Sunday, August 25, 2013

ಹರಿವ ಹಳ್ಳದ ಬೆಡಗು-೧೦ ಅಪ್ಪನ ತಿರುಗಾಟ


ಅಪ್ಪನ ತಿರುಗಾಟ

ಅಪ್ಪ ಹತ್ತಿ ಜಿನ್ ಮಾಡಿಸಲು, ಇಲ್ಲವೆ ಜೋಳ, ಗೋದಿ ಮಾರಲು ನರಗುಂದಕ್ಕೆ ಬರುತ್ತಿದ್ದ. ಹತ್ತಿ ಜಿನ್ ಮಾಡಿಸಲು ಬಂದಾಗ ಒಂದೆರಡು ದಿನ ನರಗುಂದದಲ್ಲಿಯೇ ಉಳಿಯಬೇಕಾಗುತ್ತಿತ್ತು. ಆಗ ಅವನೊಂದಿಗೆ ನಾನೂ ಇರುತ್ತಿದ್ದೆ. ಮಾವ ಕಾಕಾ ಯಾರಾದರು ಇರುತ್ತಿದ್ದರು. ಹತ್ತಿ ಜಿನ್ ಮಾಡಿಸಿದರೆ ಮನೆಗೆ ನಾವೇ ಬೆಳೆದ ಜೈಧರ ಹತ್ತಿಕಾಳು ಬರುತ್ತವೆ, ದನಗಳಿಗೆ ಒಂದು ವರ್ಷಪೂರ್ತಿ ಸಾಕಾಗುತ್ತವೆ ಎಂಬುದು ಅಪ್ಪನ ಲೆಕ್ಕಾಚಾರ. ತನ್ನ ಎತ್ತು ಹೋರಿಗಳಿಗೆ ಬೇಕಾದ ಹುರುಳಿ, ಕುಸುಬಿ, ಶೇಂಗಾ ಹಿಂಡಿ ಎಲ್ಲವನ್ನೂ ಖರೀದಿಸುತ್ತಿದ್ದ. ಒಕ್ಕಲುತನಕ್ಕೆ ಬೇಕಾದ ಕುಡ, ರಂಟಿಮುಂಜ, ಕೊಡ್ಲಿ ಹುಡುಕಾಡಿ ಕೊಳ್ಳುತ್ತಿದ್ದ. ತನ್ನ ಬಟ್ಟೆ ಬರೆ ಬಗ್ಗೆ ಇಷ್ಟು ಕಾಳಜಿ ಮಾಡುತ್ತಿರಲಿಲ್ಲ. ಒಕ್ಕಲುತನ ಮತ್ತು ದನಗಳಿಗೆ ಬೇಕಾದ ವಸ್ತುಗಳ ಬಗ್ಗೆ ಬಹಳ ಕಾಳಜಿವಹಿಸುತ್ತಿದ್ದ. ಅತಿ ಹೆಚ್ಚೆಂದರೆ ಅಷ್ಟೊತ್ತಿಗೆ ಅಪ್ಪ ಬಳಸುವ ದುಪ್ಪಟ್ಟಿ ಹರಿದಿದ್ದರೆ ಅದನ್ನೊಂದು ತರಲು ಕಾಕಾನಿಗೆ ಹೇಳುತ್ತಿದ್ದ. ಅರಿವೆ ಅಂಗಡಿಗೆ ತಾನು ಮಾತ್ರ ಹೆಜ್ಜೆಯಿಡುತ್ತಿರಲಿಲ್ಲ. ಮನೆಗೆ ವರ್ಷದುದ್ದಕ್ಕೂ ಬೇಕಾಗುತ್ತಿದ್ದ ಉಪ್ಪು, ಚಿಮಣಿ ಎಣ್ಣೆಗಳ ವ್ಯವಸ್ಥೆಯನ್ನೂ ಮಾಡುತ್ತಿದ್ದ
ಇದು ಅಪ್ಪನ ಪ್ರವಾಸದ ಒಂದು ಕಥನ. ಇನ್ನೊಂದು ಅತಿ ಉತ್ಸಾಹದ ಪ್ರವಾಸದ ಬಗ್ಗೆ ತಪ್ಪದೇ ಇಲ್ಲಿ ಹೇಳಲೇಬೇಕು. ಅದೇನೂ ದೂರದ ಊರಲ್ಲ. ಕೇವಲ ಐದಾರು ಮೈಲು ದೂರದ ಶಲವಡಿ. ಅಲ್ಲಿ ಕಲ್ಲಕ್ಕ ಚಿಗವ್ವನ ಮನೆಗೆ ಜೋಳ ಗೋದಿ ಹೇರಿಕೊಡು, ಇಲ್ಲವೆ ಮೇವು ಹೇರಿಕೊಂಡು ಹೋಗುವುದೆಂದರೆ ಅಪ್ಪನಿಗೆ ಎಲ್ಲಿಲ್ಲದ ಉಮೇದಿ. ಎಂದೂ ಮುಂಜಾನೆ ಜಳಕ ಮಾಡದ ಅಪ್ಪ ಅಂದು  ತನ್ನ ಹೊಟ್ಟು ಮೇವು ತರುವ ಕೆಲಸಮುಗಿಸಿ ಬೇಗನೇ ಜಳಕ ಮಾಡುತ್ತಿದ್ದ. ತನ್ನ ಏಕಮೇವ ಅದ್ವೀತಿಯವಾದ  ಮಂಜರಪಾಟ್ ಅಂಗಿ, ದಪ್ಪನ್ನ ಧೋತ್ರ, ಮೇಲೆ ಸಾದಾ ಪಟಗ ಸುತ್ತಿ ಚಕ್ಕಡಿ ಮೂಕದಲ್ಲಿ ಕೂತು ಹೊರಟುಬಿಡುತ್ತಿದ್ದ. ಶಾಲೆ ಸೂಟಿ ಇದ್ದರೆ ನಾನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಹೀಗೆ ಸಂಭ್ರಮದಿಂದ ಹೊರಟ ಅಪ್ಪನನ್ನು ನೋಡಿದವರು - "ಅಲಲ.. ಶಿವನಗೌಡ್ರ ಸವಾರಿ ಹೊಂಟತೆಲ್ಲ" ಎಂದು ನಗಾಡುತ್ತಿದ್ದರು. ಅಪರೂಪದ ಅಪ್ಪನ ಪ್ರವಾಸಕ್ಕೆ ಪ್ರತಿಕ್ರಿಯಿಸುತ್ತಿದ್ದರು.
ಶಲವಡಿ ಮುಟ್ಟಿ ಚಕ್ಕಡಿ ಕೊಳ್ಳ ಹರಿದು ಎತ್ತುಗಳನ್ನು ಒಳಗೆ ಕಟ್ಟಿ ಬರುತ್ತಿದ್ದ. ಛಾವನಿಯಲ್ಲಿಯೇ ಕುಳಿತ ಶಿವರಾಯಪ್ಪಜ್ಜ ಮತ್ತು ವೀರಪ್ಪಜ್ಜನ ಜೂತೆ ಮಳೆ ಬೆಳೆ ಬಗ್ಗೆ ಮಾತಾಡುತ್ತಿದ್ದ. ಮಗ್ಧತನ ಮತ್ತು ಗೌರವದೊಂದಿಗೆ ಅಪ್ಪ ಮಾತಾಡುತ್ತಿದ್ದುದಕ್ಕೆ ಅವರೂ ಅಷ್ಟೆ ಪ್ರೀತಿಯಿಂದ ಉತ್ತರಿಸುತ್ತಿದ್ದರು. ನನಗಂತೂ ಇಬ್ಬರೂ ಅಜ್ಜಂದಿರನ್ನು ಕಂಡರೆ ಕುತೂಹಲ ಹುಟ್ಟುತ್ತಿತ್ತು. ಅವರು ಧರಿಸಿದ ವಿಭೂತಿ, ತೊಟ್ಟ ವೇಷ , ಕುಳಿತ ಭಂಗಿ ಎಲ್ಲವೂ ನನಗೆ ಹೊಸತೆನಿಸುತ್ತಿತ್ತುಒಮ್ಮೊಮ್ಮೆ ಶಿವರಾಯಪ್ಪ ಅಜ್ಜ ಚದುರಂಗ ಆಡುವದನ್ನು ನೋಡುತ್ತ ಕುಳಿತುಬಿಡುತ್ತಿದ್ದೆ.
ಒಳಗೆ ಹೋಗಿ ಕೈಕಾಲು ಮುಖ ತೊಳೆದು ಕೂತ ಮೇಲೆ ಚಿಗವ್ವ ಕಲ್ಲಕ್ಕ ಅಡಿಗೆ ಮಾಡುತ್ತ ಎಲ್ಲ ಸಮಾಚಾರ ಕೇಳುತ್ತಿದ್ದಳು. ಅಪ್ಪ ಚಿಗವ್ವನ ಮುಂದೆ ಮುಕ್ತವಾಗಿ ಸಲಿಗೆಯಿಂದ ಮಾತಾಡುತ್ತಿದ್ದ. ಚಿಗವ್ವ  ತಪ್ಪದೇ ವಿಶೇಷ ಅಡಿಗೆ ಮಾಡಿ ಊಟಕ್ಕೆ ಕೊಡುತ್ತಿದ್ದಳು. ನನಗಂತೂ ಸಕ್ಕರಿ ಸಜ್ಜಕ (ಸಿರಾ) ಮೇಲೆ ವಿಪರೀತ ಆಸೆ. ಕಡದಳ್ಳಿಯಲ್ಲಿ ಬೆಲ್ಲದ ಸಜ್ಜಕ ಉಂಡ ನನಗೆ ಬಿಳಿ ಬಣ್ಣದ ಸಿರಾ ಕಂಡಕೂಡಲೇ ಬಾಯಲ್ಲಿ ನೀರೂರುತ್ತಿತ್ತು. ಅಪ್ಪ ಅರಾಮಾಗಿ ಕೂತು ಊಟ ಮಾಡುತ್ತಿದ್ದ. ಶಲವಡಿಯಲ್ಲಿ ಕೆಸದ ಒತ್ತಡವಿರುತ್ತಿರಲಿಲ್ಲ.
ಹಬ್ಬ ಜಾತ್ರೆ ಮದುವೆ ಸಂದರ್ಭಗಳಲ್ಲಿ ಚಿಗವ್ವ ಕಲ್ಲಕ್ಕನನ್ನು ಕರೆತರಲು ಹೊರಟರೆ ಕಡ್ಡಾಯವಾಗಿ ಚಕ್ಕಡಿಗೆ ಕೊಲ್ಹಾರಿ ಕಟ್ಟುತ್ತಿದ್ದ. ಮೊದಲು ಬರ್ಕ (ಗೋಣಿ ದಾರದಿಂದ ಹೆಣೆದ, ಚಕ್ಕಡಿಗೆ ಹೊಂದಿಕೆಯಾಗುವ ಸಾಧನ.)   ಕಟ್ಟಿ ಗಾದಿ ಇಲ್ಲವೆ ಗುಡಾರ ಮಡಿಚಿ ಹಾಸಿ ಮೆತ್ತಗಾಗುವಂತೆ ವ್ಯವಸ್ಥೆ ಮಾಡುತ್ತಿದ್ದ. ಬರ್ಕ ಚಕ್ಕಡಿ ಪ್ರಯಾಣಕ್ಕೆ ಅನುಕೂಲವೂ ಹೌದು, ಅಲಂಕಾರವೂ ಹೌದು. ಅಪ್ಪ ಅತಿ ಉತ್ಸಾಹದಿಂದ ಶಲವಡಿಗೆ ಹೋಗುವಾಗ ಒಂದೊಂದು ಸಾರೆ ನಾನೂ ಹೊಗುತ್ತಿದ್ದೆ. ಹೀಗೆ ಶಲವಡಿಗೆ ಹೋಗಬೇಕಾದ ಕೆಲಸವನ್ನು ಸಾಧ್ಯವಾದಷ್ಟು ಸೋಮವಾರವೇ ಇಟ್ಟುಕೊಳ್ಳುತ್ತಿದ್ದ. ಏಕೆಂದರೆ ಅಂದು ಎತ್ತುಗಳಿಗೆ ಹೊಲದ ಕೆಲಸಕ್ಕೆ ಬಿಡುವು ಇರುತ್ತಿತ್ತು. ಸೋಮವಾರ ದಿನ ಗಳೆ ಹೂಡುತ್ತಿರಲಿಲ್ಲ. ಆದರೆ ಚಕ್ಕಡಿ ಹೂಡುತ್ತಿದ್ದರು. ಅದು ಕೃಷಿ ಕೆಲಸಕ್ಕಲ್ಲ. ಹೀಗಿದ್ದರೂ ಹೂಡುವ ಮುನ್ನ ಚಕ್ಕಡಿ ಪೂಜೆ ಮಾಡಿ ಹೊರಟು ಬಿಡುತ್ತಿದ್ದ. ಅಪ್ಪನ ಬಗ್ಗೆ ಗುರುಶಾಂತಪ್ಪ ಕಾಕಾನಿಗೂ ಪ್ರೀತಿ ಗೌರವವಿತ್ತು. ಆದರೆ ಇಬ್ಬರ ನಡುವೆ ಮಾತುಕತೆ ತೀರಾ ಕಡಿಮೆ. ಚಕ್ಕಡಿ ಹಳಿ ಬಿಗಿಸಲು ಸಹ ಅಪ್ಪ ಶಲವಡಿಗೇ ಹೋಗುತ್ತಿದ್ದ. ನರಗುಂದ ಕಮ್ಮಾರರ ಕೆಲಸ ಅಪ್ಪನ ಮನಸ್ಸಿಗೆ ಹಿಡಿಸುತ್ತಿರಲಿಲ್ಲ. ಊರವರೆಲ್ಲ ನರಗುಂದಕ್ಕೆ ಹೋದರೆ ಅಪ್ಪ ಮತ್ತು ಸಣ್ಣ ರುದ್ರಗೌಡ ಮಾವ ಇವರು ಕಡ್ಡಾಯವಾಗಿ ಶಲವಡಿಗೆ ಹೋಗುತ್ತಿದ್ದರು.

No comments: