Sunday, August 25, 2013

ಹರಿವ ಹಳ್ಳದ ಬೆಡಗು..೬ ಅಷ್ಟಮಿ ಆಚರಣೆ - ಗಿಣ್ಣದ ವಡೆ


ಅಷ್ಟಮಿ ಆಚರಣೆ- ಗಿಣ್ಣದ ವಡೆ

ಎತ್ತು, ಹೋರಿ ಮತ್ತು ಮನುಷ್ಯ ಸಂಬಂಧ ಅನನ್ಯವಾಗಿತ್ತು. 'ನೀನು ಕೆಂದ ಹೋರಿ ವಾರಿಗೆಯವ' 'ಅಣ್ಣ ಎತ್ತಿನ ವಾರಿಗೆಯವ' ಎಂದು ಎತ್ತು ಮತ್ತು ಮನುಷ್ಯ ಸಂಬಂಧವನ್ನು ಸಮನ್ವಯಗೊಳಿಸುತ್ತಿದ್ದರು. ಯಾವುದೊ ಕಾಲದಲ್ಲಿ ಮನೆಯವರೊಬ್ಬರ ಸಾವಿನಿಂದಾಗಿ ನಿಂತುಹೋದ ಅಷ್ಟಮಿ ಹಬ್ಬದ ಆಚರಣೆ ಒಂದೂವರೆ ದಿನಕ್ಕೆ ಸೀಮಿತಗೊಂಡಿತ್ತು. ಒಂದು ವರ್ ಆಚರಣೆಯ ಸಂದರ್ಭದಲ್ಲಿ ಒಂದೂವರೆ ದಿನ ಮುಕ್ತಾಯವಾಗುವ ಸಮಯಕ್ಕೆ  ಸರಿಯಾಗಿ ನಮ್ಮ ಗೌರಿ ಆಕಳು ಹೋರಿಯನ್ನು ಈಯ್ದಿತ್ತು. ಅಂದಿನಿಂದ ಮತ್ತೆ ನಮ್ಮ ಮನೆಯಲ್ಲಿ ಅಷ್ಟಮಿಯನ್ನು ಮೂರು ದಿನ ಆಚರಿಸಲು ತೊಡಗಿದ್ದಾರೆ. ಇದು ಎತ್ತು ಮತ್ತು ಮನುಷ್ಯರ ಸಂಬಂಧದ ಅನನ್ಯತೆಗೆ ನಿದರ್ಶನ. ಅಪ್ಪ ಹೋರಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಕೆಂದ ಮಾಸಬಣ್ಣದ ಹೋರಿಗೆ 'ಗಿಡ್ಡ' ಎಂದು ಹೆಸರಿಟ್ಟಿದ್ದೆವು.

ಆಕಳು ಕಟ್ಟಿದ (ಗರ್ಭಧರಿಸಿದ) ಸಂದರ್ಭದಿಂದ ಹಿಡಿದು ಅದು ಕರುಹಾಕುವ ವರೆಗಿನ ಎಲ್ಲ ಸನ್ನಿವೇಶಗಳು ನಮ್ಮೆದುರಿನಲ್ಲಿಯೇ ನಡೆಯುತ್ತಿದ್ದವು. ಕರು ಹುಟ್ಟಿದ ತಕ್ಷಣ ಅದು ಹೋರಿಯಾಗಿದ್ದರೆ ಅದರ ಇಣಿ ದೊಡ್ಡದಾಗಲಿ ಎಂದು ರೂಪಾಯಿ ನಾಣ್ಯವನ್ನು ಆಚೀಚೆ ಇಟ್ಟು ಬಾಯಿಂದ ಹಿಡಿದು ಎತ್ತುವ ರೀತಿ ಪವಾಡವೆನಿಸುತ್ತಿತ್ತು. ಇದಕ್ಕಿಂತ ಸೋಜಿಗವೆಂದರೆ ಈಯ್ದ ಮರುಗಳಿಗೆಯಲ್ಲಿ ಆಕಳು ಅಯಾಸವಿಲ್ಲದೆ ಕರುವಿನ ಮೈಯನ್ನು ನೆಕ್ಕುವುದುಹುಟ್ಟಿದ ಗಳಿಗೆ ಯಿಂದಲೇ ಕರು ತಾಯಿಯ ಮೊಲೆ ಹುಡುಕುವುದು, ಇನ್ನೊಂದು ಗಳಿಗೆಯಲ್ಲಿ ಹಕ್ಕಿ ತುಂಬ ಓಡಾಡುವುದು, ನಮ್ಮ ಮೈಮೇಲೆಯೆ ಬರುವುದು ಒಂದಕ್ಕಿಂತ ಒಂದು ಮಜ ನೀಡುತ್ತಿದ್ದವು. ಆಕಳು ಕರು ಹಾಕಿದಾಗ ಹಕ್ಕಿ ಜೀವಂತಿಕೆಯಿಂದ ನಳನಳಿಸುತ್ತಿತ್ತು. ನಮ್ಮಲ್ಲೂ ಉತ್ಸಾಹತುಂಬುತ್ತಿತ್ತು. ಅಪ್ಪ ಆಕಳು ಈಯುವ ಸೂಚನೆಯನ್ನು ಮನಗಂಡು, ಹಕ್ಕಿ ಸ್ವಚ್ಛಮಾಡಿ ಆಕಳನ್ನು ಈಯ್ಸಿಕೊಂಡು ಕರದ ಉಪಚಾರ ಮಾಡಿಅದರ ಮಾಂಸವನ್ನು ತಿಪ್ಪೆಯಲ್ಲಿ ಹುಗಿದು ಬರುವವರೆಗೂ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದ. ಹೋರಿ ಕರವಾಗಿದ್ದರೆ ಕಾಳಜಿ ವರ್ಷದ ವರೆಗೂ ಮುಂದುವರೆಯುತ್ತಿತ್ತು. ಹೆಣ್ಗರುವಾಗಿದ್ದರೆ ಹೋರಿಕರಕ್ಕೆ ಕಾಳಜಿ ಮಾಡುವಷ್ಟು ಮಾಡುತ್ತಿರಲಿಲ್ಲ. ಕಾರಣ ಭೂತಾಯಿ ಸೇವೆ ಮಾಡುವುದಕ್ಕೆ ಗಟ್ಟಿಯಾಗಲಿ ಎಂಬ ಆಸೆ.

ಅಮ್ಮ ಚರಿಗೆ ಹಿಡಿದು ಹಕ್ಕಿಗೆ ಇಳಿದು ಕರು ಬಿಟ್ಟು ಕರುವಿಗೆ ಕುಡಿಸಿ ಮೀಸಲು ಹಾಲನ್ನು ಹಿಂಡಿ ತೆಗೆದಿಟ್ಟು, ಮತ್ತೊಂದು ಚರಿಗೆಯಲ್ಲಿ ಹಾಲನ್ನು ಹಿಂಡಿ ಮನೆ ಮನೆಗೆ ಕಳಿಸುತ್ತಿದ್ದಳು. ಮೊದಲು ಹಿಂಡಿದ ಮೀಸಲು ಹಾಲನ್ನು ಊರಿನ  ದ್ಯಾಮವ್ವ, ಬೋರಗಲ್ಲು, ಭರಮಪ್ಪ, ಹನಮಪ್ಪ ಕಲ್ಮೇಶ್ವರ ಗುಡಿಗೆ ಹೊಯ್ದು ಬರಲು ಕಳಿಸುತ್ತಿದ್ದಳು. ಹೊಯ್ದು ಬರಲು  ಹೋದ ನನಗೆ ದೇವರ ಮೇಲಿನ ಭಕ್ತಿಗಿಂತ ಯಾವಾಗ ಗಿಣ್ಣ ಮಾಡುತ್ತಾರೊ, ಯಾವಾಗ ತಿಂದೇನೊ ಎಂಬ  ಆತುರವೇ ತುಂಬಿರುತ್ತಿತ್ತು. ಹೀಗಾಗಿ ತಡಮಾಡದೆ ಮನೆಗೆ ಬರುತ್ತಿದ್ದೆ. ಅಮ್ಮನ ಜೊತೆ ಕೂತು ಗಿಣ್ಣ ಮಾಡುವುದನ್ನು ನೋಡುತ್ತಿದ್ದೆ. ಆಕಳು ಈಯ್ದ ಮೊದಲ ದಿನ ಹಾಲು ಗಟ್ಟಿ ಇರುತ್ತಿದ್ದರಿಂದ ಗಿಣ್ಣದ ವಡೆ ಮಾಡುತ್ತಿದ್ದರು. ಅಮ್ಮ ಅತ್ತ ಕಡೆ ವಡೇ ಮಾಡುತ್ತಿದ್ದರೆ ಅಕ್ಕ ಉಣ್ಣುವ ಮೊದಲು ತಿನ್ನಬೇಕಾದ ಬೆಳ್ಳೊಳ್ಳಿ ಸುಲಿದು ಸಿದ್ಧ ಮಾಡಲು ತೊಡಗುತ್ತಿದ್ದಳು. ನನಗೆ ಬೇಕಾದ ಬೆಳ್ಳೊಳ್ಳಿಯನ್ನು ನಾನೇ ಸುಲಿದಿಟ್ಟುಕೊಂಡು ಉಣ್ಣುವ ತಯಾರಿಲ್ಲಿರುತ್ತಿದ್ದೆ. ಅಷ್ಟೊತ್ತಿಗೆ ಅಪ್ಪನೂ ಬಂದು ಊಟಕ್ಕೆ ಕೂಡುತ್ತಿದ್ದ. ಗಿಣ್ಣ ಉಣ್ಣಲು ಸಿದ್ಧವಾಗಿಯೆ ಬಂದಾನೆನ್ನುವಂತೆ ಉತ್ಸಾಹದಿಂದಿರುತ್ತಿದ್ದ. ದಿನ ಅಪ್ಪ ಸಿಟ್ಟಿಗೇಳುತ್ತಾನೆನ್ನುವ ಭಯ ಯಾರಿಗೂ ಇರುತ್ತಿರಲಿಲ್ಲ. ಹೀಗಾಗಿ ಅಡುಗೆ ಮನೆಯಲ್ಲಿ ಬಿಗುವಿನ ವಾತಾವರಣ ಇರುತ್ತಿರಲಿಲ್ಲ. ಬಿಸಿಬಿಸಿ ರೊಟ್ಟಿ ಗಿಣ್ಣ ಉಂಡು ಮತ್ತೆ ತನ್ನ ಕಾಯಕಕ್ಕೆ ತೊಡಗುತ್ತಿದ್ದ. ಹತ್ತು ಹನ್ನೆರಡು ದಿನಗಳ ವರೆಗೆ ಆಕಳನ್ನು ಹೊರಗೆ ಬಿಡುತ್ತಿರಲಿಲ್ಲ. ನೆದರಾಗುತ್ತದೆಂದು ಆಕಳಿಗೆ ಮರೆ ಮಾಡುತ್ತಿದ್ದ. ಆಕಳು ಮತ್ತು ಕರದ ಕೊರಳು ಕಾಲಿಗೆ ಕರಿ ದಾರ ಕಟ್ಟಿಸುತ್ತಿದ್ದ

No comments: