Friday, January 5, 2018

ಚಟ್ ಪಟ್ ಚುಟುಕು

67 ಮುದ್ದಿನ ಗಿಣಿ 

ಮುದ್ದಿನ ಗಿಣಿಯೆ ಹಣ್ಣಿನ ರುಚಿಯನು 
ಕಾಣುವ ಬಗೆ ಎಂತು !
ಮಾವು ಪೇರಲ ಯಾವುದೆ ಇರಲಿ
ಕುಕ್ಕುವೆ ನೀ  !

68 ಗರಿ ಗರಿ ಅಂಗಿ 

ಬಿಂಕದ ನವಿಲೆ ಎಲ್ಲಿ ತಂದಿ 
ಬಣ್ಣದ ಗರಿ ಗರಿ ಅಂಗಿ !
ಈಗಲೆ ತಂದು ಕೊಟ್ಟಾರೆ ಉಟ್ಟು 
ಥಕತೈ ಕುಣಿವಳು ತಂಗಿ !

69 ಯಾವ ಸೋಪು !

ಚುಳುಕು ಚುಳುಕಿನ್ ಮೀನೆ ಹೇಳು 
ಬಳಸುವೆ ಯಾವ ಸೋಪು !
ಈಗಲೆ ಬೇಕು ಎನ್ನುತ ಹಟವ 
ಮಾಡುತ್ತಿರುವುದು ಪಾಪು !

70 ರೇಶ್ಮೆ ಮಕಮಲ್ಲು 

ಪಾತರಗಿತ್ತಿಯೆ ಎಲ್ಲಿ ತಂದಿ 
ರೇಶ್ಮೆ ಬಟ್ಟೆ ಮಕಮಲ್ಲು !
ಯುನಿಫಾರ್ಮಿಗಾಗಿ ಬೇಕಂತಾರ 
ಎಲ್ಲ ಮಕ್ಕಳ ಸ್ಕೂಲಲ್ಲು !

71 ಹರ್ಬಲ್ ಸಾಂಪು !

ಕರಡಿಯೆ ಹೇಳು ನೀನು ಬಳಸುವ 
ಹರ್ಬಲ್ ಶಾಂಪು ಹೆಸರನ್ನು !
ಈಗಿಂದೀಗಲೆ ತರಿಸಿ ಕೊಳ್ಳುವೆ 
ತಡೆಯದೆ ಹತ್ತು ನಿಮಿಷವನು !

72 ಹುಲಿಮರಿ ಪೇಸ್ಟು 

ಹುಲಿಮರಿ ಗೆಳೆಯನೆ ಹಲ್ಲು ಉಜ್ಜಲು 
ಬಳಸುವೆ ಎಂಥ ಪೆಸ್ಟು !
ದಾಳಿಂಬರದ ಬೀಜಗಳಂತೆ 
ಹೊಳೆಯುವ ನಿಜದ ಗುಟ್ಟು !

73 ಗಿಳಿ ಲಿಪ್ ಸ್ಟಿಕ್ಕು 

ಮುದ್ದಿನ ಗಿಳಿಯೆ ದಿನವೂ  ನೀನು 
ಬಳಸುವೆ ಯಾವ ಲಿಪ್ ಸ್ಟಿಕ್ಕು !
ಒಂಚೂರಾದ್ರು ಬಣ್ಣ ಮಾಸಿಲ್ಲ 
ಹೇಳ್ಕೊಡು ನಮಗೂ ಒಳಟ್ರಿಕ್ಕು !

74 ಯಾವ ಭಾಷೆ 

ಚಿಲಿಪಿಲಿ ಚಿಲಿಪಿಲಿ ಉಲಿಯುವ ಹಕ್ಕಿಯೆ 
ಯಾವುದು ನಿನ್ನ ಭಾಷೆ !
ಬೇಗನೆ ಹೇಳು ಸಾಲೆಯ ಹೆಸರನು 
ನನಗೂ ಕಲಿಯುವ ಆಸೆ !

75 ಕೋಗಿಲೆ ಗುರು 

ವಸಂತ ಕೋಗಿಲೆ ಹೇಳು ಈಗಲೆ 
ಸಂಗೀತ ಗುರುವಿನ ಹೆಸರನ್ನು !
ಕಾಲು ಹಿಡಿದು ಬೇಡಿಕೊಳ್ಳುವೆ 
ನನಗೂ ಕಲಿಸಲು ರಾಗವನು !

76 ಕಳ್ಳ 

ಬಂದನು ಝೇಂಕಾರ ಮಾಡುತ 
ಪರಿಮಳ ಕದಿಯುವ ಕಳ್ಳ !
ಗಿಡದ ಗೂಅಲಿ ಕೂಡಿಟ್ಟಿಹನು 
ಜೇನನು ಬಳ್ಳಬಳ್ಳ !

77 ಜೊಲ್ಲು

ಜೋಲುವುದಲ್ಲ ಪುಟಣಿ  ತುಟಿಯಲಿ 
ಸವಿಸವಿ  ಸವಿಸವಿ ಜೊಲ್ಲು !
ಗಲ್ಲಕೆ ನಾಲ್ಕು ಹೂಮುತ್ತಿಟ್ಟು
ಕದಿವರು ಪ್ರೀತಿಯ ಮಾಲು !

78 ನವಿಲು - ಮುಗಿಲು 

ನವಿಲಿಗೆ ಬೆಡಗಿನ ನಾಟ್ಯವ ಕಲಿಸಿ 
ಬಿಟ್ಟವರಾರು ಕಾಡಲ್ಲಿ! 
ಮುಗಿಲಿಗೆ ಮುಗಿಲು ಕಣ್ಣ ತೆರೆದಿಹುದು 
ಸಾವಿರ ಸಾವಿರ ಗರಿಯಲ್ಲಿ !



Sent from http://bit.ly/hsR0cS

No comments: