Saturday, June 11, 2016

ಮುಂಡಿಗೆ ಪದವ ಹಾಡ್ಯಾನೊ



ಮುಂಡಿಗೆ ಪದವ ಹಾಡ್ಯಾನೊ

ಮೊಲದ ತಲಿಯಮ್ಯಾಲ ಇಲಿಹೋಗಿ ಕುಳಿತಿತ್ತ 
ಸಲಿಗಿ ಹತ್ತಿದ ನರಿಯೊಂದು | ಹಾರ್ಹಾರಿ 
ಹುಲಿಯ ಕೊಂಡಿದ್ದ ಸಾರಿದನೋ |

ಕಲ್ಲುಪಡಿಯ ಹಕ್ಕಿ ಸೋಲ್ಲುಸೋಲ್ಲಿಗೆ ಒಮ್ಮೆ 
ಅಲ್ಲಾನ ಹೆಸರ ನೆನೆಯುವ | ಕೌತುಕದ 
ಬಲ್ಲಿದನು ಒಬ್ನೆ ಶರಿಫನು |

ಅಡವಿ ಪಲ್ಲೆ ತಿಂದು ಮಡಿಯ ನೀರನು ಕುಡಿದು 
ಒಡಲು ಹೊರೆವಂತ ಪಕ್ಷಿಯನು | ಬಣ್ಣಿಸಿದ 
ಸಡಗರದ ಕವಿಯೋ ಶರಿಫನು |

ಸಾಯಲಾರದ ಹೆಣವ ಗಾಯಮಾಡುವದರಿತು 
ಛಾಯೆ ಮಿಂಚುಗಳ ಗಗನೆಕ್ಕೆ | ಅಡರಿಸಿದ 
ಮಾಯೆ ಬಲ್ಲವನು ಶರಿಫನು |

ಆಕಳ ಹೊಟ್ಟೆಯಲೊಂದು ಎಮ್ಮಿಕರ ಹುಟ್ಟಿದ್ದು 
ಹಮ್ಮೀಲೆ ಹೈನ ಮಾಡಿದ್ದು | ಶರಿಫನ 
ಸೊಮ್ಮು ಮುಂಡಿಗೆಯ ಅರಿಬೇಕೋ |

ಪಕ್ಕವಿಲ್ಲದ ಹಕ್ಕಿ ದಿಕ್ಕೆಲ್ಲ ಸುತ್ತುತ್ತ 
ಮಕ್ಕಾಮದೀನ ಒಳಹೊಕ್ಕು | ಶರಿಫನ
ಒಕ್ಕಲಾಗುವುದು ಸೋಜಿಗವೋ |

ಮುಕ್ಕಾದ ಮಗಿಯೊಂದು ಅಕ್ಕರದಿ ಉಕ್ಕನುಂಗಿ 
ತೆಕ್ಕಿ ಬೀಳುತ್ತಾ ಲೋಕಕ್ಕೆ | ಶರಿಫನ
ದಿಕ್ಕಿಗೊದಗುವುದು ಕೌತುಕವೋ |

ಬಡನಡುವ ಮೂಬೆರಕಿ ಸಡಗರದಿ ಸಜ್ಜಾಗಿ 
ಅಡಿಗೆರಗಿ ಆಲಾಯಿ ಆಡುವುದು | ಶರಿಫನ
ಬೆಡಗಿನ ಮುಂಡಿಗೆ ನಮಗೆಲ್ಲ |

ಕೋಳಿ ಕೋಡಗನುಂಗಿ ಗೋಡೆ ಸುಣ್ನವನುಂಗಿ 
ತಾಳ ತಂಬೂರಿ ಸ್ವರನುಂಗಿ | ಶರಿಫನ
ಬಾಳ ನುಂಗಿದನೊ ಗೋವಿಂದ |

ಬೋಕಿಯೊಳು ಹುಟ್ಟಿದ ಲೋಕದ ಜನರಿಗೆ 
ಏಕಮುಂಡಗಿ ಹೇಳಿದ | ಶರಿಫನು
ಜ್ವಾಕಿಲಲಾಯಿ ಆಡಿದನು |

ಮುಲ್ಲಾ ಮಸೀದ್ಯಾಗ ಬೆಲ್ಲ ಓದಿಕಿ ಮಾಡಿ 
ಸೊಲ್ಲು ಸೊಲ್ಲಿಗೆ ಧೀನ್ ಧೀನ್ | ಎಂಬುದನು
ಬಲ್ಲಿದ ನಮ್ಮ ಶರಿಫನು |

ಶಾರಮದೀನದ ಮೋರಮ್ಮಿನಾಚರಣೆ 
ಆರು ಶಾಸ್ತ್ರಗಳ ಸಾರವು | ಎಂಬುದನು
ಸಾರಿ ಹೇಳಿದನು ಶರಿಫನು |

ಮಂದಿಯು ತವಕದಿ ತಂದಿಟ್ಟ ಚೊಂಗೆವ 
ತಿಂದು ತಿರುಗಾಡೊ ಮುಲ್ಲಾನ | ಒದಕಿಯ 
ಚಂದವನು ಬಲ್ಲ ಹರಿಫನು |

ಮಾಳಿಗೆ ಮೇಲಿನ ಆಲಾಯಿ ಕುಣಿಯಲ್ಲಿ 
ತೋಳನ ಮಾಡುವೆ ನಡೆದಾಗ | ಶರಿಫನು
ಬಾಳಿಗೆ ಗೊನಿಯ ಕಟ್ಟಿದನು |

ಮಕ್ಕಾ ಮದೀನಕ್ಕ ಪಕ್ಕಾ ಹರದಾರೆಷ್ಟು 
ಲೆಕ್ಕ ಹೇಳೊ ನೀ ಶಾಹೀರ | ಶರಿಫನ
ಮುಕ್ಕು ಆಗದ ಮುಂಡಿಗೆಯೊ |

ಮೈದೀನ ಪುರದಲ್ಲಿ ಸೈದರಣ ಮನೆಯಲ್ಲಿ 
ಮಾದರಾಕಿ ಹಡೆದ ಮಗಸತ್ತು | ಹೋದುದನ 
ಭೇದಿಸುನೊಬ್ನೆ  ಶರಿಫನು |

ದಿಕ್ಕು ಎಂಟನು ನುಂಗಿ ನೆಕ್ಕಿ ನೀರನು ಕುಡಿದು
ಮಿಕ್ಕೇದ ಇಲಿಯ ತೋರಿದ | ಶರಿಫನಿಗೆ 
ತೆಕ್ಕಿ ಬೀಳುವುದು ದುಸ್ತರವು |

ಕಳ್ಳಿ ಹಾಕಿದ ದನವು ಹುಲ್ಲು ತಿನ್ನುವುದಲ್ಲೋ
ಹಳ್ಳಿ ಹಾವನ್ನು ನುಂಗುವುದು | ಶರಿಫನ
ಗುಲ್ಲು ತಿಳಿಯದೊ ನರರಿಗೆ |

No comments: