Friday, May 27, 2016

ಉಸಿರಿಗೊಮ್ಮೊಮ್ಮೆ ನೆನೆಯುವೆ

ಉಸಿರಿಗೊಮ್ಮೊಮ್ಮೆ ನೆನೆಯುವೆ

ನುಡಿಮುತ್ತಿನ ಹಾರಕ್ಕೆ ನಡೆರತ್ನ ಪವಣಿಸಿ 
ಮುಡಿ ಹವಳ ತಿಲಕ ಕಟ್ಟಿದ | ಶರಿಫನ 
ಅಡಿಗೆರಗಿ ನಮನ ಸಲ್ಲಿಸುವೆ |

ಕನ್ನಡದ ಕಬೀರ ನನ್ನಿಯ ನುಡಿಗಾರ 
ಚಿನ್ಮಯ ಪದದ ಮಾಯ್ಕಾರ | ಶರಿಫನ
ಮನ್ನಣೆಗೆ ಮಣಿದು ವಂದಿಸುವೆ |

ಉಸಿರಾಡೋ ಉಸಿರಲ್ಲಿ ಪಿಸುಗುಡುವ ಮನಸಲ್ಲಿ
ಹಸನಾದ ಹಾಡು ತುಂಬಿದ | ಶರಿಫನ್ನ 
ಉಸಿರಿಗೊಮ್ಮೊಮ್ಮೆ ನೆನೆಯುವೆ |

ಪರಿಸರದ ಕೂಸಾಗಿ ಸರಿಗಮದ ಹಾಡಾಗಿ 
ವರಕವಿ ಪಟ್ಟ ಪಡೆದಂತ | ಯೋಗಿಗೆ 
ಕರಮುಗಿದು ಕೃಪೆಯ ಬೇಡುವೆ |

ಜನರಾಡೊ ಮಾತಿಗೆ ಮನದಾಳ ಬೇತಿಗೆ
ಘನತೆಯನು ಕೊಟ್ಟ ವರಕವಿ | ಶರಿಫನಿಗೆ
ಹಣೆಹಚ್ಚಿ ಶರಣು ಸಲ್ಲಿಸುವೆ |

ಸಂತರ ಸಂಗದಲಿ ಸಂತೆ ಬಾಜಾರದಲ್ಲಿ 
ನಿಂತು ಕುಂತಲ್ಲೆ ಪದಕಟ್ಟಿ | ಹಾಡಿದ 
ಮಾಂತ ಶರಿಫನಿಗೆ ವಂದಿಸುವೆ |

ಶರಿಫನ ಹಾಡಲ್ಲಿ ಬಿರಿದಂತ ಹೂಪದವ 
ಸರಣಿಯಲಿ ಕಟ್ಟಿ ಕೊಟ್ಟಿರುವ | ತೇಜಕ್ಕೆ 
ಬೆರಗಿನ ನಮನ ಸಲ್ಲಿಸುವೆ |

ಶಿವನಾಗ ಅಬ್ಬಿಗೇರಿ ಶರಿಫರ ಹಾಡನ್ನು 
ಪವಣಿಸಿ ಅಚ್ಚು ಮಾಡಿದ | ಸಾಹಸಿಯ
ಸವಿರುಚಿ ಮನಕೆ ವಂದಿಸುವೆ |

ನನ್ನಲ್ಲಿ ಅಡಗಿರುವ ಮನ್ನಣೆಯ ಕವಿಯೊಬ್ಬ 
ನನ್ನಿಯಲಿ ಕಾವ್ಯ ಕಟ್ಟುತ್ತ | ಶರಿಫನ
ಬಣ್ಣಿಸಿದ ತೇಜಕ್ಕೆ ವಂದಿಸುವೆ |

No comments: