Friday, June 10, 2016

ಹಿರಿಹೊಳೆ ಗಂಗಿ ಹರಿಸ್ಯಾವೋ |







ಹಿರಿಹೊಳೆ ಗಂಗಿ ಹರಿಸ್ಯಾವೋ |

ಶರಿಫನು ಹಾಡಿದ ವರತತ್ವ ಪದಗಳು 
ಅರಿವಿನ ಬೀಜ ಬಿತ್ಯಾವು | ನಾಡಲ್ಲಿ
ಹಿರಿಹೊಳೆ ಗಂಗಿ ಹರಿಸ್ಯಾವೋ |

ಶಿಶುನಾಳ ಶರಿಪನ ಹಸನಾದ ಪದಗಳು
ಉಸಿರಿಗೆ ಜೀವ ತುಂಬ್ಯಾವು | ಜನಮನದ 
ಕೆಸರ ತೊಳಿಲಾಕ ಹುಟ್ಟ್ಯಾವು | 

ಶರಿಫನ ಗೀತೆಗಳ ಒರತೆಯ ಸೆಲೆ ನೋಡು 
ಪುರುಸೊತ್ತು ಇಲ್ದೆ ಉಕ್ಕುವುದು | ಧುಮ್ಮಿಕ್ಕಿ
ಸರಹೊತ್ತಿನಲ್ಲು ಹರಿಯುವುದು |

ಅರಿವು ಅನುಭಾವದ ಶರಿಫನ ಪದಗಳು
ಮರೆಯದಲೇ ಕೇಳಿ ನಲಿಬೇಕು | ಹಾಡುತ್ತ
ಬೆರಿಬೇಕು ಭಾವದೊಡಲಲ್ಲಿ |

ಹಾಡಿನ ಒಡಲಾಗ ನಾಡ ಜನರನುಭಾವ 
ಕೋಡಿ ಕೆರೆತುಂಬಿ ತುಳುಕುವುದು | ಲೋಕಕ್ಕೆ
ಮೋಡಿ ಹಾಕಿವುದು ಅನುಗಾಲ |

ಲೇಸಾದ ಪದಗಳನು ಏಸೊತ್ತು ಹಾಡಿದರು
ಬೀಸಿ ಕಂಪನ್ನು ಸೂಸ್ಯಾವು | ಶರಿಫನ
ಮಾಸದ ತತ್ವ ಬೀರ್ಯಾವು |

ಕವಿಸಂತ ಶರಿಫನ ಸವಿರುಚಿ ಹಾಡುಗಳು 
ರವಿಕಿರಣದಂತೆ ಲೋಕದಲಿ | ಹಬ್ಬುತ್ತ 
ನವರಸದ ಕಂಪು ಬೀರ್ಯಾವು |

ಒಮ್ಮೆ ಪದ ಕೇಳ್ದಾವ ಸುಮ್ಮನೆ ಬಿಡಲಾರದ 
ಹೆಮ್ಮೆ ಅಭಿಮಾನ ಪಡತಾನ | ಶರಿಫನ
ಸೋಮ್ಮು ಸೋಜಿಗವ ಅರಿತಾನ |

ಒಡಪಿನ  ಪದಗಳು ಅಡಿಗಡಿಗೆ ಕಾಡುವವು
ಬಿಡಲಾರದ ಮನಸ ಸೆಳೆಯುವವು | ಶರಿಫನ
ಸಡಗರ ಸಾರಿ ಹೇಳುವವು  |   

ವಿಷಯದ ವಾಸನೆ ವ್ಯಸನದ ಗಮಲುಗಳು
ಶಿಶುನಾಳ ಸಂತ ಶರಿಫನ | ಎದುರಲ್ಲಿ 
ಕಸರುಳಿಯದಂಗ ಕರಗುವವು |

ಕೇಳಿದರೆ ಪದಗಳು ಆಳಕ್ಕೆ ಇಳಿಯುವವು 
ಪಾಳಿಯಲಿ ಮಾನಸ ಗೆಲ್ಲುವವು | ಶರಿಫನ
ಮ್ಯಾಳದ ನಿಜವ ತೋರುವವು |

ಲೋಕದ ಅನುಭವವ ಪಾಕಗೊಳಿಸುತ ಪದದಿ
ತೂಕವ ಮಾಡಿ ಬಳಸಿದ | ಶರಿಫನು 
ಏಕನಿಷ್ಠೆಯಲಿ ಬೆರೆಯುತ್ತ | 

ಕಳಕಳಿಯ ಪದಗಳಲಿ ಬೆಳಕಿನ ಪ್ರಭೆ ತುಂಬಿ 
ಒಳಮನೆಯ ಆಳಕ್ಕಿಳಿಸಿದ | ಶರಿಫನ
ತಿಳಿಯಾದ ಭಕುತಿ ತೋರುವವು |

ಹುಡುಗಾಟ ಮಾಡುತಲೆ ಹುಡುಕಿದ ಬೆಡಗನ್ನು 
ಅಡಕಲ ಕಟ್ಟಿ ಅನುಭಾವದ | ಕಗ್ಗಂಟ 
ಬಿಡಿಸಿ ಹಾಡಿದ ಪದಗಳಲಿ |

ದೇಸಿಯ ನುಡಿಗಳನು ಹಾಸುಹೊಕ್ಕಾಗಿರಿಸಿ 
ಖಾಸಾ ಪದಗಳ ಕಟ್ಟಿದ | ಶರಿಫನ
ಬೇಸಾಯದ ಮರ್ಮ ಅರಿಬೇಕು |

ಶಿಸ್ತಿನ ಪದಗಳ ಉಸ್ತಾದ ಶರಿಫನ
ಮಸ್ತಕದ ಮೇಲೆ ಕೈಯಿಟ್ಟು | ಗೋವಿಂದ 
ಅಸ್ತು ಎಂದದ್ದು ಸಾರ್ಥಕವೋ | 

ತಾಳವಿಲ್ಲದವರು ಮೇಳ ಕಟ್ಟಿದರೇನು 
ಬಾಳಿ ಗಿಡ ಗೊನಿಯ ಕಟ್ಟದು | ಶರಿಫನ
ಬಾಳಿನೊಳ  ಗುಟ್ಟು ತಿಳಿಯದು |

ದುಡ್ಡು ದುಡ್ಡನು ಕೂಡ್ಸಿ ಬಡ್ಡಿ ತಿಂಬವರೆಲ್ಲ 
ಮಡ್ಡರು ಎಂದ ಶರಿಫನ | ಮಾತಲ್ಲಿ
ದೊಡ್ಡ ತತ್ವವೇ ಅಡಗಿಹುದು |

ಸೂಜಿಮಲ್ಲಿಗಿ ಮ್ಯಾಲ ಮೋಜಿನಾಡನು ಬರೆದು
ಸೋಜಿಗ ಮಾಡಿ ಶರಿಫನು | ಅನುಭಾವದ
ತೇಜ ಹರಡಿದನು ಲೋಕದಲಿ |

ತಾಳಗೇಡಿಗೆ ಇದನ ಹೇಳಬರುವುದೇ ಇಲ್ಲ 
ಬಾಳ ಬಲ್ಲವಗೆ ತೊಡಕಿಲ್ಲ | ಶರಿಫನ
ಮ್ಯಾಳ ಸೇರಿದರೆ ಭಯವಿಲ್ಲ |

ಮೀಸಲು ಹಾಡುಗಳು ಮಾಸದೆ ಉಳಿದಾವು 
ದೇಶದ ತುಂಬ ಶಾಹಿರ | ಆಗ್ಯಾವು
ಖಾಸ ಶರಿಫನ ಹೆಸರಲ್ಲಿ |

ಅತ್ತಿಗೇರಿಯ ಹನುಮ ಸತ್ಯುಳ್ಳ ದೇವರಿಗೆ 
ಮುತ್ತಿನವಳದ ದಂಡಕವ | ಹಾಡುತ್ತ 
ತೊತ್ತಾಗಿ ಸೇವೆ ಮಾಡ್ಯಾನ |







No comments: