Tuesday, May 17, 2016

ಮೊಬಲೇಶನ ತ್ರಿಪದಿಗಳು


ಮೊಬಲೇಶನ ತ್ರಿಪದಿಗಳು 




ಫೇಸಬುಕ್ ಪುಟದಲ್ಲಿ ವೇಷಗಳು ನೂರಾರು 
ಖಾಸಾ ನುಡಿಚಿತ್ರ ಸಾವಿರ | ಸಿಗುವವು
ಸೋಸಿ ನೋಡಿದರೆ ಮೊಬಲೇಶ |

ಲೈಕಿಸುವ ಜನರುಂಟು ಟೀಕಿಸುವ ಜನರುಂಟು
ಸಾಕು ಗುಂಪುಗಳ ಸಹವಾಸ | ಎನ್ನುತ್ತಾ 
ಆಕಳಿಸುವವರುಂಟು ಮೊಬಲೇಶ |

ಟ್ವೀಟರು ಲೋಕದಲಿ ನೋಟವನಿರಿಸುತ್ತ 
ಕೋಟಿ ಜನರಾಡೊ ಮಾತರಿತು | ಹೊಸಬಾಳ 
ಪಾಠ ಕಲಿಬೇಕೊ ಮೊಬಲೇಶ |

ಚಣ ಚಣದ ವಾಟ್ಸ್ಯಾಪು ದಿನದಿನದ ಫೇಸಬುಕ್ಕು
ಜನಮನದ ಬಿಂಬ ಟ್ವೀಟರು | ಇಂದಿನ 
ಗುಣಧರ್ಮ ತಿಳಿಯೋ ಮೊಬಲೇಶ |

ಫೇಸಬುಕ್ಕು ವಾಟ್ಸ್ಯಾಪು ಬೀಸುವ ಗಾಳಿಯಲಿ 
ಖಾಸಗಿಯ ಮಾತು ನುಡಿಚಿತ್ರ | ಹರಿದಾಡಿ 
ಕೋಶ ಕಟ್ಟಿಹವು ಮೊಬಲೇಶ |

ಜಾಲಜಾಲವ ಹೊಕ್ಕು ನೂಲಿನೆಳೆಯಳೆ  ಬಿಡಿಸಿ 
ಮೂಲದರಿವನ್ನೆ ಹೊರತಗೆದು | ಹೊಸದೊಂದು 
ಲೀಲೆ ತೋರುವರು ಮೊಬಲೇಶ |

ಬಗೆಜಾಲ ಹಿರಿದಾಗಿ ಜಗವೆಲ್ಲ ಕಿರಿದಾಯ್ತು 
ಝಗಮಗ ಸರುಕು ಸೂರಾಯ್ತು | ಜನರಿಗೆ 
ದಿಗಿಲಾಯ್ತು ನೋಡೊ ಮೊಬಲೇಶ |

ಹೊಸಬಗೆಯ ಸರದಾರ ಕಿಸೆಯಲ್ಲಿ ಅಡಗುವನು 
ಕುಶಲದ ಹತ್ತು ಕೆಲಸಿಗನು | ಜಾಲದ 
ನಷೆಯಲ್ಲಿರಿಸುವನು ಮೊಬಲೇಶ |

ಬಾಲಮಕ್ಕಳು ಈಗ ಜಾಲದ ಮೊರೆಹೊಕ್ಕು 
ಮೂಲ ಗುರುವಿನ ಮರೆತಾರೋ | ತಂತ್ರಕ್ಕೆ 
ಜೋಲು ಬಿದ್ದಾರೋ ಮೊಬಲೇಶ |

ಸಣ್ಣ ಬಾಲಕರಾದಿ ಬೆನ್ನು ಬಾಗಿದರೆಲ್ಲ 
ಕಣ್ಣಿಟ್ಟು ನೋಡ್ತ ಹಗಲೆಲ್ಲ | ಜಾಲದ
ಬೆನ್ನ ಹತ್ತ್ಯಾರೋ ಮೊಬಲೇಶ |

ತೆರೆದ ಗೋಡೆಯ ಮೇಲೆ ಬರೆದು ಅಕ್ಷರ ಮಾಲೆ
ಹೊರಗಾಕ್ತ ಸುಪ್ತ ಭಾವಗಳ | ಜಾಲದಲಿ 
ಬೆರೆತೋಗುತಿಹರು ಮೊಬಲೇಶ |

ಮಿಂಚಿನ ವೇಗದಲಿ ಸಂಚರಿಸಿ ಗೂಗಲ್ಲು
ಸಂಚಿತ ವಿಷಯ ಹಿಡಿದಿಟ್ಟು | ತಡಮಾಡದ 
ಹಂಚುವುದು ನೋಡೊ ಮೊಬಲೇಶ |

ಬೇಡಿದ ವರಗಳನು ಜೋಡಿಸಿ ಕಲೆಹಾಕಿ 
ನೀಡುವ ಗೆಳೆಯ ಗೂಗಲ್ಲು | ಜಾಲದ 
ಗೂಢಚಾರನೊ ಮೊಬಲೇಶ |

ಫೇಸಬುಕ್ ಗೆಳೆತನದಿ ಹಾಸುಹೊಕ್ಕಾಗಿರುವ 
ಏಸೊಂದು ಮಂದಿ ಸಿಗತಾರ | ಬೆಳೆಸುತ್ತ
ಖಾಸಾ ಸಂಬಂಧ ಮೊಬಲೇಶ |

ಬೆರಳತುದಿ ಈಜಾಲ ಮರುಳಮಾಡುತ ಜನಕ 
ಬೆರಗಿನ ಲೋಕ ತೋರಿದ್ದು | ಸುಳ್ಳಲ್ಲ 
ಅರಿವಿನ ಮನೆಯೋ ಮೊಬಲೇಶ |

ಜಗದೆಲ್ಲ ಜನರನ್ನು ಮಿಗೆಸೆಳೆದು ಹತ್ತಿರಕೆ 
ಸಿಗಲಾರದ ಜ್ಞಾನ ನೀಡುವ | ಜಾಲಕ್ಕೆ 
ಮುಗಿಬೇಕು ಕೈಯ ಕಲ್ಮೇಶ |

ಗೂಗಲ್ಲ ಶೋಧದಲಿ ಜಾಗತಿಕ ಮಾಹಿತಿಯು 
ಸಾಗಿಬರುವುದು ಚಣದಾಗ | ಜಾಲಕ್ಕೆ
ಬಾಗಿ ವಂದಿಸುವೆ ಮೊಬಲೇಶ |





ವಚನಗಳು

ಜಾಲವನ್ನು ಕಂಡಲ್ಲಿ ಮುಳುಗುವರಯ್ಯ 
ಮಾಲಗಳನು ಕಂಡಲ್ಲಿ ಸುತ್ತುವರಯ್ಯ 
ಮೋಹದ ಜಾಲವನು
ಮಾಯದ ಮಾಲಗಳನು
ನಂಬಿದವರು ಕಾಲಕರ್ಮದ ಕಲಿಗಳೆನೊ 
ಸಿಲಿಕಾನ ಶಿವದೇವ |

ಪೇಸಬುಕ್ಕ ಕಂಡಾಗ ಬರೆಯವರಯ್ಯ 
ವಾಟ್ಸ್ಯಾಪ ಕಂಡಾಗ ಕೊರೆಯುವರಯ್ಯ 
ಟ್ವೀಟರ ಕಂಡಾಗ ಒರೆಯುವರಯ್ಯ 
ಫೇಸಬುಕ್ಕ ವಾಟ್ಸ್ಯಾಪ ಟ್ವೀಟರ
ನಚ್ಚಿದವರು ಬರಹದ 
ನಿಜದುದಯವನೆತ್ತ ಬಲ್ಲರು 
ಸಿಲಿಕಾನ ಶಿವದೇವ |


ಕಣ್ಣಿಟ್ಟು ನೋಡ್ತ ಹಗಲೆಲ್ಲ | ಜಾಲದ
ಬೆನ್ನ ಹತ್ತ್ಯಾರೋ ಮೊಬಲೇಶ |

No comments: