Monday, January 29, 2018


ಕಳ್ಳ ಹೆಜ್ಜೆ ಚಂದ್ರ

ಕಳ್ಳ ಹೆಜ್ಜೆ ಇಟ್ಟು ಯಾರೊ
ಇಣುಕಿ ನೋಡಿದಂಗಾಯ್ತು !
ಕಿಟಕಿ ತೆರೆದು ನೋಡಿದಾಗ
ಚಂದ್ರನ ಹೂನಗು ಇತ್ತು !

ಅಯ್ಯೋ ಪಾಪ ದಿನವೂ ಭಾರದ
ಶಾಲೆ ಚೀಲ ಹೊರತಿ !
ಪಾಠ ಓದು ಲೆಕ್ಕ ಮಗ್ಗಿ
ಅಲ್ಲೆ ಗಿರಕಿ ಹೊಡಿತಿ !

ಹೋಂವರ್ಕೆಲ್ಲ ಅಲ್ಲೆ ಇರಲಿ
ಬಂದ ಬಿಡು ಸಂಗಾಟ !
ಅಪ್ಪ ಅಮ್ಮ ಯಾರೂ ಈಗ
ಮಾಡೋದಿಲ್ಲ ರಂಪಾಟ !

ನಂದನವನದ ಹೂವಲಿ ಬೆರೆತು
ಪರಿಮಳ ಸವಿಯ ನೋಡು !
ಕಿವಿಗಳೆರಡನು ತೆರೆದಿಟ್ ಕೇಳು
ಕೋಗಿಲೆ ಮಧುರ ಹಾಡು !

ಚುಕ್ಕೆ ಜೋಡಿ ನೆರಳು ಬೆಳಕಿನ
ಆಟ ಆಡು ಬೇಗ !
ರೆಕ್ಕೆ ಬಿಚ್ಚಿ ಹಕ್ಕಿಯ ಹಾಗೆ
ಬಾನಲಿ ತೇಲು ಈಗ !

ಅಮ್ಮ ಮುಟ್ಟಿ ಎಬ್ಬಿಸಿದಾಗ
ಎಂಟು ಗಂಟೆ ಹೊತ್ತು !
ಹಲ್ಲು ಉಜ್ಜುವಾಗಲು ಮನಸು
ಕನಸ ಸವಿಯುತಲಿತ್ತು !





ಆನೆ ಚಿಕ್ಕದಾಗಿ ಬಿಟ್ರೆ !

ಆನೆ ಬಾಳ ಚಿಕ್ಕದಾಗಿ
ಇರುವೆಯಾಗಿ ಬಿಟ್ರೆ !
ಒಂದೆ ಹಳಕು ಸಕ್ರೆ ಸಾಕು
ಊಟಕ್ಕಂತ ಕೂತ್ರೆ !

ಸೂಜಿಗಿಂತ ಚಿಕ್ಕದು ಬೇಕು
ಅಂಕುಶ ಮಾವುತಂಗೆ !
ಹೇಳಿದಂಗ ಕೇಳಿಸಬಹುದು
ಅತ್ತಿತ್ತ ಓಡದಂಗೆ !

ದಾರದೆಳೆಯಷ್ಟ ಕಾಣಬಹುದಾಗ
ಚಿಕ್ಕ ಆನೆ ಸೊಂಡಿಲು !
ಎಳ್ಳಕಾಳಿನಷ್ಟ ಮಿಠಾಯಿ ಚೂರು
ಕೊಡಬಹುದದಕೆ ತಿನ್ನಲು !

ಕಬ್ಬಿನ ಗಣಿಕೆ ಮುರದು ತಿನ್ನಲಿಕ್ಕೆ
ಬರದು ನೋಡು ಆಗ !
ಚೂರ್‌ಚೂರ್ ಬೆಲ್ಲ ತಿಂದು ತಿಂದು
ಬಿಡಬಹುದು ದೊಡ್ಡ ತೇಗ !

ಎಂಥ ಮಕ್ಕಳು ಹತ್ತಿ ಕೂಡಬೇಕು
ಚಿಕ್ಕ ಆನೆ ಮ್ಯಾಲ !
ಕೂದಲಷ್ಟೆ ತೆಳ್ಳಗಿರಬೇಕು
ಎರಡೂ ಕಯ್ಯಿ ಕಾಲ !

ಇಂಥ ಮಕ್ಕಳ ಶಾಲೆ ಗಾತ್ರ
ಐದು ಆರು ಇಂಚು !
ಸಾಸಿವೆ ಕಾಳಷ್ಟ ಎತ್ತರಿರತಾವ
ಕೂತುಕೊಳ್ಳುವ ಬೆಂಚು !





ಶಾಲೆ ಚೀಲ ಹೇಳಿದ್ದು!

ಅಯ್ಯೋ ಮರಿ ಇಷ್ಟೊಂದ ಭಾರ
ಹೆಂಗ ಹೊರತಿ ನೀನು !
ಪಠ್ಯ ಪುಸ್ತಕ ನೋಟಬುಕ್ಕೆಲ್ಲ
ಹತ್ತು ಹದಿನೆಂಟೂನು !

ಉಸಿರಾಡೋಕು ಆಗ್ತಾ ಇಲ್ಲ
ಹೊಟ್ಟೆ ಉಬ್ಬಿ ನಂಗೆ !
ಬಂತುಂಡ ಹಾಡಿ ಇಡತೇನಂದ್ರು
ಆಗೋದಿಲ್ಲ ಒಳಗೆ !

ಬಸ್ನಲ್ಲಿ ಹತ್ತೊ ಅವಸರದಾಗ
ಆಚೆ ಈಚೆ ಬಡಿದು !
ಮೈಕೈಯೆಲ್ಲ ನೋವಾಗತೈತಿ
ಅವ್ರು ಇವ್ರು ತಿವಿದು !

ಬೆನ್ಮೇಲಿ ಹತ್ತಿ ಕೂತಿದ್ರೂನು
ಇಲ್ಲಾ ಎಷ್ಟು ಹರುಷ !
ಯಾರ ಮುಂದೆ ಹೇಳಿಕೊಳ್ಳಲಿ
ನನಗೆ ಆಗೋ ತ್ರಾಸ !

ಬೆಂಚಿನ ಮೇಲೆ ಕೂತ್ಕೊಂಡಾಗ
ನನ್ನನು ಇಟ್ಟು ನೆಲಕ !
ಹೆಂಗಬೇಕಂಗ ಜಗ್ಗಾಡತೀದಿ
ತಗಿಲಾಕ ಒಂದೆರಡ ಪುಸ್ತಕ!

ಅಯ್ಯೋ ಮರಿ ಹಾಗೆ ನೋಡಬೇಡ
ನಿನ್ನ ಮೇಲಿಲ್ಲ ಕೋಪ !
ಶಾಲೆ ಮಾಸ್ತರ ಸರಕಾರದವರಿಗೆ
ಹಾಕುತ್ತಿರುವೆ ಶಾಪ!

No comments: