Saturday, June 11, 2016

ಮುದುಕಪ್ಪ ಬರೆದು ಇಟ್ಟಾನೊ



ಮುದುಕಪ್ಪ ಬರೆದು ಇಟ್ಟಾನೊ

ಗುಡಗೇರಿ ಮುದುಕಪ್ಪ ಬಿಡಲಾರದ ಬರೆದಿಟ್ಟ 
ಬೆಡಗಿನ ಐನೂರ ಹಾಡುಗಳ | ಶರಿಫನ 
ಒಡನಾಟ ಪಡೆದ ನಿಜಭಕ್ತ |

ಮುದುಕಪ್ಪ  ಕುಂಬಾರ ಮುದದಿಂದ ಬರೆದಿಟ್ಟ
ಬದುಕಿಸಿದ ನಮ್ಮ ಶರಿಫನ | ಹಾಡುಗಳ
ಚದುರ ರೂಪದಲಿ ಅನುಗಾಲ |

ನಂಬಿಕೆ ನಿಷ್ಠೆಯಲಿ ಅಂಬರಕೆ ಮುಖವಿಟ್ಟು
ಚಂಬೆಳಕ ಚೆಲ್ಲಿ ಹಾಡಿದ | ಶರಿಫನ
ಬಿಂಬ ಕಟೆದವನು ಮುದುಕಪ್ಪ |

ಹಸುಗೂಸು ಬಸಮ್ಮ ಉಸಿರೆತ್ತಿ ಹಾಡಿದರ 
ಖುಷಿಯ ಪಡತಿದ್ದ ಶರಿಫನು | ಗುಂಡಮ್ಮ
ಹೆಸರಿಂದ ಕರಿದು ನಲಿತಿದ್ದ |

ಶಾಂತರಸ ಭಾಂಡಾರಿ ಕ್ರಾಂತಿ ಶರಣರ ವಚನ 
ಕಂತು ಕಂತಲ್ಲಿ ಬರೆದಂಗ | ಶರಿಫನ
ಕ್ರಾಂತಿ ಪದಗಳನು ಬರೆದಿಟ್ಟ |

ಜೋಡಿ ಸಂತರು ಎಲ್ಲ ಕೂಡಿಕುಂತಿರುವಾಗ 
ಹಾಡಿದ ಪದವ ಬಿಡಲಾರದ | ಬರೆದಿಟ್ಟು
ಮಾಡಿದುಪಕಾರ ಮುದುಕಪ್ಪ |

ಸಾಧು ಸಂತರ ಸಂಗ ವೇದ ಆಗಮ ಸಂಗ
ಬೋಧದಮೃತ ಸಂಗದಲಿ | ಹಾಡಿದ 
ನಾದ ಬ್ರಹ್ಮವನೆ ಹಿಡಿದಿಟ್ಟ |

ಕಲಿತ ನಾಕ ಅಕ್ಷರಕೆ ಬೆಲೆತಂದ ಮುದುಕಪ್ಪ
ಅಲೆಅಲೆಯಾಗಿ ತೇಲಾಡ್ದ | ಪದಗಳನು
ಒಲಿದು ಬರೆರಿಟ್ಟ ಹೊತ್ತಿಗೇಲಿ |

ಗಾಳಿಯಲಿ ತೇಲಾಡಿ ಧೂಳು ಸೇರುತಲಿದ್ದ 
ಮ್ಯಾಳದ ಪದವ ಬರೆದಿಟ್ಟು | ಮುತ್ತಿನ
ಕಾಲಿಂದ ಹಗೇವ ತುಂಬಿಸಿದ |

ಹಾಡುವ ಪದಗಳನು ಆಡಾಡ್ತ ಕಲಿತಂತ 
ಗಾಢ ಸಿರಿಕಂಠ ಚಲ್ವಿಕೆಯ | ಬಸಮ್ಮ
ತೀಡಿ ತಿದ್ದೀದ ಹಾಡ್ಗಾರ್ತಿ |

ಮ್ಯಾಳದ ಪದಗಳನು ಕೇಳಿದ ಕ್ಷಣದಲ್ಲೆ 
ತಾಳ ಹಾಕುತ್ತ ಹಾಡುವ | ಜಾಣ್ಮೆಯು 
ಕಾಳುಗಟ್ಟಿತ್ತು ಮನದಲ್ಲಿ |

ಎಳೆಕಂಠದೊಳಗಿಂದ ಕಳೆಗಟ್ಟಿ ಮೂಡಿದ 
ಬೆಳಕಿನ ಹೊಳೆಯ ಹರಿಸುವ | ಬಸಮ್ಮ
ಸೆಳೆದು ಬಿಡುತಿದ್ಳು ಮನಸನ್ನು |

ಹಸುಳೆಯ ಕಂಠದಲಿ ಹಸನಾದ ಪದಗಳು 
ದೆಸೆದೆಸೆಗೆ ನಾದ ಸಿಮ್ಮುವವು | ಕಂಪನ್ನು 
ದಶದಿಕ್ಕಿನಾಚೆ ಸೆಲ್ಲುವವು |

No comments: