Monday, January 29, 2018


ರೆಕ್ಕೆ ಇದ್ರೆ ಮಕ್ಕಳಿಗೆ !

ಹಕ್ಕಿಯಂತೆ ರೆಕ್ಕೆ ಇದ್ರೆ
ಶಾಲೆಯ ತುಂಟ ಮಕ್ಕಳಿಗೆ !
ಬಸ್ಸು ಅಟೊ ಕಾಯ್ತಿರಲಿಲ್ಲ
ಬೇಗನೆ ಬರಲು ಶಾಲೆಗೆ !

ಪುರ್ರಂತ ಹಾರಿ ಬರತಾ ಇದ್ರು
ತಪ್ಪದೆ ಸರಿಯಾದ ವೇಳೆಗೆ !
ರೆಕ್ಕೆ ಮಡಚಿ ಕೂತಿರುತಿದ್ರು
ಸಾಲು ಸಾಲಿನ ಬೆಂಚಿಗೆ !

ಮರದಲ್ಲಿ ಊಟ ಮಾಡ್ತಾ ಇದ್ರು
ಗುಬ್ಬಿ ಕೋಗಿಲೆ ಜೊತೆಯಲ್ಲಿ !
ಆಟಕೆ ಬಿಟ್ಟರೆ ತೇಲಾಡತಿದ್ರು
ಬಟ್ಟ ಬಯಲಿನ ಮುಗಿಲಲ್ಲಿ !

ಹುಡುಕಿ ಹುಡುಕಿ ಸವಿಯುತಲಿದ್ರು
ಮೆಲ್ಲಗೆ ಗೂಡಿನ ಜೇನನ್ನು !
ಗಿಳಿಮರಿ ಜೊತೆಯಲಿ ಮೆಲ್ಲುತಲಿದ್ರು
ಮಾವು ಪೇರಲ ಹಣ್ಣನ್ನು !

ಲಕ್ಷಗೊಟ್ಟು ಕೇಳುತಲಿದ್ದರು
ಎಲ್ಲ ವಿಷಯದ ಪಾಠವನು !
ಬೇಜಾರಾದ್ರೆ ಹಾರಿಬಿಡತಿದ್ರು
ತಪ್ಪಿಸಿ ಎಲ್ಲಾ ಕ್ಲಾಸನ್ನು !















ಚುಕ್ಕಿ ಚಂದ್ರರ ಕಣ್ಮುಚ್ಚಾಲೆ !

ಹುಣ್ಣಿಮೆ ಚಂದ್ರ ದಿನದಿನ ತಪ್ಪದೆ
ಬೆಳದಿಂಗಳಾಗಿ ನಕ್ರೆ !
ಹಟವ ಮಾಡದೆ ಮಕ್ಕಳು ಉಣುವರು
ತುಪ್ಪ ಹಾಲು ಸಕ್ರೆ !

ಚುಕ್ಕಿ ಚಂದ್ರರು ಕಣ್ಮುಚ್ಚಾಲೆ
ಆಡುವುದನ್ನು ನೋಡಿ !
ಹರುಷದಿಂದಲಿ ಕುಣಿವರು ಮಕ್ಕಳು
ತುಂಟ ಗೆಳೆಯರ ಜೋಡಿ !

ಭೂಮಿ ಆಗಸ ಆಗಸ ಭೂಮಿ
ಒಂದ್ರಲ್ಲೊಂದು ಬೆರೆತು !
ಸೇರುವರೆಲ್ಲರು ಅಂಗಳದಲ್ಲಿ
ದೊಡ್ಡವರೆಂಬುದ ಮರೆತು !

ಆಡುತ ಆಡುತ ದಣಿದ ಮಕ್ಕಳು
ಕಾಣುತ ಸುಂದರ ಕನಸು !
ನಿದ್ದೆ ಮಾಡುತ ಮರೆತು ಬಿಡುವರು
ಗೆಳೆಯರ ಮೇಲಿನ ಮುನಿಸು !

ಸ್ವರ್ಗ ಲೋಕ ನಂದನವನದ
ಹೂವು ಹೂವುಗಳು ಅರಳಿ!
ನೆಲಮುಗಿಲಲ್ಲಿ ಸೂಸುತ್ತಿರುವವು
ಪರಿಮಳ ತುಂಬಿದ ಗಾಳಿ !















ಏಕೊ ಏನೊ ಗೊತ್ತಿಲ್ಲ !

ಏಕೊ ಏನೊ ಗೊತ್ತಿಲ್ಲ
ಇಂದಿಗೂ ಅದನು ಮರೆತಿಲ್ಲ !
ಏಳು ಸಮುದ್ರ ಬೆಟ್ಟವ ಹಾರಿದ
ರಾಜಕುಮಾರನ ಮರೆತಿಲ್ಲ !

ಮಲ್ಲಿಗೆ ತೂಕದ ರಾಜ್‌ಕುಮಾರಿ
ಮರಳಿ ತಂದುದು ಮಾಸಿಲ್ಲ !
ಮಾಟಗಾತಿಯು ಏಳೆಡೆ ಸರ್ಪದ
ರತ್ನವ ಕದ್ದುದ ಮರೆತಿಲ್ಲ !

ಮಂತ್ರದ ಕಂಬಳಿ ಮುಗಿಲಲಿ ತೇಲುತ
ಮಾಡಿದ ಮೋಡಿಯು ಮಾಸಿಲ್ಲ !
ಕೀಲು ಕುದುರೆಯ ಕತೆಯನು ಕೇಳಿ
ಕಂಡ ಕನಸನು ಮರೆತಿಲ್ಲ !

ಆಲದ ಪೊಟರೆಯ ಮಾತಿನ ಗಿಳಿಯ
ಚಿತ್ರವು ಇನ್ನೂ ಮಾಸಿಲ್ಲ !
ಕ್ರೂರ ರಕ್ಕಸಿ ಲೋಕ ಸುಂದರಿ
ರೂಪವ ತೊಟ್ಟುದ ಮರೆತಿಲ್ಲ !

ಸಾವಿರ ಹೊನ್ನಿನ ಮಾಯದ ಕನ್ನಡಿ
ತೋರಿದ ಬಿಂಬವು ಮಾಸಿಲ್ಲ !
ಸತ್ತೋದವರಿಗೆ ಬದುಕನು ನೀಡುವ
ಸಂಜೀವಿನಿಯನು ಮರೆತಿಲ್ಲ !

ಚಿತ್ತವ ಕಲಕುವ ಜನಪದ ಕತೆಗಳ
ಸುಂದರ ಭಾವವು ಮಾಸಿಲ್ಲ !











ಅಭಿನವ ಬ್ರಾಡ್‌ಮನ್

ಕ್ರಿಕೆಟ್ ಆಟದ ದಂತ ಕತೆಯು
ಮಾಸ್ಟರ್ ಬ್ಲಾಸ್ಟರ್ ಸಚಿನ್ !
ಕ್ರೀಡಾ ಪ್ರೀತಿಗೆ ಸಾಕ್ಷಿಯಾಯಿತು
ಕಲಕತ್ ಈಡನ್ ಗಾರ್ಡನ್ !

ಮಾಂತ್ರಿಕ ಸ್ಪರ್ಶಕೆ
ಸಂಸತ ಪಟ್ಟವು
ಕೇಪ್‌ಟೌನ್ ಸಿಡ್ನಿ ಮೆಲ್‌ಬೋರ್ನ್ !
ಪುಟಾಣಿ ಪ್ರತಿಭೆಗೆ
ಸೈ ಸೈ ಎನ್ನುತ
ಹಾಡಿ ಹೊಗಳಿತು ಲಂಡನ್ !

ಹುಡುಗನ ಹೊಡೆತದ ವೈಖರಿ ಕಂಡು
ಬೆಚ್ಚಿ ಬಿದ್ದನು ಇಮ್ರಾನ್ !
ಕನಸಲಿ ಬಂದು ಕಾಡುವನೆಂದ
ಕಾಂಗರು ಸ್ಪಿನ್ನಿಗ ಶೇನ್‌ವಾರ್ನ್ !

ಆಟಕೆ ಸ್ಫೂರ್ತಿ
ನಡತೆಗೆ ಮಾದರಿ
ಲಿಟಲ್ ಮಾಸ್ಟರ್ ಸಚಿನ್ !
ಎಂದೂ ಮುರಿಯದ
ದಾಖಲೆ ಬರೆದ
ಇವನೇ ಅಭಿನವ ಬ್ರಾಡ್‌ಮನ್!



No comments: