Friday, August 12, 2022

ಮಣ್ಣಿನ ಹಬ್ಬ ಗುಳ್ಳವ್ವ

 ಮಣ್ಣು ಪೂಜೆಯ ಹಬ್ಬ ಗುಳ್ಳವ್ವ


ಆಷಾಢ ಮಾಸದ ಮೊದಲ ಮಂಗಳವಾರದಿಂದ ಕೊನೆಯ ಮಂಗಳವಾರದ ವರೆಗೆ ಗುಳ್ಳವ್ವನನ್ನು ಇಟ್ಟು ಪೂಜಿಸಿ ಕಳಿಸಿಕೊಡಲಾಗುತ್ತದೆ. ಆಷಾಢ ತಿಂಗಳಲ್ಲಿ ಸಾಮಾನ್ಯವಾಗಿ ನಾಲ್ಕು ಮಂಗಳವಾರ ಬರುತ್ತವೆ. ಒಮ್ಮೊಮ್ಮೆ ಐದು ಮಂಗಳವಾರ ಬರುತ್ತವೆ. ತಿಂಗಳಲ್ಲಿ ಬರುವ ಎಲ್ಲ ಮಂಗಳವಾರವೂ ಗುಳ್ಳವ್ವನನ್ನು ಇರಿಸಲಾಗುತ್ತದೆ. 

ನಮ್ಮ ಹಬ್ಬಗಳೆಲ್ಲ ಕೃಷಿ ಮೂಲದಿಂದಲೇ ಬಂದಿರುವಂತಹವು. ಕಾರ ಹುಣ್ಣಿಮೆ, ಮಣ್ಣೆತ್ತಿನ ಅಮವಾಸೆ, ಗುಳ್ಳವ್ವ, ಹುತ್ತಪ್ಪ , ಗಣಪತಿ, ಜೋಕುಮಾರ, ಶೀಗವ್ವ, ಗೌರವ್ವ, ಬನ್ನಿ ಹಬ್ಬ(ದಸರಾ), ಹಟ್ಟಿಹಬ್ಬ(ದೀಪಾವಳಿ), ಎಳ್ಳ ಅಮವಾಸೆ, ಭಾರತ ಹುಣ್ಣಿಮೆ, ಯುಗಾದಿ…ಎಲ್ಲವೂ ಕೃಷಿಯ ಹಿನ್ನೆಲೆ ಹೊಂದಿವೆ.


ಸೋಮವಾರ ದಿನವೇ ಸಾಯಂಕಾಲ ತರುಣಿ- ಗೆಳತಿಯರು ಗುಂಪು ಸೇರಿಸಿಕೊಂಡು, ಹಿರಿಯ ಗರತಿಯರ ಸಲಹೆಯ ಪಡೆದು ಕೆರೆಯಿಂದ ಅರಲು(ಹಸಿ ಮಣ್ಣು ) ತರುವರು. ತರುವಾಗ 


ಗುಳ್ಳವ್ವನ ಅರಲ ತರಲಿಲ್ಲ ತರಲಿಲ್ಲ

ಗುಗಂಜಿ ಹಚ್ಚಿ ಆಡಲಿಲ್ಲ ಆಡಲಿಲ್ಲ..! ಎಂದು

ಗುಳ್ಳವ್ವನ ಕುರಿತ ಹಾಡುಗಳನ್ನು ಹಾಡುವರು.


ಮಂಗಳವಾರ ಮಧ್ಯಾಹ್ನ ನಾಲ್ಕಾರು ಜನ ಸೇರಿ, ಮಣ್ಣಲ್ಲಿಯ ಹರಳು ಕಲ್ಲು ತೆಗೆದು, ಜಜ್ಜಿ ಹದ ಮಾಡುವರು. ಪರಿಣತರು ಮನೆಯ ಹಾಸಿಗಲ್ಲಿನ ಮೇಲೆ ಬಡಿದು ಬಡಿದು ಚೌಕಾಕಾರದ ಕಂಬ ತಯಾರಿಸುವರು. ಗುಳ್ಳವ್ವ ನಚೌಕಟ್ಟಿನಷ್ಟೇ ಎತ್ತರವಿರಿಸಿ  ಮುಂದೆರಡು,ಹಿಂದೆರಡು ಕಂಬವಿರಿಸಿ, ಮುಂದಿನ ಕಂಬಗಳ ನಡುವೆ ಗುಳ್ಳವ್ವನ ಚೌಕಟ್ಟು ಇಟ್ಟು, ಛತ್ತಿನ ಮೇಲೆ (ಹಲಿಗೆ) ಮಣಿ ಹಾಕಿ ಸಿದ್ಧ ಪಡಿಸುವರು. ಗೊಗ್ಗವ್ವನ ಮುಖ ತಯಾರಿಸಲು (ಎಲೆ ಅಡಿಕೆ ದಕ್ಷಿಣೆ ಸಹಿತ) ಬಡಿಗೇರ ಮನೆಗೆ ಕೊಟ್ಟು ಬರುವರು. ಪರಿಣತರು ಮತ್ತು ಶಕ್ತಿವಂತರು ಗೊಗ್ಗವ್ವನ ಕಂಬ ತಾಯಾರಿಸುವರು. ಇದೂ ಸಹ ಚೌಕ ಆಕಾರದ ಕಂಬ. ಅದರ ಮೇಲೆ ಬಡಿಗೇರ ಅಜ್ಜ ತಾಯಾರಿಸಿ ಕೊಟ್ಟ ಮುಖವನ್ನು ಕಟ್ಟಿ ಚುಚ್ಚಿ ಕೂಡಿಸುವರು. ಕೈಗಳಂತೆ ಎರಡು ಕಟ್ಟಿಗೆಗಳನ್ನು ಚುಚ್ಚಿ ಅಲ್ಲಿ  ತಯಾರಿಸಿದ ಮಣ್ಣಿನ ಆರತಿ ಇಡುವರು.

ಗುಳ್ಳವ್ವನ ಮಂದಿರದ ಕಂಬಗಳಿಗೆ ಜಾಲಿಗಿಡದ ಹಸಿರು ಮೊಗ್ಗು, ಹಳದಿ ಹೂ, ಗುಲಗಂಜಿ ಮತ್ತು ಕುಸುಬೆ ಕಾಳುಗಳಿಂದ ಚಿತ್ತಾರ ರಚಿಸಿ ಅಲಂಕರಿಸುವರು. ಅಲ್ಲದೆ ಬಣ್ಣ ಬಣ್ಣದ ಹಾಳೆಯ ಚಿತ್ತರಗಿಗಳನ್ನು ಚುಚ್ಚಿ ಸಿಂಗಾರಗೊಳಿಸುವರು. ಅಲ್ಲದೆ ಊರಲ್ಲಿರುವ ಪರಿಣತರಿಂದ ಪೂರ್ಣ ರೂಪದ ಬಸವನ ಮೂರ್ತಿ ಮಾಡಿಸಿ ತರುವರು. ಬಸವನಿಗೆ ಮೂಗುದಾರ, ಮಕಾಡ, ಹಣೆಪಟ್ಟಿ,ಜೂಲಗಳ ವಿನ್ಯಾಸವನ್ನು ಜಾಲಿ ಮೊಗ್ಗು, ಹೂ,ಕುಸುಬೆಗಳಿಂದ ಕುಶಲಿಗಳು ಮಾಡಿ ಸಿಂಗರಿಸುವರು. ಮಾಡಿಸಿತಂದ ಬಸವನ ಜೊತೆಗೆ ಗಂಡು ಹುಡುಗರು ಮಾಡಿದ ಬಸವನ ಮೂರ್ತಿಗಳನ್ನು ಸಹ ಅವರನ್ನು ಪ್ರೋತ್ಸಾಹಿಸಲು ಇಡುವರು. ತರುಣಿಯರು, ಚಿಕ್ಕ ಹುಡುಗಿಯರ ಜೊತೆ ಚಿಕ್ಕ ಹುಡುಗರೂ ಸಹ ಈ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸುವರು.


ಸಾಯಂಕಾಲದ ಒಳಗೆ ಈ ಎಲ್ಲ ತಯಾರಿ ಮುಗಿಸಿ ಅರಿವೆಯಲ್ಲಿ ಅರಳು (ಜೋಳದಿಂದ ತಯಾರಿಸಿದ ಚುರುಮರಿ) ಮತ್ತು ಕಡಲಿ ಕಾಳಿನ ಉಸುಳಿಗಳನ್ನು ಕಟ್ಟಿಕೊಂಡು ಕೆರೆಯ ಬಯಲಿಗೆ ತಿನ್ನಲು ಹೋಗುವರು. ಪರಸ್ಪರ ಅರಳು ಉಸುಳಿ ಹಂಚಿಕೊಂಡು ತಿಂದು, ಕೆರೆಯ ನೀರು ಕುಡಿದು, ಸ್ವಲ್ಪ ಹೊತ್ತು ಆಟ ಆಡಿ ಮನೆಗೆ ಬರುವರು. ಇಲ್ಲಿ ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಎಲ್ಲ ಮಕ್ಕಳು, ತರುಣ ತರುಣಿಯರು ಭಾಗವಹಿಸುವರು.


ಸಂಜೆ ಊಟದ ಅನಂತರ ಹಿರಿಯ ಗರತಿಯರು, ತರುಣಿಯರು, ಚಿಕ್ಕ ಗಂಡು ಹೆಣ್ಣು ಮಕ್ಕಳು ಸೇರುವರು. ಗುಳ್ಳವ್ವನನ್ನು ಎದುರುಗೊಳ್ಳುವ ಹಾಡನ್ನು ಹಾಡುವರು. ಗಂಡು ಹುಡುಗರು, ತಮ್ಮ ಮುಂದೆ ಬಸವನ ಮೂರ್ತಿಯನ್ನು ಇಟ್ಟುಕೊಂಡು ರೈತರಾಗಿರುವರು. ತಡ ರಾತ್ರಿಯವರೆಗೆ ಹಾಡು ನಡೆಯುವವು. 


ಮರುದಿನ ಮಧ್ಯಾಹ್ನ ಊಟದ ಸಮಯಕ್ಕೆ , ಬುತ್ತಿ ಕಟ್ಟಿಕೊಂಡು, ಗೊಗ್ಗವ್ವನನ್ನು ಹೊತ್ತುಕೊಂಡು ಕಳಿಸಿಬರಲು ಹೊರಡುವರು. ದಾರಿಯ ಮನೆಯ ತರುಣಿಯರು ಮಕ್ಕಳು ಸೇರಿ ಕೆರೆಯ ದಡದ ಬನ್ನಿ ಮರದ ಕೆಳಗೆ ಗೊಗ್ಗವ್ವನನ್ನು ಕೂಡಿಸಿ, ಆಟ ಆಡುವರು. ಗೊಗ್ಗವ್ವನಿಗೆ ಆರಾಮ ಇಲ್ಲ ಎಂದು ವೈದ್ಯರನ್ನು ಕರೆತಂದು ಸೂಜಿ ಚುಚ್ಚಿ ಔಷಧ ಕೊಟ್ಟರೂ ಗೊಗ್ಗವ್ವ ಸಾಯುವಳು. ಆಗ ಹೆಣ್ಣು ಮಕ್ಕಳು ಹಾಡಿ ಹಾಡಿ ಅಳುವರು. (ಇಲ್ಲಿ ಕೆಲವು ಅಶ್ಲೀಲ ಪದಗಳ ಹಾಡು ಬಳಸುವರು..ಹರಿಪಲ್ಲೆ ತಾರಾಕ ಹೋಗಿ….., ತುಪ್ಪ ಕಾಸಾಕ ಹೋಗಿ…)

ಅನಂತರ ಗೊಗ್ಗವ್ವನನ್ನು ಕೆರೆಗೆ ಚಲ್ಲುವರು. ಅನಂತರ ತಾವು ತಂದ ಬುತ್ತಿ ಬಿಚ್ಚಿ ಊಟ ಮಾಡುವರು.


ಎರಡನೇ ವಾರ ಎರಡು ಬಾಗಿಲ ಮಹಡಿ ಮಂದಿರ, ಮೂರನೇ ವಾರ ಮೂರು ಮಹಡಿ ಮಂದಿರ..ಹೀಗೆ ಕೊನೆಯ ವಾರದ ವರೆಗೆ ಮಂದಿರ ಮಾಡಿ ಅಲಂಕರಿಸುವರು. ಕಡೆಯ ವಾರ ಹೆಚ್ಚು ಜನ ಸೇರುವರು. ಮಳೆ ತರುವ ದೇವತೆ ಗುಳ್ಳವ್ವ. ಕೊನೆಯ ವಾರದ ವರೆಗೆ ಮಳೆ ಬಂದಿರದಿದ್ದರೆ, ಸರಿಯಾಗಿ ಬೀಳ್ಕೊಡದೆ, ನೀರಲ್ಲಿ ಮುಳುಗಿಸದೆ ಮನೆಯ ಮಾಳಿಗೆ ಮೇಲೆ ಬಿಸಿಲಿಗೆ ಇಟ್ಟು ಬಿಡುವರು. ಗೊಗ್ಗವ್ವನ ಮೈ ಬಿಸಿಲಿಗೆ ಬಿರಿತರೆ, ತಾನೆ ಮಳೆ ತರಿಸುವಳು ಎಂದು ಈ ತಂತ್ರ. ಜನಪದರು ದೇವರೊಂದಿಗೆ ಜಗಳಾಡುವ ಪರಿ ಇದು. ಒಂದು ರೀತಿ ವೈರಭಕ್ತಿ.

ಈ ಹಬ್ಬದ ಆಚರಣೆಯಲ್ಲಿ,ಮಣ್ಣು,ಬಸವ, ಧಾನ್ಯ ಹೂವು, ಅರಳು, ಕಲೆ,ಬುತ್ತಿ ,ಹಾಡು..ಊಟ ಆಟ ಎಲ್ಲವೂ ಮೇಳವಿಸಿಕೊಂಡಿರುವವು. ಮಕ್ಕಳು ತರುಣಿಯರು ಬಯಲು ಮತ್ತು ಮನೆಯಲ್ಲಿ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿ ತಮಗೆ ಗೊತ್ತಿಲ್ಲದೆಯೇ ಲೋಕ ಅನುಭವ ಪಡೆಯುವರು. 


ನಮ್ಮ ಜನಪದ ಹಬ್ಬಗಳೆಲ್ಲ ಮಣ್ಣಿನ ಸೊಗಡಿನಿಂದಲೇ ಕೂಡಿವೆ.

ಪ್ರಾದೇಸಿಕವಾಗಿ, ಬೇರೆ ಬೇರೆ ವಿಧಾನ ಪದ್ಧತಿಗಳಿದ್ದರೂ ಮಣ್ಣ ಪೂಜೆಯ ಆಶಯಕ್ಕೆ ಎಲ್ಲಿಯೂ ಭಂಗ ಬರುವುದಿಲ್ಲ.

ಊರಿನ ಆಯ್ದ ಕೆಲವು ಮನೆಗಳಲ್ಲಿ ಗುಳ್ಳವ್ವನನ್ನು ಕೂಡಿಸುವ ಪರಂಪರೆ ಇರುತ್ತದೆ. ಯಾರ ಬೇಕಾದವರ ಮನೆಯಲ್ಲಿ ಕೂಡಿಸಲು ಬರುವುದಿಲ್ಲ. ಕೂಡಿಸುವವರ ಮನೆ ಒಕ್ಕಲು, ಕೃಷಿ ಸಮೃದ್ಧಿಯ ಮನೆ ಆಗಿರುತ್ತದೆ.


ಗುಳ್ಳವ್ವನ ಕುರಿತು ಒಂದು ಕತೆ ಪ್ರಚಲಿತದಲ್ಲಿದೆ. ಬಡವನ ಮಗಳಾದ ಗುಳ್ಳವ್ವನಿಗೆ ಪಟ್ಟ (ಋತುಮತಿಯಾಗಿ ಹನ್ನೆರಡು ವರುಷವಾದರೆ ಒಂದು ಪಟ್ಟ ) ಮೀರಲು ಬಂದರೂ ಮದುವೆಯಾಗಿರು ವದಿಲ್ಲ. ಶ್ರೀಮಂತನ ಮಗ ಮದುವೆಯಾಗದೆ ಸತ್ತಾಗ ಸದ್ಗತಿ ಸಿಗುವುದಿಲ್ಲವೆಂದು ಹೆಣಕ್ಕೆ ಮದುವೆ ಮಾಡಲು ಅವನ ತಂದೆ ತಯಾರಿ ನಡೆಸುತ್ತಾನೆ. ಹಣಕ್ಕೆ ಕನ್ಯೆಯನ್ನು ಯಾರೂ ಕೊಡುವುದಿಲ್ಲ. ಬಡವನಾದ ಗುಳ್ಳವ್ವನ ತಂದೆ ಮಗಳಿಗೆ ಹೀಗಾದರೂ ಮದುವೆಯಾಗಲಿ ಎಂದು ಒಪ್ಪುತ್ತಾನೆ. ಮದುವೆ ನಡೆಯುತ್ತದೆ. ಗಂಡನನ್ನು ಮಣ್ಣು ಮಾಡಲು ಬಿಡದೆ ರಾತ್ರಿ ಹೆಣದ ಹತ್ತಿರವೇ ಇದ್ದು , ಮಣ್ಣಿನ ಬಸವನನ್ನು ಮಾಡಿ ಪೂಜಿಸಿ ಬೇಡಿಕೊಂಡು ಗಂಡನ ಜನ್ಮವನ್ನು ಮರಳಿ ಪಡೆಯುತ್ತಾಳೆ. ಈ ಹಿನ್ನೆಲೆಯಲ್ಲಿ ಗುಳ್ಳವ್ವ ಪೂಜೆಗೊಳ್ಳುವ ದೇವತೆಯಾಗುತ್ತಾಳೆ..


ಈ ಕತೆಯಲ್ಲಿಯ ಸಾಂಕೇತಿಕ ಅರ್ಥ ಹೀಗಿದೆ. ಮಣ್ಣು ಸತ್ತವರನ್ನು ಬದುಕಿಸುವ ಶಕ್ತಿ ಹೊಂದಿದೆ. ಜೀವ ಕೊಡುವ ಶಕ್ತಿ ಸಂಜೀವಿನಿ ಈ ಮಣ್ಣು. ಆ ಮಣ್ಣು ಹದಗೊಂಡು ಜಗತ್ತನ್ನು ಬದುಕಿಸುವ ಆಹಾರಧಾನ್ಯ ಕೊಡುತ್ತದೆ. ಹದಗೊಳಿಸಿ ಉತ್ತಿ ಬಿತ್ತುವ ಶಕ್ತಿ ಬಸವನದು. ಅದಕ್ಕೆಂದೇ ಗುಳ್ಳವ್ವ ಮತ್ತು ಬಸವನನ್ನು ಜೊತೆಜೊತೆಯಾಗಿ ಪೂಜಿಸಲಾಗುವುದು. 

ಈಶ್ವರಲಿಂಗ ದೇವಾಲಯದಲ್ಲಿ…ಈಶ್ವರ ಲಿಂಗ ಬೀಜವಾಗಿ, ಪಾಣಿಬಟ್ಟಲು ಪಾರ್ವತಿ (ಮಣ್ಣು) ಯಾಗಿ, ಧಾರಾ ಬಟ್ಟಲ ನೀರು ಗಂಗೆಯಾಗಿ…ಕೃಷಿಯ ಜೀವಸತ್ವವನ್ನು ಪ್ರತಿನಿಧಿಸುವ ಸಂಕೇತಗಳು. ಲಿಂಗದ ಎದುರು ಬಸವ ಇರುವನು.ಬೀಜ,ಮಣ್ಣು,ನೀರು…

ಕೂಡಿದಾಗ ಜೀವದ ಉತ್ಪತ್ತಿ. ಹಾಗೆ ಮಣ್ಣನ್ನು ಸಂಸ್ಕರಿಸುವ ಶಕ್ತಿ ಇರುವುದು ಬಸವನಿಗೆ. 

ಹೀಗೆ ಬಸವ ಉತ್ತುಬಿತ್ತುವ ಕ್ರಿಯೆಯ ಪ್ರತಿನಿಧಿ..

 

ಜನಪದ ಬದುಕಿನ ಈ ಆಚರಣೆಯ ಗುಟ್ಟನ್ನು ಬಿಡಿಸಿ, ಸಾಂಕೇತಿಕ ಅರ್ಥದ ನಿಜವನ್ನು ಅರಿಯಬೇಕಾದ ಅಗತ್ಯವಿದೆ. 



***



No comments: