Sunday, May 15, 2016

ಕವಿತೆಗಳು

ಕವಿತೆ ಗುಟ್ಟು

ಹೀಗೆ ಎಂದು ಹೇಳಲು ಬಾರದು 

ಚಂದದ ಕವಿತೆ ಹುಟ್ಟು |
ಯಾರು ಏನೇ ಕೇಳಿದರೂನು 
ಬಿಟ್ಟು ಕೊಡದು ಗುಟ್ಟು |

ಅಕ್ಷರ  ಶಬ್ದ ಲಯದ ಒಳಗಡೆ

ಅಡಗಿಕೊಂಡು ಕೂತು |
ಹೂವಿನ ಹಾಗೆ ತನ್ನಿಂದ್ ತಾನೇ 
ಪಕಳೆ ಬಿರಿವುದು ಹೂತು |

ಸ್ವಾತಿ ಮಳೆಹನಿ ಚಿಪ್ಪಲ್ಲಡಗಿ 

ಆಗೋ ಹಾಗೆ ಮುತ್ತು |
ಭಾವದಲರಳಿ ಉಣಿಸಿಬಿಡುವುದು
ಪಕ್ಕಾ ಸವಿರುಚಿ ತುತ್ತು |

ನೋವು ಬವಣೆ ಏನೇ ಇರಲಿ 

ಅಳಿಸಿಬಿಡುವುದು ತಾಪ |
ಎಂಥಾ ಕಟಕ ಹೃದಯದಲ್ಲೂ 
ಹಚ್ಚಿಬಿದುವುದು ದೀಪ |


ಕನ್ನಡ ನುಡಿಹರಳು 


ಸವಿನುಡಿ ಕನ್ನಡ ಬೆಡಗಿನ ಸಾಗರ
ಪದಗಳ ರತ್ನದ ಹರಳು  !
ಮನಸು ಮನಸನು ಬೆಸೆದು ಕಟ್ಟಿದ
ತಾಯಿಯ ಹೊಕ್ಕಳ.  ಕರಳು!
 .
ಜೀವಜೀವದ ಲಯದಲಿ ಹಬ್ಬಿದ
ಅಮೃತ ಬಳ್ಳಿಯ ಅರಳು  !
ಭಾವದ ಬಿತ್ತರ ಛೇದಿಸಿ ಸಾಗುವ
ಹರಿತ ಅಂಚಿನ ಸರಳು  !

ಸ್ವರಗಳ ಒಡಲಲಿ ಹರಿಯುವ ತೇಜದ
ಬೆಳ್ಳಂಬೆಳಕಿನ ನೆರಳು  !
ಉಸಿರು ಉಸಿರಲಿ ಕಲರವ ಸೂಸುವ
ಸಾರ್ಥಕ ಸುಮಧುರ ಕೊರಳು   !

ಗಣಕ ಮೊಬೈಲಲಿ   ಮೆರೆದಾಡುವುದು
ಆಡಿಸುತಿದ್ದರೆ ಬೆರಳು  !
ಹೊಸತನ ತಂದಿದೆ   ಕನ್ನಡ.  ಮಾತಿಗೆ
ತಂತ್ರಜ್ಞಾನದ ಹೊರಳು   !


ಬರಗಾಲ ಬೇಸಿಗೆ 

ಬರಗಾಲ ಬೇಸಿಗೆ ಧುಮುಗುಡತೈತೊ
ರೈತ ಬಡವರನು
ಕಾಡುತಲೈತೊ
ಹಸುಗೂಸು ಕಂದಮ್ಮ
ಬಿಸಿಲಿನ ತಾಪಕ್ಕೆ
ಉಸಿರಾಡೊ  ಕಸುವಿಲ್ದೆ   ಸಾಯುತಲೈತೊ

ಹಸಗೆಟ್ಟ ಹುಸಿಬಳಗ
ತುಸುವಾದರು ಕರುಣಿಲ್ದೆ
ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ
ಹನಿಹನಿ  ನೀರಿಗೂ
ದನಕರು ಬಳಿದರೂ
ಧಣಿಬಳಗ ಮೂಗು ಮುರಿಯುತಲೈತೊ

ಬತ್ತಿದರು ಕಟ್ಟೆಗಳು
ಗುತ್ತಿಗೆ ಕಂಪನಿಗೆ
ತುರ್ತಾಗಿ ನೀರು ಹರಿಯುತಲೈತೊ
ಸರಕಾರ ಜನತೆಯ
ದರಕಾರ ಮಾಡದೆ
ಹರಮುರುಕು ಭಾಗ್ಯ ಹಂಚುತಲೈತೊ

ಪುಂಡಪೋಕರಿ ಬಳಗ
ಉಂಡು ತೇಗುತ ಹೊಲಸು
ಕಂಡಲ್ಲಿ ನಾಲಿಗೆ ಚಾಚುತಲೈತೊ
ಕಾರಭಾರಿ ಕಲಿಬಳಗ
ಹಾರತುರಾಯಿ ಹಾಕಿ
ತೋರಿಕೆ ನಾಟಕ. ಆಡುತಲೈತೊ

ನೀರಿನ ಸಂಕಟಕೆ
ದಾರಿಯ ತೋರದೆ
ಮೀರಿದ ಲಂಚ ಪಡೆಯುತಲೈತೊ
ಬಿಸಿಲುಬರ ರಾಜಕೀಯ
ಹಸಿಹಸಿ ಪದಗಳಲಿ
ಉಸಿರು ಉಸಿರಾಗಿ ಹೊಮ್ಮುತಲೈತೊ

ಕಡದಳ್ಳಿ ಕಲ್ಮೇಶ
ಬೆಡಗಿನ ಮಾತಲ್ಲಿ
ಎಡಬಿಡದೆ ಜೀವ ತುಂಬುತಲೈತೊ


 


 ಮೊದಲ  


ಗಡ್ಡೆ ಗೆಣಸು ಹಣ್ಣು ಹಂಪಲ 

ತಿನ್ನುತಲಿದ್ದ ಮನುಜ  |
ಗಾಳಿ ಬಿಸಿಲು ಮಳೆ ಚಳಿ ಎನ್ನದೆ 
ಬಾಳುತಲಿದ್ದ ಸಹಜ |

ಗುಡ್ಡ ಗವಿಯಲಿ ವಾಸ ಮಾಡುತ 

ಕಳೆಯುತಲಿದ್ದ ದಿನವ |
ಗಡ್ಡ ಮೀಸೆ ಬಿಟ್ಟುಕೊಂಡು 
ಅಲೆಯುತಲಿದ್ದ ವನವ |


ಹಿಂಗಾಲಷ್ಟೆ ಬಳಸಿ ನಡೆದು 

ಮಾಡಿದ ದೊಡ್ಡ ಕ್ರಾಂತಿ !
ಮುಂಗಾಲನ್ನು ಕೈಮಾಡಿಕೊಂಡು 
ಕಳಚಿಬಿಟ್ಟ ಭ್ರಾಂತಿ !


ಕಾಡು ಪ್ರಾಣಿ ಬೆದರಿ ಬಿಟ್ವು 

ನೆಟ್ಟಗೆ ನಿಂತದ್ದ ನೋಡಿ |
ಎಲ್ಲೇ ಮನುಜ ಕಂಡರು ಸಾಕು 
ಹೋಗುತಲಿದ್ದವು ಓಡಿ |

ಬೀಸೋ ಗಾಳಿ ಘರ್ಷಣೆಯಲ್ಲಿ 

ಹೊತ್ತಿ ಉರಿಯಿತು ಬೆಂಕಿ |
ನಂದಿಸಲೆಂದು ಎಸೆದು ಬಿಟ್ಟ 
ಬೇಟೆಯಾಡಿದ ಜಿಂಕಿ |

ಬೆಂದ ಮಾಂಸದ ರುಚಿಯ ಸವಿದು 

ತೇಗಿ ಸಂತಸ ಪಟ್ಟ |
ಅಗಿದು ತಂದ ಗಡ್ಡೆ ಗೆಣಸನು 
ತಿನ್ಲಿಕ್ಕತ್ತಿದ ಸುಟ್ಟ |

ಚಕಮಕಿ ಕಲ್ಲು ದೂದಿ ಬಳಸಿ

ಬೆಂಕಿ ಹೊತ್ತಿಸಿ ಬಿಟ್ಟ |
ಅಂದಿನಿಂದಲೆ ಹೊಸ ಜೀವನದ 
ಮೊದಲ ಹೆಜ್ಜೆ ಇಟ್ಟ |





ಮಳೆ ಸುರಿಸೋ ಮೋಡಣ್ಣ 


ಬಿಸಿಲಿನ ತಾಪಕೆ 

ಬೆಂದೋಗಿರುವೆ
ಮಳೆಯನು ಸುರಿಸೋ ಮೋಡಣ್ಣ |
ಧಗ  ಧಗ ಉರಿಯುತ 
ಬೆಂಕಿ ಸುರಿಯುವ 
ಸೂರ್ಯನ ಉಪಟಳ ತಡೆಯಣ್ಣ |

ಭೂಮಿ ತಾಯಿಯ 

ಹೊಟ್ಟೆ ಬಿರಿದು
ಬಾಯಿ ತೆರೆದಿದೆ ನೋಡಣ್ಣ |
ಹನಿ ಹನಿ ನೀರಿಗೆ 
ಕಾದು ಕುಳಿತ 
ಲೋಕದ ಮೊರೆಯನು ಕೇಳಣ್ಣ |

ಹಸಿರಿನ ಗಿಡಮರ 

ದುಸಿರು ಕಟ್ಟಿ 
ತೇಕುತಲಿರುವವು ಏಕಣ್ಣ |
ಬೆದರಿದ ಗಾಳಿ
ಒರೆಸಿಕೊಳುತಿದೆ
ಸುರಿಯುತಲಿರುವ ಬೆವರನ್ನ |

ಪ್ರಾಣಿ ಪಕ್ಷಿ 

ಬಳಲುತಲಿರುವವು
ಕೇಳು ಅವುಗಳ ಗೋಳನ್ನ |
ನೀ ದಯ ತೋರದೆ 
ಹೋದರೆ ಈಗ 
ಉಳಿಸುವರಾರು ಬಾಳನ್ನ |

ಕಳ್ಳೆ ಮಳ್ಳೆ

ಕಪಾಟ ಮಳ್ಳೆ
ಆಡುವ ಆಸೆ ನನಗಣ್ಣ |
ರಪ ರಪ ಸುರಿದು
ನಾಡಿನ ದಾಹವ 
ತಣಿಸಲು ಬೇಕು ನೀನಣ್ಣ|

ಚಂದ್ರಗೌಡ ಕುಲಕರ್ಣಿ 


ವಿದ್ಯಾರ್ಥಿನ ವಿಷಯ ನುಂಗಿತ್ತ 

ನೋಡವ್ವ ತಂಗಿ |
ವಿದ್ಯಾರ್ಥಿನ ವಿಷಯ ನುಂಗಿತ್ತ | 

ಅಕ್ಷರಗಳು ಪದಗಳ ನುಂಗಿ

ಪದಗಳನೆಲ್ಲ ವಾಕ್ಯ ನುಂಗಿ
ನುಡಿಯನು ಅರಿತ  ಜಾಣರನೆಲ್ಲ 
ಕನ್ನಡ ನುಂಗಿತ್ತ ತಂಗಿ|

ಅಂಕಿಗಳನು ಸಂಖ್ಯೆ  ನುಂಗಿ

ಸಂಖ್ಯೆಗಳನು ಮಗ್ಗಿ ನುಂಗಿ
ಬಿಡಿಸಲು ಕುಳಿತ ಜಾಣರನೆಲ್ಲ
ಗಣಿತ ನುಂಗಿತ್ತ |

ಅಂಕು ಡೊಂಕು ರೇಖೆ ನುಂಗಿ

ಸರಳ ರೇಖೆ ಬಳುಕು ನುಂಗಿ
ಚಿತ್ರಿಸ ಹೊರಟ ಜಾಣರನೆಲ್ಲ
ಕಲೆಯೇ ನುಂಗಿತ್ತ ತಂಗಿ |

ಕೆರೆ ನದಿಗಳನು ಗೆರೆಗಳು ನುಂಗಿ

ಗೆರೆಗಳನೆಲ್ಲ ನಕ್ಷೆ ನುಂಗಿ
ಓದಲು ಕುಳಿತ ಜಾಣರನೆಲ್ಲ
ಭೂಗೋಳ ನುಂಗಿತ್ತ ತಂಗಿ |

ಚಂದಿರನನ್ನು ಸೂರ್ಯ ನುಂಗಿ

ಸೂರ್ಯನನ್ನು ಭೂಮಿ ನುಂಗಿ
ಗ್ರಹಣ ತಿಳಿಯೋ ಜಾಣರನೆಲ್ಲ
ವಿಜ್ಞಾನ ನುಂಗಿತ  ತಂಗಿ |

No comments: