Friday, August 12, 2022

ಅಪ್ಪ

 ದೊಡ್ಡಮಾವ - ಮುಟ್ಟಿಗೆ ಊಟ

ಬಾಲ್ಯದಿಂದಲೂ ನನ್ನನ್ನು ಕಾಡಿದ, ಪುಳಕಗೊಳಿಸಿದ ಅಪ್ಪ ಶಬ್ದಕ್ಕೆ ಮಾಂತ್ರಿಕ ಶಕ್ತಿ ಇದೆ. ನನ್ನ ಮನದಲ್ಲಿ ಮೂಡಿದ ಅಪ್ಪನ ಚಿತ್ರ ಮತ್ತು ಅಪ್ಪ ಎಂಬ ಶಬ್ದ ನನ್ನಲ್ಲಿ ಅನುಸಂಧಾನಗೊಂಡ ರೀತಿಯೇ ವಿಶಿಷ್ಟವಾಗಿದೆ. ಚಿಕ್ಕವನಿದ್ದಾಗ ಅಪ್ಪನನ್ನು ಅಪ್ಪ ಎಂದು ಕರೆಯುತ್ತ ಬೆಳೆಯಲೇ ಇಲ್ಲ. ಎರಡು ವರ್ಷದವನಾಗುವುದಕ್ಕಿಂತ ಮುಂಚೆಯೇ ತಾಯಿಯನ್ನು ಕಳೆದುಕೊಂಡದ್ದರಿಂದ ಅವ್ವ ಎಂದು ಕರೆಯುವ ಅವಕಾಶವಂತೂ ಇರಲೇ ಇಲ್ಲ. ಅವ್ವ ಮತ್ತು ಅಪ್ಪ ಶಬ್ದಗಳು ಮತ್ತು ವ್ಯಕ್ತಿಗಳು ನನ್ನನ್ನು ಮತ್ತೆ ಮತ್ತೆ ಬಗೆದು ನೋಡುತ್ತಲೆ ಇವೆ. ಇಲ್ಲವೆ ನಾನೇ ಆ ಶಬ್ದಗಳನ್ನು ಬಗೆದು ನೋಡುತ್ತಿರುತ್ತೇನೆ.   

ಅಪ್ಪನನ್ನು ಅಪ್ಪ ಎಂದು ಕರೆಯದೇ ದೊಡ್ಡಮಾವ ಎಂದು ಏಕೆ ಕರೆಯುತ್ತೇನೆ, ನನ್ನ ಗೆಳೆಯರು ತಮ್ಮ ಅಪ್ಪಂದಿರನ್ನು ಅಪ್ಪ ಎಂದೇ ಕರೆಯುವಾಗ ನಾನೊಬ್ಬನೆ ಏಕೆ ಹೀಗೆ _ ಎಂಬುದು ಸೋಜಿಗ ಮತ್ತು ದಿಗಿಲು ! ನನ್ನ ಅಪ್ಪ ಉಳಿದವರಂತೆ ಇಲ್ಲವಲ್ಲ ? ಯಾವಾಗಲೂ ತನ್ನದೇ ಲೋಕದಲ್ಲಿರುತ್ತಾನೆ ? ವಿಲಕ್ಷಣ ಸಿಟ್ಟು ಏಕಿದೆ ? ಹೀಗೆ ಹತ್ತಾರು ಪ್ರಶ್ನೆಗಳು ನನ್ನನ್ನು ಕಿತ್ತು ತಿನ್ನುತ್ತಿದ್ದವು. ಅಪ್ಪನ ಕುರಿತು ಪ್ರೀತಿ, ಗೌರವ, ಅಭಿಮಾನಗಳಿಗಿಂತ ಹೆದರಿಕೆಯೇ ಹೆಚ್ಚಾಗಿರುತ್ತಿತ್ತು. ಅಪ್ಪನ ಸನಿಹ ಇರಬೇಕೊ ದೂರ ಇರಬೇಕೊ ಎಂಬ ಗೊಂದಲ ಸದಾ ಕಾಡುತ್ತಿತ್ತು. ಅಪ್ಪ ಸನಿಹವಿದ್ದರೆ ಒಂದು ರೀತಿ ದೂರವಿದ್ದರೆ ಒಂದು ರೀತಿ ನಿಗೂಢವಾಗಿಯೇ ಕಾಣುತ್ತಿದ್ದ. ಹೀಗೆ ನನ್ನ ಮನದಾಳದಲ್ಲಿ ಮೂಡಿದ ಅಪ್ಪನ ಚಿತ್ರ ವಿಲಕ್ಷಣ ಮತ್ತು ವಿಶಿಷ್ಟವಾಗಿದೆ.   

ಅಪ್ಪನ ಚಿತ್ರ ಆಗ ಬಾಲ್ಯದಲ್ಲಿ ಹೇಗೆ ಮೂಡಿತ್ತೊ ಇಂದೂ ಹಾಗೆಯೇ ಇದೆ. ದಪ್ಪನೆಯ ಧೋತ್ರ, ಮಂಜರಪಾಟ್ ಉದ್ದ ತೋಳಿನ ಅಂಗಿ, ತಲೆಯ ಮೇಲೊಂದು ಮಸಕು ಬಿಳಿಪಟಗ (ರುಮಾಲು). ಕೆಲಸಕ್ಕೆ ತೊಡಕಾಗದಂತೆ ಮೊಣಕಾಲು ಮೇಲೆ ಉಟ್ಟ ಧೋತ್ರ, ಸಡಿಲಾಗಿ ಸುತ್ತಿದ ಪಟಗ. ಸದಾ ಒಕ್ಕಲುತನದಲ್ಲಿಯೇ ಮುಳುಗಿ ದನಗಳ ಒಡನಾಟದಲ್ಲಿರುವ ಅಪ್ಪನಿಗೆ ಗೊತ್ತಿದ್ದದ್ದು: ಹೊಲ, ಮನೆ, ಗ್ವಾದಲಿ, (ದನದ)ಹಕ್ಕಿ, ಹಿತ್ತಲ ಮಾತ್ರ. ಇವಿಷ್ಟನ್ನು ಬಿಟ್ಟು ಬೇರೆ ಸಂಗತಿಗಳು ಗೊತ್ತೇ ಇರಲಿಲ್ಲ. ರೂಪಾಯಿ ನೋಟು, ನಾಣ್ಯಗಳೂ ಗೊತ್ತಾಗುತ್ತಿರಲಿಲ್ಲ.

ಜಾತ್ರೆ ಹಬ್ಬ ಉತ್ಸವ ಮದುವೆ ಏನೇ ಇದ್ದರೂ ಅಪ್ಪನ ವೇಷಭೂಷಣದಲ್ಲಿ ಬದಲಾವಣೆ ಇರುತ್ತಿರಲಿಲ್ಲ. ವಿಶೇಷವಾದ ಉಡುಗೆ ತೊಡುತ್ತಿರಲಿಲ್ಲ. ವಿಶೇಷವಾದ ಉಡುಗೆಯನ್ನೇ ಹೊಲಿಸಿಕೊಂಡಿರುತ್ತಿರಲಿಲ್ಲ. ಯಾವ ಸಂದರ್ಭದಲ್ಲಿಯೂ ತನ್ನ ಕಾಯಕ ಉಡುಗೆ ತೊಡುಗೆ ಬದಲಾವಣೆ ಮಾಡುತ್ತಿರಲಿಲ್ಲ. ತನ್ನನ್ನು ಸಂಪೂರ್ಣವಾಗಿ ಕೃಷಿಗೆ ಸಮರ್ಪಿಸಿಕೊಂಡಿದ್ದ. ನನ್ನ ಊರಿನಲ್ಲಿ ಅಪ್ಪನ ಹಾಗೆ ಕೃಷಿ ಕಾಯಕಕ್ಕೆ ಸಮರ್ಪಿಸಿಕೊಂಡ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿಲ್ಲ. ಸುತ್ತ ನಾಲ್ಕಾರು ಹಳ್ಳಿಯವರು ಸಹ ಅಪ್ಪನ ಕಾಯಕ ಸ್ವರೂಪವನ್ನು ಮೆಚ್ಚಿ ಕೊಂಡಾಡುವುದನ್ನು ಅನೇಕ ಸಾರೆ ಕೇಳಿದ್ದೇನೆ; ಕಂಡಿದ್ದೇನೆ. ಈಗಲೂ ಸಹ ಕೆಲವು ಜನ -ನಮ್ಮೂರ ಕರಿಗಾರ ಬಸಪ್ಪ, ಕುಂಬಾರ ಗಾಣೆ ಬಸಪ್ಪ ಮುಂತಾದವರು 'ನಾನು ಶಿವನಗೌಡರ ಕೈಯಲ್ಲಿ ಪಳಗಿದವ, ಅವ್ರಿಂದ ಒಕ್ಕಲುತನದ ಕೆಲಸದಲ್ಲಿ ಸೈ ಅನ್ನಿಸಿಕೊಂಡವ'  ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ, ಅಭಿಮಾನ ಪಡುತ್ತಾರೆ.

ಬಂಧುಗಳ ಮದುವೆ ಸಮಾರಂಭಕ್ಕೆ ಇಲ್ಲವೆ ಜಾತ್ರೆಗೆ ಹೊರಟರೂ ಅದೇ ಅಂಗಿ-ಧೋತ್ರ- ಪಟಗ. ಬಹಳವೆಂದರೆ ಎದೆ ಮೇಲಿನ ಗುಂಡಿ (ಬಿರಡಿ)ಗಳು ಮಾತ್ರ ಬದಲಾಗುತ್ತಿದ್ದವು. ಅಂದು ಅಜ್ಜ ಬಳಸಿಬಿಟ್ಟ ಬೆಳ್ಳಿಯ ಗುಂಡಿಗಳನ್ನು ಅಪ್ಪ ಹಾಕಿಕೊಳ್ಳುತ್ತಿದ್ದ. ನಾನೂ ಚಿಕ್ಕವನಿದ್ದಾಗ ಇಂತಹ ಬೆಳ್ಳಿ ಗುಂಡಿಗಳನ್ನು ಬಳಸುತ್ತಿದ್ದೆ. ಅಣ್ಣ ಮಾವ ಇಬ್ಬರೂ ಬಳಸುತ್ತಿದ್ದರು. ಊರವರೂ ಕೆಲಜನ ಬೆಳ್ಳಿ ಗುಂಡಿಗಳನ್ನು ಬಳಸುತ್ತಿದ್ದರು. 

ಅಪ್ಪನಿಗೆ ವರ್ಷಕ್ಕೊಂದು ಜೊತೆ ಧೋತ್ರ, ಮೂರು ಒಳಂಗಿ, ಎರಡು ಉದ್ದ ತೋಳಿನ ಮಂಜರ ಪಾಟ್ ಅಂಗಿ, ಎರಡು ಪಟಗ ಕಡ್ಡಾಯವಾಗಿ ಬೇಕಾಗುತ್ತಿದ್ದವು. ಅಪ್ಪನಿಗೆ ಬೇಕಾದ ಮತ್ತೊಂದು ವಸ್ತು ಎಂದರೆ ದುಪ್ಪಟ್ಟಿ. ಇದನ್ನು  ಉಡುಗೆ-ತೊಡುಗೆ ಮತ್ತು ಹೊದಿಕೆಯಾಗಿ ಬಳಸುತ್ತಿದ್ದ. (ದುಪ್ಪಟ್ಟಿ ಎಂದರೆ ಬಿಳಿ ಮಂಜರಪಾಟ್ ಬಟ್ಟೆಯ ಬೆಡ್ ಶೀಟ್.) ಚಳಿಗಾಲದಲ್ಲಿ ಈ ದುಪ್ಪಟಿಯನ್ನು ಶಾಲಿನಂತೆ ಬಳಸುತ್ತಿದ್ದ. ಅಪ್ಪನ ಈ ವೇಷ ಭೂಷಣಗಳಲ್ಲಿ ಬೇಗನೇ ಹರಿದು ಹಾಳಾಗುವ ಬಟ್ಟೆ ಎಂದರೆ ಧೋತ್ರಳು ಮಾತ್ರ. ರಾತ್ರಿ ಜಳಕಮಾಡಿದಾಗ  ತೊಯ್ದ ಧೋತ್ರ ಮರುದಿನ ಮಧ್ಯಾಹ್ನದವರೆಗೂ ನೆನೆಯುತ್ತಿತ್ತು- ಅಗಸರು ಬಂದು ಬಟ್ಟೆ ಒಗೆ(ತೊಳೆ)ಯಲು ಒಯ್ಯುವವರೆಗೆ. ಅಪ್ಪ,  ಪ್ರತಿದಿನ

ಎಲ್ಲ ಕೆಲಸ ಮುಗಿದ ಮೇಲೆ ರಾತ್ರಿ ಜಳಕಮಾಡುವ ರೂಢಿ ಇಟ್ಟುಕೊಂಡಿದ್ದ. ಅಮ್ಮ ಸದಾ 'ಶಿವನಗೌಡಪ್ಪನ ಧೋತ್ರ ನೆನದ ಹಾಳಗತಾವು' ಎಂದು ಗೊಣಗುತ್ತಿದ್ದಳು. 


ಒಂದು ಡಬರಿ ಬಿಸಿನೀರಿನಲ್ಲಿ ಜಳಕಮಾಡಿ  ಧೋತ್ರ ಉಟ್ಟು, ಒಳಂಗಿ ಹಾಕಿಕೊಂಡು ಊಟಕ್ಕೆ ಕೂಡುತ್ತಿದ್ದ. ಕೂಡ್ರುಮಣೆ, ಅಡ್ಡಣಿಗೆ ಮೇಲೆ ಕಂಚಿನ ಗಂಗಾಳ, ಮಗ್ಗುಲಲ್ಲಿ ವಿಭೂತಿ ಕರಡಿಗೆ ಅಪ್ಪ ಬರುವುದಕ್ಕಿಂತ ಮುಂಚೆ ಸಿದ್ಧವಾಗಿರಬೇಕಾಗಿರುತ್ತಿತ್ತು. ಕೊರಳಲ್ಲಿ ಗುಂಡಗಡಿಗೆ ಇತ್ತು. ಮೈ ಕಾವಿಗೆ ಅದು ಕಪ್ಪಗಾಗಿರುತ್ತಿತ್ತು. ಆದರೆ ಒಂದು ದಿನವೂ ಲಿಂಗಪೂಜೆಯನ್ನಾಗಲಿ, ದೇವರಪೂಜೆಯನ್ನಾಗಲಿ ಮಾಡುತ್ತಿರಲಿಲ್ಲ. ದೇವರ ಗುಡಿಗೂ ಹೋಗುತ್ತಿರಲಿಲ್ಲ. ಊರಲ್ಲಿಯ, ಪರವೂರಿನ  ಯಾವ  ದೇವರಿಗೂ  ನಮಸ್ಕರಿಸಿದ್ದನ್ನು ನಾನು ನೋಡಿಲ್ಲ. ಆದರೆ ಆ ದೇವರ ಬಗೆಗೆ ಶ್ರದ್ಧೆಯಿಂದ ಮಾತಾಡುತ್ತಿದ್ದ. ಬನಹಟ್ಟಿಯ ಹೊನ್ನಂತೆವ್ವ, ರುದ್ರಸ್ವಾಮಿ ಮತ್ತು ಗೊಡಚಿ ವೀರಭದ್ರ ದೇವರ ಬಗೆಗೆ ಅಪಾರ ನಿಷ್ಠೆ ಇತ್ತೆಂಬುದು ಅಪ್ಪನ ಮಾತಿನಿಂದ ವ್ಯಕ್ತವಾಗುತ್ತಿತ್ತು. ಮಾತಿಗೊಮ್ಮೆ ತಪ್ಪದೆ ಬಸವಾ ಬಸವಾ ಎನ್ನುತ್ತಿದ್ದ. ಬಸವಾ ಬಸವಾ ಎಂಬ ಶಬ್ದ ಅವನ ಉಸಿರೇ ಆಗಿತ್ತು.


ರಾತ್ರಿ ಊಟಕ್ಕೆ ಎರಡು ಬಿಸಿ ರೊಟ್ಟಿ, ಗೋದಿ ಕಿಚಡಿ ಇದ್ದರೆ ಸಾಕು. ಒಂದೊಂದು ದಿನ ಗೋದಿ ಕಿಚಡಿಯಲ್ಲಿ ಹಾಲಿನ ಜೊತೆ ಬೆಲ್ಲ ಹಾಕಿಸಿಕೊಂಡು ಉಣ್ಣುತ್ತಿದ್ದ. ನಾನು ಅದೇ ಆಗ ಊಟ ಮಾಡಿದ್ದರೂ ಒಂದೆರಡು ತುತ್ತು ಒತ್ತಾಯ ಮಾಡಿ ತಿನಿಸುತ್ತಿದ್ದ. ಗೋದಿ ಕಿಚಡಿ ಇಲ್ಲವೆ ನವಣಿ ಅನ್ನ  ಇರದಿದ್ದರೆ ಹಾಲು ರೊಟ್ಟಿ ಉಣ್ಣುತ್ತಿದ್ದ. ಅಗಾಗ ಬಾಯಿರುಚಿಗಾಗಿ ಮುಟ್ಟಿಗೆ ಮಾಡಿಸಿಕೊಳ್ಳುತ್ತಿದ್ದ. ಬಳ್ಳೊಳ್ಳಿ, ಬ್ಯಾಡಗಿ ಮೆಣಸಿನಕಾಯಿ ಖಾರ ಜಜ್ಜಿ ಸಿದ್ಧಮಾಡಿದ ಹಿಂಡಿಕಲ್ಲಿನಲ್ಲಿ ದಪ್ಪ ರೊಟ್ಟಿ ಸೇರಿಸಿ ಹದವಾದ ಬಿಸಿ ಬಿಸಿ ಮುಟ್ಟಿಗೆ ಮಾಡುವದೂ ಒಂದು ಕಲೆ. ಅಮ್ಮ ಮಾಡಿದ ರೊಟ್ಟಿಯಲ್ಲಿ ಅಕ್ಕ ಶಾಂತಕ್ಕ ಮುಟ್ಟಿಗೆ ಮಾಡಿಕೊಡುತ್ತಿದ್ದಳು. ನಾವು ಅಪ್ಪನ ನಂತರ ಸರತಿ ಹಚ್ಚಿ ಮುಟ್ಟಿಗೆ ಮಾಡಿಸಿಕೊಳ್ಳುತ್ತಿದ್ದೆವು. ಅವಸರವಿದ್ದಾಗ ಕೈಮುಟ್ಟಿಗೆಯನ್ನು ಅಪ್ಪನೇ ಮಾಡಿಕೊಳ್ಳೂತ್ತಿದ್ದ. ಅಮ್ಮ ಮಾಡುವ ರೊಟ್ಟಿ ದಪ್ಪಗೆ ಇದ್ದು ಮುಟ್ಟಿಗೆ ಮಾಡಲು ಹೇಳಿಮಾಡಿಸಿದಂತಿರುತ್ತಿದ್ದವು. ಕೈಬೆರಳಲ್ಲಿ ಅಮೃತವಿರುವುದರಿಂದ ಸರಿಯಾಗಿ ಹಿಚುಕಿ ಮಾಡಿದ ಮುಟ್ಟಿಗೆ ರುಚಿಯಾಗುತ್ತವೆ ಎಂದು ಅಮ್ಮ ಆಗಾಗ ಹೇಳುತ್ತಿದ್ದಳು. ನಾನು ಈಗಲೂ ಮುಟ್ಟಿಗೆ ಮಾಡಿಕೊಂಡು, ಮಾಡಿಸಿಕೊಂಡು ತಿನ್ನುತ್ತೇನೆ. ಬಾಲ್ಯದ ಆ ರುಚಿಯನ್ನು ಬೆಚ್ಚಗೆ ಉಳಿಸಿಕೊಂಡಿದ್ದೇನೆ. ಮುಂದಿನ ತಲೆಮಾರಿನ ಮಕ್ಕಳಿಗೂ ರುಚಿ ಗೊತ್ತು ಮಾಡಿಸಿದ್ದೇನೆ. ಮಗಳಿಗೆ ಕೈಮುಟ್ಟಿಗೆ ಮಾಡಿಕೊಟ್ಟು ಅಮ್ಮನ ಮಾತನ್ನೇ ಅನೇಕ ಸಾರೆ ಹೇಳಿದ್ದೇನೆ. ``ನಾನು ಅಮೃತವ್ವನ ಮಗ. ನನ್ನ ಕೈಬೆರಳಲ್ಲಿ ಅಮೃತವಿದೆ.ಅದಕ್ಕೆ ನಾ ಮಾಡಿದ ಮುಟ್ಟಿಗೆ ರುಚಿಯಾಗಿರುತ್ತವೆ-ಎಂದು.   


ಅಕ್ಕ ಶಾಂತಕ್ಕ ರೊಟ್ಟಿ ಮಾಡುವುದನ್ನು ಕಲಿತಿದ್ದರೂ ರಾತ್ರಿ ರೊಟ್ಟಿ ಮಾಡುವ ಪಾಳೆ ಅಮ್ಮನದೇ ಆಗಿರುತ್ತಿತ್ತು. ಏಕೆಂದರೆ ಅಮ್ಮನಿಗೆ ಮೇಲಿನ ಕೆಲಸ ಮಾಡುವುದಾಗುತ್ತಿರಲಿಲ್ಲ. ತಾಟು-ಗಂಗಾಳ ಕೊಡುವುದು, ನೀಡುವುದು, ತೊಳೆಯುವುದು ಅಕ್ಕನ ಕೆಲಸವಾಗಿದ್ದವು.  ಅಮ್ಮ ತಾಯಿಕಳೆದುಕೊಂಡ ಮಕ್ಕಳಾದ ನಮ್ಮೆಲ್ಲರನ್ನು ಅತ್ಯಂತ ಪ್ರೀತಿಯಿಂದ ಬೆಳೆಸುತ್ತಿದ್ದಳು. ಹೆಚ್ಚಿಗೆ ಕೆಲಸವನ್ನೂ ಹಚ್ಚುತ್ತಿರಲಿಲ್ಲ. ಅದೇ ರೀತಿ ಶಾಂತಕ್ಕನಿಗೂ ಹೆಚ್ಚಿನ ಕೆಲಸ ಹಚ್ಚುತ್ತಿರಲಿಲ್ಲ. ಇದು ಒಂದು ಕಾರಣವಾದರೆ ಇನ್ನೊಂದು ಕಾರಣ ಬೇರೆ ಇತ್ತು. ಅಪ್ಪ ಸದಾ ತನ್ನ ಲೋಕದಲ್ಲಿಯೇ ಇರುತ್ತಿದ್ದ. ಒಮ್ಮೊಮ್ಮೆ ಊಟಕ್ಕೆ ಬಂದಾಗಲೂ  ಸಿಟ್ಟಿನಲ್ಲಿರುತ್ತಿದ್ದ. ಅಕ್ಕ ಶಾಂತಕ್ಕ ಜಳಕಕ್ಕೆ ನೀರಿಟ್ಟು ಊಟಕ್ಕೆ ನೀಡಿದರೆ ಅಪ್ಪನ ಸಿಟ್ಟು ಶಾಂತವಾಗುತ್ತಿತ್ತು. ಅಕ್ಕ ಶಾಂತಕ್ಕನ ಮೇಲೆ ಅಪ್ಪನ ಪ್ರೀತಿಯೂ ಹೆಚ್ಚು. ಅಪ್ಪ ತಾನು ಏನು ಹೇಳಬೇಕಾದರೂ ಅಕ್ಕನ ಮುಂದೇ ಹೇಳುತ್ತಿದ್ದ. ಅಮ್ಮನಿಗೆ ಹೇಳಬೇಕಾದ ಸಂಗತಿಯಿದ್ದರೂ ಅಕ್ಕನ ಮುಂದೇ ಹೇಳುತ್ತಿದ್ದ. ಅಕ್ಕ ಶಾಂತಕ್ಕ ಅಪ್ಪನ ಸಿಟ್ಟನ್ನು ಶಾಂತ ಮಾಡುವ ಔಷಧವೂ ಆಗಿದ್ದಳು.


ಮಿರಗನ ಮಳೆ - ಶುಂಟಿ ಕಾಡೆ


ಹದಿನಾರೆತ್ತಿನ ಇದಿರು ಗ್ವಾದಲಿ. ಮನೆ ತುಂಬ ಎತ್ತು ಆಕಳು ಕರುಗಳು. ನಾಲ್ಕು ಎತ್ತು, ನಾಲ್ಕಾರು ಹೋರಿಗಳು, ಹಿಂಡುವ, ಗಬ್ಬಾದ ಆಕಳುಗಳು, ಮೂರ್ನಾಲ್ಕು ಹೋರಿ ಕರು ಇಲ್ಲವೆ ಹೆಣ್ಣುಕರುಗಳು ಇದ್ದೇ ಇರುತ್ತಿದ್ದವು. ಆಕಳು ಹೆಣ್ಣುಕರು ಹಾಕಿದ್ದರೆ ಮಾತ್ರ ಹಿಂಡಿಕೊಳ್ಳಲು ಒಂದಿಷ್ಟು ಹಾಲು ಸಿಗುತ್ತಿದ್ದವು. ಹೋರಿಕರವಾಗಿದ್ದರೆ ಹಿಂಡಲು ಹೋದಾಗ  ಆಕಳ ಮೊಲೆಯಲ್ಲಿ ಹಾಲೇ ಇರುತ್ತಿರಲಿಲ್ಲ. ಅಪ್ಪ ರಾತ್ರೋರಾತ್ರಿ ಹೋರಿಕರ ಬಿಚ್ಚಿಬಿಟ್ಟು ಹಾಲು ಕುಡಿಸಿಬಿಟ್ಟಿರುತ್ತಿದ್ದ. ಶಾಂತವ್ವ, ಹೋರಿಕರ ರಾತ್ರಿ ಹಗ್ಗ ಹರಕೊಂಡು ಮೊಲಿ ಕುಡದಿರಬೇಕು ನೋಡು  ಎಂದು ಸಬೂಬು ಹೇಳುತ್ತಿದ್ದ. ಅಮ್ಮ ಮತ್ತು ನಮಗೆಲ್ಲ ಸುಳ್ಳು ಹೇಳಿ ಹೋರಿಕರ ಮೇಯಿಸುವಷ್ಟು ಕಕಲಾತಿ ಇತ್ತು ಅಪ್ಪನಿಗೆ. ಇದೆಲ್ಲ ಗೊತ್ತಿದ್ದ ಅಮ್ಮ ಸುಮ್ಮನೆ ನಕ್ಕು ಬಿಡುತ್ತಿದ್ದಳು. ಮನೆಯಲ್ಲಿ ಹಾಲು ಹೆಚ್ಚಿಗೆ ಇರದಿದ್ದಾಗ ಮನಸ್ಸಿನಲ್ಲಿಯೇ ಸಿಟ್ಟು ಮಾಡಿಕೊಳ್ಳುತ್ತಿದ್ದಳು. ಮುಂಜಾನೆ ಎದ್ದ ಕೂಡಲೇ ನಾವೆಲ್ಲರೂ ಅಣ್ಣ ಅಕ್ಕಂದಿರು ಮಾವ ಮತ್ತು ಅಮ್ಮ ಗಂಗಾಳಗಟ್ಟಲೇ ಚಹ ಕುಡಿಯುತ್ತಿದ್ದೆವು. ಬೆಲ್ಲದ ಚಹ ಕುಡಿಯುತ್ತಿದ್ದ ನಮ್ಮ ಈ ವರ್ತನೆ ಅಪ್ಪನಿಗೆ ಸರಿ ಬರುತ್ತಿರಲಿಲ್ಲ. ಆದ್ದರಿಂದ ಅಪ್ಪನ ಎದುರಿಗೆ ನಾವ್ಯಾರೂ ಚಹ ಕುಡಿಯುವಂತಿರಲಿಲ್ಲ, ಕುಡಿಯುತ್ತಿರಲಿಲ್ಲ. ಅಪ್ಪ ಊಟಕ್ಕೆ ಬಂದಾಗ ಚಹದ ಡಬರಿ ಒಲೆಮೇಲೆ ಇದ್ದರೆ ಸಿಟ್ಟಾಗುತ್ತಾನೆಂದು ಅಮ್ಮ ಚಹವನ್ನು ಅಕ್ಕನ ಕೈಯಿಂದ ಮುಸುರಿ ನೀರಿಗೆ ಹಾಕಿಸಿಬಿಡುತ್ತಿದ್ದಳು. ಚಿಕ್ಕ ಅಡುಗೆ ಮನೆಯಲ್ಲಿ ಮುಚ್ಚು ಮರೆ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಚಹದ ಆಸೆಗೆ ಅಡುಗೆ ಮನೆ ಮುಂದೆ ಕುಳಿತ ನಮಗೆ ದೊಡ್ಡ ನಿರಾಶೆಯಾಗುತ್ತಿತ್ತು. ಒಳಗೊಳಗೇ ಅಪ್ಪನ ಮೇಲೆ ಸಿಟ್ಟೂ ಬರುತ್ತಿತ್ತು. ಆದರೇನು ಮಾಡುವುದು ಅವನ ಸಿಟ್ಟಿನ ಮುಂದೆ ನಾವೆಲ್ಲರೂ ಅಸಹಾಯಕರು. 

ಚಹ ಕುಡಿಯದ ಅಪ್ಪ ಯಾವಾಗಲಾದರೊಮ್ಮೆ ಕಾಫಿ ಕುಡಿಯುತ್ತಿದ್ದ. ತನಗಾಗಿ ಮಾಡಿದ ಕಾಫಿಯಲ್ಲಿ ನನಗೂ ಪಾಲು ಕೊಡುತ್ತಿದ್ದ. ಮಳೆಯಲ್ಲಿ ತೊಯ್ಸಿಕೊಂಡು ಬಂದಾಗ  ಇಲ್ಲವೆ ಚಳಿಗಾಲದ ಸಾಯಂಕಾಲ ಸಮಯದಲ್ಲಿ ಕಾಫಿ ಬೇಡುತ್ತಿದ್ದ. ಅವನು ಬೇಡುವದಕ್ಕಿಂತ ಮುಂಚೆಯೇ ಅಮ್ಮ ಮುನ್ಸೂಚನೆಯನ್ನರಿತು ಮಾಡಿಕೊಡುತ್ತಿದ್ದಳು ಇಲ್ಲವೆ ಅಕ್ಕನಿಗೆ ಮಾಡಲು ಹೇಳುತ್ತಿದ್ದಳು. ಸುಗ್ಗಿ ಸಮಯದಲ್ಲಿ ರಾತ್ರಿ  ತೆನೆ ತುಳಿಸುವಾಗ, ರಾಶಿ ತೂರುವಾಗ ಕಣಕ್ಕೂ ತರಿಸಿಕೊಳ್ಳುತ್ತಿದ್ದ. ಮನೆಯಿಂದ  ಹಿತ್ತಾಳೆ ಕಿತ್ತಲಿಯಲ್ಲಿ  ತಂದ ಕಾಫಿ ತಣ್ಣಗಾಗುವ ಮುನ್ನವೇ ಕೈಯಲ್ಲಿಯ ಕೆಲಸ ಬಿಟ್ಟು ಕುಡಿಯುತ್ತಿದ್ದ. ಜೊತೆ ಕೆಲಸದವರಿಗೂ ಕುಡಿಯಲು ಕೊಡುತ್ತಿದ್ದ.  


ಮಿರಗನ (ಮೃಗಶಿರ) ಮಳೆ ಜಿಟಿಜಿಟಿ ಹತ್ತಿ ನೆಗಡಿ ಕೆಮ್ಮು ಬಂದಾಗ ಇಲ್ಲವೆ ಬರುವ ಸೂಚನೆ ಕಂಡಾಗ ಶುಂಟಿ ಕಾಡೆ (ಕಷಾಯ) ಕುಡಿಯುತ್ತಿದ್ದ. ಒಮ್ಮೊಮ್ಮೆ ಕಾಡೆ ಬದಲಾಗಿ  ಶುಂಟಿ-ಬೆಲ್ಲ ಜಜ್ಜಿಸಿಕೊಂಡು ತಿನ್ನುತ್ತಿದ್ದ. ಅಂಗಡಿಯಿಂದ ಶುಂಟಿ ತಂದು ಬೆಲ್ಲದ ಕಣ್ಣಿ ಸೇರಿಸಿ ತುದಿಗಟ್ಟಿ ಹಾಸುಗಲ್ಲಿನ ಮೇಲೆ ಗುಂಡುಕಲ್ಲಿನಿಂದ ಜಜ್ಜಿ ತಯಾರಿಸುವ ಕೆಲಸವನ್ನು - ಎಲ್ಲರನ್ನೂ ಬಿಡಿಸಿ ನಾನೇ ಮಾಡುತ್ತಿದ್ದೆ.  ಬೆಲ್ಲವೂ ಸಿಗುತ್ತಿತ್ತು. ಚಹ ಕುಡಿದಿದ್ದರೂ ಶುಂಟಿ-ಬೆಲ್ಲ ತಿನ್ನುವ ಚಪಲ ತೀರುತ್ತಿತ್ತು. ಬರೆಯುವ, ಓದುವ ಅವಸರವಿದ್ದರೂ ಈ ಶುಂಟಿ ಬೆಲ್ಲ ಜಜ್ಜುವ ಅವಕಾಶವನ್ನು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ. ಒಂದೆರಡು ಸಾರೆ ಜಜ್ಜುವ ಭರದಲ್ಲಿ ಬೆರಳನ್ನು ಗಾಯಮಾಡಿಕೊಂಡರೂ ನಾನೇ ಮಾಡಲು ಮುಂದಾಗುತ್ತಿದ್ದೆ. 


ನಾನು ಆಡಿ ದಣಿದು ರಾತ್ರಿ ಬೇಗನೆ ಮಲಗಿದಾಗ ಅಪ್ಪ ಬಂದು ಮಗ್ಗುಲಲ್ಲಿ ಕೂತು,  ದುಬ್ಬದ ಮೇಲೆ ಕೈಯಾಡಿಸಿ ಕಾಲಿನ ಬೆರಳನ್ನು ಲಟಕ್ಕೆನ್ನಿಸುತ್ತಿದ್ದ. ಸದಾ ದುಡಿದ ಒರಟು ಕೈಗಳ ಬಿಸಿ ಹಿತವೆನಿಸುತ್ತಿತ್ತು. ಮೈಯಲ್ಲಿ ಹುಷಾರಿಲ್ಲದೆ ನೆಗಡಿ-ಜ್ವರ ಬಂದು ಮಲಗಿದಾಗಲಂತೂ  ಅಪ್ಪ ೧೫-೨೦ ನಿಮಿಷ ಕಾಲ ಮೇಲೆ ಕೈಯಾಡಿಸಿ ಪಾದ ತಿಕ್ಕಿ ತಲೆ ಒತ್ತಿ ತನ್ನ ಮಮತೆಯನ್ನು ವ್ಯಕ್ತಮಾಡುತ್ತಿದ್ದ. ಆಗ ನನ್ನ ಅವನ ನಡುವೆ ಮಾತು ಕತೆ ಇರುತ್ತಿರಲಿಲ್ಲವಾದರೂ   ಸಂವೇದನೆಗಳು ತೀವ್ರವಾಗಿ ವಿನಿಮಯಗೊಳ್ಳುತ್ತಿದ್ದವು. 


ಅಪ್ಪ ಮಲಗುತ್ತಿದ್ದುದು ಬೇಗ. ಮಕ್ಕಳಾದ ನಾವಿನ್ನೂ ಅಂಗಳದಲ್ಲಿ ಆಟವಾಡುತ್ತಿದ್ದಾಗ ಅಪ್ಪ ಹಾಸಿಗೆ ಹಾಸಿ ಮನೆ ಎದುರಿನ ಕಟ್ಟೆಯ ಮೇಲೆ ಮಲಗಿರುತ್ತಿದ್ದ. ದಣಿದು ಮಲಗಿದ ಅಪ್ಪ ಒಮ್ಮೊಮ್ಮೆ ನನ್ನನ್ನು ಕಾಲು ತುಳಿಯಲು ಕರೆಯುತ್ತಿದ್ದ. ಗೆಳೆಯರೆಲ್ಲ ಮಾತಾಡಿಕೊಂಡು ಒಬ್ಬೊಬ್ಬರು ಒಂದೊಂದು ಕಾಲು ಒತ್ತಿ ಇಲ್ಲವೆ ತುಳಿದು, ಕಾಲ್ಬೆರಳನ್ನು ಲಟಕ್ಕೆನ್ನಿಸಿ ಮತ್ತೆ ಆಟದಲ್ಲಿ ಮಮರೆಯುತ್ತಿದ್ದೆವು. ನಾವು ಆಟ ಬಿಡುವ ಹೊತ್ತಿಗೆ ಅಪ್ಪ ಗೊರಕೆ ಹೊಡೆಯುತ್ತಿದ್ದ. 


ಹಸನ ಹಕ್ಕಿ - ಮೀಸಲು ತಿನಿಸು


ಬೇಗನೇ ಮಲಗಿದ ಅಪ್ಪ ನಸುಕಿನಲ್ಲಿ ಬೇಗನೇ ಏಳುತ್ತಿದ್ದ. ೩ ಗಂಟೆಗೆ ಎದ್ದು ಎತ್ತುಗಳಿಗೆ ಹೊಟ್ಟು ಹಾಕಿ, ದನದ ಕಾಲಲ್ಲಿಯ ಶೆಗಣಿ ತೆಗೆದು ಹಕ್ಕಿ ಹಸನು ಮಾಡಿ ಎತ್ತುಗಳಿಗೆ ತಿನಿಸು ತಿನಿಸುತ್ತಿದ್ದ. ರಾತ್ರಿ ಕಲಸಿ ಇಟ್ಟ ಹುರುಳಿ ನುಚ್ಚು-ಹಿಂಡಿಯನ್ನು ಬೇರೆ ಡಬರಿಯಲ್ಲಿ ಎತ್ತು- ಹೋರಿಗಳ ಪ್ರಮಾಣಕ್ಕನುಸಾರವಾಗಿ ಹಾಕಿ ಮುಂದೆ ಕುಳಿತು ತಿನಿಸುತ್ತಿದ್ದ. ಹಾಗೆ ತಿನಿಸುವಾಗ ಪ್ರತಿಯೊಂದು ಎತ್ತು ಹೋರಿಗಳ ಜೊತೆ ಕೂಡ ಮಾತಾಡುತ್ತಿದ್ದ. ಸಿಟ್ಟು ಬಂದಾಗ ಮನುಷ್ಯರನ್ನು ಬಯ್ಯುವಂತೆಯೇ ಬಯ್ಯುತ್ತಿದ್ದ. ಅವು ತಿನ್ನದಿದ್ದರೆ ಹಾಕಿದ ತಿನಿಸಿನಲ್ಲಿ ಏನು ಕಡಿಮೆಯಾಗಿದೆ ಎಂಬುದನ್ನು ತಿಳಿದು ಮೇಯಿಸುತ್ತಿದ್ದ. ರಾತ್ರಿ ನುಚ್ಚನ್ನು ತೋಯಿಸುವಾಗ ಯಾರೂ ಅದನ್ನು ನೋಡುವಂತಿರಲಿಲ್ಲ. ತೋಯಿಸಿಟ್ಟ ಡಬರಿಗಳು ಸಹ ಯಾರಿಗೂ ಕಾಣಬಾರದೆಂದು  ಚೀಲಹಚ್ಚಿಟ್ಟ ಗಡಂಚಿಯ ಕೆಳಗೆ ಮುಚ್ಚಿಡುತ್ತಿದ್ದ. ತಿನಿಸುವ ವ್ಯಕ್ತಿಯನ್ನು ಬಿಟ್ಟು ಬೇರೆ ಯಾರಾದರೂ ನೋಡಿದರೆ - ಕಣ್ ಬಿಟ್ಟರೆ - ತಿಂದದ್ದು ದನಗಳ ಹೊಟ್ಟೆಗೆ ಹತ್ತುವುದಿಲ್ಲ ಎಂದು ಬಲವಾಗಿ ನಂಬಿದ್ದ. ಒಬ್ಬ ತಾಯಿ ತನ್ನ ಮಗುವಿಗೆ ಸೆರಗು ಮುಚ್ಚಿ ಮೊಲೆ ಕುಡಿಸುವದಕ್ಕೂ ಅಪ್ಪ ದನಗಳಿಗೆ ತಿನಿಸು ತಿನಿಸುವದಕ್ಕೂ ಹೆಚ್ಚು ವ್ಯತ್ಯಾಸವಿರಲಿಲ್ಲ.  ನಸುಕಿನಲ್ಲಿ ಎದ್ದ ಮನೆಯವರಾಗಲಿ, ಶೆಗಣಿ ಬಳಿಯಲು ಬಂದ ಯಲ್ಲಪ್ಪ, ಹನಮಂತ(ಕುಡ್ಡಪ್ಪ), ಶಿವಪ್ಪನಾಗಲಿ ಅಪ್ಪ ಎತ್ತು, ಹೋರಿಕರುಗಳಿಗೆ ತಿನಿಸು ತಿನಿಸುವುದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಏಳುವುದಕ್ಕಿಂತ ಮುಂಚಿತ  ಅವುಗಳಿಗೆ ತಿನಿಸಿಬಿಟ್ಟಿರುತ್ತಿದ್ದ.   


ರಾತ್ರಿ ಊಟಕ್ಕಿಂತ ಮುಂಚೆ ದನಗಳಿಗೆ ಡೋಣಿಯಲ್ಲಿ ತುಂಬಿಸಿಟ್ಟ ನೀರು ಕುಡಿಸುತ್ತಿದ್ದ. ಮೂಡಲ ಬಿಳಿಹೋರಿ ಶೀಲ ಮಾಡುತ್ತಿದ್ದುದರಿಂದ ಬೇರೆ ದನ ಕುಡಿದ ನೀರು ಕುಡಿಯುತ್ತಿರಲಿಲ್ಲ. ಎಲ್ಲ ದನಗಳು ನೀರು ಕುಡಿದ ನಂತರ ಮೈ ತಿಕ್ಕಿ, ( ದನದ ಮೈ ತಿಕ್ಕಲೆಂದೇ ಒಣಗಿದ ಹೀರೆ ಕಾಯಿ ಅರ್ಧ ಹೆಚ್ಚಿ ಮಾಡಿದ  ವಿಶಿಷ್ಟ ಸಾಧನ ) ಬಾಲ ಜಗ್ಗಿ ಅವುಗಳ ಸೇವೆ ಮಾಡುತ್ತಿದ್ದ. ಗಳೆ ಹೊಡೆಯುವಾಗ - ಬಿತ್ತುವಾಗ ಎತ್ತುಗಳಿಗೆ ಬಾರಕೋಲಿನಿಂದ ಹೊಡೆದು ಮೈಮೇಲೆ ಗಾಯವಾಗಿದ್ದರೆ, ಬಾರು ಮೂಡಿದ್ದರೆ ಅದನ್ನು ತಿಕ್ಕಿ ಉಪಚರಿಸುತ್ತಿದ್ದ. ಮೈಮೇಲೆ ಒಂದಿಷ್ಟೂ ಕೆಸರು ಹತ್ತುವಂತಿರಲಿಲ್ಲ. ಹೊಡೆದವರಿಗೆ ಹಂಗಿಲ್ಲದೆ ಬಯುತ್ತಿದ್ದ. ಸಿಟ್ಟು ಬಂದು ತಾನೇ ಹೊಡೆದಿದ್ದರೂ ರಾತ್ರಿ ಮೈಮೇಲೆ ಮೂಡಿದ ಬಾರನ್ನು ನೋಡಿ ಮರುಗುತ್ತಿದ್ದ. ಪಶ್ಚಾತ್ತಾಪ ಪಡುತ್ತಿದ್ದ. 


ಮನೆಯ ಹಕ್ಕಿ ಹೇಗೆ ಪಡಸಾಲೆಯಂತೆ ಸ್ವಚ್ಛವಾಗಿರುತ್ತಿತ್ತೊ ಹಾಗೆ ಹಿತ್ತಲವೂ ಸ್ವಚ್ಛವಾಗಿರುತ್ತಿತ್ತು. ಹಿತ್ತಲಲ್ಲಿಯ ಮೇವು(ಕಣಕಿ) ಹೊಟ್ಟು ಮಳೆಗೆ ಒಂಚೂರು ತೊಯ್ದು ಹಾಳಾಗದಂತೆ ಕಾಳಜಿ ಮಾಡುತ್ತಿದ್ದ. ರೈತರಿಗೆ ಬಿಡುವಿರುವ ಸೋಮವಾರ ದನಗಳ ಮೈತೊಳೆಯುವದಕ್ಕಿಂತ ಮುಂಚೆ ಎತ್ತು ಹೋರಿ ಆಕಳು ಕರಗಳ ಮೈಗೆ ಅಂಟಿದ ಉಣ್ಣೆ ತೆಗೆಯುವ ಕೆಲಸದಲ್ಲಿ ನಿರತನಾಗಿರುತ್ತಿದ್ದ. ನಮ್ಮನ್ನೂ- ಅಣ್ಣ, ಮಾವ ಸಹಿತ ಆ ಕೆಲಸಕ್ಕೆ ಹಚ್ಚುತ್ತಿದ್ದ. ದನಗಳ ಮೈಯಲ್ಲಿ ಉಣ್ಣಿ ಹೆಚ್ಚಾಗಲು ಕರಿಯಮ್ಮನ ಮಾಡದ ಮೈಲಿಗೆ ಕಾರಣ ಎಂದು ನಂಬುತ್ತಿದ್ದ. ಗಚ್ಚಿನ ಗ್ವಾದಲಿಯನ್ನು ತೊಳೆದು ಸಿಮೆಂಟಿನಿಂದ ಬಿರುಕುಗಳನ್ನು ಮುಚ್ಚಿ ಇನ್ನಿಲ್ಲದ ಕಾಳಜಿ ಮಾಡುತ್ತಿದ್ದ. ಹಕ್ಕಿಯ ತುಂಬ ಉಣ್ಣಿ ಪುಡಿ ಸಿಂಪಡಿಸುತ್ತಿದ್ದ. ಉಣ್ಣಿ ಹೆಚ್ಚಾಗಿದ್ದರೆ ದನಗಳ ಮೈಗೂ ಬೆಲ್ಲದನೀರಿನ ಜೊತೆ ಉಣ್ಣಿಪುಡಿ ಹಚ್ಚಿ ಬಿಸಿಲಲ್ಲಿ ಕಟ್ಟುತ್ತಿದ್ದ. ದನಗಳು ಮೈ ನೆಕ್ಕಿಕೊಳ್ಳಲಾರದಂತೆ ಬಾಯಿಕಲ್ಲಿ ಕಟ್ಟಿರುತ್ತಿದ್ದ. ಎರಡು ಮೂರು ತಾಸುಗಳ  ಅನಂತರ ಮೈತೊಳೆಯಲು ಬೆಣ್ಣಿಹಳ್ಳಕ್ಕೆ ಹೊಡೆದೊಯ್ಯುತ್ತಿದ್ದ. ಆಳವಿರುವ ಮಡುವಿನಲ್ಲಿ ಈಜಾಡಿಸಿ ದನಗಳ ಮೈ ಹಗುರಾಗುವಂತೆ ಮಾಡುತ್ತಿದ್ದ. ಬಾಯಿಬ್ಯಾನಿ - ಕಾಲ್ಬ್ಯಾನಿ ಬಂದಾಗಲಂತೂ ಹಗಲು ರಾತ್ರಿ ಅವುಗಳೊಂದಿಗೆ ಇರುತ್ತಿದ್ದ. 


ಎತ್ತಿನ ನಾಲಿಗೆ ಮುಳ್ಳೆಣ್ಣೆ


ಕಾರ ಹುಣ್ಣಿಮೆ ದಿನ ಎಲ್ಲ ಎತ್ತು ಹೋರಿಗಳ ಕೋಡು ಕೆತ್ತಿಸಿ ಇಲ್ಲವೆ  ತಾನೆ ಗಾಜಿನ ಚೂರಿನಿಂದ ತಿಕ್ಕಿ ಸವರಿ, ಕೊಳಗ ಕಡಿಸಿ ಸಿಂಗರಿಸುತ್ತಿದ್ದ. ಎಲ್ಲರಂತೆ  ಕೋಡಿಗೆ ಬಣ್ಣ ಬಳಿಯದೇ ಅರಿಷಿಣ ಎಣ್ಣೆ ಹಚ್ಚಿ ನುಣುಪುಗೊಳಿಸುತ್ತಿದ್ದ. ಕೋಡು ಮಿರಮಿರನೆ ಮಿಂಚುವಂತೆ ಮಾಡುತ್ತಿದ್ದ. ಇದಕ್ಕಿಂತ ಮುಖ್ಯವಾಗಿ ಬೆಣ್ಣೆ ಅರಿಷಿಣ ಉಪ್ಪು ಹಚ್ಚಿ  ಎತ್ತಿನ ನಾಲಿಗೆ ತಿಕ್ಕಿಸಿ ಬಾಯಿ ತೊಳೆಸುತ್ತಿದ್ದ. ಈ ಕೆಲಸಕ್ಕೆ ದನಗಳ ಉಪಚಾರದಲ್ಲಿ ಅನುಭವವಿದ್ದ ವಾಲೀಕಾರ ಹನಮಪ್ಪನನ್ನಾಗಲಿ, ಕರಿಗಾರ ಕಲ್ಲಪ್ಪನನ್ನಾಗಲಿ ಕರೆಯುತ್ತಿದ್ದ. ಎತ್ತು ಹೋರಿಗಳು ಸರಿಯಾಗಿ ಮೇವು ತಿನ್ನದೇ ಇದ್ದಾಗ ನಾಲಿಗೆ ಬುಡದಲ್ಲಿನ ರಕ್ತ ನಾಳವನ್ನು ಹರಿದು ರಕ್ತ ಸೋರುವಂತೆ ಮಾಡಿ ಚಿಕಿತ್ಸೆ ನೀಡಿಸುತ್ತಿದ್ದ. ಎರಡು ದಿನ ಆ ಎತ್ತಿಗೆ ಹೊಟ್ಟು ಹಾಕುತ್ತಿರಲಿಲ್ಲ. ಅನಂತರ ಎತ್ತು ಸರಿಯಾಗಿ ಮೇವು ಹೊಟ್ಟು ತಿನ್ನುತ್ತಿತ್ತು. ದನಗಳ ಕಾಲು ಮುಳು ಬಿಟ್ಟಾಗ (ಚಪ್ಪೆಯಲ್ಲಿ ನರ ತೊಡಕಿಕೊಂಡಿರುತ್ತದೆ) ಎತ್ತಿನ ಬಾಯಿ ಒಸಡಿನಲ್ಲಿ ತೆಂಗಿನ ಕಡ್ಡಿಯನ್ನು ಸೇರಿಸಿ ಎತ್ತು ಸೀನುವಂತೆ ಮಾಡುತ್ತಿದ್ದರು. ದನಗಳು ಹಾಗೆ ಸೀನಿದರೆ ಚಪ್ಪೆಯಲ್ಲಿ ತೊಡಕಿಕೊಂಡ ನರ ಸಡಿಲಾಗಿ ಸರಿಹೊಂದಿ ಮುಂಗಾಲಿನ ಕುಂಟುತನ ಮಾಯವಾಗುತ್ತದೆ.ವಸಡಿನಲ್ಲಿಯ ಕಡ್ಡಿ ದಿನಕ್ಕಿಷ್ಟು ಹೊರ ಬರುತ್ತ ದನದ ಬಾಯಲ್ಲಿ ನುರಿತು ಹೊಟ್ಟೆ ಸೇರುತ್ತದೆ. ದನಗಳಿಗೆ ಕುಂದು ರೋಗ ಬಂತೆಂದರೆ ಹೊಟ್ಟು ಮೇವು ಮುಟ್ಟದೇ ಸುಂದಾಗಿ ನಿಂತು ಬಿಡುತ್ತಿದ್ದವು. ಜನಪದ ವೈದ್ಯ ಪದ್ಧತಿಯಂತೆ ಏನೇನೋ ವನಸ್ಪತಿ ಔಷಧಿಯ ಗೊಟ್ಟ ಹಾಕಿ  ಕಲ್ಮೇಶ್ವರ ದೇವರ ಗುಡಿಯಿಂದ ತಂದ ನೀರನ್ನು ಕುಡಿಸಿ ಕುಂದು ಇಳಿಸುವ  ಕೋಲಿನಿಂದ ಇಳೆತೆಗೆದು ಉಪಚರಿಸುತ್ತಿದ್ದ. ಕುಂದು ಇಳಿಸುವ ಕೋಲು ಈಗಲೂ ಕರಿಗಾರ ಬಸಪ್ಪನ ಮನೆಯಲ್ಲಿದೆ. ಅಲ್ಲದೆ ಈ ಚಿಕಿತ್ಸೆ ಈಗಲೂ ಬಳಕೆಯಲ್ಲಿದೆ. 


ನಮ್ಮ ಮನೆಯಲ್ಲಿ ೫೦-೬೦ ವರ್ಷಗಳಿಂದ ಕಾಯ್ದಿಟ್ಟುಕೊಂಡು ಬಂದ ಮುಳ್ಳೆಣ್ಣೆ, ಸುಟ್ಟೆಣ್ಣೆಗಳು ಇದ್ದವು, ಅಂಗಾಲನ್ನು ಬಿಟ್ಟು ಬೇರೆ ಕಡೆ ಮುಳ್ಳು ಚುಚ್ಚಿದ್ದರೆ ಅದನ್ನು ಸೂಜಿಯಿಂದ ತೆಗೆಯಲು ಬರುವುದಿಲ್ಲ. ಆಗ ಮುಳ್ಳು ಚುಚ್ಚಿಸಿಕೊಂಡವರು ತಮ್ಮ ಮನೆಯಿಂದ ಒಳ್ಳೆಣ್ಣೆ (ಕುಸುಬಿ ಇಲ್ಲವೆ ಶೇಂಗಾ)ಯನ್ನು ತಂದು ನಮ್ಮ ಮನೆಯಲ್ಲಿರುವ ಮುಳ್ಳೆಣ್ಣೆ ಔಷಧದ ಸೀಸೆಗೆ ಹಾಕಿ, ಚುಚ್ಚಿದ ಜಾಗಕ್ಕೆ ಎಣ್ಣೆ ಹಚ್ಚಿಸಿಕೊಂಡು ಹೋಗುತ್ತಿದ್ದರು. ತಪ್ಪದೇ ಮೂರು ದಿನ  ಹಚ್ಚಿಸಿಕೊಂಡರೆ ಸಾಕು ನೋವು ಮಾಯವಾಗುತ್ತಿತ್ತು. ಇದೇ ರೀತಿ ಸುಟ್ಟೆಣ್ಣೆಯೂ ಬಳಕೆಯಾಗುತ್ತಿತ್ತು. ಸುಟ್ಟಾ ಜಾಗದಲ್ಲಿ ಎದ್ದ ನೀರಿನ ಗುಳ್ಳೆಗಳು ನಾಲ್ಕೇ ದಿನದಲ್ಲಿ ಕರಗಿ ಮಾಯವಾಗುತ್ತಿದ್ದವು.


ಈ ಔಷಧಿಗಳು ಸೀಸೆಗಳನ್ನು ನೆಲಬಿಟ್ಟು ಅಂತರದಲ್ಲಿ ಇರಿಸಿರಬೇಕು. ಹೆಣ್ಣುಮಕ್ಕಳಂತೂ ಈ ಸೀಸೆಗಳನ್ನು  ಮುಟ್ಟುವಹಾಗಿಲ್ಲ. ಈ ಸೀಸೆಗಳನ್ನು ದನದ ಹಕ್ಕಿಯಲ್ಲಿರುವ ಗೂಟಗಳಿಗೆ  ಬಹಳ ಕಾಳಜಿಯಿಂದ ಜೋತು ಹಾಕಲಾಗಿರುತ್ತಿತ್ತು. ಒಮ್ಮೆ ಯಾವುದೋ ಕಾರಣಕ್ಕೆ ನೆಲಕ್ಕೆ ಇಟ್ಟು ಮೈಲಿಗೆಯಾಗಿದ್ದಾಗ ಮತ್ತೆ ಬೇರೆ ಊರಿನಿಂದ ಮಡಿಯಿಂದ ಎಣ್ಣೆ ತಂದು ಈ  ಔಷಧ ಪರಂಪರೆಯನ್ನು ಮುಂದುವರೆಸಲಾಯಿತು. ನಮ್ಮ ಮನೆಯಿಂದಲೂ ಈ ಎಣ್ಣೆಯನ್ನು ಒಯ್ದು ಈ ಪರಂಪರೆಯನ್ನು  ಮುಂದುವರೆಸಿದ ತಮ್ಮ ಊರಿನಲ್ಲಿಯೂ ಆಚರಣೆಗೆ ತಂದ ಉದಾಹರಣೆಗಳಿವೆ.  

 

ಎತ್ತುಗಳು  ತಿಂದುಬಿಟ್ಟ ಚಿಪ್ಪಾಡಿಯನ್ನು ಆಕಳು ಎಮ್ಮೆಗೆ ಹಾಕುತ್ತಿದ್ದ. ಇಷ್ಟಾದ ಮೇಲೆಯೂ ಉಳಿದ ಚಿಪ್ಪಾಡಿಗೆ ಉಪ್ಪಿನ ನೀರು ಚಿಮುಕಿಸಿ ಬಿಸಿಲಲ್ಲಿ ಒಣಗಿಸುತ್ತಿದ್ದ. ಉಪ್ಪಿನ ರುಚಿಗೆ ಬಿರುಸಾದ ದಂಟು ಬುಡಚಿಯನ್ನು ಸಹ ನುರಿಸಿ ತಿನ್ನುವಂತೆ ಉಪಾಯ ಮಾಡುತ್ತಿದ್ದ. ಆಮೇಲೂ ಉಳಿದ ಚಿಪ್ಪಾಡಿ ಒಲೆಗೆ ಇಲ್ಲವೆ ತಿಪ್ಪೆಗೆ ಸಲ್ಲುತ್ತಿದ್ದವು. ತಿಪ್ಪೆಯಲ್ಲಿ ತೆಗ್ಗು ತೆಗೆದು ನೀರು ನಿಲ್ಲುವಂತೆ ಮಾಡಿ ಅಲ್ಲಿ ಚಿಪ್ಪಾಡಿ ಕಸ ಹಾಕಿ ಗೊಬ್ಬರ ತಯಾರಿಸಿಕೊಳ್ಳುತ್ತಿದ್ದ. 


ಸುಗ್ಗಿ ಮುಗಿದ ಕೂಡಲೆ ಕುಂಟಿ ರಂಟಿ ಕೂರಿಗೆಗಳನ್ನು ಹಿತ್ತಲಲ್ಲಿ ಮಳೆಗೆ ಹಾಳಾಗದಂತೆ ಜೋಡಿಸಿಡುತ್ತಿದ್ದ. ಹೆಚ್ಚು ಬಳಕೆ ಬರುವಂತೆ ರಕ್ಷಿಸುತ್ತಿದ್ದ. ಆಗಲೇ ಕುಂಟಿ ಕೂರಿಗೆಗಳನ್ನು ಪರೀಕ್ಷಿಸಿ ಮುಂದಿನ ತಯಾರಿಗೆ ಸಿದ್ಧವಾಗುತ್ತಿದ್ದ. ಹಳ್ಳದ ಹೊಲ ಮತ್ತು ಕರಕನ ಹೊಲದಲ್ಲಿರುವ ಜಾಲಿ ಗಿಡಗಳನ್ನು ಕಡಿದು ಒಕ್ಕಲುತನಕ್ಕೆ ಬೇಕಾದ ದಿಂಡು ತಾಳ ಮೇಳಿ ಮಾಡಿಸಿಕೊಳ್ಳುತ್ತಿದ್ದ; ಯಾವ ಸಲಕರಣೆಯೂ  ಕೊರತೆಯಾಗದಂತೆ ಎಚ್ಚರಿಕೆವಹಿಸುತ್ತಿದ್ದ. ಕುಂಟಿ ಕೂರಿಗೆಗೆ ಬೇಕಾದ ಸೆಕ್ಕಿಗಳನ್ನಂತೂ ಸಾಕಷ್ಟು ಸಂಗ್ರಹಿಸಿ ಇಟ್ಟಿರುತ್ತಿದ್ದ. ಹೊಲಕ್ಕೆ ಹೋಗುವಾಗ ಹುಸಿ ಅಂಕಣದ ಮಾಡದಲ್ಲಿರುವ ಸೆಕ್ಕೆಗಳನ್ನು ಕಿಸೆಯಲ್ಲಿ ಹಾಕಿಕೊಂಡು ಹೋಗುತ್ತಿದ್ದ. ಅಪ್ಪನ ಅಂಗಿ ಕಿಸೆಗಳು ಸರಿಯಾಗಿ ಬಳಕೆಯಾದದ್ದು ಸೆಕ್ಕಿಗಳನ್ನು ಇಟ್ಟುಕೊಳ್ಳಲು ಮಾತ್ರ. ರೊಕ್ಕ ರೂಪಾಯಿಗಳಿಗಾಗಲಿ,ಎಲೆ ಅಡಿಕೆ ತಂಬಾಕು ಬೀಡಿ ಚುಟ್ಟಾಗಳಿಗಾಗಲಿ ಜಾಗವಿರಲಿಲ್ಲ. 


ಬಿತ್ತಿಗೆ ಪ್ರಾರಂಭವಾಗುವುದಕ್ಕಿಂತ  ಮುಂಚಿತವಾಗಿ ಸೂಕ್ತ ಸಮಯಕ್ಕೆ ಕುಂಟಿ ಕೂರಿಗೆಗಳನ್ನು ಕೆಮ್ಮಣ್ಣಿನಿಂದ ಸಾರಿಸಿ ಸಿದ್ಧ ಮಾಡಿಟ್ಟುಕೊಂಡಿರುತ್ತಿದ್ದ. ಯಾರಿಂದಲೂ ಕುಂಟಿ ಕೂರಿಗೆಗಳನ್ನು ತರುವ ಪ್ರಸಂಗವನ್ನು ತಂದುಕೊಳ್ಳಲಿಲ್ಲ. ಅಗತ್ಯ ಬಿದ್ದರೆ ಬೇರೆಯವರಿಗೆ ಕುಂಟಿ ಕೂರಿಗೆ ಕೊಡುತ್ತಿದ್ದ. ಅನಿವಾರ್ಯವಾದರೆ ಅವರ ಹೊಲಕ್ಕೆ ತನ್ನ ಎತ್ತುಗಳಿಂದಲೇ ಬಿತ್ತಿ ಬರುತ್ತಿದ್ದ. ಪ್ರತಿ ವರ್ಷ ಸಾಮಾನ್ಯಾವಾಗಿ ಗುಡಿ ( ದೇವರ) ಹೊಲವನ್ನು ಪೂಜಾರರಿಗೆ ಬಿತ್ತಿಕೊಡುತ್ತಿದ್ದ.


ಹಲ್ಲಚ್ಚದ ಹೋರಿ-ಹದಿನಾರೆತ್ತಿನ ಗ್ವಾದ್ಲಿ


ಎತ್ತು ಹೋರಿಗಳು ಒಂಚೂರು ಸೊರಗದಂತೆ ನೋಡಿಕೊಳ್ಳುತ್ತಿದ್ದ. ಎತ್ತುಗಳಿಗೆ ಮೇಲ್‌ತಿನಿಸು ಕಡಿಮೆ ಬಿದ್ದಾಗ ಸೆರಗು ಜೋಳದ ಬದಲಾಗಿ ಚಲೋ ಜೋಳದ ನುಚ್ಚನ್ನೆ  ಒಡಿಸಿ ತಿನಿಸುತ್ತಿದ್ದ. ತನಗೆ ಊಟಕ್ಕೆ ಏನು ಕಡಿಮೆಯಾದರೂ ಸಹಿಸಿಕೊಳ್ಳುತ್ತಿದ್ದ. ಆದರೆ ದನಗಳಿಗೆ ತಿನಿಸು ಕಡಿಮೆಯಾದರೆ ಸಹಿಸುತ್ತಿರಲಿಲ್ಲ. ಆಗಿಂದಾಗ ಹಗೆ ತೆಗೆಯಿಸಿ ಜೋಳ ಮಾರಿ ದನಗಳಿಗೆ ಬೇಕಾದ ಹುರುಳಿ, ಹಿಂಡಿ ತರುತ್ತಿದ್ದ. ಅಪ್ಪನ ಈ ಸ್ವಭಾವವನ್ನು ಚೆನ್ನಾಗಿ ಅರ್ಥಮಾಡಿಕೊಂಡ ಕಾಕಾ ಅಯ್ಯನಗೌಡ( ಚಿಗವ್ವ ಗಂಗಕ್ಕನ ಗಂಡ, ಅಮರಗೋಳ) ಅವನ ಇಚ್ಛೆಯಂತೆಯೇ ನಡೆಯುತ್ತಿದ್ದ. ತೊಂದರೆ ಅನಾನುಕೂಲದ ಮಧ್ಯೆಯೂ ಅಪ್ಪನ ಆಸೆಯನ್ನು ಪೂರೈಸುತ್ತಿದ್ದ. ಮೆಚ್ಚುಗೆ ಗಳಿಸುತ್ತಿದ್ದ. ಒಮ್ಮೊಮ್ಮೆ ಹಣದ ಅಡಚಣಿ, ಗೌಡಕಿ ಕೆಲಸದ ಒತ್ತಡವಿದ್ದಾಗ ಅಪ್ಪನಿಂದ ಬೈಸಿಕೊಳ್ಳುತ್ತಿದ್ದ. 


ಬೆನಕನ ಮಾನೆ ಹೊಲಕ್ಕೆ , ನರಗುಂದ ದಾರಿ ಹೊಲಕ್ಕೆ ಹೋಗಬೇಕಾದರೆ ಬನಹಟ್ಟಿಯ ಮೇಲೆಯೆ ಹೋಗಬೇಕಾಗುತ್ತಿತ್ತು. ಬನಹಟ್ಟಿ ಕೆರೆ, ಹೊನ್ನಂತೆವ್ವನ ಗುಡಿ,ರುದ್ರಸ್ವಾಮಿಯ ಮಠದ ವರೆಗೂ ಜನ ಅಪ್ಪನ ಎತ್ತುಗಳನ್ನು ಬೆರಗು ಗಣ್ಣುಗಳಿಂದ ನೋಡುತ್ತಿದ್ದರು. 'ಎತ್ತುಗಳನ್ನ ಹಿಂಗ ಇಡಬೇಕು', 'ಒಕ್ಕಲುತನ ಮಾಡೂದಂದ್ರ ಶಿವನಗೌಡ್ರಂಗ ಮಾಡಬೇಕು'-ಎಂದು ಹೊಗಳುತ್ತಿದ್ದರು.


ಮನೆಯಲ್ಲಿ ಹುಟ್ಟಿದ ಎತ್ತು ಹೋರಿಗಳು ಕಣ್ ಕುಕ್ಕುವಂತಿದ್ದವು. ಮೂಡ್ಲ ಕೋಡು, ಎತ್ತರದ ಇಣಿ, ಜೋತುಬಿದ್ದ ಗಂಗೆದೊಗಲು, ಹರವಾದ ಎದೆ, ಮಾಟವಾದ ಸವ ಶುದ್ಧ ಮುಂಗಾಲು, ಬಿಳಿ-ಕೆಂದ ಬಣ್ಣ, ಪುಟಿಗೆ (ಅವಸರದ) ನಡಿಗೆಯಿಂದ  ಎಂಥವರ ಮನಸ್ಸನ್ನೂ ಗೆಲ್ಲುತ್ತಿದ್ದವು. ತಲೆ ಎತ್ತರ ಬೆಳೆದ ಹೋರಿಗಳನ್ನು ನೋಡಿ 'ಗೌಡ್ರ,  ಹೋರಿ ಎಷ್ಟಲ್ಲಿ ಅದಾವು' ಎಂದಾಗ ಅಪ್ಪ ' ಇನ್ನೂ ಹಲ್ಲ ಹಚ್ಚಿಲ್ಲ ತಮ್ಮ' ಎಂದುತ್ತರಿಸಿದಾಗ ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು. 'ಆಕಳ ಒಳ್ಳೆ ಜಾತಿವಿರಬೇಕು' ಎಂದು ತಮ್ಮ ತಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದರು. 


ಗಟ್ಟಿಮುಟ್ಟಾದ ರೋಣದ ಚಕ್ಕಡಿ. ಹವನಾದ ಡಂಬಿನ ಕಳಗ, ಬಳಸಿ ಬಳಸಿ ಮಿರಿಮಿರಿ ಮಿಂಚುವ ನೊಗ, ಆಳೆತ್ತರದ ತೇಗಿನ ಗಾಲಿ, ಬಲಿಷ್ಠ ಅಚ್ಚು, ಮಾಟವಾದ ಉದ್ದಗಿ ಎತ್ತುಗಳಿಗೆ ಹೇಳಿಮಾಡಿಸಿದಂತಿದ್ದವು. ಆನೆಯಂತಹ ಎತ್ತುಗಳಿಗೆ ಚಕ್ಕಡಿ, ಚಕ್ಕಡಿಗೆ ತಕ್ಕ ಎತ್ತು ಎರಡೂ ಒಂದಕ್ಕೊಂದು ಹೇಳಿಮಾಡಿಸಿದಂತಿದ್ದವು. ಇಂತಹ ಎತ್ತುಗಳಿದ್ದದ್ದರಿಂದಲೇ ಬನಹಟ್ಟಿ ಹೊಲದ ತೆನೆ, ಗೋದಿಹುಲ್ಲು, ಮೇವು(ಕಣಿಕೆ) ಎಲ್ಲವೂ ಸುರಕ್ಷಿತವಾಗಿ, ಸುಲಭವಾಗಿ ಊರು ತಲುಪುತ್ತಿದ್ದವು. ಬೆಣ್ಣಿಹಳ್ಳದ ದಾರಿಯಲ್ಲಿ ಖಾಲಿ ಚಕ್ಕಡಿಗಳು ದಾಟಲೂ ಪ್ರಯಾಸ ಪಡಬೇಕಾಗುತ್ತಿತ್ತು. ಅಂತಹದರಲ್ಲಿ ತುಂಬಿದ ಚಕ್ಕಡಿಯನ್ನು ಕಣ್ ಮುಚ್ಚಿ ದಾಟಿಸುವಷ್ಟು ಸಮರ್ಥವಾಗಿದ್ದವು. ಕಳಗದ ಭರ್ತಿ ತೆನೆ ಹೇರಿರಲಿ, ಎರಡಾಳೆತ್ತರ ಮೇವು ಒಟ್ಟಿರಲಿ, ಹಿಂದು ಮುಂದು ನೋಡದೆ ಹುದುಲಿನ, ಆಳುದ್ದ ನೀರು- ಕೆಸರಿನ, ಮೊಣಕಾಲೆತ್ತರ ಉಸುಕಿನ ದಾರಿಯನ್ನು ಸಲೀಸಾಗಿ ದಾಟಿಬಿಡುತ್ತಿದ್ದವು. ಪ್ರಸಂಗ ಬಿದ್ದಾಗ ಬೇರೆಯವರ ಭಾರದ ಚಕ್ಕಡಿಗಳನ್ನು ಸಹ ದಾಟಿಸುತ್ತಿದ್ದವು. ಇಂತಹ ಭಾರ ಜಗ್ಗುವ ಸಂದರ್ಭದಲ್ಲಿ ಚಕ್ಕಡಿಯನ್ನು ಹಾಗಿನ ಮೇಲೆ ನಡೆಸಬೇಕಾಗುತ್ತಿತ್ತು. ಇಲ್ಲವಾದರೆ ಎತ್ತು ಎದೆ ನೋಯಿಸಿ ಕೊಳ್ಳುತ್ತಿದ್ದವು. ಕಡದಳ್ಳಿ ಅಮರಗೋಳದ ದಾರಿಯೂ ಸಹ ಅಪಾಯಕಾರಿಯಾಗಿತ್ತು. ಎದೆ ಏರಿನ ಹುದುಲಿನ ದಾರಿಯಲ್ಲಿ ಅಪರಿಚಿತ ಎತ್ತುಗಳು ಹತ್ತಲು ಸಾಧ್ಯವಾಗುತ್ತಲೇ ಇರಲಿಲ್ಲ. ಪರವೂರಿನ ಚಕ್ಕಡಿಗಳನ್ನು ಅಪ್ಪನೇ ನಮ್ಮ  ಎತ್ತನ್ನು ಹೂಡಿ ಸರಾಗವಾಗಿ ದಾಟಿಸಿಬರುತ್ತಿದ್ದ. ಹಳ್ಳದಲ್ಲಿ ಚಕ್ಕಡಿ ಸಿಗಿಬಿದ್ದಿದೆ ಎಂಬ ಸುದ್ದಿಯನ್ನು ದನ ಮೇಯಿಸುವ ಹುಡುಗರು ಇಲ್ಲವೆ ಬಟ್ಟೆ ತೊಳೆಯಲು ಹೋದ ಹೆಣ್ಣುಮಕ್ಕಳು ತರುತ್ತಿದ್ದರು. ಊರಮುಂದಿನ ಹೊಲದಲ್ಲಿಯೇ ಇರುತ್ತಿದ್ದ ಅಪ್ಪ ಎತ್ತುಗಳ ಮೈ ತೊಳೆಯಲೆಂದು ಬೆಣ್ಣಿಹಳ್ಳಕ್ಕೆ ಹೋದವ ಸಿಗಿಬಿದ್ದ ಚಕ್ಕಡಿಯನ್ನು ದಾಟಿಸಿ ಬರುತ್ತಿದ್ದ. 


ಎತ್ತುಗಳಿಗಾಗಿಯೇ ಕಟ್ಟಿಸಿದ ಹದಿನಾರೆತ್ತಿನ ಇದಿರುಗ್ವಾದಲಿ, ಪಡಸಾಲಿ, ಹುಸಿಯಂಕಣ ಹೊಂದಿದ ನಮ್ಮ ದನದ ಮನೆ ವಿಶಿಷ್ಟವಾಗಿದೆ. ತೇಗಿನ ತೊಲೆ ಕಂಬ ಗಳಿಗೆ ಉಳಿ ಬಾಚಿ ಮುಟ್ಟಿಸಿ ಕೆತ್ತಿಯೇ ಇಲ್ಲ. ಇದ್ದ ದುಂಡ ಸ್ವರೂಪವನ್ನು ಹಾಗೇಯೇ ಉಳಿಸಿಕೊಳ್ಳಲಾಗಿದೆ. ಕಟ್ಟಡದ ಮಡಿಗೆ ವಿನ್ಯಾಸ ಅನನ್ಯವಾಗಿದೆ. ಕಟ್ಟಿಸುವ ಕಾಲಕ್ಕೆ ಮೂರು ಸಾವಿರ ಖರ್ಚು ಮಾಡಲಾಗಿದೆ ಎಂದು ಹೇಳುತ್ತಾರೆ. ಇಂತಹ ಮನೆಗೆ ಪಶುಸಂಪತ್ತಿದ್ದರೆ ಮಾತ್ರ ಶೋಭೆ. ಮನೆಯಲ್ಲಿಯೇ ಹುಟ್ಟಿ ಬೆಳೆದ ಆನೆ ಗಾತ್ರದ ಎತ್ತುಗಳು, ಗಚ್ಚಿನಿಂದ ಮಾಡಿದ ಗ್ವಾದಲಿ, ದೊಡ್ಡದಾದ ಮೇವಿನ ಗೂಡು,  ವಿಶಾಲವಾದ ಎಂಟು ಅಂಕಣದ ಅಟ್ಟ, ಚೀಲದ ನಿಟ್ಟನ್ನು ಒಟ್ಟಲು ಗಟ್ಟಿಯಾಗಿರುವ ಹಾಸುಗಲ್ಲಿನ ಪಡಸಾಲಿ, ಕರಿಯಮ್ಮನ ಮಾಡ, ಒಂದೇ ಒಂದು ಬಾಗಿಲು, ಕೈಮಾರು ಅಗಲದ ಗೋಡೆ, ಎತ್ತರದ ಕುಂಬಿ ಈ ಮನೆಯ ಸೊಗಸನ್ನು ನೋಡಿಯೇ ಅನುಭವಿಸಬೇಕು ! ಇಂತಹ ಮನೆಗೆ ತಕ್ಕ ಎತ್ತು-ಹೋರಿಗಳು,ಎತ್ತು ಹೋರಿಗಳಿಗೆ ತಕ್ಕ ಕೃಷಿಕ ಅಪ್ಪ ಎಲ್ಲವೂ ಹೇಳಿಮಾಡಿಸಿದಂತಿದ್ದವು. ಈಗ ದನದ ಮನೆಯನ್ನು ವಾಸಕ್ಕಾಗಿ ಬಳಸುತ್ತಿರುವುದರಿಂದ ಒಂದು ಭಾಗದಲ್ಲಿ ಅಡಿಗೆ ಮನೆ ಪಡಸಾಲೆಗಳನ್ನು ಮಾಡಿ ಪರಿವರ್ತಿಸಲಾಗಿದೆ. 


ಅಷ್ಟಮಿ ಆಚರಣೆ - ಗಿಣ್ಣದ ವಡೆ


ಎತ್ತು, ಹೋರಿ ಮತ್ತು ಮನುಷ್ಯ ಸಂಬಂಧ ಅನನ್ಯವಾಗಿತ್ತು. 'ನೀನು ಈ ಕೆಂದ ಹೋರಿ ವಾರಿಗೆಯವ' 'ಅಣ್ಣ ಆ ಎತ್ತಿನ ವಾರಿಗೆಯವ' ಎಂದು ಎತ್ತು ಮತ್ತು ಮನುಷ್ಯ ಸಂಬಂಧವನ್ನು ಸಮನ್ವಯಗೊಳಿಸುತ್ತಿದ್ದರು. ಯಾವುದೊ ಕಾಲದಲ್ಲಿ ಮನೆಯವರೊಬ್ಬರ ಸಾವಿನಿಂದಾಗಿ ನಿಂತುಹೋದ ಅಷ್ಟಮಿ ಹಬ್ಬದ ಆಚರಣೆ ಒಂದೂವರೆ ದಿನಕ್ಕೆ ಸೀಮಿತಗೊಂಡಿತ್ತು. ಒಂದು ವರ್ಷ ಆಚರಣೆಯ ಸಂದರ್ಭದಲ್ಲಿ ಒಂದೂವರೆ ದಿನ ಮುಕ್ತಾಯವಾಗುವ ಸಮಯಕ್ಕೆ  ಸರಿಯಾಗಿ ನಮ್ಮ ಗೌರಿ ಆಕಳು ಹೋರಿಯನ್ನು ಈಯ್ದಿತ್ತು. ಅಂದಿನಿಂದ ಮತ್ತೆ ನಮ್ಮ ಮನೆಯಲ್ಲಿ ಅಷ್ಟಮಿಯನ್ನು ಮೂರು ದಿನ ಆಚರಿಸಲು ತೊಡಗಿದ್ದಾರೆ. ಇದು ಎತ್ತು ಮತ್ತು ಮನುಷ್ಯರ ಸಂಬಂಧದ ಅನನ್ಯತೆಗೆ ನಿದರ್ಶನ. ಅಪ್ಪ ಈ ಹೋರಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಕೆಂದ ಮಾಸಬಣ್ಣದ ಈ ಹೋರಿಗೆ 'ಗಿಡ್ಡ' ಎಂದು ಹೆಸರಿಟ್ಟಿದ್ದೆವು.

ಗಣೇಶ ವಿಸರ್ಜನೆಯ ದಿನ ನಮ್ಮ ಮನೆಯಲ್ಲಿ ಅಷ್ಟಮಿ ಇಡುವ ಸಂಪ್ರದಾಯವಿದೆ. ಹೊಸ ಗಡಿಗೆಯನ್ನು ಸುಣ್ಣ ಬಣ್ಣದಿಂದ ಸಿಂಗರಿಸಿ ಹತ್ತಿ ತುಂಬಿ ಇಟ್ಟು ಪೂಜಿಸಲಾಗುತ್ತದೆ. ಮೂರು ದಿನ ನಂದಾದೀಪ ಇರುತ್ತದೆ. ಪೂಜಿಸಿದ ಹತ್ತಿಯನ್ನು ನೂಲು ಮಾಡುತ್ತಿದ್ದರು. ಮೂರು ದಿನ ಹೊರಗೆ ಏನನ್ನು ಕೊಡುತ್ತಿರಲಿಲ್ಲ. ನಿರ್ದಿಷ್ಟವಾದ ಅಡಿಗೆಯನ್ನು ಎಡೆ ಹಿಡಿಯಲಾಗುತ್ತದೆ.


ಆಕಳು ಕಟ್ಟಿದ (ಗರ್ಭಧರಿಸಿದ) ಸಂದರ್ಭದಿಂದ ಹಿಡಿದು ಅದು ಕರುಹಾಕುವ ವರೆಗಿನ ಎಲ್ಲ ಸನ್ನಿವೇಶಗಳು ನಮ್ಮೆದುರಿನಲ್ಲಿಯೇ ನಡೆಯುತ್ತಿದ್ದವು. ಕರು ಹುಟ್ಟಿದ ತಕ್ಷಣ ಅದು ಹೋರಿಯಾಗಿದ್ದರೆ ಅದರ ಇಣಿ ದೊಡ್ಡದಾಗಲಿ ಎಂದು ಕಂಬಳಿ ಕೋರಿ ಹಾಕಿ, ರೂಪಾಯಿ ನಾಣ್ಯವನ್ನು ಆಚೀಚೆ ಇಟ್ಟು ಬಾಯಿಂದ ಹಿಡಿದು ಎತ್ತುವ ರೀತಿ ಪವಾಡವೆನಿಸುತ್ತಿತ್ತು. ಇದಕ್ಕಿಂತ ಸೋಜಿಗವೆಂದರೆ ಈಯ್ದ ಮರುಗಳಿಗೆಯಲ್ಲಿ ಆಕಳು ಅಯಾಸವಿಲ್ಲದೆ ಕರುವಿನ ಮೈಯನ್ನು ನೆಕ್ಕುವುದು,  ಹುಟ್ಟಿದ ಗಳಿಗೆಯಿಂದಲೇ ಕರು ತಾಯಿಯ ಮೊಲೆ ಹುಡುಕುವುದು, ಇನ್ನೊಂದು ಗಳಿಗೆಯಲ್ಲಿ ಹಕ್ಕಿ ತುಂಬ ಓಡಾಡುವುದು, ನಮ್ಮ ಮೈಮೇಲೆಯೆ ಬರುವುದು, ಒಂದಕ್ಕಿಂತ ಒಂದು ಮಜ ನೀಡುತ್ತಿದ್ದವು. ಆಕಳು ಕರು ಹಾಕಿದಾಗ ಹಕ್ಕಿ ಜೀವಂತಿಕೆಯಿಂದ ನಳನಳಿಸುತ್ತಿತ್ತು. ನಮ್ಮಲ್ಲೂ ಉತ್ಸಾಹತುಂಬುತ್ತಿತ್ತು. ಅಪ್ಪ ಆಕಳು ಈಯುವ ಸೂಚನೆಯನ್ನು ಮನಗಂಡು, ಹಕ್ಕಿ ಸ್ವಚ್ಛಮಾಡಿ ಆಕಳನ್ನು ಈಯ್ಸಿಕೊಂಡು ಕರದ ಉಪಚಾರ ಮಾಡಿ,  ಅದರ ಮಾಂಸವನ್ನು ತಿಪ್ಪೆಯಲ್ಲಿ ಹುಗಿದು ಬರುವವರೆಗೂ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದ. ಹೋರಿಕರವಾಗಿದ್ದರೆ ಆ ಕಾಳಜಿ ವರ್ಷದ ವರೆಗೂ ಮುಂದುವರೆಯುತ್ತಿತ್ತು. ಹೆಣ್ಗರುವಾಗಿದ್ದರೆ ಹೋರಿಕರಕ್ಕೆ ಕಾಳಜಿ ಮಾಡುವಷ್ಟು ಮಾಡುತ್ತಿರಲಿಲ್ಲ. ಕಾರಣ ಭೂತಾಯಿ ಸೇವೆ ಮಾಡುವುದಕ್ಕೆ ಹೋರಿ ಗಟ್ಟಿಯಾಗಲಿ ಎಂಬ ಉದ್ದೇಶ ಇರಬಹುದು.


ಅಮ್ಮ ಚರಿಗೆ ಹಿಡಿದು ಹಕ್ಕಿಗೆ ಇಳಿದು ಕರು ಬಿಟ್ಟು ಕರುವಿಗೆ ಕುಡಿಸಿ ಮೀಸಲು ಹಾಲನ್ನು ಹಿಂಡಿ ತೆಗೆದಿಟ್ಟು, ಮತ್ತೊಂದು ಚರಿಗೆಯಲ್ಲಿ ಹಾಲನ್ನು ಹಿಂಡಿ ಮನೆ ಮನೆಗೆ ಕಳಿಸುತ್ತಿದ್ದಳು. ಮೊದಲು ಹಿಂಡಿದ ಮೀಸಲು ಹಾಲನ್ನು ಊರಿನ  ದ್ಯಾಮವ್ವ, ಬೋರಗಲ್ಲು, ಭರಮಪ್ಪ, ಹನಮಪ್ಪ ಕಲ್ಮೇಶ್ವರ ಗುಡಿಗೆ ಹೊಯ್ದು ಬರಲು ಕಳಿಸುತ್ತಿದ್ದಳು. ಹೊಯ್ದು ಬರಲು  ಹೋದ ನನಗೆ ದೇವರ ಮೇಲಿನ ಭಕ್ತಿಗಿಂತ ಯಾವಾಗ ಗಿಣ್ಣ ಮಾಡುತ್ತಾರೊ, ಯಾವಾಗ ತಿಂದೇನೊ ಎಂಬ  ಆತುರವೇ ತುಂಬಿರುತ್ತಿತ್ತು. ಹೀಗಾಗಿ ತಡಮಾಡದೆ ಮನೆಗೆ ಬರುತ್ತಿದ್ದೆ. ಅಮ್ಮನ ಜೊತೆ ಕೂತು ಗಿಣ್ಣ ಮಾಡುವುದನ್ನು ನೋಡುತ್ತಿದ್ದೆ. ಆಕಳು ಈಯ್ದ ಮೊದಲ ದಿನ ಹಾಲು ಗಟ್ಟಿ ಇರುತ್ತಿದ್ದರಿಂದ ಗಿಣ್ಣದ ವಡೆ ಮಾಡುತ್ತಿದ್ದರು. ಅಮ್ಮ ಅತ್ತ ಕಡೆ ವಡೆ ಮಾಡುತ್ತಿದ್ದರೆ ಅಕ್ಕ ಉಣ್ಣುವ ಮೊದಲು ತಿನ್ನಬೇಕಾದ ಬೆಳ್ಳೊಳ್ಳಿ ಸುಲಿದು ಸಿದ್ಧ ಮಾಡಲು ತೊಡಗುತ್ತಿದ್ದಳು. ನನಗೆ ಬೇಕಾದ ಬೆಳ್ಳೊಳ್ಳಿಯನ್ನು ನಾನೇ ಸುಲಿದಿಟ್ಟುಕೊಂಡು ಉಣ್ಣುವ ತಯಾರಿಲ್ಲಿರುತ್ತಿದ್ದೆ. ಅಷ್ಟೊತ್ತಿಗೆ ಅಪ್ಪನೂ ಬಂದು ಊಟಕ್ಕೆ ಕೂಡುತ್ತಿದ್ದ. ಗಿಣ್ಣ ಉಣ್ಣಲು ಸಿದ್ಧವಾಗಿಯೆ ಬಂದಾನೆನ್ನುವಂತೆ ಉತ್ಸಾಹದಿಂದಿರುತ್ತಿದ್ದ. ಆ ದಿನ ಅಪ್ಪ ಸಿಟ್ಟಿಗೇಳುತ್ತಾನೆನ್ನುವ ಭಯ ಯಾರಿಗೂ ಇರುತ್ತಿರಲಿಲ್ಲ. ಹೀಗಾಗಿ ಅಡುಗೆ ಮನೆಯಲ್ಲಿ ಬಿಗುವಿನ ವಾತಾವರಣ ಇರುತ್ತಿರಲಿಲ್ಲ. ಬಿಸಿಬಿಸಿ ಚಪಾತಿ, ಗಿಣ್ಣ ಉಂಡು ಮತ್ತೆ ತನ್ನ ಕಾಯಕಕ್ಕೆ ತೊಡಗುತ್ತಿದ್ದ. ಹತ್ತು ಹನ್ನೆರಡು ದಿನಗಳ ವರೆಗೆ ಆಕಳನ್ನು ಹೊರಗೆ ಬಿಡುತ್ತಿರಲಿಲ್ಲ. ನೆದರಾಗುತ್ತದೆಂದು ಆಕಳಿಗೆ ಮರೆ ಮಾಡುತ್ತಿದ್ದ. ಆಕಳು ಮತ್ತು ಕರದ ಕೊರಳು ಕಾಲಿಗೆ ಕರಿ ದಾರ ಕಟ್ಟಿಸುತ್ತಿದ್ದ.  


ಕೊಣ್ಣುರ ಗಡಿಗಿ-ಕಡದಳ್ಳಿ ಬೆಣ್ಣಿ


ಮನೆಯಲ್ಲಿರುವ ಎರಡು ಮೂರು ಆಕಳಲ್ಲಿ ಒಂದಾದರೂ ಹಿಂಡುತ್ತಿದ್ದವು. ಊರತುಂಬ ಎಮ್ಮೆ ಹೈನದ ಭರಾಟೆ ಇದ್ದರೆ ನಮ್ಮ ಮನೆಯಲ್ಲಿ ಎಮ್ಮೆ ಹೈನ ಕಡಿಮೆ. ಇದ್ದೊಂದು ಎಮ್ಮೆ ಸರಿಯಾಗಿ ಹಿಂಡುತ್ತಿರಲಿಲ್ಲ.  ನಮ್ಮ ಮನೆಯಲ್ಲಿ ಉಳಿದವರಂತೆ ಎಮ್ಮೆ ಮೇಯಿಸಿ ಹೈನ ಮಾಡುವ ಪರಿಪಾಠವೂ ಕಡಿಮೆ. ಇದ್ದ ಎಮ್ಮೆಯ ಹಾಲನ್ನು ಮನೆಗೆ ಬಳಸುವುದೇ ಹೆಚ್ಚು. ಬೆಣ್ಣೆ ತುಪ್ಪ ಮಾಡಿದರೂ ಮನೆ ಪೂರ್ತಿಗೆ (ಮಟ್ಟಿಗೆ) ಮಾತ್ರ. ಹೊರಗೆ ಮಾರುತ್ತಿರಲಿಲ್ಲ. ದುಡಿಯುವ  ಅಪ್ಪನಿಂದ ಹಿಡಿದು ಎಲ್ಲರೂ ಹಾಲು ರೊಟ್ಟಿ, ಹಾಲು ಕಿಚಡಿ ಉಣ್ಣುವವರೆ. ಮೊಸರಂತು ಕಡ್ಡಾಯವಾಗಿ ಬೇಕೇ ಬೇಕಾಗುತ್ತಿತ್ತು. ಮುಂಜಾನೆ ಊಟಕ್ಕೆ,  ರೊಟ್ಟಿ ಕಾಳು ಮೊಸರು ಹಿಂಡಿ. ಮಧ್ಯಾಹ್ನ ಮನೆಯಲ್ಲಿ ಮಾಡಿದ ಮಜ್ಜಿಗೆ ಬಳಕೆಯಾಗುತ್ತಿತ್ತು.  ರಾತ್ರಿ ಕಡ್ಡಾಯವಾಗಿ ಹಾಲು ಇರಬೇಕಾಗುತ್ತಿತ್ತು. ಉಣಲಿಕ್ಕೆ ಚಹಾಕ್ಕೆ ಎಮ್ಮೆ ಮತ್ತು ಆಕಳ ಹಾಲನ್ನು ಹೇಗೆ ಅನುಕೂಲವೋ ಹಾಗೆ ಬಳಸುತ್ತಿದ್ದರು.


ನಮ್ಮೂರು ಹೈನಕ್ಕೆ ಪ್ರಸಿದ್ಧವಾಗಿತ್ತು. ನರಗುಂದ ಸಂತೆಯಲ್ಲಿ ಕೊಣ್ಣೂರ ಮಣ್ಣಿನ ಗಡಿಗೆಗೆ ( ಮಲಪ್ರಭಾ ನದಿಯ ರೇವೆ ಮಣ್ಣಿನಿಂದ ತಯಾರಿಸಿದ್ದು )ಮತ್ತು ಕಡದಳ್ಳಿ ಬೆಣ್ಣಿಗೆ ಎಲ್ಲಿಲ್ಲದ  ಬೇಡಿಕೆಯಿತ್ತು. ಪ್ರತಿಯೊಬ್ಬರ ಮನೆಯಲ್ಲೂ ಆನೆಯಂತಹ ಎಮ್ಮೆ ಇದ್ದವು. ಸರಿಯಾಗಿ ಎಮ್ಮೆ ಮೇಯಿಸಿ ಬೆಣ್ಣೆ ತೆಗೆದು ಮಾರುತ್ತಿದ್ದರು. ಹತ್ತು ಸೇರು, ಹನ್ನೆರಡು ಸೇರು ಬೆಣ್ಣಿ ತೆಗೆಯುವ  ಕುಶಲ ಕಸಬುದಾರರೂ ಇದ್ದರು. ಸಂತೆಯ ದಿನ ಒಂದೇ ಗಡಿಗೆಯಲ್ಲಿ ಒಯ್ದರೆ ಎಮ್ಮೆಗೆ ನೆದರು ಆಗುತ್ತದೆಂದು ಸಣ್ಣ ಸಣ್ಣ ಸ್ವಾರಿಗಳಲ್ಲಿ ಒಯ್ದು ಮತ್ತೊಬ್ಬರಿಗೆ ಎಷ್ಟು ಬೆಣ್ಣೆ ತಂದಿದ್ದೆ ಎಂಬುದು ಗೊತ್ತಾಗದಂತೆ ಮಾರಿ ಬರುತ್ತಿದ್ದರು.  ಹೈನದಿಂದಲೇ ಹೆಚ್ಚಿನ ಮನೆಯವರ ಸಂತಿ ಪ್ಯಾಟಿ ನಡೆಯುತ್ತಿತ್ತು. ಆದರೆ ನಮ್ಮ ಮನೆಯಲ್ಲಿ ಮಾತ್ರ ಈ ರೀತಿ ಹೈನ ಮಾಡಿ ಮಾರುವುದಕ್ಕೆ ಅವಕಾಶವಿರಲಿಲ್ಲ. ಎಮ್ಮೆ ಹಿಂದೆ ದುಡಿಯುವ, ಮೇಯಿಸುವ ಒಂದು ಹೆಚ್ಚಾಳು ಬೇಕಾಗುತ್ತಿತ್ತು. ಅದು ನಮ್ಮ ಮನೆಯಲ್ಲಿ ಇರಲಿಲ್ಲ. ಅಲ್ಲದೆ ಹೈನ ಮಾಡಿ ಬಾಯಿಕಟ್ಟಿ ಉಣ್ಣದೆ  ಗಳಿಸುವ ದೃಷ್ಟಿ ನಮ್ಮ ಮನೆಯವರಿಗೆ ಗೊತ್ತಿರಲಿಲ್ಲ. ಇದಕ್ಕಿಂತ ಮುಖ್ಯವಾಗಿ ಮನೆತುಂಬ ಆಕಳು ಇರುವಾಗ ಎಮ್ಮೆ ಚಾಕರಿ ಮಾಡುವ ಗೋಜಿಗೆ ಹೋಗಬೇಕಾದ ಅಗತ್ಯವೂ ಇರಲಿಲ್ಲವೆಂದು ಕಾಣಿಸುತ್ತದೆ. ನಮ್ಮ ಮನೆ ಆಕಳು ದನಕರು ಹೋರಿಗೆ ಪ್ರಸಿದ್ಧವಾಗಿತ್ತು. ಉಳಿದವರ ಮನೆಗಳು ಹೈನಕ್ಕೆ ಪ್ರಸಿದ್ಧವಾಗಿದ್ದವು. ಕುಂಬಾರ ಬಂದಮ್ಮ, ಗೌಡರ ತಾಯಮ್ಮ, ಬೇವಿನಗಿಡದ ದ್ಯಾಮಮ್ಮ, ರಡ್ಡೇರ ಕಿಷ್ಟಮ್ಮ, ಗುಡಿಮುಂದಿನ  ಕುಬೇರವ್ವ.. ಇವರ ಮನೆಯ ಎಮ್ಮೆ ಮತ್ತು ಹೈನದ ಬಗ್ಗೆ ಪ್ರಶಂಸೆಯ ಮಾತುಗಳು ಹರಿದಾಡುತ್ತಿದ್ದವು.


ಅಪ್ಪ ಎಮ್ಮೆ ಬಗ್ಗೆ ಕಾಳಜಿವಹಿಸುತ್ತಿರಲಿಲ್ಲ. ಆದರೂ ಹಾಲು, ಬೆಣೆ, ಮೊಸರು, ಮಜ್ಜಿಗೆ ಉಣ್ಣಲು ಇಷ್ಟಪಡುತ್ತಿದ್ದ. ಪ್ರತಿನಿತ್ಯ ಮುಂಜಾನೆ ಬಿಸಿರೊಟ್ಟಿಯಲ್ಲಿ ಮೊಸರು ಬೇಕೆಬೇಕಿತ್ತು. ಬಿಸಿ ರೊಟ್ಟಿಗೆ  ಬೆಣ್ಣಿ ಖಾರ ಸವರಿ ತಿನ್ನುವುದು ಅವನ ಪ್ರೀತಿಯ ಹವ್ಯಾಸವಾಗಿತ್ತು. ಖಾರ ಬೆಣ್ಣಿ ಸವರಿ ಕೈಯಲ್ಲಿ ಹಿಚುಕಿ ಮುಟ್ಟಿಗೆ ಮಾಡಿಯೂ ತಿನ್ನುತ್ತಿದ್ದ. ವಾರಕ್ಕೊಂದೆರಡು ಸಾರೆಯಾದರೂ ಬೆಣ್ಣಿರೊಟ್ಟಿಯ ರುಚಿ ಅಪ್ಪನ ಜೊತೆ ನನಗೂ ಸಿಗುತ್ತಿತ್ತು. 


ಕಾಯಕ ಜೀವಿಯ ಬೇರುಗಳು 


ಅಪ್ಪನ ದುಡಿಮೆ ಕಾಯಕ ಯೋಗಿಯಂತಹದ್ದು. ಅಂತಹ ಕಾಯಕ ಯೋಗಿಯಾಗಿ ರೂಪಗೊಂಡ ಅಪ್ಪನ ಬಾಲ್ಯ ಹೇಗಿದ್ದಿರಬಹುದು ? ಅಪ್ಪನ ಬಂಧುಗಳ್ಯಾರು ಕಡದಳ್ಳಿಯಲ್ಲಿರಲಿಲ್ಲ. ಏಕೆಂದರೆ ಕಡದಳ್ಳಿ ಅವ್ವನ ತವರು ಮನೆ. ಅಜ್ಜ ಕರೆತಂದು ಸಾಕಿದ ಮನೆ. ನನಗೆ ನನ್ನ ತಾಯಿ ಮನೆತನದ ಹಿರಿಯರ ಬಂಧು ಬಾಂಧವರ ಪರಿಚಯವಿದೆಯೆ ಹೊರತು  ಅಪ್ಪನ ಬಂಧುಗಳ ಪರಿಚಯವೇ ಇಲ್ಲ. ಈಗಲೂ ಕಡಿಮೆ. 


ಅಪ್ಪ ಚಿಕ್ಕವನಿದ್ದಾಗಲೇ ಅಜ್ಜ ಅಮ್ಮ ಸಾವನ್ನಪ್ಪಿದ್ದರು. ತಂದೆ ತಾಯಿ ಇಲ್ಲದ ಅಪ್ಪ ನಾಲ್ಕು ಐದು ವರ್ಷದ ತಬ್ಬಲಿ.  ಅಪ್ಪನ ಈ ಪರಿಸ್ಥಿತಿಯ ಬಗ್ಗೆ ತಿಳಿದ ಅಜ್ಜ ಪರ್ವತಗೌಡ ಅಪ್ಪನನ್ನು ಚಿಕ್ಕತಡಸಿಯಿಂದ ಕರೆತಂದು ಜೋಪಾನ ಮಾಡಿದ. ಬಾಲ್ಯದಿಂದಲೂ ಅಪ್ಪ ದನಕರುಗಳ ಜೊತೆಯೇ  ಬೆಳೆಯತೊಡಗಿದ. ಎಲ್ಲ ಮಕ್ಕಳಂತೆ ಆಟ ಆಡಿ ಬೆಳೆದನೊ ಬರಿ ದನ ಹೊಲಮನಿ ಕೆಲಸದಲ್ಲಿ ತೊಡಗಿಕೊಂಡಿದ್ದನೊ ಗೊತ್ತಿಲ್ಲ. 


ಮದುವೆ ವಯಸ್ಸಿಗೆ ಬಂದಾಗ ಅಜ್ಜ ಒಳಸಂಬಂಧದ ಹುಡುಗಿಯೊಂದಿಗೆ ಮದುವೆ ಮಾಡಿದ. ಅಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಬಾಳಸಂಗಾತಿಯನ್ನು ಕಳೆದುಕೊಂಡ. ಅಂದಿನ ಅವನ ಮನಸ್ಥಿತಿಯನ್ನು ನೋಡಿದ ಅಜ್ಜ ಮುಗ್ಧ ಅಪ್ಪನ ಮೇಲಿನ ಪ್ರೀತಿಗಾಗಿ ತನ್ನ ಹಿರಿಮಗಳನ್ನೆ ಧಾರೆಯೆರೆದುಕೊಟ್ಟ, ಮನೆಯಳಿಯನನ್ನಾಗಿ ಮಾಡಿಕೊಂಡ. ಇದನ್ನೆಲ್ಲ ನೆನೆದಾಗ ಅಪ್ಪ ಅಜ್ಜನ ಬಂಧುತ್ವದ ಬಗ್ಗೆ ಅಭಿಮಾನವೆನಿಸುತ್ತದೆ. ಅವ್ವ ಅಮೃತವ್ವ ಅಪ್ಪನ ಕೈಹಿಡಿದದ್ದು ಎರಡನೆಯ ಹೆಂಡತಿಯಾಗಿ. ಈ ವಿಷಯ ನನಗೆ ಗೊತ್ತಾದದ್ದು ತೀರ ಇತ್ತೀಚೆಗೆ. ಅಪ್ಪ ಕಾಲವಾದ ಅನಂತರ. ಅಜ್ಜ ಅಪ್ಪನಿಗೆ ಮಗಳನ್ನು ಕೊಟ್ಟು ಕೈಬಿಡಲಿಲ್ಲ. ಅಪ್ಪನ ಹೆಸರಿಗೆ ಹತ್ತು ಎಕರೆ ಹೊಲವನ್ನು ಹಚ್ಚಿದ. ಬನಹಟ್ಟಿ ಬೆನಕನಮಾನೆ ಹೊಲ, ಬನಹಟ್ಟಿಯಲ್ಲಿಯ ಮನೆ, ಹಿತ್ತಿಲ ಎಲ್ಲವನ್ನೂ ಅಪ್ಪನಿಗೆ ನೀಡಿದ. 


ಅಪ್ಪ ಅವ್ವನ ಮೊದಲ ಕುಡಿಯಾಗಿ ಜನಿಸಿದ ಅಣ್ಣ ವೀರನಗೌಡ ಐದಾರು ವರ್ಷ ಬದುಕಿ ಕಾಲವಾದ. ಬಹಳ ಜಾಣನಿದ್ದ. ಗೊಡಚಿ ವೀರಭದ್ರ ಮನೆದೇವರಾದ್ದರಿಂದ ಅವನಿಗೆ ವೀರನಗೌಡ ಎಂದು ಹೆಸರಿಟ್ಟಿದ್ದರು. ನಾನು ಕಾಣದ ಈ ಅಣ್ಣನ ಬಗ್ಗೆ ಅಮ್ಮ, ಕಲ್ಲಕ್ಕ, ಗಂಗಕ್ಕ ಅಗಾಗ ಮಾತಾಡುತ್ತಿದ್ದರು. ಪ್ರಸಂಗ ಬಂದಾಗ  ನನಗೂ ಹೇಳುತ್ತಿದ್ದರು. 


ಅಣ್ಣ ಮತ್ತು ಇಬ್ಬರು ಅಕ್ಕಂದಿರ ಅನಂತರ ಹುಟ್ಟಿದವ ನಾನು. ಅಪ್ಪ ಅವ್ವನಿಗೆ ಐದನೆಯ ಮಗ. ನನಗೊಬ್ಬ ತಮ್ಮನೂ ಹುಟ್ಟಿದ್ದ. ಆದರೆ ಅವನೂ ಅವ್ವನನ್ನು ಹಿಂಬಾಲಿಸಿದ. ಅವ್ವ ಅಮೃತವ್ವ ತಮ್ಮನ ಹೆರಿಗೆ ಅನಂತರ ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದು ಅಪ್ಪನ ಜೀವನದ ದೊಡ್ಡ ದುರಂತ  ಮತ್ತು ನಮ್ಮೆಲ್ಲರ ದೌರ್ಭಾಗ್ಯ. ಅಮ್ಮ ಶಿವಬಾಯಮ್ಮ ನಮಗೆಲ್ಲರಿಗೂ ಅವ್ವನ ಸ್ಥಾನದಲ್ಲಿ ನಿಂತು ಜೋಪಾನ ಮಾಡಿದ ರೀತಿ ಒಂದು ಅದ್ಭುತ ಪವಾಡವೇ ಹೌದು. ಅಮ್ಮನೆಂದರೆ ನಮ್ಮ ಅಜ್ಜನ ಎರಡನೆಯ ಹೆಂಡತಿ ; ನಮ್ಮ ಅವ್ವನ ಮಲತಾಯಿ.


ಕರ್ಮಯೋಗಿಯ ಮೌನ


ಅವ್ವನ ಸಾವಿನ ಅನಂತರ ಅಪ್ಪ ಇನ್ನೂ ಏಕಾಂಗಿಯಾದ. ಮೌನಕ್ಕೆ ಶರಣಾದ. ಒಕ್ಕಲುತನ ದನಕರುಗಳಿಗೆ ತನ್ನನ್ನು ಅರ್ಪಿಸಿಕೊಂಡ. ಕರ್ಮಯೋಗಿಯಾದ. ಈ ಸಂದರ್ಭದಲ್ಲಿಯೇ ಇನ್ನೊಂದು ಆಘಾತ ಘಟಿಸಿತು. ಅಜ್ಜ, ಅವ್ವ ಕಾಲವಾದ ಎರಡೇ ವರ್ಷಗಳಲ್ಲಿ ಸಾವಿಗೀಡಾದ. ಅಮ್ಮನಿಂದ ಹಿಡಿದು ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿದ. 


ಮನೆಯಲ್ಲಿ ಹಿರಿಯರಾಗಿರುವವರು ಅಮ್ಮ ಮತ್ತು ಅಪ್ಪ. ಅಪ್ಪನಿಗೆ ಹೊರಗಿನ ಜಗತ್ತೇ ಗೊತ್ತಿಲ್ಲ. ಅಮ್ಮ ಅಜ್ಜನ ನೆರಳಾಗಿ ಬದುಕಿದವಳು ಮಾತ್ರ. ಸ್ವಲ್ಪ ತಿಳುವಳಿಕೆ ಬಂದ ಅಕ್ಕ     ಅಜ್ಜಾ, ನೀ ಹೋದಮ್ಯಾಲ ನಮ್ಮನ್ಯಾರು ಜೋಪಾನ ಮಾಡವರು  ಗೋಳಾಡಿ ಅತ್ತಾಗ  ಅಮ್ಮ,  ನಾನು ಜೋಪಾನ ಮಾಡತೀನಿ ಎಂದು ತಬ್ಬಿಕೊಂಡು ಸಂತೈಸಿದ ಮಾತು ನನ್ನ ಕಿವಿಯಲ್ಲಿ ಈಗಲೂ ಕೇಳುತ್ತಲೇ ಇದೆ. ಅಂದು ಅಮ್ಮ ಕೊಟ್ಟ ಅಭಯ. ಅದು ಕೇವಲ ಅಕ್ಕನಿಗೆ ಅಷ್ಟೇ ಅಲ್ಲ ಅಪ್ಪನಿಗೂ ಸುರಕ್ಷತೆಯನ್ನು ಕೊಟ್ಟ ವಚನವಾಗಿತ್ತು. 


ಅಪ್ಪ ಮತ್ತು ಚಿಕ್ಕತಡಸಿಗೆ ಇರುವ ಸಂಬಂಧ ಅಷ್ಟಕ್ಕಷ್ಟೆ. ನನಗೆ ತಿಳಿದಂತೆ ಅಜ್ಜನ ಸಾವಿನ ಅನಂತರ ವರ್ಷಕ್ಕೊಮ್ಮೆ ಹೊಲದ ಲಾವಣಿ ಹಣ ತರಲು ಮಾತ್ರ ಹೋಗುತ್ತಿದ್ದ. ಒಮ್ಮೊಮ್ಮೆ ಕಾಕಾ ಅಯ್ಯನಗೌಡ ಮತ್ತು ಅಪ್ಪ ಕೂಡಿಯೇ ಹೋಗಿ ಬರುತ್ತಿದ್ದರು. ಒಂದು ಸಲ ಅಪ್ಪ ಆಣ್ಣ ಇಬ್ಬರೂ ಎತ್ತು ಚಕ್ಕಡಿ ಸಮೇತ ಹೋಗಿ ಬಂದರು. ನಾಲ್ಕೆಂಟು ದಿನವಿದ್ದು ಹೊಲ ಹರಗಿ ಬಿತ್ತಿ ಬಂದರು. ಆ ವರ್ಷ ಬೆಳೆ ಎಷ್ಟು ಬಂತು ಎಂಬುದು ನೆನಪಿಲ್ಲ. ಆದರೆ ಚಿಕ್ಕ ತಡಸಿಗೆ ಹೋಗುವಾಗ ಹೊಟ್ಟು ಮೇವು ಸಮೇತ ಚಕ್ಕಡಿ ರಸ್ತೆಪಕ್ಕದ ಹೊಲದಲ್ಲಿ ಬಿದ್ದಿತ್ತು ಎಂದು ಅಣ್ಣ ಹೇಳಿದ ಸಂಗತಿ ನೆನೆಪಿದೆ. ಎಂದೂ ಡಾಂಬರ ರಸ್ತೆಯಲ್ಲಿಯಾಗಲಿ, ವಾಹನ ಸಂಚಾರವಿರುವ ರಸ್ತೆಯಲ್ಲಾಗಲಿ ತಿರುಗಾಡಿ ರೂಢಿ ಇರದ ಬಿಳಿ-ಕೆಂದ ಹೋರಿಗಳು  ಮೋಟರ ಸಪ್ಪಳಕ್ಕೆ ಬೆದರಿ ಚಕ್ಕಡಿಯನ್ನು ಕೆಡವಿಬಿಟ್ಟಿದ್ದವು.


ಹೊಳಿ ಹೊಲ, ಮಾವಿನ ಗಿಡದ ಹೊಲ, ಎರಿ ಹೊಲ ಎಂಬ ಹೆಸರುಗಳನ್ನು ಬಾಲ್ಯದಿಂದಲೇ ಕೇಳುತ್ತ ಬಂದಿರುವೆ. ಅಪ್ಪ ಒಮ್ಮೊಮ್ಮೆ ಕಣದಲ್ಲಿ ಮಲಗಿದಾಗ ಚಿಕ್ಕತಡಸಿ ಹೊಲದ ಬಗ್ಗೆ ಮಾವ, ಅಣ್ಣನ ಮುಂದೆ ಹೇಳುವಾಗ ನನ್ನ ಕಿವಿಗೂ ಬಿದ್ದ ಮಾಹಿತಿ ಇದು. ನಮ್ಮೂರು ಚಿಕ್ಕತಡಸಿ ಎಂಬುದು ಗೊತ್ತಾದದ್ದು ಮೊದಲ ಸಲ ತಡಸಿ ಹೆಳವನಿಂದ. ನಸುಕಿನಲ್ಲಿ ಬಂದು ಮನೆ ಹುಸಿಯಲ್ಲಿ ಕುಳಿತು ರಾಗಬದ್ಧವಾಗಿ ನಮ್ಮ ವಂಶದ ಬಳ್ಳಿಯನ್ನು ಹೇಳುವಾಗ ನನ್ನ ಹೆಸರು ಬರುತ್ತಿತ್ತು. 


ಅಕ್ಕ ಶಾಂತಕ್ಕನ ಮದುವೆ ಸಂದರ್ಭದಲ್ಲಿ ಎರಡು ಮೂರು ಬಾರೆ ಚಿಕ್ಕತಡಸಿಗೆ ಹೋಗಿ ಬಂದ, ಅಪ್ಪ. ಹಣದ ಅಡಚಣಿಯಿದ್ದುದರಿಂದ ಸುಗ್ಗಿಗಿಂತ ಮೊದಲೇ ಲಾವಣಿ ತರಲು ಎಡತಾಕಿದ್ದ. ಅಪ್ಪ ಹೀಗೆ ಚಿಕ್ಕ ತಡಸಿಗೆ ಹೋಗುವಾಗ ಹೆಚ್ಚಾಗಿ ನಡೆದುಕೊಂಡೆ ಹೊಗುತ್ತಿದ್ದ. ಕಾಕಾ ಬಸ್ ಚಾರ್ಜಿಗೆ ಕೊಟ್ಟ ಹಣವನ್ನು ಮರಳಿ ಬಂದು ಕೊಡುತ್ತಿದ್ದ. ಒಮ್ಮೆ ಚಿಕ್ಕತಡಸಿಗೆ ಹೋಗುವಾಗ ನರಗುಂದ  ಬಸ್ ಸ್ಟ್ಯಾಂಡಿನಲ್ಲಿ ಕುಳಿತು ನನ್ನನ್ನು ಕರೆಕಳಿಸಿದ್ದ. ನಾನಾಗ ನರಗುಂದದಲ್ಲಿ ಓದುತ್ತಿದ್ದೆ. ನಾನು ಬಂದು ಭೇಟಿಯಾದಾಗ ತನ್ನಲ್ಲಿದ್ದ  ಬಸ್ ಚಾರ್ಜಿನ ಹಣವನ್ನೆಲ್ಲ ನನಗೆ ಕೊಟ್ಟುಬಿಟ್ಟ. ಎರಡು ರೂಪಯಿಯ ಕೆಂಪು, ಐದರ ಹಸಿರು ನೋಟನ್ನು ನನ್ನ ಕೈಗಿಟ್ಟು ಆ ಸಾಯಂಕಾಲದ ಸಮಯದಲ್ಲಿ ನಡೆಯುತ್ತಲೆ ಚಿಕ್ಕತಡಸಿ ದಾರಿ ಹಿಡಿದ. ಅಪ್ಪ ಮೊದಲ ಸಲ ರೊಕ್ಕ ಕೊಟ್ಟಿದ್ದ. ಅವನ ಕಿಸೆಯಲ್ಲಿ ರೊಕ್ಕ ಇಟ್ಟದ್ದನ್ನು ಸಹ ಮೊದಲ ಸಲ ನೋಡಿದೆ. ಅಪ್ಪ ನಡೆದುಕೊಂಡು ಹೋಗುವ ಬಗ್ಗೆ ನನಗೆ ಆತಂಕವಿತ್ತು ಆದರೆ ಹಣ ಮರಳಿಕೊಟ್ಟು ಒತ್ತಾಯ ಮಾಡಿ ಬಸ್ಸಿಗೆ ಹೋಗು ಎಂದು ಹೇಳುವಷ್ಟು ಸಲಿಗೆ ಇರಲಿಲ್ಲ, ಧೈರ್ಯವೂ ಇರಲಿಲ್ಲ. ವಾರದ ಕೊನೆಯಲ್ಲಿ ಊರಿಗೆ ಬಂದಾಗ ಅಮ್ಮನಿಗೆ ಅಪ್ಪ ರೊಕ್ಕ ಕೊಟ್ಟ ಸಂಗತಿ ತಿಳಿಸಿದೆ. ಅಮ್ಮ ಹಣೆ ಹಣೆ ಬಡಿದುಕೊಂಡು - ಶಿವನಗೌಡಪ್ಪನ ಬಾಳವುನೇ ಹಿಂತಾದ್ದು ಎಂದು ಮರುಗಿದಳು.


ಅಪ್ಪನ ತಿರುಗಾಟ


ಅಪ್ಪ ಹತ್ತಿ ಜಿನ್ ಮಾಡಿಸಲು, ಇಲ್ಲವೆ ಜೋಳ, ಗೋದಿ ಮಾರಲು ನರಗುಂದಕ್ಕೆ ಬರುತ್ತಿದ್ದ. ಹತ್ತಿ ಜಿನ್ ಮಾಡಿಸಲು ಬಂದಾಗ ಒಂದೆರಡು ದಿನ ನರಗುಂದದಲ್ಲಿಯೇ ಉಳಿಯಬೇಕಾಗುತ್ತಿತ್ತು. ಆಗ ಅವನೊಂದಿಗೆ ನಾನೂ ಇರುತ್ತಿದ್ದೆ. ಮಾವ ಕಾಕಾ ಯಾರಾದರು ಇರುತ್ತಿದ್ದರು. ಹತ್ತಿ ಜಿನ್ ಮಾಡಿಸಿದರೆ ಮನೆಗೆ ನಾವೇ ಬೆಳೆದ ಜೈಧರ ಹತ್ತಿಕಾಳು ಬರುತ್ತವೆ, ದನಗಳಿಗೆ ಒಂದು ವರ್ಷಪೂರ್ತಿ ಸಾಕಾಗುತ್ತವೆ ಎಂಬುದು ಅಪ್ಪನ ಲೆಕ್ಕಾಚಾರ. ತನ್ನ ಎತ್ತು ಹೋರಿಗಳಿಗೆ ಬೇಕಾದ ಹುರುಳಿ, ಕುಸುಬಿ, ಶೇಂಗಾ ಹಿಂಡಿ ಎಲ್ಲವನ್ನೂ ಖರೀದಿಸುತ್ತಿದ್ದ. ಒಕ್ಕಲುತನಕ್ಕೆ ಬೇಕಾದ ಕುಡ, ರಂಟಿಮುಂಜ, ಕೊಡ್ಲಿ ಹುಡುಕಾಡಿ ಕೊಳ್ಳುತ್ತಿದ್ದ. ತನ್ನ ಬಟ್ಟೆ ಬರೆ ಬಗ್ಗೆ ಇಷ್ಟು ಕಾಳಜಿ ಮಾಡುತ್ತಿರಲಿಲ್ಲ. ಒಕ್ಕಲುತನ ಮತ್ತು ದನಗಳಿಗೆ ಬೇಕಾದ ವಸ್ತುಗಳ ಬಗ್ಗೆ ಬಹಳ ಕಾಳಜಿವಹಿಸುತ್ತಿದ್ದ. ಅತಿ ಹೆಚ್ಚೆಂದರೆ ಅಷ್ಟೊತ್ತಿಗೆ ಅಪ್ಪ ಬಳಸುವ ದುಪ್ಪಟ್ಟಿ ಹರಿದಿದ್ದರೆ ಅದನ್ನೊಂದು ತರಲು ಕಾಕಾನಿಗೆ ಹೇಳುತ್ತಿದ್ದ. ಅರಿವೆ ಅಂಗಡಿಗೆ ತಾನು ಮಾತ್ರ ಹೆಜ್ಜೆಯಿಡುತ್ತಿರಲಿಲ್ಲ. ಮನೆಗೆ ವರ್ಷದುದ್ದಕ್ಕೂ ಬೇಕಾಗುತ್ತಿದ್ದ ಉಪ್ಪು, ಚಿಮಣಿ ಎಣ್ಣೆಗಳ ವ್ಯವಸ್ಥೆಯನ್ನೂ ಕಾಕಾನಿಂದ ಮಾಡಿಸುತ್ತಿದ್ದ.  


ಇದು ಅಪ್ಪನ ಪ್ರವಾಸದ ಒಂದು ಕಥನ. ಇನ್ನೊಂದು ಅತಿ ಉತ್ಸಾಹದ ಪ್ರವಾಸದ ಬಗ್ಗೆ ತಪ್ಪದೇ ಇಲ್ಲಿ ಹೇಳಲೇಬೇಕು. ಅದೇನೂ ದೂರದ ಊರಲ್ಲ. ಕೇವಲ ಐದಾರು ಮೈಲು ದೂರದ ಶಲವಡಿ. ಅಲ್ಲಿ ಕಲ್ಲಕ್ಕ ಚಿಗವ್ವನ ಮನೆಗೆ ಜೋಳ ಗೋದಿ ಹೇರಿಕೊಡು, ಇಲ್ಲವೆ ಮೇವು ಹೇರಿಕೊಂಡು ಹೋಗುವುದೆಂದರೆ ಅಪ್ಪನಿಗೆ ಎಲ್ಲಿಲ್ಲದ ಉಮೇದಿ. ಎಂದೂ ಮುಂಜಾನೆ ಜಳಕ ಮಾಡದ ಅಪ್ಪ ಅಂದು  ತನ್ನ ಹೊಟ್ಟು ಮೇವು ತರುವ ಕೆಲಸಮುಗಿಸಿ ಬೇಗನೇ ಜಳಕ ಮಾಡುತ್ತಿದ್ದ. ತನ್ನ ಏಕಮೇವ ಅದ್ವೀತಿಯವಾದ  ಮಂಜರಪಾಟ್ ಅಂಗಿ, ದಪ್ಪನ್ನ ಧೋತ್ರ, ಮೇಲೆ ಸಾದಾ ಪಟಗ ಸುತ್ತಿ ಚಕ್ಕಡಿ ಮೂಕದಲ್ಲಿ ಕೂತು ಹೊರಟುಬಿಡುತ್ತಿದ್ದ. ಶಾಲೆ ಸೂಟಿ ಇದ್ದರೆ ನಾನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಹೀಗೆ ಸಂಭ್ರಮದಿಂದ ಹೊರಟ ಅಪ್ಪನನ್ನು ನೋಡಿದವರು - ಅಲಲ.. ಶಿವನಗೌಡ್ರ ಸವಾರಿ ಶಲವಡಿಗೆ ಹೊಂಟತೆಲ್ಲ ಎಂದು ನಗಾಡುತ್ತಿದ್ದರು. ಅಪರೂಪದ ಅಪ್ಪನ ಪ್ರವಾಸಕ್ಕೆ ಪ್ರತಿಕ್ರಿಯಿಸುತ್ತಿದ್ದರು.


ಶಲವಡಿ ಮುಟ್ಟಿ ಚಕ್ಕಡಿ ಕೊಳ್ಳ ಹರಿದು ಎತ್ತುಗಳನ್ನು ಒಳಗೆ ಕಟ್ಟಿ ಬರುತ್ತಿದ್ದ. ಛಾವನಿಯಲ್ಲಿಯೇ ಕುಳಿತ ಶಿವರಾಯಪ್ಪಜ್ಜ ಮತ್ತು ವೀರಪ್ಪಜ್ಜನ ಜೂತೆ ಮಳೆ ಬೆಳೆ ಬಗ್ಗೆ ಮಾತಾಡುತ್ತಿದ್ದ. ಮಗ್ಧತನ ಮತ್ತು ಗೌರವದೊಂದಿಗೆ ಅಪ್ಪ ಮಾತಾಡುತ್ತಿದ್ದುದಕ್ಕೆ ಅವರೂ ಅಷ್ಟೆ ಪ್ರೀತಿಯಿಂದ ಉತ್ತರಿಸುತ್ತಿದ್ದರು. ನನಗಂತೂ ಆ ಇಬ್ಬರೂ ಅಜ್ಜಂದಿರನ್ನು ಕಂಡರೆ ಕುತೂಹಲ ಹುಟ್ಟುತ್ತಿತ್ತು. ಅವರು ಧರಿಸಿದ ವಿಭೂತಿ, ತೊಟ್ಟ ವೇಷ , ಕುಳಿತ ಭಂಗಿ ಎಲ್ಲವೂ ನನಗೆ ಹೊಸತೆನಿಸುತ್ತಿತ್ತು.  ಒಮ್ಮೊಮ್ಮೆ ಶಿವರಾಯಪ್ಪ ಅಜ್ಜ ಚದುರಂಗ ಆಡುವದನ್ನು ನೋಡುತ್ತ ಕುಳಿತುಬಿಡುತ್ತಿದ್ದೆ. 


ಒಳಗೆ ಹೋಗಿ ಕೈಕಾಲು ಮುಖ ತೊಳೆದು ಕೂತ ಮೇಲೆ ಚಿಗವ್ವ ಕಲ್ಲಕ್ಕ ಅಡಿಗೆ ಮಾಡುತ್ತ ಎಲ್ಲ ಸಮಾಚಾರ ಕೇಳುತ್ತಿದ್ದಳು. ಅಪ್ಪ ಚಿಗವ್ವನ ಮುಂದೆ ಮುಕ್ತವಾಗಿ ಸಲಿಗೆಯಿಂದ ಮಾತಾಡುತ್ತಿದ್ದ. ಚಿಗವ್ವ  ತಪ್ಪದೇ ವಿಶೇಷ ಅಡಿಗೆ ಮಾಡಿ ಊಟಕ್ಕೆ ಕೊಡುತ್ತಿದ್ದಳು. ನನಗಂತೂ ಸಕ್ಕರಿ ಸಜ್ಜಕ (ಸಿರಾ)ದ ಮೇಲೆ ವಿಪರೀತ ಆಸೆ. ಕಡದಳ್ಳಿಯಲ್ಲಿ ಬೆಲ್ಲದ ಸಜ್ಜಕ ಉಂಡ ನನಗೆ ಬಿಳಿ ಬಣ್ಣದ ಸಿರಾ ಕಂಡಕೂಡಲೇ ಬಾಯಲ್ಲಿ ನೀರೂರುತ್ತಿತ್ತು. ಅಪ್ಪ ಅರಾಮಾಗಿ ಕೂತು ಊಟ ಮಾಡುತ್ತಿದ್ದ. ಶಲವಡಿಯಲ್ಲಿ ಆ ಈ ಕೆಸದ ಒತ್ತಡವಿರುತ್ತಿರಲಿಲ್ಲ. 


ಹಬ್ಬ ಜಾತ್ರೆ ಮದುವೆ ಸಂದರ್ಭಗಳಲ್ಲಿ ಚಿಗವ್ವ ಕಲ್ಲಕ್ಕನನ್ನು ಕರೆತರಲು ಹೊರಟರೆ ಕಡ್ಡಾಯವಾಗಿ ಚಕ್ಕಡಿಗೆ ಕೊಲ್ಹಾರಿ ಕಟ್ಟುತ್ತಿದ್ದ. ಮೊದಲು ಬರ್ಕ (ಗೋಣಿ ದಾರದಿಂದ ಹೆಣೆದ, ಚಕ್ಕಡಿಗೆ ಹೊಂದಿಕೆಯಾಗುವ ಸಾಧನ.)   ಕಟ್ಟಿ ಗಾದಿ ಇಲ್ಲವೆ ಗುಡಾರ ಮಡಿಚಿ ಹಾಸಿ ಮೆತ್ತಗಾಗುವಂತೆ ವ್ಯವಸ್ಥೆ ಮಾಡುತ್ತಿದ್ದ. ಬರ್ಕ ಚಕ್ಕಡಿ ಪ್ರಯಾಣಕ್ಕೆ ಅನುಕೂಲವೂ ಹೌದು, ಅಲಂಕಾರವೂ ಹೌದು. ಅಪ್ಪ ಅತಿ ಉತ್ಸಾಹದಿಂದ ಶಲವಡಿಗೆ ಹೋಗುವಾಗ ಒಂದೊಂದು ಸಾರೆ ನಾನೂ ಹೊಗುತ್ತಿದ್ದೆ. ಹೀಗೆ ಶಲವಡಿಗೆ ಹೋಗಬೇಕಾದ ಕೆಲಸವನ್ನು ಸಾಧ್ಯವಾದಷ್ಟು ಸೋಮವಾರವೇ ಇಟ್ಟುಕೊಳ್ಳುತ್ತಿದ್ದ. ಏಕೆಂದರೆ ಅಂದು ಎತ್ತುಗಳಿಗೆ ಹೊಲದ ಕೆಲಸಕ್ಕೆ ಬಿಡುವು ಇರುತ್ತಿತ್ತು. ಸೋಮವಾರ ದಿನ ಗಳೆ ಹೂಡುತ್ತಿರಲಿಲ್ಲ. ಆದರೆ ಚಕ್ಕಡಿ ಹೂಡುತ್ತಿದ್ದರು. ಅದು ಕೃಷಿ ಕೆಲಸಕ್ಕಲ್ಲ. ಹೀಗಿದ್ದರೂ ಹೂಡುವ ಮುನ್ನ ಚಕ್ಕಡಿ ಪೂಜೆ ಮಾಡಿ ಹೊರಟು ಬಿಡುತ್ತಿದ್ದ. ಅಪ್ಪನ ಬಗ್ಗೆ ಗುರುಶಾಂತಪ್ಪ ಕಾಕಾನಿಗೂ ಪ್ರೀತಿ ಗೌರವವಿತ್ತು. ಆದರೆ ಇಬ್ಬರ ನಡುವೆ ಮಾತುಕತೆ ತೀರಾ ಕಡಿಮೆ. ಚಕ್ಕಡಿ ಹಳಿ ಬಿಗಿಸಲು ಸಹ ಅಪ್ಪ ಶಲವಡಿಗೇ ಹೋಗುತ್ತಿದ್ದ. ನರಗುಂದ ಕಮ್ಮಾರರ ಕೆಲಸ ಅಪ್ಪನ ಮನಸ್ಸಿಗೆ ಹಿಡಿಸುತ್ತಿರಲಿಲ್ಲ. ಊರವರೆಲ್ಲ ನರಗುಂದಕ್ಕೆ ಹೋದರೆ ಅಪ್ಪ ಮತ್ತು ಸಣ್ಣ ರುದ್ರಗೌಡ ಮಾವ ಇವರು ಕಡ್ಡಾಯವಾಗಿ ಶಲವಡಿಗೆ ಹೋಗುತ್ತಿದ್ದರು. 


ಕಲ್ನಾರು - ಹೊಟ್ಟಿಹಗ್ಗ


ಬೇಸಿಗೆಯಂತಹ ಬೇಸಿಗೆಯಲ್ಲಿ ಅಪ್ಪ ಖಾಲಿ ಕೂಡುತ್ತಿರಲಿಲ್ಲ. ಓಣಿಯವರೆಲ್ಲ ಮಧ್ಯಾಹ್ನ ತಂಪಾಗಿರುತ್ತಿದ್ದ ಹನಮಂತ ದೇವರ ಗುಡಿಯಲ್ಲಿ ಕೂತು ಮಲಗಿ ಕಾಲಹರಣ ಮಾಡುತ್ತಿದ್ದರು. ಇಲ್ಲವೆ ಹರಟೆ ಹೊಡೆಯುತ್ತಿದ್ದರು. ಅಪ್ಪ ಮಾತ್ರ ಹಗ್ಗ ತಯಾರಿಸಲು ಬೇಕಾದ ಹುರಿಯನ್ನು ಸಿದ್ಧಮಾಡುತ್ತ ಕೂಡುತ್ತಿದ್ದ. ಮಗ್ಗುಲಲ್ಲಿ ಕುಳಿತವರು ಪಾಚಿ ತೆಗೆದುಕೊಡುತ್ತಿದ್ದರು. ಒಂದು ಎರಡು ಅಡಿ ಉದ್ದದ ಬಿದಿರಿನ ಕೋಲಿಗೆ ಆಚೆ ಈಚೆ ಚಿಕ್ಕ ಬೆಣೆ ಸಿಗಿಸಿ ಹುರಿ ಸುತ್ತುತ್ತಿದ್ದ. ಅದರ ಹೆಣಿಕೆ ಬಹಳ ವಿಶೇಷವಾಗಿರುತ್ತಿತ್ತು. ಅದರ ಅಕೃತಿ ರೈತರ ಕೌಶಲ್ಯಕ್ಕೆ ಸಾಕ್ಷಿಯಾಗಿತ್ತು. ನಾನಂತೂ ಹಾಗೆ ಸುತ್ತುವ ರೀತಿಗೆ ಬೆರಗಾಗಿದ್ದೆ. ಹೊಸೆದ ನಾರಿನಿಂದ ಹೆಣಿಕೆ ಹಾಕಿದ ಚೆಂಡನ್ನು ಸಿದ್ಧ ಮಾಡುತ್ತಿದ್ದ ಕುಂಬಾರ ವೀರಪ್ಪಜ್ಜನ ಕಲೆಯಂತೂ ಅದ್ಭುತವಾಗಿತ್ತು. ಅರಿವೆ ಚಂಡನ್ನು ಮತ್ತು ನಾನೇ ಹೊಸೆದ ದಾರವನ್ನು ಒಯ್ದು ಕೊಟ್ಟರೆ ಮೂರ್ನಾಲ್ಕು ದಿನದಲ್ಲಿ ಹೆಣೆದುಬಿಡುತ್ತಿದ್ದ. ಕಲ್ಲಪ್ಪಜ್ಜ ( ಕಲ್ಮೇಶ್ವರ ಗುಡಿ)ನ ಗುಡಿ ಕಟ್ಟಿಗೆ ಕೂತು ಹೆಣೆಯುವುದನ್ನು ಬಿಡುಗಣ್ಣಿನಿಂದ ನೋಡುತ್ತಿದ್ದೆ. ಅನಂತರ ನಾನೂ ಪ್ರಯತ್ನಿಸುತ್ತಿದ್ದೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ನನಗೆ ಆ ಹೆಣಿಕೆ ಬರಲೇ ಇಲ್ಲ.


ನಾಲ್ಕಾರು ಹೊಟ್ಟಿ ಹಗ್ಗ, ಏಳೆಂಟು ಹಿಡಿಯಗ್ಗ ತಯಾರಿಸುವಷ್ಟು ಹುರಿ ಸಿದ್ಧವಾದ ಮೇಲೆ, ಮಸೂತಿ ಮುಂದೆ ಹಗ್ಗ ತಯಾರಿಸಲೆಂದೆ ಬಡಿಗೇರ ನಾಗಪ್ಪಜ್ಜ ನೆಟ್ಟು ಸಿದ್ಧಮಾಡಿದ ಕಟ್ಟಿಗೆ ಸಾಧನ ಬಳಸಿ ಹಗ್ಗಗಳನ್ನು ಸಿದ್ಧಮಡಿಕೊಳ್ಳುತ್ತಿದ್ದರು. ಈ ಕಟ್ಟಿಗೆಯ ಹಲಗೆಯಲ್ಲಿ ಮೂರು ರಂದ್ರಗಳಿರುತ್ತಿದ್ದವು. ಅವುಗಳಿಗೆ ಹೊಂದಿಕೆಯಾಗುವ ಡೊಂಕಾದ, ಹಗ್ಗಕ್ಕೆ ಹುರಿ ಹಾಕುವ ಕೋಲುಗಳಿರುತ್ತಿದ್ದವು. ಹುರಿ ಹಾಕಿದ ಮೇಲೆ ಮುಂದೆ ಕೂಡಿಕೊಂಡಿರುವ ಹಿಂದಿನ ಭಾಗದಲ್ಲಿ ಅಗಲವಾಗಿರುವ ವಿಶಿಷ್ಟ ಸಾಧನವಿರುತ್ತಿತ್ತು. ಅದು ಹಗ್ಗವನ್ನು ರೂಪಿಸುವ ಮುಖ್ಯಸಾಧನ. ಪಿಂಜಾರ ಹುಚ್ಚಪ್ಪ  ಇಲ್ಲವೆ ಕರಿಕಟ್ಟಿ ನಿಂಗಪ್ಪ ಇವರು ಹಗ್ಗ ಮಾಡುವ ಕಲೆಯಲ್ಲಿ ಪರಿಣಿತರು. ಅವರನ್ನು ಕರೆತಂದು ಹಗ್ಗ ತಯಾರಿಸುವಾಗ ನಾವು ಹುಡುಗರು ನಡು ನಡುವೆ ನಿಂತು ಬೆರಳ ಸಂದಿಯಲ್ಲಿ ಹಗ್ಗದ ಹುರಿಯನ್ನು ನೆಲಕ್ಕಂಟದಂತೆ ಹಿಡಿಯುತ್ತಿದ್ದೆವು.  ಗುದ್ದಿಹಗ್ಗದ್ದಾಗಲಿ, ಹಿಡಿಹಗ್ಗದ್ದಾಗಲಿ, ಹೊಟ್ಟೆಹಗ್ಗದ್ದಾಗಲಿ, ಉಡದಾರ ಹಗ್ಗದ್ದಾಗಲಿ ಚಿಪ್ಪು ಕಟ್ಟುವುದು ಜಾಣ್ಮೆಯ ಕೆಲಸ ಅದನ್ನು ಪರಿಣಿತರೇ ಮಾಡುತ್ತಿದ್ದರು. 


ಹಗ್ಗ ಮಾಡಲೆಂದೆ ಕಬ್ಬಿನಯಂತ್ರ ಹೊತ್ತು ಊರೂರು ಅಲೆಯುತ್ತ  ಬರುವ ಕೊರಸರು ಇದ್ದರು. ಅವರು ವರ್ಷ ಎರಡು ವರ್ಷಕ್ಕೊಮ್ಮೆ  ಕಡದಳ್ಳಿಗೂ ಬರುತ್ತಿದ್ದರು. ಅವರೆ ಹುರಿ ತಯಾರಿಸಿ ಅವರೆ ಹಗ್ಗ ಮಾಡಿ ಕೊಡುತ್ತಿದ್ದರು. ಊರವರೆಲ್ಲ ಅವರ ಹತ್ತಿರ ಮಾಡಿಸುತ್ತಿದ್ದರು. ಒಮ್ಮೊಮ್ಮೆ ಅಪ್ಪನೂ ಮಾಡಿಸುತ್ತಿದ್ದ. ಆದರೆ ಅವರು ಮಾಡಿದ ಹಗ್ಗ ತಾಳಿಕೆ ಬಾಳಿಕೆ ಬರುವುದಿಲ್ಲ ಎಂಬುದು ಅಪ್ಪನ ಅಭಿಪ್ರಾಯ. ಅದು ನಿಜವೂ ಹೌದು. 


ಮನೆಯಲ್ಲಿ ಹಗ್ಗ ಹಾಕಲೆಂದೇ ಪಡಸಾಲಿ ಮತ್ತು ಗ್ವಾದಲಿ ಹುಸಿ ಅಂಕಣದ ನಡುವೆ ದಪ್ಪನೆ ಬಿದಿರನ್ನು ಕಟ್ಟಿದ್ದ. ಆ ಬಿದಿರಿಗೆ ಎಲ್ಲ ಹಗ್ಗಗಳನ್ನು ಕ್ರಮಾನುಸಾರ ಜೋತುಬಿಡುತ್ತಿದ್ದ. ಆಗಾಗ ಬಳಕೆಗೆ ಬರುವ ಹಗ್ಗಗಳು ಕೈಹಾಕಿದ ತಕ್ಷಣವೆ ಸಿಗುವಂತೆ ಜೋಡಿಸುಡುತ್ತಿದ್ದ. ಮನೆಯಲ್ಲಿ ಕಡಿಮೆಯೆಂದರೆ ಮೂವತ್ತು  ನಾಲ್ವತ್ತು ಹಗ್ಗಗಳಿರುತ್ತಿದ್ದವು. ಗೋದಿ ಹುಲ್ಲು ಹೇರುವಾಗ ಬಳಸುವ ಹಗ್ಗಗಳೆ ಬೇರೆ, ಮೇವು ಹೇರುವಾಗ ಬಳಸುವ ಹಗ್ಗಗಳೆ ಬೇರೆ. ಬಿಳಿಗೋದಿ, ಕೆಂಪಗೋದಿ ಮತ್ತು ಬಿಜಗಾ ಗೋದಿ ಹುಲ್ಲನ್ನು ಕೂಡದಂತೆ ಬೇರೆ ಬೇರೆಯಾಗಿಯೇ ತರಬೇಕಾಗುತ್ತಿತ್ತು. ಬೇರೆ ಬೇರೆಯಾಗಿಯೇ ಕಣದಲ್ಲಿ ಕೂಡಿಹಾಕಬೇಕಾಗುತ್ತಿತ್ತು. ಆಗ ಹೆಚ್ಚಿನ ಹಗ್ಗಗಳು ಬೇಕಾಗುತ್ತಿದ್ದವು. ಅದಕ್ಕೆಲ್ಲ ಅಪ್ಪ ಸರಿಯಾದ ತಯಾರಿ ಮಾಡಿರುತ್ತಿದ್ದ.


ಚಕ್ಕಡಿಯಲ್ಲಿ ಒಂದು ಹೊರೆ ಮೇವು, ಒಂದೆರಡು ಚೀಲ ಹೊಟ್ಟು, ಎರಡು ಮೂರು ದಿನದ ಬುತ್ತಿ, ಕೊಡ ಮತ್ತು ತತ್ರಾಣಿಯಲ್ಲಿ ನೀರು ತುಂಬಿಕೊಂಡು ರಾತ್ರಿ ಹೊರಟರೆಂದರೆ ಹಗ್ಗಕ್ಕೆ ಬೇಕಾದ ಕಲ್ನಾರು ತರಲು ಹೊರಟಾರೆಂದೇ ಅರ್ಥ. ಚಕ್ಕಡಿಯನ್ನು ಹೆರೆದು ಉದ್ದಗಿಗೆ ಲಾಟೀನು ಕಟ್ಟಿ, ನಾಯಿಯನ್ನು ಜೊತೆ ಮಾಡಿಕೊಂಡು ಹೊರಟುಬಿಡುತ್ತಿದ್ದರು. ದೂರದ ಅಡವಿಗೆ ಹೋಗಿ ಕಲ್ನಾರು ತರಬೇಕಾಗಿದ್ದರಿಂದ ಜೋಡಿಯಾಗಿ ಹೊಗುತ್ತಿದ್ದರು. ಎತ್ತಿಗೆ ಗೆಜ್ಜಿಸರ ಹಾಕಿ, ದೊಡ್ಡ ಸದ್ದು ಮಾಡುವ ಗುಮರಿ ಗೆಜ್ಜೆಸರವನ್ನು ಕಟ್ಟಿ ಗಿಲ್ ಗಿಲ್ ಎಂದು ಮಧ್ಯರಾತ್ರಿಯಲ್ಲಿ ನಡೆದುಬಿಡುತ್ತಿದ್ದರು. ಹಿಂದಿನ ದಿನವೇ ಅಪ್ಪ ದೊಡ್ಡ ದೊಡ್ಡ ಕುಡಗೋಲುಗಳನ್ನು ಮಸೆದು ಹರಿತು ಮಾಡಿರುತ್ತಿದ್ದ. ಆ ಹರಿತು ಮಾಡುವ ಕೆಲಸದಲ್ಲಿ ನಾನೂ ಭಾಗಿಯಾಗುತ್ತಿದ್ದೆ. ಚಿಕ್ಕ ಕುಡಗೋಲನ್ನು ಮಸೆಗಲ್ಲಿಗೆ ತಿಕ್ಕಿ ಸಜ್ಜುಗೊಳಿಸುತ್ತಿದ್ದೆ.


ಶಲವಡಿ ದಾಟಿ ದಾಟನಾಳ ಲಿಂಗಧಾಳದ ಹತ್ತಿರ ಕಲ್ನಾರಿನ ಪೊದೆಗಳಿದ್ದವು. ಕೆಲವೊಮ್ಮೆ ಹೊಲದವರಿಗೆ ಗೊತ್ತಿಲ್ಲದಂತೆ ಕೊಯ್ದು ತರುತ್ತಿದ್ದರು. ಇನ್ನೂ ಕೆಲವು ಸಲ ಅವರಿಗೂ ಕೊಯ್ದು ಕೊಟ್ಟು ತಮಗೆ ಬೇಕಾದಷ್ಟು ತರುತ್ತಿದ್ದರು. ಒಮ್ಮೆಯಾದರೂ ಕಲ್ನಾರು ತರಲು ಹೋಗಬೇಕು ಎಂಬ ಆಸೆಯಾಗುತ್ತಿತ್ತು. ಆದರೆ ಅಪ್ಪನಾಗಲಿ, ಅಮ್ಮನಾಗಲಿ ಅವಕಾಶ ಕೊಡುವುದಿಲ್ಲವೆಂದು ಗೊತ್ತಿದ್ದರಿಂದ ಮಾತಿನಲ್ಲಿಯೇ ಹೋಗಿ ಬಂದ ಅನುಭವ ಪಡೆಯುತ್ತಿದ್ದೆ. 


ದೂರದ ಪ್ರಯಾಣವಾದ್ದರಿಂದ ಚಕ್ಕಡಿ ಗಾಲಿಗಳನ್ನು ಹೆರೆ ಎಣ್ಣಿಯಿಂದ ಹೆರೆದು, ಕಳಗಕ್ಕೆ ಕಟ್ಟಿದ ಗೋಣಿ ಚೀಲದಲ್ಲಿ ತತ್ರಾಣಿಯನ್ನು ಧಕ್ಕೆಯಾಗದಂತೆ ಜೋತುಬಿಟ್ಟು, ಲಾಟೀನಿನ ಹರಳು ಒಡೆಯದಂತೆ ಉದ್ದಗಿಗೆ ಕಟ್ಟಿ, ದಾರಿಯಲ್ಲಿ ಬರುವ ಹುಳ ಹುಪ್ಪಡಿ ದೂರಾಗುವಂತೆ ಎತ್ತಿನ ಕೊರಳಲ್ಲಿ ಗೆಜ್ಜಿ ಸರ ಹಾಕಿ ಪ್ರಯಾಣ ಹೊರಡುವ ರೈತರ ಜಾಣ್ಮೆಯನ್ನು ಎಂಥವರೂ ಮೆಚ್ಚಬೇಕು.    


ಎರಡು ಮೂರು ದಿನಗಳಲ್ಲಿ ರಾತ್ರೊ ರಾತ್ರಿ ಕಲ್ನಾರು ತುಂಬಿತಂದ ಚಕ್ಕಡಿಗಳು ಹಿತ್ತಲ ಹತ್ತಿರ ನಿಂತಿರುತ್ತಿದ್ದವು. ಅದನ್ನು ನೋಡಿದ ಕೂಡಲೇ ಮುಂದಿನ ಕಾರ್ಯವನ್ನು ಕಲ್ಪಿಸಿಕೊಳ್ಳೂತ್ತಿದ್ದೆ. ಕಲ್ನಾರು ಎಲೆಯ ದಂಡಿಯಲ್ಲಿರುವ ಮುಳ್ಳನ್ನು ಮೊದಲು ಸವರುವುದು. ಅನಂತರ ಎಲೆಯನ್ನು ಅರ್ಧ ಇಂಚಿನ ಗಾತ್ರದಲ್ಲಿ ಕುಡಗೋಲಿನಿಂದ ಸೀಳುವುದು. ಹಾಗೆ ಸೀಳಿದ ಎಲೆಗಳ ಪೆಂಡಿಮಾಡಿ ಚಕ್ಕಡಿಯಲ್ಲಿ ಹೊಂದಿಸುವುದು. ಬೆಣ್ಣಿಹಳ್ಳದಲ್ಲಿ ಆಯಕಟ್ಟಿನ ಜಾಗದಲ್ಲಿ ಗೂಟ ನಿಲ್ಲಿಸಿ ಅಲ್ಲಿ ಹದಿನೈದು ಇಪ್ಪತ್ತು ದಿನಗಳವರೆಗೆ ನೆನೆಹಾಕುವುದು. ನೆನೆದ ಅನಂತರ ಕಲ್ಲಿನ ಮೇಲಿಟ್ಟು ಕಟ್ಟಿಗೆ ಸಾಧನದಿಂದ ಜಜ್ಜಿ ನಾರನ್ನು ಬಿಡಿಸಿ ಬಿಸಿಲಲ್ಲಿ ಒಣಹಾಕುವುದು. ಒಣಗಿದ ನಾರನ್ನು ಮೂರು ಇಲ್ಲವೆ ನಾಲ್ಕು ಎಳೆ ಜಡೆಯನ್ನಾಗಿ ಹೆಣೆಯುವುದು. ಹೀಗೆ ಹೆಣೆದ ಲಡಿಗಳನ್ನು ಗೋಣಿ ಚೀಲದಲ್ಲಿ ಕಾದಿಡುವುದು ರೈತರ ಕೆಲಸ.


ಕಲ್ನಾರಿನ ಮುಳ್ಳು ಸವರುವ, ಸೀಳುವ ಕೆಲಸದಲ್ಲಿ ನನ್ನನ್ನು ಕರೆದುಕೊಳ್ಳುತ್ತಿದ್ದರು.  ಉಳಿದ ಕೆಲಸ  ಬರುತ್ತಿರಲಿಲ್ಲವೆಂದು ನಾನೆ ದೂರ ಉಳಿಯುತ್ತಿದ್ದೆ. ಈ ಕಲ್ನಾರಿನ ವಾಸನೆಯ ಘಾಟು ತೀಕ್ಷ್ಣವಾದದ್ದು. ನೆನೆದ, ಕೊಳೆತ ಎಲೆಗಳಿಂದ ನಾರನ್ನು ಬಿಡಿಸುವ ಕೆಲಸ ಕಷ್ಟದ್ದು. ನಾರು ನೆನೆಹಾಕಿದಾಗ ಇಡೀ ಹಳ್ಳಕ್ಕೆ ಹಳ್ಳವೇ ಹೊಲಸು ನಾರುತ್ತಿತ್ತು. ಹರಿವ ನೀರಾದ್ದರಿಂದ ಹೊಲಸು ಹರಿದು ಹೋಗುತ್ತಿತ್ತು. 


 ಗಾಳಿಪಟವೂ ಪಬ್ಲಿಕ್ ಪರೀಕ್ಷೆಯೂ 


ಕಾರಹುಣ್ಣಿವೆ ಇನ್ನೂ ಒಂದು ತಿಂಗಳಿರುವಾಗಲೆ ನನ್ನ ಪಟದ ತಯಾರಿ ನಡೆಯುತ್ತಿತ್ತು. ಪಟಕ್ಕೆ ಬೇಕಾದ ದಾರವನ್ನು ಕೊಂಡುಕೊಳ್ಳುವ ಯೋಚನೆ ನಮಗೆ ಬರುತ್ತಿರಲಿಲ್ಲ. ಏಕೆಂದರೆ ಸಣಬು ತರುವುದಕ್ಕೆ ಮನೆಯಲ್ಲಿ ರೊಕ್ಕ ಕೊಡುತ್ತಿರಲಿಲ್ಲ. ಆದ್ದರಿಂದ ನಾವೇ ಪಟಕ್ಕೆ ಬೇಕಾದ ದಾರವನ್ನು ಹೊಸೆದುಕೊಳ್ಳಬೇಕಾಗುತ್ತಿತ್ತು. ಅಪ್ಪ ಮನೆಯಲ್ಲಿಲ್ಲದಾಗ ದನದ ಹಕ್ಕಿಯ ಮೇಲಿದ್ದ ಅಟ್ಟವನ್ನು ಏರಿ  ಗೋಣಿ ಚೀಲದಲ್ಲಿ ಸಂಗ್ರಹಿಸಿಟ್ಟಿದ್ದ ಒಂದೊಂದೆ ಲಡಿಯನ್ನು ಕದ್ದುಮುಚ್ಚಿ ತರುತ್ತಿದ್ದೆ.  ಅಮ್ಮ, ಮಾವ, ಅಣ್ಣ ಇವರಿಗೆ ಗೊತ್ತಾದರೆ ಹೆದರಿಕೆ ಇರುತ್ತಿರಲಿಲ್ಲ. ಆದರೆ ಅಪ್ಪನ ಹೆದರಿಕೆ ಇದ್ದೇ ಇರುತ್ತಿತ್ತು. ದನ ಕಾಯುವಾಗ ಎಲ್ಲ ಹುಡುಗರು ಸೇರಿ ದಾರ ಹೊಸೆಯುತ್ತಿದ್ದೆವು. ಪಟದ ಗಾತ್ರಕ್ಕೆ ತಕ್ಕಷ್ಟು (ಸಣಬಿನಷ್ಟು) ದಪ್ಪವಾಗಿ ಸಿದ್ಧಪಡಿಸುತ್ತಿದ್ದೆವು. ಪಟದ ಬಾಲಂಗೋಸಿಗೆ ಹಳೆಯ ಅರಿವೆಯನ್ನು ಹರಿದು ಹೊಸೆದು ಸಿದ್ಧ ಪಡಿಸಿದ ಹಗ್ಗವನ್ನು ಇಲ್ಲವೆ ಮನೆಯಲ್ಲಿ  ಶಂಕರಗೌಡ ಮಾವ ಹಗ್ಗ ಮಾಡಲೆಂದು ಹೊಸೆದಿಟ್ಟ ಪಡಮ (ಹಗ್ಗ)ವನ್ನು ಬಳಸುತ್ತಿದ್ದೆವು. ಕದ್ದು ಮುಚ್ಚಿ ಮಾಡುವ ಈ ಎಲ್ಲ ಚಟುವಟಿಕೆಗಳನ್ನು ಅಪ್ಪ ಗಮನಿಸುತ್ತಿದ್ದ, ಬಯ್ಯುತ್ತಿರಲಿಲ್ಲ. ಆದರೂ ಅಪ್ಪನ ಬಗೆಗೆ ಅವ್ಯಕ್ತ ಭಯವಿರುತ್ತಿತ್ತು. ನಾನು ಪಟಕ್ಕಾಗಿ ಹೊಸೆದು ಸಿದ್ಧಪಡಿಸಿದ ದಾರವನ್ನು ಅಗತ್ಯಬಿದ್ದಾಗ ಚೀಲ ಹೊಲಿಯಲು, ಚೀಲದ ಬಾಯಿ ಕಟ್ಟಲು, ಗೊಬ್ಬರ ಹೇರುವ ಚಕ್ಕಡಿಯ ಡಂಬರಿಗೆಗೆ ತಟ್ಟು ಹೊಲಿಯಲು ಬಳಸುತ್ತಿದ್ದ.   

ಅಪ್ಪನಿಗೆ ನನ್ನ ಶಿಕ್ಷಣದ ಬಗೆಗೆ ಅತೀವ ಕಾಳಜಿಯಿದ್ದರೂ ಅದನ್ನು ಬಾಯಿಬಿಟ್ಟು ಹೇಳುತ್ತಿರಲಿಲ್ಲ. ಪರೀಕ್ಷೆ ಫಲಿತಾಂಶ ಬಂದಾಗ ಕೇಳಿ ಸಂತೋಷ ಪಡುತ್ತಿದ್ದ. ಏಳನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ಮತ್ತೆ ನಮ್ಮಿಂದ ಪ್ರಾರಂಭವಾಯಿತು. ಅಮರಗೋಳ ಶಾಲೆಗೆ ಅದೇ ಆಗ ಬಂದ ಮುದೇನಗುಡಿಯ ಸಿ.ಯು. ಬಾರಕೇರ ಗುರುಗಳು ವಿಶೇಷ ಕಾಳಜಿಯಿಂದ ರಾತ್ರಿ ತರಗತಿ ನಡೆಸುತ್ತಿದ್ದರು. ನಮ್ಮ ಶಾಲೆಗೆ 'ಮುಲ್ಕಿ ಸ್ನೇಹಿತ' 'ಮುಲ್ಕಿ ಮಿತ್ರ' 'ಮುಲ್ಕಿ ಬಂಧು' ಇವುಗಳಲ್ಲಿ ಯಾವುದೋ ಒಂದು ಮಾಗಝಿನ್ ತರಿಸುತ್ತಿದ್ದರು. ಪ್ರತಿ ತಿಂಗಳು ಬರುತ್ತಿದ್ದ ಪತ್ರಿಕೆಯಲ್ಲಿ ಎಲ್ಲ ವಿಷಯಗಳ ಪ್ರಶ್ನೋತ್ತರಗಳಿರುತ್ತಿದ್ದವು.  ೭ನೆಯ ವರ್ಗದ ಎಲ್ಲ  ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಒಂದು ವರ್ಷದ ಚಂದಾ ಕಟ್ಟಿದ್ದರು. ವರ್ಷದ ಪ್ರಾರಂಭದಿಂದಲೇ ಪರೀಕ್ಷೆಯ ತಯಾರಿ ಸಾಗಿತ್ತು. 

ಚಿಗವ್ವ ಯಾವುದೋ ಕಾರಣಕ್ಕೆ ಅಮರಗೋಳದಲ್ಲಿರದೇ ಕಡದಳ್ಳಿಯಲ್ಲಿಯೇ ಇರುತ್ತಿದ್ದಳು. ಕಾಕಾ ಮಾತ್ರ ಅಮರಗೋಳದಲ್ಲಿರುತ್ತಿದ್ದ. ಕಾಕಾನಿಗೆ ಅಮ್ಮ ಪಾರತೆಮ್ಮ ಅಡಿಗೆ ಮಾಡುತ್ತಿದ್ದಳು. ನಾನು ಎರಡೂ ಹೊತ್ತು ಶಾಲೆಗೆ ಕಡದಳ್ಳಿಯಿಂದಲೇ ಬಂದು ಹೋಗುತ್ತಿದ್ದೆ. ಬೆಣ್ಣಿಹಳ್ಳ ನಾಲ್ಕಾರು ದಿನಕ್ಕೊಮ್ಮೆ ಕಟ್ಟಿಬಿಡುತ್ತಿತ್ತು. ಆಗ ಶಾಲೆ ತಪ್ಪುತ್ತಿತ್ತು. ಹೀಗೆ ಶಾಲೆಯ ಸಂಪರ್ಕ ಕಡಿಮೆಯಾಯಿತು. ನನ್ನಲ್ಲಿ ಕೀಳರಿಮೆ ಹುಟ್ಟಿತು. ಹಿಂಜರಿಕೆ ಪ್ರಾರಂಭವಾಯಿತು. ಎಂಟು  ಹತ್ತು ದಿನಗಳವರೆಗೆ  ಗೈರಹಾಜರಾದ್ದರಿಂದ ಶಾಲೆಗೆ ಹೋಗಲು ಮನಸ್ಸು ಬರಲಿಲ್ಲ. ಬೆಣ್ಣಿಹಳ್ಳ ದಾಟಿ ಬೆಳೆದ ಮುಂಗಾರಿ ಜೋಳದ ಹೊಲದಲ್ಲಿ ಅಡಗಿ ಕುಳಿತು ಶಾಲೆ ಬಿಡುವ ಹೊತ್ತಿಗೆ ಮನೆಗೆ ಬರುತ್ತಿದ್ದೆ. ಸಾಧ್ಯವಾದಷ್ಟು ತಲೆನೋವು ಹೊಟ್ಟೆನೋವು ನೆಪ ಹೇಳಿ ಶಾಲೆ ತಪ್ಪಿಸಲು ಪ್ರಯತ್ನಿಸುತ್ತಿದ್ದೆ. 


ಅಣ್ಣ ಬಸನಗೌಡ ಮತ್ತು ಕಾಕಾ ಅಯ್ಯನಗೌಡನಿಗೆ ಈ ಗುಟ್ಟು  ಗೊತ್ತಾಗಿಬಿಟ್ಟಿತ್ತು. ಅಣ್ಣ ಅಮ್ಮನ ಮುಂದೆ ಹೇಳಿದ. ಅಮ್ಮ ನಂಬಲಿಲ್ಲ. ನನ್ನ ಪರವಾಗಿಯೇ ವಾದ ಮಾಡಿದಳು. ಅಮ್ಮ ನನ್ನ ರಕ್ಷಣೆ ಮಾಡಿದ್ದಕ್ಕೆ ಸಂತೋಷವಾಗುತ್ತಿತ್ತು. ಅದೇ ವೇಳೆಗೆ ಇಷ್ಟು ನಂಬಿಕೆ ಇಟ್ಟ     ಅಮ್ಮನಿಗೆ ಸುಳ್ಳು ಹೇಳುತ್ತಿದ್ದುದರ ಬಗ್ಗೆ ಸಂಕಟವಾಗುತ್ತಿತ್ತು. ಮುಂದೆ ನಾಲ್ಕಾರು ದಿನಗಳಲ್ಲಿ ನನ್ನ ಈ ಹುಚ್ಚು ವೃತ್ತಾಂತ ಮನೆಯಲ್ಲಿ ಎಲ್ಲರಿಗೂ ಗೊತ್ತಾಯ್ತು. ಅಮ್ಮ ಸುಮ್ಮನೇ ಇದ್ದಳು. ಅಪ್ಪನಿಗೆ ಗೊತ್ತಾಗದಂತೆ ಮುಚ್ಚಿಟ್ಟಿದ್ದರು.  


ಅಪ್ಪ ಸಿಟ್ಟಿನವ. ಈ ವಿಷಯ ಗೊತ್ತಾದರೆ ಹುಡುಗನನ್ನು ಹೊಡೆದಾನು ಎಂದು ಅಮ್ಮ ಮುಚ್ಚಿ ಇಡಿಸಿದ್ದಳು. ಈ ಹಿಂದೆ ಅಣ್ಣನನ್ನು ಶಾಲೆಯನ್ನು ತಪ್ಪಿಸಿದ  ಕಾರಣಕ್ಕೆ ಹೊಡೆದುಬಿಟ್ಟಿದ್ದ. 


ಕಾಕಾ ಮತ್ತು ಅಣ್ಣ ಇಬ್ಬರೂ ಕೂಡಿ ಗಟ್ಟಿ ನಿರ್ಧಾರ ಮಾಡಿ ನನ್ನನ್ನು ಶಾಲೆಗೆ ಕಳಿಸಲು ಯೋಜನೆ ಹಾಕಿದರು. ಅಮ್ಮನಿಗೆ ಈ ವಿಷಯ ತಿಳಿಸಿದ್ದರೊ ಇಲ್ಲವೊ ಗೊತ್ತಿಲ್ಲ. ಮುಂಜಾನೆ ಶಾಲೆಗೆ ಹೋಗುವೆನೆಂದು ಹೇಳಿ ಹೋಗಿರಲಿಲ್ಲ. ಮುಂಗಾರಿ ಕೆಂಜೋಳದ ಗುರನಗೌಡರ ಹೊಲದಲ್ಲಿ ಕುಳಿತು ಮರಳಿ ಬಂದಿದ್ದೆ. ಅಣ್ಣ  ಅಂದು ಶಾಲೆಯಲ್ಲಿ ವಿಚಾರಿಸಿ ಬಂದಿದ್ದ. ಅಲ್ಲದೆ ಹಡಪದ ಶಿವು (ನನ್ನ ಸಹಪಾಠಿ) ಕಾಕಾನಿಗೆ ನಾನು ಶಾಲೆಗೆ ಬರಲಾರದ ವಿಷಯ ತಿಳಿಸಿದ್ದ. 


ಅಣ್ಣ ಮತ್ತು ಕಾಕಾನ ಯೋಜನೆ ಗೊತ್ತಿಲ್ಲದೆ ನಾನು ಮಧ್ಯಾಹ್ನ ಶಾಲೆಗೆ ಹೋಗುವ ನಾಟಕಕ್ಕೆ ಸಿದ್ಧನಾದೆ. ನನ್ನ ಜೊತೆಗೆ ಅಣ್ಣ ಅಮರಗೋಳದವರೆಗೂ ಬಂದ. ಅಮರಗೋಳದ ಮನೆ ಮುಟ್ಟಿದೆವು. ತಪ್ಪಿಸಿಕೊಳ್ಳಲು ಆ ಈ ಪುಸ್ತಕ ಹುಡುಕುವ ತಂತ್ರಮಾಡಿದೆ, ಪಕ್ಕ ಬರೆಯಲಾರದ ನೆಪ ಹೇಳಿದೆ. ಹೊಟ್ಟೆ ನೋಯುತ್ತದೆಂದು ಸುಳ್ಳು ಹೇಳಿ ಹೊರಗೆ ಹೋಗಿ ಬಂದೆ. ಕೇಳಲಿಲ್ಲ.  ಕೊನೆಯ ಅಸ್ತ್ರವಾಗಿ ಅಳತೊಡಗಿದೆ. ಬಿಡಿಸಿಕೊಳ್ಳಲು ಅಮ್ಮ ಚಿಗವ್ವ ಇರಲಿಲ್ಲ. ಈರವ್ವ ದೊಡ್ಡವ್ವ ಇದ್ದಳು. 'ಶಾಲೆಗೆ ಹೋಗು' ಎಂದು ಅವರ ಪಕ್ಷಕ್ಕೆ ನಿಂತಳು. ಗೌರವ್ವ ಚಿಗವ್ವ ಬಾಗಿಲ ಒಳಗಡೆ ನಿಂತು ನೋಡುತ್ತಿದ್ದಳು. ಎಷ್ಟು ಹೇಳಿದರೂ ನಿಂತ ಜಾಗ ಬಿಟ್ಟು ಕದಲಲಿಲ್ಲ. ಇನ್ನೇನು ಪಾರಾದೆ. ಇವತ್ತು ಶಾಲೆ ತಪ್ಪಿಸಿದೆ ಎನ್ನುವಷ್ಟರಲ್ಲಿ ಯಾವ ಮಾಯದಲ್ಲಿ ಬಂದನೋ ಕಟ್ಟೀಕಾರ ಬಸಪ್ಪ ಹೆಗಲ ಮೇಲೆ ಹೊತ್ತುಕೊಂಡು ಬಿಟ್ಟ. ದೊಡ್ಡಮನಿ ದಿಬ್ಬ ಇಳಿದು ಬಸವಣ್ಣ ದೇವರ ಗುಡಿ ಮುಂದೆ ಹಾಯ್ದು  ಶಾಲೆಕಡೆ ನಡೆದೇ ಬಿಟ್ಟ. ಆಟೋಟದಲ್ಲಿ ಮುಂದಿದ್ದೆ. ಪ್ರಾರ್ಥನೆಯಲ್ಲಿ ವಚನ ಹಾಡುತ್ತಿದ್ದೆ. ಶಾಲೆಯಲ್ಲಿಯೂ ತೀರಾ ಹಿಂದಿರಲಿಲ್ಲ. ನನ್ನ ಬಗ್ಗೆ ನನ್ನದೇ ಆದ ಸ್ವಪ್ರತಿಷ್ಠೆಯ ಸ್ಥಾನ ಕಟ್ಟಿಕೊಂಡಿದ್ದೆ. ಅದೆಲ್ಲ ಇಂದು ರಸ್ತೆಯಲ್ಲಿ ಹರಾಜಾಯಿತು. ಅಪಮಾನಯಿತು, ನಾಚಿಕೆಯೂ ಆಯಿತು. ಆದರೆ ಯಾರೊಬ್ಬರೂ ಮನೆಯವರು, ಶಿಕ್ಷಕರು, ಗೆಳೆಯರು, ಊರವರು ಈ ಪ್ರಸಂಗವನ್ನು ಹೇಳಿ ಹಂಗಿಸಲಿಲ್ಲ. 


ಕಳಚಿದ ಕೊಂಡಿ ಜೋಡಣೆಯಾಯಿತು. ಗೆಳೆಯರ ಜೊತೆ ಬೆರೆತು ಅಭ್ಯಾಸ ಮಾಡತೊಡಗಿದೆ.        


ಐದನೇ ತರಗತಿಯವರೆಗೂ ಅಮ್ಮನ ಮೊಲೆ ಕುಡಿದು ಬೆಳೆದ ನನ್ನ ಕುರಿತು - ಊರು ಬಿಟ್ಟುಹೋಗಿ ಶಾಲೆ ಏನು ಕಲಿತಾನ, ನಾಕ  ದಿನದಾಗ ಓಡಿಬರತಾನ ಎಂದು ಆವರಿವರು ಮಾತಾಡುವುದು ನನ್ನ ಕಿವಿಗೂ ಬೀಳುತ್ತಿತ್ತು. ಅಂತೂ ಆ ಕಾಲ ಬಂದೇ ಬಿಟ್ಟಿತು. ನರಗುಂದದ ನಗರಸಭೆಯ ಮಾಧ್ಯಮಿಕ ಶಾಲೆಗೆ ಹೆಸರು ಹಚ್ಚಿದ್ದೂ ಆಯಿತು. ಮೂರುವರ್ಷ ಪೂರೈಸಿದೆ. ಬೇರೆಯವರಿಗಿಂತ ನನಗೇ ಆಶ್ಚರ್ಯವಾಗಿತ್ತು, ಊರು ಬಿಟ್ಟು ಇದ್ದದ್ದು.  ಎಸ್.ಎಸ್.ಎಲ್.ಸಿ. ದ್ವಿತೀಯ ವರ್ಗದಲ್ಲಿ ಪಾಸಾದದ್ದೂ ಆಯಿತು. ನಮ್ಮೂರು ಕಡದಳ್ಳಿಗೆ ಬರುತ್ತಿದ್ದ - ಸ್ವಾತಂತ್ರ್ಯ ಹೋರಾಟಾಗಾರ ಕರಿಗೌಡ ಗೌಡರ ಅವರ ಮನೆಗೆ - ಸಂಯುಕ್ತ ಕರ್ನಾಟಕ ಪತ್ರಿಕೆ ಹಿಡಿದು ಎಲ್ಲರಿಗೂ ನನ್ನ ನಂಬರ್ ತೋರಿಸಿದೆ. ಅಮ್ಮ ಅಪ್ಪ ಎಲ್ಲರೂ ಖುಶಿಪಟ್ಟರು. 


ಎಸ್.ಎಸ್.ಎಲ್.ಸಿ. ಯಲ್ಲಿ ಕಲಾ ವಿಷಯ ಆಯ್ದುಕೊಂಡಿದ್ದೆ. ಆಗ ಒಂದನೆಯ ತರಗತಿಯಲ್ಲಿಯೇ ಕಲೆ, ವಿಜ್ಞಾನ, ವಾಣಿಜ್ಯ ವಿಷಯ ಆಯ್ದುಕೊಳ್ಳಬೇಕಾಗುತ್ತಿತ್ತು.  ವಿಜ್ಞಾನ ವಿಷಯವನ್ನು ಆಯ್ದು ಕೊಳ್ಳದಿರಲು ಎರಡು ಕಾರಣಗಳಿದ್ದವು. ಒಂದು ಕಠಿಣವಾಗುತ್ತದೆ ಎನ್ನುವುದು. ಇನ್ನೊಂದು ೩-೪ ನೆಯ ಅವಧಿಯಲ್ಲಿ ನಡೆಯುವ ವಿಜ್ಞಾನದ ಐಚ್ಛಿಕ ತರಗತಿಗೆ ಹಾಜರಾಗಲಾಗುವುದಿಲ್ಲ ಎನ್ನುವುದು. ಏಕೆಂದರೆ ೧೧ ಕ್ಕಿಂತ ಮುಂಚೆ ಊರಿಂದ ಬುತ್ತಿ ಬರುತ್ತಿರಲಿಲ್ಲ. ೨ನೆಯ ಅವಧಿ ಅನಂತರ ಕೋಣೆಗೆ ಊಟಕ್ಕಾಗಿ ಮರಳಿ ಬಂದು ೫ನೆಯ ಅವಧಿಯಿಂದ ಮತ್ತೆ ಹಾಜರಾಗುತ್ತಿದ್ದೆ. ಮನೆಯವರಾರೂ ನನ್ನ ಕಲಿಕೆಯ ವಿಷಯದ ಬಗ್ಗೆ ಏನನ್ನು ಕೇಳುತ್ತಿರಲಿಲ್ಲ. ನನಗೆ ತಿಳಿದದ್ದೇ ದಾರಿ.


ಕಾಲೇಜು ಶಿಕ್ಷಣ :


ನನ್ನ ಜೊತೆ ಓದಿದ ಅಮರಗೋಳದ ೧೦-೧೨ ವಿದ್ಯಾರ್ಥಿಗಳಲ್ಲಿ ಒಬ್ಬ ಮಾತ್ರ ಪಾಸಾಗಿದ್ದ. ಅವನು ಪಿ.ಯು.ಸಿ. ಗೆ ನರಗುಂದಕ್ಕೆ ಬರಲಿಲ್ಲ.  ಎಲ್ಲ ಸಹಪಾಠಿಗಳೂ ನರಗುಂದಕ್ಕೆ ಮರಳಿ ಪೂರಕ ಪರೀಕ್ಷೆಗಾಗಿ ಅಭ್ಯಾಸ ಮಾಡಲೆಂದು ಬಂದರು. ನಾನು ಅವರೊಂದಿಗೆ ಕೂಡಿದ್ದು  ನನ್ನ  ಮತ್ತೊಂದು ದೊಡ್ಡ ಪ್ರಮಾದಕ್ಕೆ ಕಾರಣವಾಯಿತು. ಪಿ.ಯು.ಸಿ. ತರಗತಿಗೆ ಹಾಜರಾದಾಗ ಇಂಗ್ಲೀಷ ಮಾಧ್ಯಮವಾದದ್ದರಿಂದ ನನಗೇನೂ ತಿಳಿಯುತ್ತಿರಲಿಲ್ಲ. ಹೀಗಾಗಿ ಕಾಲೇಜಿಗೆ ಹಾಜರಾಗುವ ಅಭಿರುಚಿ ಕಡಿಮೆಯಾಯಿತು. ಹಳೆಯ ಸಹಪಾಠಿಗಳ ಸಹವಾಸದ ರುಚಿ ಹತ್ತಿತು. ಆಗ ಕಡ್ಡಾಯವಾಗಿದ್ದ  ಎನ್.ಸಿ.ಸಿ. ಗೂ ಹಾಜರಾಗಲಿಲ್ಲ.  ಅವರೊಂದಿಗೆ ಹಾಳು ಹರಟೆಯಲ್ಲಿ ಸಿಗಿಬಿದ್ದು ನನ್ನ ಅಭ್ಯಾಸವನ್ನೇ ಮರೆತುಬಿಟ್ಟೆ. 

ಒಂದೆರಡು ಸಲ ಕಾಲೇಜಿಗೆಂದು ಹೋಗಿ ಪತ್ರಿವನದಲ್ಲಿ ಕುಳಿತುಬಂದೆ. ತರಗತಿಗೆ ಹಾಜರಾಗುವ ಧೈರ್ಯ ಬರಲಿಲ್ಲ. ಪೂರಕ ಪರೀಕ್ಷೆಗೆ ಬಂದ ಗೆಳೆಯರು ಮರಳಿ ಊರಿಗೆ ಹೋಗಿಬಿಟ್ಟರು. ನಾನೊಬ್ಬನೇ ಏಕಾಂಗಿಯಾಗಿದ್ದೆ. ಪರೀಕ್ಷೆ ಫಾರ್ಮ ತುಂಬುವ ಸಂದರ್ಭ ಬಂತು. ನನ್ನ ಕಾಲೇಜು ಕಲಿಕೆಯ ಹಗರಣ ಹೊರಬಿತ್ತು. ಅಣ್ಣ ನರಗುಂದಕ್ಕೆ ಬಂದು ವಿಷಯ ತಿಳಿದುಕೊಂಡು ಅಮ್ಮ ಕಾಕಾನಿಗೆ ತಿಳಿಸಿದ. ಹೇಗಾದರೂ ಮಾಡಿ ಪರೀಕ್ಷೆಯ ಫಾರ್ಮ ತುಂಬಿಸಬೇಕೆಂದು ಅಣ್ಣ ನರಗುಂದಕ್ಕೆ ಬಂದ. ಅಪ್ಪನಿಗೂ ಈ ವಿಷಯ ಗೊತ್ತಾಗಿ ಅವನೂ ನರಗುಂದಕ್ಕೆ ತನಗೆ ಪರಿಚಯವಿದ್ದ ಮಾಳನಗೌಡರ ಸರ್ ಕರೆದುಕೊಂಡು ನೇರವಾಗಿ ಕಾಲೇಜಿಗೆ ಬಂದ. ( ನಾನು ನರಗುಂದದಲ್ಲಿ ಇದ್ದದ್ದು ಮಾಳನಗೌಡರ  ಮನೆಯಲ್ಲಿದ್ದ ಕೊಟಡಿಯಲ್ಲಿ)  ಫಾರ್ಮ ತುಂಬುವ ಮೊದಲು ಹಾಜರಾತಿಯ ಬಗ್ಗೆ  ಎಲ್ಲ ಪ್ರಾಧಾಪಕರ ಸಹಿ ಮಾಡಿಸಬೇಕಾಗಿತ್ತು. ಕಾಲೇಜಿನಲ್ಲಿ ನನ್ನ ಮುಖವನ್ನೇ ನೋಡದಿದ್ದ ಪ್ರಾಧ್ಯಾಪಕರು ಸಹಿ ಮಾಡಲು ನಿರಾಕರಿಸಿದರು. ಪ್ರಾಥಮಿಕ  ಶಾಲಾ ಶಿಕ್ಷಕರಾಗಿದ್ದ ಮುಗ್ಧ ಮನಸ್ಸಿನ ಮಾಳನಗೌಡರ ಸರ್ ಮಾತಿಗೂ  ಪ್ರಾಧ್ಯಾಪಕರಿಂದ ಬೆಲೆ ಸಿಗಲಿಲ್ಲ. ಮತ್ತೆ ಸಾಯಂಕಾಲ ಅವರೇ ಸರ್ ಮನೆಗಳಿಗೆ ತಿರುಗಾಡಿ ಒಪ್ಪಿಸಿ ಸಹಿ ಮಾಡಿಸಿದರು- ಅದೂ ಕರಾರಿನ ಮೇಲೆ- ಈವರೆಗೆ ಕಾಲೇಜಿಗೆ ಬರಲಾರದ್ದಕ್ಕೆ ತಪ್ಪೊಪ್ಪಿಗೆ, ಇನ್ನು ತಪ್ಪದೆ ಕಾಲೇಜಿಗೆ ಹಾಜರಾಗುವುದರ ಒಪ್ಪಿಗೆ ಪತ್ರಬರೆಯಿಸಿಕೊಂಡು ಅನುಮತಿ ಕೊಟ್ಟರು. ಅಷ್ಟೊತ್ತಿಗೆ ಎನ್.ಸಿ.ಸಿ. ನಿಯಮಿತ ತರಗತಿ ಮುಗಿಯುತ್ತ ಬಂದಿದ್ದವು. ಹಿಂದಿ ವಿಷಯ ಬೋಧಕರೂ ಎನ್.ಸಿ.ಸಿ. ಅಧಿಕಾರಿಗಳೂ ಆಗಿದ್ದ  ಪ್ರೊ. ಮಳಗಿ ಯವರು ಬಿ. ಮತ್ತು ಸಿ. ಸರ್ಟಿಫಿಕೇಟ್ ಕೇಡರ್ ಕ್ಲಾಸಿಗೆ ಹಾಜರಾಗಬೇಕೆಂದು ಕರಾರು ಮಾಡಿದರು. 


ಈ ಎಲ್ಲ ಗದ್ದಲ ನಡೆದಾಗ ಅಪ್ಪ ಎದುರಿಗೆ ಇದ್ದ. ನನಗೆ ಅಪ್ಪನ ಮುಖವನ್ನು ನೋಡುವುದೇ ಆಗಲಿಲ್ಲ. ಒಮ್ಮೆಯೂ ಶಾಲೆ - ಕಾಲೇಜಿಗೆ ಹೆಜ್ಜೆ ಇಡದ ಅಪ್ಪ ನನ್ನ ಈ ದೊಡ್ಡ ತಪ್ಪಿನಿಂದಾಗಿ ಬರಬೇಕಾಯಿತು. ಈ ಎಲ್ಲ  ಹಗರಣ ನೋಡಬೇಕಾಯಿತು.  ಈಗ ಪಾಲಕರೇ ಬಂದಿದ್ದಾರೆ. ಇನ್ನು ಮುಂದೆ ವಿದ್ಯಾರ್ಥಿ ಶಾಲೆ ತಪ್ಪಿಸುವುದಿಲ್ಲ ಎಂದು ಅಪ್ಪನನ್ನು ತೋರಿಸಿ ಮಾಳನಗೌಡರ ಸರ್ ಸಹಿ ಮಾಡಿಸುತ್ತಿದ್ದರು. ಆಗ ಅಪ್ಪನ ಮುಖ ಇಷ್ಟೇ ಆಗುತ್ತಿತ್ತು. ಈ ಫಾರ್ಮ ತುಂಬುವ ಹಗರಣವನ್ನು ನನ್ನ ಸಹಪಾಠಿಗಳು ನೋಡುತ್ತಿದ್ದರು. ನನಗೆ ನಾಚಿಕೆಯಾಯಿತು. ನನ್ನ ಕಲಿಕೆಯ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದ ಅಪ್ಪ ಅಂದು ಏನೆಂದುಕೊಂಡನೋ ಗೊತ್ತಿಲ್ಲ. ಆಗಲೆ ನನ್ನನ್ನು ಬಯ್ದು ಬುದ್ಧಿ ಹೇಳಿದ್ದರೆ ಮನಸ್ಸು ಹಗುರಾಗುತ್ತಿತ್ತು, ಸ್ವಲ್ಪಾದರೂ ಶಿಕ್ಷೆಯಾಯಿತಲ್ಲ ಎಂದು. ಆದರೆ ಅಪ್ಪ ಬಯ್ಯಲಿಲ್ಲ. ಅಪ್ಪನ ಈ ವರ್ತನೆಯಿಂದ ನಾನು ಮತ್ತಷ್ಟು ಕುಗ್ಗಿ ಹೋದೆ. 


ಮನೆಯಲ್ಲಿಯೂ ಸಹ ಅಮ್ಮ, ಕಾಕಾ ಏನೂ ಅಗಿಲ್ಲವೆಂಬಂತೆ ವರ್ತಿಸಿದರು. ನಮ್ಮೂರಲ್ಲಿ ಆ ಸಂದರ್ಭದಲ್ಲಿ ಪಿ.ಯು.ಸಿ.  ಓದುವ ಏಕೈಕ ಜಾಣ ವಿದ್ಯಾರ್ಥಿ ಎಂದು ಊರವರೆಲ್ಲ ತಿಳಿದಿದ್ದರು. ಆದರೆ ಅಸಲಿ ಹಕ್ಕಿಕತ್ತು ಹೀಗಿತ್ತು. ಈ ವಿಷಯ ಊರವರಿಗೆ ಗೊತ್ತಾಗಲಿಲ್ಲವೆನಿಸುತ್ತದೆ. ಮನೆಯಲ್ಲಿ ನನ್ನನ್ನು ಬಯ್ಯುವುದು ಅದು ಎಲ್ಲರಿಗೂ ಗೊತ್ತಾಗುವುದು. ಅಪಮಾನವೆನಿಸಿ ಈ ಹುಡುಗ ಇನ್ನಷ್ಟು ಮುಜುಗರಗೊಳ್ಳುವುದು ಆಗಬಾರದೆಂದು ಎಲ್ಲರೂ ಮೌನವಹಿಸಿದ್ದರೊ ಏನೋ ! ಚಿಗವ್ವ ಗಂಗಕ್ಕ ಅಮರಗೋಳದಿಂದ ಯಥಾರೀತಿ ಬುತ್ತಿ ಮಾಡಿ ಕಟ್ಟುತ್ತಿದ್ದಳು. ಅಯ್ಯನಗೌಡ ಕಾಕಾ ನರಗುಂದಕ್ಕೆ ಬರುವವರನ್ನು ಹುಡುಕಿ ತಪ್ಪದೇ ಬುತ್ತಿ ಕಳಿಸಿಕೊಡುತ್ತಿದ್ದ.


ಅಂದು ಅಪ್ಪನ ಜೊತೆಗೆ ಹೊಲಕ್ಕೆ ಹೋಗಿದ್ದ ನಾನು  ಮಧ್ಯಾಹ್ನ ಮನೆಗೆ ಬಂದೆ. ಕರಿಗೌಡ ಪಾಟೀಲರ ಮನೆಗೆ (ಕಲ್ಮೇಶ್ವರ ಪೂಜಾರಿ, ಸ್ವಾತಂತ್ರ್ಯ ಹೋರಾಟಗಾರ) ಸಂಯುಕ್ತ ಕರ್ನಾಟಕ ಪತ್ರಿಕೆ ಬಂದಿತ್ತು.  ಪಿ.ಯು.ಸಿ ಫಲಿತಾಂಶ ಪ್ರಕಟವಾಗಿತ್ತು. ನನ್ನ ಫಲಿತಾಂಶ ಗೊತ್ತಿತ್ತು. ಆದರೂ ನೋಡಿದೆ. ಡುಮಕಿ ಹೊಡೆದಿದ್ದೆ. ಮನೆಗೆ ಹೋಗಲು ಧೈರ್ಯ ಬರಲಿಲ್ಲ. ಕಲ್ಲಪ್ಪನ ಗುಡಿಯಲ್ಲಿ ಅಡ್ಡಾದೆ. ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿ ಇತ್ತು. ನನಗೆ ಗೊತ್ತಿಲ್ಲದೆ ನಿದ್ದೆ ಹತ್ತಿಬಿಟ್ಟಿತ್ತು. ಊಟಕ್ಕೆ ಬರಲಿಲ್ಲ ಎಂದು ಅಮ್ಮ ಗುಡಿಯವರೆಗೂ ಹುಡುಕಿಕೊಂಡು ಬಂದಳು. ಎಬ್ಬಿಸಿ ಮನೆಗೆ ಕರೆದೊಯ್ದಳು. ಸುಮ್ಮನೆ ಊಟ ಮಾಡಿದೆ. ಯಾರೂ ಶಾಲೆಯ ಫಲಿತಾಂಶದ ಮಾತನ್ನು ಎತ್ತಲಿಲ್ಲ.


ಅಕ್ಟೋಬರ್ ಪೂರಕ ಪರೀಕ್ಷೆಯಲ್ಲಿಯೂ ಡುಮಕಿ ಹೊಡೆದೆ. ಮತ್ತೆ ಮಾರ್ಚನಲ್ಲಿ ಪರೀಕ್ಷೆ ಕಟ್ಟಿ ಪಾಸಾದೆ. ಮಾರನೆ ವರ್ಷ ಬಿ.ಎ. ತರಗತಿಗೆ ಹೆಸರು ಹಚ್ಚಿದೆ. ಎಸ್.ಎಸ್.ಎಲ್.ಸಿ.  ಹಳೆಯ ಗೆಳೆಯರು ನರಗುಂದದಲ್ಲಿ ಇರಲಿಲ್ಲ. ಹೊಸ ಗೆಳೆಯರ ಪರಿಚಯವಾಯಿತು. ನನ್ನ ಕಾಲೇಜ ಕಲಿಕೆ ಮತ್ತೆ ನಿಯಮಿತವಾಗಿ ಮುಂದುವರೆಯಿತು. 


ಹುಸಿ ಗೌರವ ಬೆನ್ನು ಹತ್ತಿ..


ನಾನು ಒಂಬತ್ತನೆಯ ತರಗತಿಯಲ್ಲಿದ್ದಾಗ ಅಪ್ಪ ನಮ್ಮ ಆಕಳು ಗೌರಿಯನ್ನು ಹಿಡಿದುಕೊಂಡು ನರಗುಂದಕ್ಕೆ ಹೊರಟ. ನಾನೂ ಊರಿನಿಂದ ಅಪ್ಪನ ಜೊತೆಯೇ ಹೊರಟು ಅದೇ ಆಗ ನರಗುಂದಕ್ಕೆ ಬಂದಿದ್ದೆ. ಅಪ್ಪನ ಜೊತೆ ಪಶು ಆಸ್ಪತ್ರೆಗೆ ಹೋದೆ. ಆಕಳಿಗೆ ಡಾಕ್ಟರ್ ಬೆದೆ ಚುಚ್ಚುಮದ್ದನ್ನು ಕೊಟ್ಟರು. ಬೆದೆಗೆ ಬಂದ ಗೌರಿ ಅಪ್ಪನಿಗೆ ಎಷ್ಟು ಕಾಡಿತ್ತೆಂದರೆ, ಎದೆವರೆಗೆ ತುಂಬಿ ಬಂದಿದ್ದ  ಬೆಣ್ಣಿಹಳ್ಳ ದಾಟುವಾಗ ಪಟ್ಟಾಪಟ್ಟಿ ಚಡ್ಡಿಯ ಮೇಲೆ ಹೇಗಿದ್ದನೊ ಹಾಗೆ ನರಗುಂದಕ್ಕೆ ಬಂದುಬಿಟ್ಟಿದ್ದ. ಪಶು ಆಸ್ಪತ್ರೆಗೂ ಸಹ. ದಾರಿಯಲ್ಲಿ ಅಪ್ಪನಿಗೆ ಧೋತರ ಉಟ್ಟುಕೊಳ್ಳಲೂ ಅವಕಾಶ ನೀಡಿರಲಿಲ್ಲ, ಬೆದೆಗೆ ಬಂದ ಆಕಳು. ಹಗ್ಗ ಜಗ್ಗಾಡಿ ಕೊಸರಾಡಿದರೆ ತೊಡಕಾಗುತ್ತದೆಂದು ಅಪ್ಪನೂ ಧೋತರ ತೊಟ್ಟಿರಲಿಲ್ಲ. ಆಕಳು ಪೇಟೆಯಲ್ಲಿ ಬೆದರುತ್ತದೆಂದು ನಾನು ಹಿಂದೆ ಅಪ್ಪ ಮುಂದೆ ಮುಂದೆ ನಡೆದು ಆಸ್ಪತ್ರೆ ತಲುಪಿದ್ದೆವು. 


ಆಸ್ಪತ್ರೆಯಿಂದ ಮರಳಿ ಹೊರಟ. ಆಗಲೂ ಅಪ್ಪ ಧೋತರ ಉಡುವ ಯೋಚನೆ ಮಾಡಲಿಲ್ಲ. ರಸ್ತೆ ಹಿಡಿದು ಹೊರಟೆ ಬಿಟ್ಟ. ನನ್ನ ಕೋಣೆಯಿರುವ ಓಣಿಯಲ್ಲಿ ಹಾಯ್ದು ಹೋಗೋಣ ಎಂದ. ನನಗೆ ಅಪ್ಪನ ಆ ಸ್ಥಿತಿ ಮನಸ್ಸಿಗೆ ಬರಲಿಲ್ಲ. ಬಾಯಿ ಬಿಚ್ಚಿ ಹೇಳಲೂ ಆಗಲಿಲ್ಲ. ನನ್ನ ಕೋಣೆ ಸಮೀಪದವರೆಗೆ ಬಂದೆ. ನಾನು ಪುಸ್ತಕ ತರಲು ಹೋಗುತ್ತೇನೆಂದು ಅಪ್ಪನನ್ನು ಅಲ್ಲಿಂದಲೇ ಬೀಳ್ಕೊಟ್ಟೆ. ನಿಜವಾಗಿ ಊರು ದಾಟುವವರೆಗೂ ನಾನು ಹೋಗಿ ಬರಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ. ಸುಳ್ಳು ಹೇಳಿ ಅಲ್ಲಿಂದಲೇ ಬೀಳ್ಕೊಟ್ಟೆ. ಅಲ್ಲಿಂದ ಹೊರಟು ಬಂದೆ ನಿಜ, ಮನಸ್ಸಿಗೆ ಸಮಾಧಾನವಾಗಲಿಲ್ಲ. ಅಪ್ಪನಿಗೆ ಆಕಳು ಕಾಡಿದರೆ ? ಅಪ್ಪ ಚಡ್ಡಿ ಮೇಲಿದ್ದದ್ದಕ್ಕೆ ನಾನು ನಡುದಾರಿಯಲ್ಲಿ ಬಿಟ್ಟು ಬಂದದ್ದು ತಪ್ಪು ಎಂದು ಒಂದು ಸಾರೆ ಅನ್ನಿಸಿದರೆ ಇನ್ನೊಂದು ಮನಸ್ಸು ನನ್ನ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿತ್ತು. ಆದರೂ  ತಪ್ಪು ತಪ್ಪೇ. ನಾಚಿಕೆಯಾಯಿತು. ನನ್ನ  ಮೇಲೆ ನನಗೆ ಸಿಟ್ಟು ಬಂತು. ಗೆಳೆಯರ್‍ಯಾರಿಗೂ ಹೇಳದೆ ಸಂಕಟ ಪಟ್ಟೆ. ಅಂದು ಮನಸು ಸಮ ಸ್ಥಿತಿಗೆ ಬರಲೇ ಇಲ್ಲ. 


ಅಪ್ಪ ಕಾಕಾ ಬೇವಿನ ಬೊಡ್ಡೆಯನ್ನು ಹೇರಿಕೊಂಡು ನರಗುಂದಕ್ಕೆ ಹೊರಟಿದ್ದರು. ನಾನೂ ಹೊರಟೆ.  ಆಗ ನಾನಿನ್ನೂ ನರಗುಂದದಲ್ಲಿ ಓದುತ್ತಿರಲಿಲ್ಲ. ಬಹುಶಃ ಏಳನೆ ವರ್ಗದಲ್ಲಿ ಓದುತ್ತಿದ್ದಿರಬೇಕು. ನರಗುಂದ ನೋಡುವ ಬಯಕೆ ಮತ್ತು ಹೋಟೆಲ್‌ನಲ್ಲಿ ಬಿಳಿ ಸಿಹಿ ಉಪ್ಪಿಟ್ಟು ಮತ್ತು ಸಣ್ಣನೆಯ ಶೇವನ್ನು ತಿನ್ನುವ ಚಪಲ. ಇದಕ್ಕಿಂತ ಮೊದಲು ಅಯ್ಯನಗೌಡ ಕಾಕಾನ ಜೊತೆ ನರಗುಂದಕ್ಕೆ (ಚಿಗವ್ವನನ್ನು ಕೊಲ್ಹಾರಿ ಚಕ್ಕಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು) ಹೋದಾಗ ಅಂತಹ ಉಪ್ಪಿಟ್ಟು ಮತ್ತು ಶೇವು ತಿಂದಿದ್ದೆ. ಅಂದು ಕೆಂದ ಮತ್ತು ಬಿಳಿ ಎತ್ತುಗಳನ್ನು ಹೂಡಿದ್ದರು. ಬೊಡ್ಡೆಯನ್ನು ಸರಿಯಾದ ಮಾಪನದಲ್ಲಿ ಕೊರೆಯಿಸಲು ಬಡಿಗೇರ ಈರಪನೂ ಬಂದಿದ್ದ. ಸಾ ಮಿಲ್ಲಿನಲ್ಲಿ ದೊಡ್ಡ ದೊಡ್ಡ ಬೊಡ್ಡೆಗಳನ್ನು ನೋಡಿ ಆಶ್ಚರ್ಯವಾಯಿತು. ಅದಕ್ಕಿಂತ ಆಶ್ಚರ್ಯವೆಂದರೆ ಬೊಡ್ಡೆಯನ್ನು ದೊಡ್ಡ ವೃತ್ತಾಕಾರದ ಗರಗಸದಿಂದ ಕೊಯ್ಯುವುದು. ಗರಗಸವನ್ನು ಹರಿತಗೊಳಿಸಲು ಅರಹಿಡಿದಾಗ  ಘರ್ಷಣೆಗೆ ಏಳುತ್ತಿದ್ದ ಬೆಂಕಿ ಕಿಡಿ,  ಕಿವಿ ತಮಟೆಗೆ ಅಪ್ಪಳಿಸುವ ಭಯಾನಕವಾದ ಶಬ್ದ ನನಗೆ ಭಯಾನಕ ಬೆರಗನ್ನುಂಟುಮಾಡಿದವು ! ಅಂದು ಗದ್ದಲವಿದ್ದುದರಿಂದ ಬೊಡ್ಡೆಯನ್ನು ಅಲ್ಲಿಯೇ ಉರುಳಿಸಿ ಊರಿಗೆ ಮರಳಿ ಬಂದೆವು. ಅಪ್ಪನ ಜೊತೆ ಹೋದಾಗ ಇಂತಹ ಅನುಭವ ಸಿಗುತ್ತಿತ್ತು. ಮತ್ತೊಮ್ಮೆ ಹೋಗಿ ತರುವ ಸಮಯದಲ್ಲಿ ನನಗೆ ಶಾಲೆ ಇದ್ದುದರಿಂದ ನಾನು ನರಗುಂದಕ್ಕೆ ಹೋಗಲಿಲ್ಲ. 


ಅಪ್ಪನ ದೂರ್ವಾಸಾವತಾರ :


ನಮ್ಮೂರಿನ ರಾಮಪ್ಪ , ಹಳ್ಳದ ಹೊಲದ ಬದುವಿನಲ್ಲಿರುವ ಗಿಡವನ್ನು ಕಡಿಯುವಾಗ ಅಪ್ಪನಿಗೆ ತಕರಾರು ಮಾಡಿದ. 'ಇದು ರಸ್ತೆಯಲ್ಲಿ ಇರುವ ಗಿಡ' ಕಡಿಯಬಾರದೆಂದು ಹೇಳಿದ್ದಲ್ಲದೆ  ಕಡಿದರೆ ಫಿರ್ಯಾದಿ ಕೊಡುತ್ತೇನೆ ಎಂದು ಹೆದರಿಕೆ ಹಾಕಿದ್ದಾನೆ. ನಾಲ್ಕೈದು ದಿನಗಳ ಹಿಂದೆ ಇದೇ ರಾಮಪ್ಪ ಬೇರೆಯವರ ಹೊಲದ ಬದುವಿನಲ್ಲಿರುವ ಗಿಡಕಡಿಯುವಾಗ ಅಲ್ಲಿಯೇ ಇದ್ದದ್ದು ನಪ್ಪನಿಗೆ ಗೊತ್ತಿತ್ತು. ಅವರು ಕಡಿದಾಗ ಸುಮ್ಮನಿದ್ದು ಈಗ ಹೇಳಲು ಬಂದಿರುವುದನ್ನು ನೊಡಿ ಸಿಟ್ಟನ್ನು ತಡೆದುಕೊಳ್ಳಲಾರದೆ  ಬಾರಕೋಲಿನ ಗುಣಿಕೆಯಿಂದ ಹೊಡದೇ ಬಿಟ್ಟ. ಗ್ರಾಮ ಲೆಕ್ಕಿಗರ ಕೈಯಲ್ಲಿ ಕೆಲಸ ಮಾಡುತ್ತಿದ್ದ ರಾಮಪ್ಪನ ಬಗ್ಗೆ ಊರಲ್ಲಿ ಯಾರಿಗೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅವರಿವರ ಹತ್ತಿರ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದ. ರಾಮಪ್ಪನ ಸಹೋದರರಾದ ಬಾಬುರಾವ್ ಕೃಷ್ಣರಾವ್ ಬಗೆಗೆ ಯಾರೂ ಹಗುರವಾಗಿ ಮಾತಾಡುತ್ತಿರಲಿಲ್ಲ. ರಾಮಪ್ಪನ ಹಣೆಯ ಮೇಲಿನ ಗಾಯ ನೋಡಿ ನನಗೆ ಗಾಬರಿಯಾಗಿತ್ತು. ಅಪ್ಪ ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟ ಪ್ರಸಂಗವಿದು.


ಆಗ ಬೇಸಿಗೆ. ಅಪ್ಪ ಒಂದು ಮಧ್ಯಾಹ್ನ ಹೆಗಲ ಮೇಲೆ ಬಾರುಕೋಲು ಹಾಕಿಕೊಂಡು ದಿಮಿ ದಿಮಿ ಉರಿಯುತ್ತ ಹನಮಂತ ದೇವರ ಗುಡಿಮುಂದೆ ಹಾಯ್ದು ಊರ ಅಗಸಿ ಕಡೆ ಹೋದ. ಹನಮಂತ ದೇವರ ಗುಡಿಯಲ್ಲಿ ಚಿಟಿಗಿ ಗೋಲಿ ಆಡುತ್ತ ಕುಳಿತಿದ್ದ ನಾನು ಮತ್ತೆ ಆಟದಲ್ಲಿ ಮುಳುಗಿಹೋದೆ. ಹತ್ತು ಹದಿನೈದು ನಿಮಿಷವಾಗಿರಲಿಲ್ಲ. ಅಪ್ಪ ಆಕಳು ಎಮ್ಮೆ ಹೊಡೆದು ಕೊಂಡು ಮರಳಿ ಬಂದ. ಅಪ್ಪನ ಹೆಗಲ ಮೇಲಿನ ಬಾರುಕೋಲು ಈಗ ಕೈಯಲ್ಲಿತ್ತು. ದನಗಳ ನಡಿಗೆ ವೇಗವಾಗಿತ್ತು. ದನಗಳ ಮೈಮೇಲೆ ಬಾರಿಕೋಲಿನ ಬಾರು ಮೂಡಿದ್ದವು. ಅಪ್ಪ ಮುಂದೆ ಮುಂದೆ. ಅಣ್ಣ ಮಾವ ಹಿಂದೆ ಹಿಂದೆ ಅಳುತ್ತ ಬರುತ್ತಿದ್ದರು. ಅಪ್ಪನ ಈ ಅವತಾರದ ಸುದ್ದಿ ಅಮ್ಮನಿಗೆ ಮುಟ್ಟಿತ್ತೆಂದು ಕಾಣಿಸುತ್ತದೆ. ಅಮ್ಮ ಆಗಲೆ ಬಂದು ಮನೆ ಬಾಗಿಲಲ್ಲಿ ನಿಂತಿದ್ದಳು. ಈ ಮನೆಯಿಂದ ಆ ಮನೆ ಕಡೆ ಹೊರಟ ದನಗಳನ್ನು ನೋಡಿದ ಅಮ್ಮನಿಗೆ ಅಪ್ಪನೂ ಕಣ್ಣಿಗೆ ಬಿದ್ದ. ಅಣ್ಣ-ಮಾವರಿಬ್ಬರೂ ಕಣ್ಣಿಗೆ ಬಿದ್ದರು. ಅಮ್ಮ ಅಣ್ಣ ಮಾವರಿಬ್ಬರನ್ನು ಒಳಗೆ ಕರೆದುಕೊಂಡು ಹೋದಳು, ಅಪ್ಪನನ್ನು ಮನಸ್ಸಿನಲ್ಲಿಯೇ ಬಯ್ಯುತ್ತ. ಅಣ್ಣ ಮತ್ತು ಮಾವ ಇವರಿಬ್ಬರೂ ಶಾನುಭೋಗರ ಹೊಲದ ಚಳ್ಳಗಿಡದಲ್ಲಿ ಆಟ ಆಡುತ್ತ ನಿಂತುಬಿಟ್ಟದ್ದು ಅಪ್ಪನಿಗೆ ಸಿಟ್ಟು ತರಿಸಿತ್ತು.


ಅಪ್ಪನ ನಿಗೂಢತೆ:


ಅಮ್ಮ ಅಪ್ಪ ಇಬ್ಬರಲ್ಲಿ ಪರಸ್ಪರರು ಗೌರವಿಸುವ ಭಾವನೆ ಇದ್ದವು. ಅಪ್ಪ ಮನೆಯ ಆಧಾರ ಸ್ಥಂಭ. ಕಾಯಕಯೋಗಿ. ಸ್ವಲ್ಪ ಸಿಟ್ಟಿನ ಸ್ವಭಾವದವನೆಂದು ಅಮ್ಮನಿಗೆ ಗೊತ್ತಿತ್ತು. ಅನಾಥಮಕ್ಕಳಾದ ನಮ್ಮೆಲ್ಲರನ್ನು (ಅಣ್ಣ ಮತ್ತು ಶಾಂತಕ್ಕ, ರುದ್ರಕ್ಕ, ನಾನು.) ತನ್ನ ಮಕ್ಕಳಿಗಿಂತ ಹೆಚ್ಚು ಪ್ರೀತಿ ಮಾಡಿ ಬೆಳೆಸುತ್ತಿರುವ ಅಮ್ಮನ ಬಗ್ಗೆ ಅಪಾರ ಗೌರವವಿತ್ತು. ಹೀಗಿದ್ದರೂ ಒಮ್ಮೊಮ್ಮೆ ಅಪ್ಪನಿಗೆ ಅಮ್ಮನ ಮೇಲೆ ವಿಚಿತ್ರ ರೀತಿಯ ಅಸಮಾಧಾನವಿರುತ್ತಿತ್ತು. ನನ ಮಕ್ಕಳಾದ ಇವರೆಲ್ಲರೂ ನನ್ನನ್ನು ನಂಬದೇ ಅಮ್ಮನನ್ನು ನಂಬುತ್ತಾರಲ್ಲ ಎಂದು  ಅಪ್ಪನಿಗೆ ಸಿಟ್ಟು. ಅಪ್ಪನ ಸಿಟ್ಟಿನ ಸ್ವಭಾವಕ್ಕೆ ನಾವು ಹೆದರಿ ನಾಲ್ವರೂ ಸಾಧ್ಯವಾದಷ್ಟು ಅಪ್ಪನಿಂದ ದೂರವಿರುತ್ತಿದ್ದೆವು.  ಮೊದಲೇ ಏಕಾಂಗಿಯಾಗಿದ್ದ ಅಪ್ಪ ಅವ್ವನ ಸಾವಿನ ನಂತರ ವಿಕ್ಷಿಪ್ತನಂತೆ ಕಾಣುತ್ತಿದ್ದ. ಆ ನೋವು ಅಪ್ಪನ ಮನಸ್ಸನ್ನು ಕ್ಷೋಭೆಗೊಳಿಸುತ್ತಿತ್ತು.  ಅಮ್ಮನ ಬಗೆಗೆ ಒಂದೆಡೆ ಗೌರವ ಇನ್ನೊಂದೆಡೆ ಸಿಟ್ಟು . ಈ ದ್ವಂದ್ವ ಅಪ್ಪನನ್ನು ಕೊನೆವರೆಗೂ ಕಾಡುತ್ತಿತ್ತು. ಸಾಯುವ ಮುಂಚಿತ ಅಪ್ಪ ಅಮ್ಮನ ಎದುರಿನಲ್ಲಿ ಇನ್ನ ಮೇಲೆ ನಾನು ನೀನು ಮೊಮ್ಮಕ್ಕಳನ್ನಾಡಿಸುತ್ತ ಸುಮ್ಮನೆ ಕೂತುಬಿಡೋಣ. ಮಕ್ಕಳೆ ಎಲ್ಲವನ್ನೂ ಮಾಡಿಕೊಂಡು ಹೋಗಲಿ ಎಂದು ಹೇಳಿದ. ಇದರರ್ಥ ಇನ್ನು ಮೇಲೆ ನಮ್ಮ ಮಧ್ಯದಲ್ಲಿ ಯಾವ ಸಂಘರ್ಷವೂ ಬೇಡ ಎಂಬುದು.


ಅಪ್ಪನ ಈ ಸ್ವಭಾವ ಗೊತ್ತಿದ್ದ ಅಮ್ಮ ಬಹಳ ಸಲ ಅಪ್ಪನ ಬಗ್ಗೆ ತಪ್ಪು ತಿಳಿಯುತ್ತಿರಲಿಲ್ಲ. ಆದರೆ ನಮ್ಮನ್ನು ಬೆಳೆಸುವ ಜವಾಬ್ದಾರಿ ಅಜ್ಜ ಸತ್ತನಂತರ ಅಮ್ಮನ ಮೇಲೆಯೇ ಬಿದ್ದುದರಿಂದ ಅಮ್ಮನಿಗೂ ಒಮ್ಮೊಮ್ಮೆ ತಾಳ್ಮೆ ಮೀರುತ್ತಿತ್ತು.  ನಿಮ್ಮ ಅಪ್ಪನಿಗೆ ತಿಳುವಳಿಕೆಯೇ ಇಲ್ಲ. ಎಂದು ಅಮ್ಮ ಅಗಾಗ ಅಸಮಾಧಾನ ವ್ಯಕ್ತ ಮಾಡುತ್ತಿದ್ದಳು.


ಅಪ್ಪನ ಸ್ವಭಾವ ನನಗಲ್ಲ ನಮ್ಮ ಮನೆಯವರಿಗಲ್ಲ ಊರವರಿಗೂ ನಿಗೂಢವೆನಿಸುತ್ತಿತ್ತು. ಹೊಲ, ಮನೆ, ಎತ್ತು, ಹಿತ್ತಲ, ಗ್ವಾದಲಿ, ಹಕಿ, ತಿಪ್ಪೆ, ಗೊಬ್ಬರ ಇವನ್ನು ಬಿಟ್ಟರೆ ಬೇರೆ ಜಗತ್ತೇ ಗೊತ್ತಿರಲಿಲ್ಲ. ಪ್ರತಿದಿನ ರಾತ್ರಿ ಜಳಕ ಮಾಡುತ್ತಿದ್ದ ಅಪ್ಪ ಹುಣ್ಣಿಮೆ ಅಮವಾಸ್ಯೆಗಳಲ್ಲಿ ಮಾತ್ರ ಮಧ್ಯಾಹ್ನ ಜಳಕ ಮಾಡುತ್ತಿದ್ದ. ಕೂಡಲು ಮಣೆ ಮತ್ತು ಅಂಗಾಳವನ್ನಿಡಲು ಅಡ್ಡುಣಗಿ ಕಡ್ಡಾಯ ಬೇಕಾಗುತ್ತಿತ್ತು. ವಿಭೂತಿ ಕರಡಿಗೆ ಮಗ್ಗುಲಲ್ಲಿಯೇ ಇರಬೇಕು. ವಿಭೂತಿ ಧರಿಸಿ ಊಟ ಮಾಡಿದ ನಂತರ ಕೈತೊಳೆದ ಗಂಗಾಳದಲ್ಲಿಯ ಮುಸುರೆನೀರನ್ನು ತಪ್ಪದೇ ಕುಡಿಯುತ್ತಿದ್ದ. ಸದಾ ಕಾಲ ಏನನ್ನೊ ಲೆಕ್ಕ ಹಾಕುತ್ತಿದ್ದ. ಯಾವುದನ್ನೊ ಧ್ಯಾನಿಸುತ್ತಿದ್ದ. ಈ ವಿಚಿತ್ರ ಗೀಳು ಯಾವಾಗಿನಿಂದ  ಅಂಟಿಕೊಂಡಿತ್ತೊ ಗೊತ್ತಿಲ್ಲ. ಅವ್ವನ ಸಾವು ಈ ಸ್ವಾಭಾವಕ್ಕೆ ಕಾರಣವಾಗಿತ್ತೇನೊ ಗೊತ್ತಿಲ್ಲ. ಸದಾ ತನ್ನ ಲೋಕದಲ್ಲಿ ತಾನಿರುತಿದ್ದ.


ಅಪ್ಪನ ವಯಸ್ಸಿನ ಎಲ್ಲರೂ ಬೇಸಿಗೆಯ ಮಧ್ಯಾಹ್ನದಲ್ಲಿ ಮಕ್ಕಳು ಆಡುತ್ತಿದ್ದ ಆಟವನ್ನು ನೋಡುತ್ತಿದ್ದರು. ಸಲಹೆ ನೀಡುತ್ತಿದ್ದರು. ಅಪ್ರತ್ಯಕ್ಷವಾಗಿ ಗೋಲಿ ಗಜಗದಾಟದಲ್ಲಿ ಭಾಗಿಯಾಗುತ್ತಿದ್ದರು, ಆನಂದಿಸುತ್ತಿದ್ದರು. ಹುಲಿ ಮನೆ ಆಟದಲ್ಲಂತೂ ಹಿರಿಯರು ತಾವೇ ಸೂತ್ರದಾರರಾಗಿ ಕಾಯಿ ನಡೆಸಲು ಸೂಚಿಸುತ್ತಿದ್ದರು.  ಹನಮಂತ ದೇವರ ಗುಡಿಯಲ್ಲಿ ಈ ಹಿರಿಯರ ಮಗ್ಗುಲಲ್ಲಿ, ಹುಲಿಮನೆಯ ಹತ್ತಿರವೇ ಕುಳಿತ ಅಪ್ಪ ಹಗ್ಗ ಹೊಸೆಯುತ್ತಿದ್ದ ಇಲ್ಲವೆ ಉಣ್ಣಿ ಹಿಂಜುತ್ತ ಕುಳಿತಿರುತ್ತಿದ್ದ. ತನ್ನ ಕೆಲಸದಲ್ಲಿ ತಾನು ತನ್ಮಯನಾಗಿರುತ್ತಿದ್ದ. ಆಟದ ಕಡೆಗೆ ಎಳ್ಲಷ್ಟೂ ಗಮವಿರುತ್ತಿರಲಿಲ್ಲ.


ಊರಿನ ಚಾವಡಿ ಮತ್ತು ಮನರಂಜನೆಯ ಕೇಂದ್ರವಾದ ಹನಮಂತ ದೇವರ ಗುಡಿಯಲ್ಲಿ ಹುಬ್ಬಳ್ಳಿ ದೊಡ್ಡಯಲ್ಲಪ್ಪ, ಆಣೆ ಕಾಲು ಹನಮಪ್ಪ ಮತ್ತು ಜೋಗಿ ಹನಮಪ್ಪ ಕರಿಕಟ್ಟಿ ಯಲ್ಲಪ, ನಿಂಗಪ್ಪ ಮುಂತಾದವರ ಮಧ್ಯೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದವು. ಏ ಹುಚ್ಚಿ ನಿನಗೆ ಏನು ತಿಳಿತೈತಿ, ಸುಮ್ಮನ ಕೂಡು ಎಂದು ಪರಸ್ಪರ ನಿಂದಿಸುವಷ್ಟು ದೂರ ಸಾಗುತ್ತಿದ್ದರು. ಕುಳಿತವರೆಲ್ಲ ಈ ಮಾತುಗಳಿಗೆ ಪುಟ ಹಾಕಿ ಇನ್ನೂ ರಂಗೇರುವಂತೆ ಮಾಡುತಿದ್ದರು. ಒಂದು ಪಕ್ಷವಹಿಸಿ ವಾದ ವಿವಾದ ನಡೆಯುವಂತೆ ಮಾಡುತ್ತಿದ್ದರು. ನಗಾಡುತ್ತಿದ್ದರು. ಹಾಸ್ಯದಲ್ಲಿ ಮುಳುಗುತ್ತಿದ್ದರು. ಆದರೆ ಅಲ್ಲಿಯೇ ಮಗ್ಗುಲಲ್ಲಿ ಕುಳಿತ ಅಪ್ಪ ಈ ಎಲ್ಲ ಸಂದರ್ಭಗಳಲ್ಲಿ ಸುಮ್ಮನೆ ಕೂಡುತ್ತಿದ್ದ. ಇಲ್ಲವೆ ಮನೆ ದಾರಿ ಹಿಡಿಯುತ್ತಿದ್ದ. ಮನೆ ಹೊಲ ಬಾಳ್ವೆ ಮಳೆ ಬೆಳೆ ಚಕ್ಕಡಿ ಎತ್ತು ಇಂತಹ ಸುದ್ದಿ ಇದ್ದರೆ ಮಾತ್ರ ಕೂತು ಕುತೂಹಲದಿಂದ ಕೇಳುತಿದ್ದ. ಇಲ್ಲವಾದರೆ ಅಲ್ಲಿಂದ ಕಾಲ್ಕೀಳುತ್ತಿದ್ದ. ತನಗೆ ಬೇಡವಾದ ಬಾಳ್ವೆಗೆ ಬೇಕಾಗಲಾರದ ಸುದ್ದಿ ಇದ್ದರೂ ಮಾತಾಡಿದವರ ಬಗ್ಗೆ ತಿರಸ್ಕಾರವಿರುತ್ತಿರಲಿಲ್ಲ. ಕೇವಲ ಆ ಸಂಗತಿಗಳಿಂದ ತಾನು ದೂರವಿರಲು ಬಯಸುತ್ತಿದ್ದ. ಯಾರ ಬಗ್ಗೆಯೂ ಅವಹೇಳನದ ಮಾತನ್ನಾಡುತ್ತಿರಲಿಲ್ಲ. ಒಂದು ಕೆಟ್ಟ ಶಬ್ದವನ್ನೂ ಬಳಸುತ್ತಿರಲಿಲ್ಲ.


ಗುಡಿ ಕಟ್ಟೆಯ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದವರು ಅಪ್ಪ ಬರುವುದನ್ನು ಕಂಡು ಕೆಲವರು  ಶಿವನಗೌಡ್ರು ಬಂದ್ರು  ಎಂದು ತಮ್ಮ ಮಾತಿಗೆ ವಿರಾಮ ಹೇಳುತ್ತಿದ್ದರು. ಇಲ್ಲವೆ ಮಾತಿನ ಧಾಟಿಯನ್ನು ಬದಲಾಯಿಸುತ್ತಿದ್ದರು. ಅಪ್ಪ ಹೋದ ನಂತರ ಅವರ ಮಾತಿಗೆ ಮತ್ತೆ ರಂಗೇರುತ್ತಿತ್ತು. ಹೀಗಿದ್ದರೂ ಅಪ್ಪನ ಬಗೆಗೆ ಊರವರ್‍ಯಾರೂ ಅವನಿಲ್ಲದಾಗ  ಹಗುರವಾಗಿ ಮಾತಾಡುತ್ತಿರಲಿಲ್ಲ, ಆಡಿಕೊಳ್ಳುತ್ತಿರಲಿಲ್ಲ. ಇಂತಹ ಗಂಭೀರ ವ್ಯಕ್ತಿತ್ವ ತನ್ನಲ್ಲಿರಲಿ ಎಂದಾಗಲಿ, ತನ್ನಲ್ಲಿದೆಯೆಂದಾಗಲಿ ಅಪ್ಪ ಭಾವಿಸುತ್ತಿರಲಿಲ್ಲ. ತೋರಿಕೆಗಾಗಿಯಾಗಲಿ, ಪ್ರತಿಷ್ಠೆಗಾಗಿಯಾಗಲಿ ಇಂತಹ ನಡುವಳಿಕೆಯನ್ನು ರೂಢಿಸಿಕೊಂಡಿರಲಿಲ್ಲ. 


ನಾಲ್ಕೈದು ವರ್ಷದವನಿದ್ದಾಗಲೇ ಚಿಕ್ಕತಡಸಿಯಿಂದ ತನಗೇನೇನೂ ಸಂಬಂಧವಿಲ್ಲದ ಅಪರಿಚಿತ ಕಡದಳ್ಳಿಗೆ ಬಂದ ಅಪ್ಪನಿಗೆ ತಂದೆ ತಾಯಿ ಕಳೆದುಕೊಂಡ ಅನಾಥ ಸ್ಥಿತಿ ಕಾಡಿರಬಹುದು. ತನ್ನ ತಂದೆ ತಾಯಿ ಸಾವನ್ನಪ್ಪಿದ ನಂತರ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಅವರಿವರ ಬಂಧು ಬಾಂಧವರ ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ. ಒಮ್ಮೊಮ್ಮೆ ದಿನಗಟ್ಟಲೇ ಮಾವಿನ ಮರದಲ್ಲಿ ಕುಳಿತುಬಿಡುತ್ತಿದ್ದ. ಈ ಎಲ್ಲ ಸಂಗತಿಗಳು ಅಮ್ಮ ಆಗಾಗ ಹೇಳುತ್ತಿದ್ದಳು.  ನಿಮ್ಮಪ್ಪ ಬಾಳ ಹಠಮಾರಿ, ಸಣ್ಣಾವಿದ್ದಾಗ ಮಾವಿನ ಮರ ಏರಿ ಕುಳಿತಬಿಟ್ತಿದ್ದನಂತ, ಯಾಡ ದಿನ ಇಳದ ಬಂದಿರಲಿಲ್ಲಂತ  ಅಮ್ಮ ಶಾಂತಕ್ಕನ ಮುಂದೆ ಹೀಗೆ ಹೇಳಿ ನಗಾಡತಿದ್ದಳು. ಅಪ್ಪನಿಗೆ ತಂದೆ ತಾಯಿಯ ಸಾವಿನ ಆಘಾತ ಅಂತಹ ಮೌನವನ್ನು ತಂದಿರಬಹುದೆ ? ಇಲ್ಲವೆ ಅಪ್ಪನ ಮನೋರಚನೆಯೇ ಹಾಗಿತ್ತೊ ಗೊತ್ತಿಲ್ಲ. ನಾಲ್ಕು ಮಕ್ಕಳನ್ನು ಬಿಟ್ಟು ಅನಾಥರನ್ನಾಗಿ ಮಾಡಿ ಹೋದ ಅವ್ವನ ಸಾವನ್ನು ಅರಗಿಸಿಕೊಳ್ಳದೆ ಹೀಗಾಗಿದ್ದನೋ ಇವೆಲ್ಲ  ಕೇವಲ ನನ್ನ ಊಹೆ, ತರ್ಕಮಾತ್ರ.


ಅಪ್ಪ ಮನೆಯವರೊಂದಿಗೆಯಾಗಲಿ, ಊರವರೊಂದಿಗೆಯಾಗಲಿ, ವಾರಿಗೆಯವರೊಂ ದಿಗೆಯಾಗಲಿ, ಮುಕ್ತವಾಗಿ ನಕ್ಕು ಹರಟೆ ಹೊಡೆದದ್ದನ್ನು ಒಮ್ಮೆಯೂ ಕಂಡಿಲ್ಲ, ನಾನು. ಈ ಸ್ವಭಾವ ಅಪ್ಪನ ಶ್ರೇಷ್ಠ ಸಾಮರ್ಥ್ಯವೆಂದು ತಿಳಿಯಬೇಕೊ, ವಿಲಕ್ಷಣ ದೌರ್ಬಲ್ಯವೆಂದು ತಿಳಿಯಬೇಕೊ  ತಿಳಿಯುತ್ತಿಲ್ಲ.  ತನ್ನ ವಿಶಿಷ್ಟ ವರ್ತನೆ, ನಡವಳಿಕೆಯಿಂದ ನಿಗೂಢವೆನಿಸುತ್ತಿದ್ದ.


ಅವಮಾನಿತ ಅಪ್ಪನ ಶೆಡವು :


ಅಪ್ಪ ಹೊಲ ಮನೆ ವ್ಯವಹಾರದಲ್ಲಾಗಲಿ, ಜಾತ್ರೆ - ಉತ್ಸವದಲ್ಲಾಗಲಿ ಭಾಗವಹಿಸುತ್ತಿರಲಿಲ್ಲ. ತೀರ ಅನಿವಾರ್ಯವಾದರೆ ಸುಮ್ಮನೆ ಹೋಗಿ ಅಲ್ಲಿ ಕೂತು ಬರುತ್ತಿದ್ದ. ಅದೂ ಕೆಲವರ ಮನೆಗೆ ಮಾತ್ರ. ಒಮ್ಮೆ ಕರಿಗಾರ ಕಲ್ಲಪ್ಪನ ಮನೆಗೆ ಬೀಗತನದ ಮಾತುಕತೆ ನಡೆದಾಗ ಹೋಗಿದ್ದ. ಆಗ ಈ ಓಣಿಯ ಯಾವ ಹಿರಿಯರೂ ಆ ಬೀಗತನದ ಮಾತುಕತೆಗೆ ಹೋಗಿರಲಿಲ್ಲ. ಹುಬ್ಬಳ್ಳಿ ಯಲ್ಲಪ್ಪ ಮತ್ತು ಕರಿಗಾರ ಕಲ್ಲಪ್ಪ ಈ ಓಣಿಯವರನ್ನು ಬಿಟ್ಟು ಆ ಓಣಿಯವರ ಒಡನಾಟದಲ್ಲಿದ್ದಾರೆಂದು ಎಲ್ಲರೂ ಹೋಗಿರಲಿಲ್ಲ. ಇದಾವುದನ್ನು ಯೋಚಿಸಿದ ಅಪ್ಪ ಕಲ್ಲಪ್ಪನ ತಮ್ಮ ಬಸಪ್ಪನೇ ಬಂದು ಕರೆದಾಗ ಮುಗ್ಧಭಾವನೆಯಿಂದ ಹೋಗಿಬಿಟ್ಟಿದ್ದ. 


ಅಪ್ಪನ ಒಡನಾಟ ಈ ಮನೆತನಗಳೊಂದಿಗೆ ಚೆನ್ನಾಗಿತ್ತು. ಅವರ ದುಡಿಮೆ ಸ್ವಭಾವ ಅಪ್ಪನ ಸ್ವಾಭಾವಕ್ಕೆ ಹೊಂದಿಕೆಯಾಗುತ್ತಿದ್ದವು. ಅಲ್ಲದೆ ಅಪ್ಪನ ಹೊಲ ಮನೆ  ಕೆಲಸಕ್ಕೆ ಅವರು, ಅವರ  ಹೊಲ ಮನೆ ಕೆಲಸಕ್ಕೆ ಅಪ್ಪ ಪರಸ್ಪರ ಹೋಗಿಬರುವ ಸಂಬಂಧವಿತ್ತು.ಆ ದಿನ ಅಪ್ಪ ಅವರ  ಮನೆಗೆ  ಹೋಗಿ ಕುಳಿತುಕೊಳ್ಳುವಷ್ಟರಲ್ಲಿಯೇ ಆ  ಸುದ್ದಿ ಈ ಓಣಿಯವರಿಗೆ ಹತ್ತಿತು. ಮಾವ ಶಂಕರಗೌಡ ತಡಮಾಡಲಿಲ್ಲ. ಅಪ್ಪನನ್ನು ಕರೆಯಲು ಯಾರನ್ನೊ ಕಳಿಸಿಬಿಟ್ಟ. ಎರಡು ಮೂರು ಸಾರೆ ಕರೆದ ಮೇಲೆ ಅಪ್ಪ ಅಲ್ಲಿಂದ ಮರಳಿ ಬಂದ. ಅಪ್ಪ ಮನೆಗೆ ಬಂದ ತಕ್ಷಣವೇ ಮಾವ - ನಿನಗ್ಯಾರು ಹೋಗಂದಿದ್ದರು ಅವರ ಮನೆಗೆ  ಎಂದು ಏರು ಧನಿಯಲ್ಲಿ ಮಾತಾಡಿಬಿಟ್ಟ. ಅಪ್ಪನಿಗೆ ಅವಮಾನವಾಯಿತು. ಸಣ್ಣ ಹುಡುಗ ಎಂದೂ ಹಿಂಗ ಮಾತಾಡಲಾರದವ ಇವತ್ತು ನನಗ ಅಪಮಾನ ಮಾಡಿದ ಎಂದು ಸಿಟ್ಟಿಗೆದ್ದು ಬುಸುಗುಡುತ್ತ  ಆ ಕತ್ತಲೆಯಲ್ಲಿಯೇ ದುಪ್ಪಟ್ಟಿ ಹೊದ್ದುಕೊಂಡು ಅಮರಗೋಳದ ದಾರಿ ಹಿಡಿದುಬಿಟ್ಟ. ಇದನ್ನು ನೋಡುತ್ತಿದ್ದವರ್‍ಯಾರು ಅಪ್ಪನನ್ನು ಸಮಾಧಾನ ಪಡಿಸಿ ಮರಳಿ ಕರೆತರುವ ಸಾಹಸ ಮಾಡಲಿಲ್ಲ.  


ಅಪ್ಪ ಹಾಗೆ ಹೋದುದನ್ನು ಕಂಡು ಎಲ್ಲರಿಗೂ ದಿಗಿಲಾಯಿತು. ಹೀಗೆ ರಾತ್ರೊ ರಾತ್ರಿ  ತಿರುಗುವ ರೂಢಿ ಇತ್ತು ಅಪ್ಪನಿಗೆ. ಬನಹಟ್ಟಿ ಹೊಲಕ್ಕೆ ಬಿತ್ತುವ ಸಮಯದಲ್ಲಿ ನಸುಕಿನ ಮೂರುಗಂಟೆಗೆ ಹೋಗಿ ಹಸಿ, ಹದ ನೋಡಿ ಬಂದು ಮತ್ತೆ ಗಳೆ ಹೊಡೆದುಕೊಂಡು ಎಲ್ಲರ ಜೊತೆ ಹೋಗುತ್ತಿದ್ದ. ಅಮ್ಮನಿಗೆ ಈ ಸುದ್ದಿ ಮುಟ್ಟಿ ಆ ಮನೆಯಿಂದ ದನದ ಮನೆಗೆ ಬರುವಷ್ಟರಲ್ಲಿ ಅಪ್ಪ ಹೊರಟುಬಿಟ್ಟಿದ್ದ. ಈ ವರೆಗೆ ಆವೇಶದಿಂದ ಮಾತಾಡಿದ್ದ ಅಣ್ಣ ಮಾವ ಈಗ ಗಾಬರಿಯಾಗಿ ಆತಂಕದಲ್ಲಿದ್ದರು. ಇದನ್ನೆಲ್ಲ ಸರಿಯಾಗಿ ನೋಡಿದ ಅಮ್ಮ  - ಅಮರಗೋಳಕ್ಕೆ ಅಯ್ಯನಗೌಡನ ಹತ್ತರ ಹೋಗ್ಯಾಣ, ಈಗ ಹೊಳ್ಳಿ ಬಂದರೂ ಬರತಾನ   ಎಂದು ಹೇಳಿದಾಗ ಅಣ್ಣ ಮಾವ ಮತ್ತು ಉಳಿದವರೆಲ್ಲ ನಿಟ್ಟುಸಿರು ಬಿಟ್ಟರು. ಅಪ್ಪ ಹಾಗೆ ಸಿಟ್ಟಿಗೆದ್ದು ಶಟಗೊಂಡು ಹೋಗಿದ್ದು ಅಮ್ಮನಿಗೂ ತಳಮಳವುಂಟುಮಾಡಿತ್ತು. ಆದರೆ ಕಿರಿಯವರಾದ ಅಣ್ಣ ಮಾವನಂತವರ ಮುಂದೆ ತೋರಿಸುವಂತಿರಲಿಲ್ಲ. ಅಮ್ಮ ತಾನೇ ನುಂಗಿಕೊಂಡು ಉಳಿದವರಿಗೆ ಅಭಯನೀಡುವ ಶಕ್ತಿಯಾಗಿದ್ದಳು.ದಿನವೂ ರಾತ್ರಿ  ಅಮ್ಮನ ಹತ್ತಿರ ಮಲಗುತ್ತಿದ್ದ ನನಗೆ ಅಮ್ಮನ ತಳಮಳ ಅರ್ಥವಾಗುತ್ತಿತ್ತು. ರಾತ್ರಿಯಲ್ಲ ಅದೇ ಚಿಂತೆಯಲ್ಲಿ ನಿದ್ದೆ ಮಾಡುತ್ತಿರಲಿಲ್ಲ. ಈ ಹುಡುಗರು ಎಂಥಾ ತಪ್ಪ ಕೆಲಸ ಮಾಡಿಬಿಟ್ಟರಲ್ಲ ಎಂದು ಹಳಹಳಿಸುತ್ತಿದ್ದಳು.


ಅಣ್ಣ ರಾತ್ರೋ ರಾತ್ರಿ ತನ್ನ ಗೆಳೆಯರನ್ನು ಕರೆದುಕೊಂಡು ಅಮರಗೋಳಕ್ಕೆ ಹೋಗಿ ಅಪ್ಪ ಅಲ್ಲಿದ್ದದ್ದನ್ನು ಖಾತ್ರಿ ಮಾಡಿಕೊಂಡು ಬಂದ. ಅಣ್ಣನ ಗೆಳೆಯರಲ್ಲೊಬ್ಬನಾದ ಕರೀಕಟ್ಟಿ ಬಸಪ್ಪ ರಾತ್ರಿ ಬಂದು ಅಮ್ಮನನ್ನು ಎಬ್ಬಿಸಿ ಬಸನಗೌಡ್ರು ನಾನು ಕೂಡಿ ಹೋಗಿ ನೋಡಿ ಬಂದೆವು, ``ಶಿವನಗೌಡ್ರು  ಅಮರಗೋಳದ ಅಯ್ಯನಗೌಡರ ಮನೆಯಲ್ಲಿ ಇದ್ದರು ಎನ್ನುವ ಸುದ್ದಿಯನ್ನು ಮುಟ್ಟಿಸಿದ. ಆಗ ಅಮ್ಮನಿಗೂ ಮಾವನಿಗೂ ಸಮಾಧಾನವಾಯಿತು.


 ಮರುದಿನ ಮುಂಜಾನೆ ಕಾಕಾ ಕಡದಳ್ಳಿಗೆ ಬಂದು ಅಮ್ಮನಿಗೆ ಅಪ್ಪನ ನ್ಯಾಯ ಹೇಳಿದ. ಈಗ ಸಿಟ್ಟಿನಲ್ಲಿದ್ದಾನೆ, ಏನ್ ಮಾಡಿದರೂ ಕಡದಳ್ಳಿಗೆ ಬರೂದಿಲ್ಲ. ಅದಕ ನಾಲ್ಕ ದಿವಸ ಗೊಡಚಿಗೆ ಹೋಗಿ ಬರಲಿ. - `` ಶಾಂತವ್ವ ನಿನ್ನ ಬಾಳ ನೆನೆಸತಾಳಂತ, ಒಂದ ನಾಲ್ಕ ದಿವಸ ಗೊಡಚಿಗೆ ಹೋಗಿ ಬಾ ಅಂತ ನಾನೇ ಹೇಳೀನಿ  ಎಂದು ಎಲ್ಲ ವಿವರ ಹೇಳಿದ. ಅಣ್ಣಗ ಮಾವಗ -ನೀವಿಬ್ಬರೂ ದನ, ಹಕ್ಕಿ ಅವ ಇದ್ದಾಗ ಹೆಂಗ ಇರತ್ತಿದ್ದವು ಹಂಗ ನೋಡಕೊಳ್ಳಿರಿ ಎಂದು ಪ್ರೀತಿಯ ತಾಕೀತ ಮಾಡಿದ.


ಗೊಡಚಿ ನಮ್ಮ ಮನೆದೇವರು ವೀರಭದ್ರನ ನೆಲೆಯೂ ಹೌದು, ಅಕ್ಕ ಶಾಂತಕ್ಕನ ಊರು ಹೌದು. ಅಕ್ಕನ ಮನೆ ಅವಿಭಕ್ತ ಕುಟುಂಬ. ಮೂರು ಮಂದಿ ಅಣ್ಣ ತಮ್ಮರು, ಇಬ್ಬರು ಅಮ್ಮಗೂಳು, ಮನೆ ತುಂಬ ಮಕ್ಕಳುಮರಿ ಇದ್ದರು. ಊರಮುಂದ ತ್ವಾಟ, ಭಾವಿ, ಮಟ್ಟಿ, ನಾಲ್ಕೆತ್ತು, ನಾಲ್ಕಾರು ಆಕಳು, ಎಮ್ಮಿ ಎಲ್ಲ ಇದ್ದು ಅಪ್ಪನಿಗೆ ತಕ್ಕ ಪರಿಸರವನ್ನು ಹೊಂದಿತ್ತು. ಹೀಗಾಗಿ ಅಪ್ಪ ಅಲ್ಲಿ ನೆಲೆ ಊರಿದ. ಇಲ್ಲವಾದರೆ ತನ್ನ ಹೊಲಮನಿ ಎತ್ತು ಬಿಟ್ಟು ಇರುವ ಜೀವವಲ್ಲವದು. ಮಾವ ಎದುರು ಮಾತಾಡಿದ ಗಾಯ ತೀವ್ರವಾಗಿತ್ತೆಂದು ತೋರುತ್ತದೆ. ಅದು ಮಾಯಲು ಅವನಿಗೆ ಸ್ವಲ ಬೇರೆ ಪರಿಸರ ಬೇಕಾಗಿತ್ತು. ಕೆಲವು ದಿನ ಅಲ್ಲಿದ್ದ. 


ಮೈಲಾರಲಿಂಗ ಅಕ್ಕನ ಮನೆದೇವರಾದುದರಿಂದ ಗೊರ್ರಪ್ಪನನ್ನು ಆರಾಧಿಸುವುದು ಗೊಡಚಿ ಜಾಮದಾರ ಮನೆತನದರ ಪದ್ಧತಿ. ಅಂದು ಮನೆಯಲ್ಲಿ ಎಮ್ಮೆ ಈಯ್ದದ್ದರಿಂದ ಗಿಣ್ಣ ಮಾಡಿ ಗೊರ್ರಪ್ಪನನ್ನು ಊಟಕ್ಕೆ ಕರೆದಿದ್ದರು. ಊಟ ಮಾಡಿದ ಗೊರ್ರಪ್ಪ ಎಲೆ ಅಡಿಕೆ ಹಾಕಿಕೊಳ್ಳುತ್ತ   ಸಾವ್ಕಾರ ಊಟದ ಗದ್ದಲ್ದಾಗ ಒಂದ ಹೇಳೂದನ್ನ ಮರೆತೆ. ಎಂದು ಪ್ರಾರಂಭಿಸಿದ-ನಮ್ಮ ಸಣ್ಣ ಸಾವಕಾರ ಅಳಿಯಾರ್‍ನ (ಅಂದರೆ ನನ್ನನ್ನು) ಜೇಲಿಗೆ ಹಾಕ್ಯಾರಂತ್ರಿ, ಬ್ಯಾರೆ ಹುಡುಗರು ಮಾಡಿದ ತಪ್ಪ ಅವರ ಮ್ಯಾಲ ಬಂದೈತಿ ಅಂತ್ರಿ, ಅದಕ್ಕ ನಿಮ್ಮನ್ನ ತಾಬಡ ತೋಬಡ ಬೆಳಗಾವಕ್ಕ ಬಾ ಅಂತ ಹೇಳ್ಯಾರಂತ್ರಿ, ನಿನ್ನೆ ನಮ್ಮ ಹುಡುಗ ಬೆಳಗಾವಿಗೆ ಹೋಗಿದ್ದ, ಅವಗ ನಿಮ್ಮ ಸಂಬಂಧಿಕರು ಒಬ್ಬರು ಯಾರೋ ಗೌಡ್ರು ಹೆಳಿದರಂತ್ರಿ, ನೀ ಹ್ಯಾಂಗಾದ್ರರೂ ಸಾವ್ಕಾರ ಮನಿಗೆ ಹೋಗತಿ ಇದನ್ನು ಹೇಳಿಬಿಡು ಅಂತ ಹೇಳ್ಯಾನ್ರಿ .  ಎಂದ. 


ಎಲ್ಲರೂ ತುದಿ ಗಟ್ಟಿಗೆ ಕುಂತವರು ಈ ಮಾತು ಕೇಳಿ ಗಾಬರ್‍ಯಾದರು. ಅಪ್ಪಂತೂ ನೆಲಕ್ಕ ಇಳಿದಬಿಟ್ಟ. ಇನ್ನೇನು ಊಟಕ್ಕೆ ಕೂಡಬೇಕು ಅನ್ನುವದರೊಳ ಗೊರ್ರಪ್ಪ  ಬಿರುಗಾಳಿ ಎಬ್ಬಿಸಿ ಹೋಗಿಬಿಟ್ಟ. ನಮ್ಮ ಹುಡಗ ಅಂಥಾವಲ್ಲ. ಇದು ಹೆಂಗಾತು ಅಂತ ಅಪ್ಪ ಚಿಂತಿ ಮಾಡಿದ. ಹೇಳಿಕಳಿಸಿದವರು ಯಾರು? ಕಡದಳ್ಳಿಗೆ  ಅಮರಗೋಳಕ್ಕೆ ಈ ಸುದ್ದಿ ಗೊತ್ತಿದ್ದರ ನಮಗ ಹೇಳತಿದ್ದರು. ಅಂತ ಚರ್ಚೆ ಮಾಡಿಕೊಳ್ಳತ ಕುಳಿತಿದ್ದರು. ಅಷ್ಟೊತ್ತಿಗೆ ಅಮರಗೋಳದ ಮುದಿಗೌಡ ಗೊಡಚಿ ಮನೆಗೆ ಬಂದ. ಅವನನ್ನು ಕೇಳಿದರು.  ಇದು ಸುಳ್ಳು. ಅವ ಚಂದ್ರಗೌಡ ನರಗುಂದಾಗ ಅದಾನ ಅಂತ ಹೇಳಿದ. ಆಮ್ಯಾಲ ಎಲ್ಲರೂ ಊಟ ಮಾಡಿದರು. 


ಉಡಾಳ ಬನಹಟ್ಟಿ ಸಿದ್ದಪ್ಪನೇ ಈ ಕೆಲಸ ಮಾಡ್ಯಾನಂತ ಆ ಮ್ಯಾಲ ಗೊತ್ತಾತು. ಯಾಕಂದ್ರ ಅವ ಗೊಡಚಿಗೂ ಬಂದು ಸುಳ್ಳ ಹೇಳಿ ರೊಕ್ಕ ಇಸಗೊಂಡ ಹೋಗಿದ್ದು ಟೀಕಪ್ಪ ಮಾವನಿಗೆ ಗೊತ್ತಿತ್ತು. ಅಲ್ಲಲ್ಲಿ ಬೀಗರು ಸಂಬಂಧಿಕರ ಮನೆ ತಿರುಗಿ ಹೀಗೆ ಕಾಲಹರಣ ಮಾಡುತ್ತಿದ್ದ. ಸಿದ್ದಪ್ಪ ನಮ್ಮ ಸಂಬಂಧಿ. ನನ್ನ ವಯಸ್ಸಿನವನೇ. ಶಾಲೆ ಕಲಿಯದೆ ಕೆಲ ದಿನ ಹೀಗೆ ತಿರುಗಾಡಿ ಹೆಸರು ಕೆಡಿಸಿಕೊಂಡಿದ್ದ.


ಅಪ್ಪ ಬೀಗರ ಮನೆಯಲ್ಲಿ ಇದ್ದನೇನೊ ಸರಿ ಆದರೆ ಮನಸು ಮಾತ್ರ ಕಡದಳ್ಳಿ ನೆನೆಸುತ್ತಿತ್ತು. ನನ್ನ ಬಗ್ಗೆ ಹಬ್ಬಿದ ಈ ಸುದ್ದಿ ಕೇಳಿ ಅಪ್ಪ ಇದೇ ನೆಪ ಮಾಡಿಕೊಂಡು ಅಮರಗೋಳಕ್ಕೆ ಬಂದುಬಿಟ್ಟ. ಚಿಗವ್ವ ಗಂಗಕ್ಕ ಕಾಳಜಿ ಮಾಡಿ ಊಟ ಮಾಡಿಸಿ,  ಚಂದ್ರಣ್ಣ ಕಡದಳ್ಳ್ಯಾಗ ಅದಾನ.  ಮೊನ್ನೆ ನರಗುಂದದಾಗಿಂದ ಬಂದಾನ  ಎಂದು ಹೇಳಿ ಅಪ್ಪನ ಆತಂಕವನ್ನು ಸ್ವಲ್ಪ ಕಡಿಮೆ ಮಾಡಿದ್ದಳು. ಆದರೂ ಅಪ್ಪನಿಗೆ ಸಮಾಧಾನವಿರಲಿಲ್ಲ. ಕಾಕಾನ ಕೂಡ ಕಡದಳ್ಳಿಗೆ ಬಂದ. ದನದ ಮನೆ ಸೇರಿದ. ನನ್ನನ್ನು ಕರೆ ಕಳಿಸಿದ. ನಾನು ಮನೆಗೆ ಹೋಗುವಷ್ಟರಲ್ಲಿ  ಗ್ವಾದಲಿಯಲ್ಲಿ ಕೈಯಾಡಿಸುತ್ತ ದನಗಳ ಜೊತೆ ಮಾತಾಡುತ್ತಿದ್ದ. ನನ್ನನ್ನು ನೋಡಿ ನಿಟ್ಟುಸಿರುಬಿಟ್ಟು ಮತ್ತೆ ತನ್ನ ಕಾಯಕದಲ್ಲಿ ತೊಡಗಿದ. ಹಕ್ಕಿ ಹಸನು ಮಾಡಿ, ಎತ್ತಿನ ಮೈ ತಿಕ್ಕಿ ನೀರಿಗೆ ಬಿಟ್ಟ. ಅಷ್ಟೊತ್ತಿಗೆ ಮಾವ ದನದ ಮನೆಗೆ ಬಂದಿದ್ದ. ಮಾವ ತಾನೆ ಹೋರಿಗಳನ್ನು ನೀರಿಗೆ ಬಿಟ್ಟ. ಅಪ್ಪ ಮಾವ ಇಬ್ಬರೂ ಮೌನವಾಗಿಯೇ ಇದ್ದರು, ಸ್ವಲ್ಪ ಹೊತ್ತು. ಆ ಮೇಲೆ ಅಪ್ಪ  ಏ ಶಂಕರಗೌಡ ಗ್ವಾದಲೆನ್ನ ಚಿಪ್ಪಾಡಿ ಆಕಳ ಕಡೆ ಸರಿಸು  ಎಂದು ಏನೂ ಅಗೇ ಇಲ್ಲ ಎಂಬಂತೆ ಸಹಜವಾಗಿ ಮಾತಾಡಿದ.  ಮಾವ ಊಟಕ್ಕ ಬರಬೇಕಂತ ಎಂದು ಹೇಳಿ ಮಾವ ಶಂಕರಗೌಡ ಈಚೆ ಮನೆಗೆ ಬಂದ. ಅಪ್ಪನೂ ಈಚೆ ಮನೆಗೆ ಬಂದ. ಯಥಾರೀತಿ ರಾತ್ರಿ ಜಳಕ ಮಾಡಿದ. ಊಟ ಮಾಡಿದ. ಅಕ್ಕ ರುದ್ರಕ್ಕ ಊಟಕ್ಕ ನೀಡಿದಳು. ಅಮ್ಮ ಪ್ರೀತಿಯಿಂದ ರೊಟ್ಟಿ ಮುಟ್ಟಿಗೆ ಮಾಡಿ ಕೊಟ್ಟಳು. ಅಮ್ಮ ಶಿವಬಾಯಮ್ಮನ ಮುಖದಲ್ಲೂ ಅವ್ಯಕ್ತ ಆನಂದವಿತ್ತು.  ಅಣ್ಣನೂ ಊಟಕ್ಕೆ ಕುಳಿತ. ಅಣ್ಣ, ಅಕ್ಕ, ಮತ್ತು ನನ್ನನ್ನು ಪ್ರೀತಿ ಮಮಕಾರದ ದೃಷ್ಟಿಯಿಂದ ನೋಡಿದ. ಅಷ್ಟು ನೋಡುವುದರಿಂದಲೇ ತನ್ನ ಎಲ್ಲ ಭಾವನೆಗಳನ್ನು ವ್ಯಕ್ತ ಮಾಡುತ್ತಿದ್ದ. ಎಂದೂ ಬಾಯಿಬಿಚ್ಚಿ  ಮಾತಾಡಿದ ರೂಢಿ ಅಪ್ಪನಿಗೆ ಇರಲೇ ಇಲ್ಲ. ಅಪ್ಪ 


ಅಪ್ಪ ಬಂದ ರಾತ್ರಿ ಮತ್ತು ಮರುದಿನ ಎಲ್ಲರೂ ಅಪ್ಪನನ್ನು ನೋಡಿದರೆ ಹೊರತು ಯಾರೂ ಆ ವಿಷಯ ಎತ್ತಿ ಮಾತಾಡಲಿಲ್ಲ.  ಒಂದೇ ದಿನದಲ್ಲಿ ಅಪ್ಪ ಕಾಯಕದಲ್ಲಿ ಮತ್ತೆ ಒಂದಾಗಿಬಿಟ್ಟ. ಅಮ್ಮನ ಮುಖದ ಮೇಲೂ ಅವ್ಯಕ್ತ ಆನಂದವಿತ್ತು ಆದಿನ. ವಿಷಗಳಿಗೆಯಲ್ಲಿ ನಡೆದ ಆ ಘಟನೆ ಬಗ್ಗೆ ಮನೆಯವರೆಲ್ಲರಿಗೂ ನೋವಾಗಿತ್ತು. ಆ ನೋವು ಮಾಯವಾಗಿ ನಮ್ಮೆಲ್ಲರಲ್ಲಿ ಹೊಸ ಚೈತನ್ಯ ಮೂಡಿತು. ಅಣ್ಣ  ಮಾವ ಅಪ್ಪನೊಂದಿಗೆ ಹೊಲ ಮನೆ ಕೆಲಸದಲ್ಲಿ ಆಸಕ್ತಿಯಿಂದ ತೊಡಗಿಕೊಂಡರು. 


ಬೆಣ್ಣಿಹಳ್ಳದ ತುಂಬಿದೊಡಲು ಮತ್ತು ಅಣ್ಣನ ಪರೀಕ್ಷೆ :


ಅಣ್ಣ ಎಸ್. ಎಸ್. ಎಲ್.ಸಿ. ಸಪ್ಲಿಮೆಂಟರಿ ಪರೀಕ್ಷೆಗಾಗಿ ನರಗುಂದಕ್ಕೆ ಹೋಗಬೇಕಾಗಿತ್ತು. ಯಾವುದೋ ಒಂದು ವಿಷಯ ನಪಾಸಾಗಿತ್ತು. ಆಗ ಮಳೆಗಾಲ. ಮಲೆನಾಡಿನಲ್ಲಿ ಮತ್ತು ಬೆಳವನ ನಾಡಿನಲ್ಲಿಯೂ ಮಳೆ ಹತ್ತಿತ್ತು. ನಾಲ್ಕಾರು ದಿನಗಳಿಂದ ಬೆಣ್ಣಿಹಳ್ಳ  ಒಡಲುತುಂಬಿ

ಹರಿಯುತ್ತಿತ್ತು. ಮರುದಿನ ಪರೀಕ್ಷೆಯಿದ್ದುದರಿಂದ ಅಂದು ಅಮರಗೋಳ ಮುಖಾಂತರ ನರಗುಂದಕ್ಕೆ ಹೋಗಲೇಬೇಕಾಗಿತ್ತು. ಅಣ್ಣನ ಗೆಳೆಯ ಮಧ್ಯಾಹ್ನ ನಾಗನೂರಿನಿಂದ ಕಡದಳ್ಳಿಗೆ ಬಂದ. ಅಣ್ಣ ಮನೆಯಲ್ಲಿ ಯಾರಿಗೂ ಹೇಳದೇ ಹಳ್ಳ ಈಜಿ ದಾಟಿಬಿಟ್ಟಿದ್ದ. ಅಣ್ಣನಿಗೇನೋ ಧೈರ್ಯವಿತ್ತು. ಈಜುವುದರಲ್ಲಿ ಗತಿಯಿತ್ತು. ಆದರೆ ಅವನ ಗೆಳೆಯ ಮುಲ್ಲಾನಿಗೆ ಅಷ್ಟೊಂದು ಗತಿ ಇರಲಿಲ್ಲ. ಅದಕ್ಕೆಂದೇ ಗೌರಿ ಸರುವನ್ನು ದಾಟಿ ಮೇಲಕ್ಕೆ ಹೋಗಿ ಹಳ್ಳಕ್ಕೆ ಇಳಿದಿದ್ದಾರೆ. ಆ ಕಡೆ ದಡದಲ್ಲಿರುವ ಹುಣಸೆಮರದ ಹತ್ತಿರ ದಡ ಮುಟ್ಟಿದ್ದಾರೆ. ಅಲ್ಲಿಗೆ ಅವರ ಈಜುವ ಕೆಲಸ ಮುಗಿಯಲಿಲ್ಲ. ಅಲ್ಲಿಂದ ಮುಂದೆ ಅಮರಗೋಳಕ್ಕೆ ಹೋಗಬೇಕಾದರೆ ಮೊಕಾಶಿಯವರ ಮಡುವಿನ ಇನ್ನೊಂದು ( ಉಪಹಳ್ಳ) ಸರುವನ್ನು ದಾಟಬೇಕಾಗಿತ್ತು. ಆ ಸರುವು ಭಾರಿ ಸೆಳವಿನಿಂದ ಕೂಡಿದ್ದು ಕೆಸರು ಹುದುಲು ಮಡುವಿನಿಂದ ಕೂಡಿತ್ತು. ಅಲ್ಲದೇ ಮುಳ್ಳು ಕಂಟಿ ಬಹಳ. ಅಲ್ಲಿ ಈಜಿ ಹೋಗಲಿಕ್ಕೆ ಆಯಕಟ್ಟಿನ ಸ್ಥಳವೇ ಇರಲಿಲ್ಲ. ಅಷ್ಟೊತ್ತಿಗೆ ಕತ್ತಲೆ ಬೇರೆಯಾಯಿತು. ಅಣ್ಣ ಮತ್ತು ಅವನ ಗೆಳೆಯರಿಬ್ಬರು ಅಮರಗೋಳ ಕಡದಳ್ಳಿಯವರಿಗೂ ಕಾಣುತ್ತಿರಲಿಲ್ಲ. ಹೀಗಾಗಿ ಮನೆಯವರಿಗೆಲ್ಲ ಗಾಬರಿಯಾಯಿತು. ಅವರು ಈಜಿ ಆಕಡೆ ದಾಟಿ ಹೋಗಿ ಕೂಗು ಹಾಕಿ ದಾಟಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಅವರಿಬ್ಬರು ನಡು ನೀರಿನಲ್ಲಿ ಇದ್ದು ಕೂಗು ಹಾಕಿರುವರೆಂದು ತಿಳಿದು ಗಾಬರಿಯಾದರು. ಹುಚ್ಚು ಸಾಹಸಕ್ಕೆ ಕೈಹಾಕಿದ ಅಣ್ಣನನ್ನು ಎಲ್ಲರೂ ಬಯ್ಯುವವರೆ. ಅಮ್ಮ ತಳಮಳಿಸಿದಳು. ಅಪ್ಪನಂತೂ ಅಣ್ಣನ ಮೇಲೆ ಕೆಂಡಾಮಂಡಲವಾಗಿದ್ದ. ಅಣ್ಣನ ಗೆಳೆಯರಾದವರಿಗೆಲ್ಲ ವಿಶ್ವಾಸವಿತ್ತು, ಅವರಿಬ್ಬರು ದಾಟಿ ಹೋದ ಬಗ್ಗೆ. ಅವರು ಅನುಮಾನ ಪಡುತ್ತಿದ್ದದ್ದು ಕೇವಲ ಮುಲ್ಲಾನ ಬಗ್ಗೆ ಮಾತ್ರ. ಅಣ್ಣ ಮುಂದಾಲೋಚನೆ ಮಾಡಿ ಅವನಿಗೆ ಈಜು ಗುಂಬಳಕಾಯಿ ಕಟ್ಟಿಸಿ ಕರೆದುಕೊಂಡು ಹೋಗಿದ್ದ. ಅಣ್ಣನ  ಜಾಣತನವನ್ನು ಅವನ ಗೆಳೆಯರು ಅಮ್ಮನ ಮುಂದೆ ಹೇಳಿದರು. ಆದರೆ ಅಪ್ಪನೆದುರು ಯಾರಿಗೂ ಹೇಳುವ ಧೈರ್ಯವಿರಲಿಲ್ಲ.  


ಮರುದಿನವೂ ಮತ್ತೆ ಹಳ್ಳಕ್ಕೆ ಪ್ರವಾಹ ಬಂದಿತು. ಯಾರೂ ದಾಟಿ ಹೋಗುವಂತಿರಲಿಲ್ಲ. ಆಕಡೆಯವರು ಈಕಡೆ ಬರುವಂತಿರಲಿಲ್ಲ. ಮಧ್ಯಾಹ್ನದ ಮೇಲೆ ಪ್ರವಾಹಕ್ಕೆ ಇಳಿಮುಖ ವಾಗಿತ್ತು. ಕಾಕಾನಿಗೆ ಕಡದಳ್ಳಿಯ ಆತಂಕ ಗೊತ್ತಿತ್ತು. ಈಜುಗಾರನನ್ನು ಕರೆದುಕೊಂಡು ಸಿಂಗಡಿ ಹಾಕಿಕೊಂಡು ದಾಟಿ ಕಡದಳ್ಳಿಗೆ ಬಂದ. ಅಣ್ಣ ಮತ್ತು ಅವನ ಗೆಳೆಯ ಗುದ್ದಾಡಿ ಹಳ್ಳ ದಾಟಿ ಬಂದು ನರಗುಂದಕ್ಕೆ ಹೋದ ಸುದ್ದಿಯನ್ನು ಹೇಳಿದ ಮೇಲೆ ಅಮ್ಮ ಮತ್ತು ಅಪ್ಪನಿಗೆ ಸಮಾಧಾನವಾಯಿತು. ನಮ್ಮೆಲ್ಲರ ಆತಂಕವೂ ದೂರವಾಯಿತು. 


ನಾಲ್ಕನೆಯ ದಿನ ಅಣ್ಣ ಊರಿಗೆ ಬಂದ. ಅಮ್ಮ ಅಣ್ಣನಿಗೆ ಬಯ್ಯಲಿಲ್ಲ. ಪರೀಕ್ಷೆ ಒತ್ತಡದಲ್ಲಿದ್ದ ಕಾರಣಕ್ಕೆ. ಅಂದು ಅಪ್ಪನೂ ಬಯ್ಯಲಿಲ್ಲ. ಆದರೆ ಮರುದಿನ ಅಣ್ಣ ಶಟಗೊಂಡು ಅಮರಗೊಳಕ್ಕೆ ಹೊರಟು ನಿಂತಾಗಲೇ ಗೊತ್ತಾಯ್ತು, ಅಪ್ಪ ಅಣ್ಣನನ್ನು ಬಯ್ದದ್ದು.  ಅಪ್ಪನ ಮಾತನ್ನು ಮನಸ್ಸಿಗೆ ಹಚ್ಚಿಕೊಂಡು ಊಟಮಾಡದೆ ಹಳ್ಳದ ದಾರಿ ಹಿಡಿದು ಹೊರಟುಬಿಟ್ಟ. ಅಣ್ಣ ಅಮರಗೋಳದ ದಾರಿ ಹಿಡಿದು ಹೋದದ್ದನ್ನು ನೋಡಿದ ನಾನು ಅಮ್ಮನಿಗೆ ಹೇಳಿದೆ. ತನ್ನ ಎಲ್ಲ ಕೆಲಸ ಮುಗಿಸಿ ಮಧ್ಯಾಹ್ನ ನನ್ನನ್ನು ಕರೆದುಕೊಂಡು ಅಮ್ಮ ಅಮರಗೋಳಕ್ಕೆ ಹೊರಟಳು. ಅಲ್ಲಿ ಕಾಕಾ ಮತ್ತು ಅಮ್ಮ ಅಣ್ಣನಿಗೆ ಬುದ್ಧಿ ಹೇಳಿದರು. ಆದರೂ ಅಣ್ಣ ಅಂದೇ ಕಡದಳ್ಳಿಗೆ ಬರಲಿಲ್ಲ. ನಾಲ್ಕು ದಿನ ಅಲ್ಲಿಯೇ ಇದ್ದು ಆಮೇಲೆ ಬಂದ. ಅಪ್ಪ ಅಂದಿನಿಂದ ಅಣ್ಣನಿಗೆ ಯಾವ ವಿಷಯವನ್ನೂ ಸಿಟ್ಟಿನಿಂದ ಹೇಳುವುದನ್ನು ಬಿಟ್ಟ. 


ಚಳ್ಳಮರ ಮತ್ತು ಜೇನು:


ಹಳ್ಳ ಈಜಿ ಹುಚ್ಚು ಸಾಹಸ ಮಾಡುವುದಕ್ಕಿಂತ ಮೊದಲೊಮ್ಮೆ ಅಣ್ಣ ತನ್ನ ಗೆಳೆಯರ ಕೂಡ ಸೇರಿ ಜೇನು ಬಿಡಿಸಲು ಹೋಗಿ ಚಳ್ಳಗಿಡದ ಬೊಡ್ಡೆಗೆ ಬೆಂಕಿ ಹತ್ತಿಕೊಳ್ಳಲು ಕಾರಣವಾಗಿದ್ದ ನಮ್ಮ ಚಳ್ಳಮರದ ಹೊಲದಲ್ಲಿ ಒಂದು ಹಳೆಯ ಚಳ್ಳ ಮರವಿತ್ತು. ಅದರ ಪೊಟರೆಗಳು ಜೇನು ಕಟ್ಟಲು ಮತ್ತು ಗಿಳಿ ಗೂಡು ಕಟ್ಟಲು ಅನುಕೂಲವಾಗಿತ್ತು. ' ಬಾಬಾ ಗಿಳಿಯೆ ಬಣ್ಣದ ಗಿಳಿಯೆ' ಹಾಡನ್ನು ಕೇಳಿದ ನಂತರ ನಾನು ಗಿಳಿ ನೋಡಲು ಈ ಚಳ್ಳ ಮರಕ್ಕೆ ಹೋಗಿದ್ದೆ. ಆ ಮರದಲ್ಲಿ ಸದಾ ಜೇನಿರುತ್ತಿತ್ತು. ಗೋದಿ ಹೊಲ ಹತ್ತಿ ಹೊಲ ಮತ್ತು ಹಿತ್ತಿಲಲ್ಲಿ ಬಾರಿ ಕಂಟಿ ಇಪ್ಪಿ ಕಂಟಿಯಲ್ಲಿರುವ ಜೇನಿಗಿಂತ ಇಲ್ಲಿ ಜೇನುತುಪ್ಪ ಹೆಚ್ಚಿರುತ್ತಿತ್ತು. ಆ ಆಸೆಗೆ ಅಣ್ಣ ಮತ್ತು ಅವನ ಗೆಳೆಯರು ಈ ಚಳ್ಳ ಗಿಡದ ಜೇನು ಬಿಡಿಸಲು ಹೋಗಿ ಹುಳ ಕಡಿಸಿಕೊಂಡಿದ್ದಾರೆ. ಜೇನು ಹುಳ ಕಡಿದ ಮೇಲೆ ಹಟಕ್ಕೆ ಬಿದ್ದು ಈ ಜೇನು ಬಿಡಿಸಲೇ ಬೇಕೆಂದು ಹುಳ ಎದ್ದು ಹೋಗಲೆಂದು ಹೊಗೆ ಹಾಕಿದ್ದಾರೆ. ನೆಲದ ಮೇಲೆ ಹಾಕಿದ ಹೊಗೆ ಜೇನಿರುವ ಪೊಟರೆವರೆಗೂ ಹೋಗಿಲ್ಲ. ಆಗ ಗಿಡದ ಟೊಂಗೆ ಮೇಲೆಯೇ ಬೆಂಕಿ ಹಾಕಿದ್ದಾರೆ. ಹುಳ ಎದ್ದಿವೆ. ಜೇನು ಬಿಡಿಸಿ ತಂದಿದ್ದಾರೆ. ಆ ಜೇನನ್ನು ನಮಗೂ ಕೊಟ್ಟಿದ್ದರು. ಅಪ್ಪ ಸಾಯಂಕಾಲ ಹೊಲಕ್ಕೆ ಹೋದಾಗ ಚಳ್ಳಮರದ ಹತ್ತಿರ ಹೊಗೆ ಬರುತ್ತಿರುವುದನ್ನು ನೋಡಿ ಅಲ್ಲಿಯವರೆಗೂ ಹೋಗಿದ್ದಾನೆ. ಗಾಳಿಗೆ ಪುಟು ಆಗಿ ಗಿಡದ ಪೊಟರೆಯಲ್ಲಿ ಬೆಂಕಿ ಹಬ್ಬಿದೆ. ಆದನ್ನು ಆರಿಸಲು ನಾಲ್ಕೈದು ಕೊಡ ನೀರು ಹೊಡೆದು ಆರಿಸಿಬಂದಿದ್ದಾನೆ. ಜೇನು ಬಿಡಿಸಿದ ಸಂತೋಷದಲ್ಲಿ ಅಣ್ಣನಿಗೆ ಮತ್ತು ಅವನ ಗೆಳೆಯರಿಗೆ ಬೆಂಕಿಯ ಬಗ್ಗೆ ಮರವೆಯಾಗಿದೆ. ಮುಂದೆ ಅದು ಅನಾಹುತಕ್ಕೆ ಕಾರಣವಾಯ್ತು. ಅಪ್ಪ ಮನೆಗೆ ಬಂದ ಮೇಲೆ ಈ ಕೆಲಸದಲ್ಲಿ ಅಣ್ಣನೂ ಇದ್ದದ್ದು ಗೊತ್ತಾಗಿ ಅಣ್ಣನನ್ನು ಬಯ್ದು ಹೊಡೆಯಲು ಹೋಗಿದ್ದ. ಹೀಗೆ ಒಮ್ಮೆ ಬಯ್ದಿದ್ದ ಅಪ್ಪ ಹಳ್ಳ ಈಜಿದಾಗಲೂ ಬಯ್ದಿದ್ದಕ್ಕೆ ಅಣ್ಣ ಅಮರಗೋಳಕ್ಕೆ ಹೋಗಿಬಿಟ್ಟಿದ್ದ. 


ಅಣ್ಣನ ಮೇಲೆ ಅಪ್ಪನಿಗೆ ಅತಿಯಾದ ಪ್ರೀತಿಯಿತ್ತು. ಅವನು ತುಂಟನಾಗಿದ್ದರೂ ಅವನ ಮೇಲೆ ಭರವಸೆ ಇಟ್ಟಿದ್ದ. ಕೃಷಿ ಜೀವನ ಕಾಯಕಜೀವಿಯಾಗಿದ್ದರೂ ಅಪ್ಪ ಅಣ್ಣನನ್ನು ನೌಕರಿಗೆ ಕಳಿಸಬೇಕು ಎಂದು ನಿರ್ಧರಿದ್ದ. ಸದಾ ಅವನ ಬಗ್ಗೆ ಚಿಂತಿ ಮಾಡುತ್ತಿದ್ದ. ಅಪ್ಪನ ಈ ತೀವ್ರ ಆಸೆ ಗೊತ್ತಿದ್ದ ಚಿಗವ್ವ ಕಲ್ಲಕ್ಕ ಮತ್ತು ಕಾಕಾ ಗುರುಶಾಂತಪ್ಪ ಹೊತ್ತಿಗೆ ತೆಗೆಯಿಸಿ ಅಣ್ಣನ ನೌಕರಿ ಬಗ್ಗೆ ಕೇಳುತ್ತಿದ್ದರು. ಅಲ್ಲದೆ ಅಲ್ಲಿ ಇಲ್ಲಿ ಪ್ರಯತ್ನ ಮಾಡುತ್ತಿದ್ದರು. ಮತ್ತೆ ಮತ್ತೆ ಅದು ವಿಫಲವಾದಾಗ ದೇವರನ್ನು ಕೇಳುತ್ತಿದ್ದರು. 

ಅಣ್ಣನ ನೌಕರಿ :


ಆಲಮಟ್ಟಿ ಡ್ಯಾಂ ನಲ್ಲಿ ಕೆಲಸಕ್ಕಿದ್ದ ಶಲವಡಿಯ ಒಬ್ಬ ವ್ಯಕ್ತಿಯನ್ನು ಹಿಡಿದು ಅಣ್ಣನ ನೌಕರಿಗಾಗಿ ಪ್ರಯತ್ನ ನಡೆಸುತ್ತಲೇ ಇದ್ದರು. ಶಲವಡಿಯ ವ್ಯಕ್ತಿಯ ಮುಖಾಂತರ  ಇಂಜಿನೀಯರ್‌ಗೆ ಒಂದಿಷ್ಟು ಹಣವನ್ನು ಕೊಟ್ಟಿದ್ದರು. ಆ ಕಾಲದಲ್ಲಿ ಟೈಪಿಂಗ್ ಕಲಿತರೆ ನೌಕರಿಗೆ ಹೆಚ್ಚಿನ ಅವಕಾಶಗಳಿದ್ದವು. ಅಣ್ಣ ಟೈಪಿಂಗ ಕಲಿಯಲು ಗದಗಿಗೆ ಹೋದ. ಆರು ತಿಂಗಳು ಅಲ್ಲಿಯೇ ಇದ್ದ. ಇದೇ ವೇಳೆಯಲ್ಲಿ ಆಲಮಟ್ಟಿಗೆ ನೌಕರಿಗಾಗಿ ಹೋಗಲು ಕರೆ ಬಂತು. ಕೂಲಿ ಕೆಲಸದವರ ಲೆಕ್ಕ ನೋಡಿಕೊಳ್ಳುವ ವರ್ಕ್ ಇನ್ಸ್ ಫೆಕ್ಟರ್ ಕೆಲಸ ಕಡದಳ್ಳಿಯಲ್ಲಿ ಆಣ್ಣನು ಆಲಮಟ್ಟಿಗೆ ಹೋಗುವ ದಿನ ಕಲ್ಮೇಶ್ವರ ಗುಡಿಯಲ್ಲಿ ಜಾಗರಣೆ ಇಡಿಸಿದ್ದರು. ಅಂದು ನಾನು ಬೆಳ್ಳಂಬೆಳತನ ಉತ್ಸಾಹದಿಂದ ಭಾಗವಹಿಸಿದ್ದೆ. . ಅಣ್ಣನಿಗೆ ಈ ಕೆಲಸಕ್ಕೆ ಹೋಗುವ ಮನಸ್ಸಿದ್ದಿಲ್ಲವೆನಿಸುತ್ತದೆ. ಅವನು ಗದಗನಲ್ಲಿಯೇ ಉಳಿದಿದ್ದ. ಟೈಪಿಂಗ ಮುಗಿಸಿ ಎಸ್.ಡಿ.ಸಿ.  ಕೆಲಸಕ್ಕೆ ಸೇರಬೇಕೆನ್ನುವುದು ಅಣ್ಣನ ಆಲೋಚನೆಯಾಗಿತ್ತು. ಹೀಗಾಗಿ ಅವನು ಆಲಮಟ್ಟಿಗೆ ಹೋಗಿರಲೇ ಇಲ್ಲ. ಅಪ್ಪನಿಗೆ ಬಹಳ ನಿರಾಸೆಯಾಯಿತು. ಮನೆಯವರೆಲ್ಲರಿಗೂ ನಿರಾಸೆಯಾಯಿತು. ಊರಲ್ಲಿಯ ಅಣ್ಣನ ಗೆಳೆಯರ ಉತ್ಸಾಹ ಕುಗ್ಗಿಹೋಯಿತು. ನನಗಂತೂ ಅವಮಾನವಾದಂತಾಗಿತ್ತು. ಎರಡು ದಿನದಿಂದ ಅಣ್ಣ ಆಲಮಟ್ಟಿಗೆ ಹೋಗುತ್ತಾನೆಂದು ಹೇಳುತ್ತ ತಿರುಗಾಡಿದ್ದೆ. ಶಲವಡಿಯ ಕಾಕಾ ಮತ್ತು ಚಿಗವ್ವ ಹತಾಸೆಗೊಂಡರು. ದೇವರ ಕಾಟವಿದೆ ಅವನಿಗೆ. ಅದಕ್ಕೆ ಅವನಿಗೆ ನೌಕರಿ ಸಿಗಲೊಲ್ಲದು ಕೈ ಚೆಲ್ಲಿದರು.


ಅಪ್ಪ ಮತ್ತೆ ಅಣ್ಣನ ಕೆಲಸಕ್ಕಾಗಿ ಪ್ರಯತ್ನ ಮಾಡುವಂತೆ ಅಮರಗೋಳ ಕಾಕಾನಿಗೆ ಒತ್ತಾಯ ಮಾಡಿತೊಡಗಿದ. ಇನ್ನೊಂದು ಪ್ರಯತ್ನವೂ ನಡೆದು ಹೋಯಿತು. ಗ್ರಾಮ ಲೆಕ್ಕಿಗನ ಕೆಲಸಕ್ಕಾಗಿ ಐದುನೂರು ಕೊಡುವುದಾಗಿ ಮಾತು ಮುಗಿಸಿದರು. ಮುಂಗಡವಾಗಿ ಎರಡು ನೂರು ಕೊಟ್ಟರು. ಕಾಲ ಕಳೆಯಿತೇ ಹೊರತು ಕೆಲಸ ಸಿಗಲಿಲ್ಲ. ಕೊಡಿಸುವ ಭರವಸೆ ಕೊಟ್ಟವರು ಮತ್ತೆ ಮತ್ತೆ ಭರವಸೆ ಕೊಟ್ಟೆ ಕೊಡುತ್ತಿದ್ದರು. ಆದರೆ ಕೆಲಸ ಮಾತ್ರ ಸಿಗಲಿಲ್ಲ. ಆಗ ಕೆಲಸಕ್ಕೆ ಅರ್ಜಿ ಕರೆದಿರಲಿಲ್ಲ. ಕರೆದಾಗ ನೀವೆ ಅರ್ಜಿ ಹಾಕಿಸಿ ಕೆಲಸ ಕೊಡಿಸುವ ಕರಾರಿನ ಮೇಲೆ ಹಣವನ್ನು ಮುಂಗಡವಾಗಿ ಕೊಟ್ಟುಬಿಟ್ಟಿದ್ದರು. 


ಅಣ್ಣನಿಗೆ ನೌಕರಿ ಸಿಗದಿದ್ದಕ್ಕಾಗಿ ಅಪ್ಪಕೊರಗಿದ, ಮರುಗಿದ. ಅವನ ನಸೀಬದಲ್ಲಿ ನೌಕರಿ ಬರದೇ ಇಲ್ಲವೇನೋ ಎಂದು ಹಲವರ ಮುಂದೆ ಗೋಳಾಡಿತ್ತಿದ್ದ. ಕೃಷಿ ಕಾಯಕಕ್ಕೆ ತನ್ನನ್ನು ಅರ್ಪಿಸಿಕೊಂಡ ಅಪ್ಪ ಮಗ ನೌಕರಿಯನ್ನೇ ಮಾಡಲಿ ಎಂದು ಆಸೆ ಪಡುತ್ತಿದ್ದ. ಅಪ್ಪನ ಈ ವರ್ತನೆ ಈಗಲೂ ಒಗಟೆನಿಸುತ್ತದೆ. ನಮ್ಮ ಮನೆಯಲ್ಲಿ ಒಬ್ಬ ವ್ಯಕ್ತಿ ನೌಕರಿ ಮಾಡಲಿ ಎನ್ನುವುದು ಅಪ್ಪನಿಗೆ ಪ್ರತಿಷ್ಠೆಯ ವಿಷಯವಾಗಿತ್ತೆನಿಸುತ್ತದೆ. ಅಲ್ಲದೆ ಆರ್ಥಿಕ ಬಲಕ್ಕಾಗಿ ಹಪಹಪಿಸುತ್ತಿದ್ದನೆನಿಸುತ್ತದೆ. ಎಲ್ಲರ ಮುಂದೆ ಹುಡುಗನ ರಟ್ಟೆ ಬಲತಿಲ್ಲ ಶಾಲೆ ಕಲಿಯಲಿ ಎಂದು ಹೇಳುತ್ತಿದ್ದ. 


ದೂರದ ಸಂಬಂಧಿಕರೊಬ್ಬರು ತಮ್ಮ ಮನೆ ಕಟ್ಟಿಸುವಾಗ ಸರಕಾರದ ಯಾವುದೋ ಕೆಲಸಕ್ಕೆ ಬೇಕಾದ ಕಲ್ಲು ಇಟ್ಟಿಗೆ ಸಿಮೆಂಟು ಬಳಸಿಕೊಂಡದ್ದನ್ನು ಹೊಗಳುತ್ತಿದ್ದ. ಆ ಇಂಜಿನೀಯರ್ ಅಪ್ಪನ ಮೆಚ್ಚುಗೆಗೆ ಪಾತ್ರನಾಗಿದ್ದ. ಸರಕಾರ  ಅವರಿಗೆ ಬಹುಮಾನ ಕೊಟ್ಟ ರೀತಿಯಲ್ಲಿ ಪ್ರಶಂಸೆ ಮಾಡುತ್ತಿದ್ದ. ಅದು ಸರಕಾರಕ್ಕೆ ಮಾಡುವ ಮೋಸ ಎಂಬ ಭಾವನೆಯೇ ಅಪ್ಪನಿಗಿರಲಿಲ್ಲ. ಅಪ್ಪ ಹೀಗೆ ಆಸೆ ಮಾಡಿದ್ದು ಯಾಕೆ? ಅಪ್ಪನ ಈ ನಿಲುವು ಅಂದೂ ಒಪ್ಪಿಗೆ ಯಾಗಿರಲಿಲ್ಲ, ಈಗಲೂ ಕೂಡ. 


ನನ್ನ ಮೇಲಿನ ಒತ್ತಡ ;


ಅಣ್ಣನಿಗೆ ನೌಕರಿ ಸಿಗದಿರುವುದು ಖಾತ್ರಿಯಾದಂತೆ ಅಪ್ಪನ ದೃಷ್ಟಿ ನನ್ನ ಮೇಲೆ ಕೇಂದ್ರೀಕೃತವಾಯಿತು. ನಾನು ಅಣ್ಣನಿಗೆ ಬೇಗನೇ ನೌಕರಿ ಸಿಗಲಿ ಎಂದು ಆಸೆ ಪಡುತ್ತಿದ್ದುರಲ್ಲಿ ನನ ಸ್ವಾರ್ಥವೂ ಇತ್ತು. ಅವನಿಗೆ ಸಿಕ್ಕರೆ ನನ್ನ ಮೇಲೆ ನೌಕರಿಗೆ ಹೋಗಲೇಬೇಕೆಂಬ ಒತ್ತಡ ಬಿಳುವುದಿಲ್ಲ ಎನ್ನುವುದು ನನ್ನ ಒಳಮನಸ್ಸಿನ ಇಂಗಿತವಾಗಿತ್ತು.


ನಾನಿನ್ನು ಬಿ. ಎ. ದ್ವೀತಿಯ ವರ್ಗದಲ್ಲಿ ಓದುತ್ತಿದ್ದೆ. ಬೇಸಿಗೆ ರಜೆಯಲ್ಲಿ ಊರಲ್ಲಿದ್ದೆ. ಕೆಟ್ಟ ಬಿಸಿಲು. ಅಪ್ಪ ಹೊಲದಿಂದ ಬಂದವನೇ ಎತ್ತುಗಳನ್ನು ಕಟ್ಟಿ ಊಟವನ್ನು ಮಾಡದೇ ನನ್ನನ್ನು ಕರೆದುಕೊಂಡು ಬನಹಟ್ಟಿಗೆ ಹೊರಟುಬಿಟ್ಟ. ಹೊಲದಲ್ಲಿಯ ಕಾಲುದಾರಿ ಹಿಡಿದು ಒಂಬತ್ತ ಬನ್ನಿಗಿಡಕ್ಕೆ ಹೋಗಿ ಬನಹಟ್ಟಿ ದಾರಿ ಸೇರಿ ಮುನ್ನಡೆದೆವು. ದಾರಿಯಲ್ಲಿ ಬ್ಯಾಂಕಿನ ಬಸನಗೌಡರು ಬಂದಾರ, ಅವರ ಹತ್ರ ಹೋಗಿ ಬರೂಣು  ಎಂದ. ಸುಮ್ಮನೆ ಅಪ್ಪನನ್ನು ಹಿಂಬಾಲಿಸಿದೆ. ಅಲ್ಲಿಗೆ ಮುಟ್ಟಿ ಅವರನ್ನು ಭೇಟಿಯಾದೆವು. ಅಪ್ಪ  ಇವನಿಗೆ ಏನಾದರೂ ಮಾಡಿ ನೌಕರಿ ಕೊಡಿಸಿರಿ  ಎಂದು ಹೇಳಿದವನೇ ಅವರಿದ್ದಲ್ಲಿಗೆ ಹೋಗಿ  ಅವರ ಕಾಲಿಗೆ ನಮಸ್ಕಾರ ಮಾಡಿಬಿಟ್ಟ. ಎಲ್ಲರಿಗೂ ದಿಗಿಲು !. ಇಷ್ಟು ಹೇಳಿದ ಅಪ್ಪ ಸುಮ್ಮನೆ ಕುಳಿತುಬಿಟ್ಟ. ನನ್ನನ್ನು ಅವರು ಯಾವ ಕ್ಲಾಸು, ಎಷ್ಟು ಪ್ರತಿಶತ ಮುಂತಾದ ಮಾಹಿತಿಯನ್ನು ಕೇಳಿದರು. ಅವನ ಪದವಿಯಾದರೂ ಮುಗಿಯಲಿ ಎಂದು ಉತ್ತರಿಸಿದಾಗ ತಿಳಿಯದಿದ್ದರೂ ತಲೆ ಹಾಕಿದ. ಐದೇ ನಿಮಿಷದಲ್ಲಿ ಅಲ್ಲಿಂದ ಹೊರಟುಬಿಟ್ಟೆವು. ಆ ಸುಡು ಬಿಸಿಲಲ್ಲಿ ಅಪ್ಪ ಮುಂದೆ ಮುಂದೆ ನಾನು ಹಿಂದಿಂದೆ. ಮಾತಿಲ್ಲ, ಕತೆಯಿಲ್ಲ.  ಅಪ್ಪ ಮನಸ್ಸಿನಲ್ಲಿ ಮಣ ಮಣ ಮಂತ್ರದಂತೆ ಏನನ್ನೊ ಗೊಣಗಿಕೊಳ್ಳುತ್ತಿದ್ದ. ನಾನು ಅಪ್ಪನ ವರ್ತನೆಯ ಬಗ್ಗೆ, ನನ್ನ ಕಲಿಕೆಯ ಬಗ್ಗೆ, ಮುಂದೆ ಸಿಗಬಹುದಾದ ನೌಕರಿಯ ಬಗ್ಗೆ ಆಲೋಚಿಸುತ್ತಿದ್ದೆ. ಯಾವಾಗ ಯಾವ ನೌಕರಿಗೆ ಅರ್ಜಿ ಹಾಕಬೇಕು? ಯಾವ ರೀತಿಯ ಪ್ರಯತ್ನ ಮಾಡಬೇಕು? ಈ ಬಗ್ಗೆ ಎಂತಹ ಕಲ್ಪನೆಗಳೂ ನನ್ನಲ್ಲಿರಲಿಲ್ಲ. ನನ್ನ ಗೆಳೆಯರು, ನನಗಿಂತ ಹಿಂದಿನ ತರಗತಿಯಲ್ಲಿ ಓದುತ್ತಿರುವವರು ಗೆಜೆಟ್ ನೋಡುವುದನ್ನು, ಪತ್ರಿಕೆ ಓದುವುದನ್ನು ಮಾಡಿಯೇ ಮಾಡುತ್ತಿದ್ದರು. ನನಗೆ ಅಂತಹ ಯಾವುದರ ಬಗ್ಗೆಯೂ ಕಾಳಜಿಯಿರಲಿಲ್ಲ.


ನನಗೀಗ ಆಶ್ಚರ್ಯವೆನಿಸುತ್ತದೆ : ಆಗ ನಾನೇಕೆ ಹಾಗಿದ್ದೆನೆಂದು. ಅಪ್ಪ ಒಂದೇ ಸಮನೆ ನೌಕರಿಗಾಗಿ ಪರಿತಪಿಸುತ್ತಿದ್ದ. ಅಣ್ಣ ನೌಕರಿಯು ಕೈಗೂಡದ ವಾಸ್ತವ ನನ್ನೆದುರು ಇತ್ತು. ಆದರೂ ನಾನು ನೌಕರಿಯ ಬಗ್ಗೆ ನಿರ್ಲಿಪ್ತನಾಗಿದ್ದೆ. ಒಮ್ಮೆ ಗೆಳೆಯ ರಾಮಣ್ಣ ಮದಗುಣಕಿಯ ಒತ್ತಾಯಕ್ಕೆ ಮಣಿದು ಅವನ ಜೊತೆ ಬಾಗಲಕೋಟೆಯಲ್ಲಿ ನಡೆಯುತ್ತಿದ್ದ ಸೈನಿಕ ಭರ್ತಿಗೆ ಹಾಜರಾಗಿದ್ದೆ. ಭರ್ತಿಗಾಗಿ ಸರತಿಯಲ್ಲಿ ನಿಲ್ಲುವ ಮುನ್ನ ಅರ್ಧ ಡಜಣ್ ಬಾಳೆಹಣ್ಣು ತಿಂದರೂ ತೂಕದಲ್ಲಿ ಕಡಿಮೆಯಾದೆ. ಎತ್ತರದಲ್ಲಿಯೂ ಕಡಿಮೆಯಾದೆ. ಎದೆ ಅಳತೆವರೆಗೆ ಮುಂದೆ ಹೋದ ಗೆಳೆಯನೂ ವಾಪಸ್ ಬಂದ. ಇಬ್ಬರೂ ಕೂಡಿ ನರಗುಂದಕ್ಕೆ ಮರಳಿಬಂದೆವು. ಅಂದಿನಿಂದ ನೌಕರಿ ವಿಷಯಕ್ಕೆ ತಲೆಹಾಕಲೇಇಲ್ಲ. ಅಪ್ಪನ ಮಹದಾಸೆ, ಅಮ್ಮನ ಹಂಬಲ, ಕಾಕಾ ಚಿಗವ್ವ ಇವರ ಬಯಕೆ ನನಗೆ ಅರ್ಥವಾಗಲೇ ಇಲ್ಲ. ನನ್ನ ಮನಸ್ಸನ್ನು ಹೊಕ್ಕು ಕಾಡಲೇ ಇಲ್ಲ. ನನ ಜೊತೆಗಾರರು ಆರೋಗ್ಯ ಸಹಾಯಕ, ಎಸ್.ಡಿ.ಸಿ. ಹುದ್ದೆಗೆ ನನ್ನೆದುರಲ್ಲಿಯೇ ಅರ್ಜಿ ಹಾಕುತ್ತಿದ್ದರು. ನಾನು ಮಾತ್ರ ಸುಮ್ಮನಿರುತ್ತಿದ್ದೆ. ಅವರಂತೆ ನನಗೆ ನೌಕರಿಯ ಸೆಳೆತ ಇರಲೇ ಇಲ್ಲ. 


 ತಮ್ಮನಗೌಡ ಡಾಕ್ಟರ್ ಎದಿ ಫೋಟೊ ತೆಗಸಬೇಕಂತ ಹೇಳ್ಯಾರ, ಹುಬ್ಬಳ್ಳಿಗೆ ಹೋಗಬೇಕಂತ, ತಮ್ಮ ಅಯ್ಯನಗೌಡನ್ನ ಬನಹಟ್ಟಿಗೆ ಬಾ ಅಂದಾರ, ಚೀಟಿ ಬರದಕೊಡತಾರಂತ ಎಂದು ಅಪ್ಪ ಹೇಳಿದ ವಾರದ ಒಳಗೆ ಕಾಕಾ ಅಪ್ಪನನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಬಂದ. ಎಕ್ಷರೇ ಸಮೇತ ತಮ್ಮನಗೌಡ ಡಾಕ್ಟರ್ ಹತ್ತಿರ ತೋರಿಸಿದ. ಔಷಧಿ ತೆಗೆದುಕೊಂಡ ಅಪ್ಪ ನಾಲ್ಕಾರು ದಿನದಲ್ಲಿ ಮತ್ತೆ ತನ್ನ ಕಾಯಕದಲ್ಲಿ ತೊಡಗಿದ.    

ಶಿವನಗೌಡಪ್ಪಗ ಎಳ್ಳಷ್ಟು ತಿರಾರ ಇಲ್ಲ. ಮನೆ ಪರಿಸ್ಥಿತಿ ನೋಡಲಾರದ ಒಡ್ಡು ಹಾಕಸ್ತೇನಂತ ಕುಣಿದಾಡತಾನ ಎಂದು ಅಮ, ಅಪ್ಪನ ಉತ್ಸಾಹವನ್ನು ಸಿಟ್ಟಿನ ಮಾತಿನಲ್ಲಿ ಹೊರ ಹಾಕುತ್ತಿದ್ದಳು. ಊರ ಮುಂದಿನ ಹೊಲದ ಒಡ್ಡು ಸವೆದಿತ್ತು. ಆ ವರ್ಷ ಬೆಳೆ ಸರಿ ಬಂದಿರಲಿಲ್ಲ. ಹಾಗೂ ಹೀಗೂ ಮಾಡಿ ಮನೆ ಖರ್ಚು ತೂಗಿಸ ಬೇಕಾಗಿತ್ತು. ಕಾಕಾ ಮತ್ತು ಅಮ್ಮ ಈ ವರ್ಷ ಬೇಡವೆಂದರೂ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಒಡ್ಡು ಹಾಕಿಸಿಬಿಟ್ಟ. ನಾಲ್ಕಾರು ದಿನಗಳಲ್ಲಿ ಹಗೆ ತೆಗೆದು ಕೂಲಿಕಾರರಿಗೆ ಜೋಳ ಅಳೆದು ಕೊಟ್ಟ. ಇದ್ದ ಜೋಳವನ್ನೆಲ್ಲ ಕೂಲಿಗೆ ಕೊಟ್ಟದ್ದರಿಂದ ಆಪತ್ಕಾಲದ ಖರ್ಚಿಗೆ ಕಾಕಾ ಅಲ್ಲಿ ಇಲ್ಲಿ ಸಾಲಮಾಡಬೇಕಾಯಿತು. ಅಪ್ಪ, ತನ್ನ ಹೊಲದ ಕೆಲಸದ ಪ್ರಶ್ನೆ ಬಂತೆಂದರೆ ಯಾರ ಮಾತನ್ನು ಕೇಳುತ್ತಿರಲಿಲ್ಲ. ಹೀಗೆ ಅಮ್ಮ ಅಪ್ಪನ ಮಧ್ಯೆ ಮನಸ್ತಾಪಗಳು ನಡೆಯುತ್ತಿದ್ದವು. ಮತ್ತೆ ಕೆಲವೇ ದಿನಗಳಲ್ಲಿ ತಿಳಿಯಾಗುತ್ತಿದ್ದವು. ಆಪ್ಪನ ಕೃಷಿ ಕಾಳಜಿ ಅಮ್ಮನಿಗೆ ಅರ್ಥವಾಗುತ್ತಿತ್ತು. ಆದರೆ ಪ್ರಸಂಗ ಎಂತಹದು ಎಂದು ಅಪ್ಪ ವಿಚಾರ ಮಾಡುತ್ತಿರಲಿಲ್ಲ ಇದು ಅಪ್ಪನ ಮುಗ್ಧತನವೊ ಅಥವಾ ಹಟದ ರೂಪದಲ್ಲಿ ಹೊರಬೀಳುವ ಪ್ರತಿಭಟನೆಯೊ ತಿಳಿಯುತ್ತಿರಲಿಲ್ಲ. 


ನನ್ನ ಕಾಲೇಜು ಶಿಕ್ಷಣ ಮತ್ತು ಟಾಯ್ಪಾಯ್ಡ:


ನರಗುಂದ ಕಾಲೇಜಿನಲ್ಲಿ ಬಿ.ಎ. ಎರಡರಲ್ಲಿ ಓದುವಾಗ ಗೆಳೆಯರ ಒತ್ತಾಯಕ್ಕೆ ಮಣಿದು (ಯಲ್ಲಪ್ಪ ಹನಸಿ) ಕಾಲೇಜು ಚುಣಾವಣೆಗೆ ನಿಲ್ಲಬೇಕಾಯಿತು. ಬಹಳ ತುರುಸಿನಿಂದ ನಡೆದ ಈ ಚುನಾವಣೆಯಲ್ಲಿ ಒಂದೇ ಮತದ ಅಂತರದಲ್ಲಿ ಸೋತೆ. ಆದರೆ ನಮ್ಮ ತಂಡದ ಆರು ಜನ ಗೆದ್ದು ಬಂದಿದ್ದರು. ಅಲ್ಲದೆ ಪ್ರಧಾನ ಕಾರ್ಯದರ್ಶಿಯಾಗಿ ನಮ್ಮ ಪಕ್ಷದ ಯಲ್ಲಪ್ಪ ಹನಸಿ ಗೆದ್ದು ಬಂದ. ಊರಲ್ಲೆಲ್ಲೆ ಮೆರವಣಿಗೆ ನಡೆಯಿತು. ಸಂಭ್ರಮದಿಂದ ವಿಜಯೋತ್ಸವ ಆಚರಿಸಿ ಬೋರ್ಡಿಂಗಗೆ ಬಂದು ಮಲಗಿಬಿಟ್ಟೆ. ಎರಡು ಮೂರು ದಿನ ಜ್ವರ ಬಿಡಲೇ ಇಲ್ಲ.  ಸೋತದ್ದಕ್ಕೆ ಹೊಟ್ಟಿಬ್ಯಾನಿ ಹಚ್ಚಿಕೊಂಡಾನ ಎಂದು ಗೆಳೆಯರು ಆಡಿಕೊಳ್ಳುವ ಮಾತು ಮತ್ತು ಅದರ ಹಿಂದಿನ ಕಾಳಜಿ ಅರ್ಥವಾಗುತ್ತಿತ್ತು. 


ನರಗುಂದದಿಂದ ಅಮರಗೋಳಕ್ಕೆ ಬಂದೆ. ಮತ್ತೆ ಜ್ವರ ಬಂದವು. ಟಾಯ್ಪಾಯ್ಡ  ಜ್ವರ ಎಂದು ಡಾಕ್ಟರ ಹೇಳಿದರು. ಬಹಳ ಹೆದರಿಕೆಯಾಗಹತ್ತಿತು. ರಾತ್ರಿಯಲ್ಲ ನರಳುತ್ತ ಅಮ್ಮನನ್ನು ನೆನೆಸಹತ್ತಿದೆ. ಈ ಮಾತು ಕಡದಳ್ಳಿಯಲ್ಲಿದ್ದ ಅಮ್ಮನ ಕಿವಿಗೂ ಬಿತ್ತು. ಅಮ್ಮ ದಿನವೂ ಕಡದಳ್ಳಿಯಿಂದ ಅಮರಗೋಳಕ್ಕೆ ಬಂದು ರಾತ್ರಿಯಲ್ಲಿ ಇದ್ದು ಮುಂಜಾನೆ ಕಡದಳ್ಳಿಗೆ ಹೋಗುತ್ತಿದ್ದಳು. ಅಮ್ಮ ಇದ್ದಾಗ ಮಾತ್ರ ಸುರಕ್ಷಿತವೆನಿಸುತ್ತಿತ್ತು. ಹೀಗಾಗಿ ಅಮ್ಮನಿಗೆ ತೊಂದರೆ ಕೊಡುತ್ತಿದ್ದೆ. ಅಮ್ಮ ಹಗಲೆಲ್ಲ ಮನೆ ಮತ್ತು ಹೊಲದಲ್ಲಿ ಕೆಲಸ ಮಾಡಿ ರಾತ್ರಿ ಅಮರಗೋಳಕ್ಕೆ ಬರುತ್ತಿದ್ದಳು. ಆಗ ಶ್ರಾವಣ ಸಮಯ. ಆ ವರ್ಷ ಮುಂಗಾರಿಯಲ್ಲಿ ಹೆಸರು ಬೆಳೆ ಚೆನ್ನಾಗಿದ್ದವು. ಆಗ ಹೆಸರುಬುಡ್ಡಿ ಬಿಡಿಸುವ ಕೆಲಸ ಜೋರಿತ್ತು. ಅಂತಹ ಸಮಯದಲ್ಲಿ ನಾನು ಅಮ್ಮನಿಗೆ ಒತ್ತಾಸೆ ಮಾಡಿ ಕರೆಸಿಕೊಳ್ಳುತ್ತಿದ್ದೆ. 


ಸತತ ಏಳು ದಿನ ಜ್ವರ ಬಂದು ಕಂಗಾಲಾದೆ. ಹುಣಶಿಕಟ್ಟಿ ಡಾಕ್ಟರ ನಾಲ್ಕು ತಾಸಿಗೊಮ್ಮೊಮ್ಮೆ ಗುಳಿಗಿ ಕೊಡಲು ಹೇಳಿದ್ದರು. ವಿಪರೀತ ಹೆದರಿಕೆಯಾಗುತ್ತಿತ್ತು. ಆಗ ಸಮಯ ಎಂಟು ಗಂಟೆಯಾಗಿರಬಹುದು. ಅಂತಹ ಜ್ವರ ಬಂದ ವೇಳೆಯಲ್ಲಿಯೇ ಅಪ್ಪ ಬಂದು ಎದುರಿಗೆ ಕುಳಿತಿದ್ದ. ಚಿಗವ್ವ ಹಣೆ ಮೇಲೆ ತಣ್ಣೀರ ಪಟ್ಟಿ ಹಾಕಿ  ಉಪಚರಿಸುತ್ತಿದ್ದಳು. ಸೊರಗಿ ಹಾಸಿಗೆಗೆ ಹತ್ತಿಕೊಂಡು ಮಲಗಿದ್ದ ನನ್ನನ್ನು ನೋಡಿ ಕಣ್ಣೀರು ತೆಗೆದ. ನನಗೆ ಜ್ವರದ ತಾಪ ಮತ್ತು ಅಪ್ಪನ ಕಣ್ಣೀರು, ಅಮ್ಮನ ಓಡಾಟ ಬಹಳ ಸಂಕಟವನ್ನುಂಟು ಮಾಡಿದವು. ಆದರೆ ಏನು ಮಾಡುವುದು ಮೌನವಾಗಿ ಅನುಭವಿಸುವುದೊಂದೇ ಆಗ ಸಾಧ್ಯವಿತ್ತು.


 ಮಗ ಟಾಯ್‌ಪಾಯ್ಡ ಆಗಿ ಮಲಗಿದರೂ ಶಿವಗೌಡರು ಮಗನ್ನ ನೋಡಾಕ ಹೋಗಿಲ್ಲ ಅಂತ ಯಾರೊ ಅಂದಿದ್ದರಂತೆ. ಆ ಮಾತು ಅಪ್ಪನಿಗೆ ನೋವು ಸಂಕಟವುಂಟು ಮಾಡಿತ್ತು. ಕತ್ತಲಲ್ಲಿ ಬಂದು ಕತ್ತಲಲ್ಲಿ ಮರಳಿ ಹೋಗಿಬಿಟ್ಟ. ದುಃಖಿಸುತ್ತ ನಡದೇ ಬಿಟ್ಟ-ಚಿಗವ್ವ ಮಾಡಿದ ಕಾಫಿಯನ್ನು ಕುಡಿಯದೇ. 


ಇಪ್ಪತ್ತೊಂದು ದಿನಗಳೆದ ಮೇಲೆ ಅಮರಗೋಳದಿಂದ ಕಡದಳ್ಳಿಗೆ ಬಂದೆ. ಸ್ವಲ್ಪು ಆರಾಮು ಆಗಿತ್ತು. ನರಗುಂದದ ಸಹಪಾಠಿ ಗೆಳೆಯರು ಅಮರಗೋಳಕ್ಕೆ ಬಂದು ಹೋಗುತ್ತಿದ್ದರು. ಒಂದೆರಡುಸಲ ಕಡದಳ್ಳಿಗೂ ಬಂದುಹೋದರು. ಕಡದಳ್ಳಿಯಲ್ಲಿ ಎರಡು ತಿಂಗಳು ಉಪಚಾರಹೊಂದಿದ ಮೇಲೆ ಅರಾಮಾದೆ. ಅಷ್ಟೊತ್ತಿಗೆ ದೀಪಾವಳಿ ರಜೆ ಬಂತು. ಈ ಟಾಯ್‌ಪಾಯ್ಡ ನನ್ನ ಶಿಕ್ಷಣವನ್ನು ಎಲ್ಲೆ ಅರ್ಧಕ್ಕೆ ನಿಲ್ಲಿಸುವುದೋ ಎಂದು ಅಪ್ಪನಿಗೆ ಚಿಂತೆಯಾಗಿತ್ತು. ಅಣ್ಣ ಕೆಲಸಕ್ಕೆ ಸೇರುವುದು ಸಾಧ್ಯವಿರಲಿಲ್ಲ. ಈಗ ನನ್ನ ಶಿಕ್ಷಣವೂ ಅರ್ಧಕ್ಕೆ ನಿಂತರೆ ಹೇಗೆ ಎನ್ನುವುದು ಅಪ್ಪನಿಗೆ ಕಳವಳವುಂಟುಮಾಡುತ್ತಿತ್ತು.


ಮಳೆ ಮತ್ತು ಹೊಲ ಮನೆ:


ಮೋಡ ಕವಿದು ಗುಡುಗು ಸಿಡಿಲು ಮಳೆ ಸೂಚನೆ ನೀಡಿದರೆ ಸಾಕು ಅಪ್ಪ ಗೋಣಿ ಚೀಲ ಕುಂಚಿಗೆ ಹೊತ್ತು ಕೈಯಲ್ಲಿ ಸಲಿಕೆ ಹಿಡಿದು ಸಿದ್ಧನಾಗಿ ಬಿಡುತ್ತಿದ್ದ. ಮಳೆ ಬೀಳುವಾಗಲೇ ಹೊಲಕ್ಕೆ ಹೋಗಿ ತನ್ನ ಕಾಯಕ ಆರಂಭಿಸುತ್ತಿದ್ದ. ಊರೊಳಗಿನ ನೀರು ರಸ್ತೆ ಆಳದಲ್ಲಿ ಜೋಡಿಸಿದ ಪೈಪುಗಳಲ್ಲಿ ಹರಿದು ಸರಿಯಾಗಿ ಹೊಲ ಸೇರುತ್ತದೆಯೆಂಬುದನ್ನು ಕಣ್ಣಾರೆ ಕಂಡು ಮುಂದೆ ಸಾಗುತ್ತಿದ್ದ. ಒಂಡು ಅಡಿ ಅಗಲದ ಪೈಪುಗಳನ್ನು ತಂದು ಜೋಡಿಸಿ ಕಡಿಮೆ ಮಳೆ ಯಾದಾಗಲೂ ಊರಮುಂದಿನ ಒಂದೆಕರೆ ಹೊಲ ನೀರಾಡುವಂತೆ ವ್ಯವಸ್ಥೆ ಮಾಡಿದ್ದ. ರಭಸದಿಂದ ಬಂದ ನೀರು ಒಮ್ಮೊಮ್ಮೆ ಅಡ್ಡ ಹಾಕಿದ್ದ ಒಡ್ಡನ್ನು ಒಡೆದು ಬೆಣ್ಣಿಹಳ್ಳದ ದಾರಿಯಲ್ಲಿ ಮುನ್ನುಗ್ಗಿಬಿಡುತ್ತಿತ್ತು. ಪೈಪಿನಲ್ಲಿ ಸಿಕ್ಕ ಕಸಕಡ್ಡಿಗಳಿಂದ ನೀರು ಸರಾಗವಾಗಿ  ಸಾಗದೆ ಒಡ್ಡು ಒಡೆಯಲು ಕಾರಣವಾಗುತ್ತಿತ್ತು. 


ಊರಮುಂದಿನ ಪಟ್ಟಿಯಿಂದ ಹಿಡಿದು ಚಳ್ಳಮರದ ಹೊಲದ ವರೆಗೂ ತಿರುಗಾಡಿ ಇಲಿ ಗುದ್ದುಗಳನ್ನು ಮುಚ್ಚಿ ಎರಕಲಬೀಡಿಗಳನ್ನು ತುಳಿದು ನೀರುಣ್ಣುವಂತೆ ಮಾಡುತ್ತಿದ್ದ. ಹೊಲದಿಂದ ಮನೆಗೆ ಬಂದವನೇ ಮಾವ ಇಲ್ಲವೆ ಅಣ್ಣನನ್ನು ಕರಕನ ಹೊಲಕ್ಕೆ ಕಳಿಸುತ್ತಿದ್ದ. ಹೊಲದ ಒಡ್ಡಿಗೆ ಧಕ್ಕೆಯಾದ, ಧಕ್ಕೆಯಾಗಿಲ್ಲದ ಬಗ್ಗೆ ತಿಳಿಯುತ್ತಿದ್ದ. ಅಗತ್ಯಬಿದ್ದರೆ ಆಗಿಂದಾಗ ಆ ಹೊಲಕ್ಕೂ ಹೊರಟುಬಿಡುತ್ತಿದ್ದ. ನನಗೂ ಸಹ ಅಪ್ಪನಂತೆ ಮಳೆಯಲ್ಲಿ ಹೊಲಕ್ಕೆ ಹೋಗುವ ಆಸೆಯಾಗುತ್ತಿತ್ತು. ಮಾವನ ಜೊತೆ ಹೋಗಿ ನನ್ನಾಸೆಯನ್ನು ಪೂರೈಸಿಕೊಳ್ಳುತ್ತಿದ್ದೆ. ನೀರು ಹೊಕ್ಕ ತಕ್ಷಣ ಗುದ್ದಿನಿಂದ ಹೊರಬಿದ್ದ ಇಲಿಗಳನ್ನು ಓಡಾಡಿ ಬಡೆಯುವ ಕೆಲಸವಂತೂ ಮಜ ನೀಡುತ್ತಿತ್ತು. ತೊಯ್ಸಿಕೊಂಡು ಮನೆಗೆ ಬಂದಾಗ ಅಪ್ಪನಿಗಾಗಿ ಮಾಡಿದ ಶುಂಟಿ ಕಾಡೆ ಇರುತ್ತಿತ್ತು. ಒಲೆಮುಂದೆ ಕುಳಿತು ಕುಡಿದು ನನ್ನ ಕೆಲಸದ ಬಗ್ಗೆ ನಾನೆ ಒಳಗೊಳಗೆ ಅಭಿಮಾನ ಪಡುತ್ತಿದ್ದೆ. 


ಅಪ್ಪ ಶುಂಟಿ ಕುಡಿಯುವದಕ್ಕಿಂತ ಮುಂಚೆಯೇ ದನದ ಹಕ್ಕಿಯಲ್ಲಿ - ಕುಡ್ಡ ನೊಣಗಳ ಕಾಟಕ್ಕೆ-ಚಿಪ್ಪಾಡಿ ಹಾಕಿ ಉರಿ ಹಚ್ಚಿರುತ್ತಿದ್ದ. ಅದರ ಮೇಲೆ ಬೇವಿನ ತಪ್ಪಲ ಹಾಕಿ ಹೊಗೆ ಎಬ್ಬಿಸಿಬಿಡುತ್ತಿದ್ದ. ಮಳೆಗಾಲದಲ್ಲಿ ಹೊತ್ತುಮುಳುಗುವ ಸಮಯದಲ್ಲಿ ಹೆಚ್ಚು ಕಡಿಮೆ ಎಲ್ಲರ ಮನೆಯಲ್ಲಿ ಹೀಗೆ ಹೊಗೆ ಹಾಕುತ್ತಿದ್ದರು. ದನಗಳಿಗೆ ಕಡಿಯುವ ಕುಡ್ಡನೊಣ ಮತ್ತು ಸೊಳ್ಳೆಗಳಿಗೆ ರೈತರು ಕಂಡುಕೊಂಡ ಉಪಾಯವಿದು.


ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಮಣ್ಣಿನ ಮೆಲ್ಮುದ್ದಿ ಹೊಂದಿದ ಮನೆಗಳನ್ನು ದುರಸ್ತಿ ಮಾಡಿಕೊಳ್ಳಬೇಕಾಗುತ್ತದೆ. ಮಾಳಿಗೆ ಕಸಗೂಡಿಸಿ, ಇರುವೆಯಾಡಿದ ಜಾಗವನ್ನು ಮುಚ್ಚಿ ರಂದ್ರವಿರುವ ತೆಂಗಿನ ಚಿಪ್ಪನ್ನು ಬುಡಮೇಲಾಗಿ ಹಾಕಿ ರಕ್ಷಣೆಮಾಡಬೇಕು. ಪ್ರತಿಯೊಬ್ಬರ ಮಾಳಿಗೆಯ ಮೇಲೂ ಬೆಳಕಿಂಡಿಯ ಒಡೆದ ಗಡಿಗೆ, ತೆಂಗಿನ ಚಿಪ್ಪುಗಳು ಇದ್ದೇ ಇರುತ್ತಿದ್ದವು. ವಾರಗಟ್ಟಲೇ ಮಳೆ ಹತ್ತಿದರೆ ಮಣ್ಣಿನ ಮಾಳಿಗೆಗಳು ಜಂಪಲಿಡುವುದು ಸಾಮಾನ್ಯ. ಜಿಟಿ ಜಿಟಿ ಸೋರುವುದು. ಆಗೊಂದು ಹನಿ ಈಗೊಂದು ಹನಿ ತಟಗುಟ್ಟುವುದು ನಡದೇ ಇರುತ್ತದೆ.  ಹೀಗೆ ಮಳೆ ಹತ್ತಿದಾಗ ಮಾಳಿಗೆ ಮೇಲೆ ಬೆಳೆದ ಹುಲ್ಲು ನೀರು ಸೋರುವುದಕ್ಕೆ ಮತ್ತಷ್ಟು ಅನುಕೂಲ ಮಾಡುತ್ತದೆ. ಆದ್ದರಿಂದ ಅದನ್ನು ಕೀಳಬೇಕಾದರೆ ಎಚ್ಚರಿಕೆ ವಹಿಸಬೇಕು. ಮಳೆ ಬರುವುದಿಲ್ಲ ಎರಡು ಮೂರು ದಿನ ಎಂದು ಖಾತ್ರಿಯಾದ ಮೇಲೆ ಹುಲ್ಲು ಕಿತ್ತು ಮಾಳಿಗೆ ಮಣ್ಣನ್ನು ಸರಿಯಾಗಿ ಬಡಮಣಿಯಿಂದ ಬಡೆದು ಗಟ್ಟಿ ಮಾಡಬೇಕು. ಅಪ್ಪ ಈ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದ. ಇಲ್ಲವೆ ಮಾಡಿಸುತಿದ್ದ. ಅಪ್ಪ ಮಾವನ ಜೊತೆ ಇಂತಹ ಕೆಲಸ ಮಾಡಿದ ಅನುಭವ ನನಗೂ ಇದೆ.


ಒಕ್ಕಲುತನ ಮನೆತನದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು ಕೆಲವು ಚಿರಪರಿಚಿತ ಇನ್ನು ಕೆಲವು ಕೇವಲ ಪರಿಚಿತ. ನಟ್ಟು ಕಡಿಯುವಾಗ, ರಂಟೆ ಕುಂಟೆ ಹೊಡೆಯುವಾಗ, ಬಿತ್ತುವಾಗ, ಅಕ್ಕಡಿ ಹಾಕುವಾಗ, ಜೋಳ ಗೋದಿ ಅಗಸಿ ಕಡಲೆ ಕೀಳುವಾಗ, ನೆವಣಿ ತೆನೆ ಚೂಟಿ ಬಿಸಿಲಿಗೆ ಹಾಕಿ ಅಂಗಳದಲ್ಲಿ ರೂಲು ಉರುಳಿಸಿ ರಾಶಿ ಮಾಡುವಾಗ, ಕುಶಿಬೆ ಬಡಿದು ಒಕ್ಕಲು ಮಾಡುವಾಗ, ಎಡೆ ಹೊಡೆಯುವಾಗ, ಕಳೆ ತೆಗೆಯುವಾಗ, ಒಕ್ಕಲುತನದಲ್ಲಿಯೇ ಅತ್ಯಂತ ಕಠಿನವಾದ ಹತ್ತಿ ಕಟ್ಟಿಗೆ ಹರಗುವಾಗ, ಹಿತ್ತಲು ಊರಮುಂದಿನ ಹೊಲಕ್ಕೆ ಬೇಲಿ ಹಚ್ಚುವಾಗ ಅಪ್ಪನ ಜೊತೆ ಇದ್ದು ಒಂದಿಷ್ಟು ಅನುಭವ ಪಡೆದಿರುವೆ. ಈ ಎಲ್ಲ ಕೆಲಸಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದೆ. ಸಾಧ್ಯವಿಲ್ಲದಿದ್ದರೆ ಅತ್ಯಂತ ಆಸಕ್ತಿಯಿಂದ ಗಮನಿಸುತಿದ್ದೆ. ಪ್ರತಿಯೊಂದನ್ನೂ ಕುತೂಹಲದಿಂದ ನೋಡುವ, ತಿಳಿಯುವ ಹುಚ್ಚು ನನಗೆ ಮೊದಲಿನಿಂದ ಇದ್ದೇ ಇದೆ. 


ಕಳ್ಳಿ ಮತ್ತು ಹಗೆ :


ಹಿತ್ತಲ, ಕರಕನ ಹೊಲದ ಕಳ್ಳಿ ಕಡಿಯುವಾಗ ಅಪ್ಪ ಮುಖ ಕೈ ಕಾಲುಗಳಿಗೆ ವಿಭೂತಿ ಹಚ್ಚಿಕೊಳ್ಳುತ್ತಿದ್ದ. ಕಡಿಯುವ ಕೆಲಸದಲ್ಲಿ ಭಾಗಿಯಾದವರೆಲ್ಲರಿಗೂ ಹಚ್ಚಿಕೊಳ್ಳಲು ಹೇಳುತ್ತಿದ್ದ. ಸುರಕ್ಷತೆಯ ದೃಷ್ಟಿಯಿಂದ ಅದು ಎಷ್ಟು ಮಹತ್ವದ್ದು ಎಂದು ಈಗ ಅರ್ಥವಾಗುತ್ತದೆ. ಕಳ್ಳಿ ಹಾಲು ಮುಖಕ್ಕೆ ಸಿಡಿದರೆ ಗಾಯವಾಗಿ ಕಿರಿಕಿರಿಯಾಗುತ್ತದೆ. ಜನಪದರ ಈ ಉಪಾಯಕ್ಕೆ ಬೆರಗಾಗಲೇಬೇಕು. ಹಗೆ ಇಳಿದು ಜೋಳ, ಗೋದಿ ತೆಗೆದ ನಂತರ ಎಲ್ಲಪ್ಪನಿಗೆ ಬೆಲ್ಲದ ಕಣ್ಣಿ ಮತ್ತು ನಾಲ್ಕು ಉಳ್ಳಿಗಡ್ಡಿಯನ್ನು ತಿನಿಸುತ್ತಿದ್ದರು. ಆವರೆಗೆ ಸರಿಯಾದ ವಾತಾಯನವಿಲ್ಲದೆ ಬಳಲಿದ ದೇಹಕ್ಕೆ ಬೆಲ್ಲ ಮತ್ತು ಉಳ್ಳಿಗಡ್ಡಿಗಳು ಚೈತನ್ಯ ನೀಡುತ್ತಿದ್ದವು. ಹಗೆ ಬಾಯ್ದಂಡೆ ಮೇಲಿನ ಮಣ್ಣು ತೆಗೆದು ಮುಚ್ಚಿದ ಕಲ್ಲನ್ನೆತ್ತಿ ಮೂರು ನಾಲ್ಕು ತಾಸುಗಳ ನಂತರ ಒಳಗೆ ಇಳಿಯಲು ಸಾಧ್ಯವಾಗುತ್ತಿತ್ತು. ಇಲ್ಲವಾದರೆ ಒಳಗಿನ ಕಾವು ಉಸಿರಾಟಕ್ಕೆ ತೊಂದರೆ ಕೊಡುತ್ತಿತ್ತು. ಕಾವು ಕಡಿಮೆಯಾಗಿದೆ ಇಲ್ಲವೆನ್ನುವುದನ್ನು ಕಂಡು ಹಿಡಿಯಲು ಅಪ್ಪ ತನ್ನ ಪಟಗವನ್ನೇ ಬಿಚ್ಚಿ ಹುರಿಹಾಕುತ್ತ ಹಗೆ ಒಳಗೆ ಇಳಿಬಿಟ್ಟು ಪರೀಕ್ಷಿಸುತ್ತಿದ್ದ. ಪ್ರತಿ ಸಾರೆ ಇಳಿಯುವಾಗಲೂ ಒಳಗಿನ ತಾಪವನ್ನು ಪರೀಕ್ಷಿಸಿಯೇ ಇಳಿಸುತ್ತಿದ್ದ. ಒಮ್ಮೊಮ್ಮೆ ತುರ್ತು ಇದ್ದಾಗ ತಾನೆ ಇಳಿಯುತ್ತಿದ್ದ.  ಒಳಗೆ  ಹಗೆಯ ದಂಡೆಯ ಸುತ್ತಲೂ ಕಟ್ಟಿದ ದಿಂಡನ್ನು ಸರಿಪಡಿಸಿ ಇನ್ನೂ ಎಷ್ಟು ಜೋಳ ಉಳಿದಿವೆ ಎಂಬುದನ್ನು ತಿಳಿದು ಮೇಲೆ ಹತ್ತುತ್ತಿದ್ದ. ಅಗತ್ಯವಿದ್ದಾಗಲೊ ಕುತೂಹಲಕ್ಕೊ ಒಂದೆರಡು ಬಾರಿ ಹಗೆಯಲ್ಲಿ ಇಳಿದು ಹಗೆ ಒಳಗಿನ ಸ್ವರೂಪವನ್ನು ಕಣ್ಣಾರೆ ಕಂಡಿದ್ದೇನೆ. ಹೊಸ ಹಗೆ ಕಡಿಯುವಾಗಲೂ ಕೆಳಗಿಳಿದು ನೋಡುತ್ತಿದ್ದೆ. ಪಿಂಜಾರ ಹುಚ್ಚಪ್ಪ, ಹರಿಜನ ಮನಮಂತ ಎರಡು ಚೀಲ ಜೋಳಕ್ಕೆ ಗುತ್ತಿಗೆ ಹಿಡಿದು  ಕಡಿಯುವಾಗ ಅದರ ವಿಧಿ ವಿಧಾನಗಳನ್ನು ನೋಡಿರುವೆ. ಇದು ನಮ್ಮೂರಿನ ಹಗೆಯ ಕಥೆಯಾದರೆ ಅಮರಗೋಳದಲ್ಲಿ ಹಗೆಗಳನ್ನು ಹಾಳು ಮಣ್ಣಿನ ಹೆಂಟೆಯಿಂದ ಕಟ್ಟುತ್ತಿದ್ದರು. ಏಕೆಂದರೆ ಅಮರಗೋಳದ ಮಣ್ಣು ಕಡದಳ್ಳಿಯಂತೆ ಹಳದಿ ಕಟಕ ಮಣ್ಣಲ್ಲ. ಬೆಣ್ಣೆಯಂತಹ ಹಾಳಮಣ್ಣು. ಹಾಳಮಣ್ಣಿನಲ್ಲಿ ಹಗೆ ಕಡಿಯಲು ಬರುವುದಿಲ್ಲ.


ಕರಿ ಜಾಲಿ ಮತ್ತು ಕಂಬಳಿ


ಕರಿಜಾಲಿ, ಕಂಬಳಿ ಇರದೇ ಹೋದರೆ ಒಕ್ಕಲುತನ ನಡೆಯುವುದೇ  ಕಷ್ಟ. ಪ್ರತಿ ವರ್ಷ ಚಳಿಗಾಲ ಮುಗಿಯುವ ಹೊತ್ತಿಗೆ ಕುರಿಗಾರರು ತಪ್ಪದೆ ನಮ್ಮ ಜಾಲಿ ಮೇಯಿಸಲು ಬರುತ್ತಿದ್ದರು. ತಡಸಿ, ತೆಪ್ಪಸಕಟ್ಟಿ ಇಲ್ಲವೆ ಬೇರೆ ಊರಿನ ಕುರಿಗಾರರು ಕರಕನ ಹೊಲ ಮತ್ತು ಹಳ್ಳದ ಹೊಲದ ಜಾಲಿಯನ್ನು ಉಣ್ಣಿ ಕೊಡುವ ಕರಾರಿನ ಮೇಲೆ  ಹಿಡಿಯುತ್ತಿದ್ದರು. ವರ್ಷಕ್ಕೆ ಎರಡು ಕಂಬಳಿಯಾಗುವಷ್ಟು ಉಣ್ಣಿ ಬಂದೇ ಬರುತ್ತಿತ್ತು. ಒಂದು ಕಂಬಳಿಗೆ ಪಡಿ ಜೋಳದ ( ನಾಲ್ಕು ಸೇರು) ತೂಕ ಉಣ್ಣಿ ಬೇಕಾಗುತ್ತಿತ್ತು. ಚಿಗಿತು ಹೂಬಿಟ್ಟು ಹಾಲತುಂಬಿದ ಜಾಲಿಕಾಯಿ ಎಂದರೆ ಕುರಿಗೆ ಎಲ್ಲಿಲ್ಲದ ಪ್ರೀತಿ. ಅದು ಉಣ್ಣಿಯಲ್ಲಿ ಬಿಳಿ(ನೆರೆ) ಉಣ್ಣಿಗಿಂತ ಕರಿ ಉಣ್ಣಿಗೆ ಮರಿ ಕರಿ ಉಣ್ಣಿಗೆ ಹೆಚ್ಚಿನ ಬೆಲೆ. ಮಾತಾಡುವಾಗ ಅಪ್ಪ ಎರಡೂ ಕರಿ ಉಣ್ಣಿಯಂದೇ ಹೇಳುತ್ತಿದ್ದ. ಕುರಿಗಾರರೂ ಒಪ್ಪಿರುತ್ತಿದ್ದರು. ಆದರೆ ಉಣ್ಣಿ ಕೊಡುವಾಗ ಮಾತ್ರ ಚೀಲದಲ್ಲಿ ತುಂಬಿತಂದು ಮೇಲೆ ಕರಿ ಉಣ್ಣಿ ಇಟ್ಟು ಒಳಗೆ ನೆರೆ ಉಣ್ಣಿ ತುಂಬಿರುತ್ತಿದ್ದರು. ಎಕೆಂದರೆ ಕರಿ ಉಣ್ಣಿ ಹೆಚ್ಚು ಸಿಗುತ್ತಿರಲಿಲ್ಲ. ಮರಿ ಉಣ್ಣಿಯಂತೂ ಬಹಳ ಅಪರೂಪ.


ಮಳೆಗಾಲದಷ್ಟೊತ್ತಿಗೆ ಕುರುಬರು ತಂದು ಕೊಟ್ಟ ಉಣ್ಣಿಯನ್ನು ಬಿಸಿಲಿಗೆ ಹಾಕಿ, ಜಾಡಿಸಿ ಸ್ವಚ್ಛ ಮಾಡುತ್ತಿದ್ದ ಅಪ್ಪ ಹಿಂಜಲು ಕೊಡುತ್ತಿದ್ದ. ಮಾವಿನ ಹಣ್ಣಿನ ತೆಳು ಬಿದಿರಿನ ಬುಟ್ಟಿಗಳಲ್ಲಿ ಹಾಕಿಕೊಂಡು ಹಿಂಜಿ ಸಿದ್ಧ ಮಾಡಿದ ಕೂಡಲೆ ಪಿಟಿಗೆ ಹೊಡೆದು ಹಂಜಿ ತಯಾರಿಸಲು ಮಾವನಿಗೆ ಹೇಳುತ್ತಿದ್ದ. ಹಾಗೆ ತಯಾರಿಸಿದ ಹಂಜಿ ಮತ್ತು ಫಿರಕಿ (ದೊಡ್ಡತಕಲಿ)ಗಳನ್ನು ಗುಡಿ ಬಯಲಲ್ಲಿ, ಮನೆ ಮುಂದಿನ ಕಟ್ಟೆಯಲ್ಲಿ ಕುಳಿತ ಊರವರ ಕೈಯಲ್ಲಿ ಕೊಟ್ಟುಬಿಟ್ಟರೆ ಆಯಿತು. ಅರ್ಧ ತಾಸಿನಲ್ಲಿ ಒಂದು ಹಂಜಿ ಮುಗಿಸಿ ಬಿಡುತ್ತಿದ್ದರು. ಹೀಗೆ ಆರೆಂಟು ಹಂಜಿ ನೂತ ನಂತರ ಒಂದು ಫಿರಕಿ ತುಂಬುತ್ತಿತ್ತು. ಅಂತಹ ಹತ್ತು ಹನ್ನೆರಡು ಫಿರಕಿಗಳಾದಾಗ ಒಂದು ಕಂಬಳಿಗೆ ಬೇಕಾದ ನೂಲು ಸಿದ್ಧವಾಗುತ್ತಿತ್ತು. ಹಿಂಜಿದ ಉಣ್ಣಿಯನ್ನು ಪಿಟಿಗೆ ಹೊಡೆದು ಹಂಜಿ ತಾಯರಿಸಲು ಬಿದಿರಿನ ಬಿಲ್ಲನ್ನು ಬಳಸುತ್ತಿದ್ದರು. ಅರ್ಧ ಸೀಳಿದ ಬಿದಿರನ್ನು ಸಮನಾಗಿ ಕೆತ್ತಿ ಬಾಗಿಸಿ ನಾರಿನ ಹುರಿಯಿಂದ ಬಿಗಿಯಬೇಕೀಗುತ್ತಿತ್ತು. ಬಿಗಿದ ನಾರಿನ ದಾರಕ್ಕೆ ಜಾಲಿಗಿಡದ ಎಳೆ ಮುಗುಳನ್ನು ತಂದು ದಾರಕ್ಕೆ ತಿಕ್ಕಬೇಕಾಗುತ್ತಿತ್ತು. ಹಾಗೆ ತಿಕ್ಕಿದರೆ ಮಾತ್ರ ಉಣ್ಣಿ ದಾರಕ್ಕೆ ಅಂಟಿಕೊಳ್ಳುತ್ತಿರಲಿಲ್ಲ. ತಿಂಗಳೆರಡು ತಿಂಗಳಲ್ಲಿ ಉಣ್ಣಿ ನೂಲುವುದು ಮುಗಿಯುತ್ತಿತ್ತು. ಊರಿನ ಜನರೆಲ್ಲ ಈ ಕಾರ್ಯದಲ್ಲಿ ಕೈಗೂಡುತ್ತಿದ್ದರು. ಫಿರಕಿ ತುಂಬಿದ ನಂತರ ತೆಗೆದ ಕುಕ್ಕಡಿಗಳನ್ನು ಒಂದು ದಾರದಲ್ಲಿ ಪೋಣಿಸಿ ಗೂಟಕ್ಕೆ ನೇತು ಹಾಕಲಾಗುತ್ತಿತ್ತು. ಕಂಬಳಿ ನೇಯುವವರು ಮನೆವರೆಗೂ ಬಂದು ಹಾಸು ಹೊಯ್ಯಲು ಬೇಕಾದ ರೀತಿಯಲ್ಲಿ ಸಿದ್ಧ ಮಾಡಿಕೊಂಡು ಹೋಗುತ್ತಿದ್ದರು. ಹಾಗೆ ಸಿದ್ಧಪಡಿಸಿಕೊಳ್ಳಲು ಬೇಕಾದ ಕಟ್ಟಿಗೆಯ ಸಾಧನವನ್ನು ಅಜ್ಜ ಮಾಡಿಸಿಟ್ಟಿದ್ದ. ಅಪ್ಪ ಅದನ್ನು ಜೋಪಾನವಾಗಿ ಅಟ್ಟದ ಮೇಲಿಟ್ಟಿರುತ್ತಿದ್ದ. ಕಂಬಳಿ ನೂಲು ಕೊಡುವಾಗ ಮಾತ್ರ ಅದನ್ನು ಕೆಳಗಿಳಿಸುತ್ತಿದ್ದ. ಮತ್ತೆ ಮೇಲೆ ಇರಿಸಿಬಿಡುತ್ತಿದ್ದ. 


ನೂಲನ್ನು ಒಯ್ದು ಎರಡು ಮೂರು ತಿಂಗಳ ನಂತರ ನಾಗನೂರಿನ ನೇಕಾರ ನೇಯಲು ಪ್ರಾರಂಭಿಸುತ್ತಿದ್ದ. ಹಾಸು ಹಾಕಿ ಹೊಕ್ಕನ್ನು ಸೇರಿಸಿ ಹುಣಶೆ ರಬಡಿ ಹಚ್ಚಿ ಕಂಬಳಿ ನೇಯುವ ವಿಧಾನವನ್ನು ಅನೇಕ ಸಾರೆ ನೋಡಿರುವೆ. ಒಮ್ಮೊಮ್ಮೆ ನೋಡಲೆಂದೆ ಗೆಳೆಯರ ಜೊತೆ ಅಲ್ಲಿಯವರೆಗೆ ಹೋಗಿಬರುತ್ತಿದ್ದೆ. ನಮ್ಮ ಕಂಬಳಿ ಹಾಸಿನಲ್ಲಿದ್ದರಂತೂ ಹೆಚ್ಚು ಹೊತ್ತು ಅಲ್ಲಿಯೇ ನಿಂತು ಬರುತ್ತಿದ್ದೆ. ಹೊಸ ಕಂಬಳಿ ಬಂದ ಕೂಡಲೇ ಅಪ್ಪ ಅದನ್ನು ತನಗೆ ಹಾಸಿಕೊಳ್ಳಲು ತೆಗೆದುಕೊಳ್ಳುತ್ತಿದ್ದ. ಹೊಸ ಕಂಬಳಿ ಹೊತ್ತುಕೊಳ್ಳಲು ಬರುವುದಿಲ್ಲ. ಸೆರಿ ಹಚ್ಚಿ ನೇಯ್ದದ್ದರಿಂದ ಬಿರಸಾಗಿರುತ್ತದೆ. ನೀರಿನಲ್ಲಿ ಹಾಕಿ ಸೆರಿ ಹೋಗುವಂತೆ ಮಾಡಬಹುದು. ಆದರೆ ಕಂಬಳಿಯನ್ನು ನೀರಿಗೆ ಹಾಕುವುದು ಕಡಿಮೆ. ಹಾಕಿದರೆ ಬಾಳಿಕೆ ಬರುವುದಿಲ್ಲವೆಂದು ಅಪ್ಪ ಹೇಳುತ್ತಿದ್ದ. ಒಂದು ವರ್ಷ ಹಾಸಿ ಬಳಸಿದ  ನಂತರ ಮೆತ್ತಗಾಗುತ್ತದೆ. ಅಪ್ಪ ಹಾಸಲು ಬಳಸುವುದರ ಜೊತೆಗೆ ಆ ಕಂಬಳಿಗೆ ಕರಿ ಕಟ್ಟುವವರು ಬಂದಾಗ ತಪ್ಪದೇ ಕರಿಕಟ್ಟಿಸುತ್ತಿದ್ದ. ಕರಿಕಟ್ಟಿದ ನಂತರ ತುದಿ ನೂಲುಗಳನ್ನು ಹೊಸೆದು ಹುರಿಹಾಕುತ್ತಿದ್ದ. ಅಪ್ಪನನ್ನು ಅನುಸರಿಸಿ ನಾನೂ ಹುರಿಹಾಕುತ್ತಿದ್ದೆ. ಮೊದಮೊದಲು ಸರಿಯಾಗುತ್ತಿರಲಿಲ್ಲ. ಬಿಚ್ಚಿ ಬಿಚ್ಚಿ ಹಾಕುತ್ತಿದ್ದೆ. ಹೀಗೆ ಹುರಿಹಾಕಿದ ನಂತರ ಕಂಬಳಿ ಬಳಕೆಗೆ ಸಿದ್ಧವಾಗುತ್ತಿತ್ತು. 


ಒಕ್ಕಲುತನದ ಎಲ್ಲ ಉಪಕರಣಗಳಿಗೆ ಕರಿಜಾಲಿಯೇ ಬೇಕು. ಕೂರಿಗೆ, ಕುಂಟಿಯ ದಿಂಡು, ತಾಳ, ರಂಟೆ ಮತ್ತು ಮೇಳಿ, ನೊಗಗಳೆಲ್ಲ ಕರಿಜಾಲಿಯಿಂದಲೇ ತಯಾರಾಗಿರುತ್ತವೆ. ಅಲ್ಲದೆ ಗುದ್ದಲಿ, ಸಲಿಕೆ, ಬಾಯ್- ಗುದ್ದಲಿ, ಕೊಡಲಿಯ ಕಾವುಗಳು ಈ ಜಾಲಿಯಿಂದಲೇ ತಾಯಾರಾಗಿರುತ್ತವೆ. ಹೀಗೆ ಕರಿಜಾಲಿಗೆ ಮತ್ತು ಒಕ್ಕಲುತನಕ್ಕೆ ಬಿಡಿಸಲಾರಸ ಗಂಟು. ಕರಿಜಾಲಿಯೆಂದರೆ ಕುರಿಗೆ ಎಲ್ಲಿಲ್ಲದ ಪ್ರೀತಿ. ಕರಿಜಾಲಿಯಿಂದ ಕಂಬಳಿ, ಕಂಬಳಿಯಿಂದ ಬಿತ್ತುವ ಉಡಿ, ಹೊಟ್ಟಿನ ಮಟ್ಟಿ (ಚೀಲ), ಮಳೆ ಕುಂಚಗಿ ಎಲ್ಲಕ್ಕೂ ಕಂಬಳಿಯೇ ಬೇಕು. ಮಂಗಲ ಕರ್ಯದಲ್ಲಂತೂ ಗದ್ದಿಗೆ ಹಾಕಲು, ಮದುವೆ ಸೋಬಾನೆಗಳಲ್ಲಿ ಹಾಸಕ್ಕಿ ಹೊಯ್ಯಲು ಕಂಬಳಿ ಇಲ್ಲದಿದ್ದರೆ ನಡೆಯುವುದೇ ಇಲ್ಲ. ಕಂಬಳಿಗೆ ಮೈಲಿಗೆಯೇ ಇಲ್ಲ. 


ಆಪ್ಪ ಅಂದರೆ ಕೃಷಿ. ಕೃಷಿಗೆ ಕರಿಜಾಲಿ, ಕಂಬಳಿ ಬೇಕೇ ಬೇಕು. ಹೀಗೆ ಅಪ್ಪ, ಕರಿಜಾಲಿ, ಕಂಬಳಿ ಬಿಡಿಸಲಾರದ ಬಂಧದಲ್ಲಿ ಸೇರಿಹೋಗಿವೆ.


ಕಣ ಮತ್ತು ರಾಶಿ :         


ಊರ ಸುತ್ತಲಿರುವ ಎಲ್ಲ ಚಕ್ಕಡಿ ರಸ್ತೆಯಲ್ಲಿ ಎರೆ ಮಣ್ಣಿನ ಅಡ್ಡ ಸಾಲು ಕಂಡವೆಂದರೆ ಅಲ್ಲಿ ಸುತ್ತ ಮುತ್ತ ಕಣ ಮಾಡಿದ್ದಾರೆಂದೇ ಅರ್ಥ. ಒಕ್ಕಲತನಕ್ಕೆ ಸಹಾಯ ಮಾಡಿದ ಎಲ್ಲ ವೃತ್ತಿಯವರಿಗೆ, ಆಯಗಾರರಿಗೆ ನೀಡುವ ಆಮಂತ್ರಣ ಅದು. ಭೂಮಿ ತಾಯಿಕೊಟ್ಟದ್ದನ್ನು ಹಂಚಿ ತಿನ್ನುವ ರೈತನ ನಿಸ್ವಾರ್ಥ ಗುಣವದು. ಅಪ್ಪ, ಮೇಟಿ ನೆಟ್ಟ ತಕ್ಷಣವೇ ಅಗೆದ ಹೊಸ ಮಣ್ಣನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹೋಗಿ ಚಕ್ಕಡಿ ದಾರಿಯಲ್ಲಿ ಹಾಕಿ ಬರಲು ಮಾವನನ್ನು ಕಳಿಸುತ್ತಿದ್ದ. ಅದಕ್ಕಿಂತ ಮೊದಲು ಮೇಟಿ ನೆಡಲು ಆಯತವಾದ ಜಾಲಿ ಕಟ್ಟಿಗೆಯನ್ನು ಕಾಯ್ದಿಟ್ಟಿರುತ್ತಿದ್ದ. ಅಮ್ಮ ಸೊಟಕನಾಳದಿಂದ ಬರುವ ಮನೆ ಗುರುಗಳಿಂದ ಮುಹೂರ್ತ ಕೇಳಿರುತ್ತಿದ್ದಳು. ಪೂಜೆ ಮಾಡಿ ಮೇಟಿ ನೆಟ್ಟರೆಂದರೆ ಎಲ್ಲ ರೈತರು ಸುಗ್ಗಿ ಮುಗಿಯುವವರೆಗೆ ಬಿಡುವಿಲ್ಲದೇ ದುಡಿಯಲು ಮಾನಸಿಕವಾಗಿ ಸಿದ್ಧವಾಗುತ್ತಿದ್ದರು. ಆ ದಿನದಿಂದಲೇ ಹೊಸ ಚೈತನ್ಯ ಪಡೆದುಕೊಳ್ಳುತ್ತಿದ್ದರು. ಅಪ್ಪನೂ ಉತ್ಸಾಹದಿಂದಲೇ ತೊಡಗುತ್ತಿದ್ದ. ಮನೆಯವರೆಲ್ಲರನ್ನೂ ತೊಡಗಿಸುತ್ತಿದ್ದ. ಅಮ್ಮನೂ ಮನೆಯಲ್ಲಿ ಎಲ್ಲ ಕೆಲಸ ಬಿಡುವಿಲ್ಲದೇ ಮಾಡುತ್ತಿದ್ದಳಲ್ಲದೆ ಮಾವ ಅಣ್ಣನಿಗೆ-  ಸುಗ್ಗಿ, ಈಗ ಮೈಬಗ್ಗಿಸಿ ದುಡಿದರೆ ಮಾತ್ರ ಭೂಮಿತಾಯಿಗೆ ಗೌರವ ಕೊಟ್ಟಂತೆ' ಎಂದು ಹೇಳಿ ಅವರನ್ನು ಹುರಿದುಂಬಿಸುತ್ತಿದ್ದಳು. ಮನೆಯಲ್ಲಿ ಆಗಾಗ ತಿನಿಸು ಮಾಡಿ ಕಟ್ಟಿ ಕಳಿಸುತ್ತಿದ್ದಳು.


ಮೇಟಿ ನೆಟ್ಟು, ಗೋದಿ ಹುಲ್ಲು ತಂದು ಸಂಗ್ರಹ ಮಾಡಿದ ಮೇಲೆ ಕಣ ಮಾಡುವುದು. ಮೇಟಿಗೆ ಒಂದು ಹಗ್ಗ ಕಟ್ಟಿ ಒಂಬತ್ತು ಹನ್ನೊಂದು ಮೊಳ ಆಳತೆ ಮಾಡಿ ಮೇಟಿ ಸುತ್ತಲೂ ತಿರುಗಿ ಕಣದ ಜಾಗವನ್ನು ಗುರುತು ಮಾಡಲಾಗುತ್ತಿತ್ತು. ಶಾಲೆಯಲ್ಲಿ ತ್ರಿಜ್ಯದಿಂದ ವೃತ್ತ ತೆಗೆಯುವ ವಿದ್ಯೆ ಮೊದಲು ಇಲ್ಲಿಂದಲೇ ಬಂದಿರುವಂತಹದ್ದು. ಕಣಕ್ಕೆ ನೀರು ಹಾಕಿ ನೆನೆಸಿ, ಹಂತಿ ಕಟ್ಟಿ ತುಳಿಸಿ, ರೂಲು ಹಾಕಿ ಸಮತಟ್ಟು ಮಾಡಬೇಕು. ಕಣಕ್ಕೆ ಬೇಕಾದ ನೀರು ತರಲು ಬೆಣ್ಣಿಹಳ್ಳಕ್ಕೆ ಹೋಗಬೇಕಾಗುತ್ತಿತ್ತು.. ಮನೆಯಲ್ಲಿರುವ ಹಂಡೆ ತಪ್ಪಾಲಿ, ಕೊಡಗಳನ್ನು ಕೂಡಿಸಿ ಮತ್ತೆ ಅವರಿವರ ಮನೆಯಲ್ಲಿ ಕೊಡ ತಂದು ಚಕ್ಕಡಿ ಹೂಡಿ ನೀರು ಉಣಿಸಬೇಕಾಗುತ್ತಿತ್ತು. ಬೆಣ್ಣಿಹಳ್ಳದಿಂದ ನೀರು ತರುವಾಗ ಅಪ್ಪನೇ ಮೂಕದಲ್ಲಿ ಕೂಡುತ್ತಿದ್ದ. ಏಕೆಂದರೆ ಹಳ್ಳದ ದಾರಿ ತೆಗ್ಗು ದಿನ್ನೆ ಒಗಾಲಿ, ಒಪ್ಪಾರಿಗಳಿಂದ ಕೂಡಿತ್ತು. ಇಂತಹ ದಾರಿಯಲ್ಲಿ ಅನುಭವಸ್ತರೂ ಸಹ ಚಕ್ಕಡಿಯನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಆರಟ್ಟಿ ಬಿಳಿ ಎತ್ತಿನ ಜೊತೆ ಮನೆಯ ಮೂಡಲ ಹೋರಿಯನ್ನು ಹೂಡಿ ನೀರು ತರಲು ಹೋದಾಗ ಒಂದೆರಡು ಸಾರೆ ಏನೂ ಆಗಲಿಲ್ಲ. ಮರಳಿ ಹೋಗುವಾಗ ಬೇರೆಯವರ ಎತ್ತನ್ನು ನೋಡಿ ನಮ್ಮ ಎತ್ತುಗಳೂ ಅವಸರದಲ್ಲಿ ನಡೆದವು. ಗಳೆ ಹೊಡೆಯುವದರಲ್ಲಿ ಪಳಗಿದ್ದ ಬಿಳಿ ಮೂಡಲ ಹೊರಿ ಚಕ್ಕಡಿಗಿನ್ನೂ ಪಳಗಿರಲಿಲ್ಲ. ಅಪ್ಪ ಎಷ್ಟು ಹಗ್ಗ ಜಗ್ಗಿ ಹಿಡಿದರೂ ಅಸಗೊಳ್ಳದೇ ಹಳ್ಳದ ವಾರಿಯನ್ನು ಹತ್ತಿಯೇ ಬಿಟ್ಟಿತು. ಒಗ್ಗಾಲಿಯಾದ ಚಕ್ಕಡಿ ನೋಡ ನೋಡವಷ್ಟರಲ್ಲಿಯೇ ಬಿದ್ದುಬಿಟ್ಟಿತು. ಕೊಡ ಹಂಡೆಗಳೆಲ್ಲ ದಿಬ್ಬದ ಮೇಲಿಂದ ಉರುಳಿ ಹಳ್ಳ ಸೇರಿದವು. ನಾವು ಹೇಗೆ ಕೆಳಗೆ ಜಿಗಿದೆವೋ ಗೊತ್ತಿಲ್ಲ. ಆಗಲೆ ಕೊಡ ಹಿಡಿದು ತರುತ್ತಿದ್ದೆವು. ಅಣ್ಣ ಜಿಗಿದವನೇ ಹಾಯುವ ಹೋರಿಯ ಮುಗದಾನ ಹಿಡಿದ. ಜತ್ತಿಗೆ ಗಂಟನ್ನು ಉಚ್ಚಿ  ಕೊಳ್ಳ ಹರಿದುಬಿಟ್ಟ. ಒಂದೇ ಕ್ಷಣದಲ್ಲಿ ಇದೆಲ್ಲ ನಡೆದು ಹೋಯಿತು. ಅಣ್ಣ ಮಾವ ಅಪ್ಪ ಮತ್ತೆ ಯಾರೋ ಇಬ್ಬರು ಬಂದು ಬಿದ್ದಷ್ಟೇ ವೇಗವಾಗಿ ಚಕ್ಕಡಿಯನ್ನು ಎದ್ದು ನಿಲ್ಲಿಸಿ ಎತ್ತುಗಳನ್ನು ಹೂಡಿಬಿಟ್ಟರು. ಎತ್ತುಗಳೂ ಗಾಬರಿಯಾಗಿದ್ದವು. ಬೆದರಿದ ಸ್ಥಿತಿಯಲ್ಲಿ ಏದುಸಿರು ಬಿಡುತ್ತಿದ್ದವು. ನಿಧಾನವಾಗಿ ಹಳ್ಳದಲ್ಲಿಳಿಸಿ ತರುಬಿ ನೀರು ತುಂಬಿ ಕೆಲಸ ಮುಂದುವರೆಸಿದೆವು. ಅಪ್ಪನಿಗೆ ಸಿಟ್ಟು ಬಂದಿತ್ತು. ಆದರೆ ಯಾಕೊ ಯಾರನ್ನು ಬೈಯಲಿಲ್ಲ. ಬಿಗುವಿನ ವಾತಾವರಣದಲ್ಲಿ ಅಣ್ಣ ಮಾವ ನಾನು ತುಟಿ ಪಿಟಕ್ಕೆನ್ನದೆ ಕುಳಿತುಬಿಟ್ಟೆವು. ಈ ಬಾರಿ ಕಣದಲ್ಲಿ ಉಳಿದಿದ್ದ ಕಾಕಾ ಅಪ್ಪನನ್ನು ಕಣದಲ್ಲಿ ಉಳಿಸಿ ತಾನೇ ಮೂಕದಲ್ಲಿ ಕುಳಿತ. ನಾಲ್ಕಾರು ಸಾರೆ ತಿರುಗಿದ ಮೇಲೆ ಕಣಕ್ಕೆ ನೀರು ಸಾಕಾಯ್ತು. 


ಕಣಕ್ಕೆ ನೀರು ಹಾಕಿದ ಮರುದಿನ ದನದ ಹಂತಿ ಕಟ್ಟಿ ತುಳಿಸಬೇಕು. ಮನೆಯಲ್ಲಿದ್ದ ಮತ್ತು ಬೇರೆಯವರ ಮನೆಯಿಂದ ತಂದು ಕೂಡಿಹಾಕಿದ್ದ ಶೆಗಣಿಯನ್ನು ಕಣದಲ್ಲಿ ಹಾಕುತ್ತ ಎರೆ ಮಣ್ಣು ಮತ್ತು ಶೆಗಣಿ ಸರಿಯಾಗಿ ಕಲೆಯುವಂತೆ ಮಾಡಬೇಕು. ಜೊತೆಗೆ ರೂಲು ಹಾಕಿ ಕಣವನ್ನು ಸಮತಟ್ಟು ಮಾಡಿ ಸಿದ್ಧಗೊಳಿಸಬೇಕು. ಆ ಮೇಲೆ ಗೋದಿ ಹುಲ್ಲನ್ನು ಕಣಕ್ಕೆ   ಹಾಕಿ ತುಳಿಸಬೇಕು. ಮುಂದೆ ಮುಂದೆ ದನಗಳ ಹಂತಿ. ಹರೆಯದ ಹೋರಿಗಳನ್ನು ಕೊನೆಯಲ್ಲಿ ಕಟ್ಟಿ ಮುದಿ ದನ ಮತ್ತು ಕಾಲಲ್ಲಿ ದುರಸ್ತಿಯಿಲ್ಲದ ದನಗಳನ್ನು ಮೇಟಿಯ ಹತ್ತಿರ ಕಟ್ಟುವುದು ರೈತರ ಜಾಣ್ಮೆ. ದನದ ಹಂತಿಯ ಹಿಂದೆ ಗೋದಿ ಹುಲ್ಲು ಸರಿಯಾಗಿ ಕತ್ತರಿಸಲು ಯಂತ್ರಹೂಡಬೇಕು. ಗರಗಸದಂತೆ ಹರಿತ ಬಾಯಿಯಿರುವ ಚಕ್ರಗಳ ವಿಶಿಷ್ಟಸಾಧನ ಯಂತ್ರ. ಹನ್ನೊಂದು ಚಕ್ರಗಳ ಯಂತ್ರ ನಮ್ಮೂರಿನ ದೊಡ್ಡಬಸಪ್ಪ ಅವರ ಮನೆಯಲ್ಲಿತ್ತು.     


 ಕಣಕ್ಕೆ ಯಂತ್ರ ಹೂಡ್ಯಾರ ನೋಡು  ಎಂದು ಅಮ್ಮ ಹೇಳಿದ ಕೂಡಲೇ ಪಾಟಿ ಚೀಲ ಅಲ್ಲಿಯೇ ಬಿಟ್ಟು ಮಧ್ಯಾಹ್ನದ ಶಾಲೆಯನ್ನೂ ಮರೆತು ಕಣಕ್ಕೆ ಓಡಿಬಿಡುತ್ತಿದ್ದೆ, ನಾನಾಗ. ತಲೆಗೆ ಟೊಪ್ಪಿಗೆ ಹಾಕಿಕೊಂಡು ಕಣದ ಅಂಚಿನಲ್ಲಿಯೇ ನಿಂತು ಯಂತ್ರವನ್ನು ಆಸೆಗಣ್ಣಿಂದ ನೋಡುತ್ತ ನಿಂತ ನನ್ನನ್ನು ಅಪ್ಪ ಕರೆಯುತ್ತಿದ್ದ. ಕಾಕಾ ಇಲ್ಲವೆ ಮಾವ ನನ್ನನ್ನು ಎತ್ತಿ ಯಂತ್ರದಲ್ಲಿ ಹತ್ತಿಸುತ್ತಿದ್ದರು. ಬರಿನೆತ್ತಿಯಲ್ಲಿ ಕಣದೊಳಗೆ ಯಾರೂ ಹೆಜ್ಜೆ ಇಡುವಂತಿರಲಿಲ್ಲ. ಇಕ್ಕಲದಲ್ಲಿ ಕಡಿದು ಜೋಡಿಸಿಟ್ಟಿದ್ದ ಗೋದಿ ಹುಲ್ಲನ್ನು ತಂದು ಕಣಕ್ಕೆ ಚಲ್ಲುವುದು, ಯಂತ್ರ ಆ ಹುಲ್ಲಿನ ಮೇಲೆ ಹಾಯುವುದು, ಒಳಗೆ ಕತ್ತರಿದೇ ಉಳಿದ ಹುಲ್ಲನ್ನು ಮ್ಯಾರಕೋಲಿನಿಂದ ಎತ್ತಿ ತೆಗೆಯುವುದು, ಹಂತಿ ಕಟ್ಟಿದ ಎತ್ತು ಶೆಗಣಿ ಹಾಕಿದರೆ ರಾಶಿ ಹುಲುಸು ಎಂದು ಹೇಳುತ್ತ ಶೆಗಣಿಯನ್ನು ಕಣದಲ್ಲಿ ಬೀಳದಂತೆ ಕೈಯಲ್ಲಿ ಹಿಡಿದು ಹೊರಗೆ ಚೆಲ್ಲುವುದು ಎಡಬಿಡಾದೇ ನಡದೆ ಇರುತ್ತಿತ್ತು. ಅಗಾಗ ಎತ್ತಿನ ಹಗ್ಗಗಳನ್ನು ಕೈಯಲ್ಲಿ ಹಿಡಿದು ಖುಷಿ ಪಡುತ್ತಿದ್ದ ನಾನು ಯಂತ್ರ ಬಿಟ್ಟು ಇಳಿಯುತ್ತಲೇ ಇರಲಿಲ್ಲ. ಬೇಸಿಗೆ ಬಿಸಿಲಿನ ತಾಪ ಹತ್ತುತ್ತಲೇ ಇರಲಿಲ್ಲ. ನಡುನಡುವೆ ಗುಡಿಸಲಲ್ಲಿಟ್ಟಿದ್ದ ದೊಡ್ಡ ಕೊಡದಲ್ಲಿಯ ತಂಪು ನೀರನ್ನು ತಂದುಕೊಟ್ಟಾಗ ಅಪ್ಪನ ಜೊತೆ ನಾನೂ ಕುಡಿಯುತ್ತಿದ್ದೆ.


ಅಂತಹ ಬೇಸಿಗೆ ದಿನದಲ್ಲೂ ಲಂಬಾಣಿ ಜನ ಕಬ್ಬು ಹೊತ್ತು ಕಣ ಕಣ ತಿರುಗುತ್ತಿದ್ದರು. ನಾಲ್ಕು ಸಿವಡು ಗೋದಿ ಹುಲ್ಲು ಕೊಟ್ಟರೆ ಕಬ್ಬು ಕೊಡುತ್ತಿದ್ದರು. ಕುಡಗೋಲಿನಿಂದ ತುಂಡು ಮಾಡಿದ ಕಬ್ಬಿನ  ತುಂಡನ್ನು ಸುಲಿದು ತಿನ್ನುತ್ತಲೇ ಹಂತಿ ಹೊಡೆಯುವುದು, ಯಂತ್ರ ನಡೆಸುವುದು ಎಲ್ಲವೂ ಸಾಗುತ್ತಿತ್ತು. 


ತುಳಿಸಿದ ಹುಲ್ಲನ್ನು ಮೆಟ್ಟಗಣದಲ್ಲಿ ಕೂಡಿಹಾಕಿ ಹೊಸ ಹುಲ್ಲನ್ನು ಕಣದಲ್ಲಿ ನುರಿಸುತ್ತಿದ್ದರು. ರಾತ್ರಿಯಾಗುವವರೆಗೂ ತುಳಿಸಿ ರಾತ್ರಿ ನುರಿಸಿದ ಹುಲ್ಲನ್ನು ಮಡ್ಡಿ ಒಟ್ಟುತ್ತಿದ್ದರು. ಗೋದಿ ತೆನೆ ಹೊಟ್ಟು ಮತ್ತು ಕಡ್ಡಿ ಎಲ್ಲವೂ ಇದರಲ್ಲಿ ಸಮನಾಗಿ ಬೆರೆತಿರುತ್ತಿದ್ದವು. ರಾತ್ರಿಯ ತಂಪಿಗೆ ಮೆದುವಾಗಿರುವ ಈ ನುರಿತ ಹುಲ್ಲನ್ನು ಬಣಿವೆಯಂತೆ ಮಡ್ಡಿ ಒಟ್ಟುತ್ತಿದ್ದರು. ಆರೆಂಟು ಮೊಳ ಅಗಲ ಹತ್ತು ಹದಿನಾಲ್ಕು ಮೊಳ ಉದ್ದದ ಈ ಮಡ್ಡಿ ರಾಶಿಯ ಪ್ರಮಾಣವನ್ನು ಹೇಳುತ್ತಿತ್ತು. ಬಿರುಸಾದ ಒರಟಾದ ದೊಡ್ಡ ಕಡ್ಡಿ ಹುಲ್ಲನ್ನು ದಡಕ್ಕೆ ಹಾಕಿ ಅತ್ಯಂತ ಬಿಗಿಯಾದ ಬಂಧದಲ್ಲಿ ಮಡ್ಡಿ ಒಟ್ಟುವುದು ಒಂದು ಕಲೆ. ಈ ಮಡ್ದಿಯ ರಚನೆಯಲ್ಲಿ ಮೂಲೆ ಬಂಧುರವಾಗಬೇಕು. ಇಲ್ಲವಾದರೆ ಗಟ್ಟಿಯಾಗಿ ನಿಲ್ಲುವುದೇ ಇಲ್ಲ. ಹೀಗೆ ಮಡ್ಡಿ ಒಟ್ಟಲು ಇನ್ನೊಂದು ಕಾರಣವೂ ಇತ್ತು. ಆಗ ಸರಿಯಾಗಿ ಗಾಳಿ ಬೀಸುತ್ತಿರಲಿಲ್ಲ. ದೊಡ್ಡ ಗಾಳಿ ನಿಯಮಿತವಾಗಿ ಬೀಸುವವರೆಗೂ ಈ ಮಡ್ಡಿಯಲ್ಲಿ ನುರಿಸಿದ ಹುಲ್ಲನ್ನು ರಕ್ಷಣೆ ಮಾಡಬೇಕಾಗುತ್ತಿತ್ತು. ಸುಗ್ಗಿಯ ಸಮಯದಲ್ಲಿ ಎಲ್ಲರ ಕಣದಲ್ಲೂ ಮಡ್ಡಿಗಳು ತುಂಬಿರುತ್ತಿದ್ದವು.         


ನಮ್ಮೂರು ಮತ್ತು ಸುತ್ತ ಮುತ್ತ ಕಪ್ಪು ಎರೆ ಮತ್ತು ಕರಲು ಭೂಮಿಯಿದ್ದುದರಿಂದ ಗೋದಿಗೆ ಹೇಳಿಮಾಡಿಸಿದಂತಿತ್ತು. ಹೀಗಾಗಿ ಎಲ್ಲ ಊರುಗಳಲ್ಲು ಮಡ್ಡಿಗಳು ರೈತರ ದುಡಿಮೆ ಮತ್ತು ಶ್ರಮದ ಪ್ರತಿಮೆಗಳಾಗಿದ್ದವು. ರೈತ ಪ್ರಕೃತಿಯನ್ನೇ ಅವಲಂಬಿಸಿ ತನ್ನ ಬೆಳೆ ಬೆಳೆದಂತೆ ರಾಶಿ ಮಾಡುವಾಗಲೂ ಪ್ರಕೃತಿಯನ್ನೆ ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಒಂದೊಂದು ವರ್ಷ ಪಡುವಣ ಗಾಳಿ ಸರಿಯಾಗಿ ಬೀಸದೇ ಮಡ್ಡಿಗಳು ಮಳೆಗಾಲ ಸಮೀಸುವ ವರೆಗೆ ಹಾಗೆ ಇರುತ್ತಿದ್ದವು. ಜೋಳ ಕಡಲೆ ರಾಶಿ ಮಾಡಿದರೂ ಗೋದಿ ರಾಶಿ ಮಾಡಲು ಆಗುತ್ತಿರಲಿಲ್ಲ. ಏಕೆಂದರೆ ಹೊಟ್ಟು ಕಡ್ಡಿ ಹಾರುವಷ್ಟು ದೊಡ್ಡ ಗಾಳಿ ಬಿಟ್ಟಾಗ ಮಾತ್ರ ಗೋದಿ ರಾಶಿ ನಿರಾತಂಕವಾಗಿ ಸಾಗುತ್ತಿತ್ತು. 


ಮಧ್ಯರಾತ್ರಿ ಗಾಳಿ ಬಿಟ್ಟರೂ ಮ್ಯಾಟ ಹಚ್ಚಿ ತೂರಲು ಪ್ರಾರಂಭಿಸುತ್ತಿದ್ದರು. ಗಾಳಿ ಬೀಸುವುದು ನಮ್ಮ ಕೈಯೊಳಗಿನ ಮಾತಲ್ಲ. ಎಷ್ಟೋ ಬಾರಿ ಅಪ್ಪ ಅರ್ಧಕ್ಕೆ ಊಟ ಬಿಟ್ಟು ನಮ್ಮನ್ನೂ ಬಿಡಿಸಿ ತೂರಲು ತೊಡಗುತ್ತಿದ್ದ. ಗಾಳಿ ಬಿಟ್ಟಾಗ ಅದು ಎಷ್ಟೇ ರಾತ್ರಿಯಾಗಿರಲಿ ಪ್ರತಿ ಕಣದಿಂದಲೂ ``ಹುಲ್ಲುಲ್ಲಿಗೊ .. ಹುಲ್ಲುಲ್ಲಿಗೊ'' ಎಂಬ ಹರ್ಷೋದ್ಗಾರ ಉತ್ಸಾಹದ ಕೂಗು ಕೇಳಿ ಬರುತ್ತಿತ್ತು. ಒಬ್ಬರ ಧ್ವನಿ ಕೇಳಿ ಒಬ್ಬರು ಉತ್ಸಾಹದ ಕೇಕೆ ಹಾಕುತ್ತಿದ್ದರು. ಕಣದಲ್ಲಿ ಮಲಗಲು ಬಂದವರೂ ಸಹ ತೂರುವಾಗ ತುಂಬಿಕೊಡುತ್ತಿದ್ದರು. ತಮ್ಮ ಕೈಲಾದ ಕೆಲಸ ಮಾಡುತ್ತಿದ್ದರು. ಆಗ ನನ್ನ ರಾಶಿ ನಿನ್ನ ರಾಶಿ ಎಂಬ ಭೇದ ಭಾವ ಇರುತ್ತಿರಲಿಲ್ಲ. ತಮ್ಮ ತೂರುವ ಕಾರ್ಯ ಮುಗಿದಿದ್ದರೆ ಇನ್ನೊಬ್ಬರ ತೂರುವ ಕಾರ್ಯಕ್ಕೆ ಕೈಹಚ್ಚಲೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹೀಗೆ ಪರಸ್ಪರ ಸಹಕಾರ ರೈತರಲ್ಲಿತ್ತು. 


ಗೋದಿ ರಾಶಿ ಮಾಡುವುದಕ್ಕಿಂತ ಮುಂಚಿತವಾಗಿಯೇ ಜೋಳ ಕಡಲಿ ರಾಶಿಗಳನ್ನು ಮಾಡಿ ಮುಗಿಸುತ್ತಿದ್ದರು. ಏಕೆಂದರೆ ಗೋದಿ ರಾಶಿ ಕೈಹಿಡಿಯುತ್ತಿತ್ತು ಮತ್ತು ಗಾಳಿಗಾಗಿ ಕಾಯಬೇಕಾರುತ್ತಿತ್ತು. ಜೋಳ ಮತ್ತು ಕಡಲಿ ರಾಶಿ ಮಾಡಲು ಗೋದಿ ರಾಶಿ ಮಾಡಲು ಬೇಕಾದಷ್ಟು ದೊಡ್ಡ ಗಾಳಿ ಬೇಕಾಗುತ್ತಿರಲಿಲ್ಲ. ಜೋಳ ಕಿತ್ತು, ಗೂಡು ಬಡಿದು, ತೆನೆ ಕೊಯ್ಸಿ ಚಕ್ಕಡಿಯಲ್ಲಿ ಹೇರಿಕೊಂಡು ಕಣಕ್ಕೆ ತರಲಾಗುತ್ತಿತ್ತು. ಕಣದ ಅಂಚಿಗೆ ಹಚ್ಚಿ ಮೆಟ್ಟಗಣ ಮಾಡಿ ( ೬ ಮೊಳ ಅಗಲ ಮತ್ತು ೧೦-೧೨ ಮೊಳ ಉದ್ದ) ಸುತ್ತಲೂ ಮೇವಿನ ( ಕಣಕಿ ) ದಿಂಡು ಕಟ್ಟಿ ತೆನೆಗಳನ್ನು ಸಂಗ್ರಹಿಸುತ್ತಿದ್ದರು. ಅದೇ ರೀತಿ ಕಡಲೆ ಕಿತ್ತು ತಂದು ಕಣದ ಸಮೀಪದಲ್ಲಿ ಸಂಗ್ರಹಿಸಿಟ್ಟಿರುತ್ತಿದ್ದರು.

ರಾತ್ರಿ ತಂಪೊತ್ತಿನಲ್ಲಿಯೆ ಗಾಳಿ ಬಿಟ್ಟು ತೂರಿದ ರಾಶಿಯನ್ನು ಸಾಣಿಗೆ ಹಾಕುವ ಕೆಲಸ ನಡೆಯುತ್ತಿತ್ತು. ಸಾಣಿಗೆ ಹಾಕುವ ಸರ ಸರ ಸದ್ದು ಅತ್ಯಂತ ಕುತೂಹಲ ಹುಟ್ಟಿಸುತ್ತಿತ್ತು. ಅಪ್ಪ ಮತ್ತು ಕಾಕಾ ಬೇಡ ಬೇಡವೆಂದರೂ ನಾನು ಪುಟ್ಟಿ ತುಂಬಿ ಕೊಡುತ್ತಿದ್ದೆ. ಅಪ್ಪ ಪ್ರತಿಯೊಂದು ಅಚ್ಚುಕಟ್ಟಾಗಿಯೇ ಇರಬೇಕೆಂದು ಬಯಸುತ್ತಿದ್ದ. ಹೀಗಾಗಿ ನಾನು ಹೆದರಿಕೆಯಿಂದಲೇ ಭಾಗವಹಿಸುತ್ತಿದ್ದೆ. ಸಾಣಿಗೆ ಹಾಕಿದ ರಾಶಿಯನ್ನು ಮೇಟಿಯ ಸುತ್ತಲೂ ಹಾಕಲಾಗುತ್ತಿತ್ತು. ಎಂಟು ಮೊಳದ ಮೇಟಿಗೆ ಎಷ್ಟು ಎತ್ತರಕ್ಕೆ ರಾಶಿ ಇದೆ ಎಂಬುದನ್ನು ನೋಡಿಯೇ ಇಷ್ಟು ಚೀಲ ಎಂದು ಹೇಳುತ್ತಿದ್ದರು. ರಾಶಿಯಲ್ಲಿ ಜಂತಕುಂಟಿ, ಗ್ವಾರಿಯಲ್ಲಿ, ಮ್ಯಾರಕೋಲು, ಶೆಳ್ಳಕಟ್ಟಿಗೆ ಮುಂತಾದ ಕಣದಲ್ಲಿ ಬಳಕೆಯಾಗುವ ಎಲ್ಲ ಉಪಕರಣಗಳನ್ನಿಟ್ಟು ಪೂಜೆ ಮಾಡುತ್ತಿದ್ದರು. ರಾಶಿಯಲ್ಲಿ ಶೆಗಣಿಯಿಂದ ಮಾಡಿದ ಬೂದನನ್ನು ಇಟ್ಟು ಪೂಜಿಸುತ್ತಿದ್ದರು. ಬೂದನಿಗೆ ಎತ್ತಿನ ಬಾಲದ ಜವೆ (ಕೂದಲು)ಯನ್ನು ಚುಚ್ಚುತ್ತಿದ್ದರು (ಹಚ್ಚುತ್ತಿದ್ದರು.) 

ಪೂಜೆ ಮಾಡಿದ ರಾಶಿಯನ್ನು ಚಕ್ಕಡಿಯಲ್ಲಿ ಹೇರಿ ಹಗೆಯಲ್ಲಿ ಹಾಕಿ ಸಂಗ್ರಹಿಸುತ್ತಿದ್ದರು. ನಮ್ಮ ಕಣದ ರಾಶಿ ಹೇರುವ ದಿನ ಮುಂಜಾನೆಯೇ ಹಗೆ ತೆಗೆಯಿಸಿ ಕೆಳಗಿಳಿದು ಸುತ್ತಲು ಮೇವಿನ ದಿಂಡು ಕಟ್ಟಿ, ತಳದಲ್ಲಿ ಹೊಟ್ಟು ಹಾಕಿ  ಧಾನ್ಯ ಕೆಡದಂತೆ ಎಚ್ಚರಿಕೆ ವಹಿಸುತ್ತಿದ್ದ - ಅಪ್ಪ. ರಾಶಿ ಹೇರಿದ ಚಕ್ಕಡಿಯಲ್ಲಿ ಕುಳಿತು ಹಗೆ ಮತ್ತು ಕಣಕ್ಕೆ  ತಿರುಗಾಡು ವದೆಂದರೆ ಎಲ್ಲಿಲ್ಲದ ಉತ್ಸಾಹ ನನಗೆ. ಆದರೆ ನಮ್ಮ ರಾಶಿ ಹೇರುವಾಗ ಎತ್ತುಗಳಿಗೆ ಜೂಲ ಹಾಕುತ್ತಿರಲಿಲ್ಲ ಮತ್ತು ಚಕ್ಕಡಿ ಓಡಾಡಿಸಿ ಉಳಿದವರಂತೆ ಹೆಚ್ಚು ಸಂಭ್ರಮಪಡುತ್ತಿರಲಿಲ್ಲ. ಕಾರಣ ಅಪ್ಪನ ಸ್ವಭಾವ !   

ಮನೆಯಲ್ಲಿ ಇದ್ದರೂ ಅಮ್ಮ ನನ್ನ ಮೂಲಕ ರಾಶಿಯ ಬಗ್ಗೆ ಎಲ್ಲ ಮಾಹಿತಿ ಕೇಳಿರುತ್ತಿದ್ದಳು. ಒಂದು ಸಾರೆ ಚಕ್ಕಡಿಯಲ್ಲಿ ತಂದ ರಾಶಿ ಎಷ್ಟು ಚೀಲ ಎಂಬುದನ್ನು ನನಗೆ ಹೇಳುತ್ತಿದ್ದಳು. ಒಂದು ಪುಟ್ಟಿಗೆ ಇಷ್ಟು ಸೇರು, ಒಂದು ಚೀಲಕ್ಕೆ ಇಷ್ಟು ಪುಟ್ಟಿ, ಒಂದು ಚಕ್ಕಡಿಗೆ ಇಷ್ಟು ಚೀಲ ಎಂದು ಎಲ್ಲವನ್ನೂ ಕಲಿಸುತ್ತಿದ್ದಳು. ಮತ್ತು ತಾನು ಈ ವರ್ಷದ ಖರ್ಚು ಇಷ್ಟು ಈ ವರ್ಷದ ಬೆಳೆ ಇಷ್ಟು ಎಂದು ಲೆಕ್ಕ ಹಾಕುತ್ತಿದ್ದಳು. ಸದಾ ಮನೆತನ ನಡೆಯುವ ಬಗ್ಗೆ ವಿಚಾರ ಮಾಡುತ್ತಿದ್ದಳು. ಅಪ್ಪ ಮತ್ತು ಕಾಕಾ ಮಾತನಾಡುವಾಗ ಅಮ್ಮ ಹಾಕಿದ ಲೆಕ್ಕವನ್ನೆ ಅವರು ಹಾಕುತ್ತಿದ್ದರು. ಹೀಗೆ ನನಗೆ ಗೊತ್ತಿಲ್ಲದೆ ಕೃಷಿ ಜೀವನದ ಸಂಗತಿಗಳು ಮತ್ತು ಮನೆತನದ ವ್ಯವಹಾರಗಳು ಮನಸ್ಸಿನಲ್ಲಿ ನಾಟುತ್ತಿದ್ದವು.

ನಮ್ಮ ಬನಹಟ್ಟಿಯ ಬೆನಕನಮಾನೆ ಹೊಲ ಜೋಳ ಬೆಳೆಯಲು ಪ್ರಸಿದ್ಧವಾಗಿತ್ತು. ಆ ಹೊಲದದಲ್ಲಿಯ ಜೋಳ ಕೀಳಲು ಗುತ್ತಿಗೆ ಕೊಟ್ಟಿರುತ್ತಿದ್ದರು. ಇಷ್ಟು ಅಕ್ಕಡಿ ಜೋಳ ಕಿತ್ತು ಕೊಟ್ಟರೆ ಒಂದು ಅಕ್ಕಡಿಯಲ್ಲಿಯ ಬೆಳೆ ಅವರಿಗೆ ಸಿಗುತ್ತಿತ್ತು. ಇಲ್ಲವೆ ಎಕರೆಗೆ ಇಷ್ಟು ಜೋಳ ಎಂದು ನಿಗದಿಮಾಡಿರುತ್ತಿದ್ದರು. ಕಿತ್ತ ಜೋಳದ ದಂಟನ್ನು ಸಿವಡು ಕಟ್ಟಿ, ದಿಂಡು ಕಟ್ಟಿ ಹೊತ್ತು ಗೂಡು ಬಡಿಯುತ್ತಿದ್ದರು. ಎಷ್ಟು ಅಕ್ಕಡಿ (ಅಗಲ) ಗೂಡು ಬಿದ್ದಿದೆ ಎಂಬುದರ ಮೇಲೆ ಇಷ್ಟೇ ಚೀಲ ಜೋಳ ಆಗುತ್ತವೆ ಎಂದು ಹೇಳುವ ಲೆಕ್ಕಾಚಾರ ಒಂದು ಜನಪದರಲ್ಲಿದೆ.

ಸುಗ್ಗಿ ಸಮಯದಲ್ಲಿ ದನಗಳನ್ನು ಮೇಯಿಸುವುದು ರೈತರಿಗೆ ಸಂಭ್ರಮದ ವಿಷಯ. ಹಸಿ ಮೇವು ಹಾಕುವುದು ಸಾಮಾನ್ಯ. ಆದರೆ ಹಾಲ್ಗಾಳು ಬೆಳೆಸಿಗೆ ಬಂದ ಹದವಾದ ಮೇವನ್ನು ಹಾಕಿ ಹೋರಿಗಳನ್ನು ಸಾಕುವುದೆಂದರೆ ಅಪ್ಪನಿಗೆ ಎಲ್ಲಿಲ್ಲದ ಉತ್ಸಾಹ. ಈ ಸುಗ್ಗಿ ಮೇಯಿಸಿ ಮುಂದಿನ ವರ್ಷ ಹೂಡಿದರೆ ಈ ಹೋರಿ ಎಂತಹ ಸಾಹಸಕ್ಕೂ ಸಿದ್ಧವಾಗುತ್ತದೆ ಎಂಬ ಯೋಜನೆ ಇರುತ್ತಿತ್ತು. ಸುಗ್ಗಿಯಲ್ಲಿ ಕನಿಷ್ಟವೆಂದರೂ ಮೂರು ತಿಂಗಳು ಹಸಿ ಮೇವು ಮೇಯುತ್ತಿದ್ದವು. ಎತ್ತುಗಳಿಗೆ ಆಗ ಕೆಲಸವೂ ಹೆಚ್ಚು. ಗಟ್ಟಿಯಾಗಿ ಮೇಯುವ ಎತ್ತುಗಳು ಯಾವುದಕ್ಕೂ ಬಗ್ಗುತ್ತಿರಲಿಲ್ಲ. ಸುಗ್ಗಿ ರೈತರ ಜೀವನದ ಅಮೃತ ಗಳಿಗೆ. ಸುಗ್ಗಿಯ ಸಮಯದಲ್ಲಿ ಯಾವ ರೈತನೂ ಅನಾರೋಗ್ಯದಿಂದ ಬಳಲುವದಿಲ್ಲ. ಮೈಯಲ್ಲಿ ಅಲ್ಪ ಸ್ವಲ್ಪ ತೊಂದರೆ ಇದ್ದರೂ ಅದನ್ನು ಲೆಕ್ಕಿಸುವದಿಲ್ಲ.

ಎತ್ತುಗಳನ್ನು ಮೇಯಿಸುವದಕ್ಕಾಗಿ ಪ್ರತಿದಿನ ಬೇರೆ ಬೇರೆ ಹೊಲದಿಂದ ಹಸಿ ಮೇವು ಕಿತ್ತು ತರಬೇಕು. ಈ ಕೆಲಸಕ್ಕಾಗಿ ನಾನೂ ಅಪ್ಪನ ಕೂಡ ಹೋಗುತ್ತಿದ್ದೆ. ಒಂದೊಂದು ದಿನ ನಾನೆ ಚಕ್ಕಡಿ ಮೂಕದಲ್ಲಿ ಕೂಡುತ್ತಿದೆ. ಹೋರಿಗಳನ್ನು ಹೂಡಿ ಓಡಿಸುತ್ತ ಹೋಗುವುದೆಂದರೆ ಎಲ್ಲರಿಗೂ ಉಮೇದಿಯ ಕೆಲಸ. ಹೊಲಕ್ಕೆ ಹೋಗುವಾಗಿನಕಿಂತ ಮನೆ ಕಡೆ ಮುಖ ಮಾಡಿದ ಹೋರಿಗಳನ್ನು ನಿಯಂತ್ರಿಸುದೇ ಕಷ್ಟ. ಮಾವ ನಾನು ಹೋಗಿದ್ದರಂತೂ ತೀರಿಹೋಯಿತು ಕಡ್ಡಾಯವಾಗಿ ಮೂಕದಲ್ಲಿ ನಾನೇ ಕೂಡುತ್ತಿದ್ದೆ.

ಸಾಕಿದ ನಾಯಿ ಮತ್ತು ಆರಟ್ಟಿ ಬಿಳಿ ಹೋರಿ :

ಊರಮುಂದಿನ ಹೊಲದಲ್ಲಿ ಮೇಟಿ ನೆಟ್ಟು ಕಣ ಮಾಡಿ, ಗುಡಿಸಲು ಹಾಕಿದ ದಿನದಿಂದಲೇ ನಾಯಿ ಕಣದಲ್ಲಿ ವಾಸ್ತವ್ಯ ಹೂಡುತ್ತಿತ್ತು. ನಾನು ಪ್ರಾಥಮಿಕ ಹಂತದಲ್ಲಿ ಓದುವಾಗ ಸಾಕಿದ ಕರಿ ನಾಯಿಯಂತೂ ಕಣ ಬಿಟ್ಟು ಅಗಲುತ್ತಿರಲಿಲ್ಲ. ಅಪರಿಚಿತರಾದ ಯಾರನ್ನು ಕಣದಲ್ಲಿ ಹಾಯಿಸಿ ಕೊಡುತ್ತಿರಲಿಲ್ಲ. ಕಣದಲ್ಲಿರುವ ಸಾಣಿಗೆ, ಜಂತಕುಂಟಿ ಏನನ್ನೂ ಮುಟ್ಟಿಸಿಕೊಡುತ್ತಿರಲಿಲ್ಲ. ನಮ್ಮ ಕಣಕ್ಕೆ ಬರುವವರು ದೂರದಿಂದಲೆ `` ಶಿವನಗೌಡ್ರ , ನಾಯಿ ಹಿಡಕೊಳ್ರಿ ಎಂದು ಹೇಳಿಯೇ ಬರಬೇಕಾಗಿತ್ತು. ಅಪ್ಪ ತಾನು ಊಟ ಮಾಡುವ ಮೊದಲು ನಾಯಿಗೆ ರೊಟ್ಟಿ ಹಾಕಿಯೇ ಊಟ ಮಾಡುತ್ತಿದ್ದ. ಬನಹಟ್ಟಿ, ನರಗುಂದ  ಹೊಲದಲ್ಲಿ ವಸ್ತಿ ಇದ್ದಾಗ ನಾಯಿ ಅಪ್ಪನ ಜೊತೆ ಇದ್ದೇ ಇರಬೇಕು. ಕತ್ತಲ ರಾತ್ರಿಯಲ್ಲಿ ಒಬ್ಬಂಟಿಯಾಗಿರುತ್ತಿದ್ದ ಅಪ್ಪನಿಗೆ ನಾಯಿ ಸಂಗಾತಿಯಾಗಿತ್ತು. ನಾಯಿ ಇದ್ದರೆ ಕಳ್ಳ ಕಾಕರ ಭಯ ಇರುವುದಿಲ್ಲ. ಇದಕ್ಕಿಂತ ಮುಖ್ಯವಾಗಿ ಹುಳ ಹುಪ್ಪಡಿ ಭಯವಿರುವುದಿಲ್ಲ. ಎಲ್ಲೊ ದೂರದಲ್ಲಿ ಹಾವು ಹರಿದಾಡಿದರೂ ಸಾಕು ನಾಯಿ ಬೊಗಳಲು ಪ್ರಾರಂಭಿಸುತ್ತದೆ. ಅಂತಹ ಸೂಕ್ಷ್ಮ ಸಂವೇದಿ ವಾಸನಾ ಸಾಮರ್ಥ್ಯ ನಾಯಿಗಿದೆ. ನಾಯಿ ಬೊಗಳುವ ರೀತಿಯಿಂದಲೇ ಅದು ಏತಕ್ಕಾಗಿ ಬೊಗಳುತ್ತದೆಂಬುದನ್ನು ಕಂಡು ಹಿಡಿಯುವ ಜಾಣ್ಮೆ ಅಪ್ಪನಿಗಿತ್ತು. ಗಾಬರಿಗೊಂಡಾಗ, ಹೆದರಿಕೆಯಾದಾಗ ಬೇರೆ ಬೇರೆ ರೀತಿಯಲ್ಲಿಯೇ ಬೊಗಳುತ್ತದೆಯಂತೆ.

ಸಾಕಿದ ನಾಯಿ ದೊಡ್ಡದಾದ ಮೇಲೆ ಅಪ್ಪ ಅವುಗಳ ಒಡನಾಟ ಬೆಳೆಸುತ್ತಿದ್ದ. ಆದರೆ ಚಿಕ್ಕದಿದ್ದಾಗ ನಾಯಿಯ ಬಗ್ಗೆ ಲಕ್ಷ್ಯ ಕೊಡುತ್ತಲೇ ಇರಲಿಲ್ಲ. ಅದು ನಮಗೆ ಅನುಕೂಲವೂ ಆಗುತ್ತಿತ್ತು. ಹರಿಜನ ಕೇರಿಯಲ್ಲಿಯ ನಾಯಿ ಮರಿಹಾಕಿದ ದಿನದಿಂದಲೇ ನನಗೆ ಇದು ಬೇಕು ಇದು ಬೇಕು ಎಂದು ನಾವು ಗೆಳೆಯರೆಲ್ಲ ನಿರ್ಧರಿಸಿಬಿಡುತ್ತಿದ್ದೆವು. ಹತ್ತು ಹದಿನೈದು ದಿನಕ್ಕೆ ಇನ್ನೂ ಕಣ್ಣು ತೆರೆಯದಿರುವಾಗಲೆ ನಾಯಿಮರಿಯನ್ನು ಮನೆಗೆ ತಂದು ಸಾಕಿಬಿಡುತ್ತಿದ್ದೆ. ಹುಸಿಯಲ್ಲಿ ಆಡುತ್ತಿದ್ದ ನಾಯಿ ಮರಿ ಎತ್ತಿನ ಕಾಲಲ್ಲಿ ಸುಳಿದಾಡಿದರೆ ಅಪ್ಪನಿಗೆ ಸಿಟ್ಟು ಬರುತ್ತಿತ್ತು. ೩-೪ ತಿಂಗ ಮರಿಯಾದ ಮೇಲೆ ಎತ್ತಿನ ಕೂಡ ಹೊಲಕ್ಕೆ ಹೋಗುತ್ತಿತ್ತು. ಚಕ್ಕಡಿ ಬೆನ್ನತ್ತಿ ಹೊರಡುವಷ್ಟಾದ ಮೇಲೆ ಅಪ್ಪ ನಾಯಿಯ ಬಗ್ಗೆ ಕಾಳಜಿ ಮಾಡುತ್ತಿದ್ದ. ಒಮ್ಮೊಮ್ಮೆ ಸಿಟ್ಟು ಬಂದಾಗ ಬಾರಕೋಲಿನ ರುಚಿಯನ್ನೂ ತೋರಿಸುತ್ತಿದ್ದ. ನಾಯಿ ಕೂಳು ತಿನ್ನದೆ ಸ್ವಲ್ಪ ಸೊರಗಿದರೂ ಸಾಕು ಜನಪದ ರೀತಿಯಲ್ಲಿ ಚಿಕಿತ್ಸೆ ಮಾಡಿಸುತ್ತಿದ್ದ. ನಾಯಿ ಬಾಲದ ತುದಿ ಕತ್ತರಿಸುವುದು, ಮುಂಗಾಲು ಹಿಂಗಾಲು ಚಪ್ಪೆಯ ಮೇಲೆ ಬರೆಹಾಕಿಸುವುದು ಇತ್ಯಾದಿ. ಸಾಕಿದ ಮೂರು ನಾಲ್ಕು ನಾಯಿಗಳಲ್ಲಿ ಕರಿ ನಾಯಿ ಬಹಳ ಸೂಕ್ಷ್ಮವಾಗಿತ್ತು. ಎತ್ತು ಹೊಲ ಕಣ ಎಲ್ಲದಕ್ಕೂ ಹೊಂದಿಕೊಂಡಿತ್ತು. ಅಪ್ಪ ಆಗಾಗ ಅದರ ನೆನೆಪು ತೆಗೆಯುತ್ತಿದ್ದ.

ಆರಟ್ಟಿ ಬಿಳಿಹೋರಿ ನಮ್ಮ ಮನೆಗೆ ಬಂದ ಕತೆ ಕುತೂಹಲಕಾರಿಯಾಗಿದೆ. ಅಪ್ಪನ ಸ್ವಭಾವ ಮತ್ತು ಮನೋಸ್ಥಿತಿಯನ್ನು ಚನ್ನಾಗಿ ಬಿಂಬಿಸುತ್ತದೆ.ಮನೆಯಲ್ಲಿ ಹುಟ್ಟಿದ ಕೆಂದ ಹೋರಿಯ ಎತ್ತರ, ಬೆಳವಣಿಗೆ, ಆಕರ್ಷಕ ಕೋಡು, ಸವಶುದ್ಧ ಮುಂಗಾಲುಗಳನ್ನು ನೋಡಿದವರು- `` ಗೌಡ್ರ, ನಿಮ್ಮ ಹೋರಿಯಂಗ ಒಂದು ಹೋರಿಕರ ಆರಟ್ಟ್ಯಾಗ ಐತಿರಿ, ಇದಕ್ಕ ಪಕ್ಕಾ ಜೋಡಿ ಆಗತ್ರಿ. ಅದೂ ಇನ್ನೂ ಹಲ್ಲ ಹಚ್ಚಿಲ್ಲ. ಬಿಳಿ ನೀರಗೋಳಿ ಬಣ್ಣದ್ದು ನೋಡಿದರ ನೆದರು ಆಗುವಂಗ ಐತಿರಿ.'' ಎಂದು ಬನಹಟ್ಟಿಯವರು ಯಾರೋ ಹೇಳಿದ ಮಾತು ತಲೆಯಲ್ಲಿದ್ದಾಗಲೆ, ಆ ಹೋರಿ ಅಪ್ಪನ ಕಣ್ಣಿಗೆ ಬಿತ್ತು. ಹೊಲದಿಂದ ಮನಿಗೆ ಬಂದು ಊಟ ಮಾಡುವಾಗ '`ನಮ್ಮ ದೊಡ್ಡ ಎತ್ತುಗಳ ಹೆಜ್ಜಿ ನಿಧಾನ ಆಗ್ಯಾವ, ಇನ್ನ ನಮ್ಮ ಕೆಂದ ಹೋರಿಗೆ ಒಂದು ಜೋಡ ಮಾಡಬೇಕು'' ಎಂದು ಅಮ್ಮನಿಗೆ ಕೇಳುವ ಹಾಗೆ ಹೇಳಿದ. ಅಮ್ಮ ಅಪ್ಪನ ಮನಸನ್ನು ಅರಿತು `` ಅಯ್ಯನಗೌಡಗ ಹೇಳಿ ಈಗ ನೋಡಿಬಿಡ್ರಿ '' ಎಂದು ಹೇಳಿದ್ದಷ್ಟೆ ಸಾಕಾಗಿತ್ತು. ವಾಲೀಕಾರ ಹನಮಪ್ಪನ್ನ ಮತ್ತು ಅಯ್ಯನಗೌಡ ಕಾಕಾನ್ನ ಆರಟ್ಟಿಗೆ ಮರುದಿನ ಕಳಿಸಿಯೇ ಬಿಟ್ಟ. 

ನಾನು ಅಂದು ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ಕೆಂದ ಹೋರಿ ಎದುರಿಗೆ ಬಿಳಿ ಹೋರಿ ನಿಂತಿತ್ತು. ಅಪ್ಪ ಮತ್ತು ವಾಲೀಕಾರ ಹನಮಪ್ಪ ಗ್ವಾದಲಿಯಲ್ಲಿ ಮೇವು ಹಾಕುತ್ತ ನಿಂತಿದ್ದರು. ಪಾಟಿ ಚೀಲ ಇಟ್ಟವನೇ ನಾನು ತುದಿಗಟ್ಟಿಗೆ ನಿಂತು ಬಿಳಿಹೋರಿಯನ್ನು ನೋಡುತ್ತ ನಿಂತುಬಿಟ್ಟಿದ್ದೆ. ಹೊಸ ಹೋರಿಯನ್ನು ನೋಡಲು ಊರವರೆಲ್ಲ ಬಂದು ಬಂದು ಹೋಗುತ್ತಿದ್ದರು. 

ದನಗಳ ಮೇಲೆ ಪ್ರೀತಿ ಅಭಿಮಾನ ಇದ್ದ ಹನಮಪ್ಪ ಆರಟ್ಟಿಯವರಿಂದ ಈ ಹೋರಿ ಖರೀದಿ ಮಾಡಿ ತಂದುಬಿಟ್ಟಿದ್ದ. ``ನಮ್ಮ ಹೋರಿಗೆ ಈ ಹೋರಿ ಸರಿಜೋಡಿ ಐತಿ. ನಮಗೂ ದನಗಳ ಮ್ಯಾಲ ಪ್ರೇಮ ಐತಿ, ಈಗ ನಿಮ್ಮ ಹೋರಿ ನಮಗ ಕೊಡ್ರಿ. ಇಲ್ಲಾಂದ್ರ ನಮ್ಮ ಹೋರಿಯನ್ನ ನೀವು ತಗೋಳ್ರಿ. ಏನಂತೀರಿ? ಜೋಡಿ ಅಗಲಿಸುವ ಹಂಗಿಲ್ಲ.'' ಇಕ್ಕಟ್ಟಿನಲ್ಲಿ ಸಿಲುಕಿಸಿ ವ್ಯವಹಾರ ಮುಗಿಸಿ, ಹಿಡಿದುತಂದಿದ್ದ. ಆ ಹೊರಿ ಅರೆದವರಿಗೆ ಸ್ವಲ್ಪ ತೆಲೆ ಹಾಕುತ್ತಿದ್ದರೂ ಐದೆ ನಿಮಿಷದಲ್ಲಿ ಪಳಗಿಸಿ ಹೊಡೆದುಕೊಂಡು ಬಂದಿದ್ದ. ಅಪ್ಪನ ಕಾಲು ಹಕ್ಕಿಯಲ್ಲಿ ನಿಲ್ಲುತ್ತಿರಲಿಲ್ಲ. ಅಷ್ಟು ಉಮೇದಿಯಾಗಿತ್ತು. ಹೀಗೆ ಅಪ್ಪನ ಆಸೆ ಒಂದೇ ದಿನದಲ್ಲಿ ಈಡೇರಿಬಿಟ್ತಿತ್ತು.

ಹಗಲೂ ರಾತ್ರಿ ಹಕ್ಕಿ ಗ್ವಾದಲಿಸುತ್ತ ಸುಳಿದಾಡುವ ಅಪ್ಪ ಎರಡೇ ದಿನದಲ್ಲಿ ಬಿಳಿ ಹೋರಿಯನ್ನು ಒಲಿಸಿಕೊಂಡು ಬಿಟ್ಟಿದ್ದ. ಆ ವರ್ಷ ಬೇಸಿಗೆಯಲ್ಲಿ ಗಳೆ ಸಾಲು ಹಿಡಿಸಿದ್ದ. ಆಗಾಗ ಚಕ್ಕಡಿಗೂ ಹೂಡಿ ರೂಢಿ ಮಾಡಿಸಿದ. ಎರಡು ಹೋರಿಗಳನ್ನು ನೋಡಿದ ಜನರು ಬೆರಗಾಗುತ್ತಿದ್ದರು. ಅಂತಹ ಜೋಡಿ ಅದಾಗಿತ್ತು. ಬೆರೆ ಊರಿಗೆ ಹೋಗಿ ಬಂದಾಗ ಬಿಳಿ ಹೋರಿ ಮೈಮೇಲೆ ನೆದರಿನ ಗಾದರಿಗಳು ಏಳುತ್ತಿದ್ದವು. ಅಪ್ಪ ನಿವಾಳಿ ತೆಗೆದು ಮೈತಿಕ್ಕಿ ಕಾಳಜಿ ಮಾಡುತ್ತಿದ್ದ. ಅಮ್ಮ ಧೂಪ - ಕೌಡಲೋಬಾನ ಹಾಕಿ ನೆದರನ್ನು ನಿವಾಳಿಸಿ ತೆಗೆಸುತ್ತಿದ್ದಳು. 

ಊರಲ್ಲಿಯೇ ಅತ್ಯಂತ ನಿವಳಾದ ಎತ್ತು ಇದ್ದರೂ ಅಪ್ಪ ಮಾತ್ರ ಸ್ಪರ್ಧೆಗೆ ಬಿದ್ದು ಓಡಾಡಿಸಿ ದನಗಳನ್ನು ದಣಿಸುತ್ತಿರಲಿಲ್ಲ. ಕೋಡಿಗೆ ಗೊಂಡೆ ರಿಬ್ಬನ್ನು ಕಟ್ಟಿ ಸಿಂಗರಿಸುತ್ತಿರಲಿಲ್ಲ. ಆದರೆ ಕೊರಳಲ್ಲಿ ಕರಿ ದಾರ ಕಟ್ಟಿರುತ್ತಿದ್ದ, ನೆದರು ಆಗಬಾರದೆಂದು. 

ಭರಪೂರ ಸುಗ್ಗಿ. ಮಧ್ಯಾನ್ಹ ನೀರು ಕುಡಿಸಿ ನೆರಳಿಗೆ ಕಟ್ಟಬೇಕೆನ್ನುವಷ್ಟರಲ್ಲಿ ಮುಸುಗುಡುತ್ತ ಏದುಸಿರು ಬಿಡತೊಡಗಿದೆ. ಅವರಿವರನ್ನು ಕೂಗಿ ಕರೆದು ಗೊಟ್ಟ ಹಾಕುವ ಮುಂಚೆಯೇ ಕುಸಿದು ಬಿದ್ದು ಬಿಟ್ಟಿದೆ. ಅಮ್ಮ ಗೊಟ್ಟ ಹಾಕಲು ಕರಿಚಹ ಕುದಿಸಿಕೊಟ್ಟು ಕಣಕ್ಕೆ ಬರುವಷ್ಟರಲ್ಲಿ ಎಲ್ಲ ಮುಗಿದು ಹೋಗಿದೆ. ಎಂದೂ ಅಳದ ಅಮ್ಮ ಅಂದು ಕಣಕ್ಕೆ ಅಳುತ್ತಾ ಬಂದಳು. ಅಪ್ಪ ತಲೆ ಮೇಲಿನ ಪಟಾಗ ತೆಗೆದು ಮುಖಮುಚ್ಚಿ ಕಳಿತು ದುಃಖಿಸುತ್ತಿದ್ದ. 

ಕಾಕಾ ಕಣದಲ್ಲಿ ಬಹಳ ಹೊತ್ತು ಬಿಡಬಾರದೆಂದು ಆಗಿಂದಾಗ ಹೊಲಗೇರಿಗೆ ಸಾಗಿಸಿಬಿಟ್ಟ. ಹೂಳಲು ಬರುವುದಿಲ್ಲ ಎಂದು ಕೈಬಿಟ್ಟಿದ್ದರು. ಅಪ್ಪ ನಾಲ್ಕು ದಿನ ಊಟ ಮಾಡಲೇ ಇಲ್ಲ. ಅಮ್ಮ ಅತ್ತು ಅಂದೇ ಮನಸ್ಸು ಹಗುರ ಮಾಡಿಕೊಂಡಿದ್ದಳು. ಆದರೆ ಅಪ್ಪನಿಗೆ ಆ ಬಿಳಿ ಹೋರಿಯ ಸಾವನ್ನು ಬೇಗನೆ ಮರೆಯಲಾಗಲಿಲ್ಲ. 

ಆ ವರ್ಷ ಯುಗಾದಿಗೆ ರಗ್ಗಲಗಿ ಮಜಲು ಮಾಡುವವರಿದ್ದರು. ಈ ಬಿಳಿ ಹೋರಿಯ ಚರ್ಮ ಸುಲಿದು ರಗ್ಗಲಗಿ ಮಾಡಿಸಿದ್ದರು. ಹನಮಂತ ದೇವರ ಗುಡಿಯಲ್ಲಿ ಎರಡು ಕೋಲುಗಳ ಮೇಲೆ ಹೊಂದಿಸಿ ಇಟ್ಟಿದ್ದ ಅ ರಗ್ಗಲಗಿಯನ್ನು ನೋಡಿ ಮನಸ್ಸಿಗೆ ಕಸಿವಿಸಿಯಾಯಿತು. ಮತ್ತೊಮ್ಮೆ ಆ ರಗ್ಗಲಗಿಯನ್ನು ತಲೆಯೆತ್ತಿ ನೋಡುವ ಸಾಹಸ ಮಾಡಲೇ ಇಲ್ಲ, ನಾನು. ಈಗಲೂ ದನದ ಮನೆಯಲ್ಲಿ ಆ ಹೋರಿ ನಿಂತು ಮುಸುಗುಡುತ್ತಿರುತ್ತದೆ ಎಂಬ ಭಾವ ನನ್ನಲ್ಲಿದೆ. ಮನೆಯಲ್ಲಿಯ ಎಲ್ಲ ಎತ್ತುಗಳನ್ನು ಕಟ್ಟಿ, ಬಿಚ್ಚಿ, ಗಳೆಹೂಡಿದ ನಾನು ಆ ಹೋರಿಯನ್ನು ಮಾತ್ರ ಕೊನೆವರೆಗೆ ಮುಟ್ಟಲಿಲ್ಲ. ಮಾವ ಶಂಕರಗೌಡನನ್ನು ಮುಟ್ಟಿಸಿಕೊಡುತ್ತಿರಲಿಲ್ಲ. ಒಮ್ಮೆ ಕಲ್ಲಕ್ಕ ಚಿಗವ್ವ ಕಡದಳ್ಳಿಗೆ ಬಂದಾಗ ಬನಹಟ್ಟಿಯ ರುದ್ರಸ್ವಾಮಿ ಮತ್ತು ಹೊನ್ನಂತೆವ್ವನ ಗುಡಿಗೆ ಹೋಗಿದ್ದೆವು. ಅಪ್ಪ ಬಂದಿರಲಿಲ್ಲ. ಅಣ್ಣನೇ ಚಕ್ಕಡಿ ಹೊಡೆದು ತಂದಿದ್ದ. ಬನಹಟ್ಟಿ ಮನೆ ಮುಂದೆ ಕೊಳ್ಳ ಹರಿದು ನಿಂತಾಗ ಅಣ್ಣನನ್ನು ಒಮ್ಮಿಂದೊಮ್ಮೆಲೆ ಎತ್ತಿ ಒಗೆದಿತ್ತು. ಆದರೆ ಯಾವುದೇ ಪೆಟ್ಟು ಆಗಿರಲಿಲ್ಲ. ತೊಟ್ಟ ಧೋತ್ರ ಮಾತ್ರ ಹರಿದಿತ್ತು. ಮತ್ತೆ ಹೇಗೋ ಗುದ್ದಾಡಿ ಅಣ್ಣನೆ ಚಕ್ಕಡಿ ಹೂಡಿದ್ದ. ಕಡದಳ್ಳಿಗೆ ಬಂದಾಗ ಅಪ್ಪನೇ ಕೊಳ್ಳು ಹರಿದ. ಯಾಕೊ ಗೊತ್ತಿಲ್ಲ ಆ ಹೋರಿ ಈಗಲೂ ನನ್ನ ಭಾವಕೋಶದಲ್ಲಿ ನೆಲೆ ನಿಂತಿದೆ.

ಅದರಿಂದ ದೂರ ಇದ್ದ ನನ್ನ ಮೇಲೆಯೇ ಇಷ್ಟು ಗಾಢ ಪ್ರಭಾವ ಬೀರಿತ್ತು. ಅದರ ಜೊತೆ ಕೈ ತಿನಿಸು ತಿನಿಸಿ ಮೇಯಿಸುತ್ತ ಒಡನಾಡಿದ ಅಪ್ಪನಿಗೆ ಹೇಗೆನಿಸಿರಬೇಡ ! 

ಇದ್ದಾನೆ ಅಪ್ಪ ಇನ್ನೂ ಇದ್ದಾನೆ :

ನಾನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ. ಎ. ತರಗತಿಗೆ ಸೇರಿ ಎರಡು-ಮೂರು ತಿಂಗಳಾಗಿತ್ತು. ಮುರಘಾಠದಲ್ಲಿದ್ದೆ. ಧಾರವಾಡದ ಮಳೆ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳದೆ ಜ್ವರ ನೆಗಡಿಯಿಂದ ಬಳಲುತ್ತಿದ್ದೆ. ಒಂದು ದಿನ ಅಣ್ಣ ಬಸನಗೌಡ ರಾತ್ರಿ ಹತ್ತು ಗಂಟೆಯಷ್ಟೊತ್ತಿಗೆ ಮಠಕ್ಕೆ ಬಂದ. ಅಯಾಸದಿಂದ ಮಲಗಿದ ನಾನು ಎದ್ದು ಕುಳಿತೆ. ``ಅಪ್ಪ ನಿನ್ನ ನೆನೆಸಾಕ ಹತ್ಯಾನ, ಕರಕೊಂಡ ಬಾ ಅಂದಾನ'' ಎಂದ. 

ಒಮ್ಮೆಲೆ ಅಪ್ಪನ ಅನಾರೋಗ್ಯದ ಸ್ಥಿತಿ ನೆನೆಪಾಯಿತು. ನಾಗನೂರಿನ ಡಾಕ್ಟರೊಬ್ಬರು ಚಿಕಿತ್ಸೆ ನೀಡುತ್ತಿದ್ದರು. ಸುಧಾರಣೆ ಕಾಣದಿದ್ದಾಗ ನವಲಗುಂದಕ್ಕೆ ಕರೆದುಕೊಂಡು ಹೋಗಿದ್ದರಂತೆ. ಬೆನ್ನಲ್ಲಿಯ ನೀರು ತೆಗೆಸಿದ್ದರಂತೆ. ನಾಲ್ಕಾರು ದಿನ ನವಲಗುಂದದಲ್ಲಿಯೆ ಇದ್ದರಂತೆ. ಅಪ್ಪನ ಕೂಡ ಮುದಿಗೌಡ ಕಾಕಾ ಇದ್ದನಂತೆ. ಈ ಯಾವ ಸುದ್ದಿಯೂ ನನಗೆ ಗೊತ್ತಿರಲಿಲ್ಲ. ನವಲಗುಂದದ ಡಾಕ್ಟರ ಒಮ್ಮೆ ಭೆಟ್ಟಿಯಾದಾಗ ಹೇಳಿದ್ದರಿಂದ ಅಪ್ಪನಿಗೆ ಕ್ಷಯರೋಗ ಇತ್ತೆಂದು ಅನಂತರ ಗೊತ್ತಾಯಿತು.

ಅಪ್ಪನಿಗೆ ಹಲ್ಲು ನೋವು ಬಂದು ತೊಂದರೆಯಾದಾಗ ಜಿಟಿ ಜಿಟಿ ಮಳೆಯಲ್ಲಿಯೇ ನರಗುಂದಕ್ಕೆ ಕರೆದುಕೊಂಡು ಹೋದ ಪ್ರಸಂಗ ಮನದಲ್ಲಿ ಸುಳಿದಾಡಿತು. ಚಕ್ಕಡಿ ಹೂಡಿದಾಗ ಯಾವಾಗಲೂ ಮೂಕದಲ್ಲಿಯೇ ಕೂಡುತ್ತಿದ್ದ ಅಪ್ಪ ಅಂದು ಕೂತಿರಲಿಲ್ಲ. ಕೂಡುವಷ್ಟು ಶಕ್ತಿಯೂ ಇರಲಿಲ್ಲ. ಜ್ವರದಿಂದ ಬಳಲಿದ್ದ. ಕಂಬಳಿ ಹೊತ್ತು ನರಳುತ್ತ ಮಲಗಿದ್ದ. ಕಾಕಾ ನಾನು ಚಕ್ಕಡಿಯಲ್ಲಿ ಕೂತು ಅಪ್ಪನಿಗೆ ಕೊಡೆ ಚಾಟು ಹಿಡಿದಿದ್ದೆವು. ಮುದಿಗೌಡ ಕಾಕಾ ಮೂಕದಲ್ಲಿ ಕೂತು ಚಕ್ಕಡಿ ನಡೆಸುತ್ತಿದ್ದ. ನರಗುಂದದ ಡಾಕ್ಟರ ಪವಾರ ನೋವಿದ್ದಾಗಲೇ ಅಪ್ಪನ ಹಲ್ಲನ್ನು ತೆಗೆದರು. ಮೊದಲು ಹಲ್ಲು ನೋವು ಕಡಿಮೆಯಾಗಲಿ, ಆಮೇಲೆ ಹಲ್ಲು ತೆಗೆಯೋಣ ಎಂದು ಹೇಳಿದರೂ ಅಪ್ಪ ಕೇಳಲಿಲ್ಲ. ಈಗಲೇ  ಹಲ್ಲು ತೆಗೆಯ ಬೇಕೆಂದು ಚಿಕ್ಕ ಹುಡುಗರಂತೆ ಹಟ ಮಾಡಿದ್ದ. 

ಯಾವುದ್ಯಾವುದೊ ಸಂಗತಿಗಳು ನೆನಪಿಗೆ ಸಾಲಚ್ಚಿ ಬರತೊಡಗಿದವು.

ಅಣ್ಣನಿಗೆ ಯಾರೊ ಗೆಳೆಯರು ಹಾಸಿಗೆ ಹಾಸಿಕೊಟ್ಟರು. ನಿದ್ದೆಗಣ್ಣಿನಲ್ಲಿದ್ದ ನಾನು ಹಾಗೆಯೇ ಮಲಗಿಬಿಟ್ಟೆ. ರಾತ್ರಿಯೆಲ್ಲಾ ಅಪ್ಪನ  ಬಗ್ಗೆ ಕನಸು ಹಳವಂಡಗಳೆ ಹರಿದಾಡಿದವು. ನಿದ್ದೆಯೊ ಮಂಪರೊ ಆಯಾಸವೊ ಏನೂ ಸರಿಯಾಗಿ ತಿಳಿಯದ ಸ್ಥಿತಿಯಲ್ಲಿದ್ದೆ. ನನ್ನ ಸ್ಥಿತಿ ನೋಡಿದ ಅಣ್ಣ ಹೆಚ್ಚಿಗೆ ಏನನ್ನೂ ಹೇಳಿರಲಿಲ್ಲ.


ಮುಂಜಾನೆ ಧಾರವಾಡ ಬಾದಾಮಿ ಬಸ್ ಹತ್ತಿ ನವಲಗುಂದಕ್ಕೆ ಬಂದೆವು. ನವಲಗುಂದದಲ್ಲಿ ಅಪ್ಪನಿಗಾಗಿ ಮೋಸಂಬಿ ಹಣ್ಣು ತೆಗೆದುಕೊಂಡೆ. ಗದಗ ರಾಮದುರ್ಗ ಬಸ್ಸಿಗೆ ಹತ್ತುವಾಗ ಅಣ್ಣ ಹಿಂದೆ ಉಳಿದ. ನಾನು ಬರುತ್ತೇನೆ ನೀ ನಡೆ ಎಂದ. ಅಷ್ಟೊತ್ತಿಗಾಗಲೆ ಅಣ್ಣನಿಗೆ ಅಪ್ಪನ ಸಾವಿನ ಸುದ್ದಿ ಮಟ್ಟಿತ್ತು. ನನಗೆ ಹೇಳಿರಲಿಲ್ಲ. ಅಮರಗೋಳ ಅಡ್ಡಲೈನ್‌ಗೆ ಬಂದೆ. ಅಲ್ಲಿಳಿದು ನಡೆಯುತ್ತ ಹೊರಟೆ. ಹಿಂದಿನಿಂದ ಬಂದ ಗೆಳೆಯ ಮಹಾದೇವಪ್ಪ ಸೈಕಲ್ಲಮೇಲೆ ಕೂಡ್ರಿಸಿಕೊಂಡ. ಊರು ಸಮೀಪ ಬಂದಾಗ ``ನಿನಗ ಯಾವಾಗ ಗೊತ್ತಾಯ್ತು'' ಎಂದ. ನನಗೆ ಸ್ಪಷ್ಟವಾಗಿ ಏನೂ ತಿಳಿಯಲಿಲ್ಲ. ``ಅಣ್ಣನೇ ಧಾರವಾಡಕ್ಕೆ ಬಂದಿದ್ದ'' ಎಂದೆ. ಸೈಕಲ್ಲಿಳಿದು ಕಡದಳ್ಳಿ ಹಾದಿ ಹಿಡಿದೆ. ಅಮರಗೋಳದ ಮನೆಯಲ್ಲಿ ಯಾರೂ ಇರಲಿಲ್ಲ. ದಾರಿಯಲ್ಲಿ ನಿಂತ  ಕಿತ್ತಲಿ ಸಂಗಪ್ಪ ಮನೆಯಾಗ ಯಾರೂ ಇಲ್ಲ ಎಂಬ ಸುದ್ದಿ ಮುಟ್ಟಿಸಿದ. ಬೆಣ್ಣಿ ಹಳ್ಳ ದಾಟಿ ಊರಮುಂದಿನ ಹೊಲದ ಹತ್ತಿರ ಬರುವಷ್ಟರಲ್ಲಿ ಅಪ್ಪನ ಸಾವಿನ ಸ್ಪಷ್ಟತೆ ನನ್ನ ಸುಪ್ತ ಮನಸ್ಸಿಗೆ ಗೊತ್ತಾಗಿತ್ತು. ದುಃಖದ ಕಟ್ಟೆಯೊಡೆದಿತ್ತು. ಅಳುತ್ತ ಓಡುತ್ತಿದ್ದ ನನಗೆ `` ಆ ಮನಿಯಾಗ '' ಎಂದು ಮಾದರ ಕರಿಯಪ್ಪ   ಸೂಚನೆ ಕೊಟ್ಟ. ಸಣ್ಣರುದ್ರಗೌಡ ಮಾವನ ಛಾವನಿ ಹತ್ತಿರ ಬರುವಷ್ಟರಲ್ಲಿ ಕುಂಬಾರ ಈಶಪ್ಪ ಬಂದು ಕೈಯಲ್ಲಿಯ ಚೀಲ ಇಸಿದುಕೊಂಡ. ನನ್ನೊಂದಿಗೆ ಅವನೂ ಬಂದ. 

ಅಪ್ಪನ ಹೆಣದ ಮುಂದೆ ಕುಳಿತ ಅಮ್ಮ ನಾ ಬಂದದ್ದನ್ನು ನೋಡಿ ಎದ್ದು ಬಂದಳು. ಮೈದಡವಿದಳು. `ಈ ದುಃಖ ಸಹಿಸಿಕೊ' ಎಂಬಂತೆ ಅಮ್ಮನ ಮುಖ ನಿರ್ಲಿಪ್ತವಾಗಿತ್ತು. ಅಷ್ಟರಲ್ಲಿ ನನ್ನನ್ನು ಸಮಾಧಾನ ಮಾಡಿ ಹನಮಂತ ದೇವರ ಗುಡಿಗೆ ಕರೆತಂದಿದ್ದರು. ದಿಕ್ಕೆಟ್ಟ ನಾನು ನಿರ್ಭಾವುಕನಾಗಿ ಕುಳಿತಿದ್ದೆ. ಚಿಗವ್ವ ಗಂಗಕ್ಕ ನನ್ನ ಹತ್ತಿರ ಬಂದು ನೀರು ಕುಡಿಸಿದಳು. ತಾನೂ ಅಳು ತಡೆಯಲಾರದೆ ನನ್ನ ಸಂತೈಸಿದಳು. ನಾನು ಅಳುತ್ತ ಬಂದದ್ದನ್ನು ನೋಡಿದ ಬೆವಿನಗಿಡದ ದ್ಯಾಮಮ್ಮ `` ಮೊದಲ ಆ ಹುಡುಗನ್ನ ಸಮಾಧಾನ ಮಾಡ್ರಿ'' ಎಂದ ಮಾತು ನನಗೂ ಕೇಳಿತ್ತು. ದ್ಯಾಮಮ್ಮನ ಮಾತು ಮುಗಿಯುವಷ್ಟೊತ್ತಿಗೆ ನನ್ನ ಹತ್ತಿರ ಬಂದ ಚಿಗವ್ವ ಕೆಲ ಹೊತ್ತು ನನ್ನ ಹತ್ತಿರವೇ ಇದ್ದಳು.

ಸ್ಮಶಾನಯಾತ್ರೆ ನಡೆದಾಗ ಕುಂಬಾರ ಈರಪ್ಪಜ್ಜ ನನ್ನೊಂದಿಗೆ ಇದ್ದ. ಮೈದಡವಿ ಅವ್ಯಕ್ತ ಸಮಾಧಾನ ನೀಡುತ್ತಿದ್ದ. ಎಲ್ಲಾ ಮುಗಿದು ಮನೆಗೆ ಮರಳಿದೆ. ಮನೆಯ ದಾರಿಯಲ್ಲಿಯೇ ನಿಂತ ಈಶಪ್ಪ ತಮ್ಮ ಮನೆಗೆ ಕರೆದೊಯ್ದ. ಜಳಕಕ್ಕೆ ವ್ಯವಸ್ಥೆ ಮಾಡಿದ. ದ್ಯಾಮಮ್ಮ ಒಳಕ್ಕೆ ಕರೆದೊಯ್ದು ಮಜ್ಜಿಗೆ ಕುಡಿಸಿದಳು. ಒತ್ತಾಯ ಮತ್ತು ಒತ್ತಾಸೆ ಮಾಡಿ ಊಟ ಮಾಡಿಸಿದಳು. ಜೊತೆಗೆ ಈಶಪ್ಪನೂ ಇದ್ದ. 

ಜೋಲು ಮುಖ ಹಾಕಿಕೊಂಡು ಮನೆಗೆ ಬಂದಾಗ ಅಮ್ಮ ನನ್ನ ಹತ್ತಿರ ಬಂದು ಮೌನವಾಗಿ ಕೂತಳು. ಚಿಗವ್ವ ಊಟಕ್ಕೆ ಕರೆದಳು. ನಾನು ಸುಮ್ಮನಿದ್ದೆ. ಈಶಪ್ಪ ಊಟ ಆಗಿದೆ ಎಂದು ಹೆಳಿದ. ಅಮ್ಮನಿಗೆ ನನ್ನದೆ ಚಿಂತೆಯಾಗಿತ್ತು. ಅಮ್ಮನ ನನ್ನ ಬಗ್ಗೆ ಚಿಂತೆ ಹೆಚ್ಚಾಗಲು ಗುರನಗೌಡರ ಚನ್ನಮ್ಮನ ಮಾತು ಕಾರಣವಾಗಿತ್ತು. ``ಯಕ್ಕಾ ಚಂದ್ರಗೌಡ ಶಿವನಗೌಡ ಅಣ್ಣಗ ಆರಾಮು ಇಲ್ಲದ್ದನ್ನ ಮನಸಿಗೆ ಹಚಗೊಂಡಾನ, ಧಾರವಾಡಕ್ಕ ಹೋಗು ಮುಂದ ನಾ ಮಾತಾಡಿಸಿದೆ. - ಶಿವನಗೌಡ ಅಣ್ಣಗ ಈ ಸಲ ಬಾಳ ತ್ರಾಸ ಆತಪಾ, ತಾಯಿಯಿಲ್ಲದ ಪರದೇಶಿ ಮಗ ನೀನು, ಈಗ ಸ್ವಲ್ಪ ಆರಾಮು ಆಗ್ಯಾನ, ನೀ ಚಿಂತಿ ಮಾಡಬ್ಯಾಡ - ಅಂತ ನಾ ಹೇಳಿದರ ಕಣ್ಣಾಗ ನೀರು ತಂದು ನಿಲ್ಲಲಾರದ ಅತಗೊಂತ ಹೋಗಿಬಿಟ್ಟ. '' ಎಂದು ಚನ್ನಮ್ಮ ಅಮ್ಮನಿಗೆ ಹೇಳಿದ್ದಳಂತ. ನನಗ ಈ ಮಾತು ಅಮ್ಯಾಲ ಗೊತ್ತಾಗಿತ್ತು. 

ಒಮ್ಮೆ ನಮ್ಮೂರ ಶಾಸ್ತ್ರೀಗಳ ಕಟ್ಟೆ ಮೇಲೆ ಕುಂತಾಗ ಹಾದಿಮನಿ ಬಸಮ್ಮ ಬಂದು `` ಏ ಚಂದ್ರಗೌಡ ಹುಚ್ಚ ಅದಿಯ ಶ್ಯಾಣ್ಯಾ ಅದಿಯ, ಮನಸಿಗೆ ಹಚಗೋಬಾರದು, ಹರೇದ ಹುಡುಗಾಗಿ ಚಂದಂಗ ತಿಂದುಣಬೇಕು, ನೋಡು ನಿಮ್ಮಮ್ಮ ಬಾಯಮ್ಮ ನಿನ್ನ ಚಿಂತೀನ ಮಾಡತಾಳ, ಅವರ ಆಯುಷ್ಯ ಅಷ್ಟ ಇತ್ತು.'' ಎಂದು ಸಾಂತ್ವನ ಮತ್ತು ಬುದ್ಧಿ ಹೇಳಿದ್ದಳು. ಹಳ್ಳಿಯ ಈ ತಾಯಂದಿರ ನಿಷ್ಕಲ್ಮಶ ಪ್ರೀತಿಗೆ ಏನೆನ್ನಬೇಕು ? ಆ ಮಾತುಗಳನ್ನು ಕೇಳಿ ಮೂಕನಂತೆ ಕುಳಿತುಬಿಟ್ಟಿದ್ದೆ. 

ಇದು ನನ್ನೊಳಗಿದ್ದು ಈಗಲೂ ಅವ್ಯಕ್ತವಾಗಿ ಕಾಡುತ್ತಿರುವಆಪ್ಪನ ಚಿತ್ರ. ಭಾವ ಕೋಶದಲ್ಲಿ ನೆಲೆ ನಿಂತಷ್ಟೆ ಪರಿಣಾಮಕಾರಿಯಾಗಿ ಬರಹದಲ್ಲಿ ಮೂಡಿ ಬಂದಿಲ್ಲ, ಬಹುಶಃ ಮೂಡಿ ಬರುವುದೂ ಇಲ್ಲ.


No comments: