Monday, May 16, 2016

ಶಬ್ದ ಯೋಗ |




ಶಬ್ದ ಯೋಗ |

ಮಣ್ಣು ನೀರು ಸಂಗದಲ್ಲಿ 

ಪಲ್ಲವಿಸಿವುದು ಬೀಜ |
ಪದದೆದೆ ಸೀಳಿ ಹೊರ ಸೂಸುವುದು 
ಬೆಡಗಿನ ಕತೆಯ ತೇಜ |

ಬಣ್ಣ ಕುಂಚ ಲಲಿತ ಗೆರೆಯಲಿ 

ಚಿತ್ರ ಮೂಡುವಂತೆ | 
ಉಕ್ಕಿ ಹರಿವ ಹೊನಲಿನಲ್ಲಿ 
ಅಕ್ಷರ ಪದಗಳ ಸಂತೆ |

ಶಿಲ್ಪಿ ಚಳಕದ ಉಳಿ ಕೊಡತಿಗೆ

ಕರಗಿದ ಹಾಗೆ ಕಲ್ಲು |
ಮೂರ್ತ ರೂಪ ತಾಳ್ವುದು ಕವಿತೆ 
ಮಾಡಲಾರದೆ ಗುಲ್ಲು |

ಸರಿಗಮ ಸ್ವರದ ಮಧುರ ನಾದದಿ 

ಮೂಡಿ ಬರುವುದು ರಾಗ |
ಸಾವಿರ ಸಾವಿರ ಅರ್ಥದಲೆಗಳ 
ಮೌನ ಶಬ್ದ ಯೋಗ |

ಎದೆ ಎದೆ ಮಿಡಿಯುವ  ಭಾವ ಲಹರಿಗೆ 

ಬರದು ಎಂದು ಸೋಲು |
ಎಲ್ಲರ ಮನಸನು ಗೆಲ್ಲುವ ಸೊಲ್ಲಿಗೆ 
ಇಲ್ಲ ಯಾವುದು ಮೇಲು |

No comments: