Saturday, June 11, 2016

ಕನಸುಗಳೆ ಕರಗಿ ಹೋಗ್ಯಾವು

ಕನಸುಗಳೆ ಕರಗಿ ಹೋಗ್ಯಾವು 

ನಿಜನಿಷ್ಠೆ ಸೇವೆಯನು ಸಜೆಯೆಂದು ಭಾವಿಸದೆ 
ನಜರಿಟ್ಟು ಕೆಲಸ ಮಾಡಿದರು | ಕಷ್ಟಕ್ಕೆ 
ರಜೆ ಭಾಗ್ಯವಿಲ್ಲ ಬಂಧುವಿಗೆ |

ಆಳುವ ಅರಸರ ಆಳಾಗಿ ದುಡಿತಾರ 
ಕೀಳು ಮಟ್ಟದ ಬೈಗುಳಕೆ | ತುತ್ತಾಗಿ 
ಗೋಳಾಡತಾರ ದಿನನಿತ್ಯ | 

ಒತ್ತೆಯಾಳುಗಳಂತೆ ಒತ್ತಡಕೆ ಸಿಲುಕ್ಯಾರ
ಮುತ್ತು  ಮಾಣಿಕದ ಬೈಗುಳವ | ಸಹಿಸುತ್ತ
ತೊಟ್ಟು ಸೇವೆಯಲಿ ಬಳಲ್ಯಾರ |

ಕಷ್ಟದ ಕೆಲಸವನು ನಿಷ್ಠೆಯಲಿ ಮಾಡಿದರು
ಎಷ್ಟು ಮಾತ್ರಕ್ಕೆ ಬೆಲೆ ಕೊಡದೆ | ಬೈಗುಳದ 
ಗಷ್ಟ ಹಾಕುವರು ಹಗಲೆಲ್ಲ |

ಹೆಗ್ಗಣ ತಿಂಬವರ ಮಗ್ಗುಲದಲ್ಲಿದ್ದು 
ಬಗ್ಗಿ  ಸೇವೆಯನು ಮಾಡುವರು | ಪೊಲೀಸರು 
ನೆಗ್ಗಿ ಹೋಗುವರು ಹೊಡೆತಕ್ಕೆ |

ಅತ್ತ ಮೇಲಧಿಕಾರಿ ಇತ್ತ ಜನರಂಪಾಟ
ಎತ್ತ ವಾಲಿದರೂ ಸಂಕಷ್ಟ | ಬಂಧುವಿಗೆ
ಕಷ್ಟ ತಪ್ಪದು ಏನಾದ್ರೂ |

ಕಾನೂನು ಪಾಲಕರು ಓಣೋಣಿ ತಿರುಗಾಡಿ
ಬಾನಗಡಿ ಕಳ್ರ ಹಿಡಿದರೆ | ಉಳ್ಳವರು 
ಪ್ರಾಣದಂಜಿಕೆಯ ಹಾಕುವರು |

ಸಲ್ಲದ ಕೆಲಸಕ್ಕೂ ಒಲ್ಲೆನುವ ಮಾತಿಲ್ಲ 
ಕಲ್ಲು ಮನಸಿಂದ ಮಾಡಿದರು | ಸಂಶಯದ 
ಗುಲ್ಲು ಹಬ್ಬಿಸಿ ಕಾಡುವರು |

ಮ್ಯಾಲಿನ ಆದೇಶ ಪಾಲನೆ ಗೈವಾಗ 
ಕೀಲು  ಮುರಿಯುವರು ದೊಡ್ಡವರು | ಪೋಲೀಸರ 
ಮೂಲಕ್ಕೆ ಉಪ್ಪು ಕಟ್ಟುವರು |

ಸ್ವಂತದ ಬದುಕಿಗೆ ಚಿಂತೆಯ ಮಾಡದೆ 
ಸಂತೆ ಹರತಾಳ ಚಳುವಳಿ | ಕಾಲಕ್ಕೆ 
ನಿಂತು ಬಳಲುವರು ದಿನರಾತ್ರಿ |

ಮನೆ ಮಂದಿ ಮಕ್ಕಳ ಹಣೆಬರಹ ಕೇಳಾಕ 
ಚಣಹೊತ್ತು ಸಮಯ ಸಿಗಲಾರದು | ಬಂಧುವಿನ 
ಕನಸುಗಳೇ ಕರಗಿ ಹೋಗ್ಯಾವು |

ಅನುಮಾನ ಸಂಶಯದಿ ಗೊಣಗುವ ಮಾತುಗಳು 
ಕಣೆಯಂತೆ ಚುಚ್ಚಿ ಕುಲ್ಲುವವು | ಪೋಲೀಸರ
ಮನಸಿಗೆ ಘಾಸಿ ಮಾಡುವವು |

ಸಾಯಲು ಒಲ್ಲದೆ ಜೀವಿಸಲಾರದೆ 
ನೋವಲ್ಲಿ ಸಿಕ್ಕು ನರಳುವರು | ಪೋಲೀಸರ
ಕಾವರು ಯಾರಿಲ್ಲ ಲೋಕದಲಿ |

No comments: