Sunday, August 25, 2013

ಹರಿವ ಹಳ್ಳದ ಬೆಡಗು..೮ ಕಾಯಕ ಜೀವಿ ಬೇರುಗಳು



ಕಾಯಕ ಜೀವಿಯ ಬೇರುಗಳು

ಅಪ್ಪನ ದುಡಿಮೆ ಕಾಯಕ ಯೋಗಿಯಂತಹದ್ದು. ಅಂತಹ ಕಾಯಕ ಯೋಗಿಯಾಗಿ ರೂಪಗೊಂಡ ಅಪ್ಪನ ಬಾಲ್ಯ ಹೇಗಿದ್ದಿರಬಹುದು ? ಅಪ್ಪನ ಬಂಧುಗಳ್ಯಾರು ಕಡದಳ್ಳಿಯಲ್ಲಿರಲಿಲ್ಲ. ಏಕೆಂದರೆ ಕಡದಳ್ಳಿ ಅಪ್ಪನಿಗೆ ಹೆಂಡತಿ ಮನೆ. ಅಜ್ಜ ಕರೆತಂದು ಸಾಕಿದ ಮನೆ. ನನಗೆ ನನ್ನ ತಾಯಿ ಮನೆತನದ ಹಿರಿಯರ ಬಂಧು ಬಾಂಧವರ ಪರಿಚಯವಿದೆಯೆ ಹೊರತು  ಅಪ್ಪನ ಬಂಧುಗಳ ಪರಿಚಯವೇ ಇಲ್ಲ. ಈಗಲೂ ಕಡಿಮೆ.

ಅಪ್ಪ ಚಿಕ್ಕವನಿದ್ದಾಗಲೇ ಅಜ್ಜ ಅಮ್ಮ ಸಾವನ್ನಪ್ಪಿದ್ದರು. ತಂದೆ ತಾಯಿ ಇಲ್ಲದ ಅಪ್ಪ ನಾಲ್ಕು ಐದು ವರ್ಷದ ತಬ್ಬಲಿಅಪ್ಪನ ಪರಿಸ್ಥಿತಿಯ ಬಗ್ಗೆ ತಿಳಿದ ಅಜ್ಜ ಅಪ್ಪನನ್ನು ಚಿಕ್ಕತಡಸಿಯಿಂದ ಕರೆತಂದು ಜೋಪಾನ ಮಾಡಿದ. ಬಾಲ್ಯದಿಂದಲೂ ಅಪ್ಪ ದನಕರುಗಳ ಜೊತೆಯೇ  ಬೆಳೆಯತೊಡಗಿದ. ಎಲ್ಲ ಮಕ್ಕಳಂತೆ ಆಟ ಆಡಿ ಬೆಳೆದನೊ ಬರಿ ದನ ಹೊಲಮನಿ ಕೆಲಸದಲ್ಲಿ ತೊಡಗಿಕೊಂಡಿದ್ದನೊ ಗೊತ್ತಿಲ್ಲ.

ಮದುವೆ ವಯಸ್ಸಿಗೆ ಬಂದಾಗ ಅಜ್ಜ ಒಳಸಂಬಂಧದ ಹುಡುಗಿಯೊಂದಿಗೆ ಮದುವೆ ಮಾಡಿದ. ಅಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಬಾಳಸಂಗತಿಯನ್ನು ಕಳೆದುಕೊಂಡ. ಅಂದಿನ ಅವನ ಮನಸ್ಥಿತಿಯನ್ನು ನೋಡಿದ ಅಜ್ಜ ಮುಗ್ಧ ಅಪ್ಪನ ಮೇಲಿನ ಪ್ರೀತಿಗಾಗಿ ತನ್ನ ಹಿರಿಮಗಳನ್ನೆ ಧಾರೆಯೆರೆದುಕೊಟ್ಟ, ಮನೆಯಳಿಯನನ್ನಾಗಿ ಮಾಡಿಕೊಂಡ. ಇದನ್ನೆಲ್ಲ ನೆನೆದಾಗ ಅಪ್ಪ ಅಜ್ಜನ ಬಂಧುತ್ವದ ಬಗ್ಗೆ ಅಭಿಮಾನವೆನಿಸುತ್ತದೆ. ಅವ್ವ ಅಮೃತವ್ವ ಅಪ್ಪನ ಕೈಹಿಡಿದದ್ದು ಎರಡನೆಯ ಹೆಂಡತಿಯಾಗಿ. ವಿಷಯ ನನಗೆ ಗೊತ್ತಾದದ್ದು ತೀರ ಇತ್ತೀಚೆಗೆ. ಅಪ್ಪ ಕಾಲವಾದ ಅನಂತರ. ಅಜ್ಜ ಅಪ್ಪನಿಗೆ ಮಗಳನ್ನು ಕೊಟ್ಟು ಕೈಬಿಡಲಿಲ್ಲ. ಅಪ್ಪನ ಹೆಸರಿಗೆ ಹತ್ತು ಎಕರೆ ಹೊಲವನ್ನು ಹಚ್ಚಿದ. ಬನಹಟ್ಟಿ ಬೆನಕನಮಾನೆ ಹೊಲ, ಅಲ್ಲಿಯ ಮನೆ ಹಿತ್ತಿಲ ಎಲ್ಲವನ್ನೂ ಅಪ್ಪನಿಗೆ ನೀಡಿದ.

ಅಪ್ಪ ಅವ್ವನ ಮೊದಲ ಕುಡಿಯಾಗಿ ಜನಿಸಿದ ಅಣ್ಣ ವೀರನಗೌಡ ಐದಾರು ವರ್ಷ ಬದುಕಿ ಕಾಲವಾದ. ಬಹಳ ಜಾಣನಿದ್ದ. ಗೊಡಚಿ ವೀರಭದ್ರ ಮನೆದೇವರಾದ್ದರಿಂದ ಅವನಿಗೆ ವೀರನಗೌಡ ಎಂದು ಹೆಸರಿಟ್ಟಿದ್ದರು. ನಾನು ಕಾಣದ ಅಣ್ಣನ ಬಗ್ಗೆ ಅಮ್ಮ, ಕಲ್ಲಕ್ಕ, ಗಂಗಕ್ಕ ಅಗಾಗ ಮಾತಾಡುತ್ತಿದ್ದರು. ಪ್ರಸಂಗ ಬಂದಾಗ  ನನಗೂ ಹೇಳುತ್ತಿದ್ದರು.

ಅಣ್ಣ ಮತ್ತು ಇಬ್ಬರು ಅಕ್ಕಂದಿರ ಅನಂತರ ಹುಟ್ಟಿದವ ನಾನು. ಅಪ್ಪ ಅವ್ವನಿಗೆ ಐದನೆಯ ಮಗ. ನನಗೊಬ್ಬ ತಮ್ಮನೂ ಹುಟ್ಟಿದ್ದ. ಆದರೆ ಅವನೂ ಅವ್ವನನ್ನು ಹಿಂಬಾಲಿಸಿದ. ಅವ್ವ ಅಮೃತವ್ವ ತಮ್ಮನ ಹೆರಿಗೆ ಅನಂತರ ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದು ಅಪ್ಪನ ಜೀವನದ ದೊಡ್ಡ ದುರಂತ  ಮತ್ತು ನಮ್ಮೆಲ್ಲರ ದೌರ್ಭಾಗ್ಯ. ಅಮ್ಮ ನಮಗೆಲ್ಲರಿಗೂ ಅವ್ವನ ಸ್ಥಾನದಲ್ಲಿ ನಿಂತು ಜೋಪಾನ ಮಾಡಿದ ರೀತಿ ಒಂದು ಅದ್ಭುತ ಪವಾಡವೇ ಹೌದು. ಅಮ್ಮನೆಂದರೆ ನಮ್ಮ ಅಜ್ಜನ ಎರಡನೆಯ ಹೆಂಡತಿ ; ನಮ್ಮ ಅವ್ವನ ಮಲತಾಯಿ.

No comments: