Friday, December 27, 2013

ಇಲ್ಲದವರು

ಇಲ್ಲದವರು



ಪುಸ್ತಕ ಇಲದ ಕಾಲೇಜಿಗೆ ಬರತಾರೋ


ಬರ್ಬರ ಕೈಬೀಸಿ |


ಮನಸು ಇಲ್ಲದ ಕ್ಲಾಸಿಗೆ ಕೂಡತಾರೋ


ನಡು ನಡುವೆ ಆಕಳಿಸಿ |




ಪರಿವೆ ಇಲ್ಲದೆ ತಿರುಗಡತಾರೊ


ಕ್ಲಾಸ್ ರೂಂ ಸುತ್ತುಬಳಸಿ |


ಸುಮ್ಮನೆ ನಿಲ್ಲದೆ ಮಾತಾಡತಾರೊ


ಗದ್ದಲ ಎಬ್ಬಿಸಿ |




ಅಭಿರುಚಿ ಇಲ್ಲದೆ ವಾಚನಾಲಯಕ ಹೋಗ್ತಾರೋ


ಸುಮ್ಮಸುಮ್ಮನೆ ಗಡಬಡಿಸಿ |


ಆಸಕ್ತಿ ಇಲ್ಲದ ಪುಟ ತಿರುವತಾರೋ


ಉಗಳ ಹಚ್ಚಿ ಎಣಿಸಿ ಎಣಿಸಿ |




ಕ್ರಿಯೆ ಇಲ್ಲದ ಯೋಚನೆ ಹಾಕ್ತಾರೋ


ಅಭ್ಯಾಸ ಹಾಳಗೆಡಿಸಿ |


ಬರಹ ಇಲ್ಲದ ಬಡವರಾಗತಾರೊ


ಭಾಷೆಯ ಸೊರಗಿಸಿ |




ಎಚ್ಚರ ಇಲ್ಲದ ಸಮಯ ಕಳಿತಾರೊ


ನೂರೆಂಟು ನೆಪ ಬಳಸಿ |


ಓದು ಇಲ್ಲದ ಪರೀಕ್ಷೆ ಬರಿತಾರೋ


ಪುಟ್ಟಪೂರ ನಕಲಿಸಿ |




ಕಡದಳ್ಳಿ ಚಂದ್ರಗೌಡ ಮನನೊಂದು ಹೇಳ್ಯಾನೊ


ನೋಡಬೇಕು ಪರೀಕ್ಷಿಸಿ |


ಎಲ್ಲಾರು ಹಿಂಗಂತ ಬಳ್ಳಮಾಡಿ ಹೇಳೋದಿಲ್ಲ


ಮರತಬಿಡ್ರಿ ನನ್ನ ಕ್ಷಮಿಸಿ |


Sunday, August 25, 2013

ಹರಿವ ಹಳ್ಳದ ಬೆಡಗು - ದೊಡ್ಡಮಾವ - ಮುಟ್ಟಿಗೆ ಊಟ-೧





ದೊಡ್ಡಮಾವ - ಮುಟ್ಟಿಗೆ ಊಟ

`ಅಪ್ಪ' ಶಬ್ದ ನನ್ನ ಮನಸಿನಾಳದಲ್ಲಿ ಮೂಡಿದ ರೀತಿ ವಿಶಿಷ್ಟವಾಗಿದೆ. ಬಾಲ್ಯದಲ್ಲಿ ಅಪ್ಪನನ್ನು ಅಪ್ಪ ಎಂದು ಕರೆಯದೇ 'ದೊಡ್ಡ ಮಾವ' ಎಂದು ಕರೆಯುತ್ತ ಬೆಳೆದೆ. ನನ್ನ ಚಿಗವ್ವ ಮತ್ತು ಸೋದರಮಾವ ದೊಡ್ಡಮಾವ ಎಂದು ಕರೆಯುತ್ತಿದ್ದರಿಂದ  ನಾನೂ ಹಾಗೆಯೇ ಕರೆಯುತ್ತಿದ್ದೆ. ನನ್ನ ಅಣ್ಣ ಮತ್ತು ಅಕ್ಕಂದಿರಿಬ್ಬರು ಹಾಗೆಯೇ ಕರೆಯುತ್ತಿದ್ದದ್ದು  ನೋಡಿ ನನಗೆ ರೂಡಿಯಾಗಿತ್ತು. ನನ್ನ ಗೆಳೆಯರು, ವಾರಿಗೆಯವರು ತಮ್ಮ ಅಪ್ಪನಿಗೆ ಅಪ್ಪ ಎಂದೇ ಕರೆಯುತ್ತಿದ್ದರು. ನಾನೇಕೆ ಹೀಗೆ ಕರೆಯುತ್ತೇನೆ ಎಂಬ ಗೊಂದಲವುಂಟಾಗುತ್ತಿತ್ತು, ಒಮ್ಮೊಮ್ಮೆ.

ಅಪ್ಪನ ಚಿತ್ರ ಬಾಲ್ಯದಲ್ಲಿ ಹೇಗೆ ಮೂಡಿತ್ತೊ ಕೊನೆಯವರೆಗೆ ಹಾಗೆಯೇ ಇತ್ತು. ದಪ್ಪನೆಯ ಧೋತ್ರ, ಮಂಜರಪಾಟ್ ಉದ್ದ ತೋಳಿನ ಅಂಗಿ, ತಲೆಯ ಮೇಲೊಂದು ಮಸಕು ಬಿಳಿಪಟಗ (ರುಮಾಲು). ಧೋತ್ರ ಅಲಂಕಾರಿಕವಾಗಿ ಉಟ್ಟಿದ್ದಲ್ಲ. ಕೆಲಸಕ್ಕೆ ತೊಡಕಾಗದಂತೆ ಮೊಣಕಾಲು ಮೇಲೆ ಉಟ್ಟದ್ದು. ಪಟಗ ಬಿಗಿಯಾಗಿ ಕಲಾತ್ಮಕವಾಗಿ ಸುತ್ತಿರುವುದಲ್ಲ ಸಡಿಲಾಗಿ ಸುತ್ತಿದ್ದು. ಸದಾ ಒಕ್ಕಲುತನದಲ್ಲಿಯೇ ಮುಳುಗಿ ದನಗಳ ಜೊತೆ ಒಡನಾಟದಲ್ಲಿರುವ ಅಪ್ಪನಿಗೆ ಗೊತ್ತಿದ್ದದ್ದು: ಹೊಲ, ಮನೆ, ಗ್ವಾದಲಿ, (ದನದ)ಹಕ್ಕಿ,ಹಿತ್ತಲ ಮಾತ್ರ. ಇವಿಷ್ಟನ್ನು ಬಿಟ್ಟು ಬೇರೆ ಸಂಗತಿಗಳು ಗೊತ್ತೇ ಇರಲಿಲ್ಲ. ರೂಪಾಯಿ ನಾಣ್ಯಗಳೂ ಗೊತ್ತಾಗುತ್ತಿರಲಿಲ್ಲ.
ಜಾತ್ರೆ ಹಬ್ಬ ಉತ್ಸವ ಮದುವೆ ಏನೇ ಇದ್ದರೂ ಅಪ್ಪನ ವೇಷಭೂಷಣದಲ್ಲಿ ಬದಲಾವಣೆ ಇರುತ್ತಿರಲಿಲ್ಲ. ವಿಶೇಷವಾದ ಉಡುಗೆ ತೊಡುತ್ತಿರಲಿಲ್ಲ. ವಿಶೇಷವಾದ ಉಡುಗೆಯನ್ನು ಹೊಲಿಸಿಕೊಳ್ಳುತ್ತಿರಲಿಲ್ಲ. ಯಾವ ಸಂದರ್ಭದಲ್ಲಿಯೂ ತನ್ನ ಕಾಯಕ ಉಡುಗೆ ತೊಡುಗೆ ಬದಲಾವಣೆ ಮಾಡುತ್ತಿರಲಿಲ್ಲ. ತನ್ನನ್ನು ಸಂಪೂರ್ಣಾವಾಗಿ ಕೃಷಿಗೆ ಸಮರ್ಪಿಸಿಕೊಂಡಿದ್ದ. ನನ್ನ ಊರಿನಲ್ಲಿ ಅಪ್ಪನ ಹಾಗೆ ಕೃಷಿ ಕಾಯಕಕ್ಕೆ ಸಮರ್ಪಿಸಿಕೊಂಡ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿಲ್ಲ. ಸುತ್ತ ನಾಲ್ಕಾರು ಹಳ್ಳಿಯವರು ಸಹ ಅಪ್ಪನ ಕಾಯಕ ಸ್ವರೂಪವನ್ನು ಮೆಚ್ಚಿ ಕೊಂಡಾಡುವುದನ್ನು ಅನೇಕ ಸಾರೆ ಕೇಳಿದ್ದೇನೆ; ಕಂಡಿದ್ದೇನೆ. ಈಗಲೂ ಸಹ ಕೆಲವು ಜನ -ನಮ್ಮೂರ ಕರಿಗಾರ ಬಸಪ್ಪ, ಕುಂಬಾರ ಗಾಣೆ ಬಸಪ್ಪ ಮುಂತಾದವರು 'ನಾನು ಶಿವನಗೌಡರ ಕೈಯಲ್ಲಿ ಪಳಗಿದವ, ಅವ್ರಿಂದ ಒಕ್ಕಲುತನದ ಕೆಲಸದಲ್ಲಿ ಸೈ ಅನ್ನಿಸಿಕೊಂಡವಎಂದು ಜಂಬ ಕೊಚ್ಚಿಕೊಳ್ಳುತ್ತಾರೆ, ಅಭಿಮಾನ ಪಡುತ್ತಾರೆ.

ಬಂಧುಗಳ ಮದುವೆ ಸಮಾರಂಭಕ್ಕೆ ಇಲ್ಲವೆ ಜಾತ್ರೆಗೆ ಹೊರಟರೂ ಅದೇ ಅಂಗಿ-ಧೋತ್ರ- ಪಟಗ. ಬಹಳವೆಂದರೆ ಎದೆ ಮೇಲಿನ ಗುಂಡಿ (ಬಿರಡಿ)ಗಳು ಮಾತ್ರ ಬದಲಾಗುತ್ತಿದ್ದವು. ಅಂದು ಅಜ್ಜ ಬಳಸಿಬಿಟ್ಟ ಬೆಳ್ಳಿಯ ಗುಂಡಿಗಳನ್ನು ಹಾಕಿಕೊಳ್ಳುತ್ತಿದ್ದ. ನಾನೂ ಚಿಕ್ಕವನಿದ್ದಾಗ ಇಂತಹ ಬೆಳ್ಳಿ ಗುಂಡಿಗಳನ್ನು ಬಳಸುತ್ತಿದ್ದೆ. ಅಣ್ಣ ಮಾವ ಇಬ್ಬರೂ ಬಳಸುತ್ತಿದ್ದರು. ಊರವರೆಲ್ಲರೂ ಬೆಳ್ಳಿ ಗುಂಡಿಗಳನ್ನು ಬಳಸುವ ರೂಡಿಯಿತ್ತು ಆಗ.
ಆಪ್ಪನಿಗೆ  ವರ್ಷಕ್ಕೊಂದು ಜೊತೆ ಧೋತ್ರ, ಮೂರು ಒಳಂಗಿ, ಎರಡು ಉದ್ದ ತೋಳಿನ ಮಂಜರ ಪಾಟ್ ಅಂಗಿ, ಎರಡು ಪಟಗ ಕಡ್ಡಾಯವಾಗಿ ಬೇಕಾಗುತ್ತಿದ್ದವು. ಅಪ್ಪನಿಗೆ ಬೇಕಾದ ಮತ್ತೊಂದು ವಸ್ತು ಎಂದರೆ ದುಪ್ಪಟ್ಟಿ. ಇದನ್ನು  ಉಡುಗೆ-ತೊಡುಗೆ ಮತ್ತು ಹೊದಿಕೆಯಾಗಿ ಬಳಸುತ್ತಿದ್ದ. (ದುಪ್ಪಟ್ಟಿ ಎಂದರೆ ಬಿಳಿ ಮಂಜರಪಾಟ್ ಬಟ್ಟೆಯ ಬೆಡ್ ಶೀಟ್.) ಚಳಿಗಾಲದಲ್ಲಿ ದುಪ್ಪಟಿಯನ್ನು ಶಾಲಿನಂತೆ ಬಳಸುತ್ತಿದ್ದ. ಅಪ್ಪನ ವೇಷ ಭೂಷಣಗಳಲ್ಲಿ ಬೇಗನೇ ಹರಿದು ಹಾಳಾಗುವ ಬಟ್ಟೆ ಎಂದರೆ ಧೋತ್ರಳು ಮಾತ್ರ. ರಾತ್ರಿ ಜಳಕಮಾಡಿದಾಗ  ತೊಯ್ದ ಧೋತ್ರ ಮರುದಿನ ಮಧ್ಯಾಹ್ನದವರೆಗೂ ನೆನೆಯುತ್ತಿತ್ತು- ಅಗಸರು ಬಂದು ಬಟ್ಟೆ ಒಗೆಯಲು ಒಯ್ಯುವವರೆಗೆ. ಎಲ್ಲ ಕೆಲಸ ಮುಗಿದ ಮೇಲೆ ರಾತ್ರಿ ಜಳಕಮಾಡುವ ರೂಢಿ ಇಟ್ಟುಕೊಂಡಿದ್ದ. ಅಮ್ಮ ಸದಾ 'ಶಿವನಗೌಡಪ್ಪನ ಧೋತ್ರ ನೆನದ ಹಾಳಗತಾವು' ಎಂದು ಗೊಣಗುತ್ತಿದ್ದಳು.
ಒಂದು ಡಬರಿ ಬಿಸಿನೀರಿನಲ್ಲಿ ಜಳಕಮಾಡಿ  ಧೋತ್ರ ಒಳಂಗಿ ಹಾಕಿಕೊಂಡು ಊಟಕ್ಕೆ ಕೂಡುತ್ತಿದ್ದ. ಕೂಡ್ರುಮಣೆ, ಅಡ್ಡಣಿಗೆ ಮೇಲೆ ಕಂಚಿನ ಗಂಗಾಳ, ಮಗ್ಗುಲಲ್ಲಿ ವಿಭೂತಿ ಕರಡಿಗೆ ಅಪ್ಪ ಬರುವುದಕ್ಕಿಂತ ಮುಂಚೆ ಸಿದ್ಧವಾಗಿರಬೇಕಾಗಿರುತ್ತಿತ್ತು. ಕೊರಳಲ್ಲಿ ಗುಂಡಗಡಿಗೆ ಇತ್ತು. ಮೈ ಕಾವಿಗೆ ಅದು ಕಪ್ಪಗಾಗಿರುತ್ತಿತ್ತು. ಆದರೆ ಒಂದು ದಿನವೂ ಲಿಂಗಪೂಜೆಯನ್ನಾಗಲಿ, ದೇವರಪೂಜೆಯನ್ನಾಗಲಿ ಮಾಡುತ್ತಿರಲಿಲ್ಲ. ದೇವರ ಗುಡಿಗೂ ಹೋಗುತ್ತಿರಲಿಲ್ಲ. ಊರಲ್ಲಿಯ ಪರವೂರಿನ  ಯಾವ  ದೇವರಿಗೂ  ನಮಸ್ಕರಿಸಿದ್ದನ್ನು ನಾನು ನೋಡಿಲ್ಲ. ಆದರೆ ದೇವರ ಬಗೆಗೆ ಶ್ರದ್ಧೆಯಿಂದ ಮಾತಾಡುತ್ತಿದ್ದ. ಬನಹಟ್ಟಿಯ ಹೊನ್ನಂತೆವ್ವ, ರುದ್ರಸ್ವಾಮಿ ಮತ್ತು ಗೊಡಚಿ ವೀರಭದ್ರ ದೇವರ ಬಗೆಗೆ ಅಪಾರ ನಿಷ್ಠೆ ಇತ್ತೆಂಬುದು ಅಪ್ಪನ ಮಾತಿನಿಂದ ವ್ಯಕ್ತವಾಗುತ್ತಿತ್ತು.

ರಾತ್ರಿ ಊಟಕ್ಕೆ ಎರಡು ಬಿಸಿ ರೊಟ್ಟಿ, ಗೋದಿ ಕಿಚಡಿ ಇದ್ದರೆ ಸಾಕು. ಒಂದೊಂದು ದಿನ ಗೋದಿ ಕಿಚಡಿಯಲ್ಲಿ ಹಾಲಿನ ಜೊತೆ ಬೆಲ್ಲ ಹಾಕಿಸಿಕೊಂಡು ಉಣ್ಣುತ್ತಿದ್ದ. ನಾನು ಅದೇ ಆಗ ಊಟ ಮಾಡಿದ್ದರೂ ಒಂದೆರಡು ತುತ್ತು ಒತ್ತಾಯ ಮಾಡಿ ತಿನಿಸುತ್ತಿದ್ದ. ಗೋದಿ ಕಿಚಡಿ ನವಣಿ ಅನ್ನ  ಇರದಿದ್ದರೆ ಹಾಲು ರೊಟ್ಟಿ ಉಣ್ಣುತ್ತಿದ್ದ. ಅಗಾಗ ಬಾಯಿರುಚಿಗಾಗಿ ಮುಟ್ಟಿಗೆ ಮಾಡಿಸಿಕೊಳ್ಳುತ್ತಿದ್ದ. ಬಳ್ಳೊಳ್ಳಿ, ಬ್ಯಾಡಗಿ ಮೆಣಸಿನಕಾಯಿ ಖಾರ ಜಜ್ಜಿ ಸಿದ್ಧಮಾಡಿದ ಹಿಂಡಿಕಲ್ಲಿನಲ್ಲಿ ದಪ್ಪ ರೊಟ್ಟಿ ಸೇರಿಸಿ ಹದವಾದ ಬಿಸಿ ಬಿಸಿ ಮುಟ್ಟಿಗೆ ಮಾಡುವದೂ ಒಂದು ಕಲೆ. ಅಮ್ಮ ಮಾಡಿದ ರೊಟ್ಟಿಯಲ್ಲಿ ಅಕ್ಕ ಶಾಂತಕ್ಕ ಮುಟ್ಟಿಗೆ ಮಾಡುತ್ತಿದ್ದಳು. ನಾವು ಅಪ್ಪನ ನಂತರ ಸರತಿ ಹಚ್ಚಿ ಮುಟ್ಟಿಗೆ ಮಾಡಿಸಿಕೊಳ್ಳುತ್ತಿದ್ದೆವು. ಅವಸರವಿದ್ದಾಗ ಕೈಮುಟ್ಟಿಗೆಯನ್ನು ಅಪ್ಪನೇ ಮಾಡಿಕೊಳ್ಳೂತ್ತಿದ್ದ. ಅಮ್ಮ ಮಾಡುವ ರೊಟ್ಟಿ ದಪ್ಪಗೆ ಇದ್ದು ಮುಟ್ಟಿಗೆ ಮಾಡಲು ಹೇಳಿಮಾಡಿಸಿದಂತಿರುತ್ತಿದ್ದವು. "ಕೈಬೆರಳಲ್ಲಿ ಅಮೃತವಿರುವುದರಿಂದ ಸರಿಯಾಗಿ ಹಿಚುಕಿ ಮಾಡಿದ ಮುಟ್ಟಿಗೆ ರುಚಿಯಾಗುತ್ತವೆ" ಎಂದು ಅಮ್ಮ ಆಗಾಗ ಹೇಳುತ್ತಿದ್ದಳು. ನಾನು ಈಗಲೂ ಮುಟ್ಟಿಗೆ ಮಾಡಿಕೊಂಡು ತಿನ್ನುತ್ತೇನೆ. ಬಾಲ್ಯದ ರುಚಿಯನ್ನು ಬೆಚ್ಚಗೆ ಮಾಡಿಕೊಳ್ಳುತ್ತೇನೆ. ಮುಂದಿನ ತಲೆಮಾರಿನ ಮಕ್ಕಳಿಗೂ ರುಚಿ ಗೊತ್ತು ಮಾಡಿಸಿದ್ದೇನೆ.

ಅಕ್ಕ ಶಾಂತಕ್ಕ ರೊಟ್ಟಿ ಮಾಡುವುದನ್ನು ಕಲಿತಿದ್ದರೂ ರಾತ್ರಿ ರೊಟ್ಟಿ ಮಾಡುವ ಪಾಳೆ ಅಮ್ಮನದೇ ಆಗಿರುತ್ತಿತ್ತು. ಏಕೆಂದರೆ ಅಮ್ಮನಿಗೆ ಮೇಲಿನ ಕೆಲಸ ಮಾಡುವುದಾಗುತ್ತಿರಲಿಲ್ಲ. ತಾಟು-ಗಂಗಾಳ ಕೊಡುವುದು, ನೀಡುವುದು, ತೊಳೆಯುವುದು ಅಕ್ಕನ ಕೆಲಸವಾಗಿದ್ದವುಅಮ್ಮ ತಾಯಿಕಳೆದುಕೊಂಡ ಮಕ್ಕಳಾದ ನಮ್ಮೆಲ್ಲರನ್ನು ಅತ್ಯಂತ ಪ್ರೀತಿಯಿಂದ ಬೆಳೆಸುತ್ತಿದ್ದಳು. ಹೆಚ್ಚಿಗೆ ಕೆಲಸವನ್ನೂ ಹಚ್ಚುತ್ತಿರಲಿಲ್ಲ. ಅದೇ ರೀತಿ ಶಾಂತಕ್ಕನಿಗೂ ಹೆಚ್ಚಿನ ಕೆಲಸ ಹಚ್ಚುತ್ತಿರಲಿಲ್ಲ. ಇದು ಒಂದು ಕಾರಣವಾದರೆ ಇನ್ನೊಂದು ಕಾರಣ ಬೇರೆ ಇತ್ತು. ಅಪ್ಪ ಸದಾ ತನ್ನ ಲೋಕದಲ್ಲಿಯೇ ಇರುತ್ತಿದ್ದ. ಒಮ್ಮೊಮ್ಮೆ ಊಟಕ್ಕೆ ಬಂದಾಗಲೂ  ಸಿಟ್ಟಿನಲ್ಲಿರುತ್ತಿದ್ದ. ಅಕ್ಕ ಶಾಂತಕ್ಕ ಜಳಕಕ್ಕೆ ನೀರಿಟ್ಟು ಊಟಕ್ಕೆ ನೀಡಿದರೆ ಅಪ್ಪನ ಸಿಟ್ಟು ಶಾಂತವಾಗುತ್ತಿತ್ತು. ಅಕ್ಕ ಶಾಂತಕ್ಕನ ಮೇಲೆ ಅಪ್ಪನ ಪ್ರೀತಿಯೂ ಹೆಚ್ಚು. ಅಪ್ಪ ತಾನು ಏನು ಹೇಳಬೇಕಾದರೂ ಅಕ್ಕನ ಮುಂದೇ ಹೇಳುತ್ತಿದ್ದ. ಅಮ್ಮನಿಗೆ ಹೇಳಬೇಕಾದ ಸಂಗತಿಯಿದ್ದರೂ ಅಕ್ಕನ ಮುಂದೇ ಹೇಳುತ್ತಿದ್ದ.