Monday, January 29, 2018



ಕಾಮನಬಿಲ್ಲು

ಬಾನಲಿ ಮೂಡಿದ ಕಾಮನಬಿಲ್ಲು
ಮಳೆಹನಿಯಲ್ಲಿ ನೆಂದು!
ಗಿಡಮರಬಳ್ಳಿ ಹೂವುಗಳಲ್ಲಿ
ಅರಳಿ ನಿಂತಿವೆ ಇಂದು !

ಸಿಡಿಲಿಗೆ ಅದುರಿದ ಕಾಮನಬಿಲ್ಲು
ನವಿಲಿನ ಗರಿಯಲಿ ಬೆರೆತು !
ಸಾವಿರ ಕಣ್ಣಲಿ ಹೊಳೆಯುತ್ತಿರುವುದು
ಆಗಸ ಲೋಕವ ಮರೆತು !

ಬಿಸಿಲಿಗೆ ಕರಗಿದ ಕಾಮನಬಿಲ್ಲು
ಸೇರಿ ಪಾತರಗಿತ್ತಿ !
ಹೂಹೂ ಬನದಲಿ ಅಲೆಯುತ್ತಿರುವುದು
ರೇಶಿಮೆ ಹೊಳಪಿನ ಜ್ಯೋತಿ !

ಚಳಿಯಲಿ ಚದುರಿದ ಕಾಮನಬಿಲ್ಲು
ಮಕ್ಕಳ ಕನಸನು ಸೇರಿ
ನೆಲಮುಗಿಲುದ್ದಕು ವಿಸ್ಮಯ ಸೇತುವೆ
ಕಟ್ಟಿದೆ ಭಾರಿಭಾರಿ !






















ಮಕರ ಸಂಕ್ರಮಣ

ಹಸಿರು ಪೈರಿನ ತೆನೆಯು ತೂಗಿತು
ನೆಲದ ಬಂಡನು ಸವಿಯುತ !
ಪ್ರಾಣಿ ಪಕ್ಷಿಗಳುಂಡು ತಣಿದವು
ತಾಯಿ ಪ್ರೀತಿಯ ನೆನೆಯುತ !

ಗಾಢ ಚಳಿಯದು ಕರಗಿ ಸರಿಯಿತು
ಸೂಸು ಬಿಸಿಲನು ಚಲ್ಲುತ !
ರವಿಯ ಕುಡಿಗಳು ಚಾಚಿ ಮೆರೆದವು
ಬಿಸಲ ಬೇಗೆಯ ಉಸುರುತ !

ಬರಡು ಭಾವದಿ ಚಿಮ್ಮಿ ಚೇತನ
ಕಾವ್ಯ ಹೊನಲನು ಹರಿಸಿತು !
ಕವಿತೆ ಸೊಗಸದು ಲಯದಿ ಹೊಮ್ಮುತ
ರುಚಿಯ ಹಿರಿಮೆಯ ಮೆರೆಸಿತು !

ಹಾಡು ಹಕ್ಕಿಯ ಮಧುರ ಗಾನವು
ಬರೆದು ಬಿಟ್ಟಿತು ಮುನ್ನುಡಿ !
ಎಳ್ಳು ಬೆಲ್ಲದ ಸವಿಯು ಹರಡಿತು
ತಾಯಿ ಒಲುಮೆಯ ಜೇನ್ನುಡಿ !

ಹಳತು ಹೊಸತನು ಬೆಸೆವ ಹಬ್ಬವು
ಖುಷಿಯ ತಂದಿತು ನಾಡಿಗೆ !
ಮಕರ ಸಂಕ್ರಮಣೊಲವು ಹಬ್ಬಿತು
ಮನುಜ ಹೃದಯದ ಬೀಡಿಗೆ !











ಚುಕ್ಕೆ ಗೆಳೆತನ !

ಚುಕ್ಕೆಗಳೆಲ್ಲ ನೆಲಕೆ ಇಳಿದು
ಗೆಳೆಯರಾಗಿ ಬಿಟ್ರೆ !
ಕತ್ತಲೆ ಹೆದರಿಕೆ ಇಲ್ಲವೆ ಇಲ್ಲ
ಕರೆಂಟ ಕೈಯ ಕೊಟ್ರೆ !

ನಮ್ಮ ಜೊತೆಯಲಿ ದಿನವೂ ಬರಲಿ
ಶಾಲೆಯ ಯುನಿಫಾರ್ಮ ತೊಟ್ಟು !
ಮನೆಮನೆಯಲ್ಲಿ ಉಳಿಸ್ಕೊತೀವಿ
ಪ್ರೀತಿ ಗೌರವ ಕೊಟ್ಟು !

ಬೆನ್ನಿಗೆ ಭಾರದ ಚೀಲವ ಹೊತ್ತು
ಅರಿಯಲಿ ನಮ್ಮ ಕಷ್ಟ !
ಕೂಡಿ ಆಡುತ ತೊರೆಯಲಿ ತಮ್ಮ
ತಾರಾಲೋಕದ ಪಟ್ಟ !

ಶಾಲೆ ಮಕ್ಕಳ ಸಾಲಲಿ ನಿಂತು
ಮಾಡಲಿ ಮಧ್ಯಾಹ್ನ ಊಟ !
ಒರಟು ಕಲ್ಲಿನ ನೆಲದಲಿ ಕೂತು
ಕೇಳಿ ಮಾಸ್ತರ ಪಾಠ !

ವಾರ್ಷಿಕ ಪರೀಕ್ಷೆಯಲ್ಲಿ ಕೂತು
ಗಳಿಸಲಿ ಹೆಚ್ಚಿನ ಅಂಕ !
ಸ್ಪರ್ಧೆಯಿಂದ ಕಸಿದುಕೊಳ್ಳಲಿ
ಗೆಳೆಯರ ಮೊದಲನೆ ರ್‍ಯಾಂಕ !












ಏಳ್ಗೆ ಮಂತ್ರ !

ಅಂಜಿ ನಿಂತ್ರೆ ನೌಕೆ ದಡಕೆ
ಸೇರಲಾರದು ಎಂದಿಗು !
ಯತ್ನ ಮಾಡುತಿರುವ ವ್ಯಕ್ತಿ
ಸೋತುದಿಲ್ಲ ಇಂದಿಗು !

ಕಚ್ಚಿ ಕಾಳು ಹಿಡಿದ ಇರುವೆ
ಗೋಡೆ ಏರುವಾಗಲು !
ನೂರು ಬಾರಿ ಜಾರಿ ಬಿದ್ರು
ಹಿಂದೆ ಸರಿಯಲಾರದು !

ಸಾಗರಾಳದಲ್ಲಿ ಮುಳುಗಿ
ಏಳುತಿರುವ ಈಜುಗ !
ಮುತ್ತು ರತ್ನ ಹೆಕ್ಕಿ ತಂದು
ಪಡುವ ತಾನೆ ಸೋಜಿಗ !

ಹತ್ತು ನೂರು ಬಾರಿ ಬಂದ್ರು
ಹೆದರಬೇಡ ಸೋಲಿಗೆ !
ಕೊರತೆ ಅರಿತು ನಿದ್ರೆ ತೊರೆದು
ನುಗ್ಗು ಜಯದ ದಾರಿಗೆ !

ಮಾಡದೇನು ಸುಮ್ಮನಿದ್ರೆ
ಸಿಗದು ಜಯದ ತಂತ್ರವು !
ಸತತ ಯತ್ನ ಮಾಡಬೇಕು
ಇದುವೆ ಏಳ್ಗೆ ಮಂತ್ರವು !

No comments: