Sunday, August 25, 2013

ಹರಿವ ಹಳ್ಳದ ಬೆಡಗು-೧೧ ಕಲ್ನಾರು - ಹಿಡಿ ಹಗ್ಗ


ಕಲ್ನಾರು - ಹೊಟ್ಟಿಹಗ್ಗ

ಬೇಸಿಗೆಯಂತಹ ಬೇಸಿಗೆಯಲ್ಲಿ ಅಪ್ಪ ಖಾಲಿ ಕೂಡುತ್ತಿರಲಿಲ್ಲ. ಓಣಿಯವರೆಲ್ಲ ಮಧ್ಯಾಹ್ನ ತಂಪಾಗಿರುತ್ತಿದ್ದ ಹನಮಂತ ದೇವರ ಗುಡಿಯಲ್ಲಿ ಕೂತು ಮಲಗಿ ಕಾಲಹರಣ ಮಾಡುತ್ತಿದ್ದರು. ಇಲ್ಲವೆ ಹರಟೆ ಹೊಡೆಯುತ್ತಿದ್ದರು. ಅಪ್ಪ ಮಾತ್ರ ಹಗ್ಗ ತಯಾರಿಸಲು ಬೇಕಾದ ಹುರಿಯನ್ನು ಸಿದ್ಧಮಾಡುತ್ತ ಕೂಡುತ್ತಿದ್ದ. ಮಗ್ಗುಲಲ್ಲಿ ಕುಳಿತವರು ಪಾಚಿ ತೆಗೆದುಕೊಡುತ್ತಿದ್ದರು. ಒಂದು ಎರಡು ಅಡಿ ಉದ್ದದ ಬಿದಿರಿನ ಕೋಲಿಗೆ ಆಚೆ ಈಚೆ ಚಿಕ್ಕ ಬೆಣೆ ಸಿಗಿಸಿ ಹುರಿ ಸುತ್ತುತ್ತಿದ್ದ. ಅದರ ಹೆಣಿಕೆ ಬಹಳ ವಿಶೇಷವಾಗಿರುತ್ತಿತ್ತು. ಅದರ ಅಕೃತಿ ರೈತರ ಕೌಶಲ್ಯಕ್ಕೆ ಸಾಕ್ಷಿಯಾಗಿತ್ತು. ನಾನಂತೂ ಹಾಗೆ ಸುತ್ತುವ ರೀತಿಗೆ ಬೆರಗಾಗಿದ್ದೆ. ಹೊಸೆದ ನಾರಿನಿಂದ ಹೆಣಿಕೆ ಹಾಕಿದ ಚೆಂಡನ್ನು ಸಿದ್ಧ ಮಾಡುತ್ತಿದ್ದ ಕುಂಬಾರ ವೀರಪ್ಪಜ್ಜನ ಕಲೆಯಂತೂ ಅದ್ಭುತವಾಗಿತ್ತು. ಅರಿವೆ ಚಂಡನ್ನು ಮತ್ತು ನಾನೇ ಹೊಸೆದ ದಾರವನ್ನು ಒಯ್ದು ಕೊಟ್ಟರೆ ಮೂರ್ನಾಲ್ಕು ದಿನದಲ್ಲಿ ಹೆಣೆದುಬಿಡುತ್ತಿದ್ದ. ಕಲ್ಲಪ್ಪಜ್ಜ ( ಕಲ್ಮೇಶ್ವರ ಗುಡಿ) ಗುಡಿ ಕಟ್ಟಿಗೆ ಕೂತು ಹೆಣೆಯುವುದನ್ನು ಬಿಡುಗಣ್ಣಿನಿಂದ ನೋಡುತ್ತಿದ್ದೆ. ಅನಂತರ ನಾನೂ ಪ್ರಯತ್ನಿಸುತ್ತಿದ್ದೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ನನಗೆ ಹೆಣಿಕೆ ಬರಲೇ ಇಲ್ಲ.

ನಾಲ್ಕಾರು ಹೊಟ್ಟಿ ಹಗ್ಗ, ಏಳೆಂಟು ಹಿಡಿಯಗ್ಗ ತಯಾರಿಸುವಷ್ಟು ಹುರಿ ಸಿದ್ಧವಾದ ಮೇಲೆ, ಮಸೂತಿ ಮುಂದೆ ಹಗ್ಗ ತಯಾರಿಸಲೆಂದೆ ಬಡಿಗೇರ ನಾಗಪ್ಪಜ್ಜ ನೆಟ್ಟು ಸಿದ್ಧಮಾಡಿದ ಕಟ್ಟಿಗೆ ಸಾಧನ ಬಳಸಿ ಹಗ್ಗಗಳನ್ನು ಸಿದ್ಧಮಡಿಕೊಳ್ಳುತ್ತಿದ್ದರು. ಕಟ್ಟಿಗೆಯ ಹಲಗೆಯಲ್ಲಿ ಮೂರು ರಂದ್ರಗಳಿರುತ್ತಿದ್ದವು. ಅವುಗಳಿಗೆ ಹೊಂದಿಕೆಯಾಗುವ ಡೊಂಕಾದ, ಹಗ್ಗಕ್ಕೆ ಹುರಿ ಹಾಕುವ ಕೋಲುಗಳಿರುತ್ತಿದ್ದವು. ಹುರಿ ಹಾಕಿದ ಮೇಲೆ ಮುಂದೆ ಕೂಡಿಕೊಂಡಿರುವ ಹಿಂದಿನ ಭಾಗದಲ್ಲಿ ಅಗಲವಾಗಿರುವ ವಿಶಿಷ್ಟ ಸಾಧನವಿರುತ್ತಿತ್ತು. ಅದು ಹಗ್ಗವನ್ನು ರೂಪಿಸುವ ಮುಖ್ಯಸಾಧನ. ಪಿಂಜಾರ ಹುಚ್ಚಪ್ಪ  ಇಲ್ಲವೆ ಕರಿಕಟ್ಟಿ ನಿಂಗಪ್ಪ ಇವರು ಹಗ್ಗ ಮಾಡುವ ಕಲೆಯಲ್ಲಿ ಪರಿಣಿತರು. ಅವರನ್ನು ಕರೆತಂದು ಹಗ್ಗ ತಯಾರಿಸುವಾಗ ನಾವು ಹುಡುಗರು ನಡು ನಡುವೆ ನಿಂತು ಬೆರಳ ಸಂದಿಯಲ್ಲಿ ಹಗ್ಗದ ಹುರಿಯನ್ನು ನೆಲಕ್ಕಂಟದಂತೆ ಹಿಡಿಯುತ್ತಿದ್ದೆವುಗುದ್ದಿಹಗ್ಗದ್ದಾಗಲಿ, ಹಿಡಿಹಗ್ಗದ್ದಾಗಲಿ, ಹೊಟ್ಟೆಹಗ್ಗದ್ದಾಗಲಿ, ಉಡದಾರ ಹಗ್ಗದ್ದಾಗಲಿ ಚಿಪ್ಪು ಕಟ್ಟುವುದು ಜಾಣ್ಮೆಯ ಕೆಲಸ ಅದನ್ನು ಪರಿಣಿತರೇ ಮಾಡುತ್ತಿದ್ದರು.

ಹಗ್ಗ ಮಾಡಲೆಂದೆ ಕಬ್ಬಿನಯಂತ್ರ ಹೊತ್ತು ಊರೂರು ಅಲೆಯುತ್ತ  ಬರುವ ಕೊರಸರು ಇದ್ದರು. ಅವರು ವರ್ಷ ಎರಡು ವರ್ಷಕ್ಕೊಮ್ಮೆ  ಕಡದಳ್ಳಿಗೂ ಬರುತ್ತಿದ್ದರು. ಅವರೆ ಹುರಿ ತಯಾರಿಸಿ ಅವರೆ ಹಗ್ಗ ಮಾಡಿ ಕೊಡುತ್ತಿದ್ದರು. ಊರವರೆಲ್ಲ ಅವರ ಹತ್ತಿರ ಮಾಡಿಸುತ್ತಿದ್ದರು. ಒಮ್ಮೊಮ್ಮೆ ಅಪ್ಪನೂ ಮಾಡಿಸುತ್ತಿದ್ದ. ಆದರೆ ಅವರು ಮಾಡಿದ ಹಗ್ಗ ತಾಳಿಕೆ ಬಾಳಿಕೆ ಬರುವುದಿಲ್ಲ ಎಂಬುದು ಅಪ್ಪನ ಅಭಿಪ್ರಾಯ. ಅದು ನಿಜವೂ ಹೌದು.

ಮನೆಯಲ್ಲಿ ಹಗ್ಗ ಹಾಕಲೆಂದೇ ಪಡಸಾಲಿ ಮತ್ತು ಗ್ವಾದಲಿ ಹುಸಿ ಅಂಕಣದ ನಡುವೆ ಬಿದಿರನ್ನು ಕಟ್ಟಿದ್ದ. ಬಿದಿರಿಗೆ ಎಲ್ಲ ಹಗ್ಗಗಳನ್ನು ಕ್ರಮಾನುಸಾರ ಜೋತುಬಿಡುತ್ತಿದ್ದ. ಆಗಾಗ ಬಳಕೆಗೆ ಬರುವ ಹಗ್ಗಗಳು ಕೈಹಾಕಿದ ತಕ್ಷಣವೆ ಸಿಗುವಂತೆ ಜೋಡಿಸುಡುತ್ತಿದ್ದ. ಮನೆಯಲ್ಲಿ ಕಡಿಮೆಯೆಂದರೆ ಮೂವತ್ತು  ನಾಲ್ವತ್ತು ಹಗ್ಗಗಳಿರುತ್ತಿದ್ದವು. ಗೋದಿ ಹುಲ್ಲು ಹೇರುವಾಗ ಬಳಸುವ ಹಗ್ಗಗಳೆ ಬೇರೆ, ಮೇವು ಹೇರುವಾಗ ಬಳಸುವ ಹಗ್ಗಗಳೆ ಬೇರೆ. ಬಿಳಿಗೋದಿ, ಕೆಂಪಗೋದಿ ಮತ್ತು ಬಿಜಗಾ ಗೋದಿ ಹುಲ್ಲನ್ನು ಕೂಡದಂತೆ ಬೇರೆ ಬೇರೆಯಾಗಿಯೇ ತರಬೇಕಾಗುತ್ತಿತ್ತು. ಬೇರೆ ಬೇರೆಯಾಗಿಯೇ ಕಣದಲ್ಲಿ ಕೂಡಿಹಾಕಬೇಕಾಗುತ್ತಿತ್ತು. ಆಗ ಹೆಚ್ಚಿನ ಹಗ್ಗಗಳು ಬೇಕಾಗುತ್ತಿದ್ದವು. ಅದಕ್ಕೆಲ್ಲ ಅಪ್ಪ ಸರಿಯಾದ ತಯಾರಿ ಮಾಡಿರುತ್ತಿದ್ದ.

ಚಕ್ಕಡಿಯಲ್ಲಿ ಒಂದು ಹೊರೆ ಮೇವು, ಒಂದೆರಡು ಚೀಲ ಹೊಟ್ಟು, ಎರಡು ಮೂರು ದಿನದ ಬುತ್ತಿ, ಕೊಡ ಮತ್ತು ತತ್ರಾಣಿಯಲ್ಲಿ ನೀರು ತುಂಬಿಕೊಂಡು ರಾತ್ರಿ ಹೊರಟರೆಂದರೆ ಹಗ್ಗಕ್ಕೆ ಬೇಕಾದ ಕಲ್ನಾರು ತರಲು ಹೊರಟಾರೆಂದೇ ಅರ್ಥ. ಚಕ್ಕಡಿಯನ್ನು ಹೆರೆದು ಉದ್ದಗಿಗೆ ಲಾಟೀನು ಕಟ್ಟಿ, ನಾಯಿಯನ್ನು ಜೊತೆ ಮಾಡಿಕೊಂಡು ಹೊರಟುಬಿಡುತ್ತಿದ್ದರು. ದೂರದ ಅಡವಿಗೆ ಹೋಗಿ ಕಲ್ನಾರು ತರಬೇಕಾಗಿದ್ದರಿಂದ ಜೋಡಿಯಾಗಿ ಹೊಗುತ್ತಿದ್ದರು. ಎತ್ತಿಗೆ ಗೆಜ್ಜಿಸರ ಹಾಕಿ, ದೊಡ್ಡ ಸದ್ದು ಮಾಡುವ ಗುಮರಿ ಗೆಜ್ಜೆಸರವನ್ನು ಕಟ್ಟಿ ಗಿಲ್ ಗಿಲ್ ಎಂದು ಮಧ್ಯರಾತ್ರಿಯಲ್ಲಿ ನಡೆದುಬಿಡುತ್ತಿದ್ದರು. ಹಿಂದಿನ ದಿನವೇ ಅಪ್ಪ ದೊಡ್ಡ ದೊಡ್ಡ ಕುಡಗೋಲುಗಳನ್ನು ಮಸೆದು ಹರಿತು ಮಾಡಿರುತ್ತಿದ್ದ. ಹರಿತು ಮಾಡುವ ಕೆಲಸದಲ್ಲಿ ನಾನೂ ಭಾಗಿಯಾಗುತ್ತಿದ್ದೆ. ಚಿಕ್ಕ ಕುಡಗೋಲನ್ನು ಮಸೆಗಲ್ಲಿಗೆ ತಿಕ್ಕಿ ಸಜ್ಜುಗೊಳಿಸುತ್ತಿದ್ದೆ.

ಶಲವಡಿ ದಾಟಿ ದಾಟನಾಳ ಲಿಂಗಧಾಳದ ಹತ್ತಿರ ಕಲ್ನಾರಿನ ಪೊದೆಗಳಿದ್ದವು. ಕೆಲವೊಮ್ಮೆ ಹೊಲದವರಿಗೆ ಗೊತ್ತಿಲ್ಲದಂತೆ ಕೊಯ್ದು ತರುತ್ತಿದ್ದರು. ಇನ್ನೂ ಕೆಲವು ಸಲ ಅವರಿಗೂ ಕೊಯ್ದು ಕೊಟ್ಟು ತಮಗೆ ಬೇಕಾದಷ್ಟು ತರುತ್ತಿದ್ದರು. ಒಮ್ಮೆಯಾದರೂ ಕಲ್ನಾರು ತರಲು ಹೋಗಬೇಕು ಎಂಬ ಆಸೆಯಾಗುತ್ತಿತ್ತು. ಆದರೆ ಅಪ್ಪನಾಗಲಿ, ಅಮ್ಮನಾಗಲಿ ಅವಕಾಶ ಕೊಡುವುದಿಲ್ಲವೆಂದು ಗೊತ್ತಿದ್ದರಿಂದ ಮಾತಿನಲ್ಲಿಯೇ ಹೋಗಿ ಬಂದ ಅನುಭವ ಪಡೆಯುತ್ತಿದ್ದೆ.

ದೂರದ ಪ್ರಯಾಣವಾದ್ದರಿಂದ ಚಕ್ಕಡಿ ಗಾಲಿಗಳನ್ನು ಹೆರೆ ಎಣ್ಣಿಯಿಂದ ಹೆರೆದು, ಕಳಗಕ್ಕೆ ಕಟ್ಟಿದ ಗೋಣಿ ಚೀಲದಲ್ಲಿ ತತ್ರಾಣಿಯನ್ನು ಧಕ್ಕೆಯಾಗದಂತೆ ಜೋತುಬಿಟ್ಟು, ಲಾಟೀನಿನ ಹರಳು ಒಡೆಯದಂತೆ ಉದ್ದಗಿಗೆ ಕಟ್ಟಿ, ದಾರಿಯಲ್ಲಿ ಬರುವ ಹುಳ ಹುಪ್ಪಡಿ ದೂರಾಗುವಂತೆ ಎತ್ತಿನ ಕೊರಳಲ್ಲಿ ಗೆಜ್ಜಿ ಸರ ಹಾಕಿ ಪ್ರಯಾಣ ಹೊರಡುವ ರೈತರ ಜಾಣ್ಮೆಯನ್ನು ಎಂಥವರೂ ಮೆಚ್ಚಬೇಕು.   
ಎರಡು ಮೂರು ದಿನಗಳಲ್ಲಿ ರಾತ್ರೊ ರಾತ್ರಿ ಕಲ್ನಾರು ತುಂಬಿತಂದ ಚಕ್ಕಡಿಗಳು ಹಿತ್ತಲ ಹತ್ತಿರ ನಿಂತಿರುತ್ತಿದ್ದವು. ಅದನ್ನು ನೋಡಿದ ಕೂಡಲೇ ಮುಂದಿನ ಕಾರ್ಯವನ್ನು ಕಲ್ಪಿಸಿಕೊಳ್ಳೂತ್ತಿದ್ದೆ. ಕಲ್ನಾರು ಎಲೆಯ ದಂಡಿಯಲ್ಲಿರುವ ಮುಳ್ಳನ್ನು ಮೊದಲು ಸವರುವುದು. ಅನಂತರ ಎಲೆಯನ್ನು ಅರ್ಧ ಇಂಚಿನ ಗಾತ್ರದಲ್ಲಿ ಕುಡಗೋಲಿನಿಂದ ಸೀಳುವುದು. ಹಾಗೆ ಸೀಳಿದ ಎಲೆಗಳ ಪೆಂಡಿಮಾಡಿ ಚಕ್ಕಡಿಯಲ್ಲಿ ಹೊಂದಿಸುವುದು. ಬೆಣ್ಣಿಹಳ್ಳದಲ್ಲಿ ಆಯಕಟ್ಟಿನ ಜಾಗದಲ್ಲಿ ಗೂಟ ನಿಲ್ಲಿಸಿ ಅಲ್ಲಿ ಹದಿನೈದು ಇಪ್ಪತ್ತು ದಿನಗಳವರೆಗೆ ನೆನೆಹಾಕುವುದು. ನೆನೆದ ಅನಂತರ ಕಟ್ಟಿಗೆ ಸಾಧನದಿಂದ ಜಜ್ಜಿ ನಾರನ್ನು ಬಿಡಿಸಿ ಬಿಸಿಲಲ್ಲಿ ಒಣಹಾಕುವುದು. ಒಣಗಿದ ನಾರನ್ನು ಮೂರು ಇಲ್ಲವೆ ನಾಲ್ಕು ಎಳೆ ಜಡೆಯನ್ನಾಗಿ ಹೆಣೆಯುವುದು. ಹೀಗೆ ಹೆಣೆದ ಲಡಿಗಳನ್ನು ಗೋಣಿ ಚೀಲದಲ್ಲಿ ಕಾದಿಡುವುದು ರೈತರ ಕೆಲಸ.
ಕಲ್ನಾರಿನ ಮುಳ್ಳು ಸವರುವ, ಸೀಳುವ ಕೆಲಸದಲ್ಲಿ ನನ್ನನ್ನು ಕರೆದುಕೊಳ್ಳುತ್ತಿದ್ದರುಉಳಿದ ಕೆಲಸ  ಬರುತ್ತಿರಲಿಲ್ಲವೆಂದು ನಾನೆ ದೂರ ಉಳಿಯುತ್ತಿದ್ದೆ. ಕಲ್ನಾರಿನ ವಾಸನೆಯ ಘಾಟು ತೀಕ್ಷ್ಣವಾದದ್ದು. ನೆನೆದ, ಕೊಳೆತ ಎಲೆಗಳಿಂದ ನಾರನ್ನು ಬಿಡಿಸುವ ಕೆಲಸ ಕಷ್ಟದ್ದು. ನಾರು ನೆನೆಹಾಕಿದಾಗ ಇಡೀ ಹಳ್ಳಕ್ಕೆ ಹಳ್ಳವೇ ಹೊಲಸು ನಾರುತ್ತಿತ್ತು. ಹರಿವ ನೀರಾದ್ದರಿಂದ ಹೊಲಸು ಹರಿದು ಹೋಗುತ್ತಿತ್ತು.

No comments: