Sunday, August 25, 2013

ಹರಿವ ಹಳ್ಳದ ಬೆಡಗು -೫ ಹಲ್ಲಚ್ಚದ ಹೋರಿ - ಹದಿನಾರೆತ್ತಿನ ಗ್ವಾದ್ಲಿ..


ಹಲ್ಲಚ್ಚದ ಹೋರಿ-ಹದಿನಾರೆತ್ತಿನ ಗ್ವಾದ್ಲಿ

ಎತ್ತು ಹೋರಿಗಳು ಒಂಚೂರು ಸೊರಗದಂತೆ ನೋಡಿಕೊಳ್ಳುತ್ತಿದ್ದ. ಎತ್ತುಗಳಿಗೆ ಮೇಲ್ತಿನಿಸು ಕಡಿಮೆ ಬಿದ್ದಾಗ ಸೆರಗು ಜೋಳದ ಬದಲಾಗಿ ಚಲೋ ಜೋಳದ ನುಚ್ಚನ್ನೆ  ಬಳಸಿಬಿಡುತ್ತಿದ್ದ. ತನಗೆ ಊಟಕ್ಕೆ ಏನು ಕಡಿಮೆಯಾದರೂ ಸಹಿಸಿಕೊಳ್ಳುತ್ತಿದ್ದ. ಆದರೆ ದನಗಳಿಗೆ ತಿನಿಸು ಕಡಿಮೆಯಾದರೆ ಸಹಿಸುತ್ತಿರಲಿಲ್ಲ. ಆಗಿಂದಾಗ ಹಗೆ ತೆಗೆಯಿಸಿ ಜೋಳ ಮಾರಿ ದನಗಳಿಗೆ ಬೇಕಾದ ಹುರುಳಿ, ಹಿಂಡಿ ತರುತ್ತಿದ್ದ. ಅಪ್ಪನ ಸ್ವಭಾವವನ್ನು ಚೆನ್ನಾಗಿ ಅರ್ಥಮಾಡಿಕೊಂಡ ಕಾಕಾ ಅವನ ಇಚ್ಛೆಯಂತೆಯೇ ನಡೆಯುತ್ತಿದ್ದ. ತೊಂದರೆ ಅನಾನುಕೂಲದ ಮಧ್ಯೆಯೂ ಅಪ್ಪನ ಆಸೆಯನ್ನು ಪೂರೈಸುತ್ತಿದ್ದ. ಮೆಚ್ಚುಗೆ ಗಳಿಸುತ್ತಿದ್ದ. ಒಮ್ಮೊಮ್ಮೆ ಹಣದ ಅಡಚಣಿ, ಗೌಡಕಿ ಕೆಲಸದ ಒತ್ತಡವಿದ್ದಾಗ ಅಪ್ಪನಿಂದ ಬೈಸಿಕೊಳ್ಳುತ್ತಿದ್ದ.

ಬೆನಕನ ಮಾನೆ ಹೊಲಕ್ಕೆ , ನರಗುಂದ ದಾರಿ ಹೊಲಕ್ಕೆ ಹೋಗಬೇಕಾದರೆ ಬನಹಟ್ಟಿಯ ಮೇಲೆಯೆ ಹೋಗಬೇಕಾಗುತ್ತಿತ್ತು. ಬನಹಟ್ಟಿ ಕೆರೆ, ಹೊನ್ನಂತೆವ್ವನ ಗುಡಿ,ರುದ್ರಸ್ವಾಮಿಯ ಮಠದ ವರೆಗೂ ಜನ ಅಪ್ಪನ ಎತ್ತುಗಳನ್ನು ಬೆರಗು ಗಣ್ಣುಗಳಿಂದ ನೋಡುತ್ತಿದ್ದರು. 'ಎತ್ತುಗಳ್ನ ಹಿಂಗ ಇಡಬೇಕು', 'ಒಕ್ಕಲುತನ ಮಾಡೂದಂದ್ರ ಶಿವನಗೌಡ್ರಂಗ ಮಾಡಬೇಕು'-ಎಂದು ಹೊಗಳುತ್ತಿದ್ದರು.

ಮನೆಯಲ್ಲಿ ಹುಟ್ಟಿದ ಎತ್ತು ಹೋರಿಗಳು ಕಣ್ ಕುಕ್ಕುವಂತಿದ್ದವು. ಮೂಡ್ಲ ಕೋಡು, ಎತ್ತರದ ಇಣಿ, ಜೋತುಬಿದ್ದ ಗಂಗೆದೊಗಲು, ಹರವಾದ ಎದೆ, ಮಾಟವಾದ ಸವ ಶುದ್ಧ ಮುಂಗಾಲು, ಬಿಳಿ-ಕೆಂದ ಬಣ್ಣ, ಪುಟಿಗೆ (ಅವಸರದ) ನಡಿಗೆಯಿಂದ  ಎಂಥವರ ಮನಸ್ಸನ್ನೂ ಗೆಲ್ಲುತ್ತಿದ್ದವು. ತಲೆ ಎತ್ತರ ಬೆಳೆದ ಹೋರಿಗಳನ್ನು ನೋಡಿ 'ಗೌಡ್ರ ಹೋರಿ ಎಷ್ಟಲ್ಲಿ ಅದಾವು' ಎಂದಾಗ ಅಪ್ಪ ' ಇನ್ನೂ ಹಲ್ಲ ಹಚ್ಚಿಲ್ಲ ತಮ್ಮ' ಎಂದುತ್ತರಿಸಿದಾಗ ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು. 'ಆಕಳ ಒಳ್ಳೆ ಜಾತಿವಿರಬೇಕು' ಎಂದು ತಮ್ಮ ತಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದರು.

ಗಟ್ಟಿಮುಟ್ಟಾದ ರೋಣದ ಚಕ್ಕಡಿ. ಹವನಾದ ಡಂಬಿನ ಕಳಗ, ಬಳಸಿ ಬಳಸಿ ಮಿರಿಮಿರಿ ಮಿಂಚುವ ನೊಗ, ಆಳೆತ್ತರದ ತೇಗಿನ ಗಾಲಿ, ಬಲಿಷ್ಠ ಅಚ್ಚು, ಮಾಟವಾದ ಉದ್ದಗಿ ಎತ್ತುಗಳಿಗೆ ಹೇಳಿಮಾಡಿಸಿದಂತಿದ್ದವು. ಆನೆಯಂತಹ ಎತ್ತುಗಳಿಗೆ ಚಕ್ಕಡಿ, ಚಕ್ಕಡಿಗೆ ತಕ್ಕ ಎತ್ತು ಎರಡೂ ಒಂದಕ್ಕೊಂದು ಹೇಳಿಮಾಡಿಸಿದಂತಿದ್ದವು. ಇಂತಹ ಎತ್ತುಗಳಿದ್ದದ್ದರಿಂದಲೇ ಬನಹಟ್ಟಿ ಹೊಲದ ತೆನೆ, ಗೋದಿಹುಲ್ಲು, ಮೇವು(ಕಣಿಕೆ) ಎಲ್ಲವೂ ಸುರಕ್ಷಿತವಾಗಿ, ಸುಲಭವಾಗಿ ಊರು ತಲುಪುತ್ತಿದ್ದವು. ಬೆಣ್ಣಿಹಳ್ಳದ ದಾರಿಯಲ್ಲಿ ಖಾಲಿ ಚಕ್ಕಡಿಗಳು ದಾಟಲೂ ಪ್ರಯಾಸ ಪಡಬೇಕಾಗುತ್ತಿತ್ತು. ಅಂತಹದರಲ್ಲಿ ತುಂಬಿದ ಚಕ್ಕಡಿಯನ್ನು ಕಣ್ ಮುಚ್ಚಿ ದಾಟಿಸುವಷ್ಟು ಸಮರ್ಥವಾಗಿದ್ದವು. ಕಳಗದ ಭರ್ತಿ ತೆನೆ ಹೇರಿರಲಿ, ಎರಡಾಳೆತ್ತರ ಮೇವು ಒಟ್ಟಿರಲಿ, ಹಿಂದು ಮುಂದು ನೋಡದೆ ಹುದುಲಿನ, ಆಳುದ್ದ ನೀರು- ಕೆಸರಿನ, ಮೊಣಕಾಲೆತ್ತರ ಉಸುಕಿನ ದಾರಿಯನ್ನು ಸಲೀಸಾಗಿ ದಾಟಿಬಿಡುತ್ತಿದ್ದವು. ಪ್ರಸಂಗ ಬಿದ್ದಾಗ ಬೇರೆಯವರ ಭಾರದ ಚಕ್ಕಡಿಗಳನ್ನು ಸಹ ದಾಟಿಸುತ್ತಿದ್ದವು. ಇಂತಹ ಭಾರ ಜಗ್ಗುವ ಸಂದರ್ಭದಲ್ಲಿ ಚಕ್ಕಡಿಯನ್ನು ಹಾಗಿನ ಮೇಲೆ ನಡೆಸಬೇಕಾಗುತ್ತಿತ್ತು. ಇಲ್ಲವಾದರೆ ಎತ್ತು ಎದೆ ನೋಯಿಸಿ ಕೊಳ್ಳುತ್ತಿದ್ದವು. ಕಡದಳ್ಳಿ ಅಮರಗೋಳದ ದಾರಿಯೂ ಸಹ ಅಪಾಯಕಾರಿಯಾಗಿತ್ತು. ಎದೆ ಏರಿನ ಹುದುಲಿನ ದಾರಿಯಲ್ಲಿ ಅಪರಿಚಿತ ಎತ್ತುಗಳು ಹತ್ತಲು ಸಾಧ್ಯವಾಗುತ್ತಲೇ ಇರಲಿಲ್ಲ. ಪರವೂರಿನ ಚಕ್ಕಡಿಗಳನ್ನು ಅಪ್ಪನೇ ನಮ್ಮ  ಎತ್ತನ್ನು ಹೂಡಿ ಸರಾಗವಾಗಿ ದಾಟಿಸಿಬರುತ್ತಿದ್ದ. ಹಳ್ಳದಲ್ಲಿ ಚಕ್ಕಡಿ ಸಿಗಿಬಿದ್ದಿದೆ ಎಂಬ ಸುದ್ದಿಯನ್ನು ದನ ಮೇಯಿಸುವ ಹುಡುಗರು ಇಲ್ಲವೆ ಬಟ್ಟೆ ತೊಳೆಯಲು ಹೋದ ಹೆಣ್ಣುಮಕ್ಕಳು ತರುತ್ತಿದ್ದರು. ಊರಮುಂದಿನ ಹೊಲದಲ್ಲಿಯೇ ಇರುತ್ತಿದ್ದ ಅಪ್ಪ ಎತ್ತುಗಳ ಮೈ ತೊಳೆಯಲೆಂದು ಬೆಣ್ಣಿಹಳ್ಳಕ್ಕೆ ಹೋದವ ಸಿಗಿಬಿದ್ದ ಚಕ್ಕಡಿಯನ್ನು ದಾಟಿಸಿ ಬರುತ್ತಿದ್ದ.

ಎತ್ತುಗಳಿಗಾಗಿಯೇ ಕಟ್ಟಿಸಿದ ಹದಿನಾರೆತ್ತಿನ ಇದಿರುಗ್ವಾದಲಿ, ಪಡಸಾಲಿ, ಹುಸಿಯಂಕಣ ಹೊಂದಿದ ನಮ್ಮ ದನದ ಮನೆ ವಿಶಿಷ್ಟವಾಗಿದೆ. ತೇಗಿನ ತೊಲೆ ಕಂಬ ಗಳಿಗೆ ಉಳಿ ಬಾಚಿ ಮುಟ್ಟಿಸಿ ಕೆತ್ತಿಯೇ ಇಲ್ಲ. ಇದ್ದ ದುಂಡ ಸ್ವರೂಪವನ್ನು ಹಾಗೇಯೇ ಉಳಿಸಿಕೊಳ್ಳಲಾಗಿದೆ. ಕಟ್ಟಡದ ಮಡಿಗೆ ವಿನ್ಯಾಸ ಅನನ್ಯವಾಗಿದೆ. ಕಟ್ಟಿಸುವ ಕಾಲಕ್ಕೆ ಮೂರು ಸಾವಿರ ಖರ್ಚು ಮಾಡಲಾಗಿದೆ ಎಂದು ಹೇಳುತ್ತಾರೆ. ಇಂತಹ ಮನೆಗೆ ಪಶುಸಂಪತ್ತಿದ್ದರೆ ಮಾತ್ರ ಶೋಭೆ. ಮನೆಯಲ್ಲಿಯೇ ಹುಟ್ಟಿ ಬೆಳೆದ ಆನೆ ಗಾತ್ರದ ಎತ್ತುಗಳು, ಗಚ್ಚಿನಿಂದ ಮಾಡಿದ ಗ್ವಾದಲಿ, ದೊಡ್ಡದಾದ ಮೇವಿನ ಗೂಡುವಿಶಾಲವಾದ ಎಂಟು ಅಂಕಣದ ಅಟ್ಟ, ಚೀಲದ ನಿಟ್ಟನ್ನು ಒಟ್ಟಲು ಗಟ್ಟಿಯಾಗಿರುವ ಹಾಸುಗಲ್ಲಿನ ಪಡಸಾಲಿ, ಕರಿಯಮ್ಮನ ಮಾಡ, ಒಂದೇ ಒಂದು ಬಾಗಿಲು, ಕೈಮಾರು ಅಗಲದ ಗೋಡೆ, ಎತ್ತರದ ಕುಂಬಿ ಮನೆಯ ಸೊಗಸನ್ನು ನೋಡಿಯೇ ಅನುಭವಿಸಬೇಕು ! ಇಂತಹ ಮನೆಗೆ ತಕ್ಕ ಎತ್ತು-ಹೋರಿಗಳು,ಎತ್ತು ಹೋರಿಗಳಿಗೆ ತಕ್ಕ ಕೃಷಿಕ ಅಪ್ಪ ಎಲ್ಲವೂ ಹೇಳಿಮಾಡಿಸಿದಂತಿದ್ದವು.

No comments: