Sunday, August 25, 2013

ಹರಿವ ಹಳ್ಳದ ಬೆಡಗು - ಹಸನ ಹಕ್ಕಿ- ಮೀಸಲು ತಿನಿಸು....೩



ಹಸನ ಹಕ್ಕಿ - ಮೀಸಲು ತಿನಿಸು

ಬೇಗನೇ ಮಲಗಿದ ಅಪ್ಪ ನಸುಕಿನಲ್ಲಿ ಬೇಗನೇ ಏಳುತ್ತಿದ್ದ. ಗಂಟೆಗೆ ಎದ್ದು ಎತ್ತುಗಳಿಗೆ ಹೊಟ್ಟು ಹಾಕಿ, ದನದ ಕಾಲಲ್ಲಿಯ ಶೆಗಣಿ ತೆಗೆದು ಹಕ್ಕಿ ಹಸನು ಮಾಡಿ ಎತ್ತುಗಳಿಗೆ ತಿನಿಸು ತಿನಿಸುತ್ತಿದ್ದ. ರಾತ್ರಿ ಕಲಸಿ ಇಟ್ಟ ಹುರುಳಿ ನುಚ್ಚು-ಹಿಂಡಿಯನ್ನು ಬೇರೆ ಡಬರಿಯಲ್ಲಿ ಎತ್ತು- ಹೋರಿಗಳ ಪ್ರಮಾಣಕ್ಕನುಸಾರವಾಗಿ ಹಾಕಿ ಮುಂದೆ ಕುಳಿತು ತಿನಿಸುತ್ತಿದ್ದ. ಹಾಗೆ ತಿನಿಸುವಾಗ ಪ್ರತಿಯೊಂದರ ಕೂಡ ಮಾತಾಡುತ್ತಿದ್ದ. ಸಿಟ್ಟು ಬಂದಾಗ ಮನುಷ್ಯರನ್ನು ಬಯ್ಯುವಂತೆಯೇ ಬಯ್ಯುತ್ತಿದ್ದ. ಅವು ತಿನ್ನದಿದ್ದರೆ ಹಾಕಿದ ತಿನಿಸಿನಲ್ಲಿ ಏನು ಕಡಿಮೆಯಾಗಿದೆ ಎಂಬುದನ್ನು ತಿಳಿದು ಮೇಯಿಸುತ್ತಿದ್ದ. ರಾತ್ರಿ ನುಚ್ಚನ್ನು ತೋಯಿಸುವಾಗ ಯಾರೂ ಅದನ್ನು ನೋಡುವತಿರಲಿಲ್ಲ. ತೋಯಿಸಿಟ್ಟ ಡಬರಿಗಳು ಸಹ ಯಾರಿಗೂ ಕಾಣಬಾರದೆಂದು  ಚೀಲಹಚ್ಚಿಟ್ಟ ಗಡಂಚಿಯ ಕೆಳಗೆ ಮುಚ್ಚಿಡುತ್ತಿದ್ದ. ತಿನಿಸುವ ವ್ಯಕ್ತಿಯನ್ನು ಬಿಟ್ಟು ಬೇರೆ ಯಾರಾದರೂ ನೋಡಿದರೆ -ಕಣ್ ಬಿಟ್ಟರೆ - ತಿಂದದ್ದು ದನಗಳ ಹೊಟ್ಟೆಗೆ ಹತ್ತುವುದಿಲ್ಲ ಎಂದು ಬಲವಾಗಿ ನಂಬಿದ್ದ. ಒಬ್ಬ ತಾಯಿ ತನ್ನ ಮಗುವಿಗೆ ಸೆರಗು ಮುಚ್ಚಿ ಮೊಲೆ ಕುಡಿಸುವದಕ್ಕೂ ಅಪ್ಪ ದನಗಳಿಗೆ ತಿನಿಸು ತಿನಿಸುವದಕ್ಕೂ ಹೆಚ್ಚು ವ್ಯತ್ಯಾಸವಿರಲಿಲ್ಲನಸುಕಿನಲ್ಲಿ ಎದ್ದ ಮನೆಯವರಾಗಲಿ, ಶೆಗಣಿ ಬಳಿಯಲು ಬಂದ ಯಲ್ಲಪ್ಪ, ಹನಮಂತ(ಕುರುಡ), ಶಿವಪ್ಪನಾಗಲಿ ಅಪ್ಪ ಎತ್ತು ಹೋರಿ ಕರುಗಳಿಗೆ ತಿನಿಸು ತಿನಿಸುವುದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಏಳುವುದಕ್ಕಿಂತ ಮುಂಚಿತ  ಅವುಗಳಿಗೆ ತಿನಿಸಿಬಿಟ್ಟಿರುತ್ತಿದ್ದ.  

ರಾತ್ರಿ ಊಟಕ್ಕಿಂತ ಮುಂಚೆ ದನಗಳಿಗೆ ನೀರು ಕುಡಿಸಿ ಮೈ ತಿಕ್ಕಿ, ( ದನದ ಮೈ ತಿಕ್ಕಲೆಂದೇ ಒಣಗಿದ ಹೀರೆ ಕಾಯಿ ಅರ್ಧ ಹೆಚ್ಚಿ ಮಾಡಿದ  ವಿಶಿಷ್ಟ ಸಾಧನ ) ಬಾಲ ಜಗ್ಗಿ ಅವುಗಳ ಸೇವೆ ಮಾಡುತ್ತಿದ್ದ. ಗಳೆ ಹೊಡೆಯುವಾಗ - ಬಿತ್ತುವಾಗ ಎತ್ತುಗಳಿಗೆ ಬಾರಕೋಲಿನಿಂದ ಹೊಡೆದು ಮೈಮೇಲೆ ಗಾಯವಾಗಿದ್ದರೆ, ಬಾರು ಮೂಡಿದ್ದರೆ ಅದನ್ನು ತಿಕ್ಕಿ ಉಪಚರಿಸುತ್ತಿದ್ದ. ಮೈಮೇಲೆ ಒಂದಿಷ್ಟೂ ಕೆಸರು ಹತ್ತುವಂತಿರಲಿಲ್ಲ. ಹೊಡೆದವರಿಗೆ ಹಂಗಿಲ್ಲದೆ ಬಯುತ್ತಿದ್ದ. ಸಿಟ್ಟು ಬಂದು ತಾನೇ ಹೊಡೆದಿದ್ದರೂ ರಾತ್ರಿ ಮೈಮೇಲೆ ಆದ ಗಾಯವನ್ನು ನೋಡಿ ಮರುಗುತ್ತಿದ್ದ. ಪಶ್ಚಾತ್ತಾಪ ಪಡುತ್ತಿದ್ದ.

ಮನೆಯ ಹಕ್ಕಿ ಹೇಗೆ ಪಡಸಾಲೆಯಂತೆ ಸ್ವಚ್ಛವಾಗಿರುತ್ತಿತ್ತೊ ಹಾಗೆ ಹಿತ್ತಲವೂ ಸ್ವಚ್ಛವಾಗಿರುತ್ತಿತ್ತು. ಹಿತ್ತಲಲ್ಲಿಯ ಮೇವು(ಕಣಕಿ) ಹೊಟ್ಟು ಮಳೆಗೆ ಒಂಚೂರು ತೊಯ್ದು ಹಾಳಾಗದಂತೆ ಕಾಳಜಿ ಮಾಡುತ್ತಿದ್ದ. ರೈತರಿಗೆ ಬಿಡುವಿರುವ ಸೋಮವಾರ ದನಗಳ ಮೈತೊಳೆಯುವದಕ್ಕಿಂತ ಮುಂಚೆ ಎತ್ತು ಹೋರಿ ಆಕಳು ಕರಗಳ ಮೈಗೆ ಅಂಟಿದ ಉಣ್ಣೆ ತೆಗೆಯುವ ಕೆಲಸದಲ್ಲಿ ನಿರತನಾಗಿರುತ್ತಿದ್ದ. ನಮ್ಮನ್ನೂ- ಅಣ್ಣ,ಮಾವ ಸಹಿತ ಕೆಲಸಕ್ಕೆ ಹಚ್ಚುತ್ತಿದ್ದ. ದನಗಳ ಉಣ್ಣಿ ಹೆಚ್ಚಾಗಲು ಕರಿಯಮ್ಮನ ಮಾಡ ಮೈಲಿಗೆ ಕಾರಣ ಎಂದು ನಂಬುತ್ತಿದ್ದ. ಗಚ್ಚಿನ ಗ್ವಾದಲಿಯನ್ನು ತೊಳೆದು ಸಿಮೆಂಟಿನಿಂದ ಬಿರುಕುಗಳನ್ನು ಮುಚ್ಚಿ ಇನ್ನಿಲ್ಲದ ಕಾಳಜಿ ಮಾಡುತ್ತಿದ್ದ. ಹಕ್ಕಿಯ ತುಂಬ ಉಣ್ಣಿ ಪುಡಿ ಸಿಂಪಡಿಸುತ್ತಿದ್ದ. ಉಣ್ಣಿ ಹೆಚ್ಚಾಗಿದ್ದರೆ ದನಗಳ ಮೈಗೂ ಉಣ್ಣಿಪುಡಿ ಹಚ್ಚಿ ಬಿಸಿಲಲ್ಲಿ ಕಟ್ಟುತ್ತಿದ್ದ. ದನಗಳು ಮೈ ನೆಕ್ಕಿಕೊಳ್ಳಲಾರದಂತೆ ಬಾಯಿಕಲ್ಲಿ ಕಟ್ಟಿರುತ್ತಿದ್ದ. ಎರಡು ಮೂರು ತಾಸುಗಳ  ಅನಂತರ ಮೈತೊಳೆಯಲು ಬೆಣ್ಣಿಹಳ್ಳಕ್ಕೆ ಹೊಡೆದೊಯ್ಯುತ್ತಿದ್ದ. ಆಳವಿರುವ ಮಡುವಿನಲ್ಲಿ ಈಜಾಡಿಸಿ ದನಗಳ ಮೈ ಹಗುರಾಗುವಂತೆ ಮಾಡುತ್ತಿದ್ದ. ಬಾಯಿಬ್ಯಾನಿ - ಕಾಲ್ಬ್ಯಾನಿ ಬಂದಾಗಲಂತೂ ಹಗಲು ರಾತ್ರಿ ಅವುಗಳೊಂದಿಗೆ ಇರುತ್ತಿದ್ದ.

No comments: