Wednesday, May 27, 2020

ಅಕ್ಷರ ಮೇರು - ೨

ಅಕ್ಷರ ಮೇರು

ಬಾವನ್ ಬೆಟ್ಟದ ಹಣೆ ಸಿಂಗರಿಸಿದ
ಶಿಲ್ಪಿ ಅಕ್ಷರ ಮೇರು !
ಪುಷ್ಕರ ಚಕ್ರದ ಉಬ್ಬು ಶಿಲ್ಪವು
ಕಾಲ ಅವಧಿಯ ತೇರು !

ಕಲ್ಲು ಬರಹದಿ ಮೂಡಿ ನಿಂತಿವೆ
ಸುಂದರ ಹತ್ತು ಸಾಲು !
ಕನ್ನಡ ನಾಡಿನ ಕಪ್ಪೆ ಅರಭಟ
ವೀರನ ವರ್ಣನೆ ಪಾಲು !

ನಾಲಿಗೆ ತುದಿಯಲಿ ನಲಿದು ಆಡುವ
ಬೆಡಗಿನ ತ್ರಿಪದಿ ಗಂಗೆ !
ಅಗಸ್ತ್ಯ ತೀರ್ಥದ ತೆರೆಗಳಲುಕ್ಕಿದೆ
ಅಮೃತ ಜಲದ ತುಂಗೆ !

ದಾಮೋದರನು ಶಿಲ್ಪಿಗನಲ್ಲದೆ
ಕವಿ ಲಿಪಿಕಾರನು ಹೌದು !
ಮೆಚ್ಚುವರೆಲ್ಲರು ತ್ರಿಪದಿ ಒಡಲಿನ
ಅದ್ಭುತ ಕಲ್ಪನೆ ಮೇಯ್ದು !

ಬೆಸಗೊಂಡಿಹವು ಭಿನ್ನವಿಲ್ಲದೆ
ಮಾರ್ಗ ದೇಸಿಗಳೆರಡು !
ಅಮರವಾದ ಶಾಸನ ಕಂಡು
ಹೆಮ್ಮೆ ಪಡುವುದು ನಾಡು !

ಚಂದ್ರಗೌಡ ಕುಲಕರ್ಣಿ
೨೪-೦೫-೨೦೨೦

No comments: