Saturday, June 11, 2016

ಶಿಷ್ಯ ಬಳಗದ ಪಡೆ ನೋಡು



ಶಿಷ್ಯ ಬಳಗದ ಪಡೆ ನೋಡು 

ಮಂಡಿಗನಾಳ ಪ್ರಚಂಡ ಗುರುಪಾದನು 
ಉಂಡುಟ್ಟ ಶರಿಫ ಪದಗಳನು | ಶಿಷ್ಯರ 
ದಂಡು ಕಟ್ಟಿದ ನಾಡಾಗ |

ಜಾತಿಗಾರ ದೇವೇಂದ್ರ ಜಾತ ಗುರುಪಾದನಲಿ 
ಓಟು ಹಾಡುಗಳ ಕಲಿತಾನ | ಶರಿಫ
ಜ್ಯೋತಿಯ ಬೆಳಕು ಹರಡ್ಯಾನ |

ಹರಕೂನಿ ಯಲ್ಲಪ್ಪಗ ಸರದಾರ ದೇವೇಂದ್ರ
ಗುರುವಾಗಿ ದೊರೆತ ಸ್ನುಗಾಲ | ಶರಿಫನ 
ಅರಿವಿನ ಪದವ ಹಾಡಿಸಿದ | 

ಗುರುಪಾದ ದೇವೇಂದ್ರ ಹರಕೂನಿ ಎಲ್ಲಪ್ಪ 
ಅರ್ಜುನ ಸೇರಿ ಶರಿಫರ | ಪದಗಳನು 
ಹರವಿ ಬಿಟ್ಟಾರೊ ನಾಡಾಗ |

ಕಡದಳ್ಳಿ  ಅರ್ಜುನಗ ನುಡಿರೂಪದಾಡನ್ನು 
ಇಡಿಯಾಗಿ ಕಲಿಸಿ ಹರಕೂಣಿ | ಯಲ್ಲಪ್ಪ 
ಮುಡಿಗೆ ಏರಿಸಿದ ಕರುಣೆಯಲಿ |

ಶರಿಫನ ಪದಗಳನು ಉರದಲ್ಲಿ ಬಚ್ಚಿಡದೆ 
ಒರೆಹಚ್ಚಿ ಹಾಡಿ ಲೋಕದಲಿ | ಹಬ್ಬಿಸಿದ 
ಅರಜುನ ಮಡಿವಾಳ ನಲಿವಿಂದ |

ನೆನಪಿನ ಸಾಗರದ ಮಣಿಮುತ್ತು  ರತುನಗಳ
ದಣಿವಿರದೆ ಜತನ ಮಾಡಿದ | ಅರಜುನ
ಘನವಾದ ಕಾಯಕ ನಡೆಸಿದ |

ಹಜಾರೆ ಸಾಹೇಬರು ನಜರಿಟ್ಟು ಕಲಕೊಂಡು
ವಜನಾದ ಪದವ ಹಾಡುತ್ತ | ಶರಿಫನ
ನಿಜದ ಧಾಟಿಯನು ಉಳಿಸ್ಯಾರ |

ಏಕತಾರಿ ತಂಬೂರಿ ಜೋಕಿಲಿ ಪೂಜಿಸುತ 
ಚಾಕರಿ ಮಾಡೊ ಹಜರೇ | ಸಾಹೆಬರು
ಪಾಕ ಉಣಿಸುವರು ಲೋಕಕ್ಕ |

ಕಡೆಯ ಕಡದಳ್ಳಿ ಯ ಕಡಿಚುಂಗು ಅರ್ಜುನ 
ಬಿಡಲಾರದ ಪದವ ಹಾಡುತ್ತ | ಶರಿಫನ
ಅಡಿಯ ಹಿಡದಾನೊ ಕಡಿತನಕ |

ಶರಿಫನ ಅನುಭಾವದ ಅರಿವಿನ ಕೂಸಾಗಿ
ಬೆರೆತು ಬಿಟ್ಟಾನೊ ತತ್ವದಲಿ | ಅರ್ಜುನ
ಶರಣ ಜೀವನವ ನಡಿಸ್ಯಾನೊ |

ಮಡಿವಾಳ ಅರ್ಜುನ ಕಡದಳ್ಳಿ ವರಪುತ್ರ 
ಕಡು ಪ್ರೀತಿಯಿಂದ ಶರಿಫನ | ಹಾಡನ್ನು
ಮುಡಿಗೇರಿಸಿಕೊಂಡ ಅನುಗಾಲ |


No comments: