Monday, January 29, 2018



Sent from http://bit.ly/hsR0cS

ಸಾಹಿತ್ಯ ಸಿಂಚನ ಪತ್ರಿಕೆಗಾಗಿ.
ಭಾಮಿನಿ ಷಟ್ಪದಿಯಲ್ಲಿ ಇತ್ತೀಚೆಗೆ ರಚಿಸಿದ ಕಾವ್ಯವಿದು.

ಚಂದ್ರಗೌಡ ಕುಲಕರ್ಣಿ
ಕಡದಳ್ಳಿ
(೯೪೪೮೭೯೦೭೮೭)

From: "chandragouda kulkarni"


ಬಕಾಸುರನ ಕತೆ

ಏಕಚಕ್ಕರ ಪುರದ ಹತ್ತಿರ
ಕಾಕ ರಕ್ಕಸನೊಬ್ಬನಿರುವನು
ಕೇಕೆ ಹಾಕುತ ಊರ ಜನರಿಗೆ ಹಿಂಸೆ ಮಾಡುವನು |
ಏಕೆ ಹಿಂಸೆಯ ಮಾಡುತಿಹೆನೀ
ನಾಕು ಪಲ್ಲದ ಅನ್ನ ಬಂಡಿಯ
ಮೂಕ ಕೋಣನ ಜೊತೆಗೆ ಮನುಜನ ಬಲಿಯ ನೀಡುವೆವು |

ದಿನವು ಕೋಣದ ಬಂಡಿ ಅನ್ನವು
ಮನುಜನೊಬ್ಬನ ಸಹಿತ ಬರಲದ
ಕುಣಿದು ನಲಿಯುತ ತಿಂದು ತೇಗುತಲಿದ್ದ ರಕ್ಕಸನು |
ಮನೆಗೆ ಸರತಿಯ ಹಾಕಿಕೊಳ್ಳುತ
ಜನರು ಅನ್ನವ ಕಳಿಸಿಕೊಡಲಾ
ದಿನದ ಪಾಳೆಯ ಬರಲು ಬ್ರಾಹ್ಮಣ ಹೆದರಿ ನಡುಗಿದನು |

ಇದ್ದ ಒಬ್ಬ ಮಗನನೀಗಲೆ
ಕುದ್ದು ಕಳುಹಲು ಒಪ್ಪಿಕೊಳ್ಳದೆ
ವ್ರದ್ದನಾದರು ಚಿಂತೆಯಿಲ್ಲವು ಬಂಡಿ ಒಯ್ಯುವೆನು |
ಮುದ್ದು ಮಕ್ಕಳು ಮಡದಿ ಎಲ್ಲರು
ಸದ್ದು ಮಡುತ ಅಳುತಲಿದ್ದುದ
ಕದ್ದು ಕೇಳಿಸಿಕೊಂಡ ಕುಂತಿಯು ಹೀಗೆ ಹೇಳಿದಳು |

ಹಲವು ಮಕ್ಕಳು ಇಹರು ನನಗಾ
ಬಲದ ಮಗನನು ಕಳುಹಿಕೊಡುವೆನು
ಒಲವು ತೋರುತ ಜಾಗ ನೀಡಿದ ನಿಮ್ಮ ಉಪಕೃತಿಗೆ |
ಬಿಲದ ಒಳಗಡೆ ಇರಲಿ ಮಾತಿದು
ನಲಿವಿನಿಂದಲಿ ತಿಳಿಸಿ ಬೇಡಿದ
ಕುಲದ ಮಂದಿಗೆ ಬಂದು ಬಳಗಕೆ  ಮೌನ ಪಾಲಿಸಿರಿ |

ಬಲದ ತನ್ನಯ ಮಗನ ಕರೆಯುತ
ಚಲವ ತೋರುವ ಕಾಲ ಎನ್ನುತ
ಕೆಲವು ಗುಟ್ಟಿನ ಮಾತ ಹೇಳುತ ಬೆನ್ನು ಸವರಿದಳು |
ತಲೆಯದೂಗಿದ ತಾಯಿ ಮಾತಿಗೆ
ನಲಿವಿನಲ್ಲಿಯೆ ಬಂಡಿ ಹತ್ತುತ
ಕೊಲುವೆನೀಗಲೆ ಕೆಟ್ಟ ರಕ್ಕಸನೆಂದು ಸಾಗಿದನು |

ಹೊಟ್ಟೇ ಹಸಿವನು ತಾಳಲಾರದೆ
ಇಟ್ಟ ಅನ್ನದ ಹಂಡೆ ಬಾಗಿಸಿ
ಮುಟ್ಟಿ ಮುಟ್ಟಿಗೆ ನುಂಗುತಿದ್ದನು ಬೇಗಬೇಗದಲಿ |
ಗಟ್ಟಿ ಕೂಗನು ಹಾಕಿ ರಕ್ಕಸ
ನೆಟ್ಟ ನೋಡುತ ಬಂದು ನಿಂತನು
ದಿಟ್ಟ ಬೀಮನ ಕಂಡು ಮನದಲಿ ಕೋಪ ತಾಳಿದನು |

ಸಿಟ್ಟಿನಲಿ ಹೂಂಕರಿಸಿ ಒಮ್ಮೆಗೆ
ಮುಸ್ಟಿ ಮುಸ್ಟಿಲಿ ಬೆನ್ನ ಮೇಲ್ಗಡೆ
ಕೊಟ್ಟ ಏಟನು ಸುಮ್ಮ ತಿಂದಾ ಬೀಮ ಹೇಳಿದನು |
ಕಟ್ಟ ಕಡೆದಿದು ಅನ್ನ ಉಂಡೆಯು
ಗಟ್ಟಿಯಾಗಿಯೆ ಗುದ್ದು ಕೊಡು ನೀ
ನೆಟ್ಟನಿಳಿಯಲಿ ಗಂಟಲಿಂದಲಿ ಅನ್ನ ಹೊಟ್ಟೆಯಲಿ |

ಉಂಡು ತೇಗುತಲೆದ್ದ ಭೀಮನು
ಗಂಡುಗಚ್ಚಿಯ ಹಾಕಿ ನಿಂದನು
ರುಂಡ ಬಗ್ಗಿಸಿ ಬೆನ್ನ ಮೇಲ್ಗಡೆ ಏಟು ಹಾಕಿದನು |
ಪುಂಡ ಭೀಮನು ಎದೆಗೆ ಗುದ್ದಲು
ಬಂಡ ರಕ್ಕಸ ಕುಸಿದು ಬಿದ್ದನು
ತೊಂಡ ತೊಂಡಲು ಕರುಳು ಚಿಮ್ಮಿದವಾಗ ಆಗಸಕೆ |

ಎತ್ತಿ ಹೆಣವನು ಬಂಡಿಗೇರಿಸಿ
ಕತ್ತಲಾಗುವ ತನಕ ಕಾದನು
ಗೊತ್ತು ಆಗದ ಹಾಗೆ ತಂದನು ಅಗಸಿ ಬಾಗಿಲಿಗೆ |
ಸುತ್ತ ಮುತ್ತಲ ಸದ್ದು ಅಡಗಳು
ಕತ್ತು ಕಾಲಿಗೆ ಹಗ್ಗ ಬಿಗಿದನು
ಸತ್ತ ಬಕನನು ತೂಗುಬಿಟ್ಟನು ಉಗ್ರ ರೂಪದಲಿ |

ಅಗಸಿ ಬಾಗಿಲಿನಲ್ಲಿ ನಿಂತಿಹ
ಜಗದ ಕಂಟಕ ಬಕನ ಕಾಣುತ
ಜಿಗಿದು ಓಡಿದನೊಬ್ಬ ಪುಕ್ಕಲು ಜೀವ ಬಯದಲ್ಲಿ |
ದಗೆಯ ಹಸಿವಿಗೆ ಊರ ಹೊಕ್ಕನು
ಸಿಗುವ ಜನರನು ಪ್ರಾಣಿ ಎಲ್ಲವ
ಸಿಗಿದು ತಿನುವನು ಎನುತ ಸುದ್ದಿಯ ಹರಡಿ ಪುರದಲ್ಲಿ |

ಗಟ್ಟಿ ಧೈರ್ಯದ ಎಂಟು ಮಂದಿಯು
ಒಟ್ಟುಗೂಡುತ ಬಂದರಗಸಿಗೆ
ಕಟ್ಟಿ ಬಿಗಿದಾ ಕಾಲು ಕೈಗಳ ನೋಡಿ ಹೇಳಿದರು |
ಕೊಟ್ಟಿ ರಕ್ಕಸ ಸತ್ತು ಹೋದನು
ಸುಟ್ಟು ಹಾಕಲು ಸೌದೆ ತನ್ನಿರಿ
ಜಟ್ಟಿ ಯಾವನೊ ಕೊಂದು ಊರಿಗೆ ಒಳಿತು ಮಾಡಿದನು |

ಆದಿ ಪರ್ವದಿ ಬರುವ ಕತೆಯನು
ನಾದ ಭಾಮಿನಿ ಪದ್ಯ ಬಳಸುತ
ಸ್ವಾದ ಎನಿತೂ ಕೆಡದ ಹಾಗೆಯೆ ಹೆಣೆದು ಇರಿಸಿರುವೆ |
ಓದು ಬರಹವ ಬಲ್ಲ ದೇವರು
ಭೇದವೆನಿಸದೆ ತಪ್ಪು ತಡೆಗಳ
ಮೇದು ಸವಿಯಿರಿ ಚಂದ್ರ ಗೌಡನ ಕವನ ಪುಟ್ಟ ಕಾವ್ಯವನು |


ಮಹಾಬಾರತದಲ್ಲಿ ಬರುವ  ಬಕ ರಕ್ಕಸನ ಕತೆಯನ್ನು ಈಗಲೂ ಓದಿ ಸವಿಯುವ ಒಲವು ನಮ್ಮಲ್ಲಿದೆ. ಮಕ್ಕಳಲ್ಲಿಯಂತೂ ಇನ್ನೂ ಹೆಚ್ಚಿದೆ. ನಮ್ಮ ಪರಂಪರೆಯ ಬಾಷೆ ಲಯ , ಛಂದಸ್ಸನ್ನು ಬಳಸಿ ಬಕನ ಕತೆ ರಚಿಸಿರುವೆ. ಓದಿ ಸವಿಯುವ ಗುಣ ಇಲ್ಲಿದೆ ಎಂಬ ನಂಬಿಕೆಯಿದೆ.

ನಮ್ಮ ಸಿರಿವಂತ ಪರಂಪರೆಯನ್ನು ಈ ಕಾಲಕ್ಕೂ ಸಂಚಲಗೊಳಿಸಬೇಕಾದ ಅಗತ್ಯವಿದೆ ಅಲ್ಲವೆ ?

Sent from http://bit.ly/hsR0cS

No comments: