Friday, June 10, 2016

ಮನಗೆದ್ದ ಸಂತ ಮಾಂತನೊ




ಮನಗೆದ್ದ ಸಂತ ಮಾಂತನೊ 

ಅನುಭಾವದ ಹಾಡಿಂದ ಘನವಾದ ತತ್ವವನು 
ಉಣಬಡಿಸಿದಂತ ಶರಿಫನು | ನಾಡವರ 
ಮನಗೆದ್ದ ಸಂತ ಮಾಂತನೊ |

ಅಡಿಗಣ ಪ್ರಾಸಗಳ ಒಡೆಯನು ತಾನಾಗಿ 
ನುಡಿಗಣಕೆ ಜೀವ ತುಂಬಿದ | ಶರಿಫನು
ಬೆಡಗಿನಲಿ ಹಾಡು ಕಟ್ಟಿದ |

ಅಡಿಗಣ ಪ್ರಾಸಗಳ ಗಡಿರೇಖೆ ಮೀರುತ್ತ 
ಗುಡಿಕಟ್ಟಿ ಕಳಸ ಇಟ್ಟನು | ಹಾಡಿಗೆ 
ನಡೆವ ದಾರಿಯನು ತೋರ್ಯಾನೊ |

ಹಾಡಿಗೆ ಹಾಡನ್ನು ಹಾಡುವುದ ಕಲಿಸುತ್ತ
ನಾಡಿ ಮಿಡಿತದಲಿ ಒಳಸೇರಿ | ಶರಿಫನು
ನಾಡವರ ಮನಸು ಗೆದ್ದನು |

ದೇಸಿ ನುಡಿಬೇಜದ ಬೇಸಾಯದ ಒಡೆಯನು
ಲೇಸಾದ ಹಾಡು ಕಟ್ಟುತ್ತ | ಅನುಭಾವದ
ರಾಸಿ ಮಾಡಿದನೋ ಶರಿಫನು |

ಉಕ್ಕಿದ ಭಾವವನ್ನು ಮುಕ್ಕಾಗದಂತಿರಿಸಿ 
ಅಕ್ಕರದಿ ಹಿಡಿದು ಹಾಡಿದ | ಶರಿಫನು 
ಒಕ್ಕಲು ಮಗನು ದಿಟದಲ್ಲಿ |

ಶಾಲೆಯಲಿ ಮಾಸ್ತರ ಕೋಲಾಟದಲುಸ್ತಾದ 
ಬೈಲಾಟದಲ್ಲಿ ಕಥೆಗಾರ | ತಾನಾಗಿ
ಲೇಲೆಯಾಡಿದ ಶರಿಫನು |

ಹಸನಹುಸೇನರ ಹಸನಾದ ಬದುಕನ್ನು 
ಕಸರಿಲ್ಲದಂಗ ಪದಕಟ್ಟಿ | ಆಲಾಯ್ಕ 
ಕಸುವು ತುಂಬ್ಯಾನೊ ಶರಿಫನು |

ಗುಡಗೇರಿ ದ್ಯಾಮವ್ನ ಒಡನಾಡಿ ಶರಿಫನು
ಬಿಡದೆ ಬೇಡಿದ ವರವನ್ನು | ದೇವಿಯಲಿ
ಪಡೆದ ಭಕ್ತಿಯ ಕಾರುಣ್ಯ |

ಗುಡುಗುಡಿ ಸೇದಿದ ಗುಡಿದೇಹ ಮಾಡಿದ 
ಒಅಡಪಾಗಿ ತೋರಿ ಲೋಕಕ್ಕೆ | ಶರಿಫನು
ಗುಡಿಪುರದ ದೇವಿ ಒಲಿಸಿದ |

ಲೋಕವ ತಿರುಗಾಡಿ ಚಾಕರಿ ಮಾಡಿದ
ಸಾಕಾಗುವಂಗ ತೂಗುತ | ಬಾಳಿನ 
ಜೋಕಾಲಿಯಾಟ ಆಡಿದ |

ನಡೆನುಡಿ ಒಂದಾಗ್ಸಿ ನಡೆದಂತ ಶರಿಫನು
ಮಡಿಯಿಂದ ದೂರ ಸಾರಿದನು | ದೇಹದ 
ಗುಡಿಗೆ ಗೋಪುರವ ಕಟ್ಟಿದ |

ಆಸೆಪಾಸೆಗೆ ಸಿಕ್ಕು ತಾಸುತಾಸಿಗೆ ಕೊರಗಿ 
ಕ್ಲೇಶ ಸಾಗರದಿ ಸಿಕ್ಕಂತ | ಭವಿಗಳಿಗು 
ಈಶ ಶಿಶುನಾಳನೊಲಿಸಿದನು |

ತೊಗಳಲ್ಲಿ ಹುಟ್ಟಿದ ತೊಗಲಿನ ಚೇಲವನು 
ತಗಲು ಮಾಡದೆ ಬಳಸಿದ | ಶರಿಫನು
ಮಿಗಿಲಾದ ಸಂತ ಲೋಕದಲಿ |

ಹದವಾದ ಲಯದಲ್ಲಿ ಪದಗಳ ಪೋಣಿಸಿ
ಸುಧೆಯ ಹೊಮ್ಮಿಸಿದ ಶರಿಫನು | ಲೋಕದ 
ಪದವಿಯ ಹಂಗು ತೋರೆದನು |

ಊರುಕೇರಿಗಳಲ್ಲಿ ಸಹಾರ ಪಟ್ಟಣದಲ್ಲಿ 
ದಾರಿ  ನಡುದಾರಿ ಪಯಣದಲಿ | ಶರಿಪನು 
ಭಾರಿ ಪದ ಕಟ್ಟಿ ಹಾಡಿದನೊ |

ಸಾಲಿಯ ಮಾಸ್ತರಕಿ ಬೇಲಿಯ ದಾಟಿದನು 
ಮೇಲಾದ ವಿದ್ಯೆ ಸಾರುತ | ಶರಿಫನು 
ಹಾಲನಿಣಿಸಿದನು ಜಗಕೆಲ್ಲ |

ಸಂತೆ ಬಾಜಾರದಲ್ಲಿ ಕಾಂತ ಗುರುವಿನ ನೆನೆದು 
ಚಿಂತ ಮಾಡುವ ಜನಗಳ | ಭೋಗದ 
ಸಂಚು ಹರಿಸಿದ ಶರಿಫನು |

ಕಲಿಯುಗದ ಕೌತುಕಕೆ ಹಲವು ಹಾಡನು ಕಟ್ಟಿ
ಕುಳಜಾತಿ ಮತವ ಮೀರಿದ | ಶರಿಫನು
ಛಲವಂತ ಕವಿಯೋ ನಾಡಲ್ಲಿ |

ತೋಟವ ನೋಡುತ್ತ ಆಟವಾಡಿದ   ಶರಿಫ 
ನೀಟಾಗಿ ನಿಜದ ಬ್ರಹ್ಮದಲಿ | ತಾನಿಂತು
ಕೋಟಿ ಕರ್ಮವನು ಕಳಕೊಂಡ |

ಮುಟ್ಟ ಮುತ್ತಿಗೆ ಹಣವ ಕಟ್ಟಿಕೊಂಬುದ್ಯಾಕೊ
ಬಿಟ್ಟು ಬಾ ನೀನು ಶಿಶುನಾಳಕ | ಎನ್ನುತ್ತಾ 
ಬಟ್ಟ ಬಯಲನ್ನೆ ತೋರಿದ |

ಸುಗ್ಗಿ ಮಾಡಲು ಎಂದು ಹಿಗ್ಗಿಲಿ ಹೊಲಕೋಗಿ 
ಅಗ್ಗದ ಫಲಗಳ ಕೊಯ್ಯುತ್ತ | ಶರಿಫನು
ಸಗ್ಗದನುಭಾವವ ಮೀರಿದನೋ |

ಲೋಕದ ಮಾತನ್ನು ತಾಕಿಸಿ ಕೊಳ್ಳದೆ 
ಮೂಕನ ರೂಪ ತಾಳಿದ | ಶರಿಫನು
ತೂಕದ ಹಾಡು ಹಾಡಿದ |

ಶಿವನಾಮ ಸ್ಮರಿಸುತ್ತ ಭವರೋಗ ಹರಿದಾಕಿ
ಸವಿಯಾದ ನೂರು ಪದಕಟ್ಟಿ | ಶರಿಫನು
ಕವಿಯಾಗಿ ಮೆರೆದ ನಾಡಲ್ಲಿ |

ನೋಡುವ ನೋಟಕ್ಕೆ ಮಾಡುವ ಮಾಟಕ್ಕೆ 
ಹಾಡಿನ ಬೆಡಗು ತುಂಬಿದ | ಶಿಶುನಾಳ್ದ 
ನಾಡಿನ ಕೀರ್ತಿ ಹಬ್ಬಿಸಿದ |

ಎತ್ತರಕೆ ಏರಿದನು ನ್ಬಿತ್ತರಕೆ ಹಾರಿದನು
ಚಿತ್ತದಾಳಕ್ಕೆ  ಇಳಿದಂತ | ಶರಿಫನು  
ಬಿತ್ತಿದನುಭಾವ ಬೆಡಗಿನದು |

ಆಡುವ ಮಾತಿನಲಿ ಹಾಡುವ ಹಾಡಿನಲಿ 
ಜೋಡಿಸಿ ಶಬ್ದ ತುಂಬ್ಯಾನ | ಶರಿಫನು
ಬೇಡಿದ ಭಾವ ಒಳಗಿಟ್ಟು  |

ಕರ್ಮಟದ  ಭವಿಗಳಿಗೆ  ಮರ್ಮವನು ತಿಳಿಸಾಕ 
ಚರ್ಮಕ್ಕೆ ಚುಚ್ಚಿ ಹಾಡಿದ | ಶರಿಫನು
ಧರ್ಮದ ದಾರಿ ತೋರಿದ |

ಹುಲಗೂರ ಖಾದರನ ಒಲುಮೆಯ ಮಗನಾಗಿ 
ಚಲದಿಂದ ಹಾಡಿ ಪದಗಳನು | ಶಿಶುನಾಳ್ಕ
ಗೆಳುವನೆ ತಂದ ಶರಿಫನು |

ಕೋಶವನೋದಿದ ದೇಶವ ಸುತ್ತಿದ 
ಬೇಸಾಯದ ಕಾಯಕ ನಡೆಸಿದ | ಶರಿಫನು
ರಾಸಿ ಒಟ್ಟಿದ ಪದಗಳ |

ದೇಹದ ಗುಡಿಕಟ್ಟಿ ಮೋಹವ ಕಡಿದಾಕಿ 
ಸೋಹಂ ಪದವ ಅಳುಕಿಸಿ | ಮನದಿ ದಾ
ಸೋಹಂ ಬೀಜ ಬಿತ್ತಿದನೋ |

ಸೋರುವ ಮಾಳಿಗೆಯ ಜಾರು ಹುಳುಜಂತಿಯ 
ತೋರಿ ನಗುನಗುತ ಸರಿಪಡಿಸಿ | ಶರಿಫನು
ಮೀರಿದನುಭಾವ ಹಂಚಿದ |

ಬಡತನ ಸಿರಿತನ ಒಡೆತನ ಲೆಕ್ಕಿಸದೆ
ಮೃಡನ ಪಾದವನೇ   ನಂಬಿದ | ಶರಿಫನು 
ಮಿಡುಕಾಡಲಿಲ್ಲ ಯಾವುದಕು |

ಆಡಾಡ್ತ ಕಲಿಸಿದ ಹಾಡಾಡ್ತ ಉಣಿಸಿದ 
ನೋಡ ನೋಡ್ತ ಅರಿವು ಬಿತ್ತಿದ | ಶರಿಫನು
ಕೂಡ ಕೂಡ್ತ ಬಯಲಲೊಂದಾದ |

ಬೆಡಗಿನ ಮಾತಲ್ಲಿ ಅಡಗಿಸಿ ತತ್ವವನು 
ನಡೆನುಡಿಯ ಜಾತ್ರೆ ಮಾಡಿದ | ಶರಿಫನು
ಬಿಡುಗಡೆಯ ದಾರಿ ತೋರಿದ |

ಹುಟ್ಟೂರ ಮಠದಲ್ಲಿ ಪಟ್ಟ ಕಾಯಕ ನಡೆಸಿ 
ಪುಟ್ಟ ಮಕ್ಕಳಿಗೆ ವಿದ್ಯೆಯ | ನೀಡುತ 
ಮುಟ್ಟಿಸಿದ ಕಲಿತ ಋಣವವನ್ನು |

ಕಲಿತ ವಿದ್ಯೆಯನೆಲ್ಲ ಲಲಿತ ಮಾತುಗಳಲ್ಲಿ 
ನಲಿದು ಮಕ್ಕಳಿಗೆ ಉಣಿಸ್ಯಾನೊ | ಶರಿಫನು
ಒಲವಿನ ಪ್ರೀತಿ ಹಂಚ್ಯಾನೊ |

ಹುಗೂರ ಸಂತ್ಯಾಗ ನಲುಗಿದ ಮುದುಕಿಗೆ 
ಬಳುಹಿತದ ಮಾತು ಹೇಳುತ್ತ | ಸದ್ಗತಿಗೆ 
ಸಲುವಂತ ದಾರಿ ತೋರಿದ |

ಗದ್ದಳದಲಿ ಸಿಕ್ಕು ಒದ್ದಾಡೊ ಮುದುಕಿಗೆ
ಬುದ್ಧಿ ಹೇಳಿದ ಶರಿಫನು | ಹುಲಗೂರ 
ಸಿದ್ಧ ಖಾದರನ ನಿಜಭಕ್ತ |

ಚಿಂತೆಯ ಬಿಡಿಸಿದ ಕಾಂತನ್ನ ಒಲಿಸಿದ 
ಸಂತಿ ಹುಲಗೂರ ಹಂಗನ್ನು | ಹರಿಸಿದ 
ಮಾಂತನ್ನ ಮುದುಕಿ ಮರಿಲಾರ್ದು |

ಹಿಗ್ಗಿ ಹೋಲಿಸಿದ ಅಂಗಿ ಹೆಗ್ಗಣಕೆ ಕೊಡಲಿಲ್ಲ 
ಮುಗ್ಗರಿಸಿ ಬಿದ್ದ ಮುದುಕಿಯನು | ಉದ್ಧರಿಸಿ
ಸಗ್ಗದ ದಾರಿ ತೋರಿದ |

ಅಂಬೆ ಜಗದಂಬೆ ಮ್ಯಾಲ ತಂಬೂರಿ ಸ್ವರ ಮ್ಯಾಲ
ಕಂಬ ಜಂತಿಯ ಮಣಿ ಮ್ಯಾಲ | ಕಟ್ಟ್ಯಾನ 
ಕುಂಬಾರ್ನ ಕೊಡಕು ಹಾಡನ್ನು |

ಹಕ್ಕಿ ಬೆಳವನ ಮ್ಯಾಲ ಬೆಕ್ಕು ನಾಯಿಯ ಮ್ಯಾಲ
 ರೊಕ್ಕ ಪಾವಳಿಯ ದುಡ್ಡ ಮ್ಯಾಲ | ಶರಿಫನು
ಚೊಕ್ಕ ಪದಕಟ್ತಿ ಹಾಡ್ಯಾನ |

ಸುಗ್ಗಿ ಸುರಗಿಯ ಮ್ಯಾಲ ಹಗ್ಗ ಮಗ್ಗದ ಮ್ಯಾಲ
ಗುಗ್ಗಳ ತೇರು ಮನಿಮ್ಯಾಲ | ಬಿಡಲಾರದ 
ಹೆಗ್ಗಣ ಮ್ಯಾಲೂ ಹಾಡ್ಯಾನೊ |

ಆನೆ ಕುದರಿಯ ಮ್ಯಾಲ ಬೆಕ್ಕು ನಾಯಿಯ ಮ್ಯಾಲ
ಮಾನಿನಿ ಸಾಧ್ವಿ ಸತಿ ಮ್ಯಾಲ | ಕಟ್ಟ್ಯನ 
ಜಾಣ ಶರಿಫನು ಪದಗಳನು |

ಭಂಟ ಕುರುಬನ ಮ್ಯಾಲ ತುಂಟ ಕುಂತರ ಮ್ಯಾಲ
ಗಂಟನು ಹೊತ್ತ ಮೂಬೇರಕಿ | ಮುದುಕಿಯ 
ಪಂಟಿಗೂ ಹಾಡು ರಸಿಸ್ಯಾನ |

ಭೋಗಿ ಲೋಭಿಯ ಮ್ಯಾಲ ಯೋಗಿ ಸಂತರ ಮ್ಯಾಲ
ತ್ಯಾಗಿ ಅಲ್ಲಮನ ನಡೆ ಮ್ಯಾಲ | ಪದಕಟ್ಟಿ
ಜೋಗುಳ ಹಾಡಿ ನಲಿದಾನ |













No comments: