Sunday, August 25, 2013

ಹರಿವ ಹಳ್ಳದ ಬೆಡಗು..೭ ನಮ್ಮೂರ ಹೈನ



ಕೊಣ್ಣೂರ ಗಡಿಗಿ-ಕಡದಳ್ಳಿ ಬೆಣ್ಣಿ

ಮನೆಯಲ್ಲಿರುವ ಎರಡು ಮೂರು ಆಕಳಲ್ಲಿ ಒಂದಾದರೂ ಹಿಂಡುತ್ತಿದ್ದವು. ಊರತುಂಬ ಎಮ್ಮೆ ಹೈನದ ಭರಾಟೆ ಇದ್ದರೆ ನಮ್ಮ ಮನೆಯಲ್ಲಿ ಎಮ್ಮೆ ಹೈನ ಕಡಿಮೆ. ಇದ್ದೊಂದು ಎಮ್ಮೆ ಸರಿಯಾಗಿ ಹಿಂಡುತ್ತಿರಲಿಲ್ಲನಮ್ಮ ಮನೆಯಲ್ಲಿ ಉಳಿದವರಂತೆ ಎಮ್ಮೆ ಮೇಯಿಸಿ ಹೈನ ಮಾಡುವ ಪರಿಪಾಠವೂ ಕಡಿಮೆ. ಇದ್ದ ಎಮ್ಮೆಯ ಹಾಲನ್ನು ಮನೆಗೆ ಬಳಸುವುದೇ ಹೆಚ್ಚು. ಬೆಣ್ಣೆ ತುಪ್ಪ ಮಾಡಿದರೂ ಮನೆ ಪೂರ್ತಿಗೆ (ಮಟ್ಟಿಗೆ) ಮಾತ್ರ. ಹೊರಗೆ ಮಾರುತ್ತಿರಲಿಲ್ಲ. ದುಡಿಯುವ  ಅಪ್ಪನಿಂದ ಹಿಡಿದು ಎಲ್ಲರೂ ಹಾಲು ರೊಟ್ಟಿ, ಹಾಲು ಕಿಚಡಿ ಉಣ್ಣುವವರೆ. ಮೊಸರಂತು ಕಡ್ಡಾಯವಾಗಿ ಬೇಕೇ ಬೇಕಾಗುತ್ತಿತ್ತು. ಮುಂಜಾನೆ ಊಟಕ್ಕೆರೊಟ್ಟಿ ಕಾಳು ಮೊಸರು ಹಿಂಡಿ. ಮಧ್ಯಾಹ್ನ ಮನೆಯಲ್ಲಿ ಮಾಡಿದ ಮಜ್ಜಿಗೆ ಬಳಕೆಯಾಗುತ್ತಿತ್ತುರಾತ್ರಿ ಕಡ್ಡಾಯವಾಗಿ ಹಾಲು ಇರಬೇಕಾಗುತ್ತಿತ್ತು. ಉಣಲಿಕ್ಕೆ ಚಹಾಕ್ಕೆ ಎಮ್ಮೆ ಮತ್ತು ಆಕಳ ಹಾಲನ್ನು ಹೇಗೆ ಅನುಕೂಲವೋ ಹಾಗೆ ಬಳಸುತ್ತಿದ್ದರು.

ನಮ್ಮೂರು ಹೈನಕ್ಕೆ ಪ್ರಸಿದ್ಧವಾಗಿತ್ತು. ನರಗುಂದ ಸಂತೆಯಲ್ಲಿ ಕೊಣ್ಣೂರ ಮಣ್ಣಿನ ಗಡಿಗೆಗೆ ( ಮಲಪ್ರಭಾ ನದಿಯ ರೇವೆ ಮಣ್ಣಿನಿಂದ ತಯಾರಿಸಿದ್ದು )ಮತ್ತು ಕಡದಳ್ಳಿ ತುಪ್ಪಕ್ಕೆ ಎಲ್ಲಿಲ್ಲದ  ಬೇಡಿಕೆಯಿತ್ತು. ಪ್ರತಿಯೊಬ್ಬರ ಮನೆಯಲ್ಲೂ ಆನೆಯಂತಹ ಎಮ್ಮೆ ಇದ್ದವು. ಸರಿಯಾಗಿ ಎಮ್ಮೆ ಮೇಯಿಸಿ ಬೆಣ್ಣೆ ತೆಗೆದು ಮಾರುತ್ತಿದ್ದರು. ಹತ್ತು ಸೇರು, ಹನ್ನೆರಡು ಸೇರು ಬೆಣ್ಣಿ ತೆಗೆಯುವ  ಕುಶಲ ಕಸಬುದಾರರೂ ಇದ್ದರು. ಸಂತೆಯ ದಿನ ಒಂದೇ ಗಡಿಗೆಯಲ್ಲಿ ಒಯ್ದರೆ ಎಮ್ಮೆಗೆ ನೆದರು ಆಗುತ್ತದೆಂದು ಸಣ್ಣ ಸಣ್ಣ ಸ್ವಾರಿಗಳಲ್ಲಿ ಒಯ್ದು ಮತ್ತೊಬ್ಬರಿಗೆ ಎಷ್ಟು ಬೆಣ್ಣೆ ತಂದಿದ್ದೆ ಎಂಬುದು ಗೊತ್ತಾಗದಂತೆ ಮಾರಿ ಬರುತ್ತಿದ್ದರುಹೈನದಿಂದಲೇ ಹೆಚ್ಚಿನ ಮನೆಯವರ ಸಂತಿ ಪ್ಯಾಟಿ ನಡೆಯುತ್ತಿತ್ತು. ಆದರೆ ನಮ್ಮ ಮನೆಯಲ್ಲಿ ಮಾತ್ರ ರೀತಿ ಹೈನ ಮಾಡಿ ಮಾರುವುದಕ್ಕೆ ಅವಕಾಶವಿರಲಿಲ್ಲ. ಎಮ್ಮೆ ಹಿಂದೆ ದುಡಿಯುವ, ಮೇಯಿಸುವ ಒಂದು ಹೆಚ್ಚಾಳು ಬೇಕಾಗುತ್ತಿತ್ತು. ಅದು ನಮ್ಮ ಮನೆಯಲ್ಲಿ ಇರಲಿಲ್ಲ. ಅಲ್ಲದೆ ಹೈನ ಮಾಡಿ ಬಾಯಿಕಟ್ಟಿ ಉಣ್ಣದೆ  ಗಳಿಸುವ ದೃಷ್ಟಿ ನಮ್ಮ ಮನೆಯವರಿಗೆ ಗೊತ್ತಿರಲಿಲ್ಲ. ಇದಕ್ಕಿಂತ ಮುಖ್ಯವಾಗಿ ಮನೆತುಂಬ ಆಕಳು ಇರುವಾಗ ಎಮ್ಮೆ ಚಾಕರಿ ಮಾಡುವ ಗೋಜಿಗೆ ಹೋಗಬೇಕಾದ ಅಗತ್ಯವೂ ಇರಲಿಲ್ಲವೆಂದು ಕಾಣಿಸುತ್ತದೆ. ನಮ್ಮ ಮನೆ ಆಕಳು ದನಕರು ಹೋರಿಗೆ ಪ್ರಸಿದ್ಧವಾಗಿತ್ತು. ಉಳಿದವರ ಮನೆಗಳು ಹೈನಕ್ಕೆ ಪ್ರಸಿದ್ಧವಾಗಿದ್ದವು. ಕುಂಬಾರ ಬಂದಮ್ಮ, ಗೌಡರ ತಾಯಮ್ಮ, ಬೇವಿನಗಿಡದ ದ್ಯಾಮಮ್ಮ, ರಡ್ಡೇರ ಕಿಷ್ಟಮ್ಮ, ಗುಡಿಮುಂದಿನ  ಕುಬೇರವ್ವ.. ಇವರ ಮನೆಯ ಎಮ್ಮೆ ಮತ್ತು ಹೈನದ ಬಗ್ಗೆ ಪ್ರಶಂಸೆಯ ಮಾತುಗಳು ಹರಿದಾಡುತ್ತಿದ್ದವು.

ಅಪ್ಪ ಎಮ್ಮೆ ಬಗ್ಗೆ ಕಾಳಜಿವಹಿಸುತ್ತಿರಲಿಲ್ಲ. ಆದರೂ ಹಾಲು,ಬೆಣ್ಣೆ ಮೊಸರು ಮಜ್ಜಿಗೆ ಉಣ್ಣಲು ಇಷ್ಟಪಡುತ್ತಿದ್ದ. ಪ್ರತಿನಿತ್ಯ ಮುಂಜಾನೆ ಬಿಸಿರೊಟ್ಟಿಯಲ್ಲಿ ಮೊಸರು ಬೇಕೆಬೇಕಿತ್ತು.ಬಿಸಿ ರೊಟ್ಟಿಗೆ ಜೊತೆಗೆ ಬೆಣ್ಣಿ ಖಾರ ಸವರಿ ತಿನ್ನುವುದು ಅವನ ಪ್ರೀತಿಯ ಹವ್ಯಾಸವಾಗಿತ್ತು. ಖಾರ ಬೆಣ್ಣಿ ಸವರಿ ಕೈಯಲ್ಲಿ ಹಿಚುಕಿ ಮುಟ್ಟಿಗೆ ಮಾಡಿಯೂ ತಿನ್ನುತ್ತಿದ್ದ. ವಾರಕ್ಕೊಂದೆರಡು ಸಾರೆಯಾದರೂ ಬೆಣ್ಣಿರೊಟ್ಟಿಯ ರುಚಿ ಅಪ್ಪನ ಜೊತೆ ನನಗೂ ಸಿಗುತ್ತಿತ್ತು.

No comments: