Thursday, June 9, 2016

ಲೋಕ ಸಂಚರಿಸಿ ನಲಿದಾನೋ





ಲೋಕ ಸಂಚರಿಸಿ ನಲಿದಾನೋ

ಅಲೆಮಾರಿ ಶರಿಫನು ನೆಲೆನಿಲ್ದ ಸಂತನು
ಕುಲಜಾತಿ ಮೀರಿ ಬೆಳೆದವನು | ಸಮತೆಗೆ 
ಬೆಳೆತಮ್ದು ಕೊಟ್ಟ ಮಾಂತನು |

ನೆಲೆನಿಲ್ದ ಬದುಕಿಗೆ ಒಲಿದಂತ ಶರಿಫನು
ಅಲೆದ ಮಡಿವಾಳ ನಾಗಲಿಂಗ | ಒಡಗೂಡಿ
ಉಳಿದ ನೂರಾರು ಹಾಡುಗಳ |

ನಾಡೆಲ್ಲ ಸುತ್ತಿದ ನಾಡ ಜಂಗಮ ಶರಿಫ
ಹಾಡು ಕಟ್ಟಿದ ಹದಮಾಡಿ | ಜಾತಿಯ 
ಗೋಡೆಯನು ಗುದ್ದಿ ಕೆಡವಿದ 

ಉತ್ತಮರ ಜೊತೆಗೂಡಿ ಹತ್ತೂರ ತಿರುಗಾಡಿ
ಸತ್ಯವನೆ ಬಿತ್ತಿ ಬೆಳೆದಂತ | ಶರಿಫನು
ಮುತ್ತಿನ ರಾಸಿ ಮಾಡಿದನು |

ಸಂಚಾರಿ ಶರಿಫನು ಹಂಚಿದ ಅನುಭಾವಕ 
ಮಿಂಚಿನ ಹೊಳಪು ಒಳಗೆಲ್ಲ | ಹರಿಯುತ್ತ
ಸಂಚಲನ ಶಕ್ತಿ ತುಂಬೈತಿ   |

ಲೋಕವ ತಿರುಗಾಡಿ ಚಾಕರಿಯ ಮಾಡಿದ 
ಸಾಕಾಗುವಂಗ ತೂಗುತ | ಬಾಳಿನ 
ಜೋಕಾಕಾಲಾಡಿದ ಶರಿಫನು |

ನಿಂತಲ್ಲಿ ನಿಲ್ಲದೆ ಕುಂತಲ್ಲಿ ಕೂಡದೆ
ಬೆಂತರನಂತೆ ತಿರುಗಾಡಿ | ಲೋಕದ 
ಚಿಂತೆ ಬಿಡಿಸ್ಯಾನೊ ಶರಿಫನು |

ಗರಗದ ಮಡಿವಾಳ ಗುರುವಾರ ನಾಗಲಿಂಗ 
ಶರಣರ ಮ್ಯಾಲ ಕಟಗೊಂಡು | ಶರಿಫನು
ಹರಭಾಕುತಿ ರಾಸಿ ಮಾಡ್ಯಾನ |

ಅನುಮಾನದ ಪೂಜಾರಿ ಅನುಮಾಡಿ ಕೊಡಲಿಲ್ಲ 
ಹನುಮ ದರ್ಶನಕ ಅತಿಗೇರಿ | ಶರಿಫನು
ಘನತೆ ದಂಡಕದಿ ಒಲಿಸ್ಯಾನ|

ಉಗರಗೊಳ್ಳದ ದೇವಿ ಜಗಮಾಯಿ ಎಲ್ಲಮ್ನ
ಮಿಗಿಲಾದ ಮಹಿಮೆ ಸಾರುತ್ತ | ಶರಿಫನು
ಮುಗಿಲಿಗೆ ಜೋಗು ಹಾಕ್ಯಾನ |

ಎಲ್ಲಮ್ಮ ದೇವಿಗೆ ಸಲ್ಲಿಸುತ ಭಕ್ತಿಯನು
ಎಲ್ಲೆಲ್ಲಿ ಕಾಣೆನಿಂಥವಳ | ಎನ್ನುತ್ತ
ಸೊಲ್ಲೆತ್ತಿ ಹಾಡಿ ನಲಿದಾನ |

ಬನದ ಶಂಕರಿದೆವಿ ವನಸಿರಿಯಲಲೆದಾಡಿ
ಮನಸಾರೆ ಹಾಡಿ ಹೊಗಳಿದ | ಶರಿಫನು
ಜನರಲ್ಲಿ ಭಕುತಿ ಬಿತ್ತಿದ |

ಮೈಲಾರಲಿಂಗನ ಮೇಲಾದ ಕಾರ್ಣಿಕದ 
ಲೀಲೆಯನು ಕಂಡು ಹೊಗಳಿದ | ಶರಿಫನು
ಕಾಲ ಮಹಿಮೆಯನು ತಿಳಿಸಿದ |

ಉಳವಿಯ ಬಸವನ ಹಳುವಿನ ನೆಲೆಕಂಡು 
ಗಳಿಸಿ ಆನಂದ ಅನುಭೂತಿ | ಹಾಡಲ್ಲಿ 
ಬೆಳಕ ತುಂಬಿದನು ಶಿವಯೋಗಿ |

ಮಲ್ಲಮ್ಮ ಹೇಮರಡ್ಡಿ ಸಲ್ಲಲಿತ ಮಹಿಮೆಯನು
ಸೊಲ್ಲು ಸೊಲ್ಲೆತ್ತಿ ಹಾಡ್ಯಾನೊ | ಶ್ರೀಶೈಲ 
ಮಲ್ಲಿಕಾರ್ಜುನನ ಭಕುತಳ |

ಉಳವಿ ಜಾತ್ರೆಗೆ ಹೋಗಿ ತಿಳಿದು ಬ್ರಹ್ಮದ ಬಯಲ 
ಹಳುವನೆಲ್ಲವನು ದಾಟುತ್ತ | ಶರಿಫನು 
ಸುಳಿದಾಡಿ ನಲಿದ ಶರಣರಲಿ |

ಹುಬ್ಬಳ್ಳಿ ಆರೂಡ್ಗ ನಿಬ್ಬೆರಗ ಆಗ್ಯಾನ 
ಉಬ್ಬಿ ಹಾಡುಗಳ ಕಟ್ಟುತ್ತ | ಶರಿಫನು
ಕಬ್ಬದಲಿ ರುಚಿಯ ತುಂಬ್ಯಾನ |

ಸಿದ್ಧ ಆರೂಢನ ಶುದ್ಧ ಮನಸನು ಗೆದ್ದು 
ಬದ್ಧ ಜೀವನವ ತ್ಯಜಿಸ್ಯಾನ | ಶರಿಫನು
ಸದ್ಧರ್ಮ ದಾರಿ ತೋರ್ಯಾನ |

ಆರೂಢ ಸಿದ್ದನಲಿ ಮೀರಿದ ಒಗೆತನ 
ತೋರಿದ ಬೆಳಕು ಬೆಡಗಿನದು | ಶರಿಫನು
ಸಾರಿದ ತತ್ವ ಬೆಳಕಿನದು |

ಕಳಸ ಕರಡಿಗುಡ್ಡ ಉಳವಿ ಮಂಡಿಗನಾಳ 
ಯಳವತ್ತಿ ಸಂಶಿ ಕಾರಡಗಿ | ಸವಣೂರು
ತಳವಳ್ಳಿ ಶಿಗ್ಲಿ ತಿರುಗ್ಯಾನ |

ಶಿಶುನಾಳ ಶರಿಫನು ಪಶುಪತಿ ಹಾಳೊಕ್ಕು
ಬಸನಾಳ ಹಿರೇ ಹಡಗಲಿ | ತಿರುಗ್ಯಾಡಿ
ವಸತಿ ಹೂಡ್ಯಾನ ಗುಡಿಪುರದಿ | 

ಅಂಕಲಗಿ ಅಡವೀಶ ಬಂಕಾಪುರ ಸಿದ್ಧೇಶ 
ಬಿಂಕದ ಊರು ಹುಲಗೂರು | ಹಜರೇಶಾ
ಲೆಂಕನು ಶರಿಫ ಶಿವಯೋಗಿ |

ಶಿರಹಟ್ಟಿ ಹಾನಗಲ್ಲು ಸೊರಟೂರು ಯಮನೂರು 
ಕರಡಿಗುಡ್ಡವನು ಸುತ್ತುತ್ತ | ಶರಿಫನು
ಎರಿಯ ಬೂದ್ಯಾಳ ಅಲೆದಾನ |

ಅಗಡಿ ಅಣ್ಣಿಗೇರಿ ಉಗರಗೊಳ್ಳಕ ನಡೆದು
ಮಿಗಿಲ ಅನುಭಾವ ಗಳಿಸ್ಯಾನ | ಶರಿಫನು
ಜಗಕ ಸೋಜಿಗವ ತೋರ್ಯಾನ |

No comments: