Friday, May 27, 2016

ಮೊತ್ತ ಮೊದಲಿಗೆ ವಂದಿಸುವೆ



ಮೊತ್ತ ಮೊದಲಿಗೆ ವಂದಿಸುವೆ 

ಒಂದೆರಡು ಪದ್ಯಗಳ ಚಂದಾಗಿ ನುಡಿವಾಗ 
ಕುಂದು ಬರದಂತೆ ಮುನ್ನಡೆಸು | ಗಣಪತಿಯೆ 
ವಂದಿಸುವೆ ನಿನಗೆ ಮೊದಲಿಗೆ |

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಗೆ ಒಲಿದು 
ಮಾಟದ ಸಾರಿ ತೋರಿಸಿದ | ಬೆನಕನಿಗೆ 
ಕೋಟಿ ವಂದನೆಯ ಸಲ್ಲಿಸುವೆ |

ಆದಿ ಮೂರುತಿ ದೇವ ಮೇದಿನಿಯಲ್ಲುದಯಿಸಿ
ಬೋಧಿಸಿದ ಮಣ್ಣ ಕಾಯಕವ | ಗಣಪನಿಗೆ 
ಪಾದಕ್ಕೆ ಹಣೆಯ ಹಚ್ಚುವೆ |

ನಾಲಿಗೆಯ ತುದಿ ಮೇಲೆ ಓಲಾಡು ಅಧಿದೇವಿ 
ಜೋಲಿ ಹೊಡಿದಂಗ ಕಾಪಾಡು | ಸರಸತಿಯೆ
ಬಾಲ ಕವಿಗೀಗ ವರನೀಡು |

ಭಾವದವೊಳಹೊಕ್ಕು ಜೀವಜೀವವ ಮಿಡಿಸಿ
ಹೂವಿನ ನುಡಿಯಲ್ಲಡಗಿದ | ಸರಸತಿಗೆ
ಸಾವಿರದ ನಮನ ಸಲ್ಲಿಸುವೆ |

ಕಡದಳ್ಳಿ  ಊರೊಡೆಯ ದೃಢವಾಗಿ ನೆಲೆನಿಂತು 
ದಡ ಹಾಯ್ಸು ಕಾವ್ಯ ಕಥನದಲಿ | ಕಲ್ಮೇಶ 
ಒಡಲಲ್ಲಿ ಜೀವ ಹಾರಿಸುತ್ತ |

ನಾಡೊಡೆಯ ಖಾಸಗತ ಜೋಡಾಗಿ ನೆಲೆನಿಂತು
ತೀಡು ಬರಹದ ದೋಷಗಳ | ಕೈಹಿಡಿದು 
ಹಾಡು ಹಾಡಿಸೊ ರಸದುಂಬಿ |

ಹೊತ್ತಿನ ಅರಸನಿಗೆ ಮುತ್ತು ಚಂದ್ರಾಮನಿಗೆ 
ತುತ್ತಿನ  ಚೀಲ ತುಂಬಿಸುವ | ಭೂತಾಯ್ಗೆ 
ಮೊತ್ತ  ಮೊದಲಿಗೆ ವಂದಿಸುವೆ |

ಹರಿಯುವ ಹಳ್ಳಕ್ಕೆ ತೊರೆಯ ಝರಿಕೊಳ್ಳಕ್ಕೆ
ನೆರಳಿತ್ತು ಕಾವ ಗಿಡಮರದ  | ಹೊಳ್ಳಕ್ಕೆ 
ವರವ ಕೇಳುವೆನು ಕೈಮುಗಿದು |

ಘನವಾದ ಗಿರಿಗಳನು ವನದೇವಿ ಮರಗಳನು 
ತೆನೆ ತುಂಬೊ ಗಾಳಿ ಮಳೆಗಳನು | ಹೊಳೆಗಳನು
ನೆನೆಯುವೆನು ಕಾವ್ಯ ಕಟ್ಟುತ್ತ |

ಹುದುಗಿದ ಭಾವವನು ಪದಗಳಲಿ ಸೆರೆ ಹಿಡಿದು 
ಹದಮಾಡಿ ಕಾವ್ಯ ಕಟ್ಟುವ | ತೇಜಕ್ಕೆ 
ಮೊದಲಿಗೆ ನಮನ ಸಲ್ಲಿಸುವೆ |

ಮನದಾಳದಾಡಿಗೆ ಕೆನೆಹಾಲ ರುಚಿನೀಡಿ
ತಣಿದುಂಬೊ ರಸಿಕ ಭಾವದ | ದೈವಕ್ಕೆ 
ಹಣೆಮಣಿದು ಶರಣ ಮಾಡುವೆನು |

ದೇಸಿಯ ನುಡಿಯಲ್ಲಿ ಮಾಸದ ಅನುಭಾವದ 
ಬೇಸಾಯ ಮಾಡಿ ಕೊಟ್ಟಂತ | ಶರಿಫನಿಗೆ 
ಸಾಸಿರ ಬಾರಿ ಬಾಗುವೆನು |

No comments: