Sunday, August 25, 2013

ಹರಿವ ಹಳ್ಳದ ಬೆಡಗು - ಎತ್ತಿನ ನಾಲಿಗೆ - ಮುಳ್ಳೆಣ್ನೆ.೪



ಎತ್ತಿನ ನಾಲಿಗೆ - ಮುಳ್ಳೆಣ್ಣೆ

ಕಾರ ಹುಣ್ಣಿಮೆ ದಿನ ಎಲ್ಲ ಎತ್ತು ಹೋರಿಗಳ ಕೋಡು ಕೆತ್ತಿಸಿ ಇಲ್ಲವೆ  ತಾನೆ ಗಾಜಿನ ಚೂರಿನಿಂದ ತಿಕ್ಕಿ ಸವರಿ, ಕೊಳಗ ಕಡಿಸಿ ಸಿಂಗರಿಸುತ್ತಿದ್ದ. ಎಲ್ಲರಂತೆ  ಕೋಡಿಗೆ ಬಣ್ಣ ಬಳಿಯದೇ ಅರಿಷಿಣ ಎಣ್ಣೆ ಹಚ್ಚಿ ನುಣುಪುಗೊಳಿಸುತ್ತಿದ್ದ. ಕೋಡು ಮಿರಮಿರನೆ ಮಿಂಚುವಂತೆ ಮಾಡುತ್ತಿದ್ದ. ಇದಕ್ಕಿಂತ ಮುಖ್ಯವಾಗಿ ಬೆಣ್ಣೆ ಅರಿಷಿಣ ಉಪ್ಪು ಹಚ್ಚಿ  ಎತ್ತಿನ ನಾಲಿಗೆ ತಿಕ್ಕಿಸಿ ಬಾಯಿ ತೊಳೆಸುತ್ತಿದ್ದ. ಕೆಲಸಕ್ಕೆ ದನಗಳ ಉಪಚಾರದಲ್ಲಿ ಅನುಭವವಿದ್ದ ವಾಲೀಕಾರ ಹನಮಪ್ಪನನ್ನಾಗಲಿ, ಕರಿಗಾರ ಕಲ್ಲಪ್ಪನನ್ನಾಗಲಿ ಕರೆಯುತ್ತಿದ್ದ. ಎತ್ತು ಹೋರಿಗಳು ಸರಿಯಾಗಿ ಮೇವು ತಿನ್ನದೇ ಇದ್ದಾಗ ನಾಲಿಗೆ ಬುಡದಲ್ಲಿನ ರಕ್ತ ನಾಳವನ್ನು ಹರಿದು ರಕ್ತ ಸೋರುವಂತೆ ಮಾಡಿ ಚಿಕಿತ್ಸೆ ನೀಡಿಸುತ್ತಿದ್ದ. ದನಗಳಿಗೆ ಕುಂದು ರೋಗ ಬಂತೆಂದರೆ ಹೊಟ್ಟು ಮೇವು ಮುಟ್ಟದೇ ಸುಂದಾಗಿ ನಿಂತು ಬಿಡುತ್ತಿದ್ದವು. ಜನಪದ ವೈದ್ಯ ಪದ್ಧತಿಯಂತೆ ಏನೇನೋ ವನಸ್ಪತಿ ಔಷಧಿಯ ಗೊಟ್ಟ ಹಾಕಿ  ಕಲ್ಮೇಶ್ವರ ದೇವರ ಗುಡಿಯಿಂದ ತಂದ ನೀರನ್ನು ಕುಡಿಸಿ ಕುಂದು ಇಳಿಸುವ  ಕೋಲಿನಿಂದ ಇಳೆತೆಗೆದು ಉಪಚರಿಸುತ್ತಿದ್ದ. ಕೆಲವರ ಮನೆಯಲ್ಲಿ ಕುಂದು ತೆಗೆಯುವ ಕೋಲು ಇರುತ್ತಿದ್ದವು. ಚಿಕಿತ್ಸೆ ಈಗಲೂ ಬಳಕೆಯಲ್ಲಿದೆ.

ನಮ್ಮ ಮನೆಯಲ್ಲಿ ೫೦-೬೦ ವರ್ಷಗಳಿಂದ ಕಾಯ್ದಿಟ್ಟುಕೊಂಡು ಬಂದ ಮುಳ್ಳೆಣ್ಣೆ, ಸುಟ್ಟೆಣ್ಣೆಗಳು ಇದ್ದವು, ಈಗಲೂ ಇವೆ. ಅಂಗಾಲನ್ನು ಬಿಟ್ಟು ಬೇರೆ ಕಡೆ ಮುಳ್ಳು ಚುಚ್ಚಿದ್ದರೆ ಅದನ್ನು ಸೂಜಿಯಿಂದ ತೆಗೆಯಲು ಬರುವುದಿಲ್ಲ. ಆಗ ಮುಳ್ಳು ಚುಚ್ಚಿಸಿಕೊಂಡವರು ತಮ್ಮ ಮನೆಯಿಂದ ಒಳ್ಳೆಣ್ಣೆಯನ್ನು ತಂದು ನಮ್ಮ ಮನೆಯಲ್ಲಿರುವ ಮುಳ್ಳೆಣ್ಣೆ ಔಷಧದ ಸೀಸೆಗೆ ಹಾಕಿ ಚುಚ್ಚಿದ ಜಾಗಕ್ಕೆ ಎಣ್ಣೆ ಹಚ್ಚಿಸಿಕೊಂಡು ಹೋಗುತ್ತಿದ್ದರು. ತಪ್ಪದೇ ಮೂರು ದಿನ  ಹಚ್ಚಿಸಿಕೊಂಡರೆ ಸಾಕು ನೋವು ಮಾಯವಾಗುತ್ತಿತ್ತು. ಇದೇ ರೀತಿ ಸುಟ್ಟೆಣ್ಣೆಯೂ ಬಳಕೆಯಾಗುತ್ತಿತ್ತು.

  ಔಷಧಿಗಳು ನೆಲಬಿಟ್ಟು ಅಂತರದಲ್ಲಿ ಇರಬೇಕು. ಹೆಣ್ಣುಮಕ್ಕಳಂತೂ ಸೀಸೆಗಳನ್ನು  ಮುಟ್ಟುವಹಾಗಿಲ್ಲ. ಸೀಸೆಗಳನ್ನು ದನದ ಹಕ್ಕಿಯಲ್ಲಿರುವ ಗೂಟಗಳಿಗೆ  ಬಹಳ ಕಾಳಜಿಯಿಂದ ಜೋತು ಹಾಕಲಾಗಿರುತ್ತಿತ್ತು. ಒಮ್ಮೆ ಯಾವುದೋ ಕಾರಣಕ್ಕೆ ನೆಲಕ್ಕೆ ಇಟ್ಟು ಮೈಲಿಗೆಯಾಗಿದ್ದಾಗ ಮತ್ತೆ ಬೇರೆ ಊರಿನಿಂದ ಮಡಿಯಿಂದ ಎಣ್ಣೆ ತಂದು   ಔಷಧ ಪರಂಪರೆಯನ್ನು ಮುಂದುವರೆಸಲಾಯಿತು. ನಮ್ಮ ಮನೆಯಿಂದಲೂ ಎಣ್ಣೆಯನ್ನು ಒಯ್ದು ಪರಂಪರೆಯನ್ನು  ಮುಂದುವರೆಸಿದ ತಮ್ಮ ಊರಿನಲ್ಲಿಯೂ ಆಚರಣೆಗೆ ತಂದ ಉದಾಹರಣೆಗಳಿವೆ

ಎತ್ತುಗಳು  ತಿಂದುಬಿಟ್ಟ ಚಿಪ್ಪಾಡಿಯನ್ನು ಆಕಳು ಎಮ್ಮೆಗೆ ಹಾಕುತ್ತಿದ್ದ. ಇಷ್ಟಾದ ಮೇಲೆಯೂ ಉಳಿದ ಚಿಪ್ಪಾಡಿಗೆ ಉಪ್ಪಿನ ನೀರು ಚಿಮುಕಿಸಿ ಬಿಸಿಲಲ್ಲಿ ಒಣಗಿಸುತ್ತಿದ್ದ. ಉಪ್ಪಿನ ರುಚಿಗೆ ಬಿರುಸಾದ ದಂಟು ಬುಡಚಿಯನ್ನು ಸಹ ನುರಿಸಿ ತಿನ್ನುವಂತೆ ಉಪಾಯ ಮಾಡುತ್ತಿದ್ದ. ಆಮೇಲೂ ಉಳಿದ ಚಿಪ್ಪಾಡಿ ಒಲೆಗೆ ಇಲ್ಲವೆ ತಿಪ್ಪೆಗೆ ಸಲ್ಲುತ್ತಿದ್ದವು. ತಿಪ್ಪೆಯಲ್ಲಿ ತೆಗ್ಗು ತೆಗೆದು ನೀರು ನಿಲ್ಲುವಂತೆ ಮಾಡಿ ಅಲ್ಲಿ ಚಿಪ್ಪಾಡಿ ಕಸ ಹಾಕಿ ಗೊಬ್ಬರ ತಯಾರಿಸಿಕೊಳ್ಳುತ್ತಿದ್ದ.
ಸುಗ್ಗಿ ಮುಗಿದ ಕೂಡಲೆ ಕುಂಟಿ ರಂಟಿ ಕೂರಿಗೆಗಳನ್ನು ಹಿತ್ತಲಲ್ಲಿ ಮಳೆಗೆ ಹಾಳಾಗದಂತೆ ಜೋಡಿಸಿಡುತ್ತಿದ್ದ. ಹೆಚ್ಚು ಬಳಕೆ ಬರುವಂತೆ ರಕ್ಷಿಸುತ್ತಿದ್ದ. ಆಗಲೇ ಕುಂಟಿ ಕೂರಿಗೆಗಳನ್ನು ಪರೀಕ್ಷಿಸಿ ಮುಂದಿನ ತಯಾರಿಗೆ ಸಿದ್ಧವಾಗುತ್ತಿದ್ದ. ಹಳ್ಳದ ಹೊಲ ಮತ್ತು ಕರಕನ ಹೊಲದಲ್ಲಿರುವ ಜಾಲಿ ಗಿಡಗಳನ್ನು ಕಡಿದು ಒಕ್ಕಲುತನಕ್ಕೆ ಬೇಕಾದ ದಿಂಡು ತಾಳ ಮೇಳಿ ಮಾಡಿಸಿಕೊಳ್ಳುತ್ತಿದ್ದ; ಯಾವ ಸಲಕರಣೆಯೂ  ಕೊರತೆಯಾಗದಂತೆ ಎಚ್ಚರಿಕೆವಹಿಸುತ್ತಿದ್ದ. ಕುಂಟಿ ಕೂರಿಗೆಗೆ ಬೇಕಾದ ಸೆಕ್ಕಿಗಳನ್ನಂತೂ ಸಾಕಷ್ಟು ಸಂಗ್ರಹಿಸಿ ಇಟ್ಟಿರುತ್ತಿದ್ದ. ಹೊಲಕ್ಕೆ ಹೋಗುವಾಗ ಹುಸಿ ಅಂಕಣದ ಮಾಡದಲ್ಲಿರುವ ಸೆಕ್ಕೆಗಳನ್ನು ಕಿಸೆಯಲ್ಲಿ ಹಾಕಿಕೊಂಡು ಹೋಗುತ್ತಿದ್ದ. ಅಪ್ಪನ ಅಂಗಿ ಕಿಸೆಗಳು ಸರಿಯಾಗಿ ಬಳಕೆಯಾದದ್ದು ಸೆಕ್ಕಿಗಳನ್ನು ಇಟ್ಟುಕೊಳ್ಳಲು ಮಾತ್ರ. ರೊಕ್ಕ ರೂಪಾಯಿಗಳಿಗಾಗಲಿ,ಎಲೆ ಅಡಿಕೆ ತಂಬಾಕು ಚುಟ್ಟಾಗಳಿಗಾಗಲಿ ಜಾಗವಿರಲಿಲ್ಲ.
ಬಿತ್ತಿಗೆ ಪ್ರಾರಂಭವಾಗುವುದಕ್ಕಿಂತ  ಮುಂಚಿತವಾಗಿ ಸೂಕ್ತ ಸಮಯಕ್ಕೆ ಕುಂಟಿ ಕೂರಿಗೆಗಳನ್ನು ಕೆಮ್ಮಣ್ಣಿನಿಂದ ಸಾರಿಸಿ ಸಿದ್ಧ ಮಾಡಿಟ್ಟುಕೊಂಡಿರುತ್ತಿದ್ದ. ಯಾರಿಂದಲೂ ಕುಂಟಿ ಕೂರಿಗೆಗಳನ್ನು ತರುವ ಪ್ರಸಂಗವನ್ನು ತಂದುಕೊಳ್ಳಲಿಲ್ಲ. ಅಗತ್ಯ ಬಿದ್ದರೆ ಬೇರೆಯವರಿಗೆ ಕುಂಟಿ ಕೂರಿಗೆ ಕೊಡುತ್ತಿದ್ದ. ಅನಿವಾರ್ಯವಾದರೆ ಅವರ ಹೊಲಕ್ಕೆ ತನ್ನ ಎತ್ತುಗಳಿಂದಲೇ ಬಿತ್ತಿ ಬರುತ್ತಿದ್ದ. ಪ್ರತಿ ವರ್ಷ ಸಾಮಾನ್ಯಾವಾಗಿ ಗುಡಿ ( ದೇವರ) ಹೊಲವನ್ನು ಪೂಜಾರರಿಗೆ ಬಿತ್ತಿಕೊಡುತ್ತಿದ್ದ.

No comments: