Sunday, August 25, 2013

ಹರಿವ ಹಳ್ಳದ ಬೆಡಗು..೯ ಕರ್ಮ ಯೋಗಿಯ ಮೌನ


ಕರ್ಮಯೋಗಿಯ ಮೌನ

ಅವ್ವನ ಸಾವಿನ ಅನಂತರ ಅಪ್ಪ ಇನ್ನೂ ಏಕಾಂಗಿಯಾದ. ಮೌನಕ್ಕೆ ಶರಣಾದ. ಒಕ್ಕಲುತನ ದನಕರುಗಳಿಗೆ ತನ್ನನ್ನು ಅರ್ಪಿಸಿಕೊಂಡ. ಕರ್ಮಯೋಗಿಯಾದ. ಸಂದರ್ಭದಲ್ಲಿಯೇ ಇನ್ನೊಂದು ಆಘಾತ ಘಟಿಸಿತು. ಅಜ್ಜ, ಅವ್ವ ಕಾಲವಾದ ಎರಡೇ ವರ್ಷಗಳಲ್ಲಿ ಸಾವಿಗೀಡಾದ. ಮತ್ತೆ ಅಮ್ಮನಿಂದ ಹಿಡಿದು ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿದ.

ಮನೆಯಲ್ಲಿ ಹಿರಿಯರಾಗಿರುವವರು ಅಮ್ಮ ಮತ್ತು ಅಪ್ಪ. ಅಪ್ಪನಿಗೆ ಹೊರಗಿನ ಜಗತ್ತೇ ಗೊತ್ತಿಲ್ಲ. ಅಮ್ಮ ಅಜ್ಜನ ನೆರಳಾಗಿ ಬದುಕಿದವಳು ಮಾತ್ರ. ಸ್ವಲ್ಪ ತಿಳುವಳಿಕೆ ಬಂದ ಅಕ್ಕ " ಅಜ್ಜಾ, ನೀ ಹೋದಮ್ಯಾಲ ನಮ್ಮನ್ಯಾರು ಜೋಪಾನ ಮಾಡವರು " ಗೋಳಾಡಿ ಅತ್ತಾಗ  ಅಮ್ಮ, " ನಾನು ಜೋಪಾನ ಮಾಡತೀನಿ" ಎಂದು ತಬ್ಬಿಕೊಂಡು ಸಂತೈಸಿದ ಮಾತು ನನ್ನ ಕಿವಿಯಲ್ಲಿ ಈಗಲೂ ಕೇಳುತ್ತಲೇ ಇದೆ. ಅಂದು ಅಮ್ಮ ಕೊಟ್ಟ ಅಭಯ. ಅದು ಕೇವಲ ಅಕ್ಕನಿಗೆ ಅಷ್ಟೇ ಅಲ್ಲ ಅಪ್ಪನಿಗೂ ಸುರಕ್ಷತೆಯನ್ನು ಕೊಟ್ಟ ವಚನವಾಗಿತ್ತು.

ಅಪ್ಪ ಮತ್ತು ಚಿಕ್ಕತಡಸಿಗೆ ಇರುವ ಸಂಬಂಧ ಅಷ್ಟಕ್ಕಷ್ಟೆ. ನನಗೆ ತಿಳಿದಂತೆ ಅಜ್ಜನ ಸಾವಿನ ಅನಂತರ ವರ್ಷಕ್ಕೊಮ್ಮೆ ಹೊಲದ ಲಾವಣಿ ಹಣ ತರಲು ಮಾತ್ರ ಹೋಗುತ್ತಿದ್ದ. ಒಮ್ಮೊಮ್ಮೆ ಕಾಕಾ ಅಯ್ಯನಗೌಡ ಮತ್ತು ಅಪ್ಪ ಕೂಡಿಯೇ ಹೋಗಿ ಬರುತ್ತಿದ್ದರು. ಒಂದು ಸಲ ಅಪ್ಪ ಆಣ್ಣ ಇಬ್ಬರೂ ಎತ್ತು ಚಕ್ಕಡಿ ಸಮೇತ ಹೋಗಿ ಬಂದರು. ನಾಲ್ಕೆಂಟು ದಿನವಿದ್ದು ಹೊಲ ಹರಗಿ ಬಿತ್ತಿ ಬಂದರು. ವರ್ ಬೆಳೆ ಎಷ್ಟು ಬಂತು ಎಂಬುದು ನೆನಪಿಲ್ಲ. ಆದರೆ ಚಿಕ್ಕ ತಡಸಿಗೆ ಹೋಗುವಾಗ ಹೊಟ್ಟು ಮೇವು ಸಮೇತ ಚಕ್ಕಡಿ ರಸ್ತೆಪಕ್ಕದ ಹೊಲದಲ್ಲಿ ಬಿದ್ದಿತ್ತು ಎಂದು ಅಣ್ಣ ಹೇಳಿದ ಸಂಗತಿ ನೆನೆಪಿದೆ. ಎಂದೂ ಡಾಂಬರ ರಸ್ತೆಯಲ್ಲಿಯಾಗಲಿ, ವಾಹನ ಸಂಚಾರವಿರುವ ರಸ್ತೆಯಲ್ಲಾಗಲಿ ತಿರುಗಾಡಿ ರೂಢಿ ಇರದ ಬಿಳಿ-ಕೆಂದ ಹೋರಿಗಳು  ಮೋಟರ ಸಪ್ಪಳಕ್ಕೆ ಬೆದರಿ ಚಕ್ಕಡಿಯನ್ನು ಕೆಡವಿಬಿಟ್ಟಿದ್ದವು.

ಹೊಳಿ ಹೊಲ, ಮಾವಿನ ಗಿಡದ ಹೊಲ, ಎರಿ ಹೊಲ ಎಂಬ ಹೆಸರುಗಳನ್ನು ಬಾಲ್ಯದಿಂದಲೇ ಕೇಳುತ್ತ ಬಂದಿರುವೆ. ಅಪ್ಪ ಒಮ್ಮೊಮ್ಮೆ ಕಣದಲ್ಲಿ ಮಲಗಿದಾಗ ಚಿಕ್ಕತಡಸಿ ಹೊಲದ ಬಗ್ಗೆ ಮಾವ, ಅಣ್ಣನ ಮುಂದೆ ಹೇಳುವಾಗ ನನ ಕಿವಿಗೂ ಬಿದ್ದ ಮಾಹಿತಿ ಇದು. ನಮ್ಮೂರು ಚಿಕ್ಕತಡಸಿ ಎಂಬುದು ಗೊತ್ತಾದದ್ದು ಮೊದಲ ಸಲ ತಡಸಿ ಹೆಳವನಿಂದ. ನಸುಕಿನಲ್ಲಿ ಬಂದು ಮನೆ ಹುಸಿಯಲ್ಲಿ ಕುಳಿತು ರಾಗಬದ್ಧವಾಗಿ ನಮ್ಮ ವಂಶದ ಬಳ್ಳಿಯನ್ನು ಹೇಳುವಾಗ ನನ್ನ ಹೆಸರು ಬರುತ್ತಿತ್ತು.

ಅಕ್ಕ ಶಾಂತಕ್ಕನ ಮದುವೆ ಸಂದರ್ಭದಲ್ಲಿ ಎರಡು ಮೂರು ಬಾರೆ ಚಿಕ್ಕತಡಸಿಗೆ ಹೋಗಿ ಬಂದ, ಅಪ್ಪ. ಹಣದ ಅಡಚಣಿಯಿದ್ದುದರಿಂದ ಸುಗ್ಗಿಗಿಂತ ಮೊದಲೇ ಲಾವಣಿ ತರಲು ಎಡತಾಕಿದ್ದ. ಅಪ್ಪ ಹೀಗೆ ಚಿಕ್ಕ ತಡಸಿಗೆ ಹೋಗುವಾಗ ಹೆಚ್ಚಾಗಿ ನಡೆದುಕೊಂಡೆ ಹೊಗುತ್ತಿದ್ದ. ಕಾಕಾ ಬಸ್ ಚಾರ್ಜಿಗೆ ಕೊಟ್ಟ ಹಣವನ್ನು ಮರಳಿ ಬಂದು ಕೊಡುತ್ತಿದ್ದ. ಒಮ್ಮೆ ಚಿಕ್ಕತಡಸಿಗೆ ಹೋಗುವಾಗ ನರಗುಂದ  ಬಸ್ ಸ್ಟ್ಯಾಂಡಿನಲ್ಲಿ ಕುಳಿತು ನನ್ನನ್ನು ಕರೆಕಳಿಸಿದ್ದ. ನಾನಾಗ ನರಗುಂದದಲ್ಲಿ ಓದುತ್ತಿದ್ದೆ. ನಾನು ಬಂದು ಭೇಟಿಯಾದಾಗ ತನ್ನಲ್ಲಿದ್ದ  ಬಸ್ ಚಾರ್ಜಿನ ಹಣವನ್ನೆಲ್ಲ ನನಗೆ ಕೊಟ್ಟುಬಿಟ್ಟ. ಎರಡು ರೂಪಯಿಯ ಕೆಂಪು, ಐದರ ಹಸಿರು ನೋಟನ್ನು ನನ್ನ ಕೈಗಿಟ್ಟು ಸಾಯಂಕಾಲದ ಸಮಯದಲ್ಲಿ ನಡೆಯುತ್ತಲೆ ಚಿಕ್ಕತಡಸಿ ದಾರಿ ಹಿಡಿದ. ಅಪ್ಪ ಮೊದಲ ಸಲ ರೊಕ್ಕ ಕೊಟ್ಟಿದ್ದ. ಅವನ ಕಿಸೆಯಲ್ಲಿ ರೊಕ್ಕ ಇಟ್ಟದ್ದನ್ನು ಸಹ ಮೊದಲ ಸಲ ನೋಡಿದೆ. ಅಪ್ಪ ನಡೆದುಕೊಂಡು ಹೋಗುವ ಬಗ್ಗೆ ನನಗೆ ಆತಂಕವಿತ್ತು ಆದರೆ ಹಣ ಮರಳಿಕೊಟ್ಟು ಒತ್ತಾಯ ಮಾಡಿ ಬಸ್ಸಿಗೆ ಹೋಗು ಎಂದು ಹೇಳುವಷ್ಟು ಸಲಿಗೆ ಇರಲಿಲ್ಲ, ಧೈರ್ಯವೂ ಇರಲಿಲ್ಲ. ವಾರದ ಕೊನೆಯಲ್ಲಿ ಊರಿಗೆ ಬಂದಾಗ ಅಮ್ಮನಿಗೆ ಅಪ್ಪ ರೊಕ್ಕ ಕೊಟ್ಟ ಸಂಗತಿ ತಿಳಿಸಿದೆ. ಅಮ್ಮ ಹಣೆ ಹಣೆ ಬಡಿದುಕೊಂಡು -" ಶಿವನಗೌಡಪ್ಪನ ಬಾಳವುನೇ ಹಿಂತಾದ್ದು" ಎಂದು ಮರುಗಿದಳು.

No comments: