಮಾಡುವದರಿತು 
ಛಾಯೆ ಮಿಂಚುಗಳ ಗಗನೆಕ್ಕೆ | ಅಡರಿಸಿದ 
ಮಾಯೆ ಬಲ್ಲವನು ಶರಿಫನು |

ಆಕಳ ಹೊಟ್ಟೆಯಲೊಂದು ಎಮ್ಮಿಕರ ಹುಟ್ಟಿದ್ದು 
ಹಮ್ಮೀಲೆ ಹೈನ ಮಾಡಿದ್ದು | ಶರಿಫನ 
ಸೊಮ್ಮು ಮುಂಡಿಗೆಯ ಅರಿಬೇಕೋ |

ಪಕ್ಕವಿಲ್ಲದ ಹಕ್ಕಿ ದಿಕ್ಕೆಲ್ಲ ಸುತ್ತುತ್ತ 
ಮಕ್ಕಾಮದೀನ ಒಳಹೊಕ್ಕು | ಶರಿಫನ
ಒಕ್ಕಲಾಗುವುದು ಸೋಜಿಗವೋ |

ಮುಕ್ಕಾದ ಮಗಿಯೊಂದು ಅಕ್ಕರದಿ ಉಕ್ಕನುಂಗಿ 
ತೆಕ್ಕಿ ಬೀಳುತ್ತಾ ಲೋಕಕ್ಕೆ | ಶರಿಫನ
ದಿಕ್ಕಿಗೊದಗುವುದು ಕೌತುಕವೋ |

ಬಡನಡುವ ಮೂಬೆರಕಿ ಸಡಗರದಿ ಸಜ್ಜಾಗಿ 
ಅಡಿಗೆರಗಿ ಆಲಾಯಿ ಆಡುವುದು | ಶರಿಫನ
ಬೆಡಗಿನ ಮುಂಡಿಗೆ ನಮಗೆಲ್ಲ |

ಕೋಳಿ ಕೋಡಗನುಂಗಿ ಗೋಡೆ ಸುಣ್ನವನುಂಗಿ 
ತಾಳ ತಂಬೂರಿ ಸ್ವರನುಂಗಿ | ಶರಿಫನ
ಬಾಳ ನುಂಗಿದನೊ ಗೋವಿಂದ |

ಬೋಕಿಯೊಳು ಹುಟ್ಟಿದ ಲೋಕದ ಜನರಿಗೆ 
ಏಕಮುಂಡಗಿ ಹೇಳಿದ | ಶರಿಫನು
ಜ್ವಾಕಿಲಲಾಯಿ ಆಡಿದನು |

ಮುಲ್ಲಾ ಮಸೀದ್ಯಾಗ ಬೆಲ್ಲ ಓದಿಕಿ ಮಾಡಿ 
ಸೊಲ್ಲು ಸೊಲ್ಲಿಗೆ ಧೀನ್ ಧೀನ್ | ಎಂಬುದನು
ಬಲ್ಲಿದ ನಮ್ಮ ಶರಿಫನು |

ಶಾರಮದೀನದ ಮೋರಮ್ಮಿನಾಚರಣೆ 
ಆರು ಶಾಸ್ತ್ರಗಳ ಸಾರವು | ಎಂಬುದನು
ಸಾರಿ ಹೇಳಿದನು ಶರಿಫನು |

ಮಂದಿಯು ತವಕದಿ ತಂದಿಟ್ಟ ಚೊಂಗೆವ 
ತಿಂದು ತಿರುಗಾಡೊ ಮುಲ್ಲಾನ | ಒದಕಿಯ 
ಚಂದವನು ಬಲ್ಲ ಹರಿಫನು |

ಮಾಳಿಗೆ ಮೇಲಿನ ಆಲಾಯಿ ಕುಣಿಯಲ್ಲಿ 
ತೋಳನ ಮಾಡುವೆ ನಡೆದಾಗ | ಶರಿಫನು
ಬಾಳಿಗೆ ಗೊನಿಯ ಕಟ್ಟಿದನು |

ಮಕ್ಕಾ ಮದೀನಕ್ಕ ಪಕ್ಕಾ ಹರದಾರೆಷ್ಟು 
ಲೆಕ್ಕ ಹೇಳೊ ನೀ ಶಾಹೀರ | ಶರಿಫನ
ಮುಕ್ಕು ಆಗದ ಮುಂಡಿಗೆಯೊ |

ಮೈದೀನ ಪುರದಲ್ಲಿ ಸೈದರಣ ಮನೆಯಲ್ಲಿ 
ಮಾದರಾಕಿ ಹಡೆದ ಮಗಸತ್ತು | ಹೋದುದನ 
ಭೇದಿಸುನೊಬ್ನೆ  ಶರಿಫನು |

ದಿಕ್ಕು ಎಂಟನು ನುಂಗಿ ನೆಕ್ಕಿ ನೀರನು ಕುಡಿದು
ಮಿಕ್ಕೇದ ಇಲಿಯ ತೋರಿದ | ಶರಿಫನಿಗೆ 
ತೆಕ್ಕಿ ಬೀಳುವುದು ದುಸ್ತರವು |

ಕಳ್ಳಿ ಹಾಕಿದ ದನವು ಹುಲ್ಲು ತಿನ್ನುವುದಲ್ಲೋ
ಹಳ್ಳಿ ಹಾವನ್ನು ನುಂಗುವುದು | ಶರಿಫನ
ಗುಲ್ಲು ತಿಳಿಯದೊ ನರರಿಗೆ |

Friday, June 10, 2016

ಅಲ್ಲಮನ ಹಾದಿ ತುಳಿದಾನೊ



ಅಲ್ಲಮನ ಹಾದಿ ತುಳಿದಾನೊ 

ಶರಣರ ನಡೆನುಡಿಗೆ ಶರಣಾದ ಸಂತನು 
ಅರಿವಿನ ಹಾಡು ಕಟ್ಟುತ್ತ | ನಾಡಲ್ಲಿ 
ಸಿರವಾದ ತತ್ವ ಬಿತ್ತ್ಯಾನೋ |

ಅಲ್ಲಾ ಅಲ್ಲಮರಿಗೂ ಸಲ್ಲುವ ಹಿರಿಮಾರ್ಗ 
ಬಲ್ಲಿದ ನಾದ ಶರಿಫನು | ಹಾಡಿದ 
ಸಲ್ಲುವ ಪದವ ನಾಡಲ್ಲಿ |

ಅಲ್ಲಮನ ಹಾದಿಯ ಬಲ್ಲಂತ ಶರಿಫನು
ಗುಲ್ಲು ಮಾಡದಲೆ ಓಡಾಡಿ | ಲೋಕದಲಿ
ಸಲ್ಲಲಿತ ತತ್ವ ಬಿತ್ಯಾನೋ |

ಪ್ರಭುವಿನ ಬೆಡಗಿನ ಪ್ರಭೆಯಲ್ಲಿ ಈಜಾಡಿ
ಸೊಬಗಿನ ಬಾಳು ಕಟ್ಟಿದ | ಶರಿಫನು
ಸಭೆಯಲ್ಲಿ ಹಾಡಿ ಮನಗೆದ್ದ |

ಅಲ್ಲಮನ ಹಾದಿಯಲಿ ಸಲ್ಲಾಪವಾಡುತ್ತ 
ಅಲ್ಲಾನ ಧ್ಯಾನ ಮಾಡುವ | ಶರಿಫನು
ಮಲ್ಲನು ಧರ್ಮ ಮಾರ್ಗದಲಿ |

ಎಲ್ಲರ ಒಡನಾಡಿ ಅಲ್ಲಮನ ಅನುಯಾಯಿ
ಬಲ್ಲಿದರ ಕೋಡಿ ಶರಿಫನು | ಅಲ್ಲಮಗೆ
ಪಲ್ಲವಿ ಪದವ ಹಾಡಿದನೊ |

ಅಲ್ಲಮನ ಮಾತಿಗೆ ಕಲ್ಲ್ಯಾಣ ಬೆರಗಾಯ್ತು 
ಸಲ್ಲಲಿತ ಶರಣ ಶರಿಫನು | ಹಾಡಿದ
ಸಲ್ಲುವ ಪದವು ನಾಡಲ್ಲಿ |

ಪ್ರಭುಲಿಂಗ ಲೀಲೆಯ ಪ್ರಭೆಯಲ್ಲಿ ತೇಲಾಡ್ತ 
ನಭದ ಎತ್ತರಕೆ ಬೆಳೆದಂತ | ಶರಿಫನು
ಬಯಲ ನುಡಿ ಕಟ್ಟಿ ಹಾಡಿದ |

ಬಯಲಿಗನ ಚರಿತೆಯಲಿ ಬಯಲಾಗಿ ಬೆರೆಯುತ್ತ
ಬಯಲಿನ ಬೆಡಗ ಅರಿತಂತ | ಶರಿಫನು 
ಬಯಲ ನುಡಿ ಕಟ್ಟಿ ಹಾಡಿದ |

ಚಾಮರಸ ಕವಿಬರೆದ ವ್ಯೋಮ ಚರಿತೆಯನೋದಿ 
ಪ್ರೇಮ ಭಕ್ತಿಯಲಿ ಮೀಯುವ | ಶರಿಫನು
ಸೀಮೆ ದಾಟುವನು ಅಲ್ಲಮನ |

ಮಿಗಿಲಾದ ಕಾವ್ಯವನ್ನು ದಿಗಿಲಾಗಿ ಓದುತ್ತ 
ಹೆಗಲಲ್ಲಿ ಹೊತ್ತು ತಿರುಗುವ |ಶರಿಫನು
ಜಗಕೆ ಅಲ್ಲಮನ ತೋರಿದನು |

ಬೈಲಿಗನ ಚರಿತೆಯನು ಕೈಲಿಡಿದು ಯಾವತ್ತು 
ಲೀಲೆಯಲಿ ಮೈಯ ಮರೆಯುವ | ಶರಿಫನು
ಸೋಲಿಸಿ ಗೆಲುವ ಮಾಯೆಯನು |

ಬಲ್ಲ ಶರಣರನೆಲ್ಲ ಅಲ್ಲಿಕೇರಿಗೆ ಕರೆದು 
ಸಲ್ಲುವ ಬದುಕು ಕಟ್ಟಿದ | ಶರಿಫನು
ಬಲ್ಲಿದನುಭಾವಿ ನಾಡಲ್ಲಿ |






ಹಿರಿಹೊಳೆ ಗಂಗಿ ಹರಿಸ್ಯಾವೋ |







ಹಿರಿಹೊಳೆ ಗಂಗಿ ಹರಿಸ್ಯಾವೋ |

ಶರಿಫನು ಹಾಡಿದ ವರತತ್ವ ಪದಗಳು 
ಅರಿವಿನ ಬೀಜ ಬಿತ್ಯಾವು | ನಾಡಲ್ಲಿ
ಹಿರಿಹೊಳೆ ಗಂಗಿ ಹರಿಸ್ಯಾವೋ |

ಶಿಶುನಾಳ ಶರಿಪನ ಹಸನಾದ ಪದಗಳು
ಉಸಿರಿಗೆ ಜೀವ ತುಂಬ್ಯಾವು | ಜನಮನದ 
ಕೆಸರ ತೊಳಿಲಾಕ ಹುಟ್ಟ್ಯಾವು | 

ಶರಿಫನ ಗೀತೆಗಳ ಒರತೆಯ ಸೆಲೆ ನೋಡು 
ಪುರುಸೊತ್ತು ಇಲ್ದೆ ಉಕ್ಕುವುದು | ಧುಮ್ಮಿಕ್ಕಿ
ಸರಹೊತ್ತಿನಲ್ಲು ಹರಿಯುವುದು |

ಅರಿವು ಅನುಭಾವದ ಶರಿಫನ ಪದಗಳು
ಮರೆಯದಲೇ ಕೇಳಿ ನಲಿಬೇಕು | ಹಾಡುತ್ತ
ಬೆರಿಬೇಕು ಭಾವದೊಡಲಲ್ಲಿ |

ಹಾಡಿನ ಒಡಲಾಗ ನಾಡ ಜನರನುಭಾವ 
ಕೋಡಿ ಕೆರೆತುಂಬಿ ತುಳುಕುವುದು | ಲೋಕಕ್ಕೆ
ಮೋಡಿ ಹಾಕಿವುದು ಅನುಗಾಲ |

ಲೇಸಾದ ಪದಗಳನು ಏಸೊತ್ತು ಹಾಡಿದರು
ಬೀಸಿ ಕಂಪನ್ನು ಸೂಸ್ಯಾವು | ಶರಿಫನ
ಮಾಸದ ತತ್ವ ಬೀರ್ಯಾವು |

ಕವಿಸಂತ ಶರಿಫನ ಸವಿರುಚಿ ಹಾಡುಗಳು 
ರವಿಕಿರಣದಂತೆ ಲೋಕದಲಿ | ಹಬ್ಬುತ್ತ 
ನವರಸದ ಕಂಪು ಬೀರ್ಯಾವು |

ಒಮ್ಮೆ ಪದ ಕೇಳ್ದಾವ ಸುಮ್ಮನೆ ಬಿಡಲಾರದ 
ಹೆಮ್ಮೆ ಅಭಿಮಾನ ಪಡತಾನ | ಶರಿಫನ
ಸೋಮ್ಮು ಸೋಜಿಗವ ಅರಿತಾನ |

ಒಡಪಿನ  ಪದಗಳು ಅಡಿಗಡಿಗೆ ಕಾಡುವವು
ಬಿಡಲಾರದ ಮನಸ ಸೆಳೆಯುವವು | ಶರಿಫನ
ಸಡಗರ ಸಾರಿ ಹೇಳುವವು  |   

ವಿಷಯದ ವಾಸನೆ ವ್ಯಸನದ ಗಮಲುಗಳು
ಶಿಶುನಾಳ ಸಂತ ಶರಿಫನ | ಎದುರಲ್ಲಿ 
ಕಸರುಳಿಯದಂಗ ಕರಗುವವು |

ಕೇಳಿದರೆ ಪದಗಳು ಆಳಕ್ಕೆ ಇಳಿಯುವವು 
ಪಾಳಿಯಲಿ ಮಾನಸ ಗೆಲ್ಲುವವು | ಶರಿಫನ
ಮ್ಯಾಳದ ನಿಜವ ತೋರುವವು |

ಲೋಕದ ಅನುಭವವ ಪಾಕಗೊಳಿಸುತ ಪದದಿ
ತೂಕವ ಮಾಡಿ ಬಳಸಿದ | ಶರಿಫನು 
ಏಕನಿಷ್ಠೆಯಲಿ ಬೆರೆಯುತ್ತ | 

ಕಳಕಳಿಯ ಪದಗಳಲಿ ಬೆಳಕಿನ ಪ್ರಭೆ ತುಂಬಿ 
ಒಳಮನೆಯ ಆಳಕ್ಕಿಳಿಸಿದ | ಶರಿಫನ
ತಿಳಿಯಾದ ಭಕುತಿ ತೋರುವವು |

ಹುಡುಗಾಟ ಮಾಡುತಲೆ ಹುಡುಕಿದ ಬೆಡಗನ್ನು 
ಅಡಕಲ ಕಟ್ಟಿ ಅನುಭಾವದ | ಕಗ್ಗಂಟ 
ಬಿಡಿಸಿ ಹಾಡಿದ ಪದಗಳಲಿ |

ದೇಸಿಯ ನುಡಿಗಳನು ಹಾಸುಹೊಕ್ಕಾಗಿರಿಸಿ 
ಖಾಸಾ ಪದಗಳ ಕಟ್ಟಿದ | ಶರಿಫನ
ಬೇಸಾಯದ ಮರ್ಮ ಅರಿಬೇಕು |

ಶಿಸ್ತಿನ ಪದಗಳ ಉಸ್ತಾದ ಶರಿಫನ
ಮಸ್ತಕದ ಮೇಲೆ ಕೈಯಿಟ್ಟು | ಗೋವಿಂದ 
ಅಸ್ತು ಎಂದದ್ದು ಸಾರ್ಥಕವೋ | 

ತಾಳವಿಲ್ಲದವರು ಮೇಳ ಕಟ್ಟಿದರೇನು 
ಬಾಳಿ ಗಿಡ ಗೊನಿಯ ಕಟ್ಟದು | ಶರಿಫನ
ಬಾಳಿನೊಳ  ಗುಟ್ಟು ತಿಳಿಯದು |

ದುಡ್ಡು ದುಡ್ಡನು ಕೂಡ್ಸಿ ಬಡ್ಡಿ ತಿಂಬವರೆಲ್ಲ 
ಮಡ್ಡರು ಎಂದ ಶರಿಫನ | ಮಾತಲ್ಲಿ
ದೊಡ್ಡ ತತ್ವವೇ ಅಡಗಿಹುದು |

ಸೂಜಿಮಲ್ಲಿಗಿ ಮ್ಯಾಲ ಮೋಜಿನಾಡನು ಬರೆದು
ಸೋಜಿಗ ಮಾಡಿ ಶರಿಫನು | ಅನುಭಾವದ
ತೇಜ ಹರಡಿದನು ಲೋಕದಲಿ |

ತಾಳಗೇಡಿಗೆ ಇದನ ಹೇಳಬರುವುದೇ ಇಲ್ಲ 
ಬಾಳ ಬಲ್ಲವಗೆ ತೊಡಕಿಲ್ಲ | ಶರಿಫನ
ಮ್ಯಾಳ ಸೇರಿದರೆ ಭಯವಿಲ್ಲ |

ಮೀಸಲು ಹಾಡುಗಳು ಮಾಸದೆ ಉಳಿದಾವು 
ದೇಶದ ತುಂಬ ಶಾಹಿರ | ಆಗ್ಯಾವು
ಖಾಸ ಶರಿಫನ ಹೆಸರಲ್ಲಿ |

ಅತ್ತಿಗೇರಿಯ ಹನುಮ ಸತ್ಯುಳ್ಳ ದೇವರಿಗೆ 
ಮುತ್ತಿನವಳದ ದಂಡಕವ | ಹಾಡುತ್ತ 
ತೊತ್ತಾಗಿ ಸೇವೆ ಮಾಡ್ಯಾನ |







ಮನಗೆದ್ದ ಸಂತ ಮಾಂತನೊ




ಮನಗೆದ್ದ ಸಂತ ಮಾಂತನೊ 

ಅನುಭಾವದ ಹಾಡಿಂದ ಘನವಾದ ತತ್ವವನು 
ಉಣಬಡಿಸಿದಂತ ಶರಿಫನು | ನಾಡವರ 
ಮನಗೆದ್ದ ಸಂತ ಮಾಂತನೊ |

ಅಡಿಗಣ ಪ್ರಾಸಗಳ ಒಡೆಯನು ತಾನಾಗಿ 
ನುಡಿಗಣಕೆ ಜೀವ ತುಂಬಿದ | ಶರಿಫನು
ಬೆಡಗಿನಲಿ ಹಾಡು ಕಟ್ಟಿದ |

ಅಡಿಗಣ ಪ್ರಾಸಗಳ ಗಡಿರೇಖೆ ಮೀರುತ್ತ 
ಗುಡಿಕಟ್ಟಿ ಕಳಸ ಇಟ್ಟನು | ಹಾಡಿಗೆ 
ನಡೆವ ದಾರಿಯನು ತೋರ್ಯಾನೊ |

ಹಾಡಿಗೆ ಹಾಡನ್ನು ಹಾಡುವುದ ಕಲಿಸುತ್ತ
ನಾಡಿ ಮಿಡಿತದಲಿ ಒಳಸೇರಿ | ಶರಿಫನು
ನಾಡವರ ಮನಸು ಗೆದ್ದನು |

ದೇಸಿ ನುಡಿಬೇಜದ ಬೇಸಾಯದ ಒಡೆಯನು
ಲೇಸಾದ ಹಾಡು ಕಟ್ಟುತ್ತ | ಅನುಭಾವದ
ರಾಸಿ ಮಾಡಿದನೋ ಶರಿಫನು |

ಉಕ್ಕಿದ ಭಾವವನ್ನು ಮುಕ್ಕಾಗದಂತಿರಿಸಿ 
ಅಕ್ಕರದಿ ಹಿಡಿದು ಹಾಡಿದ | ಶರಿಫನು 
ಒಕ್ಕಲು ಮಗನು ದಿಟದಲ್ಲಿ |

ಶಾಲೆಯಲಿ ಮಾಸ್ತರ ಕೋಲಾಟದಲುಸ್ತಾದ 
ಬೈಲಾಟದಲ್ಲಿ ಕಥೆಗಾರ | ತಾನಾಗಿ
ಲೇಲೆಯಾಡಿದ ಶರಿಫನು |

ಹಸನಹುಸೇನರ ಹಸನಾದ ಬದುಕನ್ನು 
ಕಸರಿಲ್ಲದಂಗ ಪದಕಟ್ಟಿ | ಆಲಾಯ್ಕ 
ಕಸುವು ತುಂಬ್ಯಾನೊ ಶರಿಫನು |

ಗುಡಗೇರಿ ದ್ಯಾಮವ್ನ ಒಡನಾಡಿ ಶರಿಫನು
ಬಿಡದೆ ಬೇಡಿದ ವರವನ್ನು | ದೇವಿಯಲಿ
ಪಡೆದ ಭಕ್ತಿಯ ಕಾರುಣ್ಯ |

ಗುಡುಗುಡಿ ಸೇದಿದ ಗುಡಿದೇಹ ಮಾಡಿದ 
ಒಅಡಪಾಗಿ ತೋರಿ ಲೋಕಕ್ಕೆ | ಶರಿಫನು
ಗುಡಿಪುರದ ದೇವಿ ಒಲಿಸಿದ |

ಲೋಕವ ತಿರುಗಾಡಿ ಚಾಕರಿ ಮಾಡಿದ
ಸಾಕಾಗುವಂಗ ತೂಗುತ | ಬಾಳಿನ 
ಜೋಕಾಲಿಯಾಟ ಆಡಿದ |

ನಡೆನುಡಿ ಒಂದಾಗ್ಸಿ ನಡೆದಂತ ಶರಿಫನು
ಮಡಿಯಿಂದ ದೂರ ಸಾರಿದನು | ದೇಹದ 
ಗುಡಿಗೆ ಗೋಪುರವ ಕಟ್ಟಿದ |

ಆಸೆಪಾಸೆಗೆ ಸಿಕ್ಕು ತಾಸುತಾಸಿಗೆ ಕೊರಗಿ 
ಕ್ಲೇಶ ಸಾಗರದಿ ಸಿಕ್ಕಂತ | ಭವಿಗಳಿಗು 
ಈಶ ಶಿಶುನಾಳನೊಲಿಸಿದನು |

ತೊಗಳಲ್ಲಿ ಹುಟ್ಟಿದ ತೊಗಲಿನ ಚೇಲವನು 
ತಗಲು ಮಾಡದೆ ಬಳಸಿದ | ಶರಿಫನು
ಮಿಗಿಲಾದ ಸಂತ ಲೋಕದಲಿ |

ಹದವಾದ ಲಯದಲ್ಲಿ ಪದಗಳ ಪೋಣಿಸಿ
ಸುಧೆಯ ಹೊಮ್ಮಿಸಿದ ಶರಿಫನು | ಲೋಕದ 
ಪದವಿಯ ಹಂಗು ತೋರೆದನು |

ಊರುಕೇರಿಗಳಲ್ಲಿ ಸಹಾರ ಪಟ್ಟಣದಲ್ಲಿ 
ದಾರಿ  ನಡುದಾರಿ ಪಯಣದಲಿ | ಶರಿಪನು 
ಭಾರಿ ಪದ ಕಟ್ಟಿ ಹಾಡಿದನೊ |

ಸಾಲಿಯ ಮಾಸ್ತರಕಿ ಬೇಲಿಯ ದಾಟಿದನು 
ಮೇಲಾದ ವಿದ್ಯೆ ಸಾರುತ | ಶರಿಫನು 
ಹಾಲನಿಣಿಸಿದನು ಜಗಕೆಲ್ಲ |

ಸಂತೆ ಬಾಜಾರದಲ್ಲಿ ಕಾಂತ ಗುರುವಿನ ನೆನೆದು 
ಚಿಂತ ಮಾಡುವ ಜನಗಳ | ಭೋಗದ 
ಸಂಚು ಹರಿಸಿದ ಶರಿಫನು |

ಕಲಿಯುಗದ ಕೌತುಕಕೆ ಹಲವು ಹಾಡನು ಕಟ್ಟಿ
ಕುಳಜಾತಿ ಮತವ ಮೀರಿದ | ಶರಿಫನು
ಛಲವಂತ ಕವಿಯೋ ನಾಡಲ್ಲಿ |

ತೋಟವ ನೋಡುತ್ತ ಆಟವಾಡಿದ   ಶರಿಫ 
ನೀಟಾಗಿ ನಿಜದ ಬ್ರಹ್ಮದಲಿ | ತಾನಿಂತು
ಕೋಟಿ ಕರ್ಮವನು ಕಳಕೊಂಡ |

ಮುಟ್ಟ ಮುತ್ತಿಗೆ ಹಣವ ಕಟ್ಟಿಕೊಂಬುದ್ಯಾಕೊ
ಬಿಟ್ಟು ಬಾ ನೀನು ಶಿಶುನಾಳಕ | ಎನ್ನುತ್ತಾ 
ಬಟ್ಟ ಬಯಲನ್ನೆ ತೋರಿದ |

ಸುಗ್ಗಿ ಮಾಡಲು ಎಂದು ಹಿಗ್ಗಿಲಿ ಹೊಲಕೋಗಿ 
ಅಗ್ಗದ ಫಲಗಳ ಕೊಯ್ಯುತ್ತ | ಶರಿಫನು
ಸಗ್ಗದನುಭಾವವ ಮೀರಿದನೋ |

ಲೋಕದ ಮಾತನ್ನು ತಾಕಿಸಿ ಕೊಳ್ಳದೆ 
ಮೂಕನ ರೂಪ ತಾಳಿದ | ಶರಿಫನು
ತೂಕದ ಹಾಡು ಹಾಡಿದ |

ಶಿವನಾಮ ಸ್ಮರಿಸುತ್ತ ಭವರೋಗ ಹರಿದಾಕಿ
ಸವಿಯಾದ ನೂರು ಪದಕಟ್ಟಿ | ಶರಿಫನು
ಕವಿಯಾಗಿ ಮೆರೆದ ನಾಡಲ್ಲಿ |

ನೋಡುವ ನೋಟಕ್ಕೆ ಮಾಡುವ ಮಾಟಕ್ಕೆ 
ಹಾಡಿನ ಬೆಡಗು ತುಂಬಿದ | ಶಿಶುನಾಳ್ದ 
ನಾಡಿನ ಕೀರ್ತಿ ಹಬ್ಬಿಸಿದ |

ಎತ್ತರಕೆ ಏರಿದನು ನ್ಬಿತ್ತರಕೆ ಹಾರಿದನು
ಚಿತ್ತದಾಳಕ್ಕೆ  ಇಳಿದಂತ | ಶರಿಫನು  
ಬಿತ್ತಿದನುಭಾವ ಬೆಡಗಿನದು |

ಆಡುವ ಮಾತಿನಲಿ ಹಾಡುವ ಹಾಡಿನಲಿ 
ಜೋಡಿಸಿ ಶಬ್ದ ತುಂಬ್ಯಾನ | ಶರಿಫನು
ಬೇಡಿದ ಭಾವ ಒಳಗಿಟ್ಟು  |

ಕರ್ಮಟದ  ಭವಿಗಳಿಗೆ  ಮರ್ಮವನು ತಿಳಿಸಾಕ 
ಚರ್ಮಕ್ಕೆ ಚುಚ್ಚಿ ಹಾಡಿದ | ಶರಿಫನು
ಧರ್ಮದ ದಾರಿ ತೋರಿದ |

ಹುಲಗೂರ ಖಾದರನ ಒಲುಮೆಯ ಮಗನಾಗಿ 
ಚಲದಿಂದ ಹಾಡಿ ಪದಗಳನು | ಶಿಶುನಾಳ್ಕ
ಗೆಳುವನೆ ತಂದ ಶರಿಫನು |

ಕೋಶವನೋದಿದ ದೇಶವ ಸುತ್ತಿದ 
ಬೇಸಾಯದ ಕಾಯಕ ನಡೆಸಿದ | ಶರಿಫನು
ರಾಸಿ ಒಟ್ಟಿದ ಪದಗಳ |

ದೇಹದ ಗುಡಿಕಟ್ಟಿ ಮೋಹವ ಕಡಿದಾಕಿ 
ಸೋಹಂ ಪದವ ಅಳುಕಿಸಿ | ಮನದಿ ದಾ
ಸೋಹಂ ಬೀಜ ಬಿತ್ತಿದನೋ |

ಸೋರುವ ಮಾಳಿಗೆಯ ಜಾರು ಹುಳುಜಂತಿಯ 
ತೋರಿ ನಗುನಗುತ ಸರಿಪಡಿಸಿ | ಶರಿಫನು
ಮೀರಿದನುಭಾವ ಹಂಚಿದ |

ಬಡತನ ಸಿರಿತನ ಒಡೆತನ ಲೆಕ್ಕಿಸದೆ
ಮೃಡನ ಪಾದವನೇ   ನಂಬಿದ | ಶರಿಫನು 
ಮಿಡುಕಾಡಲಿಲ್ಲ ಯಾವುದಕು |

ಆಡಾಡ್ತ ಕಲಿಸಿದ ಹಾಡಾಡ್ತ ಉಣಿಸಿದ 
ನೋಡ ನೋಡ್ತ ಅರಿವು ಬಿತ್ತಿದ | ಶರಿಫನು
ಕೂಡ ಕೂಡ್ತ ಬಯಲಲೊಂದಾದ |

ಬೆಡಗಿನ ಮಾತಲ್ಲಿ ಅಡಗಿಸಿ ತತ್ವವನು 
ನಡೆನುಡಿಯ ಜಾತ್ರೆ ಮಾಡಿದ | ಶರಿಫನು
ಬಿಡುಗಡೆಯ ದಾರಿ ತೋರಿದ |

ಹುಟ್ಟೂರ ಮಠದಲ್ಲಿ ಪಟ್ಟ ಕಾಯಕ ನಡೆಸಿ 
ಪುಟ್ಟ ಮಕ್ಕಳಿಗೆ ವಿದ್ಯೆಯ | ನೀಡುತ 
ಮುಟ್ಟಿಸಿದ ಕಲಿತ ಋಣವವನ್ನು |

ಕಲಿತ ವಿದ್ಯೆಯನೆಲ್ಲ ಲಲಿತ ಮಾತುಗಳಲ್ಲಿ 
ನಲಿದು ಮಕ್ಕಳಿಗೆ ಉಣಿಸ್ಯಾನೊ | ಶರಿಫನು
ಒಲವಿನ ಪ್ರೀತಿ ಹಂಚ್ಯಾನೊ |

ಹುಗೂರ ಸಂತ್ಯಾಗ ನಲುಗಿದ ಮುದುಕಿಗೆ 
ಬಳುಹಿತದ ಮಾತು ಹೇಳುತ್ತ | ಸದ್ಗತಿಗೆ 
ಸಲುವಂತ ದಾರಿ ತೋರಿದ |

ಗದ್ದಳದಲಿ ಸಿಕ್ಕು ಒದ್ದಾಡೊ ಮುದುಕಿಗೆ
ಬುದ್ಧಿ ಹೇಳಿದ ಶರಿಫನು | ಹುಲಗೂರ 
ಸಿದ್ಧ ಖಾದರನ ನಿಜಭಕ್ತ |

ಚಿಂತೆಯ ಬಿಡಿಸಿದ ಕಾಂತನ್ನ ಒಲಿಸಿದ 
ಸಂತಿ ಹುಲಗೂರ ಹಂಗನ್ನು | ಹರಿಸಿದ 
ಮಾಂತನ್ನ ಮುದುಕಿ ಮರಿಲಾರ್ದು |

ಹಿಗ್ಗಿ ಹೋಲಿಸಿದ ಅಂಗಿ ಹೆಗ್ಗಣಕೆ ಕೊಡಲಿಲ್ಲ 
ಮುಗ್ಗರಿಸಿ ಬಿದ್ದ ಮುದುಕಿಯನು | ಉದ್ಧರಿಸಿ
ಸಗ್ಗದ ದಾರಿ ತೋರಿದ |

ಅಂಬೆ ಜಗದಂಬೆ ಮ್ಯಾಲ ತಂಬೂರಿ ಸ್ವರ ಮ್ಯಾಲ
ಕಂಬ ಜಂತಿಯ ಮಣಿ ಮ್ಯಾಲ | ಕಟ್ಟ್ಯಾನ 
ಕುಂಬಾರ್ನ ಕೊಡಕು ಹಾಡನ್ನು |

ಹಕ್ಕಿ ಬೆಳವನ ಮ್ಯಾಲ ಬೆಕ್ಕು ನಾಯಿಯ ಮ್ಯಾಲ
 ರೊಕ್ಕ ಪಾವಳಿಯ ದುಡ್ಡ ಮ್ಯಾಲ | ಶರಿಫನು
ಚೊಕ್ಕ ಪದಕಟ್ತಿ ಹಾಡ್ಯಾನ |

ಸುಗ್ಗಿ ಸುರಗಿಯ ಮ್ಯಾಲ ಹಗ್ಗ ಮಗ್ಗದ ಮ್ಯಾಲ
ಗುಗ್ಗಳ ತೇರು ಮನಿಮ್ಯಾಲ | ಬಿಡಲಾರದ 
ಹೆಗ್ಗಣ ಮ್ಯಾಲೂ ಹಾಡ್ಯಾನೊ |

ಆನೆ ಕುದರಿಯ ಮ್ಯಾಲ ಬೆಕ್ಕು ನಾಯಿಯ ಮ್ಯಾಲ
ಮಾನಿನಿ ಸಾಧ್ವಿ ಸತಿ ಮ್ಯಾಲ | ಕಟ್ಟ್ಯನ 
ಜಾಣ ಶರಿಫನು ಪದಗಳನು |

ಭಂಟ ಕುರುಬನ ಮ್ಯಾಲ ತುಂಟ ಕುಂತರ ಮ್ಯಾಲ
ಗಂಟನು ಹೊತ್ತ ಮೂಬೇರಕಿ | ಮುದುಕಿಯ 
ಪಂಟಿಗೂ ಹಾಡು ರಸಿಸ್ಯಾನ |

ಭೋಗಿ ಲೋಭಿಯ ಮ್ಯಾಲ ಯೋಗಿ ಸಂತರ ಮ್ಯಾಲ
ತ್ಯಾಗಿ ಅಲ್ಲಮನ ನಡೆ ಮ್ಯಾಲ | ಪದಕಟ್ಟಿ
ಜೋಗುಳ ಹಾಡಿ ನಲಿದಾನ |