Sunday, August 25, 2013

ಹರಿವ ಹಳ್ಳದ ಬೆಡಗು - ಮಿರಗನ ಮಳೆ ಶುಂಟಿ ಕಾಡೆ....೨



ಮಿರಗನ ಮಳೆ - ಶುಂಟಿ ಕಾಡೆ

ಹದಿನಾರೆತ್ತಿನ ಇದಿರು ಗ್ವಾದಲಿಯ ದನದ ಹೊಸಮನೆ. ಮನೆ ತುಂಬ  ಎತ್ತು ಆಕಳು ಕರುಗಳು. ನಾಲ್ಕು ಎತ್ತು, ನಾಲ್ಕಾರು ಹೋರಿಗಳು, ಹಿಂಡುವ ಗಬ್ಬಾದ ಆಕಳುಗಳು, ಮೂರ್ನಾಲ್ಕು ಹೋರಿ ಕರು ಇಲ್ಲವೆ ಹೆಣ್ಣುಕರುಗಳು ಇದ್ದೇ ಇರುತ್ತಿದ್ದವು. ಆಕಳು ಹೆಣ್ಣುಕರು ಹಾಕಿದ್ದರೆ ಮಾತ್ರ ಹಿಂಡಿಕೊಳ್ಳಲು ಒಂದಿಷ್ಟು ಹಾಲು ಸಿಗುತ್ತಿದ್ದವು. ಹೋರಿಕರವಾಗಿದ್ದರೆ ಹಿಂಡಲು ಹೋದಾಗ  ಆಕಳ ಮೊಲೆಯಲ್ಲಿ ಹಾಲು ಇರುತ್ತಿರಲಿಲ್ಲ. ಅಪ್ಪ ರಾತ್ರೋರಾತ್ರಿ ಹೋರಿಕರ ಬಿಚ್ಚಿಬಿಟ್ಟು ಹಾಲು ಕುಡಿಸಿಬಿಟ್ಟಿರುತ್ತಿದ್ದ. "ಶಾಂತವ್ವ, ಹೋರಿಕರ ರಾತ್ರಿ ಹಗ್ಗ ಹರಕೊಂಡು ಮೊಲಿ ಕುಡದಿರಬೇಕು ನೋಡು " ಎಂದು ಸಬೂಬು ಹೇಳುತ್ತಿದ್ದ. ಅಮ್ಮ ಮತ್ತು ನಮಗೆಲ್ಲ ಸುಳ್ಳು ಹೇಳಿ ಹೋರಿಕರ ಮೇಯಿಸುವಷ್ಟು ಕಕಲಾತಿ ಇತ್ತು ಅಪ್ಪನಿಗೆ. ಇದೆಲ್ಲ ಗೊತ್ತಿದ್ದ ಅಮ್ಮ ಸುಮ್ಮನೆ ನಕ್ಕು ಬಿಡುತ್ತಿದ್ದಳು. ಮನೆಯಲ್ಲಿ ಹಾಲು ಹೆಚ್ಚಿಗೆ ಇರದಿದ್ದಾಗ ಮನಸ್ಸಿನಲ್ಲಿಯೇ ಸಿಟ್ಟು ಮಾಡಿಕೊಳ್ಳುತ್ತಿದ್ದಳು. ಮುಂಜಾನೆ ಎದ್ದ ಕೂಡಲೇ ನಾವೆಲರೂ ಅಣ್ಣ ಅಕ್ಕಂದಿರು ಮಾವ ಮತ್ತು ಅಮ್ಮ ಗಂಗಾಳಗಟ್ಟಲೇ ಚಹ ಕುಡಿಯುತ್ತಿದ್ದೆವು. ಬೆಲ್ಲದ ಚಹ ಕುಡಿಯುತ್ತಿದ್ದ ನಮ್ಮ ವರ್ತನೆ ಅಪ್ಪನಿಗೆ ಸರಿ ಬರುತ್ತಿರಲಿಲ್ಲ. ಆದ್ದರಿಂದ ಅಪ್ಪನ ಎದುರಿಗೆ ನಾವ್ಯಾರೂ ಚಹ ಕುಡಿಯುವಂತಿರಲಿಲ್ಲ, ಕುಡಿಯುತ್ತಿರಲಿಲ್ಲ. ಅಪ್ಪ ಊಟಕ್ಕೆ ಬಂದಾಗ ಚಹದ ಡಬರಿ ಒಲೆಮೇಲೆ ಇದ್ದರೆ ಸಿಟ್ಟಾಗುತ್ತಾನೆಂದು ಅಮ್ಮ ಚಹವನ್ನು ಅಕ್ಕನ ಕೈಯಿಂದ ಮುಸುರಿ ನೀರಿಗೆ ಹಾಕಿಸಿಬಿಡುತ್ತಿದ್ದಳು. ಚಿಕ್ಕ ಅಡುಗೆ ಮನೆಯಲ್ಲಿ ಮುಚ್ಚು ಮರೆ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಚಹದ ಆಸೆಗೆ ಅಡುಗೆ ಮನೆ ಮುಂದೆ ಕುಳಿತ ನಮಗೆ ದೊಡ್ಡ ನಿರಾಶೆಯಾಗುತ್ತಿತ್ತು. ಒಳಗೊಳಗೇ ಅಪ್ಪನ ಮೇಲೆ ಸಿಟ್ಟೂ ಬರುತ್ತಿತ್ತು. ಆದರೇನು ಮಾಡುವುದು ಅವನ ಸಿಟ್ಟಿನ ಮುಂದೆ ನಾವೆಲ್ಲರೂ ಅಸಹಾಯಕರು. ಅಪ್ಪನಿಗೆ ಅಮ್ಮ ಹೆದರದೇ ಅಪ್ಪನೇ ಅಮ್ಮನಿಗೆ ಹೆದರುವಂತಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಸೆ ಮನದಲ್ಲಿ ಮೂಡಿ ಮಾಯವಾಗುತ್ತಿತ್ತು.

ಚಹ ಕುಡಿಯದ ಅಪ್ಪ ಯಾವಾಗಲಾದರೊಮ್ಮೆ ಕಾಫಿ ಕುಡಿಯುತ್ತಿದ್ದ. ತನಗಾಗಿ ಮಾಡಿದ ಕಾಫಿಯಲ್ಲಿ ನನಗೂ ಪಾಲು ಕೊಡುತ್ತಿದ್ದ. ಮಳೆಯಲ್ಲಿ ತೊಯ್ಸಿಕೊಂಡು ಬಂದಾಗ  ಇಲ್ಲವೆ ಚಳಿಗಾಲದ ಸಾಯಂಕಾಲ ಸಮಯದಲ್ಲಿ ಕಾಫಿ ಬೇಡುತ್ತಿದ್ದ. ಅವನು ಬೇಡುವದಕ್ಕಿಂತ ಮುಂಚೆಯೇ ಅಮ್ಮ ಮುನ್ಸೂಚನೆಯನ್ನರಿತು ಮಾಡಿಕೊಡುತ್ತಿದ್ದಳು ಇಲ್ಲವೆ ಅಕ್ಕನಿಗೆ ಮಾಡಲು ಹೇಳುತ್ತಿದ್ದಳು. ಸುಗ್ಗಿ ಸಮಯದಲ್ಲಿ ರಾತ್ರಿ  ತೆನೆ ತುಳಿಸುವಾಗ, ರಾಶಿ ತೂರುವಾಗ ಕಣಕ್ಕೂ ತರಿಸಿಕೊಳ್ಳುತ್ತಿದ್ದ. ಮನೆಯಿಂದ  ಹಿತ್ತಾಳೆ ಕಿತ್ತಲಿಯಲ್ಲಿ  ತಂದ ಕಾಫಿ ತಣ್ಣಗಾಗುವ ಮುನ್ನವೇ ಕೈಯಲ್ಲಿಯ ಕೆಲಸ ಬಿಟ್ಟು ಕುಡಿಯುತ್ತಿದ್ದ. ಜೊತೆ ಕೆಲಸದವರಿಗೂ ಕುಡಿಯಲು ಕೊಡುತ್ತಿದ್ದ

ಮಿರಗನ (ಮೃಗಶಿರ) ಮಳೆ ಜಿಟಿಜಿಟಿ ಹತ್ತಿ ನೆಗಡಿ ಕೆಮ್ಮು ಬಂದಾಗ , ಬರುವ ಸೂಚನೆ ಕಂಡಾಗ ಶುಂಟಿ ಕಾಡೆ (ಕಷಾಯ) ಕುಡಿಯುತ್ತಿದ್ದ. ಒಮ್ಮೊಮ್ಮೆ ಕಾಡೆ ಬದಲಾಗಿ  ಶುಂಟಿ-ಬೆಲ್ಲ ಜಜ್ಜಿಸಿಕೊಂಡು ತಿನ್ನುತ್ತಿದ್ದ. ಅಂಗಡಿಯಿಂದ ಶುಂಟಿ ತಂದು ಬೆಲ್ಲದ ಕಣ್ಣಿ ಸೇರಿಸಿ ತುದಿಗಟ್ಟಿ ಹಾಸುಗಲ್ಲಿನ ಮೇಲೆ ಗುಂಡುಕಲ್ಲಿನಿಂದ ಜಜ್ಜಿ ತಯಾರಿಸುವ ಕೆಲಸವನ್ನು - ಎಲ್ಲರನ್ನೂ ಬಿಡಿಸಿ ನಾನೇ ಮಾಡುತ್ತಿದ್ದೆಬೆಲ್ಲವೂ ಸಿಗುತ್ತಿತ್ತು. ಚಹ ಕುಡಿದಿದ್ದರೂ ಶುಂಟಿ-ಬೆಲ್ಲ ತಿನ್ನುವ ಚಪಲ ತೀರುತ್ತಿತ್ತು. ಬರೆಯುವ ಓದುವ ಅವಸರವಿದ್ದರೂ ಶುಂಟಿ ಬೆಲ್ಲ ಜಜ್ಜುವ ಅವಕಾಶವನ್ನು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ.

ನಾನು ಆಡಿ ದಣಿದು ರಾತ್ರಿ ಬೇಗನೆ ಮಲಗಿದಾಗ ಅಪ್ಪ ಬಂದು ಮಗ್ಗುಲಲ್ಲಿ ಕೂತುದುಬ್ಬದ ಮೇಲೆ ಕೈಯಾಡಿಸಿ ಕಾಲಿನ ಬೆರಳನ್ನು ಲಟಕ್ಕೆನ್ನಿಸುತ್ತಿದ್ದ. ಸದಾ ದುಡಿದ ಒರಟು ಕೈಗಳ ಬಿಸಿ ಹಿತವೆನಿಸುತ್ತಿತ್ತು. ಮೈಯಲ್ಲಿ ಹುಷಾರಿಲ್ಲದೆ ನೆಗಡಿ-ಜ್ವರ ಬಂದು ಮಲಗಿದಾಗ  ಅಪ್ಪ ೧೫-೨೦ ನಿಮಿಷ ಪಾದ ತಿಕ್ಕಿ ತಲೆ ಒತ್ತಿ ತನ್ನ ಮಮತೆಯನ್ನು ವ್ಯಕ್ತಮಾಡುತ್ತಿದ್ದ. ಆಗ ನನ್ನ ಅವನ ನಡುವೆ ಮಾತು ಕತೆ ಇರುತ್ತಿರಲಿಲ್ಲಸಂವೇದನೆಗಳು ವಿನಿಮಯಗೊಳ್ಳುತ್ತಿದ್ದವು.

ಅಪ್ಪ ಮಲಗುತ್ತಿದ್ದುದು ಬೇಗ. ಮಕ್ಕಳಾದ ನಾವಿನ್ನೂ ಅಂಗಳದಲ್ಲಿ ಆಟವಾಡುತ್ತಿದ್ದಾಗ ಅಪ್ಪ ಹಾಸಿಗೆ ಹಾಸಿ ಕಟ್ಟೆಯ ಮೇಲೆ ಮಲಗಿರುತ್ತಿದ್ದ. ದಣಿದು ಮಲಗಿದ ಅಪ್ಪ ಒಮ್ಮೊಮ್ಮೆ ನನ್ನನ್ನು ಕಾಲು ತುಳಿಯಲು ಕರೆಯುತ್ತಿದ್ದ. ಗೆಳೆಯರೆಲ್ಲ ಮಾತಾಡಿಕೊಂಡು ಒಬ್ಬೊಬ್ಬರು ಒಂದೊಂದು ಕಾಲು ಒತ್ತಿ ಇಲ್ಲವೆ ತುಳಿದು, ಕಾಲ್ಬೆರಳನ್ನು ಲಟಕ್ಕೆನ್ನಿಸಿ ಮತ್ತೆ ಆಟದಲ್ಲಿ ಮಮರೆಯುತ್ತಿದ್ದೆವು. ನಾವು ಆಟ ಬಿಡುವ ಹೊತ್ತಿಗೆ ಅಪ್ಪ ಗೊರಕೆ ಹೊಡೆಯುತ್ತಿದ್ದ.

No comments: