Wednesday, May 25, 2016

ಶರಿಫ








ಶರಣು ಶರಣಾರ್ಥಿ 


ಗಣಪ ದೇವಗೆ ಮೊದಲು ವಂದಿಸಿ 

ಮಣಿದು ಸರಸತಿ ದಿವ್ಯವಾಣಿಗೆ 
ಹೆಣೆವೆ ಪದ್ಯವ ಶರಿಫ ಯೋಗಿಯೆ ಶರಣು ಶರಣಾರ್ಥಿ !
ಮನದ ಮೂಲೆಗೆ ಹಬ್ಬಿ ಅನುದಿನ 
ನೆನೆದು ಭಾವದಿ ಒಲಿದು ಮೂಡುವ 
ಘನತೆ ಪಡದಾ ಸುಧೆಯ ಸಾರವೆ  ಶರಣು ಶರಣಾರ್ಥಿ !

ನುಡಿವ ನಾಲಗೆಯಲ್ಲಿ ಸರಸತಿ 

ಒಡನೆ ನಲಿಯುತ ಬಂದು ನೆಲಸಲಿ 
ನುಡಿದ ಭಾವಕೆ ಜೀವ ತುಂಬಲಿ ಶರಣು ಶರಣಾರ್ಥಿ ।
ಬೆಡಗು ಮಾತನು ಹಾಡು ಹಾಡಲಿ
ಬಿಡದೆ ಸೇರಿಸಿ ಪದವ ಕಟ್ಟಿದ 
ಪೊಡವಿ ಶಿಶುನಾಳ ಯೋಗಿಗೆ ಶರಣು ಶರಣಾರ್ಥಿ ।

ವಾಸ ಶಿಶುವಿನಾಳ ಪುರದಲಿ 

ಈಶ ಬಸವನ ಹೆಸರಿನಿಂದಲಿ 
ರಾಸಿ ಪದಗಳ ಬರೆದ ಶರಿಫಗೆ ಶರಣು ಶರಣಾರ್ಥಿ ।
ಖಾಸ  ಶರಣರು ಹಜರತಾಜ್ಮಾ 
ದೇಶ ಹುಲಗುರ ಖಾದರೊಲವನು 
ಜೈಸಿ ಹುಟ್ಟಿದ ಬಾಲ ಶರಿಫಗೆ ಶರಣು ಶರಣಾರ್ಥಿ ।

ಕೂಲಿಮಠದಾ ಸಿದ್ಧರಾಮನ 

ಸಾಲಿಯಲ್ಲಿಯೇ ವಿದ್ಯೆ ಕಲಿಯುತ 
ಬೇಲಿದಾಟಿದ ಶರಿಫ ಯೋಗಿಗೆ ಶರಣು ಶರಣಾರ್ಥಿ ।
ಮೇಲು ನೋಟವ ಹಿಂದಕಿಕ್ಕಿವಿ 
ಶಾಲ ತತ್ವವನರಿತು ನಡೆದಾ 
ಕಾಲ ಜ್ಞಾನಿಗೆ ಯೋಗಿ ಶರಿಫಗೆ ಶರಣು ಶರಣಾರ್ಥಿ ।

ಪಾರಿವಾಳದ ಆಟನೋಡುತ 

ಸಾರ ಬದುಕಿನ ಬೇತನರಿಯುತ 
ಸಾರಿ ಹಾಡಿದ ಪದದ ಅಬುಧಿಗೆ ಶರಣು ಶರಣಾರ್ಥಿ |
ಕೇರಿ ಜೊಳ್ಳನು ಹಸನು ಮಾಡುತ
ಮೀರಿ ಜಗದಲಿ ಗಸ್ತು ತಿರುಗಿದ 
ದಾರಿ ಬೆಳಕಿನ ಶರಿಫ ಜ್ಯೋತಿಗೆ ಶರಣು ಶರಣಾರ್ಥಿ |

ಕಳಸ ಗುರುಗೋವಿಂದ ಶಿಷ್ಯನು 

ಎಳವೆಯಲ್ಲಿಯೇ ಭಕ್ತಿಗೊಲಿಯುತ 
ಬೆಳೆದ ನಿಷ್ಠೆಯ ವಿಮಲ ಯೋಗಿಗೆ ಶರಣು ಶರಣಾರ್ಥಿ |
ಇಳೆಯ ಬದುಕಿನ ಗುಟ್ಟನರಿಯುತ
ಸೆಳೆವ ತತ್ವದ ಬೆನ್ನು ಹತ್ತುತ 
ಕಳೆದ ಕರ್ಮವ ಗೆಲಿದ ಯೋಗಿಗೆ ಶರಣು ಶರಣಾರ್ಥಿ |

ನಾಗಲಿಂಗನ ಸಂಗ ಮಾಡುತ

ಭೋಗ ಜೀವನ ತೊರೆದು ನಲಿಯುತ 
ಯೋಗಿಯಾದಾ ಸಂತ ಮಾಂತಗೆ ಶರಣು ಶರಣಾರ್ಥಿ |
ಹೋಗುವಂತಹ ವ್ಯರ್ಥ ಕಾಯವ 
ಸಾಗುಮಾಡುತ ಗುಡಿಯ ರೂಪಕೆ 
ತ್ಯಾಗಿ ಪರಮಾನಂದ ಸಂತಗೆ ಶರಣು ಶರಣಾರ್ಥಿ |

ಹೂವು ಬಳ್ಳಿಯ ಸಿದ್ಧ ಪುರುಷನ 

ಜಾವ ಜಾವದಿ ನೆನೆದು ಹಾಡಿಗೆ 
ಜೀವ ತುಂಬಿದ ತತ್ವವೇತ್ತಗೆ ಶರಣು ಶರಣಾರ್ಥಿ |
ಯಾವ ಮತವನ್ನು ಲೆಕ್ಕಕಿಡಿಯದೆ 
ದೇವ ಮತವನು ಮಿಕ್ಕಿ ಹೊಗಳಿದ 
ಕಾವ ಸಾವಿಗೆ ಅಂಜದೊಡೆಯಗೆ  ಶರಣು ಶರಣಾರ್ಥಿ |

ಜಾತಿಮತಗಳ ಹಂಗು ತೊರೆಯುತ 

ನೀತಿ ತತ್ವದ ನಡೆಯ ನಡೆಯುತ 
ಪ್ರೀತಿ ಹಂಚಿದ ಶರಿಫ ಅಜ್ಜಗೆ ಶರಣು ಶರಣಾರ್ಥಿ |
ಭೀತಿ ಮರೆಯುವ ದಾರಿ ಹುಡುಕುತ 
ಕೋತಿ ಮನಸನು ತಿದ್ದಿ ತೀಡುತ
ರೀತಿ ತೋರಿದ ಸಮತೆ ಗುರುವಿಗೆ ಶರಣು ಶರಣಾರ್ಥಿ |

ಗುಡಿಯ ಪುರದಾ ದೇವಿಯೊಲಿಸಿದ 

ಬಿಡದೆ ಲೋಕದ ಡೊಂಕು ತಿದ್ದಿದ
ಬೆಡಗು ಮಾತಿನವೊಡೆಯ ಶರಿಫಗೆ ಶರಣು ಶರಣಾರ್ಥಿ |
ನಡೆಗೆ ಬಸವನು ನುಡಿಗೆ ಅಲ್ಲಮ 
ಪಡೆಯ ಶರಣರ ಕೃಪೆಯ ಪಡೆಯುತ 
ನುಡಿವ ನಾಲಿಗೆ ದಿಟದ ಯೋಗಿಗೆ ಶರಣು ಶರಣಾರ್ಥಿ |

ಬಲ್ಲ ವೇದಾಗಮವ ಓದುತ 

ಎಲ್ಲರಮ್ಮನ ನುತಿಸಿ ಹಾಡುತ 
ಅಲ್ಲ ಅಲ್ಲಮನೊಂದೆ ಎಂದಗೆ ಶರಣು ಶರಣಾರ್ಥಿ |
ಅಲ್ಲಿಕೇರಿಗೆ ಜನರ ಕರೆಯುತ 
ಸೊಲ್ಲು ಸೊಲ್ಲಿಗೆ ದೈವ ಸ್ಮರಿಸುತ
ಮಲ್ಲನನುಭವ ಯೋಗಿ ಶರಿಫಗೆ ಶರಣು ಶರಣಾರ್ಥಿ |

ನುಡಿಯ ಕನ್ನಡದೊಲುಮೆ ಪ್ರೀತಿಯ 

ಒಡವೆ ತೊಟ್ಟಾ ಹಾಡು ಹಾಡಲಿ 
ಬೆಡಗು ತುಂಬಿದ ಜಗದ ಜಾಣಗೆ ಶರಣು ಶರಣಾರ್ಥಿ |
ಹಡಗು ಮುಳುಗದು ತೇಲುತಲೆವುದು 
ಒಡೆಯ ರಕ್ಷಿಪನೆಂಬ ಭಾಷೆಯ 
ದೃಢದಿ ಸಾರಿದ ಯೋಗಿ ಶರಿಫಗೆ ಶರಣು ಶರಣಾರ್ಥಿ |

ದಾಸ ಶರಣರ ನಡೆಯ ನಡೆಯುತ

ಈಶನನುಮತ ನುಡಿಯ ನುಡಿಯುತ 
ದೇಶ ಸುತ್ತಿದ ನಾಡ ಪಥಿಕಗೆ ಶರಣು ಶರಣಾರ್ಥಿ|
ಕೋಶದೊಳಗಿನ ಸುಧೆಯ ಸವಿಯುತ 
ದೇಸಿನುಡಿಯಲಿ ಕಾವ್ಯ ರಚಿಸುತ 
ಮಾಸದನುಭವ ರಾಸಿ ಪುರುಷಗೆ ಶರಣು ಶರಣಾರ್ಥಿ |

ಸಾಧು ಸಂತರ ಬಳಗ ಸೇರುತ 

ಸೇದಿ ಗುಡು ಗುಡಿ ತಾರಕೇರುತ 
ಮೋದ  ನೀಡಿದ ಯೋಗಿ ಶರಿಫಗೆ ಶರಣು ಶರಣಾರ್ಥಿ |
ಮೇದು ಕಬ್ಬನು ಸಿಹಿಯ ನೀಡುತ 
ಸ್ವಾದದನುಭವ ಸವಿಯ ಹಂಚುತ 
ಜಾದು ಮಾಡಿದ ಕರ್ಮ ಯೋಗಿಗೆ ಶರಣು ಶರಣಾರ್ಥಿ |

ಮೋಹದೆಂಡತಿ ಭ್ರಮೆಯ ಕಳಚುತ 

ಸೋಹ ಭಾವವ ಹರಿದು ಚಲ್ಲುತ 
ನೇಹ ಪ್ರೀತಿಯ ಕೊಟ್ಟ ಯೋಗಿಗೆ ಶರಣು ಶರಣಾರ್ಥಿ |
ದೇಹ ಬಿಡುವಾ ಮಾತ ಹೇಳುತ 
ಲೋಹ ಚುಂಬಕ ಪರುಷವಾಗುತ 
ಸಾಹಚರ್ಯದ ಪರಮ ಯೋಗಿಗೆ ಶರಣು ಶರಣಾರ್ಥಿ |

ಲೋಕವಿದ್ಯೆಯ ಅರಿತನಲೆಯುತ 

ಪಾಕಗೊಂಡನು ಕುಳಿತು ಓದುತ 
ನಾಕ ಕಲ್ಪನೆ ತೊರೆದ ವೀರಗೆ ಶರಣು ಶರಣಾರ್ಥಿ |
ಜೀಕಿ ತೂಗಿದ ಪಾರಮಾರ್ಥವ 
ಶೋಕ ಜೀವನ ದೂರದೂಡುತ 
ಮೂಕನಾಗುವ ಮಾಟಕೊಲಿದಗೆ ಶರಣು ಶರಣಾರ್ಥಿ |

ಸೋರುತಿದ್ದಾ ಮನೆಯ ಮಾಳಿಗೆ 

ಏರಿ ತಾರಸಿ ಗಟ್ಟಿ ಮಾಡಿದ
ಧೀರ ಸಾಧಕ ಶರಿಫ ಯೋಗಿಗೆ ಶರಣು ಶರಣಾರ್ಥಿ |
ಮಾರಿ ಮಸಣಿಯ ಗಾಳಿ ಭೂತವ 
ದೂರ ಮಾಡುತ ಜಾಣ್ಮೆಯಿಂದಲಿ 
ಧಾರೆಯೇರೆದಾ ಸಂತ ವೀರಗೆ ಶರಣು ಶರಣಾರ್ಥಿ |

ಕೋಳಿ ಕೊಡಗ ಸುಗ್ಗಿ ಗುಗ್ಗಳ 

ಚೇಳುಹಾವಿನ ಹೆಗ್ಗಣಂಗಿಯ 
ಗೋಳದೆಲ್ಲವ ಕಟ್ಟಿದರಸಗೆ ಶರಣು ಶರಣಾರ್ಥಿ |
ಏಳುವೂರಿನ ನೀರು ಕುಡಿಯುತ 
ಕಾಳಿದೇವಿಯ ಗುಡಿಯಲೊರಗುತ 
ಬಾಳು ಸವೆಸಿದ ಯೋಗಿ ಶರಿಫಗೆ ಶರಣು ಶರಣಾರ್ಥಿ |

ದೇಸಿ ಮಾತಿನ ಸೊಗಡ ಹೀರುತ 

ಸೋಸಿ ಪದಗಳ ರಾಸಿ ಮಾಡಿದ
ವಾಸ ಶಿಶುವಿನಾಳ ಶರಿಫಗೆ ಶರಣು ಶರಣಾರ್ಥಿ |
ಭಾಷೆ ಬಂಧನ ಹರಿದು ಹಾಕುತ 
ವೇಷ ಡಂಬಕ ಹುಸಿಯ ತೊರೆಯುತ
ಲೇಸ ಬದುಕನು ಕೊಟ್ಟ ಸಂತಗೆ ಶರಣು ಶರಣಾರ್ಥಿ |

ಸಪ್ಪಳಿಲ್ಲದೆ ಸೇವೆ ಮಾಡುತ

ಕಪ್ಪು ಕಾಕೆ ಸಿಗದ ಗುರುವಿನ 
ನೆಪ್ಪಿನಲ್ಲಿಯೇ ಮುಳುಗಿದರಸಗೆ ಶರಣು ಶರಣಾರ್ಥಿ |
ಅಪ್ಪ ಶರಿಫನು ರಚಿಸಿದಂತಹ 
ಒಪ್ಪು ಪಫ಼ಗಳ ಹಾಡಿ ನಲಿಯಲು
ಸುಪ್ತ ಪ್ರಜ್ಞೆಯ ಕೊಟ್ಟ ದೇವಗೆ ಶರಣು ಶರಣಾರ್ಥಿ |

No comments: