Friday, August 12, 2022

ಮಕ್ಕಳ ಕವಿತೆಗಳು ೧-೧೮

 


ನಮ್ಮ ಪುಟಾಣಿ ತುಂಟ


ಗರಿಗಳ ಚಾಚಿ ಹಾರುತ ಹೊರಟ

ನಮ್ಮ ಪುಟಾಣಿ ತುಂಟ !

ತೇಲುತ ವಾಲುತ ದಾಟಿ ಬಿಟ್ಡ

ಕೆರೆಹೊಳೆ ಹಳ್ಳ ಬೆಟ್ಟ !


ಕೈಯ ಬೀಸುತ ಕರೆಯುತಲಿದ್ದವು

ಗಿಡಮರಬಳ್ಳಿ ಹೂತು !

ಕೊಕ್ಕನು ಚುಚ್ಚಿ ಪರಿಮಳ ಉಂಡನು

ಕೊಂಬೆ ಕೊಂಬೆಗೆ ಕೂತು !


ಮಡುವಿನ ಪಕ್ಕದ ಜಾಲಿ ಮರದಲಿ 

ಜೋಲುತಲಿದ್ದವು ಗೂಡು !

ಪುಟಾಣಿ ಗೀಜಗ ಕಟ್ಟಿಬಿಟ್ಟಿತ್ತು

ಗೂಡಿನ ಮೇಲೊಂದ್ ಮಾಡು !


ತಾಯಿ ಗಿಳಿಗೆ ಕಾಯುತಲಿದ್ದವು

ಪೊಟರೆ ಮರಿಗಳು ಇಣುಕಿ !

ತಂದೆ ತಾಯಿ ಗುಟ್ಟಿಯ ಹಾಕುತ 

 ಮಾಡುತಲಿದ್ದವು ಜ್ವಾಕಿ !


ನೀರು ಕುಡಿಯಲು ನದಿಗೆ ಬಂದಿತು

ಆಕಳು ಜಿಂಕೆಯ ದಂಡು !

ತಾಪವ ಮರೆತು ದೂರಕೆ ನಿಂತವು

ಅಡಗಿದ ಮೊಸಳೆಯ ಕಂಡು !


ಹೂವಿಂದ ಹೂವಿಗೆ ಹಾರುತಲಿದ್ದವು

ರಂಗುರಂಗಿನ ಚಿಟ್ಟೆ !

ಮರಿಗಳಾಗಿ ಚಿಂವ್ಗುಡುತಿದ್ದವು

ಗೂಡಲಿ ಇದ್ದ ಮೊಟ್ಟೆ !


ಬೆಡಗಿನ ನವಿಲು ಕುಣಿಯುತಲಿದ್ದವು

ಸಾವಿರ ಕಣ್ಣನು ಕೆದರಿ !

ಮಾಮರದಲ್ಲಿ ಹಾಡಿತು ಕೋಗಿಲೆ 

ಚೈತ್ರ ಬಂದುದ ಸಾರಿ !


ಮೋಡದ ಚಿತ್ರವ ಬಿಡಿಸುತಲಿದ್ದಿತು

ಸುಂದರ ನೀಲಿಯ ಬಾನು !

ತಿಳಿನೀರ್ ಮಡುವಲಿ ಈಜುತಲಿದ್ದವು

ಫಳ ಫಳ ಹೊಳೆಯುವ ಮೀನು !


ತುಂಬಿತ್ತು ಬರುವನು ಕಾಯುತಲಿದ್ದವು

ಅರಳಿದ ಬಣ್ಣದ ಹೂವು !

ಇಲಿ ಬೆನ್ನತ್ತಿ ಸರಸರ ಹರಿಯಿತು

ಗೋದಿ ಬಣ್ಣದ ಹಾವು !


ಆನೆಯ ಮರಿಗಳು ನಡೆಯುತಲಿದ್ದವು

ಹಿರಿಯರ ಕಾಲ್ಗಳಲವಿತು !

ಬೇಟೆಯಾಡಲು ಹೊರಟವು ನಾಯಿ

ಹಿಂಡ ಹಿಂಡಾಗಿ ಕಲೆತು !


ಕರೊನಾ ಹೊಡೆತಕೆ ಮನೆಪಂಜರದಿ 

ಒದ್ದಾಡ್ತಿದ್ದ ಪುಟ್ಟ !

ರೆಕ್ಕೆಯ ಬಿಚ್ಚಿ ಹಾರುತ ಪ್ರಕೃತಿಯ

ಸೊಬಗಿಗೆ ಸಂತಸಪಟ್ಟ !


ಸಿಂಹದ ಸಿಡಿಲಿನ ಗರ್ಜನೆ ಕೇಳಿ

ಒಮ್ಮೆಲೆ ಪುಟ್ಟ ಚೀರಿ !

 ಚಡ್ಡಿ ಹಾಸಿಗೆ ಬಿಸಿ ಮಾಡಿದ್ದ

ಕನಸನು ಕಂಡು ಹೆದರಿ !


ಚಂದ್ರಗೌಡ ಕುಲಕರ್ಣಿ

9448790787


ಚಂದ್ರ ಮತ್ತು ತುಂಟ


ಮುಗಿಲ ಬಯಲಲಿ ಗೋಲಿ ಆಟವ

ಆಡಿದರಿಬ್ಬರು ಕೂಡಿ !

ಸೋತ ಸೂರ್ಯನು ಮರೆಯಲಿ ಅಡಗಿದ

ನಾಚಿಕೆಯಿಂದ ಮುದುಡಿ !


ಗೆದ್ದ ಗೋಲಿಯನೆಲ್ಲ ಕೂಡಿಸಿ

ಚಂದ್ರ ಮನೆಯಲಿ ಇಟ್ಟು !

ಬೆಳ್ಳಂ ಬೆಳತನ ಕಾಯುತಲಿದ್ದನು

ಊಟ ನಿದ್ದೆಯ ಬಿಟ್ಟು !


ತುಂಟ ಪುಟ್ಟನ ಕರೆದು ತೋರಿದ

ಕಿಲಕಿಲ ನಗುವ ಗೋಲಿ !

'ನಿನ್ನಲಿ ಎಲ್ಲಿವೆ' ಸವಾಲು ಹಾಕುತ

ಮಾಡಿದನಾಕ್ಷಣ ಗೇಲಿ !


ಊಟ ಮಾಡುವ ಗಂಗಾಳದಲ್ಲಿ 

ತಿಳಿತಿಳಿ ನೀರನು ಹಾಕಿ !

ನೋಡು ಚಂದಿರ ಇಲ್ಲಿವೆ ಗೋಲಿ

ಎನ್ನುತ ಹಾಕಿದ ಕ್ಯಾಕಿ !


ಬಿಂಬದ ಗೋಲಿಯ ನೋಡುತ ಚಂದ್ರನು

ತುಂಟನ ಜಾಣ್ಮೆಗೆ ನಕ್ಕ !

ತನ್ನಯ ಸೋಲನು ಒಪ್ಪಿಕೊಂಡನು

ತೋರದೆ ಎನಿತು ಬಿಂಕ !


ಚಂದ್ರಗೌಡ ಕುಲಕರ್ಣಿ

೧೧-೧೧-೨೧ ತಾಳಿಕೋಟಿ

ಅಲೆಯುಲಿ :7349342777


 



ಕನ್ನಡ ತೋರಣ


ರಸ ಋಷಿಯಿಂದ ಖ್ಯಾತಿ ಪಡೆಯಿತು

ಮಲೆಯ ನಾಡಿನ ಕುಪ್ಪಳ್ಳಿ !

ಶ್ರೀರಾಮಾಯಣ ದರ್ಶನ ದೊರೆವುದು

ಸುಂದರ ಪಕ್ಷಿ ಕಾಶಿಯಲಿ !


ಸಾಧನಕೇರಿಯ ಸಗ್ಗವ ಮಾಡಿದ

ನಾದಲೀಲೆಯ ಗಾರುಡಿಗ !

ಸಖಿಗೀತ ಗರಿ ಹಕ್ಕಿಯ ಹಾರಿಸಿ

ತೋರಿದ ಕನ್ನಡ ನುಡಿಬೆಡಗ !


ಮೂಕ ಅಜ್ಜಿಯ ಕನಸಿಗೆ ಒಲಿದನು

ಕಡಲ ಭಾರ್ಗವ ಕಾರಂತ !

ಮರಳಿಮಣ್ಣಿಗೆ ಅಳಿದ ಮೇಲೆ

ಬೆಟ್ಟದ ಜೀವವು ಶಾಶ್ವsತ !


ಕಲ್ಮಾಡಿ ಕೋಣ ನೆಲೆನಿಂತಿಹವು

ಓದುಗರೆದೆಯಲಿ ಜೀವಂತ !

ಚಿಕವೀರರಾಜ ಕಾದಂಬರಿಗೆ

ಜ್ಞಾನಪೀಠದ ಮಾನ್ಯತಾ !


ಭಾರತ ಸಿಂಧುರಶ್ಮಿ ಕೃತಿಯು

ಯುಗಯುಗದೊಡಲಿನ ನಿಜಚಿತ್ರ !

ಸಮುದ್ರಗೀತದ ನುಡಿಬೆಡಗಿನಲಿ

ಸಮರಸ ಜೀವನ ಪ್ರಖ್ಯಾತ !


ಕನ್ನಡ ಸಂಸ್ಕೃತಿ ಚಿಂತನ ಕ್ಷೇತ್ರದಿ

ಪ್ರಜ್ಞೆ ಪರಿಸರ ಸಂಸ್ಕಾರ !

ಭಾರತಿಪುರದ ಸೂರ್ಯನ ಕುದುರೆ

ಅನಂತ ಮೂರ್ತಿಯ ಅವತಾರ !


ತುಘಲಕ್ ಜೋಡಿ ರಕ್ಕಸ ತಂಗಡಿ

ಹಿಟ್ಟಿನ ಹುಂಜ ಹಯವದನ !

ತಲೆದಂಡದಲಿ ಕಾರ್ನಾಡ ಕಾಣ್ಕೆ

ಕನ್ನಡ ಕ್ಷಿತಿಜದ ವಿಸ್ತರಣ !


ಜೋಕುಮಾರ ಸ್ವಾಮಿ ಬೋಳೆಶಂಕರ

ಸಿಂಗಾರೆವ್ವನ ಅವತರಣ !

ಶಿವಪುರ ಕಥನ ಹೇಳತೇನ ಕೇಳ

ಸೂರ್ಯ ಶಿಖರದ ಮಹಾಸ್ಫುರಣ !


ಚಂದ್ರಗೌಡ ಕುಲಕರ್ಣಿ

೧೦-೦೭-೨೦೨೦




ಕನ್ನಡ ನಾಡು ನುಡಿಯ ಸೊಬಗು


ಕನ್ನಡ ನಾಡು ನುಡಿಯ ಸೊಬಗನು

ಹೊಗಳಲು ಶಬ್ದವೆ ಸಾಲಲ್ಲ !


ಬೆಳುವಲ ಬಯಲು ಕಡಲು ಕರಾವಳಿ

ಬೆಟ್ಟದ ಘಟ್ಟದ ಸಾಲುಗಳು !

ಕೃಷ್ಣ ಕಾವೇರಿ ತುಂಗ ಭದ್ರಾ

ಅಮಲ ಪ್ರಭೆಯ ಹೊನಲುಗಳು !


ಜಕ್ಕಣ ಡಕ್ಕಣ ಅರಿಷ್ಟನೇಮಿ

ಅಕ್ಷರ ಮೇರು ಕೊಡುಗೆಗಳು !

ಬೇಲೂರ ಬೆಳುಗೊಳ ಬಾದಾಮಿ ಐಹೊಳೆ

ಹಂಪೆಯ ಅದ್ಭುತ ಶಿಲ್ಪಗಳು !


ಬಯಲಾಟ ಲಾವಣಿ ಯಕ್ಷಗಾನದ

ರಂಗಕಲೆಗಳ ತವರೂರು !

ಗಂಧರ್ವ ಭೀಮಸೇನ್ ರಾಜಗುರು ಹಾನಗಲ್

ಮನ್ಸೂರು ಗಾನಕೆ ದಿಗ್ಗಜರು !


ಪಂಪ ಹರಿಹರ ಕುಮಾರವ್ಯಾಸ

ಬಸವ ಪುರಂದರ ನೆಲೆವೀಡು !

ಬೇಂದ್ರೆ ಕುವೆಂಪು ಮಾಸ್ತಿ ಕಾರಂತ

ಕವಿಮಾಕವಿಗಳ ಸಿರಿನಾಡು !


ಕದಂಬ ಚಾಲುಕ್ಯ ಹೊಯ್ಸಳರಾಳಿದ

ವಿಜಯ ನಗರದ ವೈಭವಕೆ !

ರಾಷ್ಟ್ರಕೂಟ ಮೈಸೂರರಸರ

ಕೊಡುಗೆಗಳೆಮಗಿವೆ ಸಂಭ್ರಮಕೆ !


ಚಂದ್ರಗೌಡ ಕುಲಕರ್ಣಿ

9448790787




ಕಳ್ಳುಬಳ್ಳಿಯ ಕನ್ನಡ


ಎದೆಯ ತುಡಿತವ ಬಿಡದೆ ಉಸುರಿದೆ

ಭಾವ ಗೀತೆಯ ಕನ್ನಡ !

ಹಾಲ ಹಸುಳೆಯ ಜೇನು ಸವಿದಿದೆ

ತೊದಲು ನುಡಿಯ ಕನ್ನಡ !


ಉಲಿವ ನಾಲಿಗೆ ಒಡವೆಯಾಗಿದೆ

ಮಧುರ ಮಾತಿನ ಕನ್ನಡ !

ದುಡಿವ ಕೈಗಳ ತೊಡುಗೆಯಾಗಿದೆ

ಚದುರ ಚಲುವಿನ ಕನ್ನಡ !


ಕಲ್ಲು ಬರಹದ ಹಿರಿಮೆ ಸಾರಿದೆ

ಅಮರ ಚರಿತೆಯ ಕನ್ನಡ !

ತಾಳೆ ಓಲೆಯ ಗರಿಯ ಬಿಚ್ಚಿದೆ

ಮತಿಯ ಮಲ್ಲಿಗೆ ಕನ್ನಡ !


ಚಂಪು ವಚನದ ಸಾರ ಹೀರಿದೆ

ಲಲಿತ ಸುಲಲಿತ ಕನ್ನಡ !

ರಗಳೆ ಷಟ್ಪದಿ ತೇಜ ತೋರಿದೆ

ಚತುರ ಚಂದನ ಕನ್ನಡ !


ತ್ರಿಪದಿ ಕೀರ್ತನ ಕಂಪು ಹರಡಿದೆ

ದೇಸಿ ಸೊಗಡಿನ ಕನ್ನಡ ! 

ಗೀತ ಲಾವಣಿ ಲಾಲಿ ಹಾಡಿದೆ

ಏಕತಾರಿಯ ಕನ್ನಡ !


ಬಯಲಿನಾಟದ ಬೆಡಗು ಬೀರಿದೆ

ಹಳ್ಳಿ ಹಗರಣ ಕನ್ನಡ !

ತತ್ವ ಪದಗಳ ನಾದ ಸೂಸಿದೆ

ಕಳ್ಳು ಬಳ್ಳಿಯ ಕನ್ನಡ !


ಚಂದ್ರಗೌಡ ಕುಲಕರ್ಣಿ

೬-೧೦-೨೧




ಕನ್ನಡ ನುಡಿ


ಕನ್ನಡ ಮೊದಲು ಮೊಳಕೆಯೊಡೆಯಿತು

ಹಲ್ಮಿಡಿ ಶಾಸನದೆದೆಯಲ್ಲಿ !

ಬಾದಾಮಿ ಬಂಡೆಯ ಹಣೆಸಿಂಗರಿಸಿತು

ಅಕ್ಷರಮೇರು ಕೃಪೆಯಲ್ಲಿ !


ಪದವರಿತವರು ಓದದೆ ಬರೆದರು

ವಿಜಯನ ಕಾವ್ಯ ಮಾರ್ಗದಲಿ !

ಕೋಗಿಲೆ ದುಂಬಿಯ ಹಿಂಡು ಹಾಡಿತು

ಪಂಪನ ಬನವಸೆ ನಾಡಿನಲಿ !


ಆಡಿದ ಮಾತೇ ನುಡಿಮುತ್ತಾಯಿತು

ಮಾಶಿವಶರಣರ ವಚನದಲಿ !

ತಾಳತಂಬೂರಿಯ ಸ್ವರದಲಿ ಬೆರೆಯಿತು

ದಾಸವರೇಣ್ಯರ ಹಾಡಿನಲಿ !


ಜನಮನ ಭಾವವ ತಿದ್ದಿ ತೀಡಿತು

ಗುರು ಸರ್ವಜ್ಞನ ತ್ರಿಪದಿಯಲಿ !

ದೇಸಿ ಸತ್ವದ ಕೆನೆಮೊಸರುಣಿಸಿತು

ತತ್ವನುಭಾವದ ಪದಗಳಲಿ !


ಸಾಧನಕೇರಿಗೆ ಸಗ್ಗವ ತಂದಿತು

ನಾಕು ತಂತಿಯ ಮಿಡಿತದಲಿ !

ರಾಮಾಯಣದ ದರುಶನ ನೀಡಿತು

ರಸ ಋಷಿ ನಿಜದ ತುಡಿತದಲಿ !


ಕಡಲ ತರಂಗದ ಸೀಮೆಯ ದಾಟಿತು

ಭಾರ್ಗವ ಕೃತಿಗಳ ಹೊಳಪಿನಲಿ !

ಅದ್ಭುತ ಲೋಕದ ಗೂಡವ ಒಡೆಯಿತು

ಪೂರ್ಣ ಚಂದ್ರನ ಬೆಳಕಿನಲಿ !


ಚಂದ್ರಗೌಡ ಕುಲಕರ್ಣಿ


ಇದ್ದೇ ಇರುವರು ಇವರು


ಬೆಲ್ಲದ ಚೂರು ಬಿದ್ದರೆ ಸಾಕು

ಮುತ್ತಿ ಬಿಡುವವು ಇರುವೆ !

ಸಾಲು ಸಾಲು ಹಚ್ಚಿ ಬರುವವು

ಕರೆಯದೆ ಇದ್ದರು ತಾವೆ !


ತುಂಬ ಹೊದ್ದು ಮಲಗಿದರೂನು

ಬಂದೇ ಬಿಡುವವು ಸೊಳ್ಳೆ !

ಗೊತ್ತಿಲ್ದಂಗ ರಕ್ತ ಹೀರಿ 

ಎಬ್ಬಿಸಿ ಬಿಡುವವು ಗುಳ್ಳೆ !


ಹುಳ ಹುಪ್ಪಡಿ ಹಿಡಿಯಲೆಂದು

ಓಡಾಡುವುದು  ಹಲ್ಲಿ !

ನುನುಪು ಗೋಡೆ ಇದ್ದರೂ ಜಾರಿ

ಬಿಳುವುದಿಲ್ಲ ಮಲ್ಲಿ !


ಮಾವಿನ ಹಣ್ಣಿನ ಸಿಹಿಸಿಹಿ ರುಚಿಗೆ

ದಾಳಿ ಇಡುವವು ನೂರು !

ರೋಗ ಹರಡುವ ನೊಣಗಳ ಖ್ಯಾತಿಗೆ

ಸರಿಸಮ ನಿಲ್ಲರು ಯಾರು !


ಎಂತಹ ಚಂದದ ಎಳೆರಂಗೋಲಿ

ಪುಟ್ಟ ಜೇಡನ ಜಾಲ !

ಮತ್ತೆ ಮತ್ತೆ ಹೆಣೆದು ಬಿಡುವುದು

ಬಳಸಿ ರೇಶಿಮೆ ನೂಲ !


ಗುಡಿಸಲೆ ಇರಲಿ ಅರಮನೆ ಇರಲಿ

ಇದ್ದೇ ಇರುವರು ಇವರು !

ಏನೇ ಇದ್ದರೂ ಮನುಜನು ಇರುವ

ತಾಣವೆ ಇವುಗಳ ತವರು !


ಚಂದ್ರಗೌಡ ಕುಲಕರ್ಣಿ

೧೧-೧೧-೨೧




ಕಾಮಿ ಮತ್ತು ಶಾಲೆ


ಶಾಲೆಗೆ ಹೋಗುವ ಪುಟ್ಟನ ಕಂಡು

ಕಾಮಿ ಆಸೆಯ ಪಟ್ತು !

ಯುನಿಫಾರ್ಮ್ ತೊಟ್ಟು ಟಿಪ್ ಟಾಪಾಗಿ

ಹೊರಟಿತು ಪುಸ್ತಕ ಹೊತ್ತು !


ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ

ಕವಿತೆಗೆ ಹೆಜ್ಜೆ ಹಾಕ್ತು !

ನಾಯಿ ಮರೀ ತಿಂಡಿ ಬೇಕೆ

ಹಾಡಿಗೆ ನೃತ್ಯ ಮಾಡ್ತು !


ಬಾರದ ಮಗ್ಗಿ ತಿಳಿಯದ ಲೆಕ್ಕ

ಬಾಳ ಪೇಚಿಗೆ ಸಿಕ್ತು !

ಬಿಟ್ಟೂ ಬಿಡದ ಪಾಠ ಕೇಳಿ

ತಲೆಯೆ ಕೆಟ್ಟು ಹೋಯ್ತು !


ದಿನದಿನ ಕೂತು ಓದಿ ಬರೆಯುವ 

ಮಕ್ಕಳ ಕಷ್ಟ ನೋಡಿ !

ಅರ್ಧ ದಿನಕೆ ಸಾಕ್ ಸಾಕಾಗಿ

ಬಂದೇ ಬಿಟ್ತು ಓಡಿ !


ಅಮ್ಮ ಪುಟ್ಟನ ಶಾಲೆ ಬಿಡಿಸು 

ನನ್ ಕೂಡ ಆಡ್ತಾ ಇರಲಿ !

ಕೂತಲ್ಲಿ ಕೂತು ಓದಿ ಬರೆಯುವ

ನೋವು ಸಂಕ್ಟ ತಪ್ಲಿ !


ಮುದ್ದು ಕಾಮಿಗೆ ಹೇಳಿಬಿಟ್ಳು

ಪುಟ್ಟನ ಅಮ್ಮ ನಕ್ಕು !

ಧ್ಯಾನವಿಟ್ಟು ಶಾಲೆ ಕಲಿವುದು

ಪುಟ್ಟ ಮಕ್ಕಳ ಹಕ್ಕು !


೧೪-೧೧-೨೧




ಅದ್ಭುತ ಲೋಕ


ಹಾರುವ ತಟ್ಟೆಯ ಏರಿ ಹೋಗಿ

ಕಂಡೆನು ಅದ್ಭುತ ಲೋಕ !

ಪ್ರಾಣಿ ಪಕ್ಷಿಗೆ ಮಾತ್ ಬರತಿದ್ವು

ಮನುಜ ಮಾತ್ರ ಮೂಕ !


ಶಾಲೆಯ ಮಕ್ಕಳು ಬಳಸುತಲಿದ್ದರು

ಕೈಗಳ ಸನ್ನೆಯ ಭಾಷೆ !

ಮೊಣಕಾಲ್ ವರೆಗೆ ಜೋತಾಡತಿದ್ವು

ರೊಬೋಟ್ ಗುರುವಿನ ಭಾಷೆ !


ನೆಲದ ಮೇಲೆ ಓಡುತಲಿದ್ದವು

ಪಕ್ಷಿಗೆ ಇರಲಿಲ್ ರೆಕ್ಕೆ !

ಹಗಲಿನಲ್ಲಿಯು ಮಿನುಗುತಲಿದ್ದವು

ಆಗಸದೊಳಗಿನ ಚುಕ್ಕೆ !


ಗಿಡದಲಿ ಗೂಡು ಕಟ್ಟಿದ ಬೆಕ್ಕಿಗೆ

ಇದ್ದವು ಎರಡೇ ಕಾಲು !

ನಾಲ್ಕು ಕಾಲಿನ ಹಂಸ ಪಕ್ಷಿಯು

ಹಿಂಡುತಲಿತ್ತು ಹಾಲು !


ಓಡಾಡಲಿಕ್ಕೆ ಇರಲೇ ಇಲ್ಲ

ಬಸ್ಸು ಕಾರು ರೈಲು !

ಕಾಣಲೆ ಇಲ್ಲಾ ಪೊಲೀಸ್ ಸ್ಟೇಶನ್

ಅಗ್ರಹಾರದ ಜೇಲು !


ಬೇಯಿಸಿ ತಿನ್ನುವ ತಿನಿಸೇ ಇಲ್ಲಾ

ತೊಪ್ಪಲು ಗಡ್ಡೆ ಗೆಣಸು !

ಅಲ್ಲಿ ನಿಲ್ಲದೆ ಓಡಿ ಬಂದೆನು

ಒಂದೇ ಒಂದು ತಾಸು !



೧೦

ಮಲ್ಲಿಗೆ ಕಂಪು !


ಸವಿಯ ಕನ್ನಡ ನುಡಿವ ಮಾತಲಿ

ಮಧುರ ಮಲ್ಲಿಗೆ ಕಂಪಿ - ದೆ !

ಕರುಳ ಬಳ್ಳಿಯ ಸಹಜ ನುಡಿಯಲಿ

ಕೊಳಲ ನಾದದ ಇಂಪಿ - ದೆ !


ತಟ್ಟು ಕೋಟೆಯ ಬಂಡಿ ಬರಹಕೆ

ವೀರ ಧೀರನ ಗೆಲುವಿ - ದೆ !

ಕುರಿತು ಓದದೆ ಬರೆವ ಜಾಣಗೆ

ರಾಜ ಮಾರ್ಗದ ಬಲವಿ - ದೆ !


ಚಂಪು ಷಟ್ಪದಿ ರಗಳೆ ಛಂದದಿ

ಕಾವ್ಯ ಬಂಧದ ಹದವಿ - ದೆ !

ವೀರ ಅದ್ಭುತ ಶಾಂತ ರಸಗಳ

ಸ್ವಾದ ಸವಿಗಳ ಮುದವಿ - ದೆ !


ದೇಸಿ ಜನಪದ ಹಾಡು ಕತೆಯಲಿ

ಹಳ್ಳಿ ಹೈದರ ಉಸಿರಿ - ದೆ !

ವಚನ ಕೀರ್ತನ ತತ್ವ ಪದದಲಿ

ಸಂತ ಮಾಂತರ ಹೆಸರಿ - ದೆ !


ದತ್ತ ರಸ ಋಷಿ ಮಾಸ್ತಿ ಕೃತಿಯಲಿ

ಹೊಸತು ಸಂಸ್ಕೃತಿ ಹುರುಡಿ - ದೆ !

ಕಡಲ ಭಾರ್ಗವ ಪೂರ್ಣ ಚಂದ್ರನ

ನಡೆಗೆ ಹಸಿರಿನ ಘಮಲಿ - ದೆ !


ಕಾವ್ಯ ನಾಟಕ ಸಣ್ಣಕತೆಯಲಿ

ಹರಿತ ತೇಜದ ಮತಿಯಿ - ದೆ !

ಭಾವ ಗೀತೆಗೆ ಲಲಿತ ಬಂಧಕೆ

ನವಿರು ಪರಿಮಳ ಗತಿಯಿ - ದೆ !


೧೧


ಪುಟ್ಟನ ಗೋಳು


ಸಾರೆಗಮದಲ್ಲಿ ಹಾಡನು ಹಾಡ್ಸಿ 

ತಾರೆಯಾಗಿಸಿ ಬಿಟ್ರು !

ಕಣ್ಣು ಮುಚ್ಚಿ ತೆಗೆಯೋದರಲ್ಲಿ

ಹೀರೊ ಹೆಸರು ಕೊಟ್ರು !


ಪ್ರೀತಿ ತುಂಬಿ ಹಾಡುವ ಖುಷಿಯನು

ಸ್ಪರ್ಧೆಗ್ಹಾಕಿಬಿಟ್ರು !

ಕೀರ್ತಿ ಬಹುಮಾನಾಸೆ ತೋರ್ಸಿ

ಬಂಧಿಸಿಟ್ಟು ಬಿಟ್ರು !


ಉಪ್ಪು ಕಾರ ಹಚ್ಚಿ ಹೊಗಳಿ

ಅಟ್ಟಕ್ಕೇರಿಸಿಬಿಟ್ರು !

ಮುಗ್ಧ ಮನದಿ ಹಾಡುವ ಹಾಡಿನ

ಚಟ್ಟ ಕಟ್ಟಿಬಿಟ್ರು !


ಓದು ಶಾಲೆ ಮನೆಮಠ ಮರೆಸಿ

ಗಾಣಕೆ ಹೂಡಿಬಿಟ್ರು !

ಹಿಂಡಿಹಿಂಡಿ ಹಿಪ್ಪೆ ಮಾಡಿ

ನರಕಕೆ ದೂಡಿ ಬಿಟ್ರು !


ಗೆದ್ದು ಬಂದ ಗೆಳೆಯ ಎಂದು

ಹಾಡಿಹೊಗಳಿ ಬಿಟ್ರು  !

ಮೊದಲಿನ ಪ್ರೀತಿ ಸಲುಗೆ ತೋರದೆ

ದೂರಕೆ ನಿಂತು ಬಿಟ್ರು !


ಅಜ್ಜಿ ತಾತ ಬಂಧು ಬಳಗ

ಹೆಮ್ಮೆತಾಳಿಬಿಟ್ರು !

ಅಪ್ಪಿ ತಬ್ಬಿ ಮುದ್ದಾಡಲಾರದೆ

ದೊಡ್ಡವ್ನ ಮಾಡಿಬಿಟ್ರು !


ತಂದೆ ತಾಯಿ ಅಣ್ಣತಮ್ಮರೆಲ್ಲ

ತುಟ್ಟಿಯಾಗಿಬಿಟ್ರು !

ತಾರಾಪಟ್ಟಕೆ ನನ್ನ ಬಾಲ್ಯವ

ಬಲಿಯ ಕೊಟ್ಟುಬಿಟ್ರು !


ಚಂದ್ರಗೌಡ ಕುಲಕರ್ಣಿ

ಚಿಲಿಪಿಲಿ

ತಾಳಿಕೋಟಿ -೫೮೬೨೧೪

ವಿಜಯಪುರ ಜಿಲ್ಲೆ.




೧೨


ಸೂರ್ಯನು ಕಂಡ ಕನಸು


ಬಣ್ಣ ಬಣ್ಣದ ಮಳೆಬಿಲ್ಲಿಂದ

ಸಿಂಗರಗೊಂಡಿದೆ ಮುಗಿಲು !

ಅದ್ಭುತ ಚಿತ್ರವ ನೋಡುತ ನೋಡುತ

ಮೈಯನು ಮರೆತಿದೆ ಹಗಲು !


ಸೂರ್ಯ ಕಿರಣವು ತುಂತುರ ಭೇದಿಸಿ

ಚಲ್ಲಿತು ಏಳು ಬಣ್ಣ !

ಮೊಗವನು ಬಾಡಿಸಿ ಕಳೆಗುಂದಿಹವು

ಹವಳ ಮುತ್ತು ರತ್ನ !


ಆಗಸಕೇರಿ ನಲಿದರು ಮಕ್ಕಳು 

ಮುಟ್ಟುತ ಇಂದ್ರಚಾಪ !

ಮುಟ್ಟಿ ತಟ್ಟಲು ಕರಗಿ ಬಿಟ್ಟಿತು

ತಾಳದೆ ಬಿಸಿಲಿನ ತಾಪ !


ಹದಮಳೆಗಾಲದ ನಡುಮಧ್ಯಾಹ್ನದಿ

ಸೂರ್ಯನು ಕಂಡ ಕನಸು !

ಒಂದೇ ಕ್ಷಣದಲಿ ಕದ್ದುಬಿಟ್ಟಿತು

ತುಂಟ ಮಕ್ಕಳ ಮನಸು !


ಕಣ್ತೆರೆದಿಟ್ಟು ನೋಡಲುಬೇಕು

ಪ್ರಕೃತಿ ವಿಸ್ಮಯ ನೂರು !

ಗಾಲಿಗಳಿಲ್ಲದೆ ಸಾಗುತಲಿಹುದು

ಆಗಸ ಬೆಡಗಿನ ತೇರು !


೧೩


ನಾವೇ ನಾಳಿನ ಬೀಜಗಳು


ಬಣ್ಣದ ಗರಿಗಳ ಕನಸನು ಕಾಣುವ

ಸುಂದರ ನವಿಲಿನ ತತ್ತಿಗಳು !

ಹಣತೆಯ ಹೆಸರಿಗೆ ಉಸಿರನು ಬೆರೆಸುವ

ತೈಲದಿ ಅದ್ದಿದ ಬತ್ತಿಗಳು !


ಚಲುವು ಚಲುವಿನ ಕಂಪನು ಸೂಸುವ

ಪ್ರೀತಿ ಚಿಲುಮೆಯ ಕೊಂಡಿಗಳು !

ಕನ್ನಡ ಅಮ್ಮನ ಎದೆ ಸಿಂಗರಿಸಿದ

ಕುಸುರಿ ಕಸೂತಿಯ ಗೊಂಡೆಗಳು !


ಹೂವಿನ ಪರಿಮಳ ಉಂಡ ದುಂಬಿಯು

ಒಸರಿದ ಮಧುರ ಜೇನುಗಳು !

ಕುಸುಮದ ಪಕಳೆಯ ರೇಶಿಮೆ ನೂಲಿನ

ಪೂರ ಸಪೂರ ರೇಣುಗಳು !


ಹಚ್ಚ ಹಸುರಿನ ಗಿಡಮರಗಳಲಿ 

ಗೂಡನು ಕಟ್ಟುವ ಹಕ್ಕಿಗಳು !

ನೆಲಮುಗಿಲಾಚೆಗೆ ತೋರಣ ಕಟ್ಟಿದ

ಬಾನ ಚಂದಿರ ಚುಕ್ಕೆಗಳು !


ಮೊಳಕೆ ಚಿಗುರು ಹೂಹೂ ಗೊಂಚಲ

ಅಮೃತ ಸುಧೆಯ ಬೀಜಗಳು !

ಕಪ್ಪನೆ ಮೋಡದ ಒಡಲನು ಸೀಳುವ

ಸಿಡಿಕೋಲ್ ಮಿಂಚಿನ ತೇಜಗಳು !


೧೪




ಹಾಕುವೆ ಹಿಡಿಹಿಡಿ ಶಾಪ


ಅಕ್ಷರ ಶಬ್ದ ಉಲಿಯಲೊಲ್ಲವು

ನಾಲಿಗೆಗ್ಹಿಡಿದಿದೆ ಜಿಡ್ಡು !

ವೇಗದಿ ಅಕ್ಷ ಮೂಡಲೊಲ್ಲವು

ಪೆನ್ನಿಗೆ ಬಡಿದಿದೆ ಜಡ್ಡು !


ಕೇಳಿದ ರೂಢಿಯೆ ತಪ್ಪಿ ಹೋಗಿದೆ

ಟೀಚರ್ ಹೇಳುವ ಪಾಠ !

ಮಧುರ ರುಚಿಯನು ಕಳೆದುಕೊಂಡಿದೆ

ಮನೆಯಲಿ ಮಾಡುವ ಊಟ !


ಸಮವಸ್ತ್ರಗಳ ಧೂಳು ಹಿಡಿದಿವೆ

ಬಳಸಲಾರದೆ ನಿತ್ಯ !

ಪುಸ್ತಕಕ್ಹೆಣೆದ ಬಲೆಯಲಿ ಜೇಡವು

ಮಾಡುತಲಿರುವುದು ನೃತ್ಯ !


ಸ್ಮರಣ ಮನನದ ಹಾದಿ ತಪ್ಪಿದೆ

ಮೆದುಳಿಗೆ ಜಂಗು ಹತ್ತಿ !

ಗ್ರಹಿಕೆ ಸ್ಫುರಣದ ನಂಟು ಕಳಚಿದೆ

ಕಟ್ಟಲಿ ಹೇಗೆ ಬುತ್ತಿ !


ಗಣಿತ ಮಗ್ಗಿ ಸೂತ್ರವೆಲ್ಲವು

ಕತ್ತಲ ಕೋಣೆಯ ಸೇರಿ !

ಕವಿತೆ ಕಲ್ಪನೆ ಭಾವದಲೆಗಳು

ದೂರಕೆ ಹೋಗಿವೆ ಹಾರಿ !


ಕಲಿಕೆಯ ಜೀವವ ಹಿಂಡಿಬಿಟ್ಟಿದೆ

ಎದೆಯಲಿ ಉರಿಉರಿ ತಾಪ !

ಕರೊನಾ ಕ್ರೂರಿ ಕಷ್ಟವ ಕೊಟ್ಟಿತು

ಹಾಕುವೆ ಹಿಡಿಹಿಡಿ ಶಾಪ !


ಚಂದ್ರಗೌಡ ಕುಲಕರ್ಣಿ

೧೨-೯-೨೧




೧೫


ಅಕ್ಷರ ಹೂವಿನ ಮಾಲೆ


ಪಡುವಣ ದಿಕ್ಕಲಿ ಜುಳುಜುಳು ಜುಳುಜುಳು

ಹರಿವುದು ಬೆಣ್ಣೀ ಹಳ್ಳ !

ಜಡಿಮಳೆ ಹೊಡೆತಕೆ ಕೊರಕಲು ತೆರಕಲು

ಗೌರೀ ಸರುವಿನ ಕೊಳ್ಳ !


ನಂಬಿಕೆ ಬಾಳಿನ ತಾರಕ ಮಂತ್ರವು

ಕಲ್ಮೇಶ್ವರನ ಹೆಸರು !

ಬೆವರನು ಸುರಿಸಿ ತಣಿಯುತ ಉಣುವರು

ಹಾಲು ಹೈನ ಮೊಸರು !


ಪತ್ರಿಕಟ್ಟೆಯ ಸನಿಹದಲೆರಡು 

ದುಂಡನೆ ಉಸಿರು ಕಲ್ಲು !

ಹಿಡಿದ ಬೆನ್ನನು ಹಗುರಾಗಿಸುವ

ಜನಪದ ಜಾಣ್ಮೆಯ ಕೀಲು !


ಹಿರಿಬೆಟ್ಟಗಳ ನಾಚಿಸಿಬಿಡುವ

ಜೋಡಿ ಕೆರೆಗಳ ದಿಬ್ಬ !

ಬೇವು ಬೆಲ್ಲದಿ ಈಜುವ ರೈತಗೆ

ದಿನವೂ ಯುಗಾದಿ ಹಬ್ಬ !


ಶ್ರದ್ಧೆಯ ಹಿರಿಯರು ವಾರವ ಹಿಡಿದು

ದೇವಿಯ ಉಡಿಯನು ತುಂಬಿ !

ಕೂರಿಗೆ ಹೂಡಿ ಬೀಜ ಬಿತ್ತುವರು

ಭೂಮ್ತಾಯಿಯನು ನಂಬಿ !


ಮಣ್ಣಿನ ಕಣಕಣ ಕಸುವಿಗೆ ಸಾಕ್ಷಿ

ಬೆಳೆದು ನಿಂತ ಹಸಿರು !

ಎಂಟೆಂಟೆತ್ತಿನ ಹಂತಿಯ ಕಣದಲಿ

ಖಂಡುಗ ರಾಶಿಯ ತೇರು !


ಊರ ಬಯಲಲಿ ಕಂಗೊಳಿಸುವುದು

ಚಿಣ್ಣರ ಕನ್ನಡ ಶಾಲೆ !

ಕಡದ ಹಳ್ಳಿಯ ಸಿರಿಸಂಪದಕೆ

ಅಕ್ಷರ ಹೂವಿನ ಮಾಲೆ !


ಚಂದ್ರಗೌಡ ಕುಲಕರ್ಣಿ

೨೦-೦೫-೨೦೨೧


೧೬



ನನ್ನೂರು ಕಡದಳ್ಳಿ


ಕಡದಳ್ಳಿ ನನ್ನ ಊರು

ಒಕ್ಕಲಿನ ತಾಯಿ ತವರು !

ಹೆಂಗಾರ ಮರಿsಲಿ ನಿನ್ನ

ಬೆಳೆಯುವೆ ಮುತ್ತು ರತ್ನ !

ಎರೆನೆಲದ ತುಂಬ ಕೆಸರು

ತೊನೆದಾಡತೈತಿ ಹಸಿರು !


ಹನ್ನೆರಡು ತಿಂಗ್ಳ ಕಾಲ

ಹರಿಯುವುದು ಬೆಣ್ಣಿ ಹಳ್ಳ !

ಹದಮಳೆಗೆ ಬೀಜ ಬಿತ್ತಿ

ಕಟಿಕೊಡುವ ವರುಷ ಬುತ್ತಿ !

ಜೋಡ - ಕೆರೆಯ ತುಂಬ ನೀರು

ಕೆನೆ ಹಾಲು ಗಟ್ಟಿ ಮೊಸರು !


ತಿಪ್ಪ್ಯಾಗ ಸೆಗಣಿ ಗೊಬ್ರ 

ಡಂಬರಗಿ ಹೊಟ್ಟಿ ಉಬ್ರ !

ಎಂಟೆದೆಯ ಬಂಟ ಎತ್ತು 

ಮೇಯ್ಸುವನು ಕಣಕಿ ಕಿತ್ತು !

ಬನ್ನಿ ಮರಕೆ ಪೂಜೆ ಸಲ್ಸಿ 

ದಶದಿಕ್ಕು ಚರಗ ಚಲ್ಸಿ !


ಹೊಲದಾಗ ಹೋಳ್ಗಿ ಊಟ

ಹೊಡೆತೆನೆಯು ತೂಗುವಾಟ !

ಸುಗ್ಯಾಗ ನೆಟ್ಟು ಮೇಟಿ

ಹಾಡುವನು ಹಂತಿ ಕಟ್ಟಿ !

ತೂರುವನು ಮೆಟ್ಟ ಹಚ್ಚಿ

ಒಲಿಯುವನು ದೇವ ಮೆಚ್ಚಿ !


ಶ್ರಾವಣಕ ದೇವ್ರ ಜಾತ್ರಿ 

ಕಲ್ಮೇಶನೊಲುಮೆ ಖಾತ್ರಿ !

ಬೆಳತನಕ ಹೊತ್ತು ಪಾಲ್ಕಿ

ಧರಿಸುವನು ಭಕ್ತಿ ಝುಮ್ಕಿ !

ದುಡಿಯುವುದೆ ಶ್ವಾಸದುಸಿರು

ಸುರಿಸುವನು ರೈತ ಬೆವರು !


ಕಾಯಕದ ಕರ್ಮ ಯೋಗಿ

ಹಂಚಿ- ಉಣುವ ದಿಟದ ತ್ಯಾಗಿ !


ಚಂದ್ರಗೌಡ ಕುಲಕರ್ಣಿ

೧೧-೧೨-೨೦೨೦


೧೭


ಪಾಟಿಚೀಲ

ಅಯ್ಯೋ ಮರಿಇಷ್ಟೊಂದ ಭಾರ
ಹೆಂಗ ಹೊರತಿ ನೀನು !
ಪಠ್ಯ ಪುಸ್ತಕನೋಟುಬುಕ್ಕೆಲ್ಲ
ಹತ್ತು ಹದಿನೆಂಟೂನು !

ಉಸಿರಾಡೋಕು ಆಗ್ತಾಇಲ್ಲ
ಹೊಟ್ಟೆ ಉಬ್ಬಿ ನಂಗೆ !
ಒಂಚೂರುಹಾಳಿತುರಕತೇನಂದ್ರು
ಆಗೋದಿಲ್ಲ ನಿಂಗೆ !

ಬಸ್ಸಲ್ಲಿ ಹತ್ತೊ ಅವಸರದಾಗ
ಆಚೆಈಚೆ ಬಡಿದು !
ಮೈಕೈಯಲ್ಲ ನುಗ್ಗಾಗತೈತಿ
ಅವರಿವರು ತಿವಿದು !

ಬೆನ್ಮೇಲತ್ತಿ ಕೂತಿದ್ರೂನು
ಇಲ್ಲ ಎಷ್ಟು ಹರುಷ !
ಯಾರ ಮುಂದೆ ಹೇಳಿಕೊಳ್ಳಲಿ
ನಂಗೆ ಆಗೊ ತ್ರಾಸ !

ಬೆಂಚಿನ ಮೇಲೆ ಕೂತ್ಕೊಂಡ ನೀನು
ನನ್ನನ್ನು ಇಟ್ಟು ನೆಲಕ !
ಹೆಂಗಬೇಕಂಗ ಜಗ್ಗಾಡತೀದಿ
ತಗಿಲಾಕ ಒಂದೆರಡ ಪುಸ್ತಕ !

ಅಯ್ಯೋಮರಿ ಹಾಗ ನೋಡಬೇಡ
ನಿನ್ನ ಮೇಲಿಲ್ಲ ಕೋಪ ,!
ಶಾಲೆ ಮಾಸ್ತರ ಸರಕಾದೋರಿಗೆ
ಹಾಕುತ್ತಿರುವೆ ಶಾಪ !





೧೮


ತೆರೆದುಕೊಂಡಿವೆ ಬೀಗ


ಅಬ್ಬಾ ಈಗ ಬಿಡುಗಡೆ ಸಿಕ್ಕಿತು

ಮನೆಮನೆ ಜೇಲಿನಿಂದ !

ಓಡಿ ಹೋಗಿ ಸೇರಿಬಿಡುವೆನು

ಶಾಲೆ ಗೆಳೆಯರ ವೃಂದ !


ಬಹಳ ದಿವಸದಿ ಒಳಗೇ ಉಳಿದಿವೆ

ಆಡದ ಗುಟ್ಟಿನ ಮಾತು !

ಒಬ್ಬೊಬ್ಬರಲು ಹಂಚಿಕೊಳ್ಳುವೆ

ಕರೋನ ಸಂಕಟ ಕುರಿತು !


ಗೆಳೆಯರ ಮುಖವನು ನೋಡದೆ ಇಲ್ಲಿಗೆ

ಒಂದೆರಡ ವರುಷ ಆಯ್ತು !

ಹುಡದಿ ಹಾಕ್ತಿವೆ ಗೆಳೆಯರ ಚಿತ್ರ

ಎದೆಯಲಿ ಅಡಗಿ ಕೂತು !


ಕಣ್ಮನಗಳಲಿ ಮಾಸದೆ ಉಳಿದಿವೆ

ಟೀಚರ್ ಪ್ರೀತಿಯ ನೋಟ !

ನೆನಪಿನ ಪುಟದಲಿ ಅಚ್ಚೊತ್ತಿರುವವು

ಕೇಳಿದ ವಿಷಯದ ಪಾಠ !


ಕೈಮಾಡೆಲ್ಲರ ಕರೆಯುತಲಿರುವವು

ಶಾಲೆಯ ಆಟದ ಬಯಲು !

ಕೈಬೆರಳಿನಲಿ ಹಸಿಹಸಿಯಾಗಿದೆ

ಬಿಸಿಬಿಸಿ ಊಟದ ಘಮಲು !


ಈಗ ಇದೀಗ ತೆರೆದುಕೊಂಡಿವೆ

ಶಾಲೆಗೆ ಹಾಕಿದ ಬೀಗ !

ಲೋಕದ ಎಲ್ಲೆಡೆ ತೊಲಗಿ ಹೋಗಲಿ

ಕೋವಿಡ್ ಅಂಜಿಕೆ ಬೇಗ !



***




No comments: