Monday, January 29, 2018

ಚಿಲಿಪಿಲಿ ಶ್ರೀಗಂಧ

ಕನ್ನಡನುಡಿ ಚಂದ
ಚಿಲಿಪಿಲಿ ಶ್ರೀಗಂಧ
ಅಮ್ಮನ ಜೋಗುಳ ಹಾಡಿನ ಕಂಪನು
ಸುಮ್ಮನೆ ನಗುತಿಹ ಮಗುವಿನ ಮೊಗವನು
ಕಮ್ಮನೆ ಪದದಲಿ ಅಡಗಿಸಿ ಬಿಡುವ ||ಕನ್ನಡ||

ಹಾಲಹಸುಳೆಯ ತೊದಲಿನ ಮಾತನು
ಜೋಲು ಜೊಲ್ಲಿನ ಜೇನಿನ ಸವಿಯನು
ಲೀಲೆಯ ಪದದಲಿ ಜೋಡಿಸಿ ಬಿಡುವ ||ಕನ್ನಡ||

ತೊಟ್ಟಿಲ ಗುಬ್ಬಿಯ ಬಣ್ಣದ ಹೊಳಪನು
ಬಟ್ಟಲ ಅನ್ನದ ಸವಿರುಚಿ ಬೆಡಗನು
ನೆಟ್ಟನೆ ಪದದಲಿ ಹಿಡಿದಿಡುತಿಡುವ ||ಕನ್ನಡ||

ಕೂಸುಕಂದನ ರಾಗಲಯವನು
ಹಾಸು ಕೌದಿಯ ಕಸೂತಿ ಸೊಗಸನು
ಖಾಸಪದದಲಿ ಪಡಿಮೂಡಿಸುವ ||ಕನ್ನಡ||

ಚಿಕ್ಕಮಕ್ಕಳ ಗಿಳಿಯಿಂಚರವನು
ಪಕ್ಕನೆ ಮಿಂಚುವ ಸೋಜಿಗ ಬೆರಗನು
ಚೊಕ್ಕ ಪದದಲಿ ಪ್ರತಿಬಿಂಬಿಸುವ ||ಕನ್ನಡ||

ಪುಟ್ಟ ಪಾಪನ ಹೆಜ್ಜೆಯ ದನಿಯನು
ಗಟ್ಟಿ ಗೆಜ್ಜೆಯ ಕಿಂಕಿಣಿ ಸ್ವರವನು
ಗುಟ್ಟಿನ ಪದದಲಿ ಕಟ್ಟಿಡುತಿರುವ ||ಕನ್ನಡ||

ಕನ್ನಡ ನುಡಿ ಚಂದ
ಚಿಲಿಪಿಲಿ ಶ್ರೀಗಂಧ !







ಏನಿದು ?

ಹೇಗೊ ಎಂತೊ ಈ ಜಗದಲ್ಲಿ
ಹುಟ್ಟಿ ಬಂದಿದೆ ಈ ವಸ್ತು !
ಮನುಜ ಪ್ರಾಣಿ ನೀರು ನೆಲಕೆ
ಕಷ್ಟ ಕೊಡುತಿದೆ ಯಾವತ್ತು !

ತಿಪ್ಪರಲಾಗ ಹೊಡದು ಭೂತವು
ಕರಗಿ ಮಣ್ಣಲಿ ಬೆರೆಯದು !
ಸಿಟ್ಟಿಗೆದ್ದು ಸುಟ್ಟರೂ ಕೂಡ
ವಿಷದ ಹೊಗೆಯನು ಕಕ್ಕುವುದು !

ಬಣ್ಣಬಣ್ಣದ ಸುಂದರ ಬೆಡಗಿ
ಮಾರಕ ಮಾನವ ಲೋಕಕ್ಕೆ
ಎಲ್ಲ ಎಲ್ಲಕು ಬಳಸುವ ನಮಗೆ
ಇಲ್ಲವೆ ಇಲ್ಲ ಎಚ್ಚರಿಕೆ !

ಇರುವ ಒಂದೆ ಭೂಮಿಯ ತುಂಬ
ಹಬ್ಬಿ ಬಿಟ್ಟಿದೆ ಪಿಶಾಚಿ !
ಸಾಗರ ಆಗಸ ಬೆಟ್ಟ ಕೊಳವನು
ತಬ್ಬಿಕೊಂಡಿದೆ ಕೈಚಾಚಿ !

ಹೇಗೊ ಎಂತೊ ಈ ಜಗದಲ್ಲಿ
ಹುಟ್ಟಿ ಬಂದಿದೆ ಈ ವಸ್ತು !

*** (ಪ್ಲಾಸ್ಟಿಕ್)












ಕವಿತಾ ಶಾಲೆ

ಹಾಲ ಹಸುಳೆಯ ತೊದಲ ನುಡಿಗೆ
ಬೆರೆಸಿದಂತೆ ಹಾಲು !
ಅಕ್ಷರಗಳಲಿ ತೇಲುತ ಬರುವವು
ಕವಿತೆಯ ಸಾಲು ಸಾಲು !

ಮುತ್ತು ಹವಳ ರತ್ನದ ಹೊಳಪಲಿ
ಮಿಂಚುವಂತೆ ಹಾರ !
ಕೂಡಿದ ಸುಂದರ ಪದಗಳು ಬೆರೆತು
ಎಳೆವವು ಕವಿತೆಯ ತೇರ !

ವಸಂತ ಕೋಗಿಲೆ ಪಂಚಮ ಸರದಲಿ
ಉಲಿಯುವಂತೆ ರಾಗ !
ರಸವಶ ಕವಿಯ ಎದೆಯಾಳದಲಿ
ಪದಪದ ಪದಪದ ಯೋಗ !

ಹೂ ಮಕರಂದ ಹೀರುತ ಜೇನು
ಕಟ್ಟಿದ ಹಾಗೆ ಗೂಡು !
ಬೆಡಗು ತುಂಬಿದ ಚಂದದ ಪದದಲಿ
ಹರಿದು ಬರುವುದು ಹಾಡು !

ಬಣ್ಣದ ಹೂಗಳ ಒಂದೆ ದಾರದಿ
ಪೋಣಿಸಿದಂತೆ ಮಾಲೆ !
ತುಂಟ ಪದಗಳು ತಂಟೆ ಮರೆತು
ತೆರೆವುದು ಕವಿತಾ ಶಾಲೆ !











ಜೇನು

ಗುಂಯ್ ಅಂತ ರಾಗಾ ಮಾಡುತ
ಹಾರಿ ಬಂದವು ನೋಡು !
ಸಾಕೆ ಸಾಕು ನಾಕಾರು ದಿನಗಳು
ಕಟ್ಟಿ ಬಿಡಲು ಗೂಡು !

ಗುಂಪು ಗುಂಪು ಬಳಗ ಕೂಡಿ
ಗಿಡಮರ ಬಳ್ಳಿಗೆ ಹಾರಿ !
ಅಲೆಅಲೆದಾಡಿ ಕಂಪು ಕಂಪಿನ
ಹೂವು ಪರಿಮಳ ಹೀರಿ !

ಮುಳ್ಳು ಮುಳ್ಳಿನ ಇಪ್ಪಿಕಂಟಿಯ
ಒಳ್ಳೆ ಜಾಗ ನೋಡಿ !
ಹೊನ್ನಬಣ್ಣದ ಗೂಡು ಕಟ್ಟಿ
ಮಾಡುವವಲ್ಲ ಮೋಡಿ !

ಆರು ಮೂಲೆಯ ಅರಮನೆಯಲ್ಲಿ
ನೂರು ನೂರು ತತ್ತಿ !
ಸಾವಿರ ಸಾವಿರ ಕೋಣೆಗಳಲ್ಲಿ
ಜೇನು ತುಪ್ಪದ ಬುತ್ತಿ !

ತನ್ನ ಮರಿಗೆ ಕೂಡಿಟ್ಟಂತಹ
ಸವಿಸವಿ ಸವಿಸವಿ ಜೇನನ್ನು !
ಕದ್ದು ತಿನ್ನುವ ಮನುಜ ಬುದ್ಧಿಗೆ
ಹೇಳಬೇಕು ಏನನ್ನು !

No comments: