Wednesday, May 27, 2020

ಕನ್ನಡ ಪರಂಪರೆ - ೧

ಕನ್ನಡ ಪರಂಪರೆ

ಕನ್ನಡ ಜನಪದ ಬೇರನು ಅಗೆಯಲು
ದೇಸಿಗರೊಂದಿಗೆ ಒಡನಾಡು !
ಚಂದದ ತ್ರಿಪದಿಯ ಸೊಗಡನು ಬಗೆಯಲು
ಬಾದಾಮಿ ಬಂಡೆಯ ಹಣೆನೋಡು !

ಶಾಸನ ಚರಿತೆಯ ಹಳಮೆಯ ತಿಳಿಯಲು
ನಾಡಿನ ಉದ್ದಕೂ ಅಲೆದಾಡು !
ನಾಡು ನುಡಿಗರ ಜಾಣ್ಮೆಯ ಸವಿಯಲು
ವಿಜಯನ ಮಾರ್ಗದ ಬಗೆನೋಡು !

ತಾಯ್ನುಡಿ ಪೆಂಪಿನ ಕಂಪಲಿ ಮುಳುಗಲು
ಪಂಪನ ಕಾವ್ಯದಿ ಈಜಾಡು !
ಸಬ್ದ ಭಾಂಡಾರದ ಮುದ್ರೆಯ ಒಡೆಯಲು
ಗದಾಯುದ್ಧದಿ ಬಡಿದಾಡು !

ಸ್ಥಾವರ ಸಳಿದು ಜಂಗಮವಾಗಲು
ಶರಣರ ವಚನದಿ ಓಲಾಡು !
ರಗಳೆ ಷಟ್ಪದಿ ಬೆಡಗಲಿ ಮೀಯಲು
ರಾಘವ ಹರಿಹರೊಡಗೂಡು !

ಕುಮಾರವ್ಯಾಸನ ಪದಪದ ಸವಿಯಲು
ಭಾರತ ಕತೆಯಲಿ ನಲಿದಾಡು !
ಬಯಲಿಗ ಅಲ್ಲಮ ಬೆಡಗನು ಬಿಡಿಸಲು
ಚಾಮರಸನಿಗೆ ತಲೆಬಾಗು !

ರತ್ನಾಕರನ ಶಿಖರವನೇರಲು
ಭರತೇಶನಲಿ ಒಂದಾಗು !
ಜೈಮಿನಿ ಕಥನದ ನಾದದಿ ಮುಳುಗಲು
ಲಕುಮೀಶನಿಗೆ ಶರಣಾಗು !

ಕನಕಪುರಂದರ ಭಕುತಿಯ ಸವಿಯಲು
ಕೀರ್ತನ ಗಾನಕೆ ದನಿಗೂಡು !
ಮಾತು ಮಾತಿನ ಮರ್ಮವನರಿಯಲು
ಸರ್ಜಜ್ಞ ವಚನವನೊಡಗೂಡು !

ಅನುಭಾವ್ದ ಹಾಡಲಿ ಲೀನವಾಗಲು
ಮಹಾಂತ ಗುಡ್ಡದಿ ಅಲೆದಾಡು !
ತತ್ವಪದದ ನಾದದಿ ಮುಳುಗಲು
ಶರೀಫಗಿರಿಯೆಡೆ ಮುಖಮಾಡು !

ಆಟಬಯಲಾಟದ ಸೊಗಸಲಿ ಇಳಿಯಲು
ಜಾತ್ರೆಜಾತ್ರೆಗೆ ಅಲೆದಾಡು !
ಯಕ್ಷಗಾನದ ಮದ್ದಲೆ ಆಲಿಸಿ
ಮಲೆಘಟ್ಟದಲಿ ತಿರುಗಾಡು !

ಗಾರುಡಿ ವರಕವಿ ದತ್ತನ ಕೂಡಲು
ಸಾಧನಕೇರಿಯ ಸುತ್ತಾಡು !
ವಿಚಾರ ಕ್ರಾಂತಿಯ ಯುಗಕವಿ ಬೆರೆಯಲು
ದರ್ಶಿಸು ತಪ್ಪದೆ ಮಲೆನಾಡು !

ಬೆಟ್ಟದ ಜೀವ ಮಣ್ಣಿಗೆ ಮರಳಲು
ಕಾರಂತರಕೈ ಹಿಡಿದಾಡು !
ಮಾಯಾಲೋಕದ ವಿಸ್ಮಯಕಿಳಿಯಲು
ನಿರುತ್ತರದಲಿ ಓಡಾಡು !

ಚಂದ್ರಗೌಡ ಕುಲಕರ್ಣಿ
೨೭-೦೫-೨೦೨೦



No comments: