Tuesday, August 9, 2022

ಡಾ.ಶಂಭು ಬಳಿಗಾರ

 ಜನಪದ ರತ್ನ


ನಿಸರ್ಗ ಸಹಜ ಪರಿಸರದಲ್ಲಿ ಬೆಳೆದುಬಂದು ಸಂಚಲನಗೊಳ್ಳುತ್ತಿರುವ ಜನಪದವು ಕಟ್ಟಿಕೊಡುವ ಜೀವನ ದರ್ಶನವನ್ನು ಅಷ್ಟೇ ಸಹಜವಾಗಿ, ಸೊಗಸಾಗಿ, ಚಿತ್ರವತ್ತಾಗಿ ಬಣ್ಣಿಸುವ ಕಲೆ ಡಾ.ಶಂಭು ಬಳಿಗಾರ ಅವರಿಗೆ ಸಿದ್ಧಿಸಿದೆ. ಜನಪದ ಸಂಸ್ಕೃತಿಯ ನಾಡಿಮಿಡಿತವನ್ನು ಬಲ್ಲ ಬಳಿಗಾರ ಅವರು ಅಲ್ಲಿಯ ಸಡಗರ - ಸಂಭ್ರಮ, ನೋವು - ಸಂಕಟ, ಹಾಸ್ಯ - ವಿನೋದ, ವಿಷಾದ - ವಿಡಂಬನೆ, ವೈವಿಧ್ಯತೆ - ವಿಶೇಷಗಳನ್ನು ಕೇಳುಗರಿಗೆ ಉಣಬಡಿಸುವ ರೀತಿಯಿ

ದೆಯಲ್ಲ ಅದಕ್ಕೆ ಬೆಲೆಕಟ್ಟಲಾಗದು. 

ಡಾ.ಶಂಭು ಬಳಿಗಾರ ಅವರ ಜನಪದ ಸಂಸ್ಕೃತಿ ಕುರಿತಾದ ಮಾತುಗಳು, ಪ್ರಬಂಧಗಳು, ಭಾಷಣಗಳು ಮತ್ತು ಧ್ವನಿಸುರಳಿ - ಧ್ವನಿಯಡಕಗಳು ನನ್ನಲ್ಲಿ ಮೂಡಿಸಿದ ಭಾವಗಳು ಜನಪದ ಗಂಗೋತ್ರಿ ತ್ರಿಪದಿಯಲ್ಲಿ ಹೀಗೆ ಮೂಡಿಬಂದಿವೆ :


ಜನಪದ ನುಡಿಗಳ ಕೆನೆಹಾಲ ಹೆಪ್ಪಾಕಿ

ಮನಮೆಚ್ಚೊ ಬೆಣ್ಣಿ ತೆಗೆದಂತ ! ಶಂಭಣ್ಣ

ಅನುಭವದ ಗಣಿಯೊ ನಾಡಲ್ಲಿ !


ಎಳ್ಳುಜೀರಿಗೆ ಬೆಳೆದು ಕಳ್ಳಿಬಳ್ಳಿಯ ಬೆಸೆದು

ಬಳ್ಳದಲಿ ಸುಗ್ಗಿ ಮಾಡುವ ! ದುಡಿಮೆಯ

ಹಳ್ಳಿಯ ರೈತ ಈಶಂಭು !


ಕಲ್ಲೆದೆಯ ಮನುಜರನು  ಮೆಲ್ಲಗೆ ಕರಗಿಸಿ

ಮಲ್ಲಿಗೆ ಕಂಪ ಸೂಸುವ ! ಜನಪದದ

ಸೊಲ್ಲ ಸರದಾರ ಶಂಭಣ್ಣ !


ಮಧುರಮನಸುಗಳೆಲ್ಲ ಹದವರಿತು ಹಬ್ಬಿಸಿದ

ಚದುರರ ಹಾಡು ಪಾಡನ್ನು ! ಕಥನವನು

ಹದಮಾಡುಣಿಸುವನು ಶಂಭಣ್ಣ!


ಹಾಡು ಹಾಡಿನ ಒಡಲ

ಜಾಡು ಜಾಡನು ಹಿಡಿದು

ತೀಡಿ ತಿದ್ದಿದ ರಾಗದಲಿ ! ಹೆಣೆಯುವ

ಮೋಡಿಗಾರನಿವ ಶಂಭಣ್ಣ!


ಹಿತಮಿತದ ನುಡಿಯಲ್ಲಿ

ಕತೆಯ ಹೇಳುವ ಚತುರ

ಗತಿಲಯದ ಬೆನ್ನು ಹತ್ತುತ್ತ ! ಹಾಡುವ 

ಮತಿವಂತ ನೋಡೊ ಶಂಭಣ್ಣ!


ಹುಸಿಯ ವ್ಯಸನಕೆ ಸಿಕ್ಕು ಹಸಗೆಟ್ಟ ಜನರಿಗೆ

ಹಸನ ಬಾಳಿನ ದಾರಿಯನು । ತೋರಿದ

ಯಶಕಥನ ಮಾಂತ ಜೋಳಿಗೆ ।


ಹಾಲುಂಡ ತವರಿನ ಮೇಲಾದ ಬಣ್ಣನೆಗೆ

ಸೋಲದವರಾರು ಜಗದಲ್ಲಿ ! ಶಂಭುವಿನ 

ಜಾಲದ ಬೆಡಗೆ ಅಂತಹದು ।


ತೊಗರಿ ತಿಪ್ಪನ ಕತೆಯು ನಗೆಸಿರಿಯ ಹಾಲ್ಗಡಲು

ಬಗೆಬಗೆಯ ಜೇನ ಸವಿರುಚಿಯು ! ಶಂಭಣ್ಣ

ಜಗಕೆ ನೀಡಿದ ಕಾಣಿಕೆಯು !


ನುಚ್ಚಿನ ಮಲ್ಲಯ್ನ ಮೆಚ್ಚದವರಾರಿಲ್ಲ

ಹುಚ್ಚೆದ್ದು ಜನರು ನಕ್ಕಾರ ! ಶಂಭುವಿನ

ಸ್ವಚ್ಛ ತಿಳಿಹಾಸ್ಯ ಸವಿದಾರ !


ಭಾಗಿರತಿ ವರಸತಿಯ ತ್ಯಾಗದ ಹಿರಿ ಕತೆಯ

ತೂಗಿ ಚಂದದಲಿ ಹೇಳಿದ ! ಶಂಭುವಿನ

ಮಾಗಿದ ಮಾತು ಬಲು ಚಂದ !


ಗೋದಿಹುಗ್ಗಿಯ ನಿಜದ ಸ್ವಾದವನು ಅರಿತಂತ

ಮೇಧಾವಿ ನಮ್ಮ ಗಂಗಯ್ನ ! ಕಥನವನು

ಮೇದು ಸವಿಯುವುದೆ ಭಾಗ್ಯವು !


ಪತಿವರತಿ ನೀಲಮ್ಮ ಸತಿ ಧರುಮ ಪಾಲನೆಯ

ಹಿತವಾದ ಕತೆಯ ಕೇಳುವುದೇ ! ಭಾಗ್ಯವು

ಮತಿವಂತರಾದ ಜನಕೆಲ್ಲ ।


ಸೋಮರಾಯನ ಕತೆಗೆ ಭೀಮರಾಯನ ವ್ಯಥೆಯು

ಸಾಮರಸ್ಯದಲಿ ಬೆರಸಿದ । ಚತುರನಿಗೆ

ನಾಮ ವ್ಯಾಮೋಹ ಇನಿತಿಲ್ಲ ।


ಮಳೆದೇವಿ ಗುರುಜಿಯ ತಿಳಿಯಾದ ಕಥನವನು

ಅಳೆದಳೆದು ಸೂರೆ ಮಾಡಿರುವ । ಶಂಭುವಿಗೆ

ತಿಳಿವಿನ ನಮನ ಸಲ್ಲಿಸುವೆ ।


ಒಮ್ಮೊಮ್ಮೆ ಏನಾಗುತ್ತದೆ ಎಂದರೆ..ಒಂದು ವಿಷಯ ಜನಪ್ರಿಯವಾಗಿ, ಜನಮನ್ನಣೆ ಪಡೆದರೆ ಅದೇ ವ್ಯಕ್ತಿಯ /ಸಾಧಕನ ಬೇರೆ ಸಾಮರ್ಥ್ಯಗಳು ಗೌಣವೆನಿಸಿ ಹಿಂದಕ್ಕೆ ಸರಿದುಬಿಡುತ್ತವೆ. ಜನರು ಮತ್ತೆ ಮತ್ತೆ ಅದೇ ಪ್ರಸಿದ್ಧ ಸಂಗತಿಗಳನ್ನೆ ಕೇಳಲು ಬಯಸುವುದರಿಂದ, ಆ ಅಭಿಲಾಷೆಯನ್ನು ತಿರಸ್ಕರಿಸಲಾರದ ಸಾಧಕ, ತನಗೆ ಗೊತ್ತಿಲ್ಲದಂತೆಯೆ ತನ್ನ ಬೇರೆ ಆಯಾಮದ ಸಾಮರ್ಥ್ಯಗಳನ್ನು ದೂರಕ್ಕೆ ಸರಿಸಿಬಿಡುತ್ತಾನೆ..ಅಂದರೆ ಆ ಸಂಗತಿಗಳು ಅವನಿಂದ ದೂರಸರಿದುಬಿಡುತ್ತವೆ. 


ಡಾ. ಶಂಭು ಬಳಿಗಾರ ಅವರು ವಚನ ಸಾಹಿತ್ಯ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಚಾಮರಸನ ಪ್ರಭುಲಿಂಗ ಲೀಲೆ, ವಚನಗಳ ಮರು ಸಂಯೋಜನೆ ವಿಶಿಷ್ಟ ಕೃತಿ ಶೂನ್ಯ ಸಂಪಾದನೆಗಳ ಬಗೆಗೆ ಅನನ್ಯವಾಗಿ ಮಾತಾಡಬಲ್ಲರು. ಲಯಬದ್ಧ ವಾಚನ, ವಿಶ್ಲೇಷಣೆ ಮಾಡಬಲ್ಲರು. ಮೊದಮೊದಲು ಅವೆಲ್ಲಕ್ಕೂ ಸಮಾನ ಆದ್ಯತೆ ಕೊಡುತ್ತ ಬಂದ ಬಳಿಗಾರ ಅವರು ಅನಂತರ ಜನಪದ ಸಾಹಿತ್ಯ, ಸಂಸ್ಕೃತಿಗಷ್ಟೇ ಒತ್ತುಕೊಟ್ಟರು. ಧ್ವನಿಸುರುಳಿ, ಧ್ವನಿಯಡಕಗಳು ಪ್ರಸಿದ್ಧಿಪಡೆದ ಮೇಲೆ ಜನರು, ಸಂಘಟಕರು ಜನಪದ ವಿಷಯದ ಕುರಿತೇ ಮಾತಾಡಲು ವಿನಂತಿಸತೊಡಗಿದರು. ಹೀಗಾಗಿ ಬೇರೆ ಸಾಮರ್ಥ್ಯಗಳು ಗೌಣವಾಗಿಬಿಟ್ಟವು. ಒಂದರ್ಥದಲ್ಲಿ ಜನಪದದ ಮಾಯೆ ಅವರನ್ನು ಕಟ್ಟಿಹಾಕಿತು. ಡಾ. ಶಂಭು ಬಳಿಗಾರ ಅವರು ಜನಪದವನ್ನೇ ಉಸಿರಾಡಿಸುವ ಸಿದ್ಧಿಪುರುಷರಾಗಿಬಿಟ್ಟರು. 


೨೫-೩೦ ವರುಷಗಳಿಂದ ಅವರ ಒಡನಾಟದಲ್ಲಿರುವ ನನಗೆ, ಅವರ ಕಳ್ಳುಬಳ್ಳಿಯ ಮಾತುಗಳು, ಆಪ್ತನಡೆ, ಹೃದಯತಟ್ಟುವ ಭಾವಗಳು ಬಹಳ ಇಷ್ಟ. ಮೈಸೂರು ಪುನರ್ ಮನನ ಶಿಬಿರ, ಧಾರವಾಡ ಪುನರ್ ಮನನ ಶಿಬಿರ, ಮೌಲ್ಯಮಾಪನ ಸಂದರ್ಭಗಳಲ್ಲಿ ಅವರೊಂದಿಗೆ ಬೆಸೆದುಕೊಂಡೆ ಕಾಲ ಕಳೆದಿರುವೆ. 


ಈ ರೀತಿಯ ಒಡನಾಟ ಬೆಳೆಯಲು ಕಾರಣ ಅವರು ನನ್ನೊಂದಿಗೆ, ಮೌಲ್ಯ ಮಾಪನ ಕಾರ್ಯಕ್ಕಾಗಿ ಧಾರವಾಡದಲ್ಲಿ ವಸತಿ ಹೂಡಿದಾಗ ಇಡೀ ರಾತ್ರಿ ಸಂತಸದ ಮತ್ತು ನೋವಿನ ಘಳಿಗೆಗಳನ್ನು ಹಂಚಿಕೊಂಡ ಬಗೆ, ಆಗಾಗ ಬರೆದ ಪತ್ರಗಳು.

ಮತ್ತೆ ಮತ್ತೆ ಕೂಡಿದಾಗ ಅವರು ಹಂಚಿಕೊಂಡ ಸಂಗತಿಗಳಿಗೆ ಲೆಕ್ಕವಿಲ್ಲ.


ಒಂದು ಚಿಕ್ಕ ಸಹಾಯವನ್ನು ಅತ್ಯಂತ ಹೃದಯತುಂಬಿ ಸ್ಮರಿಸುವ ಅವರ ಕೃತಜ್ಞತಾ ಭಾವ ನನಗಂತೂ ಉನ್ನತ ಆದರ್ಶವೆನಿಸಿದೆ.


ಅವರ ಅನಾರೋಗ್ಯದ ಒಂದೊಂದು ಘಳಿಗೆಗಳನ್ನು, ಆ ಕ್ಷಣದ ತಮ್ಮ ಸ್ಥಿತಿಗತಿಗಳನ್ನು, ಆ ಸಂದರ್ಭದಲ್ಲಿ ವೈದ್ಯಕೀಯ ಸಲಹೆ ನೀಡಿ, ಸೂಕ್ತ ಚಿಕಿತ್ಸೆಗೆ ವ್ಯವಸ್ಥೆಮಾಡಿದ ಗೆಳೆಯವೈದ್ಯರನ್ನು, ಬಂಧು ಬಳಗವನ್ನು, ತಮ್ಮ ಸಂಸ್ಥೆಯವರನ್ನು, ವ್ಯವಹಾರಿಕ ಸಂಬಂಧವನ್ನು ಮೀರಿ ಕಾಳಜಿ ತೋರಿ ಸಹಾಯ ಮಾಡಿದ ಧ್ವನಿಸುರಳಿ ನಿರ್ಮಾಪಕನನ್ನು…ಪತ್ರದ ಮೂಲಕ ಶುಭ ಹಾರೈಸಿದ ಗೆಳೆಯರನ್ನು..ಎಳೆ ಎಳೆಯಾಗಿ ನನ್ನೊಂದಿಗೆ ಹಂಚಿಕೊಂಡಿದ್ದಾರೆ. 


ಎಂತಹ ಒತ್ತಡವಿದ್ದರೂ ನಾವು ಕರೆದ ಸಂದರ್ಭದಲ್ಲಿ ನಮ್ಮ ಶ್ರೀ ಖಾಸ್ಗತೇಶ ಕಲಾ ವಾಣಿಜ್ಯ ಮಹಾವಿದ್ಯಾಲಯಕ್ಕೆ, ಪದವಿ ಪೂರ್ವ ಮಹಾವಿದ್ಯಾಲಯಕ್ಕೆ, ಅಕ್ಕನ ಬಳಗದ ಕಾರ್ಯಕ್ರಮಕ್ಕೆ, ತಾಳಿಕೋಟಿ ದ್ಯಾಮವ್ವ ಕೃತಿ ಬಿಡುಗಡೆಗೆ, ಶೇಷಾಚಲ ಹವಾಲ್ದಾರ ಅವರ ನಿವೃತ್ತಿ ಬೀಳ್ಕೊಡುವ ಸಮಾರಂಭಕ್ಕೆ, ಚಬನೂರಿನ ಅಮೋಘಸಿದ್ಧನ ಜಾತ್ರೆಗೆ…ಹೀಗೆ ಹತ್ತು ಹಲವು ಬಾರಿ ನಮ್ಮ ಅಪೇಕ್ಷೆಯನ್ನು ಈಡೇರಿಸಿದ್ದಾರೆ. ಅಲ್ಲದೆ ನಮ್ಮ ಮಹಾವಿದ್ಯಾಲಯದ ನ್ಯಾಕ್ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ಮತ್ತು ಸಂಸ್ಥೆಯವರಿಗೆ ನಮ್ಮವರೇ ಆಗಿ ಮಹತ್ವದ ಕಿವಿಮಾತುಗಳನ್ನು ಹೇಳಿ ಉಪಕರಿಸಿದ್ದಾರೆ. ತೀರ ಇತ್ತೀಚೆಗೆ ಬೆಂಗಳೂರಿನ ಬಿ ಇ ಎಲ್ ಉತ್ತರ ಕನ್ನಡ ಬಳಗದವರ ಜನಪದ ಜಾತ್ರೆಗೆ ಉತ್ಸಾಹದಿಂದ ಬಂದು, ಮಾತೆ ಮಂಜಮ್ಮ ಜೋಗತಿ ಅವರೊಂದಿಗೆ ಸಭೆ ಹಂಚಿಕೊಂಡರು. ಜನಪದ ಅನನ್ಯ ಕಲಾವಿದ ಬಸಲಿಂಗಯ್ಯ ಹಿರೆಮಠ ಅವರಿಗೆ ಅರ್ಪಿತವಾದ ಆ ಕಾರ್ಯಕ್ರಮದ ವಿಶೇಷತೆಯನ್ನು ಮನದುಂಬಿ ವೇದಿಕೆಯಲ್ಲಿಯೇ ಸಂಘಟಕರನ್ನು ಹೊಗಳಿಹಾಡಿದರು.


ಕರ್ನಾಟಕದ ಮೂಲೆಮೂಲೆಗೂ ಜನಪದ ಕಂಪು ಹರಡಿದ ಡಾ. ಬಳಿಗಾರ ಅವರು ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲೂ ತಮ್ಮ ಜನಪದ ಉಪನ್ಯಾಸದಿಂದ ಪರಿಚಿತರಾಗಿದ್ದಾರೆ. ಅಭಿಮಾನಿಗಳನ್ನು ಹೊಂದಿದ್ದಾರೆ. 

ವಿದೇಶದ ಕನ್ನಡ ಸಂಘಟನೆಗಳ ಆಹ್ವಾನದ ಮೇರೆಗೆ ಹಲವು ಬಾರಿ ಪ್ರವಾಸ ಕೈಕೊಂಡು ಜನಪದ ಸಂಸ್ಕೃತಿಯ ಸವಿಯುಣಿಸಿ ಬಂದಿದ್ದಾರೆ.


ಪ್ರಾಥಮಿಕ ಶಾಲೆಯಿಂದ ವಿಶ್ಬವಿದ್ಯಾಲಯಗಳವರೆಗೆ, ಹಳ್ಳಿಯಿಂದ ದೆಹಲಿ, ಮೂಂಬೈ, ಬೆಂಗಳೂರು ನಗರಗಳವರೆಗೆ, ಚಿಕ್ಕ ಜಾತ್ರೆಯಿಂದ ಹಿಡಿದು ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳವರೆಗೆ, ಸುತ್ತೂರ ಜಾತ್ರೆಯಿಂದ ಹಿಡಿದು ಸಿದ್ಧೇಶ್ವರ ಸ್ವಾಮಿಗಳ ಪ್ರವಚನ ಸಭೆಗಳಿಗೆ..ಹೀಗೆ ಅಸಂಖ್ಯ ಕಾರ್ಯಕ್ರಮ ಗಳಿಗೆ ಹೋಗಿ ದಣಿವರಿಯದೆ ಉಪನ್ಯಾಸ ನೀಡಿದ್ದಾರೆ.


ಕಾಲೇಜು, ವಿಶ್ವವಿದ್ಯಾಲಯದ ಅನೇಕ ವಿಚಾರ ಸಂಕಿರಣಗಳಲ್ಲಿ..ಸಂಪನ್ಮೂಲ ವ್ಯಕ್ತಿಯಾಗಿ, ಸಂಘಟನಾಕಾರರಾಗಿ, ಪದವಿ ತರಗತಿಯ ಪಠ್ಯಪುಸ್ತಕ ಸಂಪಾದಕರಾಗಿ..ಸಮರ್ಥ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 


ಆಕಾಶವಾಣಿ ಮತ್ತು ದೂರದರ್ಶನ (ಬೆಳಗು, ಹರಟೆ) ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.


ಧ್ವನಿಸುರಳಿಗಳು ಗ್ರಾಮೀಣ ಜನರ ಜೊತೆಗೆ ನಗರ ನಾಗರಿಕರಿಗೂ ಅತ್ಯಂತ ಪ್ರಿಯವಾಗಿವೆ. ಧ್ವನಿ ಸುರುಳಿ ಕೇಳಿದವರು  ಅಭಿಮಾನಿಗಳಾಗಿ ಅವರನ್ನು ನೋಡಲು ಹಂಬಲಿಸಿದ್ದಾರೆ. ಊರಿಗೆ ಕರೆಸಿ,ಮಾತುಗಳನ್ನು ಹೃದಯಾರೆ ಕೇಳಿ,  ಕಣ್ತುಂಬ ನೋಡಿ, ಹೃದಯತುಂಬಿ ಹರಸಿದ್ದಾರೆ. 


ಕಾರ್ಯಕ್ರಮಗಳ ಸಂಖ್ಯೆ ಸಾವಿರ ಸಾವಿರ..ಕೇಳುಗರು ಕೋಟಿ ಕೋಟಿ… ಗಿನ್ನಿಸ್ ದಾಖಲೆಗಿಂತ ಮಿಗಿಲು..ಇವರ ಸಾಧನೆ. 

ಆದರೆ ಕ್ರಮಬದ್ಧವಾಗಿ ಸಂಯೋಜನೆ ಮಾಡದೆ ಇರುವುದರಿಂದ ಅವರ ಈ ಕೊಡುಗೆ ಬಹಳ ಜನರ ಗಮನ ಸೆಳೆದಿಲ್ಲ. 


ದೇಸಿsಯ ಬದುಕಿsನ ಮಾಸsದ ಅನುಭವವ

ಖಾಸ ಪದಗಳ ಜೋಕಾಲಿ ! ಕಟ್ಟವಗೆ

ಲೇಸಾದ ತ್ರಿಪದಿ ಉಡುಗೊರೆಯು !


ಜನಪsದ ಸಂಸ್ಕೃತಿಯ ಘನತೆಯ ನಡೆಗಳನು

ಮನತಟ್ಟೊ ಶಬ್ದ ಜಾಲದಲಿ ! ಹೆಣೆವವಗೆ

ವಿನಯsದ ತ್ರಿಪದಿ ಉಡುಗೊರೆಯು !


ಜನಪದದ ಹೆಸರನ್ನು ಜನಪದದ ಉಸಿರನ್ನು

ಜನಪದದ ಕೆನೆಯ ಮೊಸರನ್ನು ! ಕಡೆವವಗೆ

ಮಣಿಹsದ ತ್ರಿಪದಿ ಉಡುಗೊರೆಯು !


ಭಾವsದ ಒಳಗೆಲ್ಲ ಜೀವ ಪರಿಮಳ ತುಂಬಿ

ಜೀವ ಜೀವsಕು ಅಮೃತsವ ! ಉಣಿಸುವಗೆ

ಸಾವಿರದ ತ್ರಿಪದಿ ಉಡುಗೊರೆಯು !


ಸಂಗ ಬಸವನ ನೆನೆದು ತುಂಗ ಮಾತುಗಳಾಡಿ

ಮಂಗಲದ ಭಾವ ಸೂಸುವ ! ಶಂಭುವಿಗೆ

ರಂಗಿsನ ತ್ರಿಪದಿ ಉಡುಗೊರೆಯು !


ಸದಮಲ ಹೃದಯದ ಮೃದುಮಧುರ ಮಾತಿನಲಿ

ಸದರದಲಿ ಮನವ ಗೆಲ್ಲುವ ! ಶಂಭುವಿಗೆ

ಚದುರ ತ್ರಿಪದಿಗಳ ಉಡುಗೊರೆಯು !


****


ಶಿಗ್ಗಲಿ ಹೂವಿನ ಮೊಗ್ಗು ತಾ ಶಂಭಣ್ಣ

ಹಿಗ್ಗಿನಲಿ ಹಾಡು ಹಾಡುವನು ! ಜನಪದದ

ಸುಗ್ಗಿ ಮಾಡುವನು ದಿನನಿತ್ಯ !


ಇಳಕಲ್ಲ ಮಾಂತsನ ಬೆಳಕಿನಲಿ ಅರಳುತ್ತ

ಚುಳುಕಿsನ ವಚನ ವಾಚಿಸುತ ! ಶರಣರ 

ಹೊಳಪಿsನ ಬೆಡಗ ಬಿಡಿಸ್ಯಾನ !


ಶೂನ್ಯ ಸಂಪಾದನೆಯ ಸನ್ನಿವೇಶವನಾಯ್ದು

ಚನ್ನಾದ ಗಮಕ ವಾಚನದಿ ! ಮನತುಂಬಿ

ಬಣ್ಣಿಸುವ ಬಗೆಯೆ ಬೆಡಗಿನದು !


ದೇಶsದ ತುಂಬೆಲ್ಲ ದೇಸಿನುಡಿ ಸವಿಯನ್ನು

ಲೇಸಾದ ಮಾತು ಹಾಡಿನಲಿ ! ಬಣ್ಣಿಸುವ 

ಮಾಸsದ ರತ್ನ ಈ ಶಂಭು !

No comments: