Friday, August 12, 2022

ಸಿದ್ರಾಮಯ್ಯ ಹಿರೇಮಠ

 ಸಾಂಸ್ಕೃತಿಕ ಬದುಕಿಗೆ ತೆರೆದುಕೊಂಡಿದ್ದ ಸಿದ್ಧರಾಮಯ್ಯ ಹಿರೇಮಠ ..


ಈಗ ನಮ್ಮೊಂದಿಗಿಲ್ಲ ಎಂದು ಅನಿಸುವುದೇ ಇಲ್ಲ. ಅಷ್ಟು ನಮ್ಮ ಚಿಂತನೆಗಳಲ್ಲಿ ಬೆರೆತು ಹೋಗಿದ್ದಾರೆ.

ಇದೇ ರೀತಿ ನಮ್ಮ ಚಿಂತನೆಯಲ್ಲಿ ಬೆರೆತು ಹೋದವರೆಂದರೆ ಎಸ್, ಜಿ. ಅಂಗಡಿ ಸರ್ ಮತ್ತು ಮಲ್ಲಪ್ಪ ಸಜ್ಜನ ಗೆಳೆಯರು.


ನಾವು (ಶೇಷಾಚಲ ಹವಾಲ್ದಾರ ಮತ್ತು ನಾನು) ಸಿದ್ಧರಾಮಯ್ಯ ಅವರ ಜೊತೆ ಕೂಡಿದರೆ ಸಾಕು..ಅಂದು ಒಂದು ಹೊಸ ವಿಷಯ ಚರ್ಚೆಗೆ ಬಂದೇ ಬರುತ್ತಿತ್ತು. ಪಿಯುಸಿ ವರೆಗೆ ಮಾತ್ರ ಓದಿದ್ದ ಅವರು ಓದು ಮತ್ತು ಆಸಕ್ತಿಯಿಂದ ಅನೇಕ  ವಿಷಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದರು.


ಥಟ್ ಅಂತ ಹೇಳು ಚಂದನ ಟಿ.ವಿ. ಕಾರ್ಯಕ್ರಮದಲ್ಲಿ ಭಾಗವಹಿಸಿ ಏಳು ಪುಸ್ತಕ ಪಡೆದಿದ್ದರು. ನಾನು, ಅನಿಲ ಇರಾಜ ಮತ್ತು ಎಂ.ಎಸ್. ಬಿರಾದಾರ ಸಹಿತ ಅಷ್ಟು ಪುಸ್ತಕಗಳನ್ನು ಪಡೆದಿರಲಿಲ್ಲ.


ಕಡಕೋಳ ಮಡಿವಾಳಪ್ಪ ಅವರ ಹಾಡಿನ ಬಗೆಗೆ ಬಹಳ ಗುಂಗು ಇತ್ತು. ಬಹುಶ ಅದು ಅವರ ತಂದೆ ನಿಂಗಯ್ಯ ಮುತ್ಯಾರಿಂದ ಬಂದುದು. ಆವರ ಆಸಕ್ತಿ ಎಷ್ಟಿತ್ತೆಂದರೆ ಒಂದು ದಿನ ನಮ್ಮನ್ನು ( ನಾನು, ಶೇಷಾಚಲ ಸರ್, ಅನಿಲ ಇರಾಜ ಸರ್ ) ಕರೆದುಕೊಂಡು ಹೊರಟೇ ಬಿಟ್ಟರು. ಕಡಕೋಳದ ಪರಿಸರವನ್ನು ಕಣ್ಣಾರೆ ಕಂಡು ಅಂದಿನ ದಿನ ಮಾನವ

ನ್ನೆಲ್ಲ ಕಲ್ಪಿಸಿಕೊಂಡು ಮುದ ಗೊಂಡಿದ್ದರು. ಮಠದ ಸ್ವಾಮಿಜಿಯವರೊಂದಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಚಬನೂರಿನಲ್ಲಿ ಕಡಕೋಳ ಮಡಿವಾಳಪ್ಪನವರ ಪುರಾಣ ಪ್ರವಚನದ ವೇಳೆ ದಿನವೂ ಅಲ್ಲಿಗೆ ಹೋಗಿ ಬರುತ್ತಿದ್ದರು. ಒಂದು ದಿನ ಮಧ್ಯಾಹ್ನವೇ ನನ್ನನ್ನು ಕರೆದುಕೊಂಡು ಹೊರಟು ಬಿಟ್ಟರು. ಅಲ್ಲಿ ಕಲಕೇರಿ ಅವರ ಮನೆಯಲ್ಲಿ ಇದ್ದ ತಾಡೋಲೆಯ ಹಸ್ತಪ್ರತಿಯನ್ನು ಪರಿಶೀಲಿಸಿದೆವು. ಅನಂತರ ಪುರಾಣಿಕರ ಜೊತೆ ಕೂತು ಮಾತಾಡಿದೆವು. 

ಸಂಜೆ ನಡೆದ ಪುರಾಣದಲ್ಲಿ ನನಗೆ ಕಡಕೋಳ ಮಡಿವಾಪ್ಪ ಅವರ ತತ್ವಪದದ ಬಗೆಗೆ ಮಾತಾಡಲು ಹೇಳಿದರು. ಹತ್ತು ನಿಮಿಷದ ಅಂದಿನ ಮಾತುಗಳೆಲ್ಲ ಅವರೊಂದಿಗೆ ಮೊದಲೇ ಚರ್ಚಿತವಾಗಿದ್ದರೂ ಬಹಳ ಕುತೂಹಲದಿಂದ ಕೇಳಿದರು. ಮತ್ತೆ ಊರಿನ ಜನರೊಂದಿಗೆ ಹಂಚಿಕೊಂಡರು. ಕಟಕರೊಟ್ಟಿ ಕಾರಬ್ಯಾಳಿ ತಾಟಿನತುಂಬ ಹಾಕಿ ಕೊಡಿಸಿದರು. ತಾವೂ ಹಾಕಿಸಿಕೊಂಡು ಅದರ ರುಚಿ ಬಗೆಗೆ ಮಾತಾಡಿದ್ದೇ ಮಾತಾಡಿದ್ದು. ಚಬನೂರಿನ ಜನ ಸಹ ನಮ್ಮನ್ನು ( ಸಿದ್ಧರಾಮಯ್ಯನವರ ಗೆಳೆಯರು) ಬೇರೆಯವರು ಎಂದು ಭಾವಿಸುತ್ತಿರಲಿಲ್ಲ. 


ಅಮೋಘಸಿದ್ಧನ ಜಾತ್ರೆ ಸಂದರ್ಭದಲ್ಲಂತೂ ಅವರ ಉತ್ಸಾಹ ಹೇಳತೀರದು. ತಾಳಿಕೋಟಿಯಿಂದ ಗೆಳೆಯರ ಬಳಗ ಕರೆದುಕೊಂಡು ಹೊರಟೇ ಬಿಡುತ್ತಿದ್ದರು.

ಹೂ ತರಲು ಹೋದವರ ಹತ್ತಿರ ಹೋಗಿ ಪ್ರಶ್ನೆಗಳನ್ನು ಕೇಳಿ ನಮಗೆಲ್ಲ ಜಾತ್ರೆ ವಿಶೇಷತೆ ತಿಳಿಯುವಂತೆ ಮಾಡುತ್ತಿದ್ದರು. ಊರಿನಲ್ಲಿರುವ ಶಾಸನ ಸ್ಮಾರಕಗಳನ್ನು ತೋರಿಸುತ್ತಿದ್ದರು. ಮತ್ತು ತಾವು ಆಸಕ್ತಿಯಿಂದ ಸಂಗ್ರಹಿಸಿದ ಮಾಹಿತಿಗಳನ್ನು  ತಿಳಿಸುತ್ತಿದ್ದರು. ಸಾಯಂಕಾಲ ಬೆಲ್ಲದ ಜಿಲೇಬಿ ಮತ್ತು ಮಿರ್ಚಿ ಭಜಿಗಳನ್ನು ಪುಟ್ಟಿಗಟ್ಟಲೇ ತಿನಿಸುತ್ತಿದ್ದರು. ಮಿರ್ಚಿ ಪ್ರಿಯರಾದ, ಶೇಷಾಚಲ ಸರ್, ಅಂಗಡಿ ಸರ್ ಮಾತಾಡುತ್ತಲೇ ಖಾಲಿ ಮಾಡುತ್ತಿದ್ದರು. ಗಚ್ಚಿನಮಠರು, ಸಿ. ಸಿ. ಪಾಟೀಲರು, ಮುಂತಾದವರ ದೊಡ್ಡ ಬಳಗವೇ ಇರುತ್ತಿತ್ತು. ಒಂದು ನಿಮಿಷವನ್ನೂ ವ್ಯರ್ಥಮಾಡದೆ, ಗುಡಿ ತೋರಿಸಿ, ಡೊಳ್ಳಿನ ಮೇಳದವರ ಪರಿಚಯ ಮಾಡಿಸಿ, ಹೇಳಿಕೆ ಹೇಳುವವರನ್ನು ಪರಿಚಯಿಸಿ, ಈರಕಾರರನ್ನು ಮಾತಾಡಿಸಿ, ಬೂತಾಳ ಸಿದ್ದನ ಸ್ಮಾರಕದ ಗುಡಿ ತೋರಿಸಿ, ಜಾತ್ರಾ ಕಮೀಟಿಯವರ ಹತ್ತಿರ ಜಾತ್ರೆ ತಯಾರಿ ಬಗೆಗೆ ಚರ್ಚಿಸುತ್ತಿದ್ದರು.  ಗುಡಿಯ ಉಗ್ರಾಣದಲ್ಲಿರಿಸಿದ್ದ ಅಂಬಲಿ ಗಡಿಗೆ ತೋರಿಸಿ ಮಾಡುವ ವಿಧಾನ ಹೇಳುತ್ತಿದ್ದರು. ಕಾಕುಳ್ಳಿನಲ್ಲಿ ಬೇಯಿಸಿದ ಕಟಾಂಬಲಿಯ ರುಚಿ ಅದು ಉಂಡವರಿಗೇ ಗೊತ್ತು. ಹಸಿ ಈರುಳ್ಳಿ, ಎಣ್ಣೆ ಹಾಕಿ ಹದ ಮಾಡಿ ಕಟ್ಟಿದ ಕಟಾಂಬಲಿಯನ್ನು ಪಂಕ್ತಿಯಲ್ಲಿ ಕೂತು ಬೊಗಸೆಯೊಡ್ಡಿ ಹಾಕಿಸಿಕೊಂಡು ಪ್ರಸಾದವೆಂದು ತಿನ್ನುವುದಿದೆಯಲ್ಲ ಅದು ಶಬ್ದಗಳಲ್ಲಿ ವರ್ಣಿಸಲು ಬಾರದ ಅನುಭವ. ಮನೆಯಲ್ಲಿ ಜಾತ್ರೆಯ ಸಿಹಿ ಊಟ ಮಾಡಿಸಿ, ರಾತ್ರಿ ಹೇಳಿಕೆಯ ವೇಳೆಗೆ ನಮ್ಮನ್ನೆಲ್ಲ ಎಬ್ಬಿಸಿ ಗದ್ದಲದ ನಡುವೆ ನಿಲ್ಲಿಸಿಬಿಡುತ್ತಿದ್ದರು. ಪ್ರತಿ ಒಂದು ಕಾರ್ಯಕ್ರಮದ ವಿವರ ನೀಡುತ್ತಿದ್ದರು. ಅವರು ನೀಡುವ ವಿವರಗಳನ್ನು ಕೇಳಿಯೇ ನಾನು ಹೊನಲು ಅಂತರ್ಜಾಲ ಪತ್ರಿಕೆಗೆ ಲೇಖನ ಬರೆದು ಕಳಿಸಿದ್ದೆ. ಪ್ರಕಟಿತ ಬರಹದ ಪ್ರಿಂಟ ತೆಗೆಯಿಸಿ ಹತ್ತಾರು ಪ್ರತಿ ಝರಾಕ್ಸ ಮಾಡಿಸಿ ಆಸಕ್ತರಿಗೆ ಕೊಟ್ಟು ಓದಲು ಹೇಳುತ್ತಿದ್ದರು.


ಜಾತ್ರಾ ಸಮಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಸಂಯೋಜಿಸಲು ಚಿಂತನೆಮಾಡಿ..(ಕ್ರೀಡಾ ಸ್ಪರ್ಧೆ, ಉಚಿತ ಕಣ್ಣಿನ ಚಿಕಿತ್ಸೆ ಇವುಗಳ ಜೊತೆಗೆ) ಸಭಾ ಕಾರ್ಯಕ್ರಮಕ್ಕೆ ಮೊದಲ ಬಾರಿ ಡಾ. ಶಂಭು ಬಳಿಗಾರ ಅವರನ್ನು ಕರೆಸಿದ್ದರು. ಇಳಕಲ್ಲಿಗೆ ಹೋಗಿ ಅವರಿಗೆ ಆಮಂತ್ರಣ ಕೊಟ್ಟು  ಕರೆತಂದು ಅವರನ್ನು ಬಹಳ ಗೌರವದಿಂದ ನೋಡಿಕೊಂಡಿದ್ದರು. ಈ ವರುಷದ ಜಾತ್ರೆಗೆ ಹರಟೆಯ ಕಲಾವಿದರನ್ನು ಕರೆಸಿದ್ದರು. ಈಗ ಆ ಪರಂಪರೆ ಮುಂದುವರೆದಿದೆ.


ಊರಿನ ಶಾಲೆಯ ಬಗೆಗೆ ಅಷ್ಟೇ ಕಾಳಜಿ ಇತ್ತು ಅವರಿಗೆ. ಶಿಕ್ಷಕರ ಜೊತೆ ಮಾತಾಡಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮ ಮಾಡಿಸುತಿದ್ದರು. ನಮ್ಮ ಹುಡುಗಾಟ - ಹುಡುಕಾಟ ತಂಡದಿಂದ ಎರಡು ಬಾರಿ ಚಟುವಟಿಕೆ ಮಾಡಿಸಿದ್ದರು. ಶಾಲೆಯ ಮು.ಗು.ಮತ್ತು ಮಾಳಿ ಸರ್ ಜೊತೆಗೆ ಆಪ್ತವಾಗಿ ಮಾತಾಡಿ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದರು.


ಜನಪದ ಜೀವನದ ಹಾಸ್ಯ ಸಂಗತಿಗಳನ್ನು ರಸವತ್ತಾಗಿ ವಿವರಿಸುತ್ತಿದ್ದರು. ಪದಬಂಧ ತುಂಬುವುದರಲ್ಲಿ ಬಹಳ ಪರಿಣತಿ ಪಡೆದಿದ್ದರು. ಪದಬಂಧ, ಸುಡೊಕು ಬಿಡಿಸುವ ಸಲುವಾಗಿಯೇ ಪತ್ರಿಕೆಗಳನ್ನು ತರಿಸುತ್ತಿದ್ರರು. ಪ್ರಜಾವಾಣಿ ಸಾಪ್ತಾಹಿಕದ ಲೇಖನಗಳನ್ನು ಓದಿ, ಅಲ್ಲಿನ ವಿಶೇಷ ಪದಬಂಧ ಬಿಡಿಸಿದಾಗಲೇ ಅವರಿಗೆ ಸಮಾಧಾನ. ಯಾವುದೆ ಒಂದು ಪದ ಅನುಮಾನ ಮೂಡಿಸಿದರೆ ಆಕ್ಷಣ

ದಲ್ಲಿಯೇ ಫೋನ್ ಮಾಡಿ ಕೇಳುತ್ತಿದ್ದರು, ಶೇಷಾಚಲ ಸರ್ ಮತ್ತು ನನ್ನನ್ನು.


ಬಸವಣ್ಣನವರ ಬಗೆಗಿನ ಬಿ.ಪುಟ್ಟಸ್ವಾಮಯ್ಯ ಅವರ ಸಂಪುಟಗಳನ್ನು ನಾಲ್ಕಾರು ಬಾರಿ ಓದಿ ಮುಗಿಸಿದ್ದರು ಅಲ್ಲದೆ. ಕೊಂಡು ತಂದು ಗೆಳೆಯರಿಗೆ ಓದಲು ಹಚ್ಚುತ್ತಿದ್ದರು. ಸಮಯ ಹೊಂದಿಸಿ ಓದಿದವರನ್ನು ಸೇರಿಸಿ ಚರ್ಚಿಸುತ್ತಿದ್ದರು. ಹೊಸ ಹೊಸ ಪುಸ್ತಕಗಳ ಹೆಸರು ನಮ್ಮಿಂದ ಕೇಳಿ ಆಸಕ್ತಿಯಿಂದ ಓದುತ್ತಿದ್ದರು. ಅಷ್ಟೇ ಅಲ್ಲ ವಿಷಯದ ಕುರಿತು ಚರ್ಚಿಸುತ್ತಿದ್ದರು.


ಹೊಲಕ್ಕೆ ನಮ್ಮನ್ನೆಲ್ಲ ಕರೆದೊಯ್ದು , ಬೆಳೆ ತೋರಿಸಿ, ಬಾರಿ ಹಣ್ಣು ತಿನ್ನಿಸಿ, ಹಸಿಕಡಲೆ ತಿನ್ನಿಸಿ, ಗಿಡದ ನೆರಳಿನಲ್ಲಿ ಕೂಡಿಸಿ ಅಪ್ಪಟ ದೇಸಿ ಊಟವನ್ನು ಮಾಡಿಸುತ್ತಿದ್ದರು. ಪುಂಡಿ ಪಲ್ಲೆ, ಕೆಂಪಖಾರ, ಕೆನಿ ಕೆನಿ ಮೊಸರು, ಕಟಕ ರೊಟ್ಟಿ, ಹುಳಬಾನ,ಅಗಸಿ ಚಟ್ನಿ, ಹತ್ತರಕಿ ಪಲ್ಲೆ….ಅಂದು ಉಂಡ ರುಚಿ ಈಗಲೂ ನಾಲಿಗೆಯ ಮೇಲೆ ಇದೆ.


ಚಬನೂರಿಗೆ ಹೋದಾಗ ತಪ್ಪದೇ ಹತ್ತರಕಿ ಪಲ್ಲೆ ಕಾರ್ಚಿಕಾಯಿ ತರುತ್ತಿದ್ದರು. ಒಮ್ಮೊಮ್ಮೆ ತಾವು ಹೋಗದಿದ್ದರೆ ಊರಿನವರಿಗೆ ಹೇಳಿ ತರಿಸಿ ಮನೆಮನೆಗೆ ಕಳಿಸುತ್ತಿದ್ದರು.


ಮೊಬೈಲ್ ನಲ್ಲಿ, ಕಂಪ್ಯೂಟರನಲ್ಲಿ ಹೊಸದನ್ನು ಕಲಿಯುವದೆಂದರೆ  ಹಿಗ್ಗೋ ಹಿಗ್ಗು… ಅದೊಂದು ಸವಾಲೆಂದು ಸ್ವೀಕರಿಸಿ ಕಲಿತೇ ಬಿಡುತ್ತಿದ್ದರು. 


ಚಬನೂರಿನ ಜಾತ್ರೆ ಬಗೆಗೆ ಮೊದಲು ಪತ್ರಿಕೆಯಲ್ಲಿ ಬರೆದು ಪ್ರಕಟಿಸಿದವರು ಸಿದ್ಧರಾಮಯ್ಯ ಅವರೇ.


ವ್ಯವಹಾರದ ಗೆಳೆಯರೊಂದಿಗೆ ವ್ಯವಹಾರದ ಮಾತು, ಸಾಹಿತ್ಯ, ಸಂಸ್ಕೃತಿ, ಜನಪದರ ಜೊತೆಗೆ ಸಂಸ್ಕೃತಿ ಆಶಯದ ಮಾತು..


ಕಟ್ಟಿಗೆ ಗುಣಲಕ್ಷಣ, ವ್ಯಾಪಾರ, ಜಂತ್ರಿ ಲೆಕ್ಕ, ರಂದಾ ಮಶಿನ್, ಪ್ಲಾಯ್ ವುಡ್, ಹಣ ಹೂಡಿಕೆ, ಚೀಟಿ ವ್ಯವಹಾರ…ರಾಜಕೀಯ..ಸಾಹಿತ್ಯ..ಹೀಗೆ ಹತ್ತು ಹಲವು ಆಸಕ್ತಿಗಳು…

ಹೇಳಲು ಇನ್ನೂ ನೂರಿವೆ…ಈಗ ಇಷ್ಟು ಸಾಕು..

ನುಡಿನಮನಗಳು…



No comments: